ಗುರುವಾರ, ಜನವರಿ 4, 2018

ಅಚ್ಚುಮಾವ


ನಾವು ಶಾಂತಿನಗರದ ನಮ್ಮ ಮನೆಗೆ ಪ್ರವೇಶಮಾಡಿದ್ದು ಸಾವಿರದ ಒಂಭೈನೂರಾ ಅರವತ್ತೆರಡರಲ್ಲಿ.  ನಮ್ಮ ಮನೆಯಮುಂದೆ ಆಗಿನ್ನೂ ಕಚ್ಚಾರಸ್ತೆ. ಹಿಂಭಾಗದಲ್ಲಿ ತೆಂಗಿನತೋಟ, ರಾಗಿಹೊಲ ಮತ್ತು ಹುಲ್ಲುಗಾವಲು. ಬೆಂಗಳೂರಿನಲ್ಲಿ ಜಟಕಾ ಕಾಲ ಮುಗಿದು ಆಟೋರಿಕ್ಷಾದ ಆಧಿಪತ್ಯ ಪ್ರಾರಂಭವಾಗುತ್ತಿದ್ದ ಸಮಯ. ಆದರೆ ಹೊಸಬಡಾವಣೆಯ ನಮ್ಮ ಮನೆಯಮುಂದೆ ವಾಹನ ಸಂಚಾರ ಎಂಬುದೇ ಇರಲಿಲ್ಲವೆನ್ನಬಹುದು. ಮನೆಗೆ ಬರುವವರೆಲ್ಲಾ ಸಾಮಾನ್ಯವಾಗಿ ಕೊಂಚದೂರದ ಬಸ್ ಸ್ಟಾಪ್ನಲ್ಲಿ ಇಳಿದು ನಡೆದುಬರುತ್ತಿದ್ದರು. ಮನೆಯ ಮುಂದೆ ಆಟೋ ಶಬ್ದ ಕೇಳಿದರೆ ಕುತೂಹಲದಿಂದ ಹೊರಗೋಡುತ್ತಿದ್ದೆವು. ಬೂದುಬಣ್ಣದ ಪ್ಯಾಂಟು, ತಿಳಿಬಣ್ಣದ ಷರಟು, ಸೋಡಾಗಾಜಿನ ಕನ್ನಡಕದ ಅಚ್ಚುಮಾವನ ಆಕೃತಿ ರಿಕ್ಷಾದಿಂದ ಇಳಿದರೆ ಮರುಕ್ಷಣ ಮನೆಯೆಲ್ಲಾ ಸಂಭ್ರಮದಿಂದ ತುಂಬಿಹೋಗುತ್ತಿತ್ತು. ಮೈಸೂರಿನಲ್ಲಿ ಅಧ್ಯಾಪಕರಾಗಿದ್ದ ಅಚ್ಚುಮಾವ ಒಂದಲ್ಲ ಒಂದು ಕಾರಣದಿಂದ ತಿಂಗಳಿಗೊಮ್ಮೆಯೋ ಎರಡುಬಾರಿಯೋ ಯೂನಿವರ್ಸಿಟಿ ಕೆಲಸಕ್ಕೋ ಮತ್ಯಾವುದೋ ಸಂಘ ಸಂಸ್ಥೆಗಳ ಕೆಲಸಕ್ಕೋ ಬೆಂಗಳೂರಿಗೆ ಬಂದುಹೋಗುತ್ತಿದ್ದರು. ಹಾಗೆ ಬಂದಾಗಲೆಲ್ಲಾ ಅವರ ಬಿಡಾರ ನಮ್ಮ ( ತಮ್ಮ ತಂಗಿಯ ) ಮನೆಯಲ್ಲಿ  ಅಥವಾ ಜಯನಗರದ ಅವರ ತಮ್ಮನ (ವಿಜಿಮಾವ) ಮನೆಯಲ್ಲಿ. ಎರಡು ಮೂರುದಿನದ ಕೆಲಸದಮೇಲೆ ಬಂದರೆ ಎರಡೂ ಮನೆಗಳಲ್ಲಿ ಒಂದೊಂದು  ದಿನ ಉಳಿಯುತ್ತಿದ್ದುದುಂಟು. 

ಅಣ್ಣಯ್ಯ ಬಂದನೆಂಬ ಸಡಗರದಿಂದ ಅಮ್ಮ ಸಂಧರ್ಭಕ್ಕೆ ತಕ್ಕಂತೆ ಹೆಚ್ಚಿನದೇನಾದರೂ ತಿಂಡಿಗೋ ಅಡಿಗೆಗೋ  ತೊಡಗುತ್ತಿದ್ದರು. ಉಟವೋ ತಿಂಡಿಯೋ ಮುಗಿಸಿ ಮಾವ ತಮ್ಮ ಕೆಲಸಕ್ಕೆ ಹೊರಟರೆ ಅವರು ರಾತ್ರಿ ತಿರುಗಿ ಬರುವುದನ್ನು ನಾವು ಉತ್ಸುಕತೆಯಿಂದ ಎದುರುನೋಡುತ್ತಿರುತ್ತಿದ್ದೆವು.  ಅಪ್ಪ ಮಾವ ಇಬ್ಬರೂ ರಾತ್ರಿ ಮನೆಗೆ ಬಂದನಂತರ ಊಟ ಮುಗಿಸಿ ವಿರಾಮವಾಗಿ ಕೂತು ಏನಾದರೂ ವಿಷಯ ತೆಗೆದು ಮಾತಿಗೆ ತೊಡಗುತ್ತಿದ್ದರು.  ರಾಜಕೀಯವಾಯಿತು, ಸಾಹಿತ್ಯ - ಸಾಹಿತಿಗಳಿಗೆ ಸಂಭಂದಿಸಿದ ವಿಷಯವಾಯಿತು, ಯಾವುದಾದರೂ ಹೊಸ ವಿಜ್ಞಾನದ, ತಂತ್ರಜ್ಞಾನದ ವಿಷಯವಾಯಿತು, ಅದೇನೇ ಇರಲಿ  ವಿಷಯ ಅರ್ಥವಾಗದಿದ್ದರೂ ನಾವು ಯಾವೊದೋ ಮೋಡಿಗೆ ಒಳಗಾದವರಂತೆ ಅವರ ಮುಂದೆ ಕೂತು ಅವರ ಮಾತು ಕೇಳುತ್ತಿದ್ದೆವು. ನಮ್ಮನ್ನು ಮೋಡಿಮಾಡುತ್ತಿದ್ದದ್ದು ಏನೆಂದು ಆಗ ನಮಗೆ ತಿಳಿದಿರಲಿಲ್ಲ.  ನಾನು ಈಗ ಯೋಚಿಸಿದರೆ - ಅಚ್ಚು ಮಾವನ  ಮಾತಿನ ಧಾಟಿ, ಉಚ್ಚಾರ, ತಿಳುವಳಿಕೆಯ ಸ್ಪಷ್ಟತೆ, ಪದಗಳಿಗೆ ಹುಡುಕಾಡಿ ತಡವರಿಸದ ಓಘ, ವಿಷಯದ ಬಗ್ಗೆ ವಿವರವಾಗಿ ತಿಳಿದುಕೊಂಡು ತಮ್ಮ ವಿಚಾರವನ್ನು ಅನುಮಾನ, ಗೊಂದಲಕ್ಕೆಡೆಯಿಲ್ಲದಂತೆ ಸರಳವಾಗಿ ಆದರೆ ನಿಖರವಾಗಿ ಮಂಡಿಸುತ್ತಿದ್ದ  ರೀತಿ, ಎಲ್ಲ ಸೇರಿ ನಮ್ಮನು ಹಿಡಿದಿರಿಸುತ್ತಿತ್ತೆಂದು ಕಾಣುತ್ತದೆ.

ಮಾವನವರ ಮಾತಿನ ಶೈಲಿ, ಅವರು ವಿಚಾರಪೂರ್ಣವಾಗಿ ಮಂಡಿಸುತ್ತಿದ್ದ ವಾದ, ಮಂಡಿಸುತ್ತಿದ್ದ ವಿಷಯದಲ್ಲಿ ಅವರಿಗಿರುತ್ತಿದ್ದ  ಖಚಿತ ನಿಲುವು ಮತ್ತು ಮಾತಿನ ಮಧ್ಯೆ ಬರುತ್ತಿದ್ದ, ಅನೇಕ ವ್ಯಕ್ತಿಗಳಿಗೆ ಸಂಭಂದಿಸಿದ ಕಿರುಗಥೆಗಳು, ಉಪಕಥೆಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿ, ಮತ್ತೆಲ್ಲವನ್ನೂ ಮರೆತು ಅವರ ಮಾತು ಕೇಳುತ್ತಾ ನಿಲ್ಲುವಂತೆ ಮಾಡುತ್ತಿತ್ತು. ಅವರ ಮೊಮ್ಮಗಳು ಶ್ರುತಿ ತನ್ನ ತಾತನ ಬಗ್ಗೆ ಬರೆಯುತ್ತಾ "greatest narrator of anecdotes" ಎಂದಿದ್ದಾಳೆ. ಅದರಲ್ಲಿ ಅನುಮಾನವೇ ಇಲ್ಲ! ಇವೇ ಲಕ್ಷಣಗಳು ಅವರ ಬರವಣಿಗೆಯಲಿದ್ದದ್ದು ಕೂಡ. ಅದರಿಂದಲೇ  ಸಾಮಾನ್ಯವಾಗಿ ಕಷ್ಟವೆನಿಸುವ ವಿಜ್ಞಾನ ಹಾಗು ತಂತ್ರಜ್ಞಾನದ ಲೇಖನಗಳು ಅವರ ಲೇಖನಿಯಿಂದ ಸಾಮಾನ್ಯರಿಗೂ ಸಹ  ಮನದಟ್ಟಾಗುವ ಮತ್ತು ಓದಬೇಕೆನ್ನಿಸುವ ರೀತಿಯಲ್ಲಿ ಹೊರಬೀಳುತ್ತಿದ್ದದ್ದು.

ಅಚ್ಚುಮಾವ ವಾಪಸು ಊರಿಗೆ ಹೊರಟರೆ "ಅಯ್ಯೋ ಹೊರಟೇಬಿಟ್ಟರೇ" ಎನಿಸುತ್ತಿತ್ತು.

ತಮ್ಮ ಮಗಳು ಬೃಂದಾ ಬೆಂಗಳೂರಿನಲ್ಲಿ ಮನೆಮಾಡಿದ ನಂತರ ಮಾವ ನಮ್ಮ ಮನೆಗೆ ಬಂದಿರುವುದು ಕಡಿಮೆಯಾಯಿತಾದರೂ ಆ ಹೊತ್ತಿಗೆ ನಾನೂ ಬೆಂಗಳೂರುಬಿಟ್ಟು ನೌಕರಿಗಾಗಿ ಗೋವಾಕ್ಕೆ ಬಂದುಬಿಟ್ಟಿದ್ದೆ. ನಾನು ಗೋವಾದಲ್ಲಿ ಮನೆಮಾಡಿದ್ದ ಕಣಕೋಣ ಮತ್ತು ಪೋಂಡ ಎರಡೂ ಜಾಗಗಳಿಗೆ ಅಚ್ಚುಮಾವ ಬಂದು ನನ್ನ ಮನೆಯಲ್ಲಿ ಎರಡುದಿನ ಉಳಿದು ಹೋದದ್ದು ನನ್ನ ಸೌಭಾಗ್ಯ. ಕಣಕೋಣಕ್ಕೆ ಬರುವುದು ಆಗ ಸುಲಭವಾಗಿರಲಿಲ್ಲ. ಮೊದಲು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ. ನಂತರ ಬೆಂಗಳೂರಿನಿಂದ ಲೋಂಡಾಕ್ಕೆ ರಾತ್ರಿಪೂರ್ತಿ ರೈಲು ಪ್ರಯಾಣ. ಮರುಬೆಳಗ್ಗೆ ಲೋಂಡಾ ತಲುಪಿ ಅಲ್ಲಿ ಕಾದುಕೂತು ಮಧ್ಯಾಹ್ನ ಒಂದಕ್ಕೆ ಅಲ್ಲಿಗೆ ಬರುತ್ತಿದ್ದ ಮುಂಬೈ - ಗೋವಾ  ರೈಲಿನಲ್ಲಿ ಪ್ರಯಾಣಿಸಿ ಸಂಜೆ ನಾಲ್ಕಕ್ಕೆ ಮಡಗಾಂವ್ ತಲುಪುವುದು.  ಅಲ್ಲಿಂದ ಬಸ್ಸು ಹಿಡಿದು, ಕಿಕ್ಕಿರುತ್ತಿದ್ದ ಬಸ್ಸಿನಲ್ಲಿ ಒಂದೂವರೆಘಂಟೆ ಒದ್ದಾಡಿ  ಸಂಜೆ ಆರಕ್ಕೆ ಕಣಕೋಣ ತಲುಪಬೇಕಾದ್ದು. ನನ್ನ ಮೇಲಿನ ಮಮತೆ, ಅಭಿಮಾನದಿಂದ ಅತ್ತೆ, ಮಾವ ಅಷ್ಟು ಪ್ರಯಾಸಪಟ್ಟು ಅಲ್ಲಿಗೆ  ಬಂದು, ನಲ್ಲಿನೀರು, ಬಚ್ಚಲು, ಪಾಯಖಾನೆಯಿಲ್ಲದ ನನ್ನ ಕೋಣೆಯಲ್ಲಿ ನನ್ನೊಡನೆ ನಾಲ್ಕುದಿನ ಕಳೆದರು. 

ಈಚಿನ ವರುಷಗಳಲ್ಲಿ ಮಾವನವರ ಪ್ರಯಾಣ ಪೂರ್ತಿ ನಿಂತುಹೋಗಿ ಅವರು ಮೈಸೂರು ಬಿಟ್ಟು ಬರುತ್ತಿರಲಿಲ್ಲ. ನನಗೆ ಹೆಣ್ಣುಕೊಟ್ಟ ಮಾವನವರು  ಮೈಸೂರಿನಲ್ಲಿ ನೆಲಸಿದ್ದುದರಿಂದ ನಾನು ವರುಷಕ್ಕೊಮ್ಮೆ ಅಥವಾ ಎರಡುಬಾರಿಯಾದರೂ ಮೈಸೂರಿಗೆ ಹೋಗಿ ಬರುತ್ತಿದ್ದೆ. ಮೈಸೂರಿಗೆ ಹೋದಾಗಲೆಲ್ಲಾ ನಾನು ನಸುಕಿನಲ್ಲೇ ಎದ್ದು ನನ್ನ ವಾಯುಸಂಚಾರ ಮುಗಿಸಿ ಸಮೀಪದಲ್ಲೇ ಇದ್ದ ಅಚ್ಚುಮಾವನವರ ಮನೆಗೆ ಬರುವಹೊತ್ತಿಗೆ ಮಾವ ಬೆಳಗ್ಗೆದ್ದು ನಿತ್ಯಕರ್ಮಗಳನ್ನು ಮುಗಿಸಿ ಕಾಫಿಮಾಡಿ ಮುಂದಿಟ್ಟುಕೊಂಡಿರುತ್ತಿದ್ದರು. ಆ ಸಮಯದಲ್ಲಿ ಅವರೊಡನೆ ಕೂತು ಸರಸ ಸಂಭಾಷಣೆಯಲ್ಲಿ ಕಳೆಯುತ್ತಿದ್ದ ಒಂದು ಒಂದೂ ವರೆಘಂಟೆಗಳ ಸಮಯ ನಾನು ಮತ್ತೆ ಮತ್ತೆ ನೆನಪಿಸಿಕೊಂಡು ಸಂತೋಷಪಡುವಂಥಾದ್ದು.

ಆಗಾಗ ಏನಾದರೂ ಅದು ಇದೂ ಬರೆಯುವುದು ನನ್ನದೊಂದು ಹವ್ಯಾಸ. ನಾನು ಕೆಲಸಕ್ಕೆ ಸೇರಿದ ಹೊಸತರಲ್ಲಿ ದಂತ ವೈದ್ಯಕೀಯದ ವಿಷಯವಾಗಿ "ನಿಮ್ಮ ಹಲ್ಲು" ಎಂಬ ಕಿರುಹೊತ್ತಿಗೆಯೊಂದನ್ನು ಬರೆದೆ. ಅದರ ಮೊದಲ ಅಧ್ಯಾಯ ಬರೆದು ಮಾವನವರಿಗೆ ಕಳಿಸಿ ಅವರ ಅನಿಸಿಕೆ ಏನೆಂದು ತಿಳಿಸಬೇಕಾಗಿ ಕೇಳಿದ್ದೆ. ಅದನ್ನು ಓದಿ ಸಂತೋಷಪಟ್ಟು, ಪ್ರತಿ ವಾಕ್ಯವನ್ನು ಸರಿಯಾಗಿ ತಿದ್ದಿ, ತಾವು ತಿದ್ದಿರುವುದನ್ನು ನೋಡಿಕೊಂಡು ಅದೇರೀತಿ ನಾನು ಪೂರ್ತಿ ಹೊತ್ತಿಗೆಯನ್ನು ಪರಿಶೀಲಿಸಿ ಬರೆದು ಕಳುಹಿಸಬೇಕೆಂದು ಹೇಳಿದರು. ಆ ನನ್ನ ಕಿರುಹೊತ್ತಿಗೆ ಕರ್ಣಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ  ಮೂಲಕ ಪ್ರಕಟಣೆಗೊಂಡಿತು.  ಅದು ಪ್ರಕಟಣೆಯಾದ ಹೊಸತರಲ್ಲಿ ನಾನೊಮ್ಮೆ ಮೈಸೂರಿಗೆ ಹೋಗಿದ್ದೆ. ನಾನು ಮಾವನವರಲ್ಲಿಗೆ ಹೋದಾಗ ಅವರು ತಮ್ಮ ಸ್ನೇಹಿತರು ಕೆಲವರೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ಶ್ರೀ ಪ್ರಭುಶಂಕರ ಮತ್ತಿತರು ಇದ್ದರೆಂದು ನನ್ನ ನೆನಪು. ನಾನು ಒಳಹೊಕ್ಕೊಡನೆ ಮಾವ "ಇವನೇ ನೋಡಿ ನನ್ನ ಸೋದರಳಿಯ. ಪುಸ್ತಕ ಬರೆದು ಬರಹಗಾರ ಎನಿಸಿಕೊಂಡಿದ್ದಾನೆ. ತಮಾಷೆಯಲ್ಲ, ನಿಜವಾಗಲೂ ತುಂಬಾ ಚನ್ನಾಗಿ ಬರೆದಿದ್ದಾನೆ" ಎಂದು ಆ ಖ್ಯಾತನಾಮರ ಎದುರು ನನ್ನ ಪ್ರಶಂಸೆ ಮಾಡಿದರು. ನನ್ನ ಬರವಣಿಗೆಗೆ ದೊರಕಿದ ಪ್ರಶಸ್ತಿ ಅದು.

ಪ್ರೀತಿ, ಪ್ರಶಂಸೆ ಎಲ್ಲ ಅದಕ್ಕೆ ಬಾಧ್ಯರಾಗಿದ್ದರೆ ಮಾತ್ರ. ಸೋದರಳಿಯ ಎಂಬ ಕುರುಡು ಮಮತೆಗಲ್ಲ. ಅವರ ನೆನಪಿನ ಅಲೆಗಳು ಪುಸ್ತಕದ ಒಂದು ಘಟನೆ ನನಗೆ ಬಹಳ ಹಿಡಿಸಿದ್ದರಿಂದ ನಾನು ಅದನ್ನು ಇಂಗ್ಲಿಷಿಗೆ ತರ್ಜುಮೆ ಮಾಡಲು ಆಶಿಸಿ,  ಅದನ್ನು ಬರೆದು ಅಚ್ಚುಮಾವನವರಿಗೆ  ಒಪ್ಪಿಸಿದೆ.  ಅದರ ಮೇಲೆ ಕಣ್ಣಾಡಿಸಿ, ಕಟುವಾಗಿ, "ಇದು ನಾನು ಬರೆದ ಲೇಖನದ ತರ್ಜುಮೆ ಅಲ್ಲವೇ ಅಲ್ಲ. ನಿನ್ನ ಮನಸ್ಸಿಗೆ ಏನುಬಂತೋ ಅದನ್ನು ಬರೆದುಕೊಂಡಿದ್ದೀ" ಎಂದುಬಿಟ್ಟರು. ಮತ್ತೊಮ್ಮೆ ಬರೆದು ತೋರಿಸುವ ಧೈರ್ಯ ಬರಲಿಲ್ಲ. ಶ್ರೀ ರಾಜರತ್ನಂ ಅವರ ಬರವಣಿಗೆಯ ಕಸರತ್ತಿನಲ್ಲಿ ಪಳಗಿದ್ದ ಮಾವ ಬರವಣಿಗೆಯ ಅಚ್ಚುಕಟ್ಟಿನ ವಿಷಯದಲ್ಲಿ ನಿಷ್ಠುರ ಎನಿಸುವಷ್ಟು ಕಟ್ಟುನಿಟ್ಟಾಗಿದ್ದರು. ಅಂಥ ಮನೋಭಾವನೆಯ ಫಲವೇ ಅವರ "ಬರವಣಿಗೆಯ ವ್ಯಾಧಿಗಳು" ಲೇಖನ.

ಕೊನೆಯಬಾರಿ ನಾನು ಅಚ್ಚುಮಾವನವರನ್ನು ನೋಡಿದ್ದು ಆರುತಿಂಗಳ ಹಿಂದೆ. ವಯೋಸಹಜವಾದ ತೊಂದರೆಗಳಿಂದ ಬಾಧಿತರಾಗಿದ್ದರೂ ಸಹ ಮುಖದಮೇಲಿನ ಕಿರುನಗೆ ಕೊರಗಿರಲಿಲ್ಲ. ಬರಹ ಒಂದೆರಡು ವರುಷಗಳಿಂದ ನಿಂತುಹೋಗಿದ್ದಿರಬೇಕು. ಆದರೆ ಓದುವುದು ಮಾತ್ರ ನಿಲ್ಲುವಂತಿರಲಿಲ್ಲ. ಕೈಯಲ್ಲೊಂದು ಪುಸ್ತಕ ಯಾವಾಗಲೂ ಇದ್ದಿರಲೇಬೇಕು. ನನ್ನನ್ನು ಕಂಡಾಗಲೆಲ್ಲಾ,  ಐವತ್ತಾರನೇ ಇಸವಿಯಲ್ಲಿ ನನ್ನ ಜನನವಾದಾಗ  ತಮಗೆ ಬೆಂಗಳೂರಿನಿಂದ ಶಿವಮೊಗ್ಗೆಗೆ ವರ್ಗ ವಾದದ್ದನ್ನು ನೆನಪಿಸಿಕೊಂಡು ಆ ಬಗ್ಗೆ  ಹೇಳುತ್ತಿದ್ದರು. ಮೊನ್ನೆ ಜೂನ್ ತಿಂಗಳಲ್ಲಿ  ಭೇಟಿಯಾದಾಗಲೂ ಅದನ್ನು ಹೇಳಿ ಕೊಂಚಹೊತ್ತಿಗೆ ಕಣ್ಣೆವೆ ಮುಚ್ಚಿ ನಿದ್ದೆಗೆ ಜಾರಿದರು. ಈಗ ನಮ್ಮ ನಡುವಿನಿಂದಲೇ ಜಾರಿ ನಮಗೆ ಇನ್ನಿಲ್ಲವಾದರು.

ನನ್ನ ತಾಯಿಯ ಅಣ್ಣ ಅಕ್ಕಂದಿರ ಪೈಕಿ ಹಿರಿಯ ಜೀವವೊಂದು ನಮ್ಮ ಮತ್ತು ಆ ಹಿಂದಿನ ತಲೆಮಾರಿನ ತಂತಾಗಿ ಉಳಿದಿದ್ದು ಈಗ ಇಲ್ಲವಾಗಿದೆ. ನಾನು ಕಂಡಂತೆ ಅವರ ತಲೆಮಾರಿನಲ್ಲಿ, ಅದರಲ್ಲೂ ಆ ಸಹೋದರ ಸಹೋದರಿಯರೆಲ್ಲರಲ್ಲೂ  ಸಹಜವಾಗಿದ್ದ ಗುಣಗಳು - ಸ್ಥಿರವಾದ ಮನಸ್ಥಿತಿ, ಸೌಜನ್ಯಯುಕ್ತ ಸಂಭಾವಿತ ನಡವಳಿಕೆ, ಚುರುಕು ಬುದ್ಧಿ ಮತ್ತು ಎಲ್ಲರೀತಿಯಲ್ಲೂ ಅಚ್ಚುಕಟ್ಟಾದ ಜೀವನ. ಈ ಗುಣಗಳ ಒಂದಂಶವಾದರೂ ನಮಗೆ ಹಾದುಬಂದಿದ್ದರೆ ನಾವು ಧನ್ಯರು.

ತಮ್ಮ ಜೀವನದ ಬಹುಭಾಗವನ್ನು ಬರವಣಿಗೆಗೆ, ಅದರಲ್ಲೂ ಕನ್ನಡದ ಬರಹಕ್ಕೆ ಮುಡಿಪಿಟ್ಟಿದ್ದ ಮಾವನ ನೆನಪಿಗೆಂದು ಬರಹವೊಂದನ್ನು ಬರೆದಿಡುವುದು ಸಮಂಜಸವಾದ ಶ್ರದ್ಧಾಂಜಲಿ ಎಂದು ಅನ್ನಿಸಿದ್ದರಿಂದ ನಾಲ್ಕುಸಾಲು ಬರೆದೆ. ಸೋದರಳಿಯನಾಗಿ ನಾನು ಅಚ್ಚುಮಾವನನ್ನು ಕಂಡಿದ್ದರಲ್ಲಿ ಎಷ್ಟನ್ನು ಬರಹಕ್ಕೆ ತಂದಿಡಲು ನನಗೆ ಸಾಧ್ಯವಾಯಿತೋ ಅಷ್ಟನ್ನು ಇಲ್ಲಿ ತಂದಿಡುವ ಪ್ರಯತ್ನ ಮಾಡಿದ್ದೇನೆ. ಒಂದು ಸಣ್ಣ ಚೌಕಟ್ಟಿನೊಳಗೆ ಸಂಪೂರ್ಣವಾಗಿ ಅವರ ವ್ಯಕ್ತಿತ್ವವನ್ನು ಚಿತ್ರಿಸುವುದು ನನ್ನಿಂದ ಸಾಧ್ಯವಾಗದ ವಿಷಯ. ಈ ನನ್ನ ಬರಹದಲ್ಲಿ ಬರವಣಿಗೆಯ ವ್ಯಾಧಿಗಳು ಯಾವುದೂ ಕಂಡುಬರದಿದ್ದರೆ ನಾನು ಅವರ ಸೋದರಳಿಯನೆಂದು ಹೇಳಿಕೊಳ್ಳಲು ಅರ್ಹನೆಂದುಕೊಳ್ಳಬಹುದು!