ಶುಕ್ರವಾರ, ಡಿಸೆಂಬರ್ 18, 2020

ಜೀವನ ಧರ್ಮ ಯೋಗ

 


ನಾನು ಪ್ರೈಮರಿ ಎರಡನೇ ತರಗತಿಯಲ್ಲಿದ್ದಾಗ ಭಗವದ್ಗೀತೆ ಎಂಬ ಹೆಸರು ಕೇಳಿದ್ದು. ನಮ್ಮ ಶಾಲೆಯಲ್ಲಿ

ಪ್ರತಿ ಶುಕ್ರವಾರ ಕೊನೆಯ ತರಗತಿಯ ಅವಧಿಯಲ್ಲಿ ಭಗವದ್ಗೀತಾ ಪಠಣ. ಎರಡನೇ ಅಧ್ಯಾಯದ

“ಸ್ಥಿತಪ್ರಗ್ನ್ಯಸ್ಯ ಕಾ ಭಾಷಾ” ದಿಂದ ಪ್ರಾರಂಭವಾಗಿ ಕೊನೆಯವರೆಗೆ. ನಮ್ಮಿಂದ ಎಂಟಾಣೆಯೋ ಒಂದು

ರುಪಾಯಿಯೋ ತಗೆದುಕೊಂಡು ಅಂಗೈಯಲ್ಲಿ ಹಿಡಿಸುವ ಒಂದು ಕೈಹೊತ್ತಿಗೆಯನ್ನು ಎಲ್ಲರಿಗೂ ಕೊಟ್ಟಿದ್ದರು.

ನಾನು ಮೂರನೆಯ ತರಗತಿಗೆ ಬರುವಹೊತ್ತಿಗೆ ಅಷ್ಟೂ ಶ್ಲೋಕಗಳು ಬಾಯಿಪಾಠವಾಗಿದ್ದವು. ಐದನೇ

ತರಗತಿಯಲ್ಲಿದ್ದಾಗ ಅದನ್ನು ಸ್ಫರ್ಧೆಯಲ್ಲಿ ಒಪ್ಪಿಸಿ ಒಂದು ಸ್ಟೀಲಿನ ಚಮಚವನ್ನು ತೃತೀಯ ಬಹುಮಾನವಾಗಿ

ಪಡೆದಿದ್ದೆ. ಇಂದಿಗೂ ಶ್ಲೋಕಗಳು ನೆನಪಿನಲ್ಲಿವೆ. ಆ ಶ್ಲೋಕಗಳ  ಅರ್ಥ ತಿಳಿದುಕೊಳ್ಳಬೇಕೆನಿಸಿದ್ದು ಶಾಲೆಯಿಂದ

ಹೊರಬಿದ್ದ ಮೂವತ್ತು ವರುಷಗಳ ನಂತರ. ತಿಳಿದಿದೆಯೆಂದು ಈಗಲೂ ಹೇಳಲಾರೆ.  


ಭಗವದ್ಗೀತೆಯ ಕೀರ್ತಿ ಬಹು ದೊಡ್ಡದು. ‘ಯದಾ  ಯದಾ  ಹಿ ಧರ್ಮಸ್ಯ’, ‘ಕರ್ಮಣ್ಯೇವಾಧಿಕಾರಸ್ತೇ’,

‘ನಹಿ ಜ್ಞಾನೇನ ಸದೃಶಂ’ ಮುಂತಾದ ಸಾಲುಗಳು ಎಲ್ಲರ ನಾಲಗೆಯಮೇಲೂ ಸುಳಿದಾಡುತ್ತಿರುತ್ತವೆ.

ಆದರೆ ಅದನ್ನು ಪೂರ್ತಿ ಓದಿ, ಅರ್ಥಮಾಡಿಕೊಂಡು, ಅನುಸರಿಸಲು ಸಾಧ್ಯವಾಗಿರುವುದು ಎಷ್ಟುಜನರಿಗೋ

ತಿಳಿಯದು. ನಾನು ಗೀತೆಯನ್ನು ಮೊದಲಿನಿಂದ ಕೊನೆಯವರೆಗೂ ಓದಬೇಕೆಂದು ಅನೇಕಬಾರಿ ಪ್ರಾರಂಭಮಾಡಿ

ಎರಡನೇ ಅಧ್ಯಾಯಕ್ಕೆ ಕೊನೆಮಾಡಿದ್ದೆ. ಈ ಬಾರಿ ಐದನೆಯ ಅಧ್ಯಾಯವನ್ನು ತಲುಪಿದ್ದೇನೆ. ಕೃಷ್ಣಪರಮಾತ್ಮ

ಏನು ಹೇಳುತ್ತಿದ್ದಾನೆಂದು ತಿಳಿದಂತೆ ಅನಿಸುತ್ತದೆ. ಆದರೆ ಏನೂ ತಿಳಿದಿಲ್ಲವೆಂಬುದು ನಿಜ. ಆತ ಹೇಳುತ್ತಿರುವುದೂ

ಹಾಗೆಯೇ. ಇಂಗ್ಲಿಷಿನಲ್ಲಿ ‘beating around the bush’ ಎನ್ನುತ್ತಾರಲ್ಲವೇ ? ಹಾಗೆ. 


ಮೂರನೆಯ ಅಧ್ಯಾಯದಿಂದಲೂ ಅರ್ಜುನ ಕೇಳುತ್ತಲೇ ಇದ್ದಾನೆ. “ಸ್ವಾಮೀ, ಕರ್ಮಮಾರ್ಗ ಒಳ್ಳೆಯದೋ,

ಜ್ಞಾನಮಾರ್ಗವೋ? ಎರಡರಲ್ಲಿ ಒಂದನ್ನು ಖಚಿತವಾಗಿ ಹೇಳು” ಎಂದು. ಭಗವಂತ  ಅದೂ ಇದೂ ಇಪ್ಪತ್ತೆಂಟು

ಹೇಳುತ್ತಿದ್ದಾನೆಯೇ ಹೊರತು, ಖಚಿತವಾದ ಉತ್ತರ ಕೊಟ್ಟಿಲ್ಲ. ಇಂಥ ಸಮಯದಲ್ಲಿ ನಮಗೆ ಬೇಕಾಗುವುದು

ಗೀತೆಯ ಅಕ್ಷರಗಳ ಹಿಂದಿನ ಭಾವವನ್ನು ತಾವು ತಿಳಿದು, ನಮಗೆ ತಿಳಿಸಿ ಹೇಳಬಲ್ಲವರ ಸಹಾಯ. ಅವರ ಜ್ಞಾನ.

ಪರಿಣಿತಿ. ಹೀಗೆ ಹೇಳುವವರೂ, ಹೇಳಿರುವವರೂ ಅನೇಕರಿದ್ದಾರೆ. ಅವರ ನಂಬಿಕೆ, ತಿಳುವಳಿಕೆ, ವಿಚಾರಗಳಿಗೆ

ತಕ್ಕಂತೆ. ಆದರೆ ಹೇಳುವವರಲ್ಲಿ ನಮಗೆ ವಿಶ್ವಾಸ ಬೇಕಲ್ಲವೇ ? ಹಾಗೆ ನನಗೆ ವಿಶ್ವಾಸವಿರುವುದು ನಮ್ಮ ಡಿವಿಜಿ

ಯವರಲ್ಲಿ. ಆದ್ದರಿಂದಲೇ ಮತ್ತೊಮ್ಮೆ ‘ಜೀವನ ಧರ್ಮಯೋಗ’ದ ಪಠಣವೂ ನಡೆದಿದೆ.  


ಕೃಷ್ಣಪರಮಾತ್ಮನ ಮಾತುಗಳನ್ನು  ಡಿವಿಜಿಯವರು ಅರ್ಥಮಾಡಿಕೊಂಡು, ಅದರ ಬಗೆಗೆ ಚಿಂತನೆಮಾಡಿ ತಮ್ಮ

ವಿಚಾರವನ್ನು ನಮಗೆ ತಲುಪಿಸಿದ್ದಾರೆ. ಅರ್ಜುನನ ಪ್ರಶ್ನೆಗೆ ಡಿವಿಜಿಯವರ ಉತ್ತರ, “ಕರ್ಮ, ಜ್ಞಾನ ಗಳು ಎರಡು

ಬೇರೆ ಬೇರೆ ಮಾರ್ಗಗಳಲ್ಲ. ಮೊದಲಿಗೆ ಕರ್ಮ ಜ್ಞಾನಕ್ಕೆ ಸಾಧನವಾಗಿರುತ್ತದೆ. ನಂತರ ಅದು ಜ್ಞಾನದ

ಫಲಿತಾಂಶವಾಗುತ್ತದೆ.  ಎರಡರ ಗುರಿಯೂ ಒಂದೇ”. ನನಗೆ ಕೊಂಚ ಸಮಾಧಾನವಾಯಿತು. ಸರಿ, ಹಾಗಾದರೆ 

ಯಾವುದನ್ನು ನಾವು ‘ಕರ್ಮ’ ಎನ್ನಬೇಕು? ಅದು ಮುಂದಿನ ಪ್ರಶ್ನೆ ! 


“ನಮ್ಮ ಪೂರ್ವಿಕರ ದೃಷ್ಟಿಯಲ್ಲಿ ಭಗವದ್ಗೀತೆ ಮೋಕ್ಷಶಾಸ್ತ್ರ. ಅವರ ಮನಸ್ಸು ಪಾರತ್ರಿಕ ಗತಿಯನ್ನು ಹೆಚ್ಚಾಗಿ

ಚಿಂತಿಸುತ್ತಿತ್ತು. ಇಂದಿನ ನಾವು ಹೊರಬೇಕಾಗಿರುವ ಹೊರೆ ಇಹ ಜೀವನದ್ದು. ಅನ್ನವಸ್ತ್ರ ಸಂಪಾದನೆ,

ಉದ್ಯೋಗಾವಕಾಶ, ಹೇಳೋಣ ಕೇಳೋಣಗಳು, ಸಾಲಸುಲಿಗೆಗಳು, ಎಡೆಬಿಡದ ದುಡಿತ, ಬಿಡುವಿಲ್ಲದ

ಹಾರಾಟ, ಆಚಾರ ಕ್ಲೇಶ, ವಿಮತ ಘರ್ಷಣೆ, ವರ್ಣ ಸಾಂಕರ್ಯ - ಈ ಅನಂತ ಚಿಂತನೆಗಳು ನಮ್ಮ ಪಾಡು.

ಅದರ ನಡುವೆ ಮೋಕ್ಷವಿಚಾರಕ್ಕೆ ಅವಧಾನವೆಲ್ಲಿ ? ಅಂದಂದಿನ ಸಂಸಾರಭಾರ ಅಂದಂದಿಗೆ ಸಾಕಾಗಿದೆ.

ಇಂಥಾದ್ದರಲ್ಲಿ ಗೀತೆ ನಮ್ಮ ಸಹಾಯಕ್ಕೆ ಬಂದಿತೋ ? ಹಾಗಾಗುವುದಾದರೆ ಅದಕ್ಕೊಂದು ಬೆಲೆಯುಂಟು.

ನಾವು ನಿರೀಕ್ಷಿಸುವುದು ಈ ಉಪಕಾರವನ್ನು.” - ಇದು ಜೀವನ ಧರ್ಮಯೋಗದ ಶುರುವಿನಲ್ಲಿ ಡಿವಿಜಿಯವರ

ಮಾತು. 


ಅವರ ಈ ಬರಹದಲ್ಲಿ ನಮ್ಮ ಜೀವನಕ್ಕೆ ಸಹಾಯಕವಾದ, ನೆಮ್ಮದಿ ನೀಡುವಂಥ ಮಾತುಗಳನ್ನು ನಮಗೆ

ನೀಡಿದ್ದಾರೆ. ಡಿವಿಜಿಯವರು ಹೇಳುವಂತೆ ಗೀತೆ, ಅವರವರ ಯೋಗ್ಯತೆ, ಕ್ಷಮತೆ, ಅನುಭವಗಳಿಗೆ ತಕ್ಕಂತೆ

ಅವರವರಿಗೆ ಅರ್ಥವಾಗುವ ಸಂದೇಶ. ನನ್ನ ತಿಳುವಳಿಕೆಗೆ ತಕ್ಕಂತೆ ನನ್ನ ಮಾತು, ಬರಹ. ನನ್ನ ವ್ಯಾಸಂಗ

ಮುಂದುವರೆದರೆ, ಹಂಚಿಕೊಳ್ಳುವಂಥ ವಿಚಾರಗಳು ಕೈಗೆಟುಕಿದರೆ  ಮತ್ತೆ ಬರೆಯುತ್ತೇನೆ.ನಮಸ್ಕಾರ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ