ಗುರುವಾರ, ಅಕ್ಟೋಬರ್ 25, 2018

ಮುಳ್ಳುಕೊನೆಯಮೇಲೆ ಮೂರು ಕೆರೆಯಕಟ್ಟಿ ......


ಮುಳ್ಳುಕೊನೆಯಮೇಲೆ ಮೂರು ಕೆರೆಯಕಟ್ಟಿ ಎರಡುತುಂಬದು  ಒಂದು  ತುಂಬಲೇ ಇಲ್ಲ. 
ತುಂಬಲಿಲ್ಲದಕೆರೆಗೆ ಬಂದರು ಮೂವರು ಒಡ್ಡರು - ಇಬ್ಬರು ಕುಂಟರು ಒಬ್ಬನಿಗೆ ಕಾಲೇ ಇಲ್ಲ. 
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ - ಎರಡುಬರಡು, ಒಂದಕ್ಕೆ ಕರುವೇ ಇಲ್ಲ. 
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರುಹೊನ್ನುಗಳ - ಎರಡು ಸವಕಲು, ಒಂದು ಸಲ್ಲಲೇ ಇಲ್ಲ. 
ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು - ಇಬ್ಬರು ಕುರುಡರು. ಒಬ್ಬನಿಗೆ ಕಣ್ಣೇ ಇಲ್ಲ. 
ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ - ಎರಡು ಹಾಳು, ಒಂದಕ್ಕೆ ಒಕ್ಕಲೇ ಇಲ್ಲ. 
ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು  - ಇಬ್ಬರು ಚೊಂಚರು ಒಬ್ಬನಿಗೆ ಕೈಯೇ ಇಲ್ಲ. 
ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ, ಎರಡು ಒಡಕು ಒಂದಕೆ ಬುಡವೇ ಇಲ್ಲ. 
ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಎರಡು ಬೇಯದು ಒಂದು ಬೇಯಲೇ ಇಲ್ಲ. 
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು - ಇಬ್ಬರು  ಉಣ್ಣರು, ಒಬ್ಬನಿಗೆ ಹಸಿವೇ  ಇಲ್ಲ. 
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ - ಎರಡು ತಾಗದು ಒಂದು ತಾಗಲೇ ಇಲ್ಲ. 
ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠಲ 


ಪುರಂದರದಾಸರ ಈ ಪದ್ಯ  ಬಹಳ ಅರ್ಥಪೂರ್ಣವಾಗಿದ್ದು, ಭಕ್ತಿ, ಅಧ್ಯಾತ್ಮ ತತ್ವಗಳ ಸಾರವನ್ನು ತಿಳಿಸಿಕೊಡುತ್ತದೆ ಎಂದು   ಪಂಡಿತರ ಅಭಿಪ್ರಾಯ. ಅನೇಕರು ಈ ಪದ್ಯವನ್ನು ವಿಶ್ಲೇಷಿಸಿ, ಅರ್ಥ ತಿಳಿಸಿದ್ದಾರೆ.
ಬೀದಿ ಬೀದಿ  ಸುತ್ತಾಡಿಕೊಂಡು ತಮ್ಮ ಪದ್ಯಗಳನ್ನು ಹಾಡುತ್ತಾ ಅದರ ಮೂಲಕ ಜನರಿಗೆ ಭಕ್ತಿಮಾರ್ಗ ತೋರಿಸುವುದು  ದಾಸರ ಉದ್ದೇಶ್ಯವಾಗಿದ್ದರಿಂದ, ಪದ್ಯಗಳಲ್ಲಿ  ಜನರನ್ನು ಆಕರ್ಷಿಸುವಂಥ ಪದಗಳು ಮತ್ತು ಅವುಗಳ ಜೋಡಣೆ ಮುಖ್ಯವಾಗಿತ್ತು.  ಈ "ಮುಳ್ಳು ಕೊನೆ" ಯಂಥ ಅನೇಕ ಪದ್ಯಗಳು  ಅಂಥ ರಚನೆಯಿಂದ ಜನರ ಮನಸೆಳೆಯುವಂಥವು. ಒಮ್ಮೆ ಮನಸ್ಸಿಗೆ ತಾಗಿದರೆ ನಂತರ ಅರ್ಥ ತಿಳಿಯುವ ಕುತೂಹಲ ಮೂಡುತ್ತದೆ.  ಅರ್ಥವಿವರಣೆಯೊಂದಿಗೆ ಉಪದೇಶ.
ಕೆಲವು ಬಾರಿ ಪದಗಳ  ಜೋಡಣೆ, ವ್ಯಾಕರಣ, ಹೆಚ್ಚುಕಮ್ಮಿಯಾಗಿರಬಹುದು. ಅದನ್ನು ಅವಗಾಣಿಸಿ ಪದಗಳ ಭಾವ, ಉಪದೇಶ ತಿಳಿಯುವುದು ಅಗತ್ಯ.
ಮನುಷ್ಯನ ಮೋಕ್ಷಸಾಧನೆಗೆ ಇರುವ ಸಾಧಕ ಬಾಧಕಗಳನ್ನು ದಾಸರು ಮೇಲಿನ ಪದ್ಯದಲ್ಲಿ ತಿಳಿಸಿದ್ದಾರೆ. ಅಲ್ಲಿ ಇಲ್ಲಿ ಓದಿ ತಿಳಿದುಕೊಂಡ ಅರ್ಥವನ್ನು ನನ್ನ ಮಾತಿನಲ್ಲಿ ನಾನು ಬರೆದಿದ್ದೇನೆ.


ಮುಳ್ಳು ಕೊನೆಯಮೇಲೆ  ಮೂರು ಕೆರೆಯಕಟ್ಟಿ ಎರಡುತುಂಬದು  ಒಂದು  ತುಂಬಲೇ ಇಲ್ಲ. 

"ಮುಳ್ಳು ಕೊನೆ" ಎಂಬುದು ಜೀವ. ನಮ್ಮ ಪುರಾಣಗಳ ಪ್ರಕಾರ "ಜೀವ" ದ ಗಾತ್ರ, ಕುದುರೆಯ ಬಾಲದ ಒಂದು ಕೂದಲಿನ ತುದಿಯನ್ನು ನೂರುಭಾಗಗಳಾಗಿ ಛೇದಿಸಿ, ಅದರಲ್ಲೊಂದೊಂದನ್ನೂ ಮತ್ತೆ ಸಾವಿರ ಭಾಗ ಮಾಡಿದರೆ ಎಷ್ಟಾಗುತ್ತದೋ ಅಷ್ಟು. ಆಡುಮಾತಿನಲ್ಲಿ, ಅದನ್ನು  ಮುಳ್ಳು ಕೊನೆಯಷ್ಟು ಎಂದು ಹೇಳಲಾಗಿದೆ. ಆ ನಮ್ಮ ಜೀವವೆಂಬ ಮುಳ್ಳು ಕೊನೆಯಮೇಲೆ  ಅನಿರುದ್ಧ ದೇಹ, ಲಿಂಗದೇಹ ಮತ್ತು ಸ್ಥೂಲದೇಹ ಎಂಬ ಮೂರುದೇಹಗಳು ಇವೆ.  ಅವನ್ನೇ  "ಮೂರುಕೆರೆಯ ಕಟ್ಟಿ" ಎಂದಿರುವುದು.  ಆ ಮೂರರಲ್ಲಿ ಮೊದಲೆರಡು ದೇಹಗಳು ಸೂಕ್ಷ್ಮದೇಹಗಳು. ನಮ್ಮ ಅವಗಾಹನೆಗೆ ಬಾರದವು. (ಅವಕ್ಕೆ ಸಂಭಂದಿಸಿದ ವಿವರಗಳು ಲಭ್ಯವಿವೆ. ಆಸಕ್ತಿಯುಳ್ಳವರು ತಿಳಿದುಕೊಳ್ಳಬಹುದು)  ಅವು  ಮೋಕ್ಷಸಾಧನೆಯ ಕಾರ್ಯಮಾಡಿ ಫಲವನ್ನು ತುಂಬಿಸಿಕೊಳ್ಳಲಾರವು.  ಆದ್ದರಿಂದ "ಎರಡು ತುಂಬದು". ಸ್ಥೂಲದೇಹದಿಂದ, ಅಂದರೆ ನಮಗೆ ತಿಳಿಯಬರುವ, ನಾವು ಹೊಂದಿರುವ ದೇಹದಿಂದ, ಸಾಧನೆಮಾಡ ಬಹುದಿತ್ತು. ಆದರೆ ಈ ದೇಹ ಅದನ್ನು ಮಾಡಲಿಲ್ಲ. ಆದ್ದರಿಂದ "ಒಂದು ತುಂಬಲೇಇಲ್ಲ".

ತುಂಬಲಿಲ್ಲದಕೆರೆಗೆ ಬಂದರು ಮೂವರು ಒಡ್ಡರು - ಇಬ್ಬರು ಕುಂಟರು ಒಬ್ಬನಿಗೆ ಕಾಲೇ ಇಲ್ಲ. 

ಆ ಸ್ಥೂಲದೇಹಕ್ಕೆ ಮೂರು  ಸ್ಥಿತಿಗಳು ಬರುತ್ತವೆ - "ಮೂವರು ಒಡ್ಡರು" - ಬಾಲ್ಯ, ಯೌವನ. ವೃದ್ಧಾಪ್ಯಗಳು.  ಬಾಲ್ಯ, ವೃದ್ಧಾಪ್ಯಗಳು, ಬುದ್ಧಿಬಲ ಅಥವಾ ದೇಹಬಲದ ಕೊರತೆಗಳಿಂದಾಗಿ ಸಾಧನೆಯ ಮಾರ್ಗದಲ್ಲಿ ನಡೆಯಲು ಸಾಧ್ಯವಿಲ್ಲದವು. ಆದ್ದರಿಂದ ಅವು "ಕುಂಟು". ಹಾಗಾಗಿ "ಇಬ್ಬರು ಕುಂಟರು". ಯೌವ್ವನದಲ್ಲಿ ಸಾಧನೆಯ ಮಾರ್ಗವನ್ನನುಸರಿಸಲು ಸಾಧ್ಯವಿತ್ತು. ಆದರೆ ಈ ಜೀವ ಅದನ್ನು ಅನುಸರಿಸಲಿಲ್ಲ. ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಿದ್ದರೂ ನಡೆಯಲಿಲ್ಲ. ಹಾಗಾಗಿ ಕಾಲಿದ್ದೂ ಇಲ್ಲದಂತಾಯಿತು. ಅದಕ್ಕೇ "ಒಬ್ಬನಿಗೆ ಕಾಲೇ ಇಲ್ಲ."

ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ - ಎರಡುಬರಡು, ಒಂದಕ್ಕೆ ಕರುವೇ ಇಲ್ಲ. 

ಯೌವ್ವನಾವಸ್ಥೆಯಲ್ಲಿದ್ದ ದೇಹಕ್ಕೆ ಅದನ್ನು ಮೋಹದಲ್ಲಿ  ಸಿಲುಕಿಸುವ ಮೂರು ಸಾಧನಗಳು ಒದಗಿಕೊಂಡವು. ಈಶಣ ತ್ರಯಗಳೆಂದು ಅವಕ್ಕೆ ಹೆಸರು.  ಸತಿ, ಸುತ, ಸಂಪತ್ತು.  ಅವನ್ನು "ಮೂರು ಎಮ್ಮೆಗಳು" ಎಂದರು.  (ದೇಹ ಹೆಣ್ಣಾಗಿದ್ದರೆ ಪತಿ, ಸುತ, ಸಂಪತ್ತು ಎಂದುಕೊಳ್ಳಲು ಅಡ್ಡಿಯಿಲ್ಲ. ಇದು ನನ್ನ ವಾಕ್ಯ. ದಾಸರು ಒಪ್ಪುತ್ತಾರೋ ಇಲ್ಲವೋ ತಿಳಿಯದು.) ಅವುಗಳಲ್ಲಿ ಪತಿ/ಸತಿ, ಸುತರು ಮೋಕ್ಷಸಾಧನೆಗೆ ಅಡ್ಡಿಯೆಂದು ಎಲ್ಲ ವ್ಯಾಖ್ಯಾನಕಾರರ ಮತ. ನನಗೆ ಪೂರ್ಣ ಒಪ್ಪಿಗೆಯಿಲ್ಲ. ಅಥವಾ ತಿಳಿದಿಲ್ಲ. ಇರಲಿ. ಒಟ್ಟಿನಲ್ಲಿ ಅವೆರಡೂ ಮೋಕ್ಷಪಥಕ್ಕೆ ಅಡ್ಡಿ ಅಥವಾ ಉಪಯೋಗಕ್ಕೆ ಬಾರವು  ಎಂಬ ಭಾವನೆ.  ಆದ್ದರಿಂದ "ಎರಡು ಬರಡು". ಮೂರನೆಯದಾದ ಸಂಪತ್ತನ್ನು ಸದ್ವಿನಿಯೋಗಮಾಡಿ ಪುಣ್ಯ ಸಂಪಾದಿಸಬಹುದಿತ್ತು. ಆದರೆ ಸಂಪತ್ತು ಇದ್ದೂ ಸದ್ವಿನಿಯೋಗವಾಗಲಿಲ್ಲ. ಸತ್ಫಲ ನೀಡದ  ಸಂಪತ್ತು, ಹಾಲು ಕೊಡದ ಎಮ್ಮೆಯಂತೆ. ಕರುವಿಲ್ಲದ ಎಮ್ಮೆ ಹಾಲುಕೊಡಲಾರದು. ಆದ್ದರಿಂದ "ಒಂದಕ್ಕೆ ಕರುವೇ ಇಲ್ಲ".


ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರುಹೊನ್ನುಗಳ - ಎರಡು ಸವಕಲು, ಒಂದು ಸಲ್ಲಲೇ ಇಲ್ಲ. 

ಸಂಪತ್ತನ್ನು ಉಪಯೋಗಿಸುವ ರೀತಿಗಳು ಮೂರಿದ್ದವು. "ಮೂರು  ಹೊನ್ನುಗಳು". ಸತ್ ಕರ್ಮ ಅಥವಾ ಸದುಪಯೋಗಗೊಳಿಸುವುದು, ದುಷ್ ಕರ್ಮ ಅಥವಾ ವೃಥಾ ವ್ಯಯಿಸುವುದು. ಮೂರನೆಯದು, ಸುಮ್ಮನೆ ಕೂಡಿಡುವುದು.  ದುರ್ವ್ಯಯವಾದ  ಅಥವಾ ಸುಮ್ಮನೆ ಕೂಡಿಟ್ಟ ಧನ ಮೋಕ್ಷದೆಡೆಗೆ ಒಯ್ಯಲಾರದು. ಅವುಗಳಿಂದ ಏನೂ ದೊರಕದು. ಸವಕಲು ನಾಣ್ಯದಂತೆ. ಹಾಗಾಗಿ "ಎರಡು ಸವಕಲು".  ಧನ ಸದ್ವಿನಿಯೋಗ ವಾಗಿದ್ದಿದ್ದರೆ ಮೋಕ್ಷಸಾಧನೆಗೆ ಸಲ್ಲುತ್ತಿತ್ತು. ಆದರೆ ಆಗಲಿಲ್ಲ. ಅದರಿಂದ "ಒಂದು ಸಲ್ಲಲೇ ಇಲ್ಲ".


ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು - ಇಬ್ಬರು ಕುರುಡರು. ಒಬ್ಬನಿಗೆ ಕಣ್ಣೇ ಇಲ್ಲ. 

ಸಂಚಿತ, ಆಗಾಮಿ ಮತ್ತು ಪ್ರಾರಬ್ಧಕರ್ಮ ಫಲಗಳು ಗಳು, ಜೀವ, ತನ್ನ ಜನ್ಮಗಳಲ್ಲಿ ಮಾಡಿದ ಕರ್ಮಗಳಿಗೆ ಕನ್ನಡಿ ಇದ್ದಂತೆ. ಜನ್ಮಾಂತರಗಳಲ್ಲಿ ಮಾಡಿದ ಎಲ್ಲ ಕಾರ್ಯಗಳ ಫಲ ಅವುಗಳಮೂಲಕ ಪ್ರಚುರವಾಗುತ್ತದೆ.  ಅವುಗಳನ್ನು ಅನುಭವಿಸಬೇಕಾದ್ದು/ನೋಡಬೇಕಾದ್ದು ಜೀವನೇ ಆದರೂ ಆ ಕರ್ಮಗಳನ್ನೇ "ಮೂವರು ನೋಟಗಾರರು" ಎಂದರು. ಹಿಂದೆ ಮಾಡಿದ ಕರ್ಮಗಳ ಫಲವನ್ನು ಕಂಡು ಎಚ್ಚೆತ್ತುಕೊಳ್ಳಬೇಕೆಂಬ ಭಾವನೆ.  ಸಂಚಿತ, ಆಗಾಮಿ ಕರ್ಮಗಳು ಜೀವದ ಅವಗಾಹನೆಗೆ ಬಾರದವು. ಜೀವ ಅವನ್ನು ಕಾಣಲು ಸಾಧ್ಯವಿಲ್ಲ. ಆದ್ದರಿಂದ "ಇಬ್ಬರು ಕುರುಡರು". ಪ್ರಾರಬ್ಧ ಕರ್ಮದ ಫಲಗಳು ಜೀವನಿಗೆ ಕಾಣಸಿಗುವವು. ಅದನ್ನು ಕಂಡು ಎಚ್ಛೆತ್ತುಕೊಳ್ಳುವ ಕಣ್ಣಿದ್ದರೆ ಎಚ್ಚರಗೊಂಡು, ಜೀವನು ಸಾಗುತ್ತಿರುವ ಪಥ  ಬದಲಾಯಿಸಿಕೊಳ್ಳಬಹುದು.  ಅದನ್ನು ಕಂಡೂ  ಎಚ್ಚರಗೊಳ್ಳದಿದ್ದರೆ ಕಣ್ಣಿದ್ದೂ ಇಲ್ಲದಂತೆ. ಆದ್ದರಿಂದ "ಒಬ್ಬನಿಗೆ ಕಣ್ಣೇ ಇಲ್ಲ."


ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು ಊರುಗಳ - ಎರಡು ಹಾಳು, ಒಂದಕ್ಕೆ ಒಕ್ಕಲೇ ಇಲ್ಲ. 

ಒಂದು ಜೀವಕ್ಕೆ ಲಭ್ಯವಿರುವ ಗುಣಗಳು ಮೂರು. ಅವು ಸತ್ವ, ರಜ, ತಮೋ ಗುಣಗಳು. ಕಣ್ಣಿಲ್ಲದ ನೋಟಗಾರನಿಗೆ ಸಿಕ್ಕ "ಮೂರು  ಊರುಗಳು".  ಆ ಮೂರರಲ್ಲಿ  ತಮೋ, ರಜೋ ಗುಣಗಳು ಸತ್ಫಲ ನೀಡಲಾರವು . ಆದ್ದರಿಂದ "ಎರಡು ಹಾಳು". ಸತ್ವ ಗುಣದ ಮೂಲಕ ಜೀವ ಮೇಲೇರಬಹುದು. ಆದರೆ ಅದನ್ನು ಅರಿತುಕೊಂಡು, ಉಪಯೋಗಿಸಿಕೊಳ್ಳದಿದ್ದರೆ  ಅದಿದ್ದೂ ಇಲ್ಲದಂತಾಯಿತು. ಊರಿದ್ದೂ "ಒಕ್ಕಲೇ ಇಲ್ಲ".

ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು  - ಇಬ್ಬರು ಚೊಂಚರು ಒಬ್ಬನಿಗೆ ಕೈಯೇ ಇಲ್ಲ. 

ಈ ಜಗತ್ತನ್ನು, ಸಂಸಾರವನ್ನು, ಸೃಷ್ಟಿಸಿ ನಡೆಸುವ "ಮೂವರು ಕುಂಬಾರರು" ಬ್ರಹ್ಮ, ವಿಷ್ಣು, ಮಹೇಶ್ವರರು. ಜೀವದ ಮೂರು ಗುಣಗಳಿಗೆ ಅವರು ಅಭಿಮಾನಿ ದೇವತೆಗಳು. ಯಾವಜೀವನೂ ಪೂರ್ಣವಾಗಿ ಒಂದೇಗುಣವನ್ನು ಪಡೆದವನಲ್ಲ. ಪ್ರತಿಯೊಬ್ಬರಲ್ಲೂ ಈ ಮೂರುಗುಣಗಳು ವ್ಯಕ್ತವಾಗಿರುತ್ತವೆ. ವ್ಯಕ್ತವಾಗುವ ಪ್ರಮಾಣ ಬೇರೆ ಬೇರೆ ಅಷ್ಟೇ. ಅಭಿಮಾನಿದೇವತೆಗಳ ಕೃಪೆಯಿಂದ ಸತ್ವಗುಣದ ಪ್ರಮಾಣವನ್ನು ವೃದ್ಧಿಗೊಳಿಸಿಕೊಂಡು ಸತ್ ಮಾರ್ಗದಲ್ಲಿ ಮುನ್ನಡೆಯಬಹುದು. ಆದರೆ  (ಮಧ್ವ ಸಿದ್ಧಾಂತದಂತೆ) ಬ್ರಹ್ಮ ಮಹೇಶ್ವರರು ಸ್ವತಂತ್ರರಲ್ಲ. ಶ್ರೀಹರಿಯ ಇಚ್ಛೆಗನುಸಾರವಾಗಿ ನಡೆಯತಕ್ಕವರು. ಅವನ ಕೃಪೆಯಿಲ್ಲದಿದ್ದರೆ ಅವರೂ ಅಂಗಹೀನರೇ. ಆದ್ದರಿಂದ "ಇಬ್ಬರು ಚೊಂಚರು".
ಶ್ರೀಹರಿಯ ಕೃಪಾಹಸ್ತ ಚಾಚಿದರೆ ಯಾವುದೂ ಅಸಾಧ್ಯವಲ್ಲ. ಆದರೆ ಶ್ರೀಹರಿಯ ಕೃಪೆಗೆ ಪಾತ್ರನಾಗುವಂಥ ಯಾವುದೇ ಕಾರ್ಯ ಈ ಜೀವ ಮಾಡಲಿಲ್ಲವಾದ್ದರಿಂದ ಆತನ ಕೈ ನಮ್ಮೆಡೆಗೆ ಚಾಚಲಾರದು. ಕೈಯಿದ್ದೂ ಇಲ್ಲದಂತೆ. ಆದ್ದರಿಂದ "ಒಬ್ಬನಿಗೆ ಕೈಯೇ ಇಲ್ಲ"


ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ, ಎರಡು ಒಡಕು ಒಂದಕೆ ಬುಡವೇ ಇಲ್ಲ. 

ಕೈಯಿಲ್ಲದ ಕುಂಬಾರನು, ತನ್ನ ಕೈಚಾಚಲು ಅನುವಾಗುವಂಥ ಜೀವನವನ್ನು ಜೀವನು ನಡೆಸಲೆಂದು  ಜ್ಞಾನ, ಭಕ್ತಿ, ವೈರಾಗ್ಯಗಳೆಂಬ "ಮೂರು  ಮಡಕೆಗಳ " ಮಾಡಿ  ನೀಡಿದ. ಸಾಧನಾ ತ್ರಯಗಳೆಂದು ಅವುಗಳ ಹೆಸರು. ಈ ಕಲಿಗಾಲದಲ್ಲಿ  ಜ್ಞಾನ, ವೈರಾಗ್ಯಗಳನ್ನು ಗಳಿಸುವುದು ಸುಲಭಸಾಧ್ಯವಲ್ಲ.  ಒಡಕುಮಡಕೆಯಲ್ಲಿ ನೀರು ತುಂಬಿಸಿದಂತೆ. ಆದ್ದರಿಂದ "ಎರಡು ಒಡಕು". ಭಕ್ತಿ ಎಂಬುದು ಸುಲಭದಲ್ಲಿ ಕೈಗೆಟಕುವಂತಹುದು.  ಭಗವಂತನಲ್ಲಿ ಪ್ರೀತಿ, ಅವನ ಕೃಪೆಗಳಿಸುವ ಕಾರ್ಯಗಳಲ್ಲಿ  ಶ್ರದ್ಧೆ, ಎಂಬ ಬುಡವಿದ್ದರೆ ಭಕ್ತಿಯೆಂಬ ಮಡಕೆ ತುಂಬಿಸಲು ಸಾಧ್ಯ.  ಆದರೆ ಭಕ್ತಿಎಂಬ ಮಡಕೆಯನ್ನು ತುಂಬಿಸುವ ಪ್ರಯತ್ನವಾಗಲೇ ಇಲ್ಲ. ಅದರಲ್ಲಿ ತೊಟ್ಟೂ ತುಂಬಲಿಲ್ಲ. ಬುಡವೇ ಇಲ್ಲದ ಮಡಕೆಯಂತೆ.  ಹಾಗಾಗಿ "ಒಂದಕ್ಕೆ ಬುಡವೇ ಇಲ್ಲ".

ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಎರಡು ಬೇಯದು ಒಂದು ಬೇಯಲೇ ಇಲ್ಲ. 

ಭಕ್ತಿಯಲ್ಲೂ ಮೂರುವಿಧಗಳು.  ಸಾತ್ವಿಕ ಭಕ್ತಿ, ತಾಮಸಿಕ ಭಕ್ತಿ, ರಾಜಸಭಕ್ತಿ ಗಳು. "ಮೂರು  ಅಕ್ಕಿಕಾಳು" ಗಳು.  ರಾಜಸ ಭಕ್ತಿ, ತಾಮಸಭಕ್ತಿಗಳ ಮೂಲಕ ಮೋಕ್ಷಗಳಿಸುವ ಪ್ರಯತ್ನ  ಫಲ ನೀಡಲಾರದು.  ಬಹಳವೇ ಕಷ್ಟಸಾಧ್ಯವಾದದ್ದು. "ಎರಡು ಬೇಯದು". ಸಾತ್ವಿಕ ಭಕ್ತಿಯನ್ನು ಬೇಯಿಸಿ  ಜೀವವನ್ನು ಪಕ್ವ ಗೊಳಿಸುವ ಪ್ರಯತ್ನವೇ ಆಗಲಿಲ್ಲ. "ಒಂದು ಬೇಯಲೇ ಇಲ್ಲ".

ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು - ಇಬ್ಬರು  ಉಣ್ಣರು, ಒಬ್ಬನಿಗೆ ಹಸಿವೇ  ಇಲ್ಲ. 


ಸಾತ್ವಿಕ ಭಕ್ತಿಯನ್ನು ಬೆಳೆಸಲು ಸಹಕರಿಸುವಂಥ "ಮೂವರು ನೆಂಟರು" ಪ್ರತಿಜೀವರೊಡನೆಯೂ ಇದ್ದಾರೆ. ಕಾಯ, ವಾಕ್, ಮನಸ್ಸು. ಈ ಮೂವರೂ ಭಕ್ತಿರಸವನ್ನುಂಡು ಸ್ಪಂದಿಸಿ ಸಹಕರಿಸಿದರೆ ಮೋಕ್ಷಫಲ ಸಿಗುವ ಸಾಧ್ಯತೆ ಉಂಟು. ಆದರೆ ಕಾಯ ಹಾಗು ವಾಕ್ ಇವೆರಡೂ ಮನದ ಅಪ್ಪಣೆಯಿಲ್ಲದೆ ಭಕ್ತಿರಸ ಉಣ್ಣಲಾರವು.  ಆದ್ದರಿಂದ "ಇಬ್ಬರು ಉಣ್ಣರು".  ಮನಕ್ಕೆ ಅದು ಸಾಧ್ಯ. ಆದರೆ ಆ ಮನಸ್ಸಿಗೆ ಭಕ್ತಿರಸವುಣ್ಣುವ "ಹಸಿವೇ ಇಲ್ಲ".

ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ - ಎರಡು ತಾಗದು ಒಂದು ತಾಗಲೇ ಇಲ್ಲ. 

ಹಸಿವಿಲ್ಲದ ಮನಸ್ಸಿಗೆ ಪೆಟ್ಟು ಕೊಟ್ಟರಾದರೂ ಬುದ್ಧಿಕಲಿಯಬಹುದೆಂದು ಅತೀತ, ಅನಾಗತ,ಮತ್ತು ವರ್ತಮಾನ ಜನ್ಮಗಳೆಂಬ "ಮೂರು  ಟೊಣಪೆ", ಪೆಟ್ಟು, ಗಳನ್ನು ಕೊಟ್ಟರು. ಪ್ರತಿ ಜನ್ಮವೂ ಆಯಾ ಜನ್ಮಕ್ಕೆ ತಕ್ಕಂಥ ತಾಪದ ಪೆಟ್ಟು ತಿನ್ನಿಸಿ ಬುದ್ಧಿಕಲಿಸುವಂಥದ್ದು. ಆದರೆ ಜೀವಕ್ಕೆ ಅತೀತ, ಅನಾಗತ ಜನ್ಮಗಳ  ಅರಿವೇ ಆಗಲಾರದಾದ್ದರಿಂದ "ಎರಡು ತಾಕದು", ವರ್ತಮಾನ ಜನ್ಮದ ಪೆಟ್ಟು ತಾಕಿಯೂ ಅರಿವು ಬರಲಿಲ್ಲವಾಗಿ ಅದು ತಾಕಿಯೂ ತಾಕದಂತೆ. ಒಂದು "ತಾಕಲೇ ಇಲ್ಲ".

ತಾಕಲಿಲ್ಲದ ಟೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠಲ 

ಈ ಮಾನವ ಜನ್ಮದ ಸಂಸಾರ ತಾಪವನ್ನು, ಅದರ ಕಾರಣ, ಫಲಗಳನ್ನು, ಮನದಟ್ಟುಮಾಡಿಸಿ, ಸಂಸಾರದಲ್ಲಿ ವಿರಕ್ತಿಮೂಡಿಸಿ, ಭಕ್ತಿಮಾರ್ಗದಲ್ಲಿ ನಡೆಸಿ, ಸದ್ಗತಿಯನ್ನು ನೀಡಬೇಕೆಂದು ಪುರಂದರ ವಿಠ್ಠಲ ನಲ್ಲಿ, ಪುರಂದರ ದಾಸರು ಬಿನ್ನವಿಸಿಕೊಂಡಿದ್ದಾರೆ.






ಭಾನುವಾರ, ಅಕ್ಟೋಬರ್ 7, 2018

ಇರುವೆ ನೀನೆಲ್ಲೆಲ್ಲೂ ಇರುವೆ

ಹೊರದೇಶದಲ್ಲಿರುವ ನನ್ನ ತಮ್ಮನ ಮಗ ತನ್ನ ಊರು, ಮನೆ, ಪರಿಸರ, ಕಾಲೇಜು, ಶಿಕ್ಷಕರು, ಸಹಪಾಠಿಗಳು ಇವುಗಳೆಲ್ಲದರ  ಬಗೆಗೆ ಆಗಿಂದಾಗ್ಗೆ ನಮಗೆ ತಿಳಿಸಿ ಬರೆಯುತ್ತಿರುತ್ತಾನೆ. ಹಾಗೆಯೇ ಈಚೆಗೊಮ್ಮೆ ಬರೆದಾಗ ತನ್ನ ಸ್ನೇಹಿತನೊಬ್ಬನ ವಿಚಾರ ತಿಳಿಸಿದ. ಅವನ ಸ್ನೇಹಿತ  ತನ್ನ ಕೋಣೆಯಲ್ಲಿ ಒಂದು ಗಾಜಿನಪೆಟ್ಟಿಗೆಯಲ್ಲಿ ಇರುವೆಗಳನ್ನು ಸಾಕುತ್ತಾನಂತೆ. ಅದರ ಮೂಲಕ ಆ ಇರುವೆಗಳು ಬದುಕುವ ರೀತಿ, ಅವುಗಳು ಗೂಡು ಕಟ್ಟುವ ಕೌಶಲ್ಯ , ರಾಣಿ ಮತ್ತಿತರ ಇರುವೆಗಳ ನಡವಳಿಕೆ, ಆಹಾರ ಪದ್ಧತಿ ಇವುಗಳನ್ನೆಲ್ಲಾ ಅಭ್ಯಾಸಮಾಡುವುದು ಅವನ ಸ್ನೇಹಿತನ ಹವ್ಯಾಸವಂತೆ.

ಇದನ್ನು ಓದಿದ ನನ್ನ ತಮ್ಮನ ತಮಾಷೆಯ ಪ್ರತಿಕ್ರಿಯೆ ಹೀಗಿತ್ತು.

"ನಾವು ಶಾಂತಿನಗರದಲ್ಲಿ (ಬೆಂಗಳೂರಿನಲ್ಲಿ ನಾವಿದ್ದ ಮನೆ) ವಸತಿಗೆ ಹೋದಾಗ, ಇರುವೆಗಳು ತಮ್ಮ ಬಡಾವಣೆಯ ಮಧ್ಯೆ ನಮಗೆ ಮನೆಕಟ್ಟಲು ಅವಕಾಶಕೊಟ್ಟು, ನಾವು ಮನೆ ಕಟ್ಟುವ ಪದ್ಧತಿ, ನಮ್ಮ ರೀತಿ ನೀತಿಗಳು ಮತ್ತು ನಮ್ಮ ನಡವಳಿಕೆಯನ್ನು ಅಭ್ಯಾಸ ಮಾಡುತ್ತಿದ್ದವು. ಆ ಬಡಾವಣೆಯ ಮೂರುಕೋನಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಇರುವೆಗಳು ತಮ್ಮ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದವು."

ನನ್ನ ತಮ್ಮ ತಮಾಷೆಗೆಂದು ಹಾಗೆ ಬರೆದಿದ್ದರೂ ಅದು ಹೆಚ್ಚುಕಮ್ಮಿ ನಿಜವೇ ಆಗಿತ್ತು. ಹಿಂದೆ ಹೊಲವಾಗಿದ್ದ ಪ್ರದೇಶವನ್ನು  ಬಡಾವಣೆಯನ್ನಾಗಿಮಾಡಿ ಅಲ್ಲಿ ಮನೆಗಳು ಕಟ್ಟಲು ಪರವಾನಗಿ ಕೊಟ್ಟಿದ್ದ ಜಾಗ ಅದು. ಅಲ್ಲಿ ಮನೆಕಟ್ಟಿದ  ಮೊದಲಿಗರಲ್ಲಿ ನಾವೊಬ್ಬರು. ಮನೆಯ ಸುತ್ತಲೂ ಇನ್ನೂ ಹೊಲಗಳ ಅವಶೇಷ ಉಳಿದಿತ್ತು. ಮಧ್ಯೆ ಮಧ್ಯೆ ಹತ್ತಾರು ದೊಡ್ಡ ದೊಡ್ಡ ಹುತ್ತಗಳೂ ಇದ್ದವು. ಅಂದಮೇಲೆ ಅದು ನಿಜವಾಗಿ ಇರುವೆಗಳ ಸಾಮ್ರಾಜ್ಯವೇ.

ನಮ್ಮ ಮನೆಯ ಅಡಿಪಾಯ ಮಾತ್ರ ಸಿಮೆಂಟಿನಿಂದ ಕಟ್ಟಿದ್ದು. ಇಟ್ಟಿಗೆಯ ಗೋಡೆಗಳು ಮಣ್ಣಿನಿಂದಲೇ ಜೋಡಿಸಲ್ಪಟ್ಟಿದ್ದವು. ನಮ್ಮ ಮನೆಯ ಕೆಳಗೇ ಇರುವೆಗಳ ಕಾಲೋನಿ ಇತ್ತೋ ಏನೋ . ನಾವು ಆ ಮನೆಸೇರಿದ ಕೆಲವೇ ದಿನಗಳೊಳಗೆ ಇರುವೆಗಳು ವಾಸದ ಕೋಣೆಯ ಗೋಡೆಯತುಂಬೆಲ್ಲಾ ಸಣ್ಣ ಸಣ್ಣ  ತೂತುಗಳನ್ನು ಮಾಡಿ ಅದರಿಂದ ಹೊರಗೆ ಒಳಗೆ ಓಡಾಡುತ್ತಿದ್ದವು.  ಅದರಿಂದಲೇ  ನನ್ನ ತಮ್ಮ "ಇರುವೆಗಳು  ನಮ್ಮ ನಡವಳಿಕೆಯನ್ನು ಅಭ್ಯಾಸಮಾಡುತ್ತಿದ್ದವು" ಎಂದದ್ದು. ನಮ್ಮ ಮನೆಯಲ್ಲೋ ಆಗ ಕುರ್ಚಿ ಸೋಫಾಗಳಿರಲಿಲ್ಲ. ನಮ್ಮ ಹಾಲಿನಲ್ಲಿ - ಲಿವಿಂಗ್ ರೂಮ್ - ಒಂದು ಚಾಪೆ ಹಾಸಿರುತ್ತಿದ್ದೆವು. ಯಾರು ಬಂದರೂ ಅದರಮೇಲೆಯೇ ಕೂಡುವುದು. ಹಾಗೆ ಯಾರಾದರೂ ಬಂದು ಕೂತು ಬೆನ್ನನ್ನು ಗೋಡೆಗೆ ಒರಗಿಸಿದರೆ ನಿಮಿಷಾರ್ಧದಲ್ಲಿ ಇರುವೆಗಳು ಅವರ ಬೆನ್ನು ಕತ್ತನ್ನೆಲ್ಲಾ ಆವರಿಸಿ ಕಚ್ಚುತ್ತಿದ್ದವು.

ಇರುವೆಗಳನ್ನು ನಿವಾರಿಸಲೆಂದು ನಮ್ಮ ಸೋದರತ್ತೆ, ಬಹಳ ಸಣ್ಣ ವಯಸ್ಸಿನಲ್ಲೇ ತಮ್ಮ ಪತಿಯನ್ನು ಕಳೆದುಕೊಂಡು ನಮ್ಮೊಡನಿದ್ದವರು, ಆ ತೂತುಗಳಿಗೆಲ್ಲಾ ಸೀಮೆಯೆಣ್ಣೆ ಹಾಕುತ್ತಿದ್ದರು. ಒಮ್ಮೆ ಸೀಮೆಎಣ್ಣೆ ಬಿದ್ದರೆ ಹಲವಾರು ದಿನಗಳ ಕಾಲ ಇರುವೆಗಳು ಅಲ್ಲಿ ಸುಳಿಯುತ್ತಿರಲಿಲ್ಲ.

ಆದರೆ ಆ ಕಾಲ ಸೀಮೆಎಣ್ಣೆಯ ರೇಷನ್ನಿನ ಕಾಲ. ನಮಗೆ ನಿಗದಿಯಾಗಿದ್ದ ಸೀಮೆಎಣ್ಣೆಯ ಪ್ರಮಾಣ ನಮ್ಮ ಮನೆಯ ಅಡಿಗೆ ಒಲೆಗೇ ಸಾಲುತ್ತಿರಲಿಲ್ಲ. ಜತೆಗೆ ಆ ಎಣ್ಣೆ ನಮಗೆ ಬೇಕೆಂದಾಗ ಸಿಕ್ಕುತ್ತಿರಲಿಲ್ಲ. ರೇಷನ್ನಿನಲ್ಲಿ ಕೊಡುತ್ತಿದ್ದ ಎಣ್ಣೆಯನ್ನು ಸೀಮೆಎಣ್ಣೆ ಗಾಡಿ ರೇಷನ್ನಿನ ಅಂಗಡಿಮುಂದೆ ಬಂದಾಗ ಕ್ಯೂ ನಿಂತು ಕೊಳ್ಳಬೇಕಿತ್ತು. ಗಾಡಿ ಯಾವಾಗ ಬರುತ್ತದೆಂಬುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ರೇಷನ್ ಅಂಗಡಿಯ ಶೆಟ್ಟಿ ಅದನ್ನು ತಿಳಿದುಕೊಂಡಿರುತ್ತಿದ್ದ. ಆದರೆ ಅವನ ಅಂಗಡಿಗೆ ಬರಿಯ ರೇಷನ್ ಗಾಗಿ ಮಾತ್ರ ಹೋಗುತ್ತಿದ್ದ ನಮಗೆ ಅದನ್ನು ತಿಳಿಸುತ್ತಿರಲಿಲ್ಲ. ಸೀಮೆಯೆಣ್ಣೆಯ ಗಾಡಿಯ ಬಗ್ಗೆ ಸುದ್ದಿ ಬೇಕಾದರೆ ಮನೆಗೆ ಬೇಕಾದ ಇತರೇ ಸಾಮಾನುಗಳೆಲ್ಲವನ್ನೂ ಅವನ ಬಳಿಯೇ ಕೊಳ್ಳಬೇಕಿತ್ತು ! ಅವನ ಬಳಿ ಮನೆ ಸಾಮಾನು ಕೊಂಡರೆ ಅವನು ನಮ್ಮ ಸೀಮೆಎಣ್ಣೆ ಡಬ್ಬವನ್ನು ತನ್ನೊಡನೆ ಇಟ್ಟುಕೊಂಡಿದ್ದು, ಗಾಡಿ ಬರುವ ಹೊತ್ತಿನಲ್ಲಿ ಅವನ ಅಂಗಡಿಯ ಮುಂದೆ ಮೂಡುತ್ತಿದ್ದ ಡಬ್ಬಗಳ ಸಾಲಿನಲ್ಲಿ ಮುಂದೆ ಇಟ್ಟಿರುತ್ತಿದ್ದ.

ಆದರೆ ಅವನ ಅಂಗಡಿಯ ಬೇಳೆಯಲ್ಲಿ ಹುಳ, ಅಕ್ಕಿ ಮುಗ್ಗಲುವಾಸನೆ, ಬೆಲ್ಲ ಅಂಟು ಎಂದೆಲ್ಲಾ ಅಮ್ಮ ತಗಾದೆ ಮಾಡಿ ಅವನ ಬಳಿ ನಮ್ಮ ಮನೆಸಾಮಾನು ಕೊಳ್ಳುತ್ತಿರಲಿಲ್ಲ. ಹಾಗಾಗಿ ನಾವು ಅತ್ತಿತ್ತ ಓಡಾಡುವಾಗ, ಶಾಲೆಗೆ ಹೋಗುವಾಗ, ಬರುವಾಗ ಅಂಗಡಿಯ ಮೇಲೆ ಕಣ್ಣಿಟ್ಟಿದ್ದು ಅಲ್ಲಿ ಡಬ್ಬಗಳ ಸಾಲು ಶುರುವಾಗುವ ಸುಳಿವು ಕಂಡಾಕ್ಷಣ ಡಬ್ಬ ಇಟ್ಟು, ಗಾಡಿಬರುವವರೆಗೂ ಕಾವಲು ನಿಂತು ಎಣ್ಣೆ ಕೊಳ್ಳಬೇಕಿತ್ತು. ನಾವು ಅಲ್ಲಿ ಡಬ್ಬ ಇಟ್ಟು ಮನೆಗೆ ಬಂದರೆ ಮತ್ತೊಮ್ಮೆ ಹೋಗುವ ಹೊತ್ತಿಗೆ ನಮ್ಮ ಡಬ್ಬ ಸಾಲಿನ ಕೊನೆಯಲ್ಲಿರುತ್ತಿತ್ತು!


ಸೀಮೆಎಣ್ಣೆಗೆ ಹೀಗೆ ಪರದಾಟವಾದ್ದರಿಂದ ನಮ್ಮ ಅತ್ತೆ ಇರುವೆಗಳ ತೂತಿಗೆ ಸುಣ್ಣ ತುಂಬಲು ಪ್ರಾರಂಭಿಸಿದರು. ಸದಾ ಒಂದು ತೆಂಗಿನ ಕರಟದಲ್ಲಿ ಸುಣ್ಣ ಕಲಸಿ ತಯಾರಿರುತ್ತಿತ್ತು. ಗೋಡೆಯಲ್ಲಿ ತೂತು ಕಂಡಾಕ್ಷಣ ಅತ್ತೆ ಅದಕ್ಕೆ ಸುಣ್ಣ ತುಂಬಿ ಮುಚ್ಚುತ್ತಿದ್ದರು. ಆದರೇನು? ಮಾರನೆಯ ದಿನ ಅಲ್ಲಿ ಮತ್ತೆ ತೂತಾಗಿ ಇರುವೆಗಳು ಸಾಲಿಟ್ಟಿರುತ್ತಿದ್ದವು. ಹಾಗಾಗಿ ಇರುವೆಗಳಿಗೂ ನಮ್ಮತ್ತೆಗೂ ಸದಾ ಮುಗಿಯದ ಸ್ಫರ್ದೆ.

ಇರುವೆಗಳಿಗೆ ನಮ್ಮ ಮನೆಯ ಎಲ್ಲ ಜಾಗಗಳಿಗಿಂತ ಬಹಳ ಇಷ್ಟವಾದ ಜಾಗ ನಮ್ಮ ನೀರೊಲೆ. ಬಚ್ಚಲು ಮನೆಯ ಒಂದು ಮೂಲೆಯಲ್ಲಿ ದೊಡ್ಡ ತಾಮ್ರದ ಹಂಡೆಯೊಂದನ್ನು ಇರಿಸಿ ಸುತ್ತಲೂ ಕಟ್ಟೆ ಕಟ್ಟಿ ಅದರ ಬುಡದಲ್ಲಿ ಸೌದೆಯೊಟ್ಟಿ ಬೆಂಕಿಹಾಕಲು ಅನುವುಮಾಡಲಾಗಿತ್ತು. ದಿನಾ ರಾತ್ರಿ ಹಂಡೆಗೆ ನೀರುತುಂಬಿ ಬೆಳಗ್ಗೆ ಎದ್ದಾಕ್ಷಣ ಒಲೆಗೆ ಸೌದೆ ತುಂಬಿ ಉರಿಹಾಕುತ್ತಿದ್ದೆವು. ಆ ಒಲೆಯೊಳಗೆ ಕೆಂಪಿರುವೆಗಳು ಗೂಡುಮಾಡಿಕೊಂಡಿದ್ದವು. ಒಲೆಗೆ ಸೌದೆ ಒಟ್ಟುವಾಗ ಎಚ್ಚರ ಇಲ್ಲದಿದ್ದರೆ ನಮ್ಮ ಕೈಗೆಲ್ಲಾ ಕೆಂಪಿರುವೆ ಹತ್ತಿಕೊಂಡು ಒಲೆಯಬದಲು ನಮ್ಮ ಮೈಯಲ್ಲಿ ಉರಿಯೇಳುತ್ತಿತ್ತು !

ಚಳಿಗಾಲದಲ್ಲಿ ಈ ನೀರೊಲೆಯ ಮುಂದೆ ಕೂತು ಮೈಕಾಯಿಸುವುದು ಒಂದು ಬಹಳ ಹಿತವಾದ ಅನುಭವ. ಬೆಳಗ್ಗೆ ಎದ್ದ ತಕ್ಷಣ ಬಚ್ಚಲುಮನೆಯಲ್ಲಿ ಒಲೆಯಮುಂದೆ ಕೂತರೆ ಎದ್ದು ಹೊರಹೋಗುವ ಮನಸ್ಸೇ ಬರುತ್ತಿರಲಿಲ್ಲ. ಎಲ್ಲರ ಸ್ನಾನವಾದಮೇಲೆ ಒಲೆಯಲ್ಲಿ ಉಳಿದ ಬೂದಿಯಲ್ಲಿ ಒಂದೆರಡು ಈರುಳ್ಳಿ ಆಲೂಗಡ್ಡೆಗಳನ್ನು ಹಾಕಿ ಮುಚ್ಚುತ್ತಿದ್ದೆವು. ಒಂದರ್ಧ ಘಂಟೆಯನಂತರ ಅವುಗಳನ್ನು ಹೊರತೆಗೆದು ಸುಟ್ಟ ಸಿಪ್ಪೆ ಸುಲಿದು ತಿನ್ನುವುದು ಅದೆಂಥ ರುಚಿಯೋ !

ಇರುವೆಗಳಿಂದ ಶುರುವಾದ ಬರಹ ಎತ್ತಲೋ ಹೋಯಿತು. ನಮ್ಮ ಮನೆಕಟ್ಟಿದ ಮೊದಮೊದಲಲ್ಲಿ ನಮಗೆ ಕಾಣುತ್ತಿದ್ದ ಕರಿ, ಕೆಂಪು ಇರುವೆಗಳ ಜತೆ ಬಿಳಿ ಇರುವೆಗಳು - ಗೆದ್ದಲು - ಕಂಡಾಗ ನಮ್ಮ ತಂದೆಯವರಿಗೆ ಬಹಳವೇ ಘಾಬರಿಯಾಯಿತು. ಗೆದ್ದಲು ನಮ್ಮ ಮನೆಗೇನೂ ಹತ್ತಿರಲಿಲ್ಲ. ನಮ್ಮ ಮನೆಮುಂದಿದ್ದ ಸೀಬೆಗಿಡದ ಕಾಂಡದಲ್ಲಿ ಒಣಗಿದ್ದ ಒಂದು ಕೊಂಬೆಯಮೇಲೆ ಗೆದ್ದಲಿನ ಗೂಡು ಕಾಣಿಸಿಕೊಂಡಿತು. ತಂದೆಯವರು ತಕ್ಷಣ ಅದನ್ನು ಕೆರೆದು ಹಾಕಿ ಅಲ್ಲಿ ಸುತ್ತಲೂ ಅಗೆದು ಡಿ ಡಿ ಟಿ ಪುಡಿಹಾಕಿದರು. ಆದರೇನು? ಕೆಲವೇದಿನಗಳಲ್ಲಿ ಗೆದ್ದಲು ಮತ್ತೊಂದೆಡೆ ಕಂಡಿತು. ಮತ್ತೆ ಅದೇ ಕೆಲಸ. ಅಗೆತ ಮತ್ತು ಡಿ ಡಿ ಟಿ. ನಮ್ಮ ಅತ್ತೆಯವರಿಗೆ ಮನೆಯೊಳಗಿನ ಇರುವೆಗಳೊಡನೆ ಹೋರಾಟವಾದರೆ ತಂದೆಯವರಿಗೆ ಹೊರಗೆ ಗೆದ್ದಲುಗಳೊಡನೆ ಕಾದಾಟ. ಸಾಲಮಾಡಿ ಜಾಗಕೊಂಡು, ಸಾಲಮಾಡಿ ಕಟ್ಟಿದ್ದ ಮನೆ. ಮಣ್ಣಿನಗೋಡೆ . ಇನ್ನೂ ಹದಿನೈದು ವರುಷ ಕಂತು ತೀರಿಸಬೇಕಿರುವಾಗ ಗೆದ್ದಲುಹತ್ತಿ ಗೋಡೆ ಬಾಗಿಲು ಬಿದ್ದರೆ ಗತಿಯೇನು ಎಂಬುದು ಅವರ ಚಿಂತೆ. ಆ ಆತಂಕ ನಮಗೆ ಆಗ ಅರ್ಥವಾಗುತ್ತಿರಲಿಲ್ಲ.

ತಿಳಿದವರು ಕೆಲವರನ್ನು ಕೇಳಿ ತಂದೆಯವರು ಮನೆಯ ಸುತ್ತಲೂ ಮೂರು ಅಡಿ ಅಗಲ, ಆರು ಆಡಿ ಆಳದ ಕಂದಕ ಅಗೆಸಿದರು. ಕಂದಕದ ಬುಡದಲ್ಲಿ ಯಾವುಯಾವುದೋ ಕೀಟನಾಶಕಗಳನ್ನು ಬೆರೆಸಿ ಹರಡಿ, ಕಂದಕವನ್ನು ಮರಳಿನಿಂದ ತುಂಬಿ ಮುಚ್ಚಿಸಿದರು. ಆ ಕೆಲಸ ನಡೆಯುತ್ತಿರುವಾಗ ನಮಗೆ ಆಟವಾಡಲು ಮರಳುರಾಶಿ, ನೋಡಿ ಕೌತುಕಪಡಲು ಗೆದ್ದಲುಗೂಡು, ರಾಣಿಗೆದ್ದಲು ಮತ್ತು ಮನೆಯಿಂದ ಹೊರಗೆ ಒಳಗೆ ಓಡಾಡಲು ಇಟ್ಟಿದ್ದ ಹಲಗೆಗಳ ಸೇತುವೆಯಮೇಲೆ ಪದೇಪದೇ ನಡೆದಾಡುವ ಸಂಭ್ರಮ ! ಒಟ್ಟಿನಲ್ಲಿ ಆ ಕೆಲಸ ಮುಗಿದನಂತರ ಐವತ್ತು ವರುಷ ನಾವು ಆಮನೆಯಲ್ಲಿದ್ದೆವು. ಗೆದ್ದಲು ಮತ್ತೆ ಕಾಣಬರಲಿಲ್ಲ. ಇರುವೆಗಳ ಕಾಟವೂ ಕೊಂಚ ಕಡಿಮೆಯಾಯಿತು.

ಈಗ ನಾವಿರುವುದು ಸಿಮೆಂಟಿನಿಂದ ಕಟ್ಟಿದ ಮನೆ. ನಮ್ಮ ಕಿಟಕಿಗಳೆಲ್ಲಾ ಅಲ್ಯೂಮಿನಿಯಂ ಲೋಹದ್ದು. ಗೆದ್ದಲಿನ ಭಯವಿಲ್ಲ. ಆದರೆ ಇರುವೆಗಳು ನಮ್ಮನ್ನು ಕಾಡುವುದು ತಪ್ಪಿಲ್ಲ. ಯಾವುದೇ ತಿಂಡಿ ಪದಾರ್ಥ ಅಪ್ಪಿತಪ್ಪಿ ಮುಚ್ಚಳ ಘಟ್ಟಿಯಾಗಿ ಮುಚ್ಚದೆ ಇಟ್ಟಿದ್ದರೆ ಇರುವೆಸಾಲಿಡುವುದು ಖಂಡಿತ. ಈಗ ಅವುಗಳೊಡನೆ ಕಾದಾಡುವ ಬಾರಿ ನನ್ನ ಪತ್ನಿಯದು. ಅಡಿಗೆ ಮನೆಯ ಬಡು ಗಳನ್ನೆಲ್ಲಾ ಆಕೆ ಪದೇಪದೇ ಒದ್ದೆಬಟ್ಟೆಯಿಂದ ಒರೆಸಿಡುತ್ತಾಳೆ. ಇರುವೆಗಳನ್ನು ದೂರವಿಡುವವೆಂದು ಹೆಸರಾದ ರಾಮರೇಖೆ, ಲಕ್ಷ್ಮಣರೇಖೆ ಮುಂತಾಗಿ ಹೆಸರಿರುವ ಸೀಮೆಸುಣ್ಣದಂಥ ಕಡ್ಡಿಗಳನ್ನು ತಂದು ಬಡುಗಳ ಅಂಚುಗಳಲ್ಲಿ ಗೆರೆಯೆಳೆಯುತ್ತಾಳೆ. ಕೀಟನಾಶಕ ಪುಡಿಗಳುದುರಿಸುತ್ತಾಳೆ. ಆದರೆ ಇರುವೆಗಳು ಅದುಹೇಗೋ ಅದೆಲ್ಲವನ್ನು ನಿವಾರಿಸಿಕೊಂಡು ಡಬ್ಬಗಳಿಗೆ ದಾಳಿಯಿಡುತ್ತವೆ. ಪ್ಲಾಸ್ಟಿಕ್ ನ ಡಬ್ಬವನ್ನೇ ತೂತುಕೊರೆದು ಒಳನುಗ್ಗುತ್ತವೆ. ಬೇಸಗೆಯಲ್ಲಂತೂ ಅವುಗಳ ಕಾಟ ಹೇಳತೀರದು. ಕೊನೆಗೆ ನನ್ನ ಪತ್ನಿ ನಮ್ಮ ಡೈನಿಂಗ್ ಟೇಬಲಿನ ನಾಲ್ಕುಕಾಲುಗಳ ತಳಕ್ಕೆ ನಾಲ್ಕು ಬಟ್ಟಲುಗಳನ್ನಿಟ್ಟು ಅದರಲ್ಲಿ ನೀರುತುಂಬಿ, ಟೇಬಲ್ಲಿನ ಮೇಲೆ ತಿಂಡಿ ಪದಾರ್ಥಗಳನ್ನಿಟ್ಟು "ಈಗ ಇವು ಏನು ಮಾಡುತ್ತವೋ ನೋಡುತ್ತೇನೆ. ಈ ಇರುವೆಗಳು ಏನು ಮಾಡಿದರೂ ನೀರಿನಲ್ಲಿ ಈಜಿಕೊಂಡು ಬರುವ ವಿದ್ಯೆಯನ್ನಂತೂ ಇನ್ನೂ ಕಲಿಯಲಿಲ್ಲ" ಎಂದು ಇರುವೆಗಳಿಗೆ ಸವಾಲೆಸೆದಳು. ಇರುವೆಗಳು ಸೋಲೊಪ್ಪಿಕೊಂಡೆವೆನಿಸುತ್ತದೆ. ಅದಾಗಿ ಹದಿನೈದು ದಿನವಾದರೂ ಮೇಜಿನ ಮೇಲೆ ಇರುವೆಗಳು ಕಾಣಲಿಲ್ಲ. ನನ್ನ ಪತ್ನಿ ತಾನು ಗೆದ್ದೆನೆಂದು ಬೀಗಿದಳು.

ತಿಂಗಳುಗಳಿಂದ ಸಿಹಿತಿಂಡಿ ಮಾಡದೇ ಹೆದರಿಕೊಂಡಿದ್ದವಳು ನನ್ನ ಮಗನ ಹುಟ್ಟುಹಬ್ಬಕ್ಕೆಂದು ಗುಲಾಬ್ ಜಾಮೂನ್ ಮಾಡಿ ಧೈರ್ಯವಾಗಿ ಮೇಜಿನಮೇಲಿಟ್ಟು ರಾತ್ರಿ ನಿರಾಳವಾಗಿ ನಿದ್ದೆ ಮಾಡಿದಳು. ಮಾರನೇ ದಿವಸ ಮುಂಜಾನೆ ಎದ್ದು ನೋಡಿದರೆ ಆಘಾತ ! ಮೇಜಿನಮೇಲೆ ಜಾಮೂನಿನ ಬೋಗುಣಿಯೇ ಕಾಣದಂತೆ ಇರುವೆಗಳು ಮುತ್ತಿಕೊಂಡಿದ್ದವು. ನನ್ನಾಕೆಯನ್ನು ಸುಧಾರಿಸಲು ನನಗೆ ಅರ್ಧದಿನ ಬೇಕಾಯಿತು. ಇಂಗ್ಲಿಷಿನಲ್ಲಿ ಟ್ಯಾಕ್ಟಿಕಲ್ ರಿಟ್ರೀಟ್ ಎಂಬ ಪದವಿದೆ. ಯುದ್ಧಭೂಮಿಯಿಂದ ಕೊಂಚ ಹಿಮ್ಮೆಟ್ಟಿ ಅವಕಾಶಕ್ಕಾಗಿ ಕಾಯುವುದು. ಇರುವೆಗಳು ಹಾಗೆ ಕಾದಿದ್ದವೇನೋ. ನನ್ನಾಕೆ ತಾನು ಗೆದ್ದೆನೆಂಬ ಧೈರ್ಯದಿಂದ ಜಾಮೂನುಮಾಡಿ ಮೇಜಿನಮೇಲಿಟ್ಟು, ತನ್ನ ಸ್ನೇಹಿತೆಗೆ ಆಬಗ್ಗೆ ಮೊಬೈಲಿನಿಂದ ಮೆಸೇಜ್ ಕಳುಹಿಸಿ, ಮೊಬೈಲನ್ನು ಚಾರ್ಜುಮಾಡಲೆಂದು ಮೇಜಿನಮೇಲೆಯೇ ಇಟ್ಟು ಚಾರ್ಜರ್ ಅನ್ನು ಮೇಜಿನಪಕ್ಕದ ಪ್ಲಗ್ ಪಾಯಿಂಟಿಗೆ ತಗುಲಿಸಿ ಹೋಗಿದ್ದಳು. ಸಮಯಕಾದಿದ್ದ ಇರುವೆಗಳು ಗೋಡೆಹತ್ತಿ , ಪ್ಲಗ್ ಪಾಯಿಂಟ್ ತಲುಪಿ, ಚಾರ್ಜರಿನ ತಂತಿಯಮೆಲಿಂದ ಮೊಬೈಲಿಗಿಳಿದು, ಮೇಜನ್ನು ಆಕ್ರಮಿಸಿಕೊಂಡವು ! ಈ ಮಾನವರು ಏನೇಮಾಡಿದರು ಒಂದಲ್ಲ ಒಂದುಕಡೆ ಎಚ್ಚರ ಕಳೆದುಕೊಳ್ಳುತ್ತಾರೆಂದು ಅವಕ್ಕೆ ತಿಳಿಯದೇ ?

ನಾವು ಇರುವೆಗಳನ್ನು ಪೆಟ್ಟಿಗೆಯಲ್ಲಿಟ್ಟು ಅವುಗಳ ಜೀವನಕ್ರಮವನ್ನು ನೋಡಿ ಕಲಿಯತೊಡಗಿದ್ದೇವೆ. ಅವುಗಳ ಗೂಡುಗಳಲ್ಲಿ ಸಣ್ಣ ಸಣ್ಣ ಕ್ಯಾಮರಾಗಳನ್ನು ಅಳವಡಿಸಿ ಅವು ಬಾಳುವ ರೀತಿಯನ್ನು ಅಭ್ಯಾಸಮಾಡುತ್ತೇವೆ. ಆದರೆ ನೋಡಿ, ನಾವು ಮಾನವರು ಈ ಭೂಮಿಯಮೇಲೆ ಕಾಣಿಸಿಕೊಂಡದ್ದು ಎರಡು ಲಕ್ಷವರುಷಗಳ ಹಿಂದೆ ಎಂದು ಅಂದಾಜು. ಇರುವೆಗಳು ಭೂಮಿಯಮೇಲೆ ಕಾಣಿಸಿಕೊಂಡದ್ದು ತೊಂಭತ್ತೆರಡು ದಶಲಕ್ಷಗಳಿಗೂ ಮೊದಲಂತೆ ! ನಾವು ಅವುಗಳ ಜೀವನವನ್ನು ಈಚೆಗೆ, ಇಪ್ಪತ್ತೋ , ಮೂವತ್ತೋ , ಐವತ್ತೋ ವರುಷಗಳಿಂದ ಅಭ್ಯಾಸಮಾಡುತ್ತಿದ್ದೇವೆ. ಅವು ನಮ್ಮನ್ನು, ನಾವು ಭೂಮಿಯಮೇಲೆ ಕಾಣಿಸಿಕೊಂಡಾಗಿನಿಂದ ಅಂದರೆ ಎರಡು ಲಕ್ಷ ವರುಷಗಳಿಂದ ನೋಡುತ್ತಿವೆ ! ನಾವು ಅವುಗಳಿಗೆ ಸಾಟಿಯೇ ?