ಶನಿವಾರ, ಏಪ್ರಿಲ್ 25, 2020

ನಾನು ಬರೆಯುವುದು ಹೀಗೆ



ಲೇಖಕ ಅಥವಾ ಕವಿ ಎಂಬ ಯಾವ ನಾಮವನ್ನೂ ಹೊಂದುವ ಅರ್ಹತೆ ನನಗಿಲ್ಲವಾದರೂ, ನಾನೂ
ನಾಲ್ಕಾರು ಲೇಖನಗಳನ್ನು ಹಾಗೂ ಚುಟುಕ, ಕವನಗಳನ್ನು ಬರೆಯುವ ಪ್ರಯತ್ನ ಮಾಡಿರುವುದುಂಟು.
ಯಾವುದೊ ಒಂದು ಘಟನೆ ಅಥವಾ ಒಂದು ಚಿಂತನೆ, ಮನಸ್ಸನ್ನು  ಪ್ರಚೋದಿಸಿ, ಒಂದೆರಡು ಶಬ್ದಗಳನ್ನೋ,
ಸಾಲುಗಳನ್ನೋ ಮೂಡಿಸುತ್ತದೆ.  ಹಾಗೆ ಪ್ರಭಾವಿತವಾಗಿ ಮೂಡಿದ ಪದಗಳು/ ಸಾಲುಗಳನ್ನು ಮನದಲ್ಲಿ
ಉಳಿಸಿಟ್ಟುಕೊಂಡು ಅದರಬಗ್ಗೆ ಚಿಂತಿಸಿ ಬೆಳಸಿದರೆ  ಅದು ಒಂದು ಬರಹವಾಗಿ ರೂಪತಾಳುತ್ತದೆ. 

ನಾನು ಬರೆದಿರುವ ಬಹುತೇಕ ಬರಹಗಳಿಗೆ ಬೇಕಾದ ಅಂತಹ ಪ್ರಚೋದನೆಯ ಕಿಡಿ ನನ್ನ ಮನಸ್ಸಿಗೆ
ತಗುಲಿರುವುದು ನಾನು ಮುಂಜಾನೆ ವಾಯುಸಂಚಾರಕ್ಕೆ ಹೊರಬಿದ್ದಾಗ.  ನನ್ನ ವಾಯುಸಂಚಾರದ ವೇಳೆ
ಸಾಮಾನ್ಯವಾಗಿ ಮುಂಜಾನೆ ಐದುಘಂಟೆಯಿಂದ ಆರು ಅಥವಾ ಆರೂವರೆಯವರೆಗೆ. ಅದು ನನಗೆ ಬಹಳ
ಪ್ರಿಯವಾದ ಸಮಯ. ನಾನಿರುವುದು ಸಣ್ಣ ಶಹರವಾದ್ದರಿಂದ ಆಹೊತ್ತಿಗೆ ರಸ್ತೆ ಪೂರ್ಣ ಖಾಲಿಯೇ ಇರುತ್ತದೆ.
ಹವೆ ತಂಪಾಗಿರುತ್ತದೆ. ಮಳೆಗಾಲವಾದರೆ, ಮಳೆಬೀಳುತ್ತಿದ್ದರೂ ನನ್ನ ವಾಕಿಂಗ್ ತಪ್ಪುವುದಿಲ್ಲ. ಕೊಡೆಯನ್ನೂ
ಹಿಡಿಯದೇ ನೆನೆಯುತ್ತಲೇ ನಡೆಯುವುದು ನನ್ನ ಅಭ್ಯಾಸ. ನನ್ನ ಸಂಚಾರಕ್ಕೆ ಕಂಟಕವೆಂದರೆ ಬೀದಿನಾಯಿಗಳು
ಮಾತ್ರ. ಬೀಸುವಬಲವಿಲ್ಲದಿದ್ದರೂ ಕೈಯಲ್ಲೊಂದು ಬಡಿಗೆ ಹಿಡಿದು, ಅದನ್ನು  ನಾಯಿಗಳಿಗೆ ತೋರಿಸುತ್ತಾ,
ಅವು ಮೇಲೆ ಹಾರದಿರಲೆಂದು ಬೇಡುತ್ತಾ, ಅರೆಗತ್ತಲಿನಲ್ಲಿ ನಾನು ನಡೆದುಬಿಡುತ್ತೇನೆ. ನನ್ನ ಬಾಯಿಂದ
ಸಹಸ್ರನಾಮವೋ, ದಾಸರಪದವೋ, ಮತ್ಯಾವುದೋ ಸ್ತೋತ್ರವೋ ಹೊರಬೀಳುತ್ತಿರುತ್ತದೆ. ನನಗೆ
ಹಾದಿಯಲ್ಲಿ ಪ್ರತಿದಿನ ಸಿಕ್ಕುವ ಕೆಲವರಿಗೆ ಆ ನೋಟ ಅಭ್ಯಾಸವಾಗಿದೆ. ಹೊಸಬರು ಯಾರಾದರೂ
ಎದುರಾದರೆ  ಅದೇನನ್ನೋ  ಮಣಮಣಿಸುತ್ತ, ಮಳೆಯಲ್ಲಿ  ನೆನೆಯುತ್ತಾ , ಕೊಲುಬೀಸುತ್ತ ನಡೆಯುವ ಈ
ಅರೆಹುಚ್ಚನನ್ನು ಮತ್ತೆ ಮತ್ತೆ ಹಿಂತಿರುಗಿ  ನೋಡುತ್ತಾ  ಮುಂದುವರೆಯುತ್ತಾರೆ. 

ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ ಇದು ಹೆಚ್ಚು ಕಡಿಮೆ ನನ್ನ ಎಲ್ಲ ಬರಹಗಳು ಉದಯವಾಗುವ ಸಂಧರ್ಭ.
ಸಾಲುಗಳು ಮೂಡಿದೊಡನೆ, ಅವುಗಳನ್ನು ಮರೆಯದೆ ಹಿಡಿದಿಟ್ಟುಕೊಳ್ಳಲೋಸುಗ, ಸ್ತೋತ್ರ, ಸಹಸ್ರನಾಮವನ್ನು
ಕೈಬಿಟ್ಟು ಅದನ್ನೇ ಮರಳಿ ಮರಳಿ ಹೇಳಿಕೊಳ್ಳುತ್ತಾ ಬೇಗ ಬೇಗನೆ ಮನೆಗೆ ಬಂದು, ಕೈಗೆ ಸಿಕ್ಕಿದ ಕಾಗದದ
ಮೇಲೆ ಗೀಚಿಬಿಡುತ್ತೇನೆ. ಏನನ್ನೋ ಸಾಧಿಸಿದವನಂತೆ ನಿಟ್ಟುಸಿರು ಬಿಡುತ್ತೇನೆ. ಅನೇಕ ಬಾರಿ ಹೀಗೆ
ಹೊಳೆದದ್ದನ್ನು ನಂತರ ಬರೆದರಾಯಿತೆಂದು ಪಕ್ಕಕ್ಕಿಟ್ಟು,   ಅದು ಮತ್ತೆ ಬುದ್ಧಿಗೆ ಸಿಲುಕದೇ ಪರಿತಪಿಸಿದ್ದೇನೆ.  

ಹೀಗೊಮ್ಮೆ ಒಂದು ಪ್ರಕ್ರಿಯೆ ಶುರುವಾದರೆ ಅದು ಒಂದು ಸ್ಥಿತಿಗೆ ತಲುಪುವವರೆಗೂ ಮನಸ್ಸಿಗೆ
ಸಮಾಧಾನವಿಲ್ಲ. ಸ್ನಾನದ ವೇಳೆ, ಪೂಜೆಯವೇಳೆ, ಉಪಾಹಾರದ ವೇಳೆ ಈ ಎಲ್ಲ ಸಮಯದಲ್ಲೂ 
ಗೀಚಿದ ಸಾಲುಗಳು ಮನದಲ್ಲೇ ಸುಳಿಯುತ್ತಿದ್ದು, ಬೆಳೆದು, ಬದಲಾಗುತ್ತಿರುತ್ತವೆ. ಹೊಳೆದದ್ದನ್ನು ಆಗಿಂದಾಗ್ಗೆ 
ಕಾಗದದ ತುಣುಕಿನ ಮೇಲಿನ ಸಾಲುಗಳ ಮಧ್ಯ ತುರುಕಿಟ್ಟು, ಕೊಂಚ ಸಮಯ ಸಿಕ್ಕಾಗ ಬರೆದದ್ದನ್ನೆಲ್ಲಾ 
ಗಣಕಯಂತ್ರದಲ್ಲಿ ನುಸುಳಿಸಿಬಿಟ್ಟರೆ, ಎರಡನೇ ಹಂತ ಮುಗಿಯಿತು. 

ನಂತರ, ದಿನನಿತ್ಯ ಕ್ಲಿನಿಕ್ಕಿನಲ್ಲಿ ಕೂತು ಯಾರಾದರೂ ಅನ್ನದಾತರು ಬರಲೆಂದು ಪ್ರಾರ್ಥಿಸುವ ನಾನು,
ಬರಹದಲ್ಲಿ ತೊಡಗಿಕೊಂಡಾಗ ಯಾರೂ  ಬರದಿರಲೆಂದು ಬೇಡುತ್ತೇನೆ.  ಕೆಲವುಬಾರಿ ಚಿಕಿತ್ಸೆಯಲ್ಲಿ
ನಡೆಸುತ್ತಿರುವಾಗಲೂ  ಮಧ್ಯೆ ಮಧ್ಯೆ ಕೈತೊಳೆದುಬಂದು ಒಂದೆರಡು ಸಾಲು ಅಚ್ಚುಮಾಡುವುದು,
ಅಳಿಸಿ ಬರೆಯುವುದು ನಡೆಯುತ್ತಿರುತ್ತದೆ. ಮನದಲ್ಲಿ ನಕ್ಷೆಯಾಗಿದ್ದ ಬರಹ ಪೂರ್ಣವಾಯಿತೆನಿದಮೇಲೆ
ಮನಸ್ಸು ನಿರಾಳವಾಗುತ್ತದೆ. ಮೂರನೇ ಹಂತ. 

ಅಲ್ಲಿಗೆ ತಲುಪಿದಮೇಲೆ, ಮನದಲ್ಲಿ ಮೂಡಿದ್ದ ಸಾಲುಗಳು ಎಲ್ಲಿಯೂ ಹಾರಿಬಿಡುಬಿಡುವುದಿಲ್ಲವೆಂದು
ಖಚಿತವಾದ ನಂತರ, ಕೊಂಚ ವಿರಾಮವಾಗಿ ಬರಹವನ್ನು ಪರಿಷ್ಕರಿಸುವ ಕಾರ್ಯ ಶುರುವಾಗುತ್ತದೆ. 
ಕಾಗದದಮೇಲೆ, ಹಾಳೆಯ ಒಂದೇಪಕ್ಕದಲ್ಲಿ, ಸಾಲುಗಳ ನಡುವೆ ಅಂತರವಿಟ್ಟು ಬರೆಯುತ್ತಿದ್ದ ಕಾಲದಲ್ಲಿ,
ಒಮ್ಮೆ ಬರೆದದ್ದನ್ನು ಬದಲಾಯಿಸುವ ಕೆಲಸ ಬಹಳ ತಲೆನೋವಿನದಾಗಿತ್ತು. ಈಗ ಗಣಕ ಯಂತ್ರದಮೇಲೆ
ನೂರುಬಾರಿ ಬೇಕಾದರೂ ಬರೆದದ್ದನ್ನು ಅಳಿಸಿ ಮತ್ತೆ ಬರೆಯಬಹುದು. ವಾಕ್ಯಗಳನ್ನು ಹಿಂದೆಮುಂದೆ
ಮಾಡಬಹುದು. ಅಳಿಸಿದ್ದನ್ನು ಉಳಿಸಿಟ್ಟುಕೊಂಡು ಮತ್ತೆ ಉಪಯೋಗಿಸಬಹುದು. ಬುಧ್ಧಿಯ ಕೆಲಸ
ಕಡಿಮೆಯಾಗಿಲ್ಲವಾದರೂ, ಕೈಕೆಲಸ ಬಹಳಸುಲಭವಾಗಿದೆ. 

ಕೆಲವು ಬರಹಗಳು ಈ ಸ್ಥಿತಿ ತಲುಪಿದನಂತರವೂ  ಅವುಗಳ ಪೂರ್ಣರೂಪ ಮನಸ್ಸಿಗೆ ಹಿಡಿಸದೆ, ತಿಂಗಳು,
ವರುಷಗಳ ಕಾಲ, ಮಾನಿಟರಿನ ಒಂದುಮೂಲೆಯಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಕೆಲವು, ಅಲ್ಲಿಂದ
ನೇರವಾಗಿ ‘ಟ್ರಾಶ್ ಬಿನ್’ ಸೇರುತ್ತವೆ. ಉಳಿದವು ಅಲ್ಲಿ ಕೆತ್ತಿ, ಇಲ್ಲಿ ಮೆತ್ತಿ ಆದಮೇಲೆ ಮತ್ತೊಬ್ಬರ
ಮುಂದಿಡುವ ಸ್ಥಿತಿಗೆ ತಲುಪುತ್ತವೆ. 

ನಾನು ಹೀಗೆ ಪರಿಷ್ಕರಣೆಯ ಕೆಲಸ ಮಾಡುವಾಗೆಲ್ಲಾ  ಶ್ರೀ ಆರ. ಕೆ . ನಾರಾಯಣರ ಲೇಖನ ಮನಸ್ಸಿಗೆ
ಬರುತ್ತದೆ. ಅವರು ಎರಡು ಮೂರುಪುಟ ಒಮ್ಮೆಗೇ ಬರೆದುಬಿಡುತ್ತಿದ್ದರಂತೆ. ನಂತರ ಪರಿಷ್ಕರಣೆ ಪ್ರಾರಂಭ.
ಬರೆದ ಸಾಲುಗಳ ಮಧ್ಯೆ ಹೊಸ ಸಾಲುಗಳನ್ನು ಸೇರಿಸಿ, ಬರೆದದ್ದನ್ನು, ಅಳಿಸಿ, ಮತ್ತೆ ಬರೆದು, ಕೊನೆಯಲ್ಲಿ
ಪೂರ್ಣವಾದ ಲೇಖನವು, ಪರಿಷ್ಕರಣೆಯ ಸಮಯದಲ್ಲಿ ಸಾಲುಗಳ ಮಧ್ಯ ಸೇರಿದ ಹೊಸ ಸಾಲುಗಳನ್ನು 
ಮಾತ್ರ ಒಳಗೊಂಡಿದ್ದು, ಮೂಲಬರಹವೆ ನಾಪತ್ತೆಯಾಗಿರುತ್ತಿತ್ತಂತೆ !


ಆ ಮಹಾನುಭಾವರೊಂದಿಗೆ ಹೋಲಿಸಿಕೊಳ್ಳುವುದು ಅಪಚಾರವಾದರೂ, ನನ್ನ ಕೆಲವು ಬರಹಗಳೂ ಹಾಗೆಯೇ
ಆಗಿ ಕೊನೆಗೆ ಅವನ್ನು ಯಾರ ಮುಂದೆಯಾದರೂ  ತಂದಿಡಬಹುದೆಂಬ ರೂಪಕ್ಕೆ ಬರುತ್ತವೆ.  ನನಗೋಸ್ಕರ
ನಾನು ಬರೆಯುವುದೆಂದರೂ, ಬರೆದದ್ದನ್ನು ಮತ್ಯಾರಾದರೂ ಓದಿ ‘ಚೆನ್ನ’ ವೆಂದರೆ ಮನಸ್ಸಿಗೆ ಒಂದು ಸಾರ್ಥಕ
ಭಾವ ಬರುತ್ತದೆ. ಹಿಂದೆ ಹಾಗಾಗಲು ಬರಹಗಳನ್ನು  ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಣೆಗೆ ಕಳಿಸಿ,
ಅದು ಅಚ್ಚಾಗುವುದನ್ನು ಕಾಯಬೇಕಿತ್ತು.  ಈಗ ಬರೆದದ್ದನ್ನು ನೇರವಾಗಿ ಓದುಗರ ಮುಂದಿಟ್ಟು, ಅದನ್ನು
ಯಾರಾದರೂ ಓದಿ ಮೆಚ್ಚಿದರೆ ಸಂತೋಷಪಡಬಹುದು. ಆ ಆನಂದಕ್ಕಾಗಿ  ತಿಂಗಳು ತಿಂಗಳ ಕಾಲ ಕಾಯಬೇಕಿಲ್ಲ. 
ಇಷ್ಟಾಗಿಯೂ ಈಗ ಬಹಳದಿನಗಳಿಂದ ಏನೂ ಬರೆದಿರಲಿಲ್ಲ. ಶ್ರೀ ಹೆಗಡೆಯವರ ಲೇಖನ ಮತ್ತು ಅದಕ್ಕೆ
ಪ್ರತಿಕ್ರಿಯೆಗಾಗಿ ಬಂದ ಆಹ್ವಾನ ಈ ನಾಲ್ಕುಸಾಲಿನ  ಬರವಣಿಗೆಗೆ ಅನುವುಮಾಡಿಕೊಟ್ಟಿತು. 

ಶುಕ್ರವಾರ, ಏಪ್ರಿಲ್ 24, 2020

Grihapraveshada Udugore - Nissar Ahmad

ವರ್ಷಗಳ ಹಿಂದೆ ನಮ್ಮ ಗೃಹಪ್ರವೇಶದ ದಿವಸ
ಕನಿಷ್ಟರು ವರಿಷ್ಟರು ಎಂಬ ಫರಕಿಲ್ಲದೆ ನಂಟರಿಷ್ಟರು
ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು
ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು
ಕರೆಯೋಲೆಯಲ್ಲಿ ಬೇಡವೆನ್ದಿದ್ದರೂ
ಕಣ್ಣುಕುಕ್ಕುವ ರಂಗುರಂಗಿನ ಪ್ಯಾಕೆಟ್ಟುಗಳಸಲ್ವಾರ್ ಕಮೀಜ್ ತೊಟ್ಟು
ಸೂಚಿಸದೆ ಲವಲೇಶವೂ ಗುಟ್ಟು
ಮರೆಮಾಚಿದ ಮಿಠಾಯಿ, ಪುಷ್ಪಗುಚ್ಛ, ಕಪ್ಪು ಸಾಸರ್ ಸೆಟ್ಟು
ಗಡಿಯಾರ ಬಟ್ಟೆಬರೆ
ತಂದಿತ್ತರು ಇನ್ನು ಏನೇನೋ ಪ್ರೀತಿಯುಡುಗೊರೆ

ಮಾರನೆಯ ದಿನ ಮಿಠಾಯಿಯ ಆಯುಷ್ಯ
ಮುಗಿದಿತ್ತು ಬಾಯಿಗಳ ಬೇಟೆಗೆ
ಅದರ ಮರುದಿನ ಬಸವಳಿದ ಹೂವಿನ ಬುಕೆ
ಕಾಲಕ್ರಮೇಣ ಒಡೆದ ಕಪ್ಪು ಬಸಿಗಳ ಚಕ್ಕೆ
ಪಾವ್ತಿಯಾದವು ಬೀದಿ ತೊಟ್ಟಿಯ ಹರಿಶ್ಚಂದ್ರ ಘಾಟಿಗೆ

ಗಡಿಯಾರ ಗತಿಗೆಟ್ಟು ಉಪೇಕ್ಷೆಗೊಳಗಾಗಿ
ವಸ್ತ್ರ ಹರಿದು ನಿರುಪಯೋಗಿ
ವರ್ಗವಾದವು ಹಿನ್ಮನೆಯ ಹೆಳವ ಕಪಾಟಿಗೆ
ಇದೆತರಹ
ಇನ್ನಿತರ ಕಾಣಿಕೆಗಳ ಕಥೆ ಸಹ.

ಅಷ್ಟೇನೂ ಗುರುತಿಲ್ಲದ ನನ್ನ ಕವನಾಭಿಮಾನಿಯೋರ್ವ
ಬೆಲೆಕೊಟ್ಟು ಕೊಳ್ಳದ, ಎಂದೇ ಬೆಲೆಕಟ್ಟಲಾಗದ ಅಪೂರ್ವ
ಉಡುಗೊರೆಯೊಂದ ಅಂಜುತ್ತಲೇ ಕೊಟ್ಟ
ಕಾಗದದ ವರ್ನರನ್ಜಿತತೆಯಿಂದ ಅದಗಿಸಿಡದೆ ಒಳ ಗುಟ್ಟ
ಅರ್ಥಾತ್ ನಿತ್ಯಮಲ್ಲಿಗೆ ಹಮ್ಬಿನೊಂದು ಕಡ್ಡಿಯ ತಂದು ಗೇಟ ಬಳಿ ನೆಟ್ಟ.

ಇಂದಿಗೂ ಒಳಹೊರಗೆ ಹಿತಮಿತ ಗಮಗಮ
ವಿದೇಶಿ ಅತ್ತರಿಗೆ ಸಮ
ನೋಟಕ್ಕೆ ಹಬ್ಬದ ಊಟ ಚಿಕ್ಕೆ ಹೂ ಹೊರೆ
ಅವನೀಗ ಆಗಿದ್ದರು ಕಣ್ಮರೆ.