ನನಗೆ ಪ್ರತಿಮಂಜಾನೆ ವಾಕಿಂಗ್ ಅಭ್ಯಾಸ. ಆ ‘ಅಭ್ಯಾಸ’ ಬರಬರುತ್ತಾ ‘ಚಟ’ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ನಮ್ಮೂರೋ ಪರವೂರೋ, ಚಳಿಯೋ ಮಳೆಯೋ ಲೆಕ್ಕಿಸದೆ ಬೆಳಗಾದಂತೆಯೇ ಹೊರಬೀಳುವುದೇ. ತೊಂದರೆ ಏನೆಂದರೆ, ಬೆಳಕಾಗುವ ಮುಂಚೆ ಹೊರಹೊರಟರೆ ನಾಯಿಕಾಟ. ಬೆಳಕಾದನಂತರ ವಾಹನಗಳಕಾಟ. ಏನುಮಾಡುವುದು? ಎರಡರಲ್ಲೊಂದನ್ನು ಸಹಿಸಿಕೊಳ್ಳಬೇಕು. ಇಂದು ಮುಂಜಾನೆ ನಾಯಿಕಾಟಕ್ಕೆ ತಯಾರಾಗಿ ಕೈಯಲ್ಲೊಂದು ಕೊಲುಹಿಡಿದು, ಐದಕ್ಕೇ ಹೊರಹೊರಟೆ. ಅಮಾವಾಸ್ಯೆಯ ಕತ್ತಲು ಕತ್ತಲು. ಜಿನುಗುತ್ತಿದ್ದ ಮಳೆ. ತಂಪುಹವೆ. ಪರಿಸರ ಆಹ್ಲಾದಕರವಾಗಿತ್ತು.
ಕೊಂಚ ನಡೆದು ಊರಿನ ಹೊರವಲಯಕ್ಕೆ ತಲುಪುವ ಹೊತ್ತಿಗೆ ದೂರದ ಮಸೀದಿಯಿಂದ ಮುಂಜಾನೆಯ ಪ್ರಾರ್ಥನೆಯ ಕರೆ ಕೇಳತೊಡಗಿತು. ಅದೇಹೊತ್ತಿಗೆ ರಸ್ತೆಪಕ್ಕದಲ್ಲಿ ರಸ್ತೆಕೆಲಸದವರು ಹಾಕಿಕೊಂಡಿದ್ದ ಗುಡಿಸಲುಗಳಿಂದ ಬೆಳಗಿನ ಉಪಾಹಾರಕ್ಕೋ, ಮಧ್ಯಾಹ್ನದ ಬುತ್ತಿಗೋ, ಹೆಂಗಸರು ರೊಟ್ಟಿ ತಟ್ಟುವ ಶಬ್ದ ಶುರುವಾಯಿತು.
ಕೆಲಕಾಣಿಸುವ ಸಾಲುಗಳು ನನ್ನ ತಪ್ಪಲ್ಲ. ಆ ಪರಿಸರ ಹಾಗೂ ಶಬ್ದಗಳದ್ದು.
ದೂರದ ಮಸೀದಿಯ ಮುಲ್ಲಾನ
ಪ್ರಾರ್ಥನೆಯ ಕರೆಯ ಸಂಗೀತಕ್ಕೆ
ಪಕ್ಕದ ಜೋಪಡಿಯಲ್ಲಿ ಬುತ್ತಿಗೆ
ರೊಟ್ಟಿತಟ್ಟುತ್ತಿದ್ದ ಹೆಂಗಸಿನ ಕೈಗಳು
ತಾಳಹಾಕುತ್ತಿದ್ದವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ