ಶನಿವಾರ, ಆಗಸ್ಟ್ 26, 2017

ಅಂತಿಂಥ ರತ್ನವಲ್ಲ, “ರಾಜ ರತ್ನ” - ನನ್ನಿಂದ ಸಾಧ್ಯವಾದಂಥ ಪರಿಚಯ.



“ಕವಿಯಲ್ಲ, ವಿಜ್ಞಾನಿಯಲ್ಲ, ಬರಿಯ  ತಾರಾಡಿ” ಎಂದು ತಮ್ಮನ್ನು ತಾವು ಡಿ ವಿ ಜಿ ಯವರು ಪರಿಚಯಿಸಿಕೊಂಡರೆ, “ಅಕ್ಸಾರ ಗಿಕ್ಸಾರ ನಂಗೇನೂ ಬರದು, ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು” ಎನ್ನುತ್ತಾ ತಮ್ಮ ಪದಗಳನ್ನು ಪ್ರಾರಂಭಿಸಿದರು ಈ  ಮಹಾಕವಿ. ಅವರಿಗೇನು ಬರಲಿ ಬಿಡಲಿ, ನಮಗೆ ಕನ್ನಡ, ಕೊಂಚ ಉರ್ದು ( ಹಳೇಮೈಸೂರಿನ ಸಾಹೇಬರುಗಳ ಕನ್ನಡೀಕರಣಗೊಂಡ ಉರ್ದು) ಹಾಗೂ ಇವೆರಡರ ಗ್ರಾಮ್ಯ ರೂಪ ಇವುಗಳ ಪರಿಚಯವಿಲ್ಲದಿದ್ದರೆ ರತ್ನನ ಪದಗಳು ಕಬ್ಬಿಣದ ಕಡಲೆಯೇ.

“ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ , ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ
ನಂಗೆಸ್ರು ಏಳ್ತಾರೆ ರ್ರ ರ್ರ ರ್ರ ರತ್ನ, ನಾನಾಡೋ ಪದಗೋಳು ಯೆಂಡದ್ ಪರ್ಯತ್ನ”  -   ಈ ಸಾಲುಗಳನ್ನು ನೀವು ಇದುವರೆಗೂ ಓದಿಲ್ಲದಿದ್ದರೆ, ಇವು ನಿಮ್ಮ  ಮನಕ್ಕೆ ತಟ್ಟಿದರೆ, ನನ್ನ ಪರ್ಯತ್ನ ಸಾರ್ಥಕವಾಯಿತು.
ನಾನು ಮೇಲೆಬರೆದ ಪದಗಳನ್ನು ಕೇಳಿಲ್ಲದಿರುವವರು ಇರಬಹುದು. ಆದರೆ “ನಾಯಿಮರಿ ನಾಯಿಮರಿ ತಿಂಡಿಬೇಕೇ?” ಮತ್ತು “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ “ ಮುಂತಾದ  ಮಕ್ಕಳ ಗೀತೆಗಳ ಪರಿಚಯವಿಲ್ಲದ ಕನ್ನಡಿಗರು ಇರಲಾರರು.

ಈ ಪದಗಳ ಹಾಗು ಮಕ್ಕಳ ಗೀತೆಗಳ ಕರ್ತೃ, “ಗಂಡುಗವಿ” ಎಂದು ಹೆಸರಾದ ಜಿ ಪಿ ರಾಜರತ್ನಂ ಅವರು. “ನರಕಕ್ಕಿಳಿಸಿ, ನಾಲ್ಗೆ ಸೀಳ್ಸಿ, ಬಾಯ್ ಹೊಲಿಸಾಕಿದ್ರೂನೂವೆ, ಮೂಗ್ನಲ್ ಕನ್ನಡ ಪದವಾಡ್ತೀನಿ” ಎಂದ ಕನ್ನಡಾಭಿಮಾನಿ. ಮತ್ತೆ ಇದು ಬರಿಯ ಭಾಷಣದ ಕನ್ನಡಾಭಿಮಾನವಲ್ಲ. ನಂಜನಗೂಡಿನ ಸಮೀಪದ ಗುಂಡ್ಲುಪೇಟೆಯಲ್ಲಿ ಜನಿಸಿದ ರಾಜರತ್ನಂ ಅವರ ಮಾತೃಭಾಷೆ ತಮಿಳು. ಬಡತನದಲ್ಲಿ ಬೆಳೆದು ಓದಿ, ಕನ್ನಡ ಆನರ್ಸ್ ಪದವಿಗಳಿಸಿ ನಂತರ ಸ್ನಾತಕೋತ್ತರ ಪದವಿಪಡೆದರು. ಕನ್ನಡ ಪಾಠಮಾಡಿ ಜೀವನ ನಡೆಸಿ, ಗದ್ಯ, ಪದ್ಯ, ಮಕ್ಕಳ ಸಾಹಿತ್ಯ ಮುಂತಾಗಿ ವಿಪುಲವಾಗಿ ಕನ್ನಡ ಸಾಹಿತ್ಯಸೇವೆ ನಡೆಸಿ, ಜೀವನವನ್ನೇ ಕನ್ನಡ ಸಾಹಿತ್ಯಾರಾಧನೆಗೆ  ಮುಡುಪಿಟ್ಟ ಕವಿ.

ಕನ್ನಡವಷ್ಟೇ ಅಲ್ಲದೆ ಸಂಸ್ಕೃತ ಹಾಗೂ ಪಾಲಿಭಾಷೆಗಳಲ್ಲಿ ಪರಿಣಿತರಾಗಿದ್ದ  ರಾಜರತ್ನಂ ಅವರು ಪಾಲಿಭಾಷೆಯನ್ನು ಕೈಗೂಡಿಸಿಕೊಂಡು ಬೌದ್ಧ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ, ಅನೇಕ ಪ್ರೌಢ ಪ್ರಭಂದಗಳಲ್ಲದೇ ಮಕ್ಕಳಿಗಾಗಿ “ಬೋಧಿಸತ್ವನ ಕಥೆ “ಗಳನ್ನು ಬರೆದರು. “ತುತ್ತೂರಿ”, “ಕಡಲೆಪುರಿ” ಅವರ ಮಕ್ಕಳ ಗೀತಗಳ ಸಂಗ್ರಹಗಳು.

ರಾಜರತ್ನಂ ಅವರ ಹೆಸರು ಕೇಳಿಲ್ಲದವರೂ ಸಹ ದಿವಂಗತ ಕಾಳಿಂಗರಾಯರ ಕಂಠದ “ಬ್ರಮ್ಮ ನಿಂಗೆ ಜೋಡಿಸ್ತೀನಿ ಎಂಡ  ಮುಟ್ಟಿದ್ ಕೈನ“ ಮತ್ತು “ಎಳ್ಕೊಳ್ಳೋಕ್ ಒಂದೂರು” ಗಳನ್ನು ಕೇಳದಿರುವ ಸಾಧ್ಯತೆ ಬಹುಕಡಿಮೆ. ಭಾವಗೀತೆಗಳೆಂಬ ಒಂದು ಪ್ರಕಾರದ ಹಾಡುಗಾರಿಕೆ ಪ್ರಾರಂಭವಾದ ಕಾಲದಲ್ಲಿ ಬಹಳ ಜನಪ್ರಿಯವಾದ ಗೀತೆಗಳು ಇವು. ಇಂಥಗೀತೆಗಳನ್ನು ಒಳಗೊಂಡ  “ರತ್ನನ ಪದಗಳು” ಕನ್ನಡ ಕವನ ಸಾಹಿತ್ಯದಲ್ಲಿ ಒಂದು ಹೊಸಪ್ರಯೋಗ . ಕೈಲಾಸಂ ರವರ ನಾಟಕಗಳಿದ್ದಂತೆ.

ರಾಜರತ್ನಂ ಅವರು ರತ್ನನ ಪದಗಳನ್ನು ಬರೆದಾಗ ಅದನ್ನು ಅಚ್ಚುಮಾಡಲು ಯಾವ ಪ್ರಕಾಶಕನೂ ಮುಂದೆ ಬರಲಿಲ್ಲವಂತೆ. ತಾವು  ಪದವಿ ಪರೀಕ್ಷೆಯಲ್ಲಿ ಮೊದಲಿಗರಾದಾಗ ತಮಗೆ ದೊರಕಿದ್ದ ಸ್ವರ್ಣ ಪದಕವನ್ನು ಅಡವಿಟ್ಟು, ಮೂವತ್ತೈದು ರೂಪಾಯಿಗಳನ್ನು ಹೊಂದಿಸಿಕೊಂಡು, ತಾವೇ ತಮ್ಮ ಪದಗಳನ್ನು ಅಚ್ಚುಮಾಡಿಸಿದರಂತೆ. ಪುಸ್ತಕಗಳೆಲ್ಲಾ ಮಾರಾಟವಾಗಿ ಮರುಮುದ್ರಣವಾದಾಗ ಬಂದ ಹಣದಿಂದ ತಮ್ಮ ಪದಕವನ್ನು ವಾಪಸು ಪಡೆದರಂತೆ.

ನನ್ನ ಸೋದರಮಾವನವರು ರಾಜರತ್ನಂ ಅವರ ವಿದ್ಯಾರ್ಥಿಯಾಗಿದ್ದ್ದು ನಂತರ ಸಹ ಅಧ್ಯಾಪಕರಾದವರು. ಗಂಡುಗವಿಯ ಮೈಕಟ್ಟು ಕೂಡ ಗುಂಡುಕಲ್ಲು. ತರಗತಿಯಲ್ಲಿ ಹುಡುಗರು ತರಲೆಮಾಡಿದರೆ “ಕಿಟಕಿಗೆ ಕಂಬಿಯಿಲ್ಲ, ತೋಳಿನಲ್ಲಿ ಕಸುವಿದೆ, ಎತ್ತಿ ಹೊರಗೆ ಒಗೆದುಬಿಡುವೆ” ಎಂದು ಗುಡುಗಿದರೆ ತರಗತಿ ನಿಶ್ಯಬ್ಧ !

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಅಧ್ಯಾಪಕರ ವೇತನ, ಭಾಷೆಯ ಅಧ್ಯಾಪಕರ ವೇತನಕ್ಕಿಂತ ಒಂದುಮಟ್ಟ ಹೆಚ್ಚು ಇದ್ದಿತಂತೆ. ತಾವು ರಸಾಯನಶಾಸ್ತ್ರದ ಅಧ್ಯಾಪಕರಾಗಿ, ತಮಗೆ ಕನ್ನಡ ಪಾಠಹೇಳಿದ ಗುರು ರಾಜರತ್ನಂ ಅವರಿಗಿಂತ ಹೆಚ್ಚು ವೇತನ ಪಡೆಯುವುದು ನನ್ನ ಸೋದರಮಾವನವರಿಗೆ ಕಿರಿಕಿರಿಯಾಗುತ್ತಿತ್ತಂತೆ. ಒಮ್ಮೆ ಇಬ್ಬರೂ ಕಾರ್ಯಾಲಯದಲ್ಲಿ ಒಟ್ಟಿಗೆ ವೇತನ ಪಡೆಯಲು ಹೋದಾಗ ಮಾವನವರು ಇದನ್ನು ರಾಜರತ್ನಂ ಅವರಿಗೆ ತಿಳಿಸಿದರಂತೆ. “ನಾಚಿಕೆಯಾಗಬೇಕಿರುವುದು ವಿಶ್ವವಿದ್ಯಾಲಯಕ್ಕೆ. ನೀ ಯಾಕೆ ಬೇಸರಪಡುತ್ತೀಯಾ, ಬಾ. ಕಾಫಿ ಕುಡಿಯೋಣ” ಎನ್ನುತ್ತಾ ಹೆಗಲಮೇಲೆ ಕೈಹಾಕಿಕೊಂಡು ಕ್ಯಾಂಟೀನಿಗೆ ಕರೆದೊಯ್ದರಂತೆ ರಾಜರತ್ನಂ ಅವರು.

ನಾನು ಬಿ ಡಿ ಎಸ್  ಎರಡನೇ  ವರ್ಷದಲ್ಲಿದ್ದಾಗ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ಕಾಲೇಜಿಗೆ ಬಂದಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತಾವು ಬರಬೇಕಾದರೆ ಕನಿಷ್ಠ ನೂರುರುಪಾಯಿ ಬೆಲೆಯ ಕನ್ನಡ ಪುಸ್ತಕಗಳನ್ನು ಕಾರ್ಯಕ್ರಮ ನಡೆಸುವವರು ಖರೀದಿಸಬೇಕೆಂಬುದು ಅವರ ಕರಾರಾಗಿತ್ತು. “ನೂರು ರುಪಾಯಿಯ ಪುಸ್ತಕ ಕೊಳ್ಳದ ಕನ್ನಡ ಸಂಘ ಮತ್ತೇನು ಮಾಡೀತು?” ಎಂಬುದು ಅವರ ವಾದ.

ಕಾರ್ಯಕ್ರಮ ಮುಗಿದ ನಂತರ ತಮ್ಮ ಪುಸ್ತಕಗಳನ್ನು ಅಲ್ಲಿಯೇ ಹಸ್ತಾಕ್ಷರಮಾಡಿ ಕೊಟ್ಟರು. ನಾನೂ  ಒಂದು ಪುಸ್ತಕ ಕೊಂಡೆ. ಅದೆಲ್ಲಿಹೋಯಿತೋ ದೇವರೇ ಬಲ್ಲ. ನನಗೆ ಅಷ್ಟು ಪ್ರಿಯವಾದ ಲೇಖಕರೊಬ್ಬರ ಹಸ್ತಾಕ್ಷರವಿದ್ದ ಪುಸ್ತಕ ಕಳೆದುಕೊಂಡ ವ್ಯಥೆ ಬಾಧಿಸುತ್ತದೆ.


ರತ್ನನ ಪದಗಳು ಸಂಗ್ರಹದ ಮೊದಲ ಪದ ಇಲ್ಲಿದೆ. ಪದಗಳನ್ನು ಓದಿಲ್ಲದವರಿಗೆ ಪದಗಳ ರುಚಿತೋರಿಸುವ ಪ್ರಯತ್ನ.

ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ ,
ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ
ನಂಗೆ ಎಸ್ರು ಏಳ್ತಾರೆ ರ್ರ ರ್ರ ರ್ರ ರತ್ನ,
ನಾನಾಡೋ ಪದಗೋಳು ಯೆಂಡದ್ ಪರ್ಯತ್ನ

ಮಾಬಾರ್ತ ಬರೆಯಾಕೆ ಯಾಸಂಗಿನಾಯ್ಕ
ಸಿಕ್ಕಂಗ್ ನಂಗ್ ಸಿಕ್ಕೋನೊಬ್ಬ ಬೇವಾರ್ಸಿನಾಯ್ಕ
ನಾನಾಡಿದ್ ಪದಗೊಳ್ನ ಕೂಡಿಸ್ದ ಬರ್ದು
ಏನೈತೊ ಯಾರಿಗ್ ಗೊತ್ ಔನ್ಗಿರೋ ದರ್ದು

ಬರಕೊಂಡ್ರೆ ಬರಕೊಂಡ್ ಓಗ್ , ನಿಂಗೂನೆ ಐಲು,
ಮಾಡಾನಾ ಆಗಿದ್ದೊಂದ್ ಸಾಯ ನಂಕೈಲು
ಅಂತ್ ಅವ್ನ್ ಬರ್ದಿದ್ನ ಅಚ್ಗಾಕೋಕ್ ಒಪ್ಪಿ
ಕಳಿಸಿವ್ನಿ ಬೈದೀರ ನಂಗೇನ್ರಾ ತಪ್ಪಿ

ಅಕ್ಸಾರ ಗಿಕ್ಸಾರ ನಂಗೇನೂ ಬರ್ದು
ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು
ಪದಗೊಳ್ ಚಂದಾಗಿದ್ರೆ ಯೆಂಡಕ್ ಸಿಪಾರ್ಸಿ
ಚಂದಾಗಿಲ್ದಿದ್ರನಕ ತಪ್ಗೆ ಬೇವಾರ್ಸಿ.

ಇದರ ಬಗ್ಗೆ ನನ್ನದೇ ಆದ ವಿವರಣೆಯೂ ಇದೆ. ಆದರೆ  ನಿಮ್ಮ ಸಹನೆಗೂ ಮಿತಿಯಿರುವುದರಿಂದ ಇಲ್ಲಿಗೆ ಸಾಕು. ರತ್ನನ ಮತ್ತು ರತ್ನನ ಪದಗಳ ಪರಿಚಯ ನನ್ನದೇ ರೀತಿಯಲ್ಲಿ ಮಾಡಿದ್ದೇನೆ. ಓದಿದವರಿಗೆ ಹಿಡಿಸಿದರೆ ಸಾರ್ಥಕವಾಯಿತು.

ಬುಧವಾರ, ಆಗಸ್ಟ್ 23, 2017

ಇಂದಿನ ಮುಂಜಾನೆಯ ಒಂದು ಆಶು ಬರಹ

ನನಗೆ ಪ್ರತಿಮಂಜಾನೆ ವಾಕಿಂಗ್ ಅಭ್ಯಾಸ. ಆ ‘ಅಭ್ಯಾಸ’ ಬರಬರುತ್ತಾ ‘ಚಟ’ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ನಮ್ಮೂರೋ ಪರವೂರೋ, ಚಳಿಯೋ ಮಳೆಯೋ ಲೆಕ್ಕಿಸದೆ ಬೆಳಗಾದಂತೆಯೇ ಹೊರಬೀಳುವುದೇ. ತೊಂದರೆ ಏನೆಂದರೆ, ಬೆಳಕಾಗುವ ಮುಂಚೆ ಹೊರಹೊರಟರೆ ನಾಯಿಕಾಟ. ಬೆಳಕಾದನಂತರ ವಾಹನಗಳಕಾಟ. ಏನುಮಾಡುವುದು? ಎರಡರಲ್ಲೊಂದನ್ನು ಸಹಿಸಿಕೊಳ್ಳಬೇಕು. ಇಂದು ಮುಂಜಾನೆ ನಾಯಿಕಾಟಕ್ಕೆ ತಯಾರಾಗಿ ಕೈಯಲ್ಲೊಂದು ಕೊಲುಹಿಡಿದು, ಐದಕ್ಕೇ ಹೊರಹೊರಟೆ. ಅಮಾವಾಸ್ಯೆಯ ಕತ್ತಲು ಕತ್ತಲು. ಜಿನುಗುತ್ತಿದ್ದ ಮಳೆ. ತಂಪುಹವೆ. ಪರಿಸರ ಆಹ್ಲಾದಕರವಾಗಿತ್ತು.

ಕೊಂಚ ನಡೆದು ಊರಿನ ಹೊರವಲಯಕ್ಕೆ ತಲುಪುವ ಹೊತ್ತಿಗೆ ದೂರದ ಮಸೀದಿಯಿಂದ  ಮುಂಜಾನೆಯ ಪ್ರಾರ್ಥನೆಯ ಕರೆ ಕೇಳತೊಡಗಿತು. ಅದೇಹೊತ್ತಿಗೆ ರಸ್ತೆಪಕ್ಕದಲ್ಲಿ ರಸ್ತೆಕೆಲಸದವರು ಹಾಕಿಕೊಂಡಿದ್ದ ಗುಡಿಸಲುಗಳಿಂದ ಬೆಳಗಿನ  ಉಪಾಹಾರಕ್ಕೋ, ಮಧ್ಯಾಹ್ನದ ಬುತ್ತಿಗೋ, ಹೆಂಗಸರು ರೊಟ್ಟಿ ತಟ್ಟುವ ಶಬ್ದ ಶುರುವಾಯಿತು.

ಕೆಲಕಾಣಿಸುವ ಸಾಲುಗಳು ನನ್ನ ತಪ್ಪಲ್ಲ. ಆ ಪರಿಸರ ಹಾಗೂ ಶಬ್ದಗಳದ್ದು.

ದೂರದ ಮಸೀದಿಯ ಮುಲ್ಲಾನ
ಪ್ರಾರ್ಥನೆಯ ಕರೆಯ ಸಂಗೀತಕ್ಕೆ
ಪಕ್ಕದ  ಜೋಪಡಿಯಲ್ಲಿ ಬುತ್ತಿಗೆ
ರೊಟ್ಟಿತಟ್ಟುತ್ತಿದ್ದ ಹೆಂಗಸಿನ ಕೈಗಳು

ತಾಳಹಾಕುತ್ತಿದ್ದವು

ಮಂಗಳವಾರ, ಆಗಸ್ಟ್ 22, 2017

ಡಿ ವಿ ಜಿ ಮತ್ತು ಅವರ ಕೃತಿಗಳು - ನನ್ನ ಗ್ರಹಿಕೆಗೆ ಸಿಕ್ಕಂತೆ.



“ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ ಹೇ ದೇವಾ
ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ”

ನಾನು ಪ್ರೈಮರಿ ತರಗತಿಯಲ್ಲಿದ್ದಾಗ “ವನಸುಮ” ಎಂಬ ಪದ್ಯದ ಮೂಲಕ ಡಿ ವಿ ಜಿ ಎಂಬ ಮೂರಕ್ಷರದ ಪರಿಚಯ ನನಗಾಯಿತು. ನಾವು ಪದ್ಯವನ್ನು ಬಾಯಿಪಾಠ ಮಾಡಬೇಕಿತ್ತು. ಸರಳವಾದ ಸಾಲುಗಳು ಸುಲಭವಾಗಿ ಬಾಯಿಪಾಠವಾದವು. ಅಷ್ಟೇ ಸುಲಭವಾಗಿ ಪದ್ಯದ ಅರ್ಥವೂ ತಿಳಿಯಿತು. ಆದರೆ ತಮ್ಮ ಕವನದ ಸಾಲುಗಳಲ್ಲಿ ತಾವು ಸೂಚಿಸಿದಂತೆ, ಕಾನನದ ಮಲ್ಲಿಗೆಯಂತೆ ಸೌರಭವ ಸೂಸುತ್ತಾ “ಜಗದ ಪೊಗಳಿಕೆಗೆ ಬಾಯ್ಬಿಡದೆ” ಬಾಳಿದ ಘನತೆ ಕವಿಯದೆಂದು ಅರ್ಥವಾಗಿದ್ದು ಬಹಳ ವರುಷಗಳ ನಂತರ.

ವನಸುಮದ ಪರಿಚಯವಾದ ಆಸುಪಾಸಿನಲ್ಲೇ “ಬೆಕ್ಕೋಜಿ” ಯ ಪರಿಚಯ ವಾಗಿದ್ದು ಕೂಡ. ಬೆಂಗಳೂರಿನ ಕೋಟೆಯ ದ್ವಾರದ ಎದುರಿಗೆ “ಸತ್ಯ ಶೋಧನ ಪುಸ್ತಕ ಭಂಡಾರ” ಎಂಬ ಪುಸ್ತಕದ ಮಳಿಗೆಯೊಂದಿತ್ತು. ನಮ್ಮ ತಂದೆಯವರು ಮೂರುತಿಂಗಳಿಗೋ ಆರುತಿಂಗಳಿಗೋ ಒಮ್ಮೆ ನನ್ನನ್ನು ಅಲ್ಲಿಗೆ ಕರೆದೊಯ್ದು ನಾನು ಆಯ್ದ ಹತ್ತಾರು ಮಕ್ಕಳ ಪುಸ್ತಕಗಳನ್ನು ನನಗೆ ಕೊಡಿಸುತ್ತಿದ್ದರು. ಒಮ್ಮೆ ಹಾಗೆ ಹೋಗಿದ್ದಾಗ “ಏಟೊಂದರಿಂದ ಏಳ್ವರನ್ನು ಕೊಂದ” ಪರಾಕ್ರಮಿ ಬೆಕ್ಕೋಜಿ ಯ ಶೀರ್ಷಿಕೆಯಿಂದ ಆಕರ್ಷಿತನಾಗಿ “ಬೆಕ್ಕೋಜಿ” ಪುಸ್ತಕವನ್ನು   ಕೊಂಡುತಂದು ಓದಿ ಬಹಳ ಸಂತೋಷಪಟ್ಟೆ. ಅರಿಯಬಲ್ಲವರಿಗೆ “ಜೀವನ ಧರ್ಮಯೋಗ” ವನ್ನು ಉಪದೇಶಿಸುವ ಸಮರ್ಥತೆಯನ್ನು ಹೊಂದಿದ್ದ  ಡಿ ವಿ ಜಿ ಯವರ ಲೇಖನಿ ಮಕ್ಕಳ ಮನಮುಟ್ಟುವ “ಬೆಕ್ಕೋಜಿ” ಮತ್ತು “ಇಂದ್ರವಜ್ರ” ಗಳನ್ನೂ ಬರೆಯಬಲ್ಲದಾಗಿತ್ತು.  

ನಂತರದ ಐದಾರು ವರುಷ ಗುಂಡಪ್ಪನವರಿಗೂ ನನಗೂ ಸಂಭಂದವಿರಲಿಲ್ಲ. ನಂತರ ಹೈಸ್ಕೂಲಿನಲ್ಲೋ ಪಿಯುಸಿಯಲ್ಲೋ ಕನ್ನಡ ಪಠ್ಯಪುಸ್ತಕದಲ್ಲಿ ಕಂಡದ್ದು “ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು” ಎಂಬ ಸಾಲು. ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆಯ್ದದ್ದರಿಂದ “ನಾಕನಿಲಯರಿಗರಿದು ನಿನಗೆ ವಿವೇಕ ಎಳ್ಳಿನಿತಿಲ್ಲ”,  “ನೀರೊಳಗಿರ್ದುಮ್ ಬೆಮರ್ದನ್ ಉರಗಪತಾಕಂ” “ಹೊಸನೆತ್ತರುಕ್ಕುಕ್ಕಿ ಆರಿಹೋಗುವಮುನ್ನ ಹರೆಯದೀ ಮಾಂತ್ರಿಕನ ಮಾಟ  ಮಸುಳುವಮುನ್ನ” ಮುಂತಾದ ಮರೆಯಲಾಗದ ಸಾಲುಗಳೊಂದಿಗೆ “ಮಂಕುತಿಮ್ಮ”ನ ಪರಿಚಯದ ಭಾಗ್ಯ ನನಗಾಯಿತು.

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ
ಅವನರಿವಿಗೆ ಎಟುಕುವವೊಲು ಒಂದಾತ್ಮನಯವ
ಹವಣಿಸಿದನಿದನು  ಪಾಮರಜನದ ಮಾತಿನಲಿ
ಕವನ ನೆನಪಿಗೆ ಸುಲಭ - ಮಂಕುತಿಮ್ಮ  

ಎಂದು ತಮ್ಮ “ಕನ್ನಡದ ಭಗವದ್ಗೀತೆ”ಯನ್ನು ದೈನ್ಯತೆಯಿಂದ ಪರಿಚಯಿಸಿ, ತಮ್ಮ ಕಗ್ಗವು “ಬಹು ಸಾಮಾನ್ಯರಾದವರ ಮನೆಯ ಬೆಳಕಿಗೆ ತೊಟ್ಟಿನಷ್ಟು ಎಣ್ಣೆಯಾದರೆ ನನಗೆ ತೃಪ್ತಿ” ಎಂದರು ಡಿ ವಿ ಜಿ. ಜತೆಗೇ, ಎಲ್ಲವನ್ನೂ ಒಟ್ಟಿಗೆ ನುಂಗದೆ “ಆಗೊಂದು ಈಗೊಂದು ಪದ್ಯವನ್ನು ಪೆಪ್ಪರಮಿಂಟಿನಂತೆ ಚಪ್ಪರಿಸಿ” ಎಂದೂ ಸಲಹೆ ನೀಡಿದರು.

ಬದುಕಿನ ಜಟಕಾಬಂಡಿಯನ್ನೆಳೆಯುತ್ತಾ, ನಡೆದು ಸಾಕಾಗಿಯೋ , ಭಾರ ಹೆಚ್ಚಾಗಿಯೋ, ಪಯಣಿಗರ ಕಿರಿಕಿರಿಯೋ, ಯಾವುದರಿಂದಲೋ ಕಾಲುಸೋತಾಗ, ಮನಕುಂದಿದಾಗ, ಬಾಯಿಗಿಟ್ಟುಕೊಂಡರೆ, ಬದುಕಿನ ಕಹಿಯನ್ನು ಕಡಿಮೆಯಾಗಿಸಿ, ಚಪ್ಪರಿಸಿದಷ್ಟೂ ಸಿಹಿಯಾಗುತ್ತಾ, ಬದುಕನ್ನು ಮುನ್ನಡೆಸಲು ಮನವನ್ನು ಅನುವಾಗಿಸುವ ಪೆಪ್ಪರಮಿಂಟಿನ ಕರ್ತನಿಗೆ ನಮೋನಮಃ.  

ಮಂಕುತಿಮ್ಮನ ಕಗ್ಗದ ಸವಿಯನ್ನು ಕಂಡುಕೊಂಡು ಅಂಥ ಮಹಾನ್ ಕೃತಿಯನ್ನು ನಮ್ಮ ಕೈಗಿತ್ತ ಮಹಾನುಭಾವನ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂಬ ಆಸಕ್ತಿ ಹುಟ್ಟಿದ ಹೊತ್ತಿಗೆ ನನ್ನ ಕೈಗೆ ಸಿಕ್ಕಿದ್ದು “ಜ್ಞಾಪಕ ಚಿತ್ರಶಾಲೆ - ನೆನಪಿನ ಚಿತ್ರಗಳು”. ಪ್ರತಿಯೊಂದೂ ಐನೂರು ಪುಟಗಳನ್ನು ಹೊಂದಿದ್ದ ಮೂರು ಪುಸ್ತಕಗಳನ್ನು ಓದಿ ಮುಗಿಸಿದಾಗ “ಅಯ್ಯೋ ಮುಗಿದುಹೋಯಿತೇ” ಎನ್ನುವಂಥ ಅನಿಸಿಕೆ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರ ಮುಳಬಾಗಿಲಿನ ಬಾಲ್ಯದ ದಿನಗಳಿಂದ ಪ್ರಾರಂಭವಾಗುವ ಚಿತ್ರಗಳು ನನ್ನನ್ನು ಸಂಪೂರ್ಣವಾಗಿ ಸೆರೆಹಿಡಿದು ಬಿಟ್ಟವು. ಡಿ ವಿ ಜಿ ಯವರ ಬಾಲ್ಯ, ವಿದ್ಯಾಭ್ಯಾಸ , ನೌಕರಿಗಾಗಿ ಪರದಾಟ, ಸಾಹಿತ್ಯಾಭ್ಯಾಸ, ಪತ್ರಿಕೋದ್ಯಮ , ರಾಜಕಾರಣ, ರಸಿಕತೆ ಮುಂತಾದ ಅನೇಕಾನೇಕ ಸಂಗತಿಗಳೊಂದಿಗೆ ಅಂದಿನ ಜನಜೀವನದ ವಿವರಗಳು, ಸಾಮಾಜಿಕ - ರಾಜನೈತಿಕ  ಮೌಲ್ಯಗಳ ವಿವರಗಳು ಎಲ್ಲವೂ ಒಂದಕ್ಕೊಂದು ಪೂರಕವಾಗಿ, ಹಾಸುಹೊಕ್ಕಾಗಿ ಸೇರಿಕೊಂಡಿವೆ ಆ ಚಿತ್ರಗಳಲ್ಲಿ.

ಇನ್ನು ಡಿ ವಿ ಜಿ ಯವರ ಸಮಕಾಲೀನರ, ಸುತ್ತಸುತ್ತಮುತ್ತಲಿನ, ಜನರ ಚಿತ್ರಣ . ಡಿ ವಿ ಜಿ ಯವರ ಸಂಪರ್ಕಹೊಂದಿದ್ದ ಸ್ನೇಹಿತರು, ಸಹೃದಯಿಗಳು, ಮುಖಂಡರು, ಹಿರಿಯರು, ನೂರಾರು  ಜನ. ಪ್ರತಿಯೊಬ್ಬರ ಜೀವನ, ಗುಣ, ಕೆಲಸ ಕಾರ್ಯಗಳ ವಿವರ ಇವರ ನೆನಪಿನಲ್ಲಿ! ಒಳ್ಳೆಯ ಗುಣಗಳು ಯಾರಲ್ಲಿ ಕಂಡರೂ ಗುರುತಿಸಿ ಬರೆದಿಟ್ಟರು. ದಿವಾನ್ ವಿಶೇಶ್ವರಯ್ಯನವರ ಕಾರ್ಯನಿಷ್ಠೆ , ಕಟ್ಟುನಿಟ್ಟು, ಬುದ್ಧಿಮತ್ತೆ, ಮತ್ತಿತರ ಗುಣಗಳು ಡಿ ವಿ ಜಿ ಯವರನ್ನು ಎಷ್ಟು ಆಕರ್ಷಿಸಿದವೋ, ಗಾರೆಕೆಲಸದ ಶಿವ ಪಿಚೈ ಮೊದಲಿಯಾರರ ಕಾರ್ಯಕುಶಲತೆ, ದೈವಭಕ್ತಿ, ಜೀವನಶೈಲಿಯೂ ಅಷ್ಟೇ ಅವರನ್ನು ಆಕರ್ಷಿಸಿತು. ಮೈಸೂರಿನ ಯುವರಾಜರು, ಮಿರ್ಜಾ ಸಾಹೇಬರು, ಗಾಯಕಿ ನಾಗರತ್ನಮ್ಮ, ನತ್ತಿ  ಶಾಸ್ತ್ರಿಗಳು, ಟಿ ಎಸ್ ವೆಂಕಣ್ಣಯ್ಯ, ಯಾರೋ ದಾಸರು, ಜಂಗಮರು ಒಬ್ಬರೇ ಇಬ್ಬರೇ? ನೂರಾರು ಮಂದಿಯ ಒಡನಾಟ. ಒಬ್ಬೊಬ್ಬರಲ್ಲೂ ಒಂದೊಂದು ವಿಶೇಷ . ಡಿ ವಿ ಜಿ ಯವರಿಗೆ ಪ್ರತಿಯೊಬ್ಬರೂ ಸಜ್ಜನರು, ಸ್ನೇಹಪರರು, ರಸಿಕರು. ಅದರಲ್ಲಿ ಅನೇಕರು ಅವರಿಗೆ “ಪ್ರಾತಃ ಸ್ಮರಣೀಯರು”.  

ತಮ್ಮ ಜೀವನದ ಮತ್ತು ಪರಿಚಯದ ವ್ಯಕ್ತಿಗಳ ಪರಿಚಯದೊಂದಿಗೆ, ತಾನೇತಾನಾಗಿ ಮೂಡಿಬಂದಿದೆ ಮುಕ್ಕಾಲು ಶತಮಾನದ ಹಿಂದಿನ ಬೆಂಗಳೂರಿನ ಚಿತ್ರ. ಕೋಟೆ, ಚಾಮರಾಜಪೇಟೆ, ಅವೆನ್ಯೂರಸ್ತೆ, ಚಿಕ್ಕಪೇಟೆ, ಬಳೇಪೇಟೆ, ಮಲ್ಲೇಶ್ವರ, ಬಸವನಗುಡಿಗಳಿಗೆ ಸೀಮಿತವಾಗಿದ್ದ  ಬೆಂಗಳೂರಿನ ವಿವರಣೆಯೊಂದಿಗೆ  ನಮಗೆ ಪರಿಚಿತವಾಗಿರುವ ನರಹರಿರಾಯರಗುಡ್ಡ, ಸಜ್ಜನರಾಯರ ದೇವಸ್ಥಾನ, ಪುಟ್ಟಣ್ಣಶೆಟ್ಟಿ ಟೌನಹಾಲ್ ಇಂತಹ ಸ್ಥಳಗಳ ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕಥೆಗಳು ಹಿತವೆನಿಸುತ್ತವೆ. ನಾನು  ಮತ್ತೆ  ಮತ್ತೆ  ಓದಬಯಸುವ ಕೆಲವು ಪುಸ್ತಕಗಳ ಪೈಕಿ ಮೊದಲನೆಯದು “ಸ್ಮೃತಿ ಚಿತ್ರಗಳು”.
    
ಇಲ್ಲಿಂದ ಮುಂದಿನದು  ಡಿ.ವಿ.ಜಿ ಯವರ ನಾಟಕಗಳು, ವಿಚಾರ ವಿಮರ್ಶೆ, ರಾಜ್ಯಶಾಸ್ತ್ರ, ಕಾವ್ಯ, ಜೀವನ ಧರ್ಮಯೋಗ ಮತ್ತು ಸಂಕೀರ್ಣ. ಇವು ನನಗೆಟುಗುವ ಎತ್ತರಕ್ಕೆ ನಾನಿನ್ನೂ ಬೆಳೆದಿಲ್ಲ. ದೇವರು, ಅಧ್ಯಾತ್ಮಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಆಸಕ್ತಿ ಬಂದಾಗ, ಜೀವನಧರ್ಮಯೋಗ, ಪುರುಷಸೂಕ್ತ, ಈಶೋಪನಿಷತ್ತುಗಳನ್ನು ಓದಲು ಯತ್ನಿಸಿದ್ದೇನೆ. ಜೀವನಧರ್ಮದ ಭೂಮಿಕೆಯಲ್ಲಿ ಡಿ.ವಿ.ಜಿ ಯವರು ಅದರ ವ್ಯಾಸಂಗಕ್ಕೆ ಇರಬೇಕಾದ ಪೂರ್ವ ಸಿಧ್ಧತೆಯನ್ನು ತಿಳಿಸುತ್ತಾರೆ. “ಗೀತೆಯವಿಷಯ ಗಹನವಾದದ್ದು, ಸೂಕ್ಷ್ಮವಾದದ್ದು, ತೊಡಕು ತೊಡಕಾದದ್ದು. ಆತುರ ಇಲ್ಲಿ ಸಲ್ಲದ್ದು. ಮನಸ್ಸಮಾಧಾನ, ಸಾವಧಾನ - ಈ ಎರಡೂ ಗೀತಾಭ್ಯಾಸಕ್ಕೆ ಮೊದಲು ಇರಬೇಕಾದ ಗುಣಗಳು.” ನನಗೆ ಅವೆರಡೂ ಗುಣಗಳೂ ಇನ್ನೂ ಸಿದ್ಧಿಸಿಲ್ಲವೆಂದು  ನನ್ನ ನಂಬಿಕೆ.

ಆದರೆ ಡಿ.ವಿ.ಜಿ ಯವರ ಎತ್ತರವನ್ನು ತಿಳಿದುಕೊಳ್ಳಲು ಅಲ್ಲಲ್ಲಿ ಪುಟಗಳಮೇಲೆ ಕಣ್ಣಾಡಿಸಿದರೆ ಸಾಕು. ಭಗವದ್ಗೀತಾ ತಾತ್ಪರ್ಯದ ವಿವರಣೆ ಹಾಗೂ ಅದರ ಭಾಷೆ, ಅವರ ತತ್ವ ಜ್ಞಾನದ  ಮತ್ತು ಭಾಷಾಪಾಂಡಿತ್ಯದ ಪ್ರೌಢಿಮೆಯನ್ನು ತೋರಿಸಿಕೊಡುತ್ತವೆ.  ಅವರು ಉದಾಹರಿಸಿರುವ ನೂರಾರು ಸಂಸ್ಕೃತ ಶ್ಲೋಕಗಳು ಅವರ ಸಂಸ್ಕೃತ ಪಾಂಡಿತ್ಯದ ವಿಸ್ತಾರವನ್ನು ಕಾಣಿಸುತ್ತವೆ. ಆ ಜ್ಞಾನ ಪರ್ವತವನ್ನು ನಾವು ಹತ್ತುವುದು ಒತ್ತಟ್ಟಿಗಿರಲಿ ದೂರದಿಂದ ಅದರ ಶಿಖರವನ್ನಾದರೂ ಕಂಡರೆ ನಮ್ಮ ಜೀವನ ಸಾರ್ಥಕವಾದೀತು.

ನನ್ನಂಥವನೂ ಸಹ  ಕೊಂಚಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಗುವಂಥ ಸಣ್ಣ ಕೃತಿಗಳು, ದೇವರು, ಈಶೋಪನಿಷತ್ತು, ಮತ್ತು ಪುರುಷಸೂಕ್ತ. ವೇದಾಂತ, ಆಧ್ಯಾತ್ಮ, ತತ್ವ, ಜ್ಞಾನ, ಕರ್ಮಗಳ ಬಗೆಗೆ ನಂಬಿಕೆಯಿಟ್ಟು, ಚಿಂತನೆಮಾಡಿ, ಅವುಗಳ ಪಾಲನೆ ಜೀವನಕ್ಕೆ ಬಹು ಮುಖ್ಯವೆಂದು ಪ್ರತಿಪಾದಿಸುವ ಡಿ ವಿ ಜಿ ಯವರ ಕೊನೆಯಮಾತೇನು ಗೊತ್ತೇ? ? ಈ ಜ್ಞಾನ ತತ್ವಗಳ ಬಗೆಗಿನ ನಂಬಿಕೆ, ಅಭ್ಯಾಸ, ಆಚರಣೆಗಳು ನಮ್ಮನ್ನೊಬ್ಬ ಸತ್ಪ್ರಜೆಯನ್ನಾಗಿಸದಿದ್ದರೆ ಅವೆಲ್ಲ ಅರ್ಥವಿಲ್ಲದ ಆಚರಣೆಗಳು ಮಾತ್ರ ಎಂದು.  ಡಿ.ವಿ.ಜಿ ಯವರ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುವಂತಹ, ಈ ರೀತಿ ಅರ್ಥಬರುವ ವಾಕ್ಯವನ್ನು ಬಹುಶಃ ಪುರುಷಸೂಕ್ತದ ಮುನ್ನುಡಿಯಲ್ಲಿ ನೋಡಿದ ನೆನಪು. ಡಿ.ವಿ.ಜಿ ಯವರ ಚಿಂತನೆಯಲ್ಲಿ ಮೊದಲ ಸ್ಥಾನ ಪ್ರತಿಯೊಬ್ಬನೂ ತನ್ನ ಸಮಾಜದ ಕಟ್ಟುಪಾಡುಗಳಿಗೆ, ಆಯಾಕಾಲದ ಧರ್ಮ - ಕರ್ಮಗಳಿಗೆ ಬದ್ಧನಾಗಿ, ತನ್ನಿಂದ ಸಮಾಜದ ಸ್ಥಿತಿ ಮತ್ತಷ್ಟು ಉತ್ತಮಗೊಳ್ಳುವ ರೀತಿಯಲ್ಲಿ ಬದುಕಬೇಕೆಂದು.

ತಾವು  ಆ  ರೀತಿ ಬದುಕಿ ಅವರು ನಮಗೆ ಉದಾಹರಣೆಯಾದರು. ನಾವು ಅವರ ಲೇಖನ, ಕಾವ್ಯ, ಕಗ್ಗಗಳನ್ನು ಮೆಚ್ಚಿ ಮಾತನಾಡುತ್ತಾ ನಡವಳಿಕೆಯಲ್ಲಿ ಮಾತ್ರ ಅವರ ಸೂಚನೆಗೆ ವಿರುದ್ಧವಾಗಿ ಸಾಗುತ್ತಿದ್ದೇವೆ. ತಮ್ಮ ಮಾತುಗಳಿಂದ ನಮ್ಮ ಸಮಾಜದ ಬುದ್ಧಿ ಹೆಚ್ಚೇನೂ ಬದಲಾಗದೆಂದೂ ಅವರಿಗೆ ತಿಳಿದಿತ್ತು! ಆದ್ದರಿಂದಲೇ ಅವರು ಹೇಳಿದ್ದು

ಕೃತ್ರಿಮವೊ ಜಗವೆಲ್ಲ ಸತ್ಯತೆಯದೆಲ್ಲಿಹುದೋ ।
ಕತೃವೆನಿಸಿದನೆ ತಾನ್ ಗುಪ್ತನಾಗಿಹನು ।।
ಚತ್ರವೀ ಜಗವಿದರೊಳಾರ ಗುಣವೆಂತಹದೋ ।

ಯಾತ್ರಿಕನೆ ಜಾಗರಿರೊ - ಮಂಕುತಿಮ್ಮ ।। (22)                     

ಶನಿವಾರ, ಆಗಸ್ಟ್ 12, 2017

ರಸ್ತೆ ಬದಿಯ ಗಿಡ

ನಾನು ಕವಿಯೂ ಅಲ್ಲ, ಕೆಳಗೆ ಕಾಣುತ್ತಿರುವುದು ಕವನವೂ ಅಲ್ಲ. ವಿಷಯ ಹೀಗೆ. ನಮ್ಮೂರಿನ ಸಾರ್ವಜನಿಕ ಮೈದಾನದ ಸುತ್ತ ನಾವು ಕೆಲವರು ಸೇರಿ ಅರವತ್ತೆಪ್ಪತ್ತು ಸಸಿನೆಟ್ಟಿದ್ದೆವು. ಆಗೀಗ ಅವಕ್ಕೆ ಪಾತಿ  ಮಾಡಿ, ಕಳೆಕಿತ್ತು, ಗೊಬ್ಬರಹಾಕಿ, ಕಡು ಬೇಸಗೆಯದಿನಗಳಲ್ಲಿ ದೂರದಿಂದ ನೀರುಹೊತ್ತು ತಂದು ಹುಯ್ದೆವು. ದೇಹಕ್ಕೆ ಆಯಾಸವಾದರೂ ಮನಸ್ಸಿಗೆ ಹಿತವೆನಿಸಿತು. ಪ್ರತಿ ಮುಂಜಾನೆ ಅಲ್ಲಿ ವಾಯುವಿಹಾರಕ್ಕೆ ಬರುತ್ತಿದ್ದ ನೂರಾರು ಮಂದಿ ನಮ್ಮನ್ನು ಹುಚ್ಚರೆಂಬಂತೆ ಕಂಡು ಮುಂದೆ ನಡೆದರು.  ಒಂದು ಹದಿನೈದಿಪ್ಪತ್ತು ಜನ ಗಿಡ ಬೆಳಸುವ ಬಗ್ಗೆ ಪುಕ್ಕಟೆ ಸಲಹೆಗಳನ್ನು ನೀಡಿದರು. ನಮ್ಮ ಕೆಲಸದಲ್ಲಿ ಕೈಜೋಡಿಸಿದವರು ಇಬ್ಬರು ಮೂವರು. ಇಂದು ಮುಂಜಾನೆ ಒಂದುಗಿಡದಲ್ಲಿ ಅರಳಿದ್ದ  ಕೆಲವೇ ಹೂಗಳನ್ನು ಕುಯ್ದುಕೊಳ್ಳಲು ಒಬ್ಬಾಕೆ ಮುಂದಾದಾಗ ನಾನು ಹೂ ಕುಯ್ಯಬಾರದೆಂದು ಆಕೆಯನ್ನು ವಿನಂತಿಸಿಕೊಂಡೆ. ಆ ಕ್ಷಣದಲ್ಲಿ ಬದಲಾದ ಆಕೆಯ ಮುಖಭಾವ ಈ ಕೆಳಗಿನ ಬರಹಕ್ಕೆ ಪ್ರೇರಣೆಯಾಯಿತು. ಇದು  ಪದ್ಯವೋ ಗದ್ಯವೋ ಅಸಂಭದ್ಧವೋ ನಿರ್ಧರಿಸುವುದು ಓದಿದವರಿಗೆ ಬಿಟ್ಟದ್ದು.

ರಸ್ತೆ ಬದಿಗೆ ನಾನೊಂದು ಸಸಿ ನೆಟ್ಟೆ
ಮರವಾಗಿ ಜನರಿಗೆ ನೆರಳಾಗಲೆಂದು,
ಹೂವಾಗಿ ಮನಸ್ಸಿಗೆ ಮುದನೀಡಲೆಂದು
ಹಣ್ಣಾಗಿ  ಹೊಟ್ಟೆಗೆ ಹಿತವಾಗಲೆಂದು  

ಓಡಾಡುವ ಜನ ನೋಡುತ್ತಲಿದ್ದರು
ನಾ ಅಗೆದದ್ದು, ನೆಟ್ಟಿದ್ದು, ನೀರೂಡಿದ್ದು

ಗಿಡಕ್ಕೆ ದನ ಬಾಯಿಹಾಕಿತು,
ದನಕ್ಕೆ “ಹೋ” ಎನ್ನದ ಜನ ನನಗೆಂದರು
ನಿಮ್ಮ ಗಿಡ ದನ ತಿಂತಾವೆ ನೋಡ್ರಿ”

ಬಿಸಿಲಿಗೆ ಕೊಂಚ ಬಾಡಿತು ಗಿಡ
ನೋಡಿದವರು ನೀರೆರೆಯಲಿಲ್ಲ,
ನಿಮ್ಮ ಗಿಡ ಒಣಗ ಹತ್ತಿದೆ ನೋಡ್ರಿ”

ಮಳೆ ಗಾಳಿಗೆ ಕೊಂಚ ಬಗ್ಗಿತು ಗಿಡ
ನಿಮ್ಮ ಗಿಡ ಬೀಳ್ತದೆ ನೋಡ್ರಿ  
ಬಾಜೂಕ್ಕೆ ಒಂದು ಬಡಿಗಿ ಕಟ್ರಿ “

ಒಂದೇಒಂದು ಸುಂದರ ಹೂಕಂಡಿತೊಂದು ಮುಂಜಾನೆ
ಹೂ ಕೀಳಲು ಮುಂದಾದ ಒಂದುಕೈಗೆ ನಾನೆಂದೆ
“ಬೇಡಿ ಸ್ವಾಮೀ, ಕಿತ್ತ ಹೂ ನಿಮಗೊಬ್ಬರಿಗೆ ಚಂದ
ಗಿಡದಲ್ಲಿ ನಗುವ ಹೂ ನೂರು ಕಣ್ಗಳಿಗೆ ಅಂದ ”

ಮುಖ ದುಮುಗುಟ್ಟಿತಾದರೂ
ಕೈಹಿಂದಾಯಿತು, ಬಾಯಿಮುಂದಾಯಿತು
ನನ್ನ ಕಿವಿಯನ್ನುದ್ದೇಶಿಸಿ ಪಕ್ಕದವರೊಡನೆಂದರು

“ರಸ್ತೆಪಕ್ಕದ ಗಿಡ, ಇವರು ಯಾರುರೀ ಹೇಳಕ್ಕೆ?
ಇವರಪ್ಪನದೇನ್ರಿ ಗಿಡ?”