“ಕವಿಯಲ್ಲ, ವಿಜ್ಞಾನಿಯಲ್ಲ, ಬರಿಯ ತಾರಾಡಿ” ಎಂದು ತಮ್ಮನ್ನು ತಾವು ಡಿ ವಿ ಜಿ ಯವರು ಪರಿಚಯಿಸಿಕೊಂಡರೆ, “ಅಕ್ಸಾರ ಗಿಕ್ಸಾರ ನಂಗೇನೂ ಬರದು, ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು” ಎನ್ನುತ್ತಾ ತಮ್ಮ ಪದಗಳನ್ನು ಪ್ರಾರಂಭಿಸಿದರು ಈ ಮಹಾಕವಿ. ಅವರಿಗೇನು ಬರಲಿ ಬಿಡಲಿ, ನಮಗೆ ಕನ್ನಡ, ಕೊಂಚ ಉರ್ದು ( ಹಳೇಮೈಸೂರಿನ ಸಾಹೇಬರುಗಳ ಕನ್ನಡೀಕರಣಗೊಂಡ ಉರ್ದು) ಹಾಗೂ ಇವೆರಡರ ಗ್ರಾಮ್ಯ ರೂಪ ಇವುಗಳ ಪರಿಚಯವಿಲ್ಲದಿದ್ದರೆ ರತ್ನನ ಪದಗಳು ಕಬ್ಬಿಣದ ಕಡಲೆಯೇ.
“ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ , ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ
ನಂಗೆಸ್ರು ಏಳ್ತಾರೆ ರ್ರ ರ್ರ ರ್ರ ರತ್ನ, ನಾನಾಡೋ ಪದಗೋಳು ಯೆಂಡದ್ ಪರ್ಯತ್ನ” - ಈ ಸಾಲುಗಳನ್ನು ನೀವು ಇದುವರೆಗೂ ಓದಿಲ್ಲದಿದ್ದರೆ, ಇವು ನಿಮ್ಮ ಮನಕ್ಕೆ ತಟ್ಟಿದರೆ, ನನ್ನ ಪರ್ಯತ್ನ ಸಾರ್ಥಕವಾಯಿತು.
ನಾನು ಮೇಲೆಬರೆದ ಪದಗಳನ್ನು ಕೇಳಿಲ್ಲದಿರುವವರು ಇರಬಹುದು. ಆದರೆ “ನಾಯಿಮರಿ ನಾಯಿಮರಿ ತಿಂಡಿಬೇಕೇ?” ಮತ್ತು “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ “ ಮುಂತಾದ ಮಕ್ಕಳ ಗೀತೆಗಳ ಪರಿಚಯವಿಲ್ಲದ ಕನ್ನಡಿಗರು ಇರಲಾರರು.
ಈ ಪದಗಳ ಹಾಗು ಮಕ್ಕಳ ಗೀತೆಗಳ ಕರ್ತೃ, “ಗಂಡುಗವಿ” ಎಂದು ಹೆಸರಾದ ಜಿ ಪಿ ರಾಜರತ್ನಂ ಅವರು. “ನರಕಕ್ಕಿಳಿಸಿ, ನಾಲ್ಗೆ ಸೀಳ್ಸಿ, ಬಾಯ್ ಹೊಲಿಸಾಕಿದ್ರೂನೂವೆ, ಮೂಗ್ನಲ್ ಕನ್ನಡ ಪದವಾಡ್ತೀನಿ” ಎಂದ ಕನ್ನಡಾಭಿಮಾನಿ. ಮತ್ತೆ ಇದು ಬರಿಯ ಭಾಷಣದ ಕನ್ನಡಾಭಿಮಾನವಲ್ಲ. ನಂಜನಗೂಡಿನ ಸಮೀಪದ ಗುಂಡ್ಲುಪೇಟೆಯಲ್ಲಿ ಜನಿಸಿದ ರಾಜರತ್ನಂ ಅವರ ಮಾತೃಭಾಷೆ ತಮಿಳು. ಬಡತನದಲ್ಲಿ ಬೆಳೆದು ಓದಿ, ಕನ್ನಡ ಆನರ್ಸ್ ಪದವಿಗಳಿಸಿ ನಂತರ ಸ್ನಾತಕೋತ್ತರ ಪದವಿಪಡೆದರು. ಕನ್ನಡ ಪಾಠಮಾಡಿ ಜೀವನ ನಡೆಸಿ, ಗದ್ಯ, ಪದ್ಯ, ಮಕ್ಕಳ ಸಾಹಿತ್ಯ ಮುಂತಾಗಿ ವಿಪುಲವಾಗಿ ಕನ್ನಡ ಸಾಹಿತ್ಯಸೇವೆ ನಡೆಸಿ, ಜೀವನವನ್ನೇ ಕನ್ನಡ ಸಾಹಿತ್ಯಾರಾಧನೆಗೆ ಮುಡುಪಿಟ್ಟ ಕವಿ.
ಕನ್ನಡವಷ್ಟೇ ಅಲ್ಲದೆ ಸಂಸ್ಕೃತ ಹಾಗೂ ಪಾಲಿಭಾಷೆಗಳಲ್ಲಿ ಪರಿಣಿತರಾಗಿದ್ದ ರಾಜರತ್ನಂ ಅವರು ಪಾಲಿಭಾಷೆಯನ್ನು ಕೈಗೂಡಿಸಿಕೊಂಡು ಬೌದ್ಧ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ, ಅನೇಕ ಪ್ರೌಢ ಪ್ರಭಂದಗಳಲ್ಲದೇ ಮಕ್ಕಳಿಗಾಗಿ “ಬೋಧಿಸತ್ವನ ಕಥೆ “ಗಳನ್ನು ಬರೆದರು. “ತುತ್ತೂರಿ”, “ಕಡಲೆಪುರಿ” ಅವರ ಮಕ್ಕಳ ಗೀತಗಳ ಸಂಗ್ರಹಗಳು.
ರಾಜರತ್ನಂ ಅವರ ಹೆಸರು ಕೇಳಿಲ್ಲದವರೂ ಸಹ ದಿವಂಗತ ಕಾಳಿಂಗರಾಯರ ಕಂಠದ “ಬ್ರಮ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನ“ ಮತ್ತು “ಎಳ್ಕೊಳ್ಳೋಕ್ ಒಂದೂರು” ಗಳನ್ನು ಕೇಳದಿರುವ ಸಾಧ್ಯತೆ ಬಹುಕಡಿಮೆ. ಭಾವಗೀತೆಗಳೆಂಬ ಒಂದು ಪ್ರಕಾರದ ಹಾಡುಗಾರಿಕೆ ಪ್ರಾರಂಭವಾದ ಕಾಲದಲ್ಲಿ ಬಹಳ ಜನಪ್ರಿಯವಾದ ಗೀತೆಗಳು ಇವು. ಇಂಥಗೀತೆಗಳನ್ನು ಒಳಗೊಂಡ “ರತ್ನನ ಪದಗಳು” ಕನ್ನಡ ಕವನ ಸಾಹಿತ್ಯದಲ್ಲಿ ಒಂದು ಹೊಸಪ್ರಯೋಗ . ಕೈಲಾಸಂ ರವರ ನಾಟಕಗಳಿದ್ದಂತೆ.
ರಾಜರತ್ನಂ ಅವರು ರತ್ನನ ಪದಗಳನ್ನು ಬರೆದಾಗ ಅದನ್ನು ಅಚ್ಚುಮಾಡಲು ಯಾವ ಪ್ರಕಾಶಕನೂ ಮುಂದೆ ಬರಲಿಲ್ಲವಂತೆ. ತಾವು ಪದವಿ ಪರೀಕ್ಷೆಯಲ್ಲಿ ಮೊದಲಿಗರಾದಾಗ ತಮಗೆ ದೊರಕಿದ್ದ ಸ್ವರ್ಣ ಪದಕವನ್ನು ಅಡವಿಟ್ಟು, ಮೂವತ್ತೈದು ರೂಪಾಯಿಗಳನ್ನು ಹೊಂದಿಸಿಕೊಂಡು, ತಾವೇ ತಮ್ಮ ಪದಗಳನ್ನು ಅಚ್ಚುಮಾಡಿಸಿದರಂತೆ. ಪುಸ್ತಕಗಳೆಲ್ಲಾ ಮಾರಾಟವಾಗಿ ಮರುಮುದ್ರಣವಾದಾಗ ಬಂದ ಹಣದಿಂದ ತಮ್ಮ ಪದಕವನ್ನು ವಾಪಸು ಪಡೆದರಂತೆ.
ನನ್ನ ಸೋದರಮಾವನವರು ರಾಜರತ್ನಂ ಅವರ ವಿದ್ಯಾರ್ಥಿಯಾಗಿದ್ದ್ದು ನಂತರ ಸಹ ಅಧ್ಯಾಪಕರಾದವರು. ಗಂಡುಗವಿಯ ಮೈಕಟ್ಟು ಕೂಡ ಗುಂಡುಕಲ್ಲು. ತರಗತಿಯಲ್ಲಿ ಹುಡುಗರು ತರಲೆಮಾಡಿದರೆ “ಕಿಟಕಿಗೆ ಕಂಬಿಯಿಲ್ಲ, ತೋಳಿನಲ್ಲಿ ಕಸುವಿದೆ, ಎತ್ತಿ ಹೊರಗೆ ಒಗೆದುಬಿಡುವೆ” ಎಂದು ಗುಡುಗಿದರೆ ತರಗತಿ ನಿಶ್ಯಬ್ಧ !
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಅಧ್ಯಾಪಕರ ವೇತನ, ಭಾಷೆಯ ಅಧ್ಯಾಪಕರ ವೇತನಕ್ಕಿಂತ ಒಂದುಮಟ್ಟ ಹೆಚ್ಚು ಇದ್ದಿತಂತೆ. ತಾವು ರಸಾಯನಶಾಸ್ತ್ರದ ಅಧ್ಯಾಪಕರಾಗಿ, ತಮಗೆ ಕನ್ನಡ ಪಾಠಹೇಳಿದ ಗುರು ರಾಜರತ್ನಂ ಅವರಿಗಿಂತ ಹೆಚ್ಚು ವೇತನ ಪಡೆಯುವುದು ನನ್ನ ಸೋದರಮಾವನವರಿಗೆ ಕಿರಿಕಿರಿಯಾಗುತ್ತಿತ್ತಂತೆ. ಒಮ್ಮೆ ಇಬ್ಬರೂ ಕಾರ್ಯಾಲಯದಲ್ಲಿ ಒಟ್ಟಿಗೆ ವೇತನ ಪಡೆಯಲು ಹೋದಾಗ ಮಾವನವರು ಇದನ್ನು ರಾಜರತ್ನಂ ಅವರಿಗೆ ತಿಳಿಸಿದರಂತೆ. “ನಾಚಿಕೆಯಾಗಬೇಕಿರುವುದು ವಿಶ್ವವಿದ್ಯಾಲಯಕ್ಕೆ. ನೀ ಯಾಕೆ ಬೇಸರಪಡುತ್ತೀಯಾ, ಬಾ. ಕಾಫಿ ಕುಡಿಯೋಣ” ಎನ್ನುತ್ತಾ ಹೆಗಲಮೇಲೆ ಕೈಹಾಕಿಕೊಂಡು ಕ್ಯಾಂಟೀನಿಗೆ ಕರೆದೊಯ್ದರಂತೆ ರಾಜರತ್ನಂ ಅವರು.
ನಾನು ಬಿ ಡಿ ಎಸ್ ಎರಡನೇ ವರ್ಷದಲ್ಲಿದ್ದಾಗ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ಕಾಲೇಜಿಗೆ ಬಂದಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತಾವು ಬರಬೇಕಾದರೆ ಕನಿಷ್ಠ ನೂರುರುಪಾಯಿ ಬೆಲೆಯ ಕನ್ನಡ ಪುಸ್ತಕಗಳನ್ನು ಕಾರ್ಯಕ್ರಮ ನಡೆಸುವವರು ಖರೀದಿಸಬೇಕೆಂಬುದು ಅವರ ಕರಾರಾಗಿತ್ತು. “ನೂರು ರುಪಾಯಿಯ ಪುಸ್ತಕ ಕೊಳ್ಳದ ಕನ್ನಡ ಸಂಘ ಮತ್ತೇನು ಮಾಡೀತು?” ಎಂಬುದು ಅವರ ವಾದ.
ಕಾರ್ಯಕ್ರಮ ಮುಗಿದ ನಂತರ ತಮ್ಮ ಪುಸ್ತಕಗಳನ್ನು ಅಲ್ಲಿಯೇ ಹಸ್ತಾಕ್ಷರಮಾಡಿ ಕೊಟ್ಟರು. ನಾನೂ ಒಂದು ಪುಸ್ತಕ ಕೊಂಡೆ. ಅದೆಲ್ಲಿಹೋಯಿತೋ ದೇವರೇ ಬಲ್ಲ. ನನಗೆ ಅಷ್ಟು ಪ್ರಿಯವಾದ ಲೇಖಕರೊಬ್ಬರ ಹಸ್ತಾಕ್ಷರವಿದ್ದ ಪುಸ್ತಕ ಕಳೆದುಕೊಂಡ ವ್ಯಥೆ ಬಾಧಿಸುತ್ತದೆ.
ರತ್ನನ ಪದಗಳು ಸಂಗ್ರಹದ ಮೊದಲ ಪದ ಇಲ್ಲಿದೆ. ಪದಗಳನ್ನು ಓದಿಲ್ಲದವರಿಗೆ ಪದಗಳ ರುಚಿತೋರಿಸುವ ಪ್ರಯತ್ನ.
ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ ,
ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ
ನಂಗೆ ಎಸ್ರು ಏಳ್ತಾರೆ ರ್ರ ರ್ರ ರ್ರ ರತ್ನ,
ನಾನಾಡೋ ಪದಗೋಳು ಯೆಂಡದ್ ಪರ್ಯತ್ನ
ಮಾಬಾರ್ತ ಬರೆಯಾಕೆ ಯಾಸಂಗಿನಾಯ್ಕ
ಸಿಕ್ಕಂಗ್ ನಂಗ್ ಸಿಕ್ಕೋನೊಬ್ಬ ಬೇವಾರ್ಸಿನಾಯ್ಕ
ನಾನಾಡಿದ್ ಪದಗೊಳ್ನ ಕೂಡಿಸ್ದ ಬರ್ದು
ಏನೈತೊ ಯಾರಿಗ್ ಗೊತ್ ಔನ್ಗಿರೋ ದರ್ದು
ಬರಕೊಂಡ್ರೆ ಬರಕೊಂಡ್ ಓಗ್ , ನಿಂಗೂನೆ ಐಲು,
ಮಾಡಾನಾ ಆಗಿದ್ದೊಂದ್ ಸಾಯ ನಂಕೈಲು
ಅಂತ್ ಅವ್ನ್ ಬರ್ದಿದ್ನ ಅಚ್ಗಾಕೋಕ್ ಒಪ್ಪಿ
ಕಳಿಸಿವ್ನಿ ಬೈದೀರ ನಂಗೇನ್ರಾ ತಪ್ಪಿ
ಅಕ್ಸಾರ ಗಿಕ್ಸಾರ ನಂಗೇನೂ ಬರ್ದು
ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು
ಪದಗೊಳ್ ಚಂದಾಗಿದ್ರೆ ಯೆಂಡಕ್ ಸಿಪಾರ್ಸಿ
ಚಂದಾಗಿಲ್ದಿದ್ರನಕ ತಪ್ಗೆ ಬೇವಾರ್ಸಿ.
ಇದರ ಬಗ್ಗೆ ನನ್ನದೇ ಆದ ವಿವರಣೆಯೂ ಇದೆ. ಆದರೆ ನಿಮ್ಮ ಸಹನೆಗೂ ಮಿತಿಯಿರುವುದರಿಂದ ಇಲ್ಲಿಗೆ ಸಾಕು. ರತ್ನನ ಮತ್ತು ರತ್ನನ ಪದಗಳ ಪರಿಚಯ ನನ್ನದೇ ರೀತಿಯಲ್ಲಿ ಮಾಡಿದ್ದೇನೆ. ಓದಿದವರಿಗೆ ಹಿಡಿಸಿದರೆ ಸಾರ್ಥಕವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ