ಶ್ರೀ ಡಿ ವಿ ಜಿ ಯವರ ‘ಸ್ಮೃತಿ ಚಿತ್ರ’ ಗಳನ್ನು ನಾಲ್ಕನೆಯ ಬಾರಿಯೋ ಆರನೆಯ ಬಾರಿಯೋ ಓದುತ್ತಿದ್ದೇನೆ.
ಪಿ ಜಿ ವೋಡ್ ಹೌಸ್, ಜಿಮ್ ಕಾರ್ಬೆಟ್, ಜೇಮ್ಸ್ ಹೆರಿಯಟ್, ಗೊರೂರು, ಕಾರಂತರು, ಕೈಲಾಸಂ ಇವರ
ಕೆಲವು ಪುಸ್ತಕಗಳು ಸದಾ ನನಗೆ ‘ಬ್ಯಾಕ್ಅಪ್’ ಪುಸ್ತಕಗಳು. ಬೇರೇನೂ ಓದಲು ಸಿಗದಿದ್ದಾಗ ತೆಗೆಯುವುದಕ್ಕೆ.
ಡಿವಿಜಿಯವರ ಸ್ಮೃತಿ ಚಿತ್ರಗಳು ಈ ಪುಸ್ತಕಗಳ ಸಾಲಿನ ಮುಂಚೂಣಿಯಲ್ಲಿದೆ.
ತಮ್ಮ ನೆನಪಿನ ಆಳದಿಂದ ಡಿವಿಜಿ ಯವರು ಹೊರತೆರೆದಿರುವ ಕಾಲದ, ವ್ಯಕ್ತಿಗಳ ಚಿತ್ರಣವನ್ನು ಪದೇ ಪದೇ ಓದಿ
ಸಂತೋಷಿಸುತ್ತೇನೆ. ಆ ದಿನಗಳು, ಆ ಜನಗಳು ಹೋದವಲ್ಲಾ ಎಂದು ವ್ಯಥೆಪಡುತ್ತೇನೆ. ಡಿವಿಜಿಯವರು
ಚಿತ್ರಿಸಿರುವ ವ್ಯಕ್ತಿಗಳೆಲ್ಲರೂ ಅವರ ದೃಷ್ಟಿಯಲ್ಲಿ ಗಣ್ಯರು, ಸಭ್ಯರು, ರಸಿಕರು, ಸರಳರು, ಪೂಜ್ಯರು, ಪ್ರಾತಃ
ಸ್ಮರಣೀಯರು. ಡಿವಿಜಿ ಯವರ ಈ ಬರಹ ಯಾವುದೇ ವ್ಯಕ್ತಿಯ ಗುಣಾವಗುಣಗಳ ವಿಶ್ಲೇಷಣೆಯಲ್ಲ. ಇದು
ಅವರೆಲ್ಲರ ಸದ್ಗುಣಗಳ ಪರಿಚಯ. ರಂಜನೀಯ ವ್ಯಕ್ತಿತ್ವದ ಅವಲೋಕನ.
ತಾವು ಕಂಡಿದ್ದ ವ್ಯಕ್ತಿಯೊಬ್ಬರ ಬಗ್ಗೆ ಬರೆಯುವಾಗ, ತಾವು ಪರಿಗಣಿಸಿದ್ದೇನು ಎಂಬುದನ್ನು ಡಿ ವಿ ಜಿ ಯವರು
ಒಬ್ಬ ರಾಯರ ಚಿತ್ರಣದಲ್ಲಿ ಬರೆದ ಸಾಲುಗಳಲ್ಲಿ ಕಾಣಬಹುದು. ಆ ರಾಯರಲ್ಲಿ ಕೆಲವು ಅವಗುಣಗಳೂ
ಇದ್ದಿರಬಹುದೆಂದು ಸೂಚ್ಯವಾಗಿ ತಿಳಿಸಿ “ನನ್ನ ಮನಸ್ಸಿನಲ್ಲಿ ಉಳಿದಿರುವ ಮುದ್ರಿಕೆ ಒಟ್ಟಿನ ಮೇಲೆ ಒಬ್ಬ
ರಸಿಕ ಭಕ್ತರದು. ರಾಯರ ಪುಣ್ಯಪಾಪಗಳು ಅವರಿಗೂ ಅವರು ನಂಬಿಕೊಂಡಿದ್ದ ದೈವಕ್ಕೂ ನಡುವೆ ಲೆಕ್ಕಕ್ಕೆ
ಬರತಕ್ಕವು. ಇತರಿಗಾದರೋ ಲೆಕ್ಕಕ್ಕೆ ಸಿಕ್ಕತಕ್ಕದ್ದು ರಾಯರ ಸರಳತೆ, ಅವರ ಸಂಗೀತದ ರಸಭಾವ,
ಅವರ ಔದಾರ್ಯ” ಎನ್ನುತ್ತಾರೆ ಡಿ ವಿ ಜಿ ಯವರು. ಇಲ್ಲಿರುವ ಪ್ರತಿಯೊಬ್ಬರೂ ಡಿವಿಜಿ ಯವರ
ಮನಮುಟ್ಟಿದವರು, ಆತ್ಮೀಯರು.
ತಾವು ದಿವಾನರು, ಅಧಿಕಾರಿಗಳು, ಪಂಡಿತರುಗಳ ಬಗೆಗೆ ಎಷ್ಟು ಅಭಿಮಾನದಿಂದ, ಗೌರವದಿಂದ
ಬರೆದಿದ್ದಾರೋ ಅಷ್ಟೇ ಭಾವನಾಪೂರ್ಣವಾಗಿ ಗಾರೆಕೆಲಸದವರು, ದೇವದಾಸಿಯರು ಮತ್ತಿತರಬಗೆಗೂ
ಡಿವಿಜಿಯವರು ಬರೆದಿದ್ದಾರೆ. ಅವರ ಚಿತ್ರಣ ದಿವಾನ್ ಸರ್ ಎಂ ವಿ ಅವರದಾಗಲೀ ಅಥವಾ ಗಾರೆ ಕೆಲಸದ
ಶಿವಪಿಚ್ಚೈ ಮೊದಲಿಯಾರ್ ಅವರದಾಗಲೀ ಅಷ್ಟೇ ಹೃದಯಸ್ಪರ್ಶಿ ಯಾಗಿರುತ್ತದೆ. ಈ ಬರಹಗಳಲ್ಲಿ
ನನ್ನ ಮನತಟ್ಟಿದ ಕೆಲವು ಭಾಗಗಳ ಬಗೆಗೆ ಬರೆದಿಡುವ ಇಚ್ಛೆಯಾಯಿತು. ಪುಸ್ತಕವನ್ನು ಪೂರ್ಣವಾಗಿ
ಓದುವ ವ್ಯವಧಾನ ಅಥವಾ ಅವಕಾಶ ಇಲ್ಲದವರಿಗೆ ಈ ಮೂಲಕ ಆ ಬರಹಗಳ ಸ್ವರೂಪ ಕೊಂಚವಾದರೂ
ತಿಳಿಯಬಹುದಲ್ಲವೇ ? ನನಗೆ ಪ್ರಿಯವಾದ, ಗತಿಸಿಹೋದ, ಆ ಕಾಲ ಮತ್ತು ಆ ರೀತಿಯ ಜನಗಳ
ಪರಿಚಯವನ್ನು ಇತರರಿಗೂ ಮಾಡಿಸೋಣವೆಂಬ ಆಶಯ. ಹಾಗೆ ಬರೆದ ಮೊದಲ ಬರಹ ಇದು.
ಮುಂದುವರೆಸುತ್ತೇನೆಂದು ನಂಬಿದ್ದೇನೆ.
ಬೆಂಗಳೂರು ನಾಗರತ್ನಮ್ಮನವರು ದೇವದಾಸಿಯರ ಕುಲದಲ್ಲಿ ಜನ್ಮಪಡೆದವರು. ಅವರ ಜನನವಾದದ್ದು
1878 ರಲ್ಲಿ, ಮೈಸೂರಿನಲ್ಲಿ. ಅವರಿಗೆ ಸಂಗೀತ, ಸಂಸ್ಕೃತ ಕಾವ್ಯ, ಕನ್ನಡ ಕಾವ್ಯಗಳ ಅಭ್ಯಾಸವಾಗಿದ್ದು,
ಸಂಸ್ಕೃತ ಶ್ಲೋಕ, ಗಮಕಗಳನ್ನು ಅರ್ಥಪೂರ್ಣವಾಗಿ, ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರಂತೆ. ನಂತರ
ಸಂಗೀತ, ನೃತ್ಯಕಲೆಗಳಲ್ಲಿ ಹೆಚ್ಚಿನ ಕಲಿಕೆಗಾಗಿ ಬೆಂಗಳೂರಿಗೆ ಬಂದು, ಬೆಂಗಳೂರಿನ ಗಣ್ಯರಲ್ಲಿ ಒಬ್ಬರಾಗಿದ್ದು,
ಸಂಗೀತದಲ್ಲಿ ಬಹಳ ಹೆಸರುಮಾಡಿದರಂತೆ. ಬೆಂಗಳೂರಿನಲ್ಲಿ ಆಕೆ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾದ
ಶ್ರೀ ನರಹರಿರಾಯರ ಆಶ್ರಯದಲ್ಲಿದ್ದರೆಂದು ಡಿ ವಿ ಜಿ ಯವರು ತಿಳಿಸುತ್ತಾರೆ. ಮುಂದೆ ಅವರು ಮದರಾಸಿಗೆ
ತೆರಳಿ ಅಲ್ಲಿ ತಮ್ಮ ಸಂಗೀತದ ಸಾಮರ್ಥ್ಯದಿಂದ ಹಣ ಪ್ರಸಿದ್ಧಿಗಳೆರಡನ್ನೂ ಹೇರಳವಾಗಿ ಗಳಿಸಿ ಯಾರದೇ
ಆಶ್ರಯದ ಅವಶ್ಯಕತೆಯಿಲ್ಲದಂತೆ ಸ್ವತಂತ್ರ ಜೀವನ ನಡೆಸುವ ಸ್ಥಿತಿಗೆ ತಲುಪಿದರಂತೆ.
ತಮ್ಮ ಮಕ್ಕಳನ್ನೂ, ಸಾಕಿದ್ದ ಮಗುವನ್ನೂ ಅಕಾಲವಾಗಿ ಕಳೆದುಕೊಂಡ ಆಕೆ ತಮ್ಮ ವೈಯುಕ್ತಿಕ ಜೀವನದಲ್ಲಿ
ನೋವು ಅನುಭವಿಸಿ ಕೊನೆಗೆ ಶ್ರೀರಾಮಪಾದಾರವಿಂದ ಸೇವೆಯಲ್ಲಿ ಶಾಂತಿಪಡೆಯುವ
ಮನಸ್ಸುಮಾಡಿದರಂತೆ. ತ್ಯಾಗರಾಜ ಸ್ವಾಮಿಯವರ ಆರಾಧಕಿಯಾದ ಆಕೆ ತಮ್ಮಲ್ಲಿದ್ದ ಸಂಪತ್ತನ್ನೆಲ್ಲಾ
ಖರ್ಚುಮಾಡಿ ತಿರುವಾಯೂರಿನಲ್ಲಿ ತ್ಯಾಗರಾಜ ಸ್ವಾಮಿಗಳ ಸಮಾಧಿಯ ಜೀರ್ಣೋದ್ಧಾರಮಾಡಿಸಿ ಅಲ್ಲಿ
ಸೀತಾರಾಮದೇವರ ದೇವಾಲಯವನ್ನು ಕಟ್ಟಿಸಿದರಂತೆ. ಆ ಕಾರ್ಯಕ್ಕೆ ತಮ್ಮಲ್ಲಿದ್ದ ಹಣವನ್ನೆಲ್ಲಾ ವ್ಯಯಿಸಿ,
ಜತೆಗೆ ತಮ್ಮ ಮನೆ ಹಾಗೂ ಆಭರಣಗಳನ್ನು ಮಾರಿ ಹಣ ಹೊಂದಿಸಿದರೆಂದು ಡಿ ವಿ ಜಿ ಯವರು
ತಿಳಿಸುತ್ತಾರೆ. ತದನಂತರ ಅನಾರೋಗ್ಯಕ್ಕೆ ತುತ್ತಾಗಿ ಆದಾಯವಿಲ್ಲದೆ ಬಳಲುತ್ತಿದ್ದಾಗಲೂ ಆಕೆ
ತಿರುವಾಯೂರಿನಲ್ಲಿ ತಮ್ಮ ಊರಾದ ಮೈಸೂರಿನ ಹೆಸರಿನಲ್ಲಿ ಒಂದು ಸತ್ರವನ್ನು ಕಟ್ಟಿಸುವ ಮನಸ್ಸುಮಾಡಿ
ತಮಗೆ ಪರಿಚಯವಿದ್ದ ಧನಿಕರಿಂದಲೂ ಇತರ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಆ ಕಾರ್ಯವನ್ನು
ನಡೆಸಿದರಂತೆ. ಮದರಾಸಿನ ಸಾರ್ವಜನಿಕ ಸಂಘಟನೆಗಳಿಂದ “ತ್ಯಾಗಸೇವಾಸಕ್ತ”, “ಗಾನಕಲಾವಿಶಾರದ”,
“ವಿದ್ಯಾಸುಂದರಿ” ಮೊದಲಾದ ಬಿರುದುಗಳನ್ನು ಅವರು ಪಡೆದಿದ್ದರೆಂದು ಡಿ ವಿ ಜಿ ಯವರು ಬರೆದಿದ್ದಾರೆ.
ನಾಗರತ್ನಮ್ಮನವರ ಏರುದಿನಗಳಲ್ಲಿ ಅನೇಕಬಾರಿ ತಾವು ಆಕೆಯ ಸಂಗೀತ ಕೇಳಲು ಅವರ ಮನೆಗೆ
ಹೋಗಿದ್ದುದಾಗಿ ತಮ್ಮ ಬರಹದಲ್ಲಿ ಡಿ ವಿ ಜಿ ಯವರು ತಿಳಿಸಿದ್ದಾರೆ. ಕೊನೆಯ ದಿನಗಳಲ್ಲಿ ಆಕೆ
ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಅವರನ್ನು ಕಾಣಲು ಹೋಗಿದ್ದ ಡಿವಿಜಿಯವರೊಡನೆ ಸಂಗೀತ
ಕಲಿಯುವಿಕೆ/ ಕಲಿಸುವಿಕೆಯ ಬಗೆಗೆ ಮಾತನಾಡುತ್ತಾ ನಾಗರತ್ನಮ್ಮನವರು ಅಶಕ್ತರಾಗಿದ್ದರೂ
ಎದ್ದುಕುಳಿತು ರಾಗಾಲಾಪನೆಮಾಡಿ ಸಂಗೀತದ ಸೂಕ್ಷ್ಮಗಳನ್ನು ವಿವರಿಸಿದರಂತೆ. ಕೊನೆಗೆ ತಮ್ಮ ಜೀವನದ
ಬಗ್ಗೆ ಮಾತನಾಡುತ್ತಾ “ಮೊದಲು ನಾಗರತ್ನ, ನಂತರ ಭೋಗರತ್ನ, ಈಗ ರೋಗರತ್ನ” ಎಂದು
ನೊಂದುಕೊಂಡರಂತೆ.
“ಇನ್ನೆರಡನ್ನು ಮರೆತುಬಿಟ್ಟಿರಿ. ಒಂದು ರಾಗರತ್ನ , ಮತ್ತೊಂದು ತ್ಯಾಗರತ್ನ. ಭೋಗ ರೋಗಗಳು ಕ್ಷಣಿಕವಾದವು.
ನಿಮ್ಮ ರಾಗ ಕೇಳಿದವರ ಮನಸ್ಸಿನಲ್ಲಿ ಪರಿಣಾಮ ಮಾಡಿ ಅವರ ಜೀವನೋಲ್ಲಾಸದಾಲ್ಲೂ
ಜೀವನೋನ್ನತಿಯಲ್ಲೂ ಚಿರಕಾಲ ಉಳಿದಿರುತ್ತದೆ. ನಿಮ್ಮ ತ್ಯಾಗದ ಪ್ರತ್ಯಕ್ಷ ರೂಪವಾದ ತಿರುವಾಯೂರು
ಕ್ಷೇತ್ರದ ದೇವತಾ ಮಂದಿರಗಳು ಶಾಶ್ವತವಾಗಿ ನಿಂತಿರುತ್ತವೆ” ಎಂದು ಡಿವಿಜಿಯವರು ಸೇರಿಸಿದಾಗ
ನಾಗರತ್ನಮ್ಮನವರು ಕೈಮುಗಿದು “ನಿಮ್ಮ ಈ ಮಾತನ್ನು ನೀವೇ ಇಟ್ಟುಕೊಳ್ಳಿ” ಎಂದುಬಿಟ್ಟರಂತೆ !
ಅದೆಂಥ ಘನವಾದ ವ್ಯಕ್ತಿತ್ವಗಳು! ಬರಹಕ್ಕೆ ವಸ್ತುವಾದವರದು, ಬರೆದವರದು !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ