ಮಂಗಳವಾರ, ಆಗಸ್ಟ್ 22, 2017

ಡಿ ವಿ ಜಿ ಮತ್ತು ಅವರ ಕೃತಿಗಳು - ನನ್ನ ಗ್ರಹಿಕೆಗೆ ಸಿಕ್ಕಂತೆ.



“ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ ಹೇ ದೇವಾ
ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ”

ನಾನು ಪ್ರೈಮರಿ ತರಗತಿಯಲ್ಲಿದ್ದಾಗ “ವನಸುಮ” ಎಂಬ ಪದ್ಯದ ಮೂಲಕ ಡಿ ವಿ ಜಿ ಎಂಬ ಮೂರಕ್ಷರದ ಪರಿಚಯ ನನಗಾಯಿತು. ನಾವು ಪದ್ಯವನ್ನು ಬಾಯಿಪಾಠ ಮಾಡಬೇಕಿತ್ತು. ಸರಳವಾದ ಸಾಲುಗಳು ಸುಲಭವಾಗಿ ಬಾಯಿಪಾಠವಾದವು. ಅಷ್ಟೇ ಸುಲಭವಾಗಿ ಪದ್ಯದ ಅರ್ಥವೂ ತಿಳಿಯಿತು. ಆದರೆ ತಮ್ಮ ಕವನದ ಸಾಲುಗಳಲ್ಲಿ ತಾವು ಸೂಚಿಸಿದಂತೆ, ಕಾನನದ ಮಲ್ಲಿಗೆಯಂತೆ ಸೌರಭವ ಸೂಸುತ್ತಾ “ಜಗದ ಪೊಗಳಿಕೆಗೆ ಬಾಯ್ಬಿಡದೆ” ಬಾಳಿದ ಘನತೆ ಕವಿಯದೆಂದು ಅರ್ಥವಾಗಿದ್ದು ಬಹಳ ವರುಷಗಳ ನಂತರ.

ವನಸುಮದ ಪರಿಚಯವಾದ ಆಸುಪಾಸಿನಲ್ಲೇ “ಬೆಕ್ಕೋಜಿ” ಯ ಪರಿಚಯ ವಾಗಿದ್ದು ಕೂಡ. ಬೆಂಗಳೂರಿನ ಕೋಟೆಯ ದ್ವಾರದ ಎದುರಿಗೆ “ಸತ್ಯ ಶೋಧನ ಪುಸ್ತಕ ಭಂಡಾರ” ಎಂಬ ಪುಸ್ತಕದ ಮಳಿಗೆಯೊಂದಿತ್ತು. ನಮ್ಮ ತಂದೆಯವರು ಮೂರುತಿಂಗಳಿಗೋ ಆರುತಿಂಗಳಿಗೋ ಒಮ್ಮೆ ನನ್ನನ್ನು ಅಲ್ಲಿಗೆ ಕರೆದೊಯ್ದು ನಾನು ಆಯ್ದ ಹತ್ತಾರು ಮಕ್ಕಳ ಪುಸ್ತಕಗಳನ್ನು ನನಗೆ ಕೊಡಿಸುತ್ತಿದ್ದರು. ಒಮ್ಮೆ ಹಾಗೆ ಹೋಗಿದ್ದಾಗ “ಏಟೊಂದರಿಂದ ಏಳ್ವರನ್ನು ಕೊಂದ” ಪರಾಕ್ರಮಿ ಬೆಕ್ಕೋಜಿ ಯ ಶೀರ್ಷಿಕೆಯಿಂದ ಆಕರ್ಷಿತನಾಗಿ “ಬೆಕ್ಕೋಜಿ” ಪುಸ್ತಕವನ್ನು   ಕೊಂಡುತಂದು ಓದಿ ಬಹಳ ಸಂತೋಷಪಟ್ಟೆ. ಅರಿಯಬಲ್ಲವರಿಗೆ “ಜೀವನ ಧರ್ಮಯೋಗ” ವನ್ನು ಉಪದೇಶಿಸುವ ಸಮರ್ಥತೆಯನ್ನು ಹೊಂದಿದ್ದ  ಡಿ ವಿ ಜಿ ಯವರ ಲೇಖನಿ ಮಕ್ಕಳ ಮನಮುಟ್ಟುವ “ಬೆಕ್ಕೋಜಿ” ಮತ್ತು “ಇಂದ್ರವಜ್ರ” ಗಳನ್ನೂ ಬರೆಯಬಲ್ಲದಾಗಿತ್ತು.  

ನಂತರದ ಐದಾರು ವರುಷ ಗುಂಡಪ್ಪನವರಿಗೂ ನನಗೂ ಸಂಭಂದವಿರಲಿಲ್ಲ. ನಂತರ ಹೈಸ್ಕೂಲಿನಲ್ಲೋ ಪಿಯುಸಿಯಲ್ಲೋ ಕನ್ನಡ ಪಠ್ಯಪುಸ್ತಕದಲ್ಲಿ ಕಂಡದ್ದು “ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು” ಎಂಬ ಸಾಲು. ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದದ್ದರಿಂದ “ನಾಕನಿಲಯರಿಗರಿದು ನಿನಗೆ ವಿವೇಕ ಎಳ್ಳಿನಿತಿಲ್ಲ”,  “ನೀರೊಳಗಿರ್ದುಮ್ ಬೆಮರ್ದನ್ ಉರಗಪತಾಕಂ” “ಹೊಸನೆತ್ತರುಕ್ಕುಕ್ಕಿ ಆರಿಹೋಗುವಮುನ್ನ ಹರೆಯದೀ ಮಾಂತ್ರಿಕನ ಮಾಟ  ಮಸುಳುವಮುನ್ನ” ಮುಂತಾದ ಮರೆಯಲಾಗದ ಸಾಲುಗಳೊಂದಿಗೆ “ಮಂಕುತಿಮ್ಮ”ನ ಪರಿಚಯದ ಭಾಗ್ಯ ನನಗಾಯಿತು.

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರಿವಿಗೆ ಎಟುಕುವವೊಲು ಒಂದಾತ್ಮನಯವ
ಹವಣಿಸಿದನಿದನು  ಪಾಮರಜನದ ಮಾತಿನಲಿ
ಕವನ ನೆನಪಿಗೆ ಸುಲಭ - ಮಂಕುತಿಮ್ಮ  

ಎಂದು ತಮ್ಮ “ಕನ್ನಡದ ಭಗವದ್ಗೀತೆ”ಯನ್ನು ದೈನ್ಯತೆಯಿಂದ ಪರಿಚಯಿಸಿ, ತಮ್ಮ ಕಗ್ಗವು “ಬಹು ಸಾಮಾನ್ಯರಾದವರ ಮನೆಯ ಬೆಳಕಿಗೆ ತೊಟ್ಟಿನಷ್ಟು ಎಣ್ಣೆಯಾದರೆ ನನಗೆ ತೃಪ್ತಿ” ಎಂದರು ಡಿ ವಿ ಜಿ. ಜತೆಗೇ, ಎಲ್ಲವನ್ನೂ ಒಟ್ಟಿಗೆ ನುಂಗದೆ “ಆಗೊಂದು ಈಗೊಂದು ಪದ್ಯವನ್ನು ಪೆಪ್ಪರಮಿಂಟಿನಂತೆ ಚಪ್ಪರಿಸಿ” ಎಂದೂ ಸಲಹೆ ನೀಡಿದರು.

ಬದುಕಿನ ಜಟಕಾಬಂಡಿಯನ್ನೆಳೆಯುತ್ತಾ, ನಡೆದು ಸಾಕಾಗಿಯೋ , ಭಾರ ಹೆಚ್ಚಾಗಿಯೋ, ಪಯಣಿಗರ ಕಿರಿಕಿರಿಯೋ, ಯಾವುದರಿಂದಲೋ ಕಾಲುಸೋತಾಗ, ಮನಕುಂದಿದಾಗ, ಬಾಯಿಗಿಟ್ಟುಕೊಂಡರೆ, ಬದುಕಿನ ಕಹಿಯನ್ನು ಕಡಿಮೆಯಾಗಿಸಿ, ಚಪ್ಪರಿಸಿದಷ್ಟೂ ಸಿಹಿಯಾಗುತ್ತಾ, ಬದುಕನ್ನು ಮುನ್ನಡೆಸಲು ಮನವನ್ನು ಅನುವಾಗಿಸುವ ಪೆಪ್ಪರಮಿಂಟಿನ ಕರ್ತನಿಗೆ ನಮೋನಮಃ.  

ಮಂಕುತಿಮ್ಮನ ಕಗ್ಗದ ಸವಿಯನ್ನು ಕಂಡುಕೊಂಡು ಅಂಥ ಮಹಾನ್ ಕೃತಿಯನ್ನು ನಮ್ಮ ಕೈಗಿತ್ತ ಮಹಾನುಭಾವನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸಕ್ತಿ ಹುಟ್ಟಿದ ಹೊತ್ತಿಗೆ ನನ್ನ ಕೈಗೆ ಸಿಕ್ಕಿದ್ದು “ಜ್ಞಾಪಕ ಚಿತ್ರಶಾಲೆ - ನೆನಪಿನ ಚಿತ್ರಗಳು”. ಪ್ರತಿಯೊಂದೂ ಐನೂರು ಪುಟಗಳನ್ನು ಹೊಂದಿದ್ದ ಮೂರು ಪುಸ್ತಕಗಳನ್ನು ಓದಿ ಮುಗಿಸಿದಾಗ “ಅಯ್ಯೋ ಮುಗಿದುಹೋಯಿತೇ” ಎನ್ನುವಂಥ ಅನಿಸಿಕೆ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರ ಮುಳಬಾಗಿಲಿನ ಬಾಲ್ಯದ ದಿನಗಳಿಂದ ಪ್ರಾರಂಭವಾಗುವ ಚಿತ್ರಗಳು ನನ್ನನ್ನು ಸಂಪೂರ್ಣವಾಗಿ ಸೆರೆಹಿಡಿದು ಬಿಟ್ಟವು. ಡಿ ವಿ ಜಿ ಯವರ ಬಾಲ್ಯ, ವಿದ್ಯಾಭ್ಯಾಸ , ನೌಕರಿಗಾಗಿ ಪರದಾಟ, ಸಾಹಿತ್ಯಾಭ್ಯಾಸ, ಪತ್ರಿಕೋದ್ಯಮ , ರಾಜಕಾರಣ, ರಸಿಕತೆ ಮುಂತಾದ ಅನೇಕಾನೇಕ ಸಂಗತಿಗಳೊಂದಿಗೆ ಅಂದಿನ ಜನಜೀವನದ ವಿವರಗಳು, ಸಾಮಾಜಿಕ - ರಾಜನೈತಿಕ  ಮೌಲ್ಯಗಳ ವಿವರಗಳು ಎಲ್ಲವೂ ಒಂದಕ್ಕೊಂದು ಪೂರಕವಾಗಿ, ಹಾಸುಹೊಕ್ಕಾಗಿ ಸೇರಿಕೊಂಡಿವೆ ಆ ಚಿತ್ರಗಳಲ್ಲಿ.

ಇನ್ನು ಡಿ ವಿ ಜಿ ಯವರ ಸಮಕಾಲೀನರ, ಸುತ್ತಸುತ್ತಮುತ್ತಲಿನ, ಜನರ ಚಿತ್ರಣ . ಡಿ ವಿ ಜಿ ಯವರ ಸಂಪರ್ಕಹೊಂದಿದ್ದ ಸ್ನೇಹಿತರು, ಸಹೃದಯಿಗಳು, ಮುಖಂಡರು, ಹಿರಿಯರು, ನೂರಾರು  ಜನ. ಪ್ರತಿಯೊಬ್ಬರ ಜೀವನ, ಗುಣ, ಕೆಲಸ ಕಾರ್ಯಗಳ ವಿವರ ಇವರ ನೆನಪಿನಲ್ಲಿ! ಒಳ್ಳೆಯ ಗುಣಗಳು ಯಾರಲ್ಲಿ ಕಂಡರೂ ಗುರುತಿಸಿ ಬರೆದಿಟ್ಟರು. ದಿವಾನ್ ವಿಶೇಶ್ವರಯ್ಯನವರ ಕಾರ್ಯನಿಷ್ಠೆ , ಕಟ್ಟುನಿಟ್ಟು, ಬುದ್ಧಿಮತ್ತೆ, ಮತ್ತಿತರ ಗುಣಗಳು ಡಿ ವಿ ಜಿ ಯವರನ್ನು ಎಷ್ಟು ಆಕರ್ಷಿಸಿದವೋ, ಗಾರೆಕೆಲಸದ ಶಿವ ಪಿಚೈ ಮೊದಲಿಯಾರರ ಕಾರ್ಯಕುಶಲತೆ, ದೈವಭಕ್ತಿ, ಜೀವನಶೈಲಿಯೂ ಅಷ್ಟೇ ಅವರನ್ನು ಆಕರ್ಷಿಸಿತು. ಮೈಸೂರಿನ ಯುವರಾಜರು, ಮಿರ್ಜಾ ಸಾಹೇಬರು, ಗಾಯಕಿ ನಾಗರತ್ನಮ್ಮ, ನತ್ತಿ  ಶಾಸ್ತ್ರಿಗಳು, ಟಿ ಎಸ್ ವೆಂಕಣ್ಣಯ್ಯ, ಯಾರೋ ದಾಸರು, ಜಂಗಮರು ಒಬ್ಬರೇ ಇಬ್ಬರೇ? ನೂರಾರು ಮಂದಿಯ ಒಡನಾಟ. ಒಬ್ಬೊಬ್ಬರಲ್ಲೂ ಒಂದೊಂದು ವಿಶೇಷ . ಡಿ ವಿ ಜಿ ಯವರಿಗೆ ಪ್ರತಿಯೊಬ್ಬರೂ ಸಜ್ಜನರು, ಸ್ನೇಹಪರರು, ರಸಿಕರು. ಅದರಲ್ಲಿ ಅನೇಕರು ಅವರಿಗೆ “ಪ್ರಾತಃ ಸ್ಮರಣೀಯರು”.  

ತಮ್ಮ ಜೀವನದ ಮತ್ತು ಪರಿಚಯದ ವ್ಯಕ್ತಿಗಳ ಪರಿಚಯದೊಂದಿಗೆ, ತಾನೇತಾನಾಗಿ ಮೂಡಿಬಂದಿದೆ ಮುಕ್ಕಾಲು ಶತಮಾನದ ಹಿಂದಿನ ಬೆಂಗಳೂರಿನ ಚಿತ್ರ. ಕೋಟೆ, ಚಾಮರಾಜಪೇಟೆ, ಅವೆನ್ಯೂರಸ್ತೆ, ಚಿಕ್ಕಪೇಟೆ, ಬಳೇಪೇಟೆ, ಮಲ್ಲೇಶ್ವರ, ಬಸವನಗುಡಿಗಳಿಗೆ ಸೀಮಿತವಾಗಿದ್ದ  ಬೆಂಗಳೂರಿನ ವಿವರಣೆಯೊಂದಿಗೆ  ನಮಗೆ ಪರಿಚಿತವಾಗಿರುವ ನರಹರಿರಾಯರಗುಡ್ಡ, ಸಜ್ಜನರಾಯರ ದೇವಸ್ಥಾನ, ಪುಟ್ಟಣ್ಣಶೆಟ್ಟಿ ಟೌನಹಾಲ್ ಇಂತಹ ಸ್ಥಳಗಳ ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕಥೆಗಳು ಹಿತವೆನಿಸುತ್ತವೆ. ನಾನು  ಮತ್ತೆ  ಮತ್ತೆ  ಓದಬಯಸುವ ಕೆಲವು ಪುಸ್ತಕಗಳ ಪೈಕಿ ಮೊದಲನೆಯದು “ಸ್ಮೃತಿ ಚಿತ್ರಗಳು”.
    
ಇಲ್ಲಿಂದ ಮುಂದಿನದು  ಡಿ.ವಿ.ಜಿ ಯವರ ನಾಟಕಗಳು, ವಿಚಾರ ವಿಮರ್ಶೆ, ರಾಜ್ಯಶಾಸ್ತ್ರ, ಕಾವ್ಯ, ಜೀವನ ಧರ್ಮಯೋಗ ಮತ್ತು ಸಂಕೀರ್ಣ. ಇವು ನನಗೆಟುಗುವ ಎತ್ತರಕ್ಕೆ ನಾನಿನ್ನೂ ಬೆಳೆದಿಲ್ಲ. ದೇವರು, ಅಧ್ಯಾತ್ಮಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಆಸಕ್ತಿ ಬಂದಾಗ, ಜೀವನಧರ್ಮಯೋಗ, ಪುರುಷಸೂಕ್ತ, ಈಶೋಪನಿಷತ್ತುಗಳನ್ನು ಓದಲು ಯತ್ನಿಸಿದ್ದೇನೆ. ಜೀವನಧರ್ಮದ ಭೂಮಿಕೆಯಲ್ಲಿ ಡಿ.ವಿ.ಜಿ ಯವರು ಅದರ ವ್ಯಾಸಂಗಕ್ಕೆ ಇರಬೇಕಾದ ಪೂರ್ವ ಸಿಧ್ಧತೆಯನ್ನು ತಿಳಿಸುತ್ತಾರೆ. “ಗೀತೆಯವಿಷಯ ಗಹನವಾದದ್ದು, ಸೂಕ್ಷ್ಮವಾದದ್ದು, ತೊಡಕು ತೊಡಕಾದದ್ದು. ಆತುರ ಇಲ್ಲಿ ಸಲ್ಲದ್ದು. ಮನಸ್ಸಮಾಧಾನ, ಸಾವಧಾನ - ಈ ಎರಡೂ ಗೀತಾಭ್ಯಾಸಕ್ಕೆ ಮೊದಲು ಇರಬೇಕಾದ ಗುಣಗಳು.” ನನಗೆ ಅವೆರಡೂ ಗುಣಗಳೂ ಇನ್ನೂ ಸಿದ್ಧಿಸಿಲ್ಲವೆಂದು  ನನ್ನ ನಂಬಿಕೆ.

ಆದರೆ ಡಿ.ವಿ.ಜಿ ಯವರ ಎತ್ತರವನ್ನು ತಿಳಿದುಕೊಳ್ಳಲು ಅಲ್ಲಲ್ಲಿ ಪುಟಗಳಮೇಲೆ ಕಣ್ಣಾಡಿಸಿದರೆ ಸಾಕು. ಭಗವದ್ಗೀತಾ ತಾತ್ಪರ್ಯದ ವಿವರಣೆ ಹಾಗೂ ಅದರ ಭಾಷೆ, ಅವರ ತತ್ವ ಜ್ಞಾನದ  ಮತ್ತು ಭಾಷಾಪಾಂಡಿತ್ಯದ ಪ್ರೌಢಿಮೆಯನ್ನು ತೋರಿಸಿಕೊಡುತ್ತವೆ.  ಅವರು ಉದಾಹರಿಸಿರುವ ನೂರಾರು ಸಂಸ್ಕೃತ ಶ್ಲೋಕಗಳು ಅವರ ಸಂಸ್ಕೃತ ಪಾಂಡಿತ್ಯದ ವಿಸ್ತಾರವನ್ನು ಕಾಣಿಸುತ್ತವೆ. ಆ ಜ್ಞಾನ ಪರ್ವತವನ್ನು ನಾವು ಹತ್ತುವುದು ಒತ್ತಟ್ಟಿಗಿರಲಿ ದೂರದಿಂದ ಅದರ ಶಿಖರವನ್ನಾದರೂ ಕಂಡರೆ ನಮ್ಮ ಜೀವನ ಸಾರ್ಥಕವಾದೀತು.

ನನ್ನಂಥವನೂ ಸಹ  ಕೊಂಚಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಗುವಂಥ ಸಣ್ಣ ಕೃತಿಗಳು, ದೇವರು, ಈಶೋಪನಿಷತ್ತು, ಮತ್ತು ಪುರುಷಸೂಕ್ತ. ವೇದಾಂತ, ಆಧ್ಯಾತ್ಮ, ತತ್ವ, ಜ್ಞಾನ, ಕರ್ಮಗಳ ಬಗೆಗೆ ನಂಬಿಕೆಯಿಟ್ಟು, ಚಿಂತನೆಮಾಡಿ, ಅವುಗಳ ಪಾಲನೆ ಜೀವನಕ್ಕೆ ಬಹು ಮುಖ್ಯವೆಂದು ಪ್ರತಿಪಾದಿಸುವ ಡಿ ವಿ ಜಿ ಯವರ ಕೊನೆಯಮಾತೇನು ಗೊತ್ತೇ? ? ಈ ಜ್ಞಾನ ತತ್ವಗಳ ಬಗೆಗಿನ ನಂಬಿಕೆ, ಅಭ್ಯಾಸ, ಆಚರಣೆಗಳು ನಮ್ಮನ್ನೊಬ್ಬ ಸತ್ಪ್ರಜೆಯನ್ನಾಗಿಸದಿದ್ದರೆ ಅವೆಲ್ಲ ಅರ್ಥವಿಲ್ಲದ ಆಚರಣೆಗಳು ಮಾತ್ರ ಎಂದು.  ಡಿ.ವಿ.ಜಿ ಯವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುವಂತಹ, ಈ ರೀತಿ ಅರ್ಥಬರುವ ವಾಕ್ಯವನ್ನು ಬಹುಶಃ ಪುರುಷಸೂಕ್ತದ ಮುನ್ನುಡಿಯಲ್ಲಿ ನೋಡಿದ ನೆನಪು. ಡಿ.ವಿ.ಜಿ ಯವರ ಚಿಂತನೆಯಲ್ಲಿ ಮೊದಲ ಸ್ಥಾನ ಪ್ರತಿಯೊಬ್ಬನೂ ತನ್ನ ಸಮಾಜದ ಕಟ್ಟುಪಾಡುಗಳಿಗೆ, ಆಯಾಕಾಲದ ಧರ್ಮ - ಕರ್ಮಗಳಿಗೆ ಬದ್ಧನಾಗಿ, ತನ್ನಿಂದ ಸಮಾಜದ ಸ್ಥಿತಿ ಮತ್ತಷ್ಟು ಉತ್ತಮಗೊಳ್ಳುವ ರೀತಿಯಲ್ಲಿ ಬದುಕಬೇಕೆಂದು.

ತಾವು  ಆ  ರೀತಿ ಬದುಕಿ ಅವರು ನಮಗೆ ಉದಾಹರಣೆಯಾದರು. ನಾವು ಅವರ ಲೇಖನ, ಕಾವ್ಯ, ಕಗ್ಗಗಳನ್ನು ಮೆಚ್ಚಿ ಮಾತನಾಡುತ್ತಾ ನಡವಳಿಕೆಯಲ್ಲಿ ಮಾತ್ರ ಅವರ ಸೂಚನೆಗೆ ವಿರುದ್ಧವಾಗಿ ಸಾಗುತ್ತಿದ್ದೇವೆ. ತಮ್ಮ ಮಾತುಗಳಿಂದ ನಮ್ಮ ಸಮಾಜದ ಬುದ್ಧಿ ಹೆಚ್ಚೇನೂ ಬದಲಾಗದೆಂದೂ ಅವರಿಗೆ ತಿಳಿದಿತ್ತು! ಆದ್ದರಿಂದಲೇ ಅವರು ಹೇಳಿದ್ದು

ಕೃತ್ರಿಮವೊ ಜಗವೆಲ್ಲ ಸತ್ಯತೆಯದೆಲ್ಲಿಹುದೋ ।
ಕತೃವೆನಿಸಿದನೆ ತಾನ್ ಗುಪ್ತನಾಗಿಹನು ।।
ಚತ್ರವೀ ಜಗವಿದರೊಳಾರ ಗುಣವೆಂತಹದೋ ।

ಯಾತ್ರಿಕನೆ ಜಾಗರಿರೊ - ಮಂಕುತಿಮ್ಮ ।। (22)                     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ