ಶನಿವಾರ, ಡಿಸೆಂಬರ್ 30, 2017

‘ಮಾನವ ಸ್ವಭಾವ’

ಮೊನ್ನೆಯ ಮುಂಜಾನೆಯ ಒಂದು ಪ್ರಸಂಗದಿಂದ ಪ್ರೇರಿತವಾದ ಕಿರುಬರಹ. ನಿತ್ಯ ಮುಂಜಾನೆ ಈಜಲು ಹೋಗುವುದು ನನ್ನ ಅಭ್ಯಾಸ. ನಮ್ಮೂರಿನ ಸರಕಾರೀ ಈಜುಕೊಳ ಸಾಮಾನ್ಯವಾಗಿ ಸುಸ್ಥಿತಿಯಲ್ಲಿರುತ್ತದಾದರೂ ವರುಷದಲ್ಲಿ ಒಂದೆರಡು ತಿಂಗಳು ಒಂದಲ್ಲಾ ಒಂದು ಕಾರಣದಿಂದ ಮುಚ್ಚಿರುತ್ತದೆ. ಈಜುಕೊಳ ಮುಚ್ಚಿದ ಹತ್ತು ಹದಿನೈದು ದಿನ ನಾನು ಮತ್ತೇನಾದರೂ ಚಟುವಟಿಕೆಯಲ್ಲಿ ತೊಡಗುತ್ತೇನೆ. ಈ ಬಾರಿಯೂ ಹಾಗೆಯೇ ಆಯಿತಾದರೂ ಮುಚ್ಚಿ ತಿಂಗಳಾದರೂ ಕೊಳ ದುರಸ್ತಿಯಾಗದೇ ದೊಡ್ಡಪ್ರಮಾಣದ ಕಾರ್ಯಾಚರಣೆ ಪ್ರಾರಂಭವಾದದ್ದು ಕಂಡುಬಂತು. ಈಜುವ ಅಭ್ಯಾಸ ನನ್ನನ್ನು ಘಟ್ಟಿಯಾಗಿ ಹಿಡಿದಿರುವುದರಿಂದ ಕೊಂಚದೂರವಾದರೂ ಸರಿಯೆಂದು ನಾನು ನಮ್ಮೂರಿನ ಈಶ್ವರದೇವಾಲಯದ ಕೊಳದ ಹಾದಿಹಿಡಿದೆ. ನಾಗೇಶ್ವರನ ಕೊಳದ ಶಾಂತ ಪರಿಸರದಲ್ಲಿ ಮುಂಜಾನೆ ಒಂದು ಅರ್ಧಘಂಟೆ ಈಜಾಡಿ, ಶಿವನಿಗೆ ಅಡ್ಡಬಿದ್ದು ಹಿಂತಿರುಗುವುದು ಪರಿಪಾಠವಾಯಿತು. ಮೊನ್ನೆ ಹಾಗೆಯೇ ಈಜುಮುಗಿಸಿ ಮೇಲೆಬರುತ್ತಿದ್ದಾಗ ಸ್ನೇಹಿತ ದೇಸಾಯರು ಎದುರಿಗೆ ಕಂಡರು. ದೇವಾಲಯದ ಪಕ್ಕಕ್ಕೇ ದೇಸಾಯರ ಮನೆ. ನನಗೂ ಅವರಿಗೂ ಹತ್ತಾರು ವರುಷಗಳ ಪರಿಚಯ.

 “ಇದೇನ್ರಿ ಡಾಕ್ಟರೇ ನೀವು ಇಲ್ಲಿ?”
“ಈಜಲು ಬಂದಿದ್ದೆ ದೇಸಾಯರೇ”
 “ಅಷ್ಟುದೂರದಿಂದ?” (ನಮ್ಮ ಮನೆ ಅಲ್ಲಿಗೆ ಸುಮಾರು ಎಂಟು ಕಿಲೋಮೀಟರು)
 “ಮತ್ತೇನು ಮಾಡೋದು ? ನಮ್ಮ ಸ್ವಿಮ್ಮಿಂಗ್ ಪೂಲ್ ಮುಚ್ಚಿದೆಯಲ್ಲ?”
 “ದಿನಾ ಬರುತ್ತೀರೇನು?”
“ಹೌದು. ವ್ಯಾಯಾಮವಾಯಿತು. ಶಾಂತಪರಿಸರ ಮನಸ್ಸಿಗೂ ಹಿತ. ಮತ್ತು ದೇವರ ದರುಶನವೂ ಆಯಿತು.”
 “ನೀವು ಅಷ್ಟು ದೂರದಿಂದ ಇಲ್ಲಿ ಈಜಲು ಚೆನ್ನವೆಂದು ಬರುತ್ತೀರಿ. ನನಗೂ ಈಜು ಇಷ್ಟವೇ. ಆದರೆ ನಾನು ಇಲ್ಲೇ ಪಕ್ಕದಲ್ಲಿದ್ದರೂ ಒಮ್ಮೆಯಾದರೂ ಕೊಳಕ್ಕೆ ಈಜಲು ಬಂದಿಲ್ಲ.”
 “ಸರಿಯೇ, ಅದೇನು ಈ ದಿನ ಬಂದದ್ದು ನೀವು?”
 “ನಮ್ಮ ಅಣ್ಣಂದಿರು ಮುಂಬಯಿಯಿಂದ ಬಂದಿದ್ದರು ನೋಡಿ. ಮುಂಜಾನೆ ಸಂಧ್ಯಾವಂದನೆಗೆ ದೇವಸ್ಥಾನದ ಕೊಳ ಬಹಳ ಪ್ರಶಸ್ತವಾಗಿದೆಯೆಂದು ಇಲ್ಲಿಗೆ ಬರಬೇಕೆಂದರು. ಅವರೊಂದಿಗೆ ನಾನೂ ಬಂದೆ. ಅವರು ನಮ್ಮಲ್ಲಿಗೆ ಬಂದಾಗಲೆಲ್ಲಾ ಸಂಧ್ಯಾವಂದನೆ ಇಲ್ಲಿಯೇ ”

 ದೇಸಾಯರೊಡನೆ ಮತ್ತೆರಡು ಕುಶಲ ಮಾತನಾಡಿ ಮನೆಗೆ ಬಂದೆ. ಇಲ್ಲಿ ಕೌತುಕವೇನೆಂದರೆ ನನಗೆ ಈಜಲು ಅವಕಾಶಬೇಕೆಂದು ನಾನು ಮನೆಯಿಂದ ಎಂಟು ಕಿಲೋಮೀಟರು ದೂರದ ಕೊಳ ಹುಡುಕಿಕೊಂಡು ಹೋಗುತ್ತೇನೆ. ಕೊಳದ ಪಕ್ಕದಲ್ಲೇ ಇರುವ ದೇಸಾಯರು ಅಲ್ಲಿಗೆ ಎಂದೂ ಈಜಲು ಬಂದದ್ದಿಲ್ಲ. ಮುಂಬಯಿಯ ಜನ ನಮ್ಮ ದೇವಾಲಯದ ಪರಿಸರ ಸಂಧ್ಯಾವಂದನೆಗೆ ಪ್ರಶಸ್ತವೆಂದು ಊರಿಗೆ ಬಂದಾಗಲೆಲ್ಲಾ ತಪ್ಪದೆ ಕೊಳಕ್ಕೆ ಬರುತ್ತಾರೆ. ನಾನು ಪ್ರತಿನಿತ್ಯ ಮುಂಜಾನೆ ಅಲ್ಲಿಗೇ ಹೋಗಿ ನೀರಿನಲ್ಲಿ ಮುಳುಗೇಳುತ್ತೇನೆ. ನನ್ನ ಜನ್ಮ ಧರ್ಮದಲ್ಲೂ ಸಂಧ್ಯಾವಂದನೆ ಒಂದು ಮುಖ್ಯ ಅಂಶ. ಆದರೆ ನಾನು ಅಲ್ಲಿ ಒಂದು ದಿನ ಸಂಧ್ಯಾವಂದನೆ ಮಾಡಿದ್ದಿಲ್ಲ! ಮಾನವ ಸ್ವಭಾವ ವೈಚಿತ್ರ್ಯ ಹೇಗಿದೆಯಲ್ಲವೇ ?

“ನಾಯಿ ಬಂದಾವೋ ಬೆನ್ಹತ್ತಿ”

ಪ್ರತಿದಿನ ಮುಂಜಾನೆ ನನಗೆ ಭೇಟಿಯಾಗುವ ಬೀದಿನಾಯಿಗಳಿಂದ ಪ್ರೇರಿತವಾದ ಒಂದು ಲಘು ಬರಹ.
ಮಳೆ ಮುಗಿದು, ಛಳಿ ಶುರುವಾಗಬೇಕಾದ ಕಾಲ. ರಾತ್ರಿ ಸ್ವಲ್ಪ ಮಳೆ ಬಿದ್ದು ಹವೆ ತಂಪಾಗಿತ್ತು. ಅಕ್ಟೊಬರ್ ತಿಂಗಳ ಕೊನೆ. ಕತ್ತಲು ಹೆಚ್ಚು. ಜತೆಗೆ ಮುಂಜಾನೆ ನಸುಕಿನಲ್ಲಿ ಇಬ್ಬನಿ ಬೀಳಲು ಪ್ರಾರಂಭವಾಗಿತ್ತು. ಆರೂವರೆಯ ನಂತರವೇ ಬೆಳಕಾಯಿತೆನ್ನಿಸುವುದು. ಅದರಲ್ಲೂ ನಾನು ಬೆಳಗ್ಗೆ ತಿರುಗಾಡಲು ಹೋಗುವ ರಸ್ತೆಯಲ್ಲಿ ಅಕ್ಕ ಪಕ್ಕ ಇನ್ನೂ ಮರಗಳು ಉಳಿದಿರುವುದರಿಂದ ಬೀದಿ ದೀಪಗಳಿದ್ದರೂ ರಸ್ತೆ ಬಹುಪಾಲು ಕತ್ತಲೇ. ರಸ್ತೆಯಲ್ಲಿ ಮನೆಗಳು ವಿರಳ. ವಾಹನ ಸಂಚಾರ ಇಲ್ಲವೆಂದೇ ಹೇಳಬಹುದು. ಹಕ್ಕಿಗಳು ಐದಕ್ಕೇ ಎದ್ದು ಕಲರವಮಾಡಿ ಮತ್ತೆ ನಿದ್ದೆಯ ಗುಂಗಿಗೆ ಮರಳಿದ್ದವೇನೋ? ಸುತ್ತಲೂ ನಿಶ್ಯಬ್ದ. ಮುಂಜಾವಿನ ಐದೂವರೆಗೆ ಪರಿಸರ ಆಹ್ಲಾದಕರವಾಗಿತ್ತು. ನನ್ನ ಪಾಡಿಗೆ ನಾನು ಏನೋ ಯೋಚಿಸುತ್ತಾ, ಮತ್ತೇನೋ ಗುನುಗಿಕೊಳ್ಳುತ್ತಾ, ಹೆಚ್ಚುಕಡಿಮೆ ಸಮಾಧಿ ಸ್ಥಿತಿಯಲ್ಲಿ ಹೆಜ್ಜೆಹಾಕುತ್ತಿದ್ದೆ. ಅದೆಲ್ಲಿ ಮಲಗಿತ್ತೋ? ಗವ್ವೆಂದು ಬೊಗಳುತ್ತಾ ಇದ್ದಕ್ಕಿದ್ದಂತೆ ನನ್ನೆಡೆ ಎಗರಿ ಬಂತೊಂದು ನಾಯಿ. ನಾನು ಬೆಚ್ಚಿಬಿದ್ದು ಒಂದುಮಾರು ಪಕ್ಕಕ್ಕೆ ಹಾರಿದೆ. ಅರೆಕ್ಷಣದಲ್ಲಿ ಆಹ್ಲಾದಕರ ಪರಿಸರ ಮಾಯವಾಗಿ, ಭಯಂಕರ ಪರಿಸರ ಸೃಷ್ಟಿಯಾಗಿ, ನನ್ನ ಯೋಚನೆ ಗುನುಗಾಟಗಳು ಸ್ಥಗಿತವಾಗಿ, ಎದೆ ಬಡಿತ ನೂರಿಪ್ಪತ್ತಾಗಿ, ಮೈ ಬೆವರಿಟ್ಟಿತು. ನಾನು ಸಾವರಿಸಿಕೊಂಡು ನನ್ನ ಕೈಲಿದ್ದ ಕೋಲನ್ನು ಟಿಪ್ಪುಸುಲ್ತಾನನ ಕತ್ತಿಯಂತೆ (ನೀವು ಬಿ ಜೆ ಪಿ ಯಾಗಿದ್ದರೆ ನನ್ನ ಮೇಲೆ ಎಗರಬೇಡಿ. ‘ಕೃಷ್ಣದೇವರಾಯನ’ ಎಂದು ಒಂದು ಪದ ಬದಲಾಯಿಸಿಕೊಳ್ಳಿ) ಝಳಪಿಸುತ್ತಾ ನಾಯಿಯೊಡನೆ ಯುಧ್ದಕ್ಕೆ ತಯಾರಾಗುವುದರಲ್ಲಿ ನಾಯಿ ಥಣ್ಣಗಾಗಿ ಏನೂ ಆಗಿಲ್ಲದಂತೆ ವಾಪಸು ತಿರುಗಿ ರಸ್ತೆ ಬದಿಯ ದೀಪದ ಕೆಳಗಿನ ತನ್ನ ಸ್ಥಾನಕ್ಕೆ ಹೋಗಿ ಮಲಗಿಕೊಂಡಿತು. ನಾನು ಒಂದುಕ್ಷಣ ನಿಂತು, ಅದು ಮುದುರಿಕೊಳ್ಳುವವರೆಗೆ ಕಾದು, ನನಗೆ ಆಘಾತವೇನೂ ಆಗಿಲ್ಲವೆಂದು ಖಚಿತಪಡಿಸಿಕೊಂಡು ಮುಂದುವರೆದೆ. ಆದರೆ ನನ್ನ ಸಮಾಧಿ ಸ್ಥಿತಿ ಹಾಳಾಗಿತ್ತು. ನನ್ನ ಯೋಚನೆ, ಗುನುಗಾಟಗಳು ಮತ್ತೆ ಶುರುವಾಗಲು ನಿರಾಕರಿಸಿದವು. ಮೈ ಬೆವರಿದ್ದು ನಿಲ್ಲಲಿಲ್ಲ. ನಾನು ಮತ್ತೆ ಮತ್ತೆ ಹೆದರಿ ಹಿಂತಿರುಗಿ ನೋಡುತ್ತಾ ನನ್ನ ವಾಕಿಂಗ್ ಮುಂದುವರೆಸಿದೆ. ನನ್ನ ಮುಂಜಾನೆಯ ತಿರುಗಾಟದ ಉತ್ಸಾಹ ಅಡಗಿಹೋಗಿತ್ತು. “ಸ್ಮಾಲ್ ಪ್ಲೆಷರ್ಸ್ ಆಫ್ ಲೈಫ್” ಎನ್ನುತ್ತಾರಲ್ಲಾ, ಜೀವನದ ಸಣ್ಣ ಸಣ್ಣ ಸಂತೋಷದ ಕ್ಷಣಗಳು, ಅವುಗಳಲ್ಲಿ ನನ್ನ ಮುಂಜಾನೆಯ ತಿರುಗಾಟ ಒಂದು. ನಾನು ಬೆಳಗ್ಗೆ ಬಹಳ ಬೇಗ ಏಳುವುದರಿಂದ ಒಮ್ಮೊಮ್ಮೆ ಐದರ ಹೊತ್ತಿಗೇ ರಸ್ತೆಯಲ್ಲಿರುತ್ತೇನೆ. ಮುಂಜಾನೆಯ ತಂಪಾದ ಹಾಗೂ ಶಾಂತ ಪರಿಸರ ನನಗೆ ಬಹಳ ಪ್ರಿಯವಾದದ್ದು. ಆದರೆ ನಮ್ಮ ರಸ್ತೆಯ ನಾಯಿಗಳು ನನ್ನ ತಿರುಗಾಟದ ‘ಕಬಾಬ್’ ನಲ್ಲಿನ ‘ಹಡ್ಡಿ’ಗಳು. ಕೆಲವು ನಾನು ದೂರದಲ್ಲಿರುವಾಗಲೇ ನನ್ನನ್ನು ಗಮನಿಸಿ ಗುರುಗಟ್ಟಲು ಪ್ರಾರಂಭಿಸಿ ಒಂದೆರಡು ಕ್ಷಣ ಗುರುಗುಟ್ಟಿ ಹಾಗೆಯೇ ಮಲಗುತ್ತವೆ. ಕೆಲವು ನನ್ನನ್ನು ಕಂಡೊಡನೆ ತಾವು ಬೊಗಳುವುದಷ್ಟೇ ಅಲ್ಲದೆ ಮಲಗಿರುವ ಇತರ ನಾಯಿಗಳಿಗೂ ನನ್ನ ಇರುವನ್ನು ತಿಳಿಸಿಕೊಟ್ಟು ಎಲ್ಲವನ್ನೂ ಎಚ್ಚರಿಸಿ ನಾಲ್ಕೂದಿಕ್ಕಿನಿಂದ ರಣಕಹಳೆ ಮೊಳಗಿಸಲು ಅನುವುಮಾಡಿಕೊಡುತ್ತವೆ. ಕೆಲವು ನಾಯಿಗಳು ಹೀಗೆ ದೂರದಿಂದ ಬೊಗಳಿ ಸುಮ್ಮನಾದರೆ ಕೆಲವು ನನ್ನ ಹತ್ತಿರಬಂದು ಮೇಲೆ ಹಾರುತ್ತಾ ಕೆಲಕಾಲ ನನಗೆ ಕತ್ತಿ(ಕೋಲು)ವರಸೆಯ ಅಭ್ಯಾಸ ಮಾಡಿಸಿಯೇ ವಾಪಸಾಗುತ್ತವೆ. ಒಟ್ಟಿನಲ್ಲಿ ಈ ಬೀದಿನಾಯಿಗಳ ದೆಸೆಯಿಂದ ನಾನು ಮುಂಜಾನೆ ನಿರಾಳವಾಗಿ ತಿರುಗಾಡುವಂತಿಲ್ಲ. ಮಹಾಭಾರತದ ನಕುಲನೋ ಸಹದೇವನೋ ಯಾರೋ ಒಬ್ಬ ಅಶ್ವ ಹೃದಯ ಬಲ್ಲವನಂತೆ. ಅಂದರೆ ಕುದುರೆಗಳ ಮನಸ್ಸನ್ನರಿತು ಅವುಗಳನ್ನು ನೋಡಿಕೊಳ್ಳುವುದರಲ್ಲಿ ನಿಷ್ಣಾತನಂತೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಅವನು ವಿರಾಟರಾಜನ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದನಂತೆ. ಹೀಗೆ ಯಾವಾಗಲೋ ಓದಿದ ನೆನಪು. ಹಾಗೆ ನನ್ನ ಸ್ನೇಹಿತರು ಕೆಲವರು ಶ್ವಾನಹೃದಯ ಬಲ್ಲವರಿದ್ದಾರೆ. ಅವರ ಪ್ರಕಾರ ಈ ಬೀದಿನಾಯಿಗಳಿಗೆ ನನ್ನ ಮೇಲೇನೂ ದ್ವೇಷವಿಲ್ಲವಂತೆ. ಮನುಷ್ಯನ ಪರಮಮಿತ್ರರಾದ ಅವುಗಳಿಗೆ ರಾತ್ರಿಯಿಡೀ ತಮ್ಮ ಮಿತ್ರರು ಜತೆಗಿಲ್ಲದೆ ಕಳೆದು ಬೇಜಾರಾಗಿದ್ದು, ನನ್ನನ್ನು ಕಂಡೊಡನೆ ಸಂತೋಷ ಉಕ್ಕಿಬಂದು ತಮ್ಮ ಪ್ರೀತಿ ತೋರಿಸಲೋಸ್ಕರ ನನ್ನ ಮೇಲೆ ಎಗರುತ್ತವಂತೆ. ಅದನ್ನು ನಾನು ತಪ್ಪುತಿಳಿದು ಅವುಗಳ ಮೇಲೆ ಕೋಲು ಝಳಪಿಸಿ ಅವುಗಳನ್ನು ಜಗಳಕ್ಕೆ ಪ್ರೇರೇಪಿಸುತ್ತೇನೆಂದು ಅವರ ಆಪಾದನೆ. ನಾಯಿಗಳು ಬೊಗಳುತ್ತಾ ಮೇಲೆ ಬಿದ್ದರೆ ನಾನು ಎಗರಾಡದೆ ನಿಂತು, ಅವುಗಳ ಬಾಲವನ್ನು ಗಮನಿಸಬೇಕಂತೆ. ನಾಯಿಗಳು ಬಾಲವಾಡಿಸುತ್ತಿದ್ದರೆ ಅವು ನನ್ನ ಮೇಲಿನ ಪ್ರೀತಿಯಿಂದ ಮೇಲೆ ಹಾರುತ್ತಿವೆ ಎಂದರ್ಥ ವಂತೆ. ಆಗ ನಾನು ಅವುಗಳನ್ನು ಅಪ್ಪಿಕೊಂಡು, ಮೈದಡವಿ ಕಳಿಸಬೇಕಂತೆ. ನನಗೆ ಅಂಥ ಪ್ರಸಂಗಾವಧಾನವಿಲ್ಲ. ನಾಯಿ ಹಲ್ಲುತೋರಿಸುತ್ತಾ ಮೇಲೆಹಾರಿದರೆ ಕೈಯಲ್ಲಿ ಕೋಲಿದ್ದರೆ ಕೋಲು, ಕಲ್ಲಿದ್ದರೆ ಕಲ್ಲು, ಯಾವುದು ಇರುತ್ತದೋ ಅದರ ಉಪಯೋಗಮಾಡಿ ಬಚಾವಾಗುವುದಷ್ಟೇ ನನಗೆ ತಿಳಿದಿರುವುದು. ಆದ್ದರಿಂದ ನಾನು ಕೋಲುಹಿಡಿದೇ ತಿರುಗಾಟಕ್ಕೆ ಹೊರಡುವುದು. ಆದರೆ ಶ್ವಾನಹೃದಯ ಬಲ್ಲವರು ಇರುವುದು ನಿಜ. ಅಥವಾ ಏನಾದರೂ ಮಂತ್ರಶಕ್ತಿ ಇದ್ದರೂ ಇರಬಹುದು. ಒಮ್ಮೊಮ್ಮೆ ನಾನು ಹೊರಬೀಳುವುದು ತಡವಾದಾಗ ರಸ್ತೆಯಲ್ಲಿ ಮತ್ತೂ ಒಬ್ಬಿಬ್ಬರು ಕಾಣಬರುತ್ತಾರೆ. ನನ್ನಿಂದ ಕೊಂಚ ಮುಂದೆ ನಡೆಯುವ ಅವರು ರಸ್ತೆಬದಿಯಲ್ಲಿ ಮಲಗಿರುವ ನಾಯಿಗಳ ಪಕ್ಕದಲ್ಲೇ ಹಾದುಹೋದರೂ ಅವರ ಕಡೆ ತಿರುಗಿ ಕೂಡ ನೋಡದೆ ಮಲಗಿರುವ ನಾಯಿಗಳು, ನಾನು ಹೆಜ್ಜೆ ಮೇಲೆ ಹೆಜ್ಜೆ ಯಿಟ್ಟು ರಸ್ತೆದಾಟಿ ಮತ್ತೊಂದು ಬದಿ ತಲುಪಿ, ಸದ್ದುಮಾಡದೆ ದೂರದಿಂದ ನಡೆದರೂ, ಅದು ಹೇಗೋ ನನ್ನ ಇರುವನ್ನು ತಿಳಿದುಕೊಂಡು ಎಚ್ಚೆತ್ತುಕೊಂಡು ಬೊಗಳುತ್ತಾ ನನ್ನ ಮೇಲೆ ಹಾರಿ ಬರುತ್ತವೆ! ನಮ್ಮ ರಸ್ತೆಯಲ್ಲಿ ಸಾಮಾನ್ಯ ನನಗೆ ಕಾಣಸಿಗುವ ಒಬ್ಬನ ಮೇಲಂತೂ ಅದೇನೋ ಪ್ರೀತಿಯೋ ಅವುಗಳಿಗೆ. ಅವನು ಕಾಣುತ್ತಲೇ ಬಾಲವಾಡಿಸುತ್ತಾ ಅವನಬಳಿಸಾರಿ ಅವನ ಕಾಲಿಗೆ ಎರಗುತ್ತವೆ. ಅವನು ಬಗ್ಗಿ ಅವುಗಳ ಮೈದಡವಿ ಮುತ್ತಿಕ್ಕಿ ಮುಂದೆ ಹೋಗುತ್ತಾನೆ. ನನಗಂತೂ ಆಶ್ಚರ್ಯ. ನಾನು ಈ ನಾಯಿಗಳಿಗೆಂದೂ ದ್ವೇಷಬಗೆದಿಲ್ಲ. ಕಲ್ಲು ಬೀರಿಲ್ಲ. ಚಿಕ್ಕವನಿದ್ದಾಗ ನಮ್ಮ ಮನೆಯ ಬಳಿಯಿರುತ್ತಿದ್ದ ಬೀದಿನಾಯಿಯೊಂದನ್ನು ದತ್ತು ಪಡೆದು ನಿತ್ಯ ಅನ್ನ ಹಾಕಿ ಸಾಕಿದ್ದೇನೆ ಕೂಡ. ಆದರೂ ನನ್ನನ್ನು ಕಂಡರೆ ನಾಯಿಗಳೆಲ್ಲಾ ಗುರುಗುಟ್ಟುತ್ತವೆ. ಅದೇಕೋ ದೇವರೇ ಬಲ್ಲ. ಮೊನ್ನೆ ಏನಾಯಿತು ಹೇಳುತ್ತೇನೆ ಕೇಳಿ. ಎಂದಿನಂತೆ ನಾನು ಬೆಳಗ್ಗೆ ವಾಯುವಿಹಾರ ನಡೆಸಿದ್ದೆ. ಹಿತಚಿಂತಕರ ಮಾತುಕೇಳಿ ಕೈಲಿ ಕೋಲುಹಿಡಿಯದೆಯೇ ಹೊರಟಿದ್ದೆ. ಸುಮಾರು ಹತ್ತುನಿಮಿಷ ನಡೆದಿರಬಹುದು. ನಾಯಿಗಳು ಅದೇಕೋ ನನ್ನನ್ನು ಲಕ್ಷ್ಯ ಮಾಡದೆ ಸುಮ್ಮನೆ ಮಲಗಿದ್ದವು. ನಾನು ನಡೆಯುವ ರಸ್ತೆ ಸುಮಾರು ಒಂದು ಕಿ ಮೀ ಉದ್ದದ್ದು. ಅದರ ಎರಡೂ ತುದಿಗಳಲ್ಲಿ ಒಂದೊಂದು ಮತ್ತು ಮಧ್ಯದಲ್ಲೊಂದು ಒಟ್ಟು ಮೂರು ಬೀದಿ ನಾಯಿಗಳ ಗುಂಪಿವೆ. ಅವೆಲ್ಲಾ ತಮ್ಮದೇ ಆದ ಸರಹದ್ದುಗಳನ್ನು ಮಾಡಿಕೊಂಡು ಎಲ್ಲವೂ ತಮ್ಮ ತಮ್ಮ ಹದ್ದಿನೊಳಗೆ ತಮ್ಮ ಹಕ್ಕುಗಳನ್ನು ಕಾಯ್ದುಕೊಂಡು ಬದುಕಿರುತ್ತವೆ. ಏನಾದರೂ ಆಗಿ ಒಂದು ಗುಂಪಿನ ನಾಯಿ ಇನ್ನೊಂದು ಗುಂಪಿನ ಸರಹದ್ದು ದಾಟಿತೋ, ರಣಕಹಳೆ ಮೊಳಗಿ ಯುಧ್ದ ಶುರುವಾಗಿಬಿಡುತ್ತದೆ. ನಾನು ನಡೆಯುವ ರಸ್ತೆಪಕ್ಕದಲ್ಲಿ ಒಬ್ಬಾತ ಕೆಲವು ಎಮ್ಮೆ ಹಸುಗಳನ್ನು ಸಾಕಿಕೊಂಡಿದ್ದು, ಹಾಲು ಮಾರಿ ಜೀವನ ಸಾಗಿಸುತ್ತಾನೆ. ನಾನು ಈ ಲೇಖನದ ಶುರುವಿನಲ್ಲಿ ಬರೆದನಲ್ಲಾ, ನನ್ನ ಮೇಲೆ ಎಗರಿದ ನಾಯಿ, ಅದು ಅವನು ಸಾಕಿರುವ ಒಂಟಿ ನಾಯಿ. ಅದು ಯಾವ ಗುಂಪಿಗೂ ಸೇರಿದ್ದಲ್ಲ. ಪಕ್ಷೇತರ. ನಾನು ರಸ್ತೆಯಲ್ಲಿ ಸಾಗುತ್ತಿದ್ದಂತೆ ಈ ಹಾಲು ಮಾರುವವನು ಕೈಲಿ ಹಾಲಿನ ಕ್ಯಾನ್ ಹಿಡಿದು ಮನೆಯಿಂದ ಹೊರಬಿದ್ದ. ತನ್ನ ವರ್ತನೆಯ ಮನೆಗಳಿಗೆ ಹಾಲುಕೊಡಲು ಹೊರಟಿದ್ದಿರಬೇಕು. ಅವನ ಮುಂದೆ ಅವನನಾಯಿ ನಡೆದಿತ್ತು. ನಾನು ಅವರಿಬ್ಬರ ಹಿಂದೆ. ನಾಯಿ ಅದೇಕೋ ನನ್ನನ್ನು ಲಕ್ಷಿಸದೆ ಸುಮ್ಮನೆ ನಡೆಯುತ್ತಿತ್ತು. ಸ್ವಲ್ಪನಡೆದು ಅವರಿಬ್ಬರೂ ಮತ್ತೊಂದು ಶ್ವಾನಗುಂಪಿನ ಸರಹದ್ದು ಪ್ರವೇಶಿಸುತ್ತಿದ್ದಂತೆ ಆ ಗುಂಪಿನ ನಾಯಿಗಳೆಲ್ಲವೂ ಈ ಒಂಟಿನಾಯಿಯ ವಾಸನೆ ಹಿಡಿದು, ನಿದ್ದೆ ಝಾಡಿಸಿಕೊಂಡು ಎದ್ದು, ಅರಚುತ್ತಾ ಕಾಳಗಕ್ಕೆ ಸಿಧ್ದವಾಗಿಬಿಟ್ಟವು. ಅವೆಲ್ಲಾ ಸಿಧ್ಧವಾಗಿ ರಸ್ತೆಗಿಳಿಯುವಷ್ಟರಲ್ಲಿ ಹಾಲಿನವನು ಪಕ್ಕಕ್ಕೆ ತಿರುಗಿ ರಸ್ತೆಯಿಂದ ಕೊಂಚ ಒಳಗಿದ್ದ ಮನೆಯೊಂದಕ್ಕೆ ಹಾಲು ಹಾಕಲು ನಡೆದುಬಿಟ್ಟ. ಅವನೊಂದಿಗೆ ಅವನ ನಾಯಿಯೂ ಹೊರಟುಹೋಯಿತು. ನಿದ್ದೆ ಕೆಡಿಸಿಕೊಂಡು ಕಾಳಗಕ್ಕೆ ತಯಾರಾಗಿ ರಸ್ತೆಗಿಳಿದಿದ್ದ ನಾಯಿಗಳ ಚಕ್ರವ್ಯೂಹಕ್ಕೆ ಒಂಟಿನಾಯಿಯ ಬದಲು ನಾನು ಸಿಕ್ಕಿಬಿದ್ದೆ! ನನ್ನ ಕೈಯಲ್ಲಿ ಆಯುಧವಿಲ್ಲವೆಂದು ಅವೇನೂ ನನಗೆ ರಿಯಾಯಿತಿ ತೋರಿಸುವಂತೆ ಕಾಣಲಿಲ್ಲ. ನನ್ನ ಪುಣ್ಯಕ್ಕೆ ರಸ್ತೆ ಪಕ್ಕದಲ್ಲೇ ರಸ್ತೆ ರಿಪೇರಿಯವರು ಉಳಿಸಿಹೋಗಿದ್ದ ಕೆಲವು ಕಲ್ಲುಗಳು ಕೈಗೆ ಸಿಕ್ಕಿದವು. ನಾಲ್ಕೂ ದಿಕ್ಕಿಗೆ ಕಲ್ಲು ಬೀಸುತ್ತಾ ಹೇಗೋ ಮಾಡಿ ನಾಯಿಗಳ ದಾಳಿಯನ್ನು ನಿವಾರಿಸಿಕೊಂಡು, ಢವಗುಟ್ಟುತ್ತಿದ್ದ ಎದೆಯನ್ನು ಕೈಲಿಹಿಡಿದು ದೌಡಾಯಿಸಿ ಬದುಕಿಕೊಂಡೆ. ನಮ್ಮ ಶಿಶುನಾಳ ಶರೀಫರೂ ಸಹ ನನ್ನಂತೆಯೇ ನಾಯಿಗಳ ಕಾಟ ಅನುಭವಿಸಿ ಬಲ್ಲವರಿರಬೇಕು. ಅದರಿಂದಲೇ ಅವರು ಕಾರಣವಿಲ್ಲದೆ ತಮ್ಮ ಮೇಲೆ ಗುರುಗುಟ್ಟುತ್ತಿದ್ದ ಜನರನ್ನು ಬೀದಿನಾಯಿಗಳಿಗೆ ಹೋಲಿಸಿ ಪದ ಬರೆದರು. ದಾರಿಹಿಡಿದು ಬರುತಿರಲು, ವಾರಿಗಿ ನಾಯಿ ನೂರಾರು ಕೂಡಿರಲು, ಯಾರಕೇಳಲಿ ನಮ್ಮವರಾರು, ಸಾರಿ ಹೇಳುವರಿಲ್ಲವಾಯ್ತು ಗುರಗುಟ್ಟುತ ಮೇಲೆಬರಲು, ಕರವ ಮುಗಿದು ಬರುವಂಥ ನಾಯಿಬಂದಾವೋ ಬೆನ್ಹತ್ತಿ , ನಾರಾಯಣ ನಾಯಿಬಂದಾವೋ ಬೆನ್ಹತ್ತಿ. ನಾಯಿ ಅಂದರೆ ನಾಯಿ ಅಲ್ಲ ಮಾನವ ಜನ್ಮದ ಹೀನ ನಾಯಿ, ಜ್ಞಾನಾನಂದ ತಿಳಿಯದಂಥ, ಶ್ವಾನಾನಂದದೊಳು ದುಂಧೆ ನಾಯಿಬಂದಾವೋ ಬೆನ್ಹತ್ತಿ......... ಪಾಪ ನಾಯಿ ಜನ್ಮದ ನಾಯಿಗಳಲ್ಲದೆ, ಮಾನವ ಜನ್ಮದ ನಾಯಿಗಳನ್ನೂ ಸಹಿಸಿಕೊಳ್ಳಬೇಕಾಯಿತು ಅವರು. ನನಗೆ ಬರಿ ಬೀದಿ ನಾಯಿಗಳ ಕಾಟವಷ್ಟೇ. ಮಾನವ ಜನ್ಮದ ನಾಯಿಗಳಾವೂ ನನ್ನ ಹಿಂದೆ ಬಿದ್ದಿಲ್ಲ! ಅದೇ ಸಮಾಧಾನ.

ಬುಧವಾರ, ಅಕ್ಟೋಬರ್ 18, 2017

ನೀರು ತುಂಬುವ ಹಬ್ಬ - ನನ್ನ ಒಂದು ನೆನಪು



ಇಂದು ಚತುರ್ದಶೀ. ತ್ರಯೋದಶಿಯ ರಾತ್ರಿ ನೀರುತುಂಬುವ ಹಬ್ಬ. ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹಂಡೆ, ಕೊಳದಪ್ಪಲೆ, ಬಿಂದಿಗೆಗಳನ್ನು ರಂಗೋಲಿ, ಹುಣಸೆಹಣ್ಣು ಹಚ್ಚಿ ತೊಳೆದು ಲಕಲಕಿಸುವಂತೆ ಮಾಡಿ ಅವುಗಳಲ್ಲಿ ನೀರುತುಂಬಿ, ಪೂಜೆಮಾಡಿ ಇರಿಸುತ್ತಿದ್ದರು.

ನರಕ ಚತುರ್ದಶಿಯ ದಿನ ಬೆಳ್ಳಂಬೆಳಗ್ಗೆ  ನಮಗೆ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಿ ಕೈಬಿಡುತ್ತಿದ್ದಂತೆಯೇ ನಾವು ಒಂದುಕೈಯಲ್ಲಿ ಪಟಾಕಿ ಪೊಟ್ಟಣ ಮತ್ತು ಇನ್ನೊಂದರಲ್ಲಿ ಕಿಡಿ ಹಚ್ಚಿದ ಎರಡಡಿ ಉದ್ದದ, ದಪ್ಪವಾದ ಊದಿನಕಡ್ಡಿ ಹಿಡಿದು ಹೊರಗೋಡಿದರೆ ಊಟದ ಹೊತ್ತಿಗೇ ಮತ್ತೆ ಒಳಗೆ ಬರುತ್ತಿದ್ದದ್ದು. ಮಧ್ಯೆ, ಮಧ್ಯೆ, ಪಟಾಕಿಯ ಮದ್ದು ಮೆತ್ತಿಕೊಂಡ  ಕೈಯಲ್ಲಿ ಊದಿನಕಡ್ಡಿ ಉರಿಯುತ್ತಿದ್ದಂತೆಯೇ ಒಳಗೆಬಂದು ಅಮ್ಮನ ಮುಂದೆ ನಿಂತು ಬಾಯಿತೆರೆದರೆ ಬಾಯೊಳಗೆ ಏನಾದರೂ ಬೀಳುತ್ತಿತ್ತು. ಅದೇನೆಂದು ಗಮನಿಸುವ ವ್ಯವಧಾನವೂ ನಮಗಿರುತ್ತಿರಲಿಲ್ಲ. ಅದನ್ನು ಅಗಿದುನುಂಗಿ ಹೊರಗೋಡುವ ಆತುರ. ಇಲ್ಲದಿದ್ದರೆ ನನ್ನ ತಮ್ಮ ನನಗಿಂತ ಹೆಚ್ಚು ಪಟಾಕಿ ಹಚ್ಚಿಬಿಡುತ್ತಿದ್ದನಲ್ಲ!

ಐವತ್ತು ವರುಷದ ನಂತರ ಅದೆಷ್ಟು ಬದಲಾವಣೆ! ಈಗ ಪಕ್ಕದ ಮನೆಹುಡುಗರು ಪಟಾಕಿ ಹಚ್ಚಿದರೆ ನಾನು ಸಹಿಸಲಾರೆ. ಶಬ್ದವೂ  ಆಗದು, ಹೊಗೆಯಂತೂ ಸಹಿಸಲೇ ಸಾಧ್ಯವಿಲ್ಲ. ಪಟಾಕಿ ಒತ್ತಟ್ಟಿಗಿರಲಿ. ಅದರದು ಇನ್ನೊಂದು ಕಥೆ. ಈಗ ನಾನು ಬರೆಯ ಹೊರಟದ್ದು ನೀರು ತುಂಬುವ ವಿಷಯ.

ನಾವು ಬೆಳೆಯುತ್ತಾ ಹೋದಂತೆ ಬೆಂಗಳೂರೂ ಬೆಳೆಯಿತು. ಊರಿನ ನಾಲ್ಕು ಹೊರಮೂಲೆ ಎಂದು  ಕೆಂಪೇಗೌಡ ಕಟ್ಟಿಸಿದ್ದ ನಾಲ್ಕು ಗೋಪುರಗಳು ಊರಿನ ಮಧ್ಯಭಾಗವಾದವು. ಒಂದರಿಂದ ತೊಂಭತ್ತರ ವರೆಗಿದ್ದ ಬಸ್ ನಂಬರಗಳು ನಾಲ್ಕುನೂರು ದಾಟಿದವು. ಹಳೆಕಟ್ಟಡಗಳು ಕೆಡವಲ್ಪಟ್ಟು ಒಂದು ಮನೆಯಿದ್ದ ಕಡೆ ನೂರುಮನೆಗಳಾದವು. ಹೆಸರಘಟ್ಟದ ಕೆರೆಯಿಂದ ಊರಿಗೆ ತರುತ್ತಿದ್ದ ನೀರು ಸಾಲದಾಗಿ, ಕಾವೇರಿಯನ್ನು ಬೆಂಗಳೂರಿನೆಡೆ ತಿರುಗಿಸಿಯಾಯಿತು. ಆದರೂ ನೀರು ಸಾಲದು. ಜತೆಗೆ ನಮ್ಮ ಮನೆಕಟ್ಟಿದಾಗ, ಅಂದರೆ, ಆಗ್ಗೆ ಮೂವತ್ತುವರುಷಗಳ ಹಿಂದೆ ಜೋಡಿಸಿದ್ದ ಕಬ್ಬಿಣದ ಕೊಳವೆಗಳು ತುಕ್ಕುಹಿಡಿದು ಕಿರಿದಾಗುತ್ತಾಬಂದವು. ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದರೆ ಸುರಿಯುತ್ತಿದ್ದ ನೀರಿನ ಧಾರೆ ಸಣ್ಣದಾಗುತ್ತಾ ಬಂದು ನಂತರ ಕೆಲವು ವರುಷಗಳ ನಂತರ ಕೆಳಮಟ್ಟದಲ್ಲಿದ್ದ ನಲ್ಲಿಗಳಲ್ಲಿ ಮಾತ್ರ ತೊಟ್ಟಿಡುತ್ತಿದ್ದು ಕ್ರಮೇಣ ನಲ್ಲಿಯಲ್ಲಿ ಬರಿಯ ಗಾಳಿಮಾತ್ರ ಸುಳಿಯುವಂತಾಯಿತು.

ಹೀಗಾಗಿ ನಮ್ಮ ಮನೆಯಲ್ಲಿ ದಿನವೂ ನೀರು ತುಂಬುವ ಹಬ್ಬ.  ಹೊಸದಾಗಿ ಕಟ್ಟಿದ್ದ, ಹೊಸಕೊಳವೆ ಜೋಡಿಸಿದ್ದ, ನಮ್ಮ ಎದುರುಮನೆ ನಲ್ಲಿಯಿಂದ ಪ್ರತಿದಿನ ಸಂಜೆ ನೀರು ಹಿಡಿದು ತಂದು ನಮ್ಮ ಪ್ಲಾಸ್ಟಿಕ್ ಡ್ರಮ್ಮು ಮತ್ತು ಬಕೆಟ್ಟುಗಳಿಗೆ ತುಂಬಿಸಿಕೊಳ್ಳುತ್ತಿದ್ದೆವು! ಕೆಲಕಾಲದ ನಂತರ ನಮ್ಮ ಮನೆಯ ಮುಂದೆ ತಗ್ಗಿನಲ್ಲಿ ಒಂದು ತೊಟ್ಟಿ ಕಟ್ಟಿಸಿ ಅದರಲ್ಲಿ ಶೇಖರವಾಗುತ್ತಿದ್ದ ನೀರನ್ನು ಪಂಪ್ ಮೂಲಕ ಮನೆಯೊಳಕ್ಕೆ ಬರಮಾಡಿಕೊಂಡೆವು. ನಮ್ಮ ಮನೆಯ ನೀರುತುಂಬುವ ಹಬ್ಬದ ಪೂಜೆ ಹಂಡೆ - ಬಿಂದಿಗೆಯಿಂದ, ಪ್ಲಾಸ್ಟಿಕ್ ಡ್ರಮ್ಮು- ಬಕೆಟ್ಟುಗಳಿಗೆ ಸಂದು, ನಂತರ ಪಂಪು - ನಲ್ಲಿಗೆ ಸಲ್ಲಿಕೆಯಾಗತೊಡಗಿತು!

ಈ ತೊಟ್ಟಿ -  ಪಂಪಿನ ವ್ಯವಸ್ಥೆ ಏನೂ ಪೂರ್ಣ ಸಮಾಧಾನಕರವಾಗಿರಲಿಲ್ಲ. ನಮ್ಮ ತೊಟ್ಟಿಗೆ ರಾತ್ರಿಯಿಡೀ ತೊಟ್ಟಿಕ್ಕುತ್ತಿದ್ದ ನೀರು ಆಗಿಂದಾಗ್ಗೆ ಕೈಕೊಟ್ಟರೆ ನಮ್ಮ ಎದುರುಮನೆಯಿಂದ ನೀರು ಹೊರುವುದು ನಡೆದೇ ಇತ್ತು. ನೀರಿನ ಋಣ ಎನ್ನುತ್ತಾರಲ್ಲಾ ಅದೇನಾದರೂ ಇರುವುದೇ ಆದರೆ ನಮ್ಮ ಎದುರುಮನೆಯವರ (ಶ್ರೀ ವೆಂಕಟಸ್ವಾಮಿ ರೆಡ್ಡಿಯವರ ಸಂಸಾರ - ಶ್ರೀಯುತ ರೆಡ್ಡಿಯವರು ಈಗಿಲ್ಲ. ಅವರ ಸುಪುತ್ರ ಹಾಗೂ ಸಂಸಾರ ಅಲ್ಲಿಯೇ ಇದ್ದಾರೆ. ಅವರ ಹೊಟ್ಟೆ ತಣ್ಣಗಿರಲಿ) ನೀರಿನ ಋಣ ಸಲ್ಲಿಸಲು ನಮಗೆ ಏಳೇಳು ಜನುಮವೂ  ಸಾಲದು!

ನನ್ನ ತಂಗಿಯ ವಿವಾಹವಾಗಿ, ನಮ್ಮ ಮನೆಯಲ್ಲಿ  ಮೊದಲ ದೀಪಾವಳಿಗೆ ಭಾವನವರು ಬರುವ ಸಂಭ್ರಮ. ರಾಯರ ಮನೆಯಲಿ ಮಲ್ಲಿಗೆಹೂಗಳ ಪರಿಮಳ ತುಂಬಿತ್ತೋ ಇಲ್ಲವೋ ನೆನಪಿಲ್ಲ,  ಬಾಗಿಲ ಬಳಿ ಮಾತ್ರ  ಕಾಲಿಗೆ ಬಿಸಿನೀರಿನ ತಂಬಿಗೆಯ ಬದಲು  ಖಾಲಿಯ ಬಿಂದಿಗೆ ರಾಯರ ಎದುರಿತ್ತು! ನಮ್ಮ ಭಾವನವರ ಆಗಮನವಾದಾಗ ನಾವು ಎದುರುಮನೆಯಿಂದ ನೀರು ಹೊರುತ್ತಿದ್ದೆವು. ನಮ್ಮ ಭಾವನವರೂ ಬೆಂಗಳೂರಿನವರೇ ಆದದ್ದರಿಂದ ಈ ಪರಿಸ್ಥಿತಿ ಅವರಿಗೆ ಹೊಸದೇನಲ್ಲ. ಪಂಚೆಮೇಲಕ್ಕೆ ಕಟ್ಟಿ ಅವರೂ ಒಂದು ಬಕೆಟ್ಟು ಹಿಡಿದು ನಮ್ಮ ಜತೆ ಸೇರಿದರು. ನಾವು ಅದೇ ಅವಕಾಶ ಹಿಡಿದು ಮನೆಯಲ್ಲಿದ್ದ ಡ್ರಮ್ಮು, ಕೊಳದಪ್ಪಲೆ, ಬಕೆಟ್ಟುಗಳಷ್ಟೇ ಅಲ್ಲದೆ ಅಡಿಗೆಮನೆಯ ತಪ್ಪಲೆ, ಪ್ರೆಶರ್ ಕುಕ್ಕರು, ತಂಬಿಗೆ, ಲೋಟಗಳಿಗೂ ನೀರು ತುಂಬಿಸಿಟ್ಟೆವು. ನಮ್ಮ ಭಾವನವರಿಗೆ ಅವರೇ ಹೊತ್ತು ತಂದ ನೀರಿನಿಂದ ಅಭ್ಯಂಜನವಾಗಿ, ಮೊದಲ ದೀಪಾವಳಿ ಸಾಂಗವಾಗಿ ನೆರವೇರಿತು.

ಈಗ ದೇವರ ದಯದಿಂದ ಗೋವೆಯಲ್ಲಿನ ನಮ್ಮ ಮನೆಯಲ್ಲಿ ಇದುವರೆಗೂ ನೀರಿಗೆ ಬರವಿಲ್ಲ. ಮನೆಯಮೇಲಿನ ನೀರಿನ ತೊಟ್ಟಿಗೆ ನೀರು ತುಂಬಿಕೊಳ್ಳುತ್ತದೆ. ಆದ್ದರಿಂದ ನಮ್ಮ ಮನೆಯಲ್ಲಿ ಹಂಡೆ, ಡ್ರಮ್ಮುಗಳು ಕಾಣಸಿಗವು. ನೀರು ತುಂಬುವ ಹಬ್ಬದ ದಿನ ನನ್ನ ಪತ್ನಿ ನಲ್ಲಿಗೇ ಅರಿಶಿನ ಕುಂಕುಮ ಸಲ್ಲಿಸುತ್ತಾಳೆ. ನಮ್ಮ ಬೆಂಗಳೂರಿನ ಪಂಪು, ಪೈಪಿನ ಪೂಜೆ ನೆನಪಿಗೆ ಬರುತ್ತದೆ. ನೀರು ಹೊತ್ತು ಹೊತ್ತು ಮೈಕೈ ಎಲ್ಲಾ ನೋವಾಗುತ್ತಿದ್ದದ್ದು ನಿಜವಾದರೂ ನೋವಿನ ನೆನಪು ಭಾದಿಸದು.  ಮನೆಯವರೆಲ್ಲ ಒಟ್ಟಿಗೆ ಸೇರಿ ದಣಿದು ಮಾಡಿದ ನೀರುತುಂಬುವ ಹಬ್ಬದ ಮುದ ಮಾತ್ರ ಮನದಲ್ಲಿ ಉಳಿದಿದೆ.



ಶುಕ್ರವಾರ, ಸೆಪ್ಟೆಂಬರ್ 29, 2017

ಮೈಸೂರು ಮತ್ತು ದಸರಾ - ಒಂದು ನೆನಪು.

ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ.  ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ್ಕರಹಳ್ಳಿ ಕೆರೆ  ಮತ್ತು ಕೃಷ್ಣರಾಜಸಾಗರ. ಎಲ್ಲವೂ ನನ್ನ ಬಾಲ್ಯದ ಅತಿ ಸುಂದರ ನೆನಪುಗಳು. ಹಾಗಾಗಿ ಅಂದಿನಿಂದಲೂ ಮೈಸೂರೆಂದರೆ ನನಗೆ ಮನಸ್ಸಿಗೆ ಮುದ. ಈಗಲೂ ಹಾಗೆಯೇ. ವಿರಳವಾಗಿ ವಿಸ್ತಾರಗೊಂಡಿರುವ ನಗರ, ಅಗಲವಾದ ರಸ್ತೆಗಳು, ಜನದಟ್ಟಣೆ, ವಾಹನ ದಟ್ಟಣೆ ಇಲ್ಲದೆ ನಾನು ನೋಡಿರುವ ಊರುಗಳಲ್ಲಿ ವಾಸಕ್ಕೆ ಬಹಳ ಯೋಗ್ಯವೆಂದು ನನಗೆ ಅನಿಸುವುದು, ಮೈಸೂರು.

ನನ್ನ ಹುಟ್ಟೂರು ಬೆಂಗಳೂರು. ನಮ್ಮ ಸಂಸಾರ, ನೆಂಟರಿಷ್ಟರು, ಸ್ನೇಹಿತರೆಲ್ಲಾ ಬೆಂಗಳೂರೇ. ಬೆಂಗಳೂರು ಬಿಟ್ಟರೆ ನಮ್ಮ ವಾರಿಗೆಯ ಮಕ್ಕಳಿದ್ದ ನಮ್ಮ ಹತ್ತಿರದ ಸಂಭಂದಿಗಳಿದ್ದದ್ದು ಮೈಸೂರಿನಲ್ಲಿ. ಹಾಗಾಗಿ ನಮಗೆ ಬೇಸಗೆಯರಜಾ  ಹಾಗೂ ದಸರಾರಜಕ್ಕೆ ತಾಣ ಮೈಸೂರು. ನನ್ನ ಸೋದರಮಾವನವರು ಹಾಗು ದೊಡ್ಡಮ್ಮನವರು ಇಬ್ಬರೂ ಇದ್ದದ್ದು ಮೈಸೂರಿನಲ್ಲಿ. ಸರಸ್ವತಿಪುರದಲ್ಲಿ. ಮೈಸೂರಿನಲ್ಲಿ ನಮ್ಮ ವಾಸ ಅವರಮನೆಗಳಲ್ಲೇ. ನನ್ನ ಸೋದರಮಾವ ಶ್ರೀ ಜೆ ಆರ್ ಲಕ್ಷ್ಮಣರಾಯರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಮಹಾರಾಜಾ ಕಾಲೇಜು, ಮಾನಸ ಗಂಗೋತ್ರಿಗಳಲ್ಲಿ ಸೇವೆ ಸಲ್ಲಿಸಿದರು.  ಅದರಿಂದಾಗಿ ಸರಸ್ವತಿಪುರ, ಮಾನಸಗಂಗೋತ್ರಿ, ಕುಕ್ಕನಹಳ್ಳಿಕೆರೆ ಸುತ್ತಮುತ್ತಲಿನ ಜಾಗಗಳೆಲ್ಲ ನನಗೆ ಸ್ವಂತ ಊರಿನಷ್ಟೇ ಪರಿಚಯ ಮತ್ತು ನನ್ನ ಮನಸ್ಸಿಗೆ ಅಷ್ಟೇ ಆತ್ಮೀಯ.

ಸರಸ್ವತಿಪುರದಲ್ಲಿ ನನ್ನ ಮಾವನವರಿದ್ದ ಮನೆಯ ಮುಂದೆ ಅಗಲವಾದ  ರಸ್ತೆ. ರಸ್ತೆಯ ಎರಡೂಬದಿಗೆ ಒತ್ತಾಗಿ  ಬೆಳೆದ ಮರಗಳು. ಮರಗಳ ತುಂಬಾ ಮೈನಾ, ಗೊರವಂಕ, ಗಿಣಿ, ಗುಬ್ಬಚ್ಚಿ, ಮತ್ತಿತರ ಹಕ್ಕಿಗಳು ತುಂಬಿಕೊಂಡು ಕಲರವ. ರಸ್ತೆ ತುಂಬಾ ನೆರಳು. ಅದರ ಪಕ್ಕಕ್ಕೆ ಅಗ್ನಿಶಾಮಕ ದಳದ ವಿಶಾಲ ಮೈದಾನ. ನಲವತ್ತು ವರುಷಗಳ ಹಿಂದೆ ರಸ್ತೆಯಲ್ಲಿ ಆಗೊಂದು ಈಗೊಂದು ಕಾರು ಕಂಡರೆ ಹೆಚ್ಚು. ಪಕ್ಕದಲ್ಲೇ ಮೈದಾನವಿದ್ದರೂ ರಸ್ತೆಯೇ ನಮಗೆ ಆಟಕ್ಕೆ ಸ್ಥಳ. ದಿನದ ಮುಕ್ಕಾಲು ಪಾಲು ಸಮಯ ನಾವು ರಸ್ತೆಯಲ್ಲೇ ಕಳೆಯುತ್ತಿದ್ದೆವು. ನಾನು ಸೈಕಲು ನಡೆಸಲು ಕಲಿತಿದ್ದು ಆ ರಸ್ತೆಯಲ್ಲೇ!

ನನ್ನ ಮಾವನವರಿದ್ದದ್ದು ಪ್ರಸಿದ್ಧ ರಂಗ ಕಲಾವಿದ  ಹಾಗೂ  ‘ಸುರುಚಿ’ಪ್ರಕಾಶನದ ಮಾಲೀಕರಾಗಿದ್ದ ಸಿಂಧುವಳ್ಳಿ ಅನಂತಮೂರ್ತಿ ಯವರ ಮನೆಯ ಹಿಂಭಾಗದ ಔಟ್ ಹೌಸಿನಲ್ಲಿ. ಎರಡೂ ಸಂಸಾರಗಳಿಗೆ ಮಧುರ ಭಾಂಧವ್ಯವಿದ್ದು ಎದುರುಬದುರಾಗಿದ್ದ ಇವರ ಹಿಂಬಾಗಿಲು ಅವರ ಮುಂಬಾಗಿಲು ಸದಾ ತೆರೆದೇ ಇರುತ್ತಿದ್ದವು. ಆಟವಾಡಿ ಸಾಕಾದಾಗ ಮನೆಯೊಳಗೆ ನುಗ್ಗಿ ಒಂದು ಮೂಲೆಯಲ್ಲಿ ಸದಾ ನೇತಾಡುತ್ತಿರುತ್ತಿದ್ದ ರಸಬಾಳೆ ಗೊನೆಯಿಂದ ಹಣ್ಣು ಕಿತ್ತು ತಿಂದು, ಅನಂತಮೂರ್ತಿಯವರ ಮನೆ ಸೇರಿ ಅವರ ಗ್ರಂಥಭಂಡಾರದ ಒಂದು ಪುಸ್ತಕ ಹಿಡಿದು ಕೂತರೆ ನನಗೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ಬಹುಶಃ ನಾನು ಮೊದಲಬಾರಿಗೆ ‘ಪೋಲಿಕಿಟ್ಟಿ’ ಓದಿದ್ದು ಅಲ್ಲಿಯೇ ಎಂದು ನೆನಪು. ಮತ್ತೂ ಬೇಕಾದರೆ ಹತ್ತಿರದಲ್ಲೇ ಮಾನಸ ಗಂಗೋತ್ರಿಯ ಗ್ರಂಥಾಲಯವಿತ್ತು. ಅಲ್ಲಿ ನೂರಾರು ಹಳೆಯ ‘ಕಸ್ತೂರಿ’ ಮಾಸಪತ್ರಿಕೆಗಳನ್ನು ಒಟ್ಟುಮಾಡಿ ಇಟ್ಟಿದ್ದರು. ಕಸ್ತೂರಿ ಪತ್ರಿಕೆಯ ಲೇಖನಗಳ ಕೊನೆಯಲ್ಲಿರುತ್ತಿದ್ದ ಕಿರುಲೇಖನಗಳು ಹಾಗೂ ಸ್ಥಿರಶೀರ್ಷಿಕೆಗಳಾದ ‘ಇದುವೇ ಜೀವ ಇದು ಜೀವನ’ ಮುಂತಾದುವು ನನಗೆ ಬಹಳ ಇಷ್ಟವಾಗಿದ್ದವು. ಘಂಟೆಗಟ್ಟಲೆ ಇವನ್ನು ಓದುತ್ತಾ ಗಂಗೋತ್ರಿಯ ಗ್ರಂಥಾಲಯದಲ್ಲಿ ನಾನು ಕಾಲ ಕಳೆದಿದ್ದೇನೆ. ಇವೆಲ್ಲಾ ನನ್ನ ಚಿಕ್ಕಂದಿನ ಬಹಳ ಸಂತೋಷಕರ ಅನುಭವಗಳು.

ಮೈಸೂರಿಗೆ ಅನೇಕಬಾರಿ ದಸರೆಯ ಸಮಯದಲ್ಲೇ ಹೋಗಿದ್ದರೂ ಸಹ, ನಾವು ದಸರಾ ವಸ್ತುಪ್ರದರ್ಶನ ಅಥವಾ ಮೆರವಣಿಗೆಗೆ ಹೋದದ್ದು ಬಹಳ  ಕಡಿಮೆ. ಜಂಬೂಸವಾರಿಯಂತು ನಾನು ನೋಡಿದ್ದು ಒಮ್ಮೆಯೇ! ಅದು ಇಂದಿರಾಗಾಂಧಿಯವರು ಮಹಾರಾಜರ ಸವಲತ್ತುಗಳನ್ನು ಕಿತ್ತುಕೊಳ್ಳುವ ಮುಂಚೆ. ಆಗಿನ್ನೂ ಜಂಬೂಸವಾರಿಗೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರೇ ಅಂಬಾರಿಯಮೇಲೆ ಕೂಡುತ್ತಿದ್ದರು. ನಾನು, ನನ್ನ ತಮ್ಮ ಹಾಗು ನಮ್ಮ ಸೋದರಸಂಭಂದಿಗಳು ಕೆಲವರನ್ನು ನಮ್ಮ ತಂದೆಯವರು ಜಂಬುಸವಾರಿ ನೋಡಲೆಂದು ಕರೆದೊಯ್ದಿದ್ದರು. ಆಗ ಅದಕ್ಕೆ ಈಗಿರುವಷ್ಟು ಜನಸಂದಣಿ ಇರುತ್ತಿರಲಿಲ್ಲ. ರಸ್ತೆಯಬದಿಯ ಒಂದು ಮರದ ಕೆಳಗೆ ವಿರಾಮವಾಗಿ ನಿಂತು ನಾವು ಜಂಬೂಸವಾರಿಗಾಗಿ ಕಾಯ್ದೆವು.  

ದಸರಾ ಮೆರವಣಿಗೆ  ನಮ್ಮಿಂದ ಅರ್ಧ ಕಿಲೋಮೀಟರಿನಷ್ಟು ದೂರವಿದ್ದಾಗಲೇ ಮಳೆಹನಿಹಾಕಲು  ಶುರುವಾಯಿತು. ಸವಾರಿ ನಮ್ಮಮುಂದೆ ಹಾಯುತ್ತಿದ್ದಂತೆ ಜೋರುಮಳೆ. ನಾವು ಮರದ ಕೆಳಗೇ ಒತ್ತೊತ್ತಾಗಿ ನಿಂತೆವು. ಮಳೆ ಹೆಚ್ಚಾಯಿತು. ಮರದ ಕೊಂಬೆಗಳಿಗೆ ಗೆದ್ದಲು ಕಟ್ಟಿತ್ತು. ಗೆದ್ದಲುಗೂಡಿನ ಮಣ್ಣು ಮಳೆಗೆ ತೋಯ್ದು ನಮ್ಮ ತಲೆಗಳ ಮೇಲೆ ತೊಪ್ಪ ತೊಪ್ಪನೆ ಬೀಳತೊಡಗಿತು. ನಮ್ಮ ತಂದೆಯವರು ಉಟ್ಟ ಪಂಚೆಬಿಚ್ಚಿ, ಚಡ್ಡಿಯಲ್ಲಿ ನಿಂತರು. ಪಂಚೆಯ ನಾಕೂ ತುದಿಗಳನ್ನು ವಿಸ್ತರಿಸಿ ನಾಕುಜನ ಎತ್ತರವಿದ್ದವರು ಚಪ್ಪರದಂತೆ ತಲೆಯಮೇಲೆ ಹರಡಿ ಹಿಡಿದರು. ನಾವು ಮಕ್ಕಳೆಲ್ಲಾ ಮಧ್ಯದಲ್ಲಿ. ಈರೀತಿ ನಾವು ಜಂಬುಸವಾರಿ ವೀಕ್ಷಿಸಿ ನಂತರ ಹಾಗೆಯೇ ನಿಧಾನವಾಗಿ ನಡೆಯುತ್ತಾ ಮನೆತಲುಪಿದೆವು. ಜಂಬುಸವಾರಿ ನೋಡಬಂದಿದ್ದವರಿಗೆ ನಮ್ಮ ಈ  ಸವಾರಿ  ಜಂಬೂಸವಾರಿಗಿಂತ  ಆಕರ್ಷಣೀಯವಾಗಿತ್ತೇನೋ !

ಮಹಾರಾಜರ ಸವಲತ್ತುಗಳು ಹೋದಮೇಲೆ ಮಹಾರಾಜರು ಅಂಬಾರಿಯಮೇಲೆ ಕೂಡಲಿಲ್ಲ ಎಂದು ನನ್ನ ಗ್ರಹಿಕೆ. ಮಹಾರಾಜರಿಲ್ಲದೆ, ಮೆರವಣಿಗೆ ನಿಲ್ಲಿಸಲಾರದೆ ಒಮ್ಮೆ ರಾಜ್ಯಪಾಲರನ್ನು ಕೂಡಿಸಿ ಜಂಬೂಸವಾರಿ ನಡೆಸಲಾಯಿತೆಂದು ನೆನಪು. ಅದರ ಬಗೆಗೆ ಬಹಳ ವಾದವಿವಾದಗಳಾದನಂತರ ಕೊನೆಗೆ ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತಿದೆ. ಈಗ ಇದು ಪೂರ್ತಿ ಸರಕಾರೀ ಕಾರ್ಯಕ್ರಮ.

ಈಚೆಗಿನ ದಿನಗಳಲ್ಲಿ ಬೆಂಗಳೂರು - ಮೈಸೂರಿನ ರಸ್ತೆ ಪ್ರಯಾಣ ನೆನಸಿಕೊಂಡರೆ ದಸರೆಯೂ ಬೇಡ, ಮೈಸೂರೂ  ಬೇಡ ಎನಿಸುತ್ತದೆ. ಹಾಗಾಗಿ, ನಾನು ನನ್ನ ನನ್ನ ಬಾಲ್ಯದ ನೆನಪುಗಳಲ್ಲೇ ಕಳೆದುಹೋಗಬಯಸುತ್ತೇನೆ !

ಭಾನುವಾರ, ಸೆಪ್ಟೆಂಬರ್ 17, 2017

ನಿಸ್ಸಾರ ಅಹಮದ್ - ನಾನು ಗ್ರಹಿಸಿದಂತೆ

ಈ ಬಾರಿಯ ದಸರಾ ಉತ್ಸವವನ್ನು ಉದ್ಘಾಟಿಸಲು ಕರ್ನಾಟಕ ಆಹ್ವಾನಿಸಿದೆ. ಈ ಸಂಧರ್ಭದಲ್ಲಿ ನಿಸ್ಸಾರರ ಬಗೆಗೆ ನನ್ನ  ಒಂದು ಬರಹ :


“ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣವನದ ತೇಗ  ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯೆ ನಿತ್ಯೋತ್ಸವ. ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ.”

ಕೇಳಿದವರೆಲ್ಲರ ಮನಮುಟ್ಟಿ, ಬಾಯಲ್ಲಿ ಗುಣುಗುಟ್ಟಿ, ಬಹಳ ಜನಪ್ರಿಯವಾದ ಈ ಭಾವಗೀತೆ, ಅದರ ಕವಿ ಮಾನ್ಯ ನಿಸ್ಸಾರ ಅಹಮದ್ದರನ್ನು  “ನಿತ್ಯೋತ್ಸವ ಕವಿ” ಎಂದೇ ಗುರುತಿಸಲು ಕಾರಣವಾಯಿತು.  

ನಿತ್ಯೋತ್ಸವ ಗೀತೆಯನ್ನು ನಿಸ್ಸಾರ ಅಹಮದ್ದರು ಬರೆದದ್ದು ಯಾವಾಗಲೋ  ತಿಳಿಯದು. ಆದರೆ ನಾನು ಅದನ್ನು ಮೊದಲಬಾರಿ ಕೇಳಿದ್ದು ೧೯೭೨ ರ ಆಗಸ್ಟ್ ಹದಿನಾಲ್ಕರ ರಾತ್ರಿ ೧೨ ಘಂಟೆಗೆ. ಆ ದಿನಾಂಕ ಅಷ್ಟು ನಿಖರವಾಗಿ ನೆನಪಿರಲು ಕಾರಣವಿದೆ. ೧೯೭೨, ನಮ್ಮ  ಸ್ವಾತಂತ್ರ್ಯೋತ್ಸವದ ರಜತ ವರ್ಷ. ಅದು ವಿಶೇಷವಾದದ್ದರಿಂದ ನಮ್ಮ ಕಾಲೇಜಿನಲ್ಲಿ (ನ್ಯಾಷನಲ್ ಕಾಲೇಜು ಬೆಂಗಳೂರು) ಪ್ರತಿ ವರುಷದಂತೆ ಆಗಸ್ಟ್ ಹದಿನೈದರ ಬೆಳಗ್ಗೆ ಸ್ವಾತಂತ್ರ್ಯೋತ್ಸವ ವನ್ನು ಆಚರಿಸುವ ಬದಲು ಹದಿನಾಲ್ಕರ ರಾತ್ರಿ ಹನ್ನೆರಡು  ಘಂಟೆಗೆ ಸಮಾರಂಭವನ್ನು  ಏರ್ಪಡಿಸಲಾಗಿತ್ತು. ಸಮಾರಂಭದ ಅಂಗವಾಗಿ ‘ನಿತ್ಯೋತ್ಸವ’ ಗೀತೆಯನ್ನು ಶ್ರೀ  ಮೈಸೂರು ಅನಂತಸ್ವಾಮಿಯವರ ನಿರ್ದೇಶನದಲ್ಲಿ  ಒಂದು ಸಮೂಹ ಗಾನವಾಗಿ ಹಾಡಲಾಯಿತು.  ಮಧ್ಯರಾತ್ರಿಯ ನಿಶ್ಶಬ್ದದಲ್ಲಿ ಆ ಸಮೂಹಗಾನ, ಜಲಪಾತದ ಮುಂದೆ ನಿಂತು ಅದು  ಭೋರ್ಗರೆಯುವ ಶಬ್ದವನ್ನು ಕೇಳುವಂತಹದೇ ಆನಂದವನ್ನು ನನಗೆ ತಂದುಕೊಟ್ಟಿತ್ತು.

ಅದಕ್ಕೆ ಎರಡುವರುಷ  ಹಿಂದೆ ನಮ್ಮ ಹೈಸ್ಕೂಲಿನಲ್ಲಿ (ನ್ಯಾಷನಲ್ ಹೈಸ್ಕೂಲು) ಒಮ್ಮೆ ಅನಂತಸ್ವಾಮಿಯವರ ಗಾಯನ ಏರ್ಪಾಟಾಗಿದ್ದಾಗ ಅವರು “ಕುರಿಗಳು ಸಾರ ಕುರಿಗಳು” ಮತ್ತು “ನಾಡ ದೇವಿಯೇ” ಗೀತೆಗಳನ್ನು ಹಾಡಿದ್ದರು. ಗೀತೆಗಳು ಬಹಳ ಮೆಚ್ಚಿಗೆಯಾದರೂ ಅವುಗಳ ಕರ್ತೃ ನಿಸ್ಸಾರ ಅಹಮದ್ದರೆಂದು ಆಗ ನನಗೆ ತಿಳಿದಿರಲಿಲ್ಲ.

ನಂತರ  ಶ್ರೀ ನಿಸ್ಸಾರ ಅಹಮದ್ದರೇ ನಮ್ಮ ಕಾಲೇಜಿನಲ್ಲಿ ಒಮ್ಮೆ ತಮ್ಮ ಕವನಗಳ ಬಗ್ಗೆ  ಮಾತನಾಡಿದರು. ಆದಿನ  ಅವರು ತಮ್ಮ “ರಾಮನ್ ಸತ್ತ ದಿನ”, “ ಸಂಜೆ ಐದರ ಮಳೆ” ಮತ್ತು “ಮಾಸ್ತಿ” ಕವನಗಳನ್ನು ವಾಚನ ಮಾಡಿದ್ದು ನೆನಪಿದೆ.

ನಾನು ಬಹು ಸಣ್ಣ ವಯಸ್ಸಿನಿಂದಲೇ ಪುಸ್ತಕಗಳನ್ನೋದಲು ಪ್ರಾರಂಭಮಾಡಿದ್ದೆನಾದರೂ ನನ್ನ ಓದೆಲ್ಲಾ ಕಥೆ, ಕಾದಂಬರಿಗಳು, ಹಾಸ್ಯಬರಹಗಳು ಮುಂತಾಗಿ ಗದ್ಯಕ್ಕೆ ಸೀಮಿತವಾದದ್ದು. ಕವನ, ಕಾವ್ಯಗಳ ಸೌಂದರ್ಯವನ್ನು ಗುರುತಿಸುವ ಹಾಗೂ ಆಸ್ವಾದಿಸುವ ರಸಿಕತೆ ನನಗೆ ಇಲ್ಲವೆನಿಸುತ್ತದೆ. ಅಷ್ಟಾಗಿಯೂ ನನಗೆ ಕೆಲವು ಕವಿಗಳ, ಕವಿತೆಗಳ ಪರಿಚಯ ಆಗಿದ್ದು, ಅವುಗಳ ರಸಾಸ್ವಾದನೆ ಸಾಧ್ಯವಾದದ್ದು ಭಾವಗೀತೆಗಳ ಮುಖಾಂತರ. ಕೇಳಿದ ಗೀತೆಗಳು  ಹಿಡಿಸಿದರೆ ನಂತರ ಅದನ್ನೋದಿ ಮನನ ಮಾಡಿಕೊಳ್ಳುವುದು ನನ್ನ ಅಭ್ಯಾಸ. ‘ನಿತ್ಯೋತ್ಸವ’ ಕವನ ಸಂಕಲನದ ಅನೇಕ ಕವನಗಳು  ಭಾವಗೀತೆಗಳಾಗಿರುವುದರಿಂದ ಈ ಎಲ್ಲ ಗೀತೆಗಳ ಪರಿಚಯ ನನಗಾಯಿತು. “ಬೆಣ್ಣೆ ಕದ್ದ ನಮ್ಮ ಕೃಷ್ಣ”, “ನನ್ನ ನಲವಿನ ಬಳ್ಳಿ”, “ನಾದವಿರದ ಬದುಕು”, “ಎಲ್ಲ ಮರೆತಿರುವಾಗ” “ನಾ ನಿನ್ನ ಕಂಡಾಗ” ಮುಂತಾದ  ಅನೇಕ ಕವನಗಳು ಅನಂತಸ್ವಾಮಿಯವರ ಕಂಠದ ಮೂಲಕ ನನ್ನ ಮಿದುಳಿಗೆ ತಲುಪಿದವು.  

ಸರಳವಾದ ಸಾಲುಗಳು, ಪದಗಳು ಏನುಹೇಳುತ್ತವೋ ಅದೇ ಅರ್ಥ, ತಲೆಗೆ ಹೆಚ್ಚು ಕೆಲಸಕೊಡದೆ ಓದುತ್ತಾ ಓದುತ್ತಾ ಆನಂದಪಡುವಂಥ ಕವನಗಳಾದರೆ  ನಾನೂ ಅವುಗಳನ್ನು ಓದಿ ಸಂತೋಷಪಡಬಲ್ಲೆ. ನಿಸ್ಸಾರರ ಅನೇಕ ಕವನಗಳು ಸರಳವಾದ ಪದಪುಂಜ ಮತ್ತು ನವಿರಾದ ಹಾಸ್ಯದಿಂದ ‘ಕಾವ್ಯ ಪ್ರಯೋಗ ಪರಿಣಿತಮತಿ’ ಗಳಲ್ಲದ ನನ್ನಂಥವರೂ ಸಹ ಸುಲಭವಾಗಿ ಆಸ್ವಾದಿಸುವಂತಿವೆ. “ಗಾಂಧಿಬಜಾರಿನ ಒಂದು ಸಂಜೆ”, “ಅಮ್ಮ ಆಚಾರ ಮತ್ತು ನಾನು”, “ಪುರಂದರ ದಾಸರು”,  “ಅಭಿವಂದನೆ ನಿಮಗೆ”, “ನಗ್ತೀರಾ ನನ್  ಹಿಂದೆ”, “ಗೃಹಪ್ರವೇಶದ ಉಡುಗೊರೆ”, “ಲಾಲಬಾಗಿನಲ್ಲಿ ಎಚ್ಛೆನ್” ಇವುಗಳು ಅಂಥ ಕವನಗಳಲ್ಲಿ ಕೆಲವು.  ಅವರ ಸಾಲುಗಳ ಸೊಬಗನ್ನು  ವಿವರಿಸುವ ಸಾಮರ್ಥ್ಯ ನನಗಿಲ್ಲ. ಈ ಕೆಳಗಿನ ಕೆಲವು ಉದಾಹರಣೆಗಳನ್ನು ನೋಡಿದರೆ ನಿಮಗೇ ತಿಳಿದೀತು.

ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ, ನ್ಯಾಷನಲ್ ಕಾಲೇಜಿನ  ಪ್ರಿನ್ಸಿಪಾಲ, ಸುಪ್ರಸಿದ್ಧ ವಿಚಾರವಾದಿ ಮತ್ತು ಗಾಂಧಿವಾದಿ ಶ್ರೀ ಹೆಚ್ ನರಸಿಂಹಯ್ಯ ನವರು ಲಾಲಬಾಗ್ ಪ್ರೇಮಿ. ಪ್ರತಿದಿನ ಮುಂಜಾನೆ ಲಾಲ್ ಬಾಗ್ ನಲ್ಲಿ ವಾಯುವಿಹಾರದೊಂದಿಗೆ ಅವರ ದಿನಚರಿ ಸುರು. ಬಹುದಿನಗಳ ಅಂತರದಲ್ಲಿ ಹೆಚ್ ಎನ್ ರವರು ಲಾಲ್ ಬಾಗಿನಲ್ಲಿ ಕಂಡಾಗ ಅವರು ಕೊಟ್ಟ ವಿವರಣೆಯನ್ನು ನಿಸ್ಸಾರರು ತಮ್ಮ ‘ಕೆಂಪುತೋಟದಲ್ಲಿ ಎಚ್ಛೆನ್’ ಕವನದಲ್ಲಿ ಹೇಳುವ ರೀತಿ,

“ಈಚೆಗೇಕೋ ಮುದುಕ ಪಾದಬೆಳಸಿಲ್ಲವೀ ಎಡೆಗೆ
ಗೊಟಕ್ಕೆಂದು ಪಯಣಿಸಿದನೋ ಹೇಗೆ ಮೇಲುಗಡೆಗೆ?
ಎನ್ನುವ ಈ ತರುಲತೆಗಳನುಮಾನ ನೀಗಲಿಕ್ಕೆಂದೇ
ಮಳೆಯಿದ್ದರೂ ಈ ಸಂಜೆ ಇಲ್ಲಿಗೆ ಬಂದೆ.”

ಹಾಗೆಯೇ ನಿಸ್ಸಾರರ ‘ಪುರಂದರ ದಾಸರು’ ಕವನದ ಕೆಲವುಸಾಲುಗಳನ್ನು ನೋಡಿ,

ಮೈಮರೆತು ಹರಿಸ್ಮರಣೆ ಮಾಡಿದರು, ಹಾಡಿದರು
ಹತ್ತುಜನ ಕೂಡಿದರು ಹರಿಭಕ್ತರು .
ಈವೊತ್ತು ಈ ಕೊಂಪೆ, ನಾಳೆ ದೂರದ ಹಂಪೆ
ಹರಿಯಿಂಪ, ನರುಗಂಪ ಹರಡಿದ್ದರು.

ಮತ್ತು, ನಾಡದೇವಿಯೇ ಕವನದ ಎರಡೇ ಸಾಲು

ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಬೇಧ ತಾಯೀ!
ಒಂದೆ ನೆಲದ ರಸಹೀರಲೇನು? ಸಿಹಿ,ಕಹಿಯ ರುಚಿಯ ಕಾಯಿ   

ಆಗಿಂದಾಗ್ಗೆ ಏನಾದರೂ ಲೇಖನಗಳನ್ನು ಬರೆದು ನನ್ನ “ಬ್ಲಾಗ್” ನಲ್ಲಿ ಪ್ರಕಟಿಸುವುದು ನನ್ನದೊಂದು ಹವ್ಯಾಸ. ಅಂತಹ ಒಂದು ಲೇಖನಕ್ಕೆ ನನಗೆ ಬಹಳ ಮೆಚ್ಚಿಗೆಯಾಗಿದ್ದ ನಿಸ್ಸಾರರ ‘ಗೃಹಪ್ರವೇಶದ ಉಡುಗೊರೆ’ ಕವನವನ್ನು ನಾನು ಉಪಯೋಗಿಸಿಕೊಳ್ಳಬೇಕಿತ್ತು. ನಾನು ಅದನ್ನೋದಿ ವರುಷಗಳೇ  ಕಳೆದಿದ್ದವು. ನನಗೆ ಅದರ ಶೀರ್ಷಿಕೆ ಯಾಗಲೀ, ಯಾವ ಸಂಕಲನದಲ್ಲಿದೆ ಎಂಬುದಾಗಲೀ ನೆನಪಿರಲಿಲ್ಲ. ಹಾಗಾಗಿ ನನಗೆ ಅದು ಸಿಕ್ಕಲಿಲ್ಲ. ನಾನು ಬೆಂಗಳೂರಿಗೆ ಹೋಗಿದ್ದಾಗ ನಮ್ಮ ಮನೆಯ ಸಮೀಪದಲ್ಲೇ ವಾಸವಿದ್ದ ನಿಸ್ಸಾರ ಅಹಮದ್ದರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಕವನದ ವಸ್ತು ಮತ್ತು ನನಗೆ ನೆನಪಿದ್ದ ಕೆಲವು ಸಾಲುಗಳನ್ನು ಅವರಿಗೆ ತಿಳಿಸಿ, ನನಗೆ ಆ ಕವನ  ಬೇಕಿತ್ತೆಂದು ಕೇಳಿದೆ. ಸಾಹಿತ್ಯ ಪ್ರಪಂಚದ ಅಂಥ ದೊಡ್ಡವ್ಯಕ್ತಿ, ಮೊದಲು ನನ್ನ ಬರಹದ ಬಗೆಗೆ ಆಸಕ್ತಿಯಿಂದ ವಿಚಾರಿಸಿ, ವಿಶ್ವಾಸದಿಂದ ಮಾತನಾಡಿಸಿ, ಕೆಲನಿಮಿಷಗಳ ತರುವಾಯ ಆ ಕವನವನ್ನು ನೆನಪಿಸಿಕೊಂಡರು.
“ಅದು ಈಗ ಅಚ್ಚಿನಲ್ಲಿದೆಯೋ ಇಲ್ಲವೋ ತಿಳಿಯದು. ಸಪ್ನಾ ಪುಸ್ತಕದ ಮಳಿಗೆಯಲ್ಲಿ ನನ್ನ ಸಮಗ್ರ ಕವಿತೆಗಳ ಸಂಕಲನವಿದೆ. ಅದರಲ್ಲಿ ನಿಮಗೆ ದೊರಕಬಹುದು. ಒಂದುವೇಳೆ ಸಿಗದಿದ್ದರೆ ತಿಳಿಸಿ. ಖಂಡಿತಾ ಹೇಗಾದರೂ ಮಾಡಿ ತಮಗೆ ಅದನ್ನು ಕಳುಹಿಸಿಕೊಡುತ್ತೇನೆ” ಎಂದು ಹೇಳಿದರು. “ಫೋನ್ ಮುಖಾಂತರ ತಿಳಿಸಿದರೂ ಸಾಕು” ಎಂದು ಹೇಳಿ ನಂಬರ ಕೊಟ್ಟರು.  ಅವರ ಸರಳತೆ, ಸಜ್ಜನಿಕೆಗೆ ನಾನು ಮಾರುಹೋದೆ.

ಅಪರೂಪಕ್ಕೊಮ್ಮೆ ನಮ್ಮ ಸರಕಾರ “ಭಲೇ, ಇದು ಸರಿಯಾದ ಕೆಲಸ” ಎನ್ನುವಂಥ  ಕೆಲಸವನ್ನು ಮಾಡಿಬಿಡುತ್ತದೆ. ಶ್ರೀ ಕೆ ಎಸ ನಿಸಾರ ಅಹಮದ್ದರನ್ನು ಈ ಬಾರಿಯ ದಸರಾ ಉತ್ಸವನ್ನು ಉದ್ಹಾಟಿಸಲು ಆಹ್ವಾನಿಸಿರುವುದು ಅಂಥದ್ದೊಂದು. ಈ ಸಂಧರ್ಭದಲ್ಲಿ ಅಹಮದ್ದರ ಬಗೆಗೆ ಒಂದು ಲೇಖನ ಬರೆಯೋಣವೆನ್ನಿಸಿತು.  ನಿಸ್ಸಾರರ, ಅವರ ಕವನಗಳ ಪರಿಚಯ ನನ್ನಷ್ಟೂ ಇಲ್ಲದ ಕೆಲವರಿಗೆ, ಈ ಬರಹದ ಮೂಲಕ ಅವರ ಪರಿಚಯವಾಗಿ, ನಿಸ್ಸಾರರ ಕವನಗಳ ಸೊಬಗನ್ನು ಹೆಚ್ಚುಜನ ಸವಿಯುವಂತಾದರೆ ಈ ಪ್ರಯತ್ನ ಸಾರ್ಥಕವೆಂದು ತಿಳಿಯುತ್ತೇನೆ.

ಶನಿವಾರ, ಆಗಸ್ಟ್ 26, 2017

ಅಂತಿಂಥ ರತ್ನವಲ್ಲ, “ರಾಜ ರತ್ನ” - ನನ್ನಿಂದ ಸಾಧ್ಯವಾದಂಥ ಪರಿಚಯ.



“ಕವಿಯಲ್ಲ, ವಿಜ್ಞಾನಿಯಲ್ಲ, ಬರಿಯ  ತಾರಾಡಿ” ಎಂದು ತಮ್ಮನ್ನು ತಾವು ಡಿ ವಿ ಜಿ ಯವರು ಪರಿಚಯಿಸಿಕೊಂಡರೆ, “ಅಕ್ಸಾರ ಗಿಕ್ಸಾರ ನಂಗೇನೂ ಬರದು, ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು” ಎನ್ನುತ್ತಾ ತಮ್ಮ ಪದಗಳನ್ನು ಪ್ರಾರಂಭಿಸಿದರು ಈ  ಮಹಾಕವಿ. ಅವರಿಗೇನು ಬರಲಿ ಬಿಡಲಿ, ನಮಗೆ ಕನ್ನಡ, ಕೊಂಚ ಉರ್ದು ( ಹಳೇಮೈಸೂರಿನ ಸಾಹೇಬರುಗಳ ಕನ್ನಡೀಕರಣಗೊಂಡ ಉರ್ದು) ಹಾಗೂ ಇವೆರಡರ ಗ್ರಾಮ್ಯ ರೂಪ ಇವುಗಳ ಪರಿಚಯವಿಲ್ಲದಿದ್ದರೆ ರತ್ನನ ಪದಗಳು ಕಬ್ಬಿಣದ ಕಡಲೆಯೇ.

“ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ , ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ
ನಂಗೆಸ್ರು ಏಳ್ತಾರೆ ರ್ರ ರ್ರ ರ್ರ ರತ್ನ, ನಾನಾಡೋ ಪದಗೋಳು ಯೆಂಡದ್ ಪರ್ಯತ್ನ”  -   ಈ ಸಾಲುಗಳನ್ನು ನೀವು ಇದುವರೆಗೂ ಓದಿಲ್ಲದಿದ್ದರೆ, ಇವು ನಿಮ್ಮ  ಮನಕ್ಕೆ ತಟ್ಟಿದರೆ, ನನ್ನ ಪರ್ಯತ್ನ ಸಾರ್ಥಕವಾಯಿತು.
ನಾನು ಮೇಲೆಬರೆದ ಪದಗಳನ್ನು ಕೇಳಿಲ್ಲದಿರುವವರು ಇರಬಹುದು. ಆದರೆ “ನಾಯಿಮರಿ ನಾಯಿಮರಿ ತಿಂಡಿಬೇಕೇ?” ಮತ್ತು “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ “ ಮುಂತಾದ  ಮಕ್ಕಳ ಗೀತೆಗಳ ಪರಿಚಯವಿಲ್ಲದ ಕನ್ನಡಿಗರು ಇರಲಾರರು.

ಈ ಪದಗಳ ಹಾಗು ಮಕ್ಕಳ ಗೀತೆಗಳ ಕರ್ತೃ, “ಗಂಡುಗವಿ” ಎಂದು ಹೆಸರಾದ ಜಿ ಪಿ ರಾಜರತ್ನಂ ಅವರು. “ನರಕಕ್ಕಿಳಿಸಿ, ನಾಲ್ಗೆ ಸೀಳ್ಸಿ, ಬಾಯ್ ಹೊಲಿಸಾಕಿದ್ರೂನೂವೆ, ಮೂಗ್ನಲ್ ಕನ್ನಡ ಪದವಾಡ್ತೀನಿ” ಎಂದ ಕನ್ನಡಾಭಿಮಾನಿ. ಮತ್ತೆ ಇದು ಬರಿಯ ಭಾಷಣದ ಕನ್ನಡಾಭಿಮಾನವಲ್ಲ. ನಂಜನಗೂಡಿನ ಸಮೀಪದ ಗುಂಡ್ಲುಪೇಟೆಯಲ್ಲಿ ಜನಿಸಿದ ರಾಜರತ್ನಂ ಅವರ ಮಾತೃಭಾಷೆ ತಮಿಳು. ಬಡತನದಲ್ಲಿ ಬೆಳೆದು ಓದಿ, ಕನ್ನಡ ಆನರ್ಸ್ ಪದವಿಗಳಿಸಿ ನಂತರ ಸ್ನಾತಕೋತ್ತರ ಪದವಿಪಡೆದರು. ಕನ್ನಡ ಪಾಠಮಾಡಿ ಜೀವನ ನಡೆಸಿ, ಗದ್ಯ, ಪದ್ಯ, ಮಕ್ಕಳ ಸಾಹಿತ್ಯ ಮುಂತಾಗಿ ವಿಪುಲವಾಗಿ ಕನ್ನಡ ಸಾಹಿತ್ಯಸೇವೆ ನಡೆಸಿ, ಜೀವನವನ್ನೇ ಕನ್ನಡ ಸಾಹಿತ್ಯಾರಾಧನೆಗೆ  ಮುಡುಪಿಟ್ಟ ಕವಿ.

ಕನ್ನಡವಷ್ಟೇ ಅಲ್ಲದೆ ಸಂಸ್ಕೃತ ಹಾಗೂ ಪಾಲಿಭಾಷೆಗಳಲ್ಲಿ ಪರಿಣಿತರಾಗಿದ್ದ  ರಾಜರತ್ನಂ ಅವರು ಪಾಲಿಭಾಷೆಯನ್ನು ಕೈಗೂಡಿಸಿಕೊಂಡು ಬೌದ್ಧ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ, ಅನೇಕ ಪ್ರೌಢ ಪ್ರಭಂದಗಳಲ್ಲದೇ ಮಕ್ಕಳಿಗಾಗಿ “ಬೋಧಿಸತ್ವನ ಕಥೆ “ಗಳನ್ನು ಬರೆದರು. “ತುತ್ತೂರಿ”, “ಕಡಲೆಪುರಿ” ಅವರ ಮಕ್ಕಳ ಗೀತಗಳ ಸಂಗ್ರಹಗಳು.

ರಾಜರತ್ನಂ ಅವರ ಹೆಸರು ಕೇಳಿಲ್ಲದವರೂ ಸಹ ದಿವಂಗತ ಕಾಳಿಂಗರಾಯರ ಕಂಠದ “ಬ್ರಮ್ಮ ನಿಂಗೆ ಜೋಡಿಸ್ತೀನಿ ಎಂಡ  ಮುಟ್ಟಿದ್ ಕೈನ“ ಮತ್ತು “ಎಳ್ಕೊಳ್ಳೋಕ್ ಒಂದೂರು” ಗಳನ್ನು ಕೇಳದಿರುವ ಸಾಧ್ಯತೆ ಬಹುಕಡಿಮೆ. ಭಾವಗೀತೆಗಳೆಂಬ ಒಂದು ಪ್ರಕಾರದ ಹಾಡುಗಾರಿಕೆ ಪ್ರಾರಂಭವಾದ ಕಾಲದಲ್ಲಿ ಬಹಳ ಜನಪ್ರಿಯವಾದ ಗೀತೆಗಳು ಇವು. ಇಂಥಗೀತೆಗಳನ್ನು ಒಳಗೊಂಡ  “ರತ್ನನ ಪದಗಳು” ಕನ್ನಡ ಕವನ ಸಾಹಿತ್ಯದಲ್ಲಿ ಒಂದು ಹೊಸಪ್ರಯೋಗ . ಕೈಲಾಸಂ ರವರ ನಾಟಕಗಳಿದ್ದಂತೆ.

ರಾಜರತ್ನಂ ಅವರು ರತ್ನನ ಪದಗಳನ್ನು ಬರೆದಾಗ ಅದನ್ನು ಅಚ್ಚುಮಾಡಲು ಯಾವ ಪ್ರಕಾಶಕನೂ ಮುಂದೆ ಬರಲಿಲ್ಲವಂತೆ. ತಾವು  ಪದವಿ ಪರೀಕ್ಷೆಯಲ್ಲಿ ಮೊದಲಿಗರಾದಾಗ ತಮಗೆ ದೊರಕಿದ್ದ ಸ್ವರ್ಣ ಪದಕವನ್ನು ಅಡವಿಟ್ಟು, ಮೂವತ್ತೈದು ರೂಪಾಯಿಗಳನ್ನು ಹೊಂದಿಸಿಕೊಂಡು, ತಾವೇ ತಮ್ಮ ಪದಗಳನ್ನು ಅಚ್ಚುಮಾಡಿಸಿದರಂತೆ. ಪುಸ್ತಕಗಳೆಲ್ಲಾ ಮಾರಾಟವಾಗಿ ಮರುಮುದ್ರಣವಾದಾಗ ಬಂದ ಹಣದಿಂದ ತಮ್ಮ ಪದಕವನ್ನು ವಾಪಸು ಪಡೆದರಂತೆ.

ನನ್ನ ಸೋದರಮಾವನವರು ರಾಜರತ್ನಂ ಅವರ ವಿದ್ಯಾರ್ಥಿಯಾಗಿದ್ದ್ದು ನಂತರ ಸಹ ಅಧ್ಯಾಪಕರಾದವರು. ಗಂಡುಗವಿಯ ಮೈಕಟ್ಟು ಕೂಡ ಗುಂಡುಕಲ್ಲು. ತರಗತಿಯಲ್ಲಿ ಹುಡುಗರು ತರಲೆಮಾಡಿದರೆ “ಕಿಟಕಿಗೆ ಕಂಬಿಯಿಲ್ಲ, ತೋಳಿನಲ್ಲಿ ಕಸುವಿದೆ, ಎತ್ತಿ ಹೊರಗೆ ಒಗೆದುಬಿಡುವೆ” ಎಂದು ಗುಡುಗಿದರೆ ತರಗತಿ ನಿಶ್ಯಬ್ಧ !

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಅಧ್ಯಾಪಕರ ವೇತನ, ಭಾಷೆಯ ಅಧ್ಯಾಪಕರ ವೇತನಕ್ಕಿಂತ ಒಂದುಮಟ್ಟ ಹೆಚ್ಚು ಇದ್ದಿತಂತೆ. ತಾವು ರಸಾಯನಶಾಸ್ತ್ರದ ಅಧ್ಯಾಪಕರಾಗಿ, ತಮಗೆ ಕನ್ನಡ ಪಾಠಹೇಳಿದ ಗುರು ರಾಜರತ್ನಂ ಅವರಿಗಿಂತ ಹೆಚ್ಚು ವೇತನ ಪಡೆಯುವುದು ನನ್ನ ಸೋದರಮಾವನವರಿಗೆ ಕಿರಿಕಿರಿಯಾಗುತ್ತಿತ್ತಂತೆ. ಒಮ್ಮೆ ಇಬ್ಬರೂ ಕಾರ್ಯಾಲಯದಲ್ಲಿ ಒಟ್ಟಿಗೆ ವೇತನ ಪಡೆಯಲು ಹೋದಾಗ ಮಾವನವರು ಇದನ್ನು ರಾಜರತ್ನಂ ಅವರಿಗೆ ತಿಳಿಸಿದರಂತೆ. “ನಾಚಿಕೆಯಾಗಬೇಕಿರುವುದು ವಿಶ್ವವಿದ್ಯಾಲಯಕ್ಕೆ. ನೀ ಯಾಕೆ ಬೇಸರಪಡುತ್ತೀಯಾ, ಬಾ. ಕಾಫಿ ಕುಡಿಯೋಣ” ಎನ್ನುತ್ತಾ ಹೆಗಲಮೇಲೆ ಕೈಹಾಕಿಕೊಂಡು ಕ್ಯಾಂಟೀನಿಗೆ ಕರೆದೊಯ್ದರಂತೆ ರಾಜರತ್ನಂ ಅವರು.

ನಾನು ಬಿ ಡಿ ಎಸ್  ಎರಡನೇ  ವರ್ಷದಲ್ಲಿದ್ದಾಗ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ಕಾಲೇಜಿಗೆ ಬಂದಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತಾವು ಬರಬೇಕಾದರೆ ಕನಿಷ್ಠ ನೂರುರುಪಾಯಿ ಬೆಲೆಯ ಕನ್ನಡ ಪುಸ್ತಕಗಳನ್ನು ಕಾರ್ಯಕ್ರಮ ನಡೆಸುವವರು ಖರೀದಿಸಬೇಕೆಂಬುದು ಅವರ ಕರಾರಾಗಿತ್ತು. “ನೂರು ರುಪಾಯಿಯ ಪುಸ್ತಕ ಕೊಳ್ಳದ ಕನ್ನಡ ಸಂಘ ಮತ್ತೇನು ಮಾಡೀತು?” ಎಂಬುದು ಅವರ ವಾದ.

ಕಾರ್ಯಕ್ರಮ ಮುಗಿದ ನಂತರ ತಮ್ಮ ಪುಸ್ತಕಗಳನ್ನು ಅಲ್ಲಿಯೇ ಹಸ್ತಾಕ್ಷರಮಾಡಿ ಕೊಟ್ಟರು. ನಾನೂ  ಒಂದು ಪುಸ್ತಕ ಕೊಂಡೆ. ಅದೆಲ್ಲಿಹೋಯಿತೋ ದೇವರೇ ಬಲ್ಲ. ನನಗೆ ಅಷ್ಟು ಪ್ರಿಯವಾದ ಲೇಖಕರೊಬ್ಬರ ಹಸ್ತಾಕ್ಷರವಿದ್ದ ಪುಸ್ತಕ ಕಳೆದುಕೊಂಡ ವ್ಯಥೆ ಬಾಧಿಸುತ್ತದೆ.


ರತ್ನನ ಪದಗಳು ಸಂಗ್ರಹದ ಮೊದಲ ಪದ ಇಲ್ಲಿದೆ. ಪದಗಳನ್ನು ಓದಿಲ್ಲದವರಿಗೆ ಪದಗಳ ರುಚಿತೋರಿಸುವ ಪ್ರಯತ್ನ.

ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ ,
ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ
ನಂಗೆ ಎಸ್ರು ಏಳ್ತಾರೆ ರ್ರ ರ್ರ ರ್ರ ರತ್ನ,
ನಾನಾಡೋ ಪದಗೋಳು ಯೆಂಡದ್ ಪರ್ಯತ್ನ

ಮಾಬಾರ್ತ ಬರೆಯಾಕೆ ಯಾಸಂಗಿನಾಯ್ಕ
ಸಿಕ್ಕಂಗ್ ನಂಗ್ ಸಿಕ್ಕೋನೊಬ್ಬ ಬೇವಾರ್ಸಿನಾಯ್ಕ
ನಾನಾಡಿದ್ ಪದಗೊಳ್ನ ಕೂಡಿಸ್ದ ಬರ್ದು
ಏನೈತೊ ಯಾರಿಗ್ ಗೊತ್ ಔನ್ಗಿರೋ ದರ್ದು

ಬರಕೊಂಡ್ರೆ ಬರಕೊಂಡ್ ಓಗ್ , ನಿಂಗೂನೆ ಐಲು,
ಮಾಡಾನಾ ಆಗಿದ್ದೊಂದ್ ಸಾಯ ನಂಕೈಲು
ಅಂತ್ ಅವ್ನ್ ಬರ್ದಿದ್ನ ಅಚ್ಗಾಕೋಕ್ ಒಪ್ಪಿ
ಕಳಿಸಿವ್ನಿ ಬೈದೀರ ನಂಗೇನ್ರಾ ತಪ್ಪಿ

ಅಕ್ಸಾರ ಗಿಕ್ಸಾರ ನಂಗೇನೂ ಬರ್ದು
ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು
ಪದಗೊಳ್ ಚಂದಾಗಿದ್ರೆ ಯೆಂಡಕ್ ಸಿಪಾರ್ಸಿ
ಚಂದಾಗಿಲ್ದಿದ್ರನಕ ತಪ್ಗೆ ಬೇವಾರ್ಸಿ.

ಇದರ ಬಗ್ಗೆ ನನ್ನದೇ ಆದ ವಿವರಣೆಯೂ ಇದೆ. ಆದರೆ  ನಿಮ್ಮ ಸಹನೆಗೂ ಮಿತಿಯಿರುವುದರಿಂದ ಇಲ್ಲಿಗೆ ಸಾಕು. ರತ್ನನ ಮತ್ತು ರತ್ನನ ಪದಗಳ ಪರಿಚಯ ನನ್ನದೇ ರೀತಿಯಲ್ಲಿ ಮಾಡಿದ್ದೇನೆ. ಓದಿದವರಿಗೆ ಹಿಡಿಸಿದರೆ ಸಾರ್ಥಕವಾಯಿತು.

ಬುಧವಾರ, ಆಗಸ್ಟ್ 23, 2017

ಇಂದಿನ ಮುಂಜಾನೆಯ ಒಂದು ಆಶು ಬರಹ

ನನಗೆ ಪ್ರತಿಮಂಜಾನೆ ವಾಕಿಂಗ್ ಅಭ್ಯಾಸ. ಆ ‘ಅಭ್ಯಾಸ’ ಬರಬರುತ್ತಾ ‘ಚಟ’ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ನಮ್ಮೂರೋ ಪರವೂರೋ, ಚಳಿಯೋ ಮಳೆಯೋ ಲೆಕ್ಕಿಸದೆ ಬೆಳಗಾದಂತೆಯೇ ಹೊರಬೀಳುವುದೇ. ತೊಂದರೆ ಏನೆಂದರೆ, ಬೆಳಕಾಗುವ ಮುಂಚೆ ಹೊರಹೊರಟರೆ ನಾಯಿಕಾಟ. ಬೆಳಕಾದನಂತರ ವಾಹನಗಳಕಾಟ. ಏನುಮಾಡುವುದು? ಎರಡರಲ್ಲೊಂದನ್ನು ಸಹಿಸಿಕೊಳ್ಳಬೇಕು. ಇಂದು ಮುಂಜಾನೆ ನಾಯಿಕಾಟಕ್ಕೆ ತಯಾರಾಗಿ ಕೈಯಲ್ಲೊಂದು ಕೊಲುಹಿಡಿದು, ಐದಕ್ಕೇ ಹೊರಹೊರಟೆ. ಅಮಾವಾಸ್ಯೆಯ ಕತ್ತಲು ಕತ್ತಲು. ಜಿನುಗುತ್ತಿದ್ದ ಮಳೆ. ತಂಪುಹವೆ. ಪರಿಸರ ಆಹ್ಲಾದಕರವಾಗಿತ್ತು.

ಕೊಂಚ ನಡೆದು ಊರಿನ ಹೊರವಲಯಕ್ಕೆ ತಲುಪುವ ಹೊತ್ತಿಗೆ ದೂರದ ಮಸೀದಿಯಿಂದ  ಮುಂಜಾನೆಯ ಪ್ರಾರ್ಥನೆಯ ಕರೆ ಕೇಳತೊಡಗಿತು. ಅದೇಹೊತ್ತಿಗೆ ರಸ್ತೆಪಕ್ಕದಲ್ಲಿ ರಸ್ತೆಕೆಲಸದವರು ಹಾಕಿಕೊಂಡಿದ್ದ ಗುಡಿಸಲುಗಳಿಂದ ಬೆಳಗಿನ  ಉಪಾಹಾರಕ್ಕೋ, ಮಧ್ಯಾಹ್ನದ ಬುತ್ತಿಗೋ, ಹೆಂಗಸರು ರೊಟ್ಟಿ ತಟ್ಟುವ ಶಬ್ದ ಶುರುವಾಯಿತು.

ಕೆಲಕಾಣಿಸುವ ಸಾಲುಗಳು ನನ್ನ ತಪ್ಪಲ್ಲ. ಆ ಪರಿಸರ ಹಾಗೂ ಶಬ್ದಗಳದ್ದು.

ದೂರದ ಮಸೀದಿಯ ಮುಲ್ಲಾನ
ಪ್ರಾರ್ಥನೆಯ ಕರೆಯ ಸಂಗೀತಕ್ಕೆ
ಪಕ್ಕದ  ಜೋಪಡಿಯಲ್ಲಿ ಬುತ್ತಿಗೆ
ರೊಟ್ಟಿತಟ್ಟುತ್ತಿದ್ದ ಹೆಂಗಸಿನ ಕೈಗಳು

ತಾಳಹಾಕುತ್ತಿದ್ದವು

ಮಂಗಳವಾರ, ಆಗಸ್ಟ್ 22, 2017

ಡಿ ವಿ ಜಿ ಮತ್ತು ಅವರ ಕೃತಿಗಳು - ನನ್ನ ಗ್ರಹಿಕೆಗೆ ಸಿಕ್ಕಂತೆ.



“ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ ಹೇ ದೇವಾ
ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ”

ನಾನು ಪ್ರೈಮರಿ ತರಗತಿಯಲ್ಲಿದ್ದಾಗ “ವನಸುಮ” ಎಂಬ ಪದ್ಯದ ಮೂಲಕ ಡಿ ವಿ ಜಿ ಎಂಬ ಮೂರಕ್ಷರದ ಪರಿಚಯ ನನಗಾಯಿತು. ನಾವು ಪದ್ಯವನ್ನು ಬಾಯಿಪಾಠ ಮಾಡಬೇಕಿತ್ತು. ಸರಳವಾದ ಸಾಲುಗಳು ಸುಲಭವಾಗಿ ಬಾಯಿಪಾಠವಾದವು. ಅಷ್ಟೇ ಸುಲಭವಾಗಿ ಪದ್ಯದ ಅರ್ಥವೂ ತಿಳಿಯಿತು. ಆದರೆ ತಮ್ಮ ಕವನದ ಸಾಲುಗಳಲ್ಲಿ ತಾವು ಸೂಚಿಸಿದಂತೆ, ಕಾನನದ ಮಲ್ಲಿಗೆಯಂತೆ ಸೌರಭವ ಸೂಸುತ್ತಾ “ಜಗದ ಪೊಗಳಿಕೆಗೆ ಬಾಯ್ಬಿಡದೆ” ಬಾಳಿದ ಘನತೆ ಕವಿಯದೆಂದು ಅರ್ಥವಾಗಿದ್ದು ಬಹಳ ವರುಷಗಳ ನಂತರ.

ವನಸುಮದ ಪರಿಚಯವಾದ ಆಸುಪಾಸಿನಲ್ಲೇ “ಬೆಕ್ಕೋಜಿ” ಯ ಪರಿಚಯ ವಾಗಿದ್ದು ಕೂಡ. ಬೆಂಗಳೂರಿನ ಕೋಟೆಯ ದ್ವಾರದ ಎದುರಿಗೆ “ಸತ್ಯ ಶೋಧನ ಪುಸ್ತಕ ಭಂಡಾರ” ಎಂಬ ಪುಸ್ತಕದ ಮಳಿಗೆಯೊಂದಿತ್ತು. ನಮ್ಮ ತಂದೆಯವರು ಮೂರುತಿಂಗಳಿಗೋ ಆರುತಿಂಗಳಿಗೋ ಒಮ್ಮೆ ನನ್ನನ್ನು ಅಲ್ಲಿಗೆ ಕರೆದೊಯ್ದು ನಾನು ಆಯ್ದ ಹತ್ತಾರು ಮಕ್ಕಳ ಪುಸ್ತಕಗಳನ್ನು ನನಗೆ ಕೊಡಿಸುತ್ತಿದ್ದರು. ಒಮ್ಮೆ ಹಾಗೆ ಹೋಗಿದ್ದಾಗ “ಏಟೊಂದರಿಂದ ಏಳ್ವರನ್ನು ಕೊಂದ” ಪರಾಕ್ರಮಿ ಬೆಕ್ಕೋಜಿ ಯ ಶೀರ್ಷಿಕೆಯಿಂದ ಆಕರ್ಷಿತನಾಗಿ “ಬೆಕ್ಕೋಜಿ” ಪುಸ್ತಕವನ್ನು   ಕೊಂಡುತಂದು ಓದಿ ಬಹಳ ಸಂತೋಷಪಟ್ಟೆ. ಅರಿಯಬಲ್ಲವರಿಗೆ “ಜೀವನ ಧರ್ಮಯೋಗ” ವನ್ನು ಉಪದೇಶಿಸುವ ಸಮರ್ಥತೆಯನ್ನು ಹೊಂದಿದ್ದ  ಡಿ ವಿ ಜಿ ಯವರ ಲೇಖನಿ ಮಕ್ಕಳ ಮನಮುಟ್ಟುವ “ಬೆಕ್ಕೋಜಿ” ಮತ್ತು “ಇಂದ್ರವಜ್ರ” ಗಳನ್ನೂ ಬರೆಯಬಲ್ಲದಾಗಿತ್ತು.  

ನಂತರದ ಐದಾರು ವರುಷ ಗುಂಡಪ್ಪನವರಿಗೂ ನನಗೂ ಸಂಭಂದವಿರಲಿಲ್ಲ. ನಂತರ ಹೈಸ್ಕೂಲಿನಲ್ಲೋ ಪಿಯುಸಿಯಲ್ಲೋ ಕನ್ನಡ ಪಠ್ಯಪುಸ್ತಕದಲ್ಲಿ ಕಂಡದ್ದು “ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು” ಎಂಬ ಸಾಲು. ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದದ್ದರಿಂದ “ನಾಕನಿಲಯರಿಗರಿದು ನಿನಗೆ ವಿವೇಕ ಎಳ್ಳಿನಿತಿಲ್ಲ”,  “ನೀರೊಳಗಿರ್ದುಮ್ ಬೆಮರ್ದನ್ ಉರಗಪತಾಕಂ” “ಹೊಸನೆತ್ತರುಕ್ಕುಕ್ಕಿ ಆರಿಹೋಗುವಮುನ್ನ ಹರೆಯದೀ ಮಾಂತ್ರಿಕನ ಮಾಟ  ಮಸುಳುವಮುನ್ನ” ಮುಂತಾದ ಮರೆಯಲಾಗದ ಸಾಲುಗಳೊಂದಿಗೆ “ಮಂಕುತಿಮ್ಮ”ನ ಪರಿಚಯದ ಭಾಗ್ಯ ನನಗಾಯಿತು.

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರಿವಿಗೆ ಎಟುಕುವವೊಲು ಒಂದಾತ್ಮನಯವ
ಹವಣಿಸಿದನಿದನು  ಪಾಮರಜನದ ಮಾತಿನಲಿ
ಕವನ ನೆನಪಿಗೆ ಸುಲಭ - ಮಂಕುತಿಮ್ಮ  

ಎಂದು ತಮ್ಮ “ಕನ್ನಡದ ಭಗವದ್ಗೀತೆ”ಯನ್ನು ದೈನ್ಯತೆಯಿಂದ ಪರಿಚಯಿಸಿ, ತಮ್ಮ ಕಗ್ಗವು “ಬಹು ಸಾಮಾನ್ಯರಾದವರ ಮನೆಯ ಬೆಳಕಿಗೆ ತೊಟ್ಟಿನಷ್ಟು ಎಣ್ಣೆಯಾದರೆ ನನಗೆ ತೃಪ್ತಿ” ಎಂದರು ಡಿ ವಿ ಜಿ. ಜತೆಗೇ, ಎಲ್ಲವನ್ನೂ ಒಟ್ಟಿಗೆ ನುಂಗದೆ “ಆಗೊಂದು ಈಗೊಂದು ಪದ್ಯವನ್ನು ಪೆಪ್ಪರಮಿಂಟಿನಂತೆ ಚಪ್ಪರಿಸಿ” ಎಂದೂ ಸಲಹೆ ನೀಡಿದರು.

ಬದುಕಿನ ಜಟಕಾಬಂಡಿಯನ್ನೆಳೆಯುತ್ತಾ, ನಡೆದು ಸಾಕಾಗಿಯೋ , ಭಾರ ಹೆಚ್ಚಾಗಿಯೋ, ಪಯಣಿಗರ ಕಿರಿಕಿರಿಯೋ, ಯಾವುದರಿಂದಲೋ ಕಾಲುಸೋತಾಗ, ಮನಕುಂದಿದಾಗ, ಬಾಯಿಗಿಟ್ಟುಕೊಂಡರೆ, ಬದುಕಿನ ಕಹಿಯನ್ನು ಕಡಿಮೆಯಾಗಿಸಿ, ಚಪ್ಪರಿಸಿದಷ್ಟೂ ಸಿಹಿಯಾಗುತ್ತಾ, ಬದುಕನ್ನು ಮುನ್ನಡೆಸಲು ಮನವನ್ನು ಅನುವಾಗಿಸುವ ಪೆಪ್ಪರಮಿಂಟಿನ ಕರ್ತನಿಗೆ ನಮೋನಮಃ.  

ಮಂಕುತಿಮ್ಮನ ಕಗ್ಗದ ಸವಿಯನ್ನು ಕಂಡುಕೊಂಡು ಅಂಥ ಮಹಾನ್ ಕೃತಿಯನ್ನು ನಮ್ಮ ಕೈಗಿತ್ತ ಮಹಾನುಭಾವನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸಕ್ತಿ ಹುಟ್ಟಿದ ಹೊತ್ತಿಗೆ ನನ್ನ ಕೈಗೆ ಸಿಕ್ಕಿದ್ದು “ಜ್ಞಾಪಕ ಚಿತ್ರಶಾಲೆ - ನೆನಪಿನ ಚಿತ್ರಗಳು”. ಪ್ರತಿಯೊಂದೂ ಐನೂರು ಪುಟಗಳನ್ನು ಹೊಂದಿದ್ದ ಮೂರು ಪುಸ್ತಕಗಳನ್ನು ಓದಿ ಮುಗಿಸಿದಾಗ “ಅಯ್ಯೋ ಮುಗಿದುಹೋಯಿತೇ” ಎನ್ನುವಂಥ ಅನಿಸಿಕೆ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರ ಮುಳಬಾಗಿಲಿನ ಬಾಲ್ಯದ ದಿನಗಳಿಂದ ಪ್ರಾರಂಭವಾಗುವ ಚಿತ್ರಗಳು ನನ್ನನ್ನು ಸಂಪೂರ್ಣವಾಗಿ ಸೆರೆಹಿಡಿದು ಬಿಟ್ಟವು. ಡಿ ವಿ ಜಿ ಯವರ ಬಾಲ್ಯ, ವಿದ್ಯಾಭ್ಯಾಸ , ನೌಕರಿಗಾಗಿ ಪರದಾಟ, ಸಾಹಿತ್ಯಾಭ್ಯಾಸ, ಪತ್ರಿಕೋದ್ಯಮ , ರಾಜಕಾರಣ, ರಸಿಕತೆ ಮುಂತಾದ ಅನೇಕಾನೇಕ ಸಂಗತಿಗಳೊಂದಿಗೆ ಅಂದಿನ ಜನಜೀವನದ ವಿವರಗಳು, ಸಾಮಾಜಿಕ - ರಾಜನೈತಿಕ  ಮೌಲ್ಯಗಳ ವಿವರಗಳು ಎಲ್ಲವೂ ಒಂದಕ್ಕೊಂದು ಪೂರಕವಾಗಿ, ಹಾಸುಹೊಕ್ಕಾಗಿ ಸೇರಿಕೊಂಡಿವೆ ಆ ಚಿತ್ರಗಳಲ್ಲಿ.

ಇನ್ನು ಡಿ ವಿ ಜಿ ಯವರ ಸಮಕಾಲೀನರ, ಸುತ್ತಸುತ್ತಮುತ್ತಲಿನ, ಜನರ ಚಿತ್ರಣ . ಡಿ ವಿ ಜಿ ಯವರ ಸಂಪರ್ಕಹೊಂದಿದ್ದ ಸ್ನೇಹಿತರು, ಸಹೃದಯಿಗಳು, ಮುಖಂಡರು, ಹಿರಿಯರು, ನೂರಾರು  ಜನ. ಪ್ರತಿಯೊಬ್ಬರ ಜೀವನ, ಗುಣ, ಕೆಲಸ ಕಾರ್ಯಗಳ ವಿವರ ಇವರ ನೆನಪಿನಲ್ಲಿ! ಒಳ್ಳೆಯ ಗುಣಗಳು ಯಾರಲ್ಲಿ ಕಂಡರೂ ಗುರುತಿಸಿ ಬರೆದಿಟ್ಟರು. ದಿವಾನ್ ವಿಶೇಶ್ವರಯ್ಯನವರ ಕಾರ್ಯನಿಷ್ಠೆ , ಕಟ್ಟುನಿಟ್ಟು, ಬುದ್ಧಿಮತ್ತೆ, ಮತ್ತಿತರ ಗುಣಗಳು ಡಿ ವಿ ಜಿ ಯವರನ್ನು ಎಷ್ಟು ಆಕರ್ಷಿಸಿದವೋ, ಗಾರೆಕೆಲಸದ ಶಿವ ಪಿಚೈ ಮೊದಲಿಯಾರರ ಕಾರ್ಯಕುಶಲತೆ, ದೈವಭಕ್ತಿ, ಜೀವನಶೈಲಿಯೂ ಅಷ್ಟೇ ಅವರನ್ನು ಆಕರ್ಷಿಸಿತು. ಮೈಸೂರಿನ ಯುವರಾಜರು, ಮಿರ್ಜಾ ಸಾಹೇಬರು, ಗಾಯಕಿ ನಾಗರತ್ನಮ್ಮ, ನತ್ತಿ  ಶಾಸ್ತ್ರಿಗಳು, ಟಿ ಎಸ್ ವೆಂಕಣ್ಣಯ್ಯ, ಯಾರೋ ದಾಸರು, ಜಂಗಮರು ಒಬ್ಬರೇ ಇಬ್ಬರೇ? ನೂರಾರು ಮಂದಿಯ ಒಡನಾಟ. ಒಬ್ಬೊಬ್ಬರಲ್ಲೂ ಒಂದೊಂದು ವಿಶೇಷ . ಡಿ ವಿ ಜಿ ಯವರಿಗೆ ಪ್ರತಿಯೊಬ್ಬರೂ ಸಜ್ಜನರು, ಸ್ನೇಹಪರರು, ರಸಿಕರು. ಅದರಲ್ಲಿ ಅನೇಕರು ಅವರಿಗೆ “ಪ್ರಾತಃ ಸ್ಮರಣೀಯರು”.  

ತಮ್ಮ ಜೀವನದ ಮತ್ತು ಪರಿಚಯದ ವ್ಯಕ್ತಿಗಳ ಪರಿಚಯದೊಂದಿಗೆ, ತಾನೇತಾನಾಗಿ ಮೂಡಿಬಂದಿದೆ ಮುಕ್ಕಾಲು ಶತಮಾನದ ಹಿಂದಿನ ಬೆಂಗಳೂರಿನ ಚಿತ್ರ. ಕೋಟೆ, ಚಾಮರಾಜಪೇಟೆ, ಅವೆನ್ಯೂರಸ್ತೆ, ಚಿಕ್ಕಪೇಟೆ, ಬಳೇಪೇಟೆ, ಮಲ್ಲೇಶ್ವರ, ಬಸವನಗುಡಿಗಳಿಗೆ ಸೀಮಿತವಾಗಿದ್ದ  ಬೆಂಗಳೂರಿನ ವಿವರಣೆಯೊಂದಿಗೆ  ನಮಗೆ ಪರಿಚಿತವಾಗಿರುವ ನರಹರಿರಾಯರಗುಡ್ಡ, ಸಜ್ಜನರಾಯರ ದೇವಸ್ಥಾನ, ಪುಟ್ಟಣ್ಣಶೆಟ್ಟಿ ಟೌನಹಾಲ್ ಇಂತಹ ಸ್ಥಳಗಳ ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕಥೆಗಳು ಹಿತವೆನಿಸುತ್ತವೆ. ನಾನು  ಮತ್ತೆ  ಮತ್ತೆ  ಓದಬಯಸುವ ಕೆಲವು ಪುಸ್ತಕಗಳ ಪೈಕಿ ಮೊದಲನೆಯದು “ಸ್ಮೃತಿ ಚಿತ್ರಗಳು”.
    
ಇಲ್ಲಿಂದ ಮುಂದಿನದು  ಡಿ.ವಿ.ಜಿ ಯವರ ನಾಟಕಗಳು, ವಿಚಾರ ವಿಮರ್ಶೆ, ರಾಜ್ಯಶಾಸ್ತ್ರ, ಕಾವ್ಯ, ಜೀವನ ಧರ್ಮಯೋಗ ಮತ್ತು ಸಂಕೀರ್ಣ. ಇವು ನನಗೆಟುಗುವ ಎತ್ತರಕ್ಕೆ ನಾನಿನ್ನೂ ಬೆಳೆದಿಲ್ಲ. ದೇವರು, ಅಧ್ಯಾತ್ಮಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಆಸಕ್ತಿ ಬಂದಾಗ, ಜೀವನಧರ್ಮಯೋಗ, ಪುರುಷಸೂಕ್ತ, ಈಶೋಪನಿಷತ್ತುಗಳನ್ನು ಓದಲು ಯತ್ನಿಸಿದ್ದೇನೆ. ಜೀವನಧರ್ಮದ ಭೂಮಿಕೆಯಲ್ಲಿ ಡಿ.ವಿ.ಜಿ ಯವರು ಅದರ ವ್ಯಾಸಂಗಕ್ಕೆ ಇರಬೇಕಾದ ಪೂರ್ವ ಸಿಧ್ಧತೆಯನ್ನು ತಿಳಿಸುತ್ತಾರೆ. “ಗೀತೆಯವಿಷಯ ಗಹನವಾದದ್ದು, ಸೂಕ್ಷ್ಮವಾದದ್ದು, ತೊಡಕು ತೊಡಕಾದದ್ದು. ಆತುರ ಇಲ್ಲಿ ಸಲ್ಲದ್ದು. ಮನಸ್ಸಮಾಧಾನ, ಸಾವಧಾನ - ಈ ಎರಡೂ ಗೀತಾಭ್ಯಾಸಕ್ಕೆ ಮೊದಲು ಇರಬೇಕಾದ ಗುಣಗಳು.” ನನಗೆ ಅವೆರಡೂ ಗುಣಗಳೂ ಇನ್ನೂ ಸಿದ್ಧಿಸಿಲ್ಲವೆಂದು  ನನ್ನ ನಂಬಿಕೆ.

ಆದರೆ ಡಿ.ವಿ.ಜಿ ಯವರ ಎತ್ತರವನ್ನು ತಿಳಿದುಕೊಳ್ಳಲು ಅಲ್ಲಲ್ಲಿ ಪುಟಗಳಮೇಲೆ ಕಣ್ಣಾಡಿಸಿದರೆ ಸಾಕು. ಭಗವದ್ಗೀತಾ ತಾತ್ಪರ್ಯದ ವಿವರಣೆ ಹಾಗೂ ಅದರ ಭಾಷೆ, ಅವರ ತತ್ವ ಜ್ಞಾನದ  ಮತ್ತು ಭಾಷಾಪಾಂಡಿತ್ಯದ ಪ್ರೌಢಿಮೆಯನ್ನು ತೋರಿಸಿಕೊಡುತ್ತವೆ.  ಅವರು ಉದಾಹರಿಸಿರುವ ನೂರಾರು ಸಂಸ್ಕೃತ ಶ್ಲೋಕಗಳು ಅವರ ಸಂಸ್ಕೃತ ಪಾಂಡಿತ್ಯದ ವಿಸ್ತಾರವನ್ನು ಕಾಣಿಸುತ್ತವೆ. ಆ ಜ್ಞಾನ ಪರ್ವತವನ್ನು ನಾವು ಹತ್ತುವುದು ಒತ್ತಟ್ಟಿಗಿರಲಿ ದೂರದಿಂದ ಅದರ ಶಿಖರವನ್ನಾದರೂ ಕಂಡರೆ ನಮ್ಮ ಜೀವನ ಸಾರ್ಥಕವಾದೀತು.

ನನ್ನಂಥವನೂ ಸಹ  ಕೊಂಚಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಗುವಂಥ ಸಣ್ಣ ಕೃತಿಗಳು, ದೇವರು, ಈಶೋಪನಿಷತ್ತು, ಮತ್ತು ಪುರುಷಸೂಕ್ತ. ವೇದಾಂತ, ಆಧ್ಯಾತ್ಮ, ತತ್ವ, ಜ್ಞಾನ, ಕರ್ಮಗಳ ಬಗೆಗೆ ನಂಬಿಕೆಯಿಟ್ಟು, ಚಿಂತನೆಮಾಡಿ, ಅವುಗಳ ಪಾಲನೆ ಜೀವನಕ್ಕೆ ಬಹು ಮುಖ್ಯವೆಂದು ಪ್ರತಿಪಾದಿಸುವ ಡಿ ವಿ ಜಿ ಯವರ ಕೊನೆಯಮಾತೇನು ಗೊತ್ತೇ? ? ಈ ಜ್ಞಾನ ತತ್ವಗಳ ಬಗೆಗಿನ ನಂಬಿಕೆ, ಅಭ್ಯಾಸ, ಆಚರಣೆಗಳು ನಮ್ಮನ್ನೊಬ್ಬ ಸತ್ಪ್ರಜೆಯನ್ನಾಗಿಸದಿದ್ದರೆ ಅವೆಲ್ಲ ಅರ್ಥವಿಲ್ಲದ ಆಚರಣೆಗಳು ಮಾತ್ರ ಎಂದು.  ಡಿ.ವಿ.ಜಿ ಯವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುವಂತಹ, ಈ ರೀತಿ ಅರ್ಥಬರುವ ವಾಕ್ಯವನ್ನು ಬಹುಶಃ ಪುರುಷಸೂಕ್ತದ ಮುನ್ನುಡಿಯಲ್ಲಿ ನೋಡಿದ ನೆನಪು. ಡಿ.ವಿ.ಜಿ ಯವರ ಚಿಂತನೆಯಲ್ಲಿ ಮೊದಲ ಸ್ಥಾನ ಪ್ರತಿಯೊಬ್ಬನೂ ತನ್ನ ಸಮಾಜದ ಕಟ್ಟುಪಾಡುಗಳಿಗೆ, ಆಯಾಕಾಲದ ಧರ್ಮ - ಕರ್ಮಗಳಿಗೆ ಬದ್ಧನಾಗಿ, ತನ್ನಿಂದ ಸಮಾಜದ ಸ್ಥಿತಿ ಮತ್ತಷ್ಟು ಉತ್ತಮಗೊಳ್ಳುವ ರೀತಿಯಲ್ಲಿ ಬದುಕಬೇಕೆಂದು.

ತಾವು  ಆ  ರೀತಿ ಬದುಕಿ ಅವರು ನಮಗೆ ಉದಾಹರಣೆಯಾದರು. ನಾವು ಅವರ ಲೇಖನ, ಕಾವ್ಯ, ಕಗ್ಗಗಳನ್ನು ಮೆಚ್ಚಿ ಮಾತನಾಡುತ್ತಾ ನಡವಳಿಕೆಯಲ್ಲಿ ಮಾತ್ರ ಅವರ ಸೂಚನೆಗೆ ವಿರುದ್ಧವಾಗಿ ಸಾಗುತ್ತಿದ್ದೇವೆ. ತಮ್ಮ ಮಾತುಗಳಿಂದ ನಮ್ಮ ಸಮಾಜದ ಬುದ್ಧಿ ಹೆಚ್ಚೇನೂ ಬದಲಾಗದೆಂದೂ ಅವರಿಗೆ ತಿಳಿದಿತ್ತು! ಆದ್ದರಿಂದಲೇ ಅವರು ಹೇಳಿದ್ದು

ಕೃತ್ರಿಮವೊ ಜಗವೆಲ್ಲ ಸತ್ಯತೆಯದೆಲ್ಲಿಹುದೋ ।
ಕತೃವೆನಿಸಿದನೆ ತಾನ್ ಗುಪ್ತನಾಗಿಹನು ।।
ಚತ್ರವೀ ಜಗವಿದರೊಳಾರ ಗುಣವೆಂತಹದೋ ।

ಯಾತ್ರಿಕನೆ ಜಾಗರಿರೊ - ಮಂಕುತಿಮ್ಮ ।। (22)                     

ಶನಿವಾರ, ಆಗಸ್ಟ್ 12, 2017

ರಸ್ತೆ ಬದಿಯ ಗಿಡ

ನಾನು ಕವಿಯೂ ಅಲ್ಲ, ಕೆಳಗೆ ಕಾಣುತ್ತಿರುವುದು ಕವನವೂ ಅಲ್ಲ. ವಿಷಯ ಹೀಗೆ. ನಮ್ಮೂರಿನ ಸಾರ್ವಜನಿಕ ಮೈದಾನದ ಸುತ್ತ ನಾವು ಕೆಲವರು ಸೇರಿ ಅರವತ್ತೆಪ್ಪತ್ತು ಸಸಿನೆಟ್ಟಿದ್ದೆವು. ಆಗೀಗ ಅವಕ್ಕೆ ಪಾತಿ  ಮಾಡಿ, ಕಳೆಕಿತ್ತು, ಗೊಬ್ಬರಹಾಕಿ, ಕಡು ಬೇಸಗೆಯದಿನಗಳಲ್ಲಿ ದೂರದಿಂದ ನೀರುಹೊತ್ತು ತಂದು ಹುಯ್ದೆವು. ದೇಹಕ್ಕೆ ಆಯಾಸವಾದರೂ ಮನಸ್ಸಿಗೆ ಹಿತವೆನಿಸಿತು. ಪ್ರತಿ ಮುಂಜಾನೆ ಅಲ್ಲಿ ವಾಯುವಿಹಾರಕ್ಕೆ ಬರುತ್ತಿದ್ದ ನೂರಾರು ಮಂದಿ ನಮ್ಮನ್ನು ಹುಚ್ಚರೆಂಬಂತೆ ಕಂಡು ಮುಂದೆ ನಡೆದರು.  ಒಂದು ಹದಿನೈದಿಪ್ಪತ್ತು ಜನ ಗಿಡ ಬೆಳಸುವ ಬಗ್ಗೆ ಪುಕ್ಕಟೆ ಸಲಹೆಗಳನ್ನು ನೀಡಿದರು. ನಮ್ಮ ಕೆಲಸದಲ್ಲಿ ಕೈಜೋಡಿಸಿದವರು ಇಬ್ಬರು ಮೂವರು. ಇಂದು ಮುಂಜಾನೆ ಒಂದುಗಿಡದಲ್ಲಿ ಅರಳಿದ್ದ  ಕೆಲವೇ ಹೂಗಳನ್ನು ಕುಯ್ದುಕೊಳ್ಳಲು ಒಬ್ಬಾಕೆ ಮುಂದಾದಾಗ ನಾನು ಹೂ ಕುಯ್ಯಬಾರದೆಂದು ಆಕೆಯನ್ನು ವಿನಂತಿಸಿಕೊಂಡೆ. ಆ ಕ್ಷಣದಲ್ಲಿ ಬದಲಾದ ಆಕೆಯ ಮುಖಭಾವ ಈ ಕೆಳಗಿನ ಬರಹಕ್ಕೆ ಪ್ರೇರಣೆಯಾಯಿತು. ಇದು  ಪದ್ಯವೋ ಗದ್ಯವೋ ಅಸಂಭದ್ಧವೋ ನಿರ್ಧರಿಸುವುದು ಓದಿದವರಿಗೆ ಬಿಟ್ಟದ್ದು.

ರಸ್ತೆ ಬದಿಗೆ ನಾನೊಂದು ಸಸಿ ನೆಟ್ಟೆ
ಮರವಾಗಿ ಜನರಿಗೆ ನೆರಳಾಗಲೆಂದು,
ಹೂವಾಗಿ ಮನಸ್ಸಿಗೆ ಮುದನೀಡಲೆಂದು
ಹಣ್ಣಾಗಿ  ಹೊಟ್ಟೆಗೆ ಹಿತವಾಗಲೆಂದು  

ಓಡಾಡುವ ಜನ ನೋಡುತ್ತಲಿದ್ದರು
ನಾ ಅಗೆದದ್ದು, ನೆಟ್ಟಿದ್ದು, ನೀರೂಡಿದ್ದು

ಗಿಡಕ್ಕೆ ದನ ಬಾಯಿಹಾಕಿತು,
ದನಕ್ಕೆ “ಹೋ” ಎನ್ನದ ಜನ ನನಗೆಂದರು
ನಿಮ್ಮ ಗಿಡ ದನ ತಿಂತಾವೆ ನೋಡ್ರಿ”

ಬಿಸಿಲಿಗೆ ಕೊಂಚ ಬಾಡಿತು ಗಿಡ
ನೋಡಿದವರು ನೀರೆರೆಯಲಿಲ್ಲ,
ನಿಮ್ಮ ಗಿಡ ಒಣಗ ಹತ್ತಿದೆ ನೋಡ್ರಿ”

ಮಳೆ ಗಾಳಿಗೆ ಕೊಂಚ ಬಗ್ಗಿತು ಗಿಡ
ನಿಮ್ಮ ಗಿಡ ಬೀಳ್ತದೆ ನೋಡ್ರಿ  
ಬಾಜೂಕ್ಕೆ ಒಂದು ಬಡಿಗಿ ಕಟ್ರಿ “

ಒಂದೇಒಂದು ಸುಂದರ ಹೂಕಂಡಿತೊಂದು ಮುಂಜಾನೆ
ಹೂ ಕೀಳಲು ಮುಂದಾದ ಒಂದುಕೈಗೆ ನಾನೆಂದೆ
“ಬೇಡಿ ಸ್ವಾಮೀ, ಕಿತ್ತ ಹೂ ನಿಮಗೊಬ್ಬರಿಗೆ ಚಂದ
ಗಿಡದಲ್ಲಿ ನಗುವ ಹೂ ನೂರು ಕಣ್ಗಳಿಗೆ ಅಂದ ”

ಮುಖ ದುಮುಗುಟ್ಟಿತಾದರೂ
ಕೈಹಿಂದಾಯಿತು, ಬಾಯಿಮುಂದಾಯಿತು
ನನ್ನ ಕಿವಿಯನ್ನುದ್ದೇಶಿಸಿ ಪಕ್ಕದವರೊಡನೆಂದರು

“ರಸ್ತೆಪಕ್ಕದ ಗಿಡ, ಇವರು ಯಾರುರೀ ಹೇಳಕ್ಕೆ?
ಇವರಪ್ಪನದೇನ್ರಿ ಗಿಡ?”

ಗುರುವಾರ, ಜುಲೈ 20, 2017

ಏಕಾದಶಿ ಉಪವಾಸ



ಇವತ್ತು ಏಕಾದಶಿ. ಉಪವಾಸಮಾಡಿದರೆ ಪುಣ್ಯಸಂಪಾದನೆ ಯಾಗುತ್ತದಂತೆ. ಸುಮ್ಮನೆ ಉಪವಾಸವಲ್ಲ. ಉಪವಾಸಮಾಡಿ ಭಗವಂತನ ಸ್ಮರಣೆಯಲ್ಲಿ ದಿನ ಕಳೆಯಬೇಕು. ನನಗೂ ವಯಸ್ಸು ಅರುವತ್ತಾಯಿತು. ಇದುವರೆಗೂ ಪುಣ್ಯಗಳಿಸುವಂಥ ಕೆಲಸವೇನೂ ಮಾಡಿದ ನೆನಪಿಲ್ಲ. ಅರವತ್ತೆಂದರೆ ಗೊತ್ತಲ್ಲ? ಒಂದುಕಾಲು ಸಂಸಾರದಾಚೆ ಎಂದರ್ಥ. ಕಾಲು ಆಚೆಹೋದಮೇಲೆ ದೇಹ ಅದರಹಿಂದೆಯೇ ಅಲ್ಲವೇ? ಆದ್ದರಿಂದ ಈಗ ಮುಂದಿನ ಚಿಂತೆ. “ಮುಪ್ಪು ಬಂದಿತಲ್ಲಾ , ಪಾಯಸ ತಪ್ಪದೆ ಉಣಲಿಲ್ಲಾ.  ತುಪ್ಪದಬಿಂದಿಗೆ ತಿಪ್ಪೆ ಮೇಲೆ ಧೊಪ್ಪನೆ ಬಿತ್ತಲ್ಲಾ”  ದಾಸರು ನನ್ನಂಥವರನ್ನು ಕಂಡೇ ಹಾಡಿರಬೇಕು! ದಾಸರು ಒಮ್ಮೊಮ್ಮೆ ಒಗಟಾಗಿ ಹಾಡುತ್ತಾರೆ. ತಿಳಿಯುವುದು ಕಠಿಣ. ಇಲ್ಲಿ ತುಪ್ಪದ ಬಿಂದಿಗೆ ಎನ್ನುವುದು ಈ ದೇಹ. ಪಾಯಸ ಎಂಬುವುದು ಜ್ಞಾನ. ಆ ಪಾಯಸ ಈ ತುಪ್ಪ ಸೇರಬೇಕು. ದೇಹ ಮುಪ್ಪಾಗುವವರೆಗೂ  ಜ್ಞಾನ ಸಂಪಾದನೆಯಾಗದಿದ್ದರೆ, ಈ ದೇಹವೆಂಬ ತುಪ್ಪ ಬರಿಯ ಸಂಸಾರವೆಂಬ ತಿಪ್ಪೆಗೇ ಪ್ರಾಪ್ತಿ. ಇದು ದಾಸರ ಮಾತು.  ಜ್ಞಾನದ ಪಾಯಸ ನನ್ನ ದೇಹವೆಂಬ ತುಪ್ಪದ ಬಿಂದಿಗೆಗೆ ಸೇರೀತೇ? ನನಗೆ ಗೊತ್ತಿರುವುದು ತಟ್ಟೆಗೆ ಬಿದ್ದ ಬೆಲ್ಲದ ಪಾಯಸ ಮಾತ್ರ. ಅದು ಸೇರಿದ್ದು ನನ್ನ  ಹೊಟ್ಟೆ ಎಂಬ  ತಿಪ್ಪೆಗೆ. ಅಷ್ಟೇ.


ಆ ಪಾರಮಾರ್ಥ, ತಪಸ್ಸು, ಜ್ಞಾನ ಇವನ್ನೆಲ್ಲ ಅರಿತು ನಡೆಯುವುದು ನನ್ನನ್ನು ಮೀರಿದ ಕೆಲಸ. ಆದ್ದರಿಂದ ಸುಲಭವಾದ ಏಕಾದಶಿ  ಉಪವಾಸವನ್ನಾದರೂ ಮಾಡಿ ಒಂದಷ್ಟು ಪುಣ್ಯ ಸಂಪಾದಿಸಿಬಿಟ್ಟರೆ ಮುಂದಿನ ಹಾದಿ ಸುಗಮವಾದೀತೆಂಬ ಯೋಚನೆಯಿಂದ ಉಪವಾಸಮಾಡುವ ಮನಸ್ಸು ಮಾಡಿಬಿಟ್ಟೆ. ದಶಕಗಳ ಹಿಂದೆ ಕಾಲೇಜಿನಲ್ಲಿದ್ದಾಗ ಒಮ್ಮೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಇಪ್ಪತ್ತನಾಲ್ಕು ತಾಸು ನಿಜಕ್ಕೂ ಏನೂ  ತಿನ್ನದೇ ಇದ್ದಿದ್ದು ನೆನಪಿತ್ತು. ಅಂದು ಮಾಡಿದ ಉಪವಾಸ ದೇಹಕ್ಕಾಗಲೀ ಮನಸ್ಸಿಗಾಗಲೀ ಏನೂ ತೊಂದರೆಮಾಡಿರಲಿಲ್ಲ. ಆದ್ದರಿಂದ ಒಂದುದಿನದ ಉಪವಾಸ ಎನ್ನುವುದು ಸುಲಭದ ಸಾಧನೆ ಎಂದು ನನ್ನ ನಂಬಿಕೆ.


ದಶಮಿಯ ದಿವಸ ಸಂಜೆ ನನ್ನ ಪತ್ನಿಯಮುಂದೆ “ನಾಳೆ ನಾನು ಉಪವಾಸ” ವೆಂದು ತಿಳಿಸಿ  ತಿಂಡಿಗಾಗಲೀ, ಊಟಕ್ಕಾಗಲೀ ನನ್ನನ್ನು ಲೆಕ್ಕವಿಡಬಾರದೆಂದು ತಿಳಿಸಿದೆ. “ಇದೇನಾಯಿತು ನಿಮಗೆ” ಎಂದು ಆಶ್ಚರ್ಯ ಸೂಚಿಸಿದಳಾದರೂ, ನಾನು ಇಂಥದ್ದೇನಾದರೂ ಮಾಡುವುದು ಹೊಸತಲ್ಲವಾದ್ದರಿಂದ, ಹೆಚ್ಚು ಏನೂ  ಹೇಳದೆ “ಅಯ್ಯೋ ದೋಸೆಗೆ ರುಬ್ಬಿಟ್ಟನಲ್ಲಾ, ಹೋಗಲಿ ಬಿಡಿ ಫಲಾರಾಕ್ಕಾಯಿತು” ಎಂದಳು. ನನ್ನ  ಸ್ವಾಭಿಮಾನಕ್ಕೆ ಧಕ್ಕೆಯಾಯಿತು. “ಮಸಾಲೆ ದೋಸೆ, ಚಪಾತಿ ಸಾಗು, ಇಡ್ಲಿಸಾಂಬಾರ ತಿನ್ನುವ ಉಪವಾಸವಲ್ಲ ನನ್ನದು. ಪೂರ್ತಿ ನಿರಾಹಾರ” ಎಂದು ಘೋಷಿಸಿಬಿಟ್ಟೆ.  ಆಕೆಯ ಕಣ್ಣುಗಳು  ಅಗಲವಾದರೂ ಆಕೆ “ಆಗಲಿ ಬಿಡಿ ಹಾಗೆ ನಿಮಗೆ ಬೇಕಾದರೆ ಹಣ್ಣು ಹಾಲು ಇದೆ” ಎಂದು ಹೇಳಿ ಸುಮ್ಮನಾದಳು.


ನಾನು ಪ್ರತಿದಿನ ಏಳುವುದು ಮುಂಜಾನೆ ಐದು ಐದೂವರೆಗೆ. ಒಂದಷ್ಟು ವ್ಯಾಯಾಮ, ವಾಯುಸೇವನೆ, ಇತ್ಯಾದಿಗಳನ್ನು ನಿವಾರಿಸಿಕೊಂಡು ಸ್ನಾನ ಮುಗಿಸಿ, ದೇವರ ತಲೆಯಮೇಲೊಂದು ಹೂವಿಟ್ಟು ಅಡಿಗೆಮನೆಯಿಂದ ತಿಂಡಿಯ ಸೂಚನೆಯನ್ನು ಎದುರುನೋಡುವ ಹೊತ್ತಿಗೆ ಎಂಟಾಗಿರುತ್ತದೆ. ಅಲ್ಲಿಯವರೆಗೂ ನನಗೆ ಹೊಟ್ಟೆ ಎನ್ನುವುದೊಂದು ಇದೆ ಎಂಬುದು ನನ್ನ ಗಮನಕ್ಕೇ ಬರುವುದಿಲ್ಲ. ಆದರೆ ಏಕಾದಶಿಯದಿವಸ ನಸುಕು ನಾಲ್ಕಕ್ಕೇ ಎಚ್ಚರವಾಯಿತು. ನನ್ನ ದೈನಂದಿನ ಕಾರ್ಯಕ್ರಮಗಳನ್ನೆಲ್ಲಾ  ಮುಗಿಸಿಕೊಂಡು ಸ್ನಾನಕ್ಕೆ ಹೊರಡುವ ಹೊತ್ತಿಗೇ ಹೊಟ್ಟೆ ಕುರುಕುರು ಎನ್ನುತ್ತಿತ್ತು. ಸಮಯ ಇನ್ನೂ ಏಳುಘಂಟೆಯೂ ಇಲ್ಲ. ತಿಂಡಿಗೆ ಇನ್ನೂ ಒಂದುಘಂಟೆಯಾದರೂ ಇದೆ ಎಂದುಕೊಳ್ಳುತ್ತಾ ಬಾಳೆಹಣ್ಣಿನ ಬುಟ್ಟಿಗೆ ಕೈಹಾಕಿದಾಗ ಬಂತು ಏಕಾದಶಿಯ ನೆನಪು. ಧೃಡ ಮನಸ್ಸಿನಿಂದ ಕೈ ಹಿಂದೆ ತೆಗೆದುಕೊಂಡು ಪೇಪರ ಹಿಡಿದು ಕೂಡುವಹೊತ್ತಿಗೆ ನನ್ನ ಪತ್ನಿ ಕೈಯಲ್ಲಿ ತನ್ನ ಕಾಫಿ ಲೋಟ ಹಿಡಿದು ಬಂದಳು.


ನನಗೆ ಬೆಳಗ್ಗೆ ಎದ್ದ  ತಕ್ಷಣ ಚಹಾ ಆಗಲೀ, ಕಾಫಿಯಾಗಲೀ, ಕುಡಿಯುವ ಅಭ್ಯಾಸವಿಲ್ಲ. ಬೇಕೆಂದು ಅನಿಸುವುದೂ ಇಲ್ಲ. ಆದರೆ ಆದಿನ ಅದೇನೋ ಆ ಕಾಫಿಯ ವಾಸನೆ ನನ್ನ ಮೂಗನ್ನಷ್ಟೆ ಅಲ್ಲ ಮನವನ್ನೆಲ್ಲ ಆವರಿಸಿಕೊಂಡು ಪೇಪರಿನಲ್ಲಿ ಓದುತ್ತಿದ್ದುದೇನೂ  ಗ್ರಹಿಕೆಗೇ ಬರದಂತಾಯಿತು. ಈ ಕಾಫಿಯ ವಾಸನೆ ನನ್ನ ಏಕಾದಶಿ ಆಚರಣೆಗೆ ಧಕ್ಕೆ ಎನಿಸಿ ಜಾಗಖಾಲಿಮಾಡಿ ಹೊರಗೆ  ಕುಳಿತು ಓದಲು ಪ್ರಯತ್ನ ಪಟ್ಟೆ. ಆದರೆ ಮನಸ್ಸೆಲ್ಲಾ ಹೊಟ್ಟೆಯಮೇಲೆಯೇ! ಪೇಪರು ಕೈಲಿ ಹಿಡಿದರೆ ಸಾಮಾನ್ಯವಾಗಿ ಅರ್ಧತಾಸು ನಾನು ಅದರಲ್ಲಿ ಮುಳುಗಿಹೋಗುತ್ತೇನೆ. ಆದರೆ ಏಕಾದಶಿಯಂದು, ಪೇಪರಿನಲ್ಲಿ ಏನೂ  ಸ್ವಾರಸ್ಯವೇ ಇಲ್ಲವೆನಿಸಿತು. ಹೊಟ್ಟೆಯೊಂದಿಗೆ ತಲೆಯೂ ಖಾಲಿ ಖಾಲಿ. ಪೇಪರು ಪಕ್ಕಕ್ಕಿಟ್ಟು ಭಗವಂತನ ನಾಮ ಸ್ಮರಣೆಯಾದರೂ ಆಗಲೆಂದು ಪುಸ್ತಕಗಳ ಕಪಾಟಿನಲ್ಲಿ ತಡಕಿ ಶ್ಲೋಕಗಳ ಪುಸ್ತಕ ಕೈಲಿಹಿಡಿದೆ. ‘ರೇಲ್ವೆ ಎಂಜಿನ್ ಹೊತ್ತು ಬರುತ್ತಿದ್ದ ಲಾರಿಗೆ ಜನರಿಂದ ತಡೆ’, ‘ಕ್ಯಾಸಿನೊ ಹಡಗಿಗೆ ಮರಳಿನಿಂದ ತಡೆ’, ‘ಶಶಿಕಲಾಗೆ ಜೈಲಿನಲ್ಲಿ ರಾಜೋಪಚಾರದ ಆರೋಪ’ ಇತ್ಯಾದಿ ಸ್ವಾರಸ್ಯಕರ ಸುದ್ದಿಗಳನ್ನೇ ಲಕ್ಷ್ಯಮಾಡದ ಮಿದುಳಿಗೆ ನಾಮಸ್ಮರಣೆ ಸಾಧ್ಯವಾದೀತೆ? ಅದನ್ನೂ ಕೈಬಿಟ್ಟು ಕುಳಿತೆ. ಹಾಗೂ ಹೀಗೂ ಮನಸ್ಸನ್ನು ಕಾಫಿಯಿಂದ ಬಿಡಿಸಿಕೊಳ್ಳುವ ಹೊತ್ತಿಗೆ ಅಡಿಗೆಮನೆಯಿಂದ ದೋಸೆಯ ಶಬ್ದ, ವಾಸನೆ. ಬೇರೆ ತಿಂಡಿಗಳೆಲ್ಲಾ ಬರಿ ವಾಸನೆಯಿಂದ ಕಾಡಿದರೆ ಈ ದೋಸೆ ಎಂಬುದು ವಾಸನೆಯೊಂದಿಗೆ ಶಬ್ದವನ್ನೂ ಮಾಡಿ ಕಿವಿ, ಮೂಗು ಎರಡೂ ದಾರಿಯ ಮೂಲಕ ಮನಸ್ಸನ್ನು ತುಂಬಿಬಿಡುತ್ತದೆ. ಆಕ್ಷಣದಲ್ಲಿ “ಒಂದು ದೋಸೆ ತಿಂದರೆ  ತಪ್ಪೇನು”  ಎನಿಸಿದರೂ ಬಿಗುಮಾನ ಬಿಡಲಾರದೆ, ಮನದ ಮತ್ತು ಹೊಟ್ಟೆಯ ತಳಮಳ ಸಹಿಸಿಕೊಂಡು ಘಟ್ಟಿ ಮನಸ್ಸಿನಿಂದ ಕೂತೆ.


ಅಂತೂ ದವಾಖಾನೆ ತೆಗೆಯುವವರೆಗೆ ಕಾಲಕಳೆದೆ. ಅಷ್ಟುಹೊತ್ತಿಗೆ ಚಿಕಿತ್ಸೆಗೆಂದು ಒಂದಿಬ್ಬರು ಬಂದುದರಿಂದ ಮನಸ್ಸು, ಉಪವಾಸ - ಹೊಟ್ಟೆ - ದೋಸೆ ಗಳನ್ನು  ಬಿಟ್ಟು ಕೆಲಸದ ಕಡೆಗೆ ತಿರುಗಿತು. ಅದೂ ಇದೂ ಮಾಡುವುದರಲ್ಲಿ ತೊಡಗಿ ಮಧ್ಯಾಹ್ನದವರೆಗೂ ನನ್ನ ಏಕಾದಶಿ ಆಚರಣೆ ನಡೆದುಬಿಟ್ಟಿತು. ಮಧ್ಯಾಹ್ನ ತಾಸೆರಡು ತಾಸು ನಿದ್ರಿಸಿಬಿಟ್ಟರೆ ಸಂಜೆಯವರೆಗೂ ತಳ್ಳಬಹುದೆಂದು ಹೊಟ್ಟೆತುಂಬ ನೀರು ಕುಡಿದು ಮಲಗಿದರೆ, ಒಂದು ನಿಮಿಷವಾದರೂ ಸರಿಯಾಗಿ ನಿದ್ದೆ ಹತ್ತಬೇಡವೇ? ತಲೆಯನ್ನು ಪೂರ್ತಿ ತಿಂಡಿಗಳೇ ಆವರಿಸಿಕೊಂಡು ನಿದ್ರೆಗೆ ಜಾಗವೇ ಸಿಗದಾಯಿತೇನೋ. ಸಂಜೆಯ ಚಾ ಸಮಯದ ಹೊತ್ತಿಗೆ ಪರಿಸ್ಥಿತಿ ಪೂರಾ ಬಿಗಡಾಯಿಸಿ ಬಿಟ್ಟಿತು. ಈಗ ಬರಿಯ ಹೊಟ್ಟೆ, ಮನಸ್ಸು ಮಾತ್ರವಲ್ಲಾ ಪೂರ್ತಿ ನನ್ನ ದೇಹವೇ ನನ್ನ ಏಕಾದಶಿ ನಿಶ್ಚಯದ ವಿರುಧ್ದ ತಿರುಗಿ ನಿಂತುಬಿಟ್ಟಿತು.


ಸಂಜೆ ಆರರ ಹೊತ್ತಿಗೆ ಎದೆ ಬಡಿತ ಜೋರಾಯಿತು, ಕೈಕಾಲುಗಳು ನನ್ನ ಮಾತನ್ನು ಕೇಳದಾದವು, ಯಾರು ನನ್ನನ್ನು ಮಾತನಾಡಿಸಿದರೂ ಸಿಡಿಸಿಡಿ ಉತ್ತರಿಸುವಂತಾಯಿತು. ಆ ಸಮಯದಲ್ಲಿ ಬಂದ ಒಬ್ಬ ನತದೃಷ್ಟನಿಗೆ ಮೇಲ್ದವಡೆಯ ಹಲ್ಲು ಕೀಳಲು ಹೋಗಿ ಕೆಳದವಡೆಗೆ ಇಂಜಕ್ಷನ್ ಚುಚ್ಚುವುದರಲ್ಲಿದ್ದೆ. ನನ್ನ ಸಹಾಯಕರು ಎಚ್ಚರವಾಗಿದ್ದುದರಿಂದ ಆಗಬಹುದಾಗಿದ್ದ ಅಪಘಾತ ತಪ್ಪಿತು. ಇನ್ನೊಂದಿಬ್ಬರು ಬಂದವರು “ಡಾಕ್ಟರು ಏಕೋ ಸರಿಯಿಲ್ಲ” ಎಂದುಕೊಳ್ಳುತ್ತಾ ವಾಪಸು ಹೊರಟರು. ದವಾಖಾನೆ ಮುಚ್ಚಿಬಿಟ್ಟೆ.


ಹೊಟ್ಟೆಯ ತಳಮಳ ಸಹಿಸಲಾರದಾಯಿತು. ಬಿಗುಮಾನಬಿಟ್ಟು, ಕುಡಿಯಲು ಏನನ್ನಾದರೂ ಕೇಳಬೇಕೆನ್ನುವ ಹೊತ್ತಿಗೆ “ಹೀಗೆ ಎಂದೂ ಇಲ್ಲದೆ ಒಮ್ಮೆಗೇ ಪೂರ್ತಿ ನಿರಾಹಾರ ಉಪವಾಸ ಮಾಡಬಾರದಂತೆ, ಒಂದು ಲೋಟ ಹಾಲನ್ನಾದರೂ ಕುಡಿಯಿರಿ” ಎಂದಳು ನನ್ನಾಕೆ. ಎಂಥ ಒಳ್ಳೆಯ ಸಲಹೆ ! “ಎಷ್ಟು ವಿವೇಕಸ್ಥಳು ನನ್ನಾಕೆ “ ಎಂದು ಅಭಿಮಾನವಾಯಿತು. ಆದರೂ ಏನೋ ಉಪಕಾರಮಾಡುವವನಂತೆ “ಒಂದು ಸಣ್ಣ ಲೋಟ ಮಾತ್ರ ಕೊಡು” ಎಂದು ಹಾಲು ಕುಡಿದೆ.


ಮುಂದಿನದೆಲ್ಲಾ ಮಂಗಗಳ ಉಪವಾಸ. “ಬಾಳೆಯ ತೋಟದ ಪಕ್ಕದ ಕಾಡೊಳು” ನೆನಪಿದೆಯೇ?


ಆದರೂ  ನನ್ನ ಏಕಾದಶಿ ಆಚರಣೆ ಪೂರ್ತಿ ಬಿಟ್ಟಿಲ್ಲ. ಬೆಳಿಗ್ಗೆ ಒಂದು ಬಾಳೆಹಣ್ಣು ತಿಂದು, ಲೋಟ ಕಾಫಿ ಕುಡಿದು ಸಂಜೆಯವರೆಗೂ ಹಾಗೂ ಹೀಗೂ ತಳ್ಳಿಬಿಡುತ್ತೇನೆ. ನಂತರ ರಾತ್ರಿ ಹೊಟ್ಟೆಗೆ ಏನಾದರೂ ಇಷ್ಟು ತುಂಬಿಸಿಬಿಟ್ಟರೆ ಮರುಮುಂಜಾನೆಯವರೆಗೂ ನಡೆದುಹೋಗುತ್ತದೆ.


ಆದರೆ ಇದರ ಅರ್ಥ ಏನಾಯಿತೆಂದರೆ, ಏಕಾದಶಿ ಉಪವಾಸ, ದ್ವಾದಶಿ ಪಾರಣೆ ಮಾಡಲು ಹೊರಟವನು (ಏಕಾದಶಿಯ ದಿವಸ ಉಪವಾಸ ಎಷ್ಟು ಮುಖ್ಯವೋ, ದ್ವಾದಶಿಯ ಬೆಳಗಿನ ಪಾರಣೆಯೂ ಅಷ್ಟೇ ಮುಖ್ಯವಂತೆ) ಹೋಗಿ ತಲುಪಿದ್ದು  ರೋಜಾ ಆಚರಣೆ ಮತ್ತು ಇಫ್ತಾರ ಉಪಾಹಾರಕ್ಕೆ! ನಾನೇನು ಮಾಡಲಿ? ನನ್ನಿಂದ ಸಾಧ್ಯವಾದದ್ದನ್ನು ನಾನು ಮಾಡುತ್ತೇನೆ. ಸರಿಯೋ ತಪ್ಪೋ ನಿರ್ಧರಿಸಿ ಪಾಪ ಪುಣ್ಯ ಬಟವಾಡೆ ಮಾಡುವುದು ಅವನಿಗೆ ಬಿಟ್ಟದ್ದು!