ನಾನು ಮುಂಜಾನೆ ಸುತ್ತಾಟ ಮುಗಿಸಿ ಮನೆಯಕಡೆ ತಿರುಗುವ ಸಮಯದಲ್ಲಿ ಇವು ನನಗೆ ಎದುರಾಗುತ್ತವೆ.
ಸಾಮಾನ್ಯವಾಗಿ ‘ಬೆಳ್ಳಕ್ಕಿ’ ಎಂದು ಕರೆಸಿಕೊಳ್ಳುವ ಒಂದು ಪಕ್ಷಿ ಸಮೂಹ. ಅದರಲ್ಲಿ ಕೆಲವು ಕೊಕ್ಕರೆಗಳೂ ಇವೆ.
ತಾವು ವಾಸಿಸುವ ಸ್ಥಾನದಿಂದ ಅದೆಲ್ಲಿಗೋ ಹಾರುತ್ತಿರುತ್ತವೆ. ಹೊಟ್ಟೆಪಾಡೋ, ಮತ್ತೇನು ಕಾರ್ಯಗೌರವವೋ?
ಅದನ್ನು ಮುಗಿಸಿ ಸಂಜೆ ತಮ್ಮ ಮರಕ್ಕೆ ಹಿಂತಿರುಗುತ್ತವೆ.
ನಮ್ಮ ಮುಖ್ಯ ರಸ್ತೆಯಿಂದ ಕೊಂಚ ದೂರದಲ್ಲಿರುವ ಒಂದು ತಗ್ಗು ಪ್ರದೇಶದ ಸಣ್ಣ ಮರಗಳ ಗುಂಪು ಅವುಗಳ
ವಾಸಸ್ಥಾನ. ನಾನು ಒಮ್ಮೊಮ್ಮೆ ಸಂಜೆಯ ಸಮಯ ಸುತ್ತಾಟಕ್ಕೆ ಹೊರಟಾಗ ಅವು ಗುಂಪು ಗುಂಪಾಗಿ ಹಾರಿಬಂದು
ತಮ್ಮ ತಮ್ಮ ಸ್ಥಾನ ಸೇರುವುದನ್ನು ಕಂಡಿದ್ದೆ. ಅವು ಗುಂಪಿನಲ್ಲಿ ಬಂದು, ರೆಕ್ಕೆ ಬಡಿತ ನಿಲ್ಲಿಸಿ ಹಾಗೆಯೇ ಹಾರಿಬಂದು
ಇಳಿಯುವಾಗ ಒಂದು ವಿಮಾನ ನೆಲಕ್ಕಿಳಿಯುವಂತೆ ಕಾಣುತ್ತದೆ ! ಬಿಡುವಾಗಿ ನಿಂತು ಅದನ್ನು ನೋಡುವ
ವ್ಯವಧಾನವಾಗಿರಲಿಲ್ಲ.
ಇಂದುಸಂಜೆ ಅವು ಬರುವ ಸಮಯಕಾದು ಅಲ್ಲಿಯೇ ನಿಂತಿದ್ದು ಪದೇ ಪದೇ ಆ ದೃಶ್ಯ ಕಂಡು ಸಂತೋಷಪಟ್ಟು
ಅವುಗಳ ಕಷ್ಟ ಏನಿದೆಯೋ ಅವಕ್ಕೇ ಗೊತ್ತು. ನನಗಂತೂ ಅವುಗಳ ಜೀವನ ಸುಂದರವೆನಿಸುತ್ತದೆ !
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ?
ಇಕ್ಕುವರಾರದನು ಕರೆದು ತಿರುಪೆಯನು?
ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು
ತಕ್ಕುದಾ ವ್ರತನಿನಗೆ - ಮಂಕುತಿಮ್ಮ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ