ಶುಕ್ರವಾರ, ಆಗಸ್ಟ್ 4, 2023

ರಿಕ್ಷಾಚಾಲಕ ಮತ್ತು ರಾಜರತ್ನಂ.






ಮೊನ್ನೆ ಸಂಜೆ ಜಿಟಿಜಿಟಿ ಮಳೆಯಿದ್ದರೂ ಮನೆಯಲ್ಲಿರಲು ಕಾಲುನಿಲ್ಲದೆ ನನ್ನ

ಹಳೆಯ ಸ್ನೇಹಿತನೊಬ್ಬನನ್ನು ನೋಡಲೆಂದು ಹೋದೆ. ಹಿಂದಿನ ಹರಟೆ,

ಇಂದಿನ ಮಾತು, ಮುಂದಿನ ಕಥೆ, ಮುಂತಾದ ಪ್ರಕಾರಗಳನ್ನು ಒಳಗೊಂಡ

ನಮ್ಮ ಕಾಲಕ್ಷೇಪ ಕೊನೆಗೊಳ್ಳುವ ಹೊತ್ತಿಗೆ ವೇಳೆ ಎಂಟರ ಸಮೀಪವಾಯಿತು.

ನಮ್ಮ ಮಾತಿನಂತೆಯೇ ಮಳೆಯೂ ಎಡೆಬಿಡದೆ ಸುರಿಯುತ್ತಲೇ ಇತ್ತು. ನನ್ನ

ಮನೆಯಾಕೆಯಿಂದ “ಇನ್ನೂ ಎಷ್ಟು ಹೊತ್ತು?” ಎಂಬ ಕರೆ ಬರುವ ಮುಂಚೆ,

ತಣ್ಣಗಾಗಿದ್ದ ಕೊನೆಯ ಗುಟುಕು ಕಾಫಿ ಮುಗಿಸಿ, ಮಾತು ಕೊನೆಗೊಳಿಸಿ,

ಮಿತ್ರನಿಗೆ ವಿದಾಯ ಹೇಳಿ, ಛತ್ರಿಬಿಡಿಸಿ ಹೊರಬಿದ್ದೆ. 


ಹೊರಗೆ ಮಳೆ, ಕತ್ತಲು. ನನಗೆ ಮಂಡಿನೋವು ಮತ್ತು ಮಂದಕಣ್ಣು. ಕಾಲಿಟ್ಟರೆ

ಗಡ ಗಡ ಸದ್ದುಮಾಡಿ ಅಲುಗಾಡುತ್ತ, ಕೆಳಗಿನ ಚರಂಡಿಯೊಳಕ್ಕೆ ಕುಸಿದು

ಹೋಗುವುದೇನೋ ಎಂಬ ಹೆದರಿಕೆ ಹುಟ್ಟಿಸುವ, ಚಪ್ಪಡಿಕಲ್ಲುಗಳ ಫುಟ್ಪಾತು.

ಅದರ ಮೇಲೆ ಅಲ್ಲಲ್ಲಿ ಅಡ್ಡಬರುವ ಮರ, ಲೈಟ್ ಕಂಬ, ಅಕ್ಕಪಕ್ಕದ ಅಂಗಡಿಗಳ

ಸಾಮಾನು ಮತ್ತು ಆಚೀಚೆ ಮನೆಯವರ ರಿಪೇರಿ ತಾಜ್ಯ. ರಸ್ತೆಗಿಳಿದರೆ ಅಲ್ಲಿ ಗುಂಡಿ,

ಕೊಚ್ಚೆ, ಮೈಮೇಲೆಯೇ ಹಾಯುವ ಸ್ಕೂಟರುಗಳು, ರಿಕ್ಷಾಗಳು. ಹಾಗೂ ಹೀಗೂ

ಫುಟ್ಪಾತ್ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಛತ್ರಿ ಹಿಡಿದು ಸರ್ಕಸ್ ಮಾಡುತ್ತಾ

ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಸಾಕಾಯಿತು. ನನ್ನ ಮನೆ ಅಲ್ಲಿಂದ ಹೆಚ್ಚಿನ

ದೂರವೇನೂ ಇರದಿದ್ದರೂ, ಹೀಗೆ ರಿಕ್ಷಾಗಳಿಂದ ತಪ್ಪಿಸಿಕೊಂಡು ಎಗರಾಡುತ್ತ

ನಡೆಯುವುದಕ್ಕಿಂತ ಅವುಗಳಲ್ಲೇ ಒಂದನ್ನು ಹಿಡಿದು ಅದರೊಳಗೇ ಕೂತರೆ

ಕ್ಷೇಮವಿನಿಸಿ ಅತ್ತಿತ್ತ ನೋಡಿದೆ. 


ಸಮೀಪ ನಿಂತಿದ್ದ ಒಂದಿಬ್ಬರು ಆಟೋ ಚಾಲಕರು ನನ್ನ ಬಾಯಿಯ ಮಾತು

ಅವರ ಕಿವಿಗೆ ತಾಕುವ ಮುನ್ನವೇ ತಲೆಯಲ್ಲಾಡಿಸಿ ಮತ್ತೆ ತಮ್ಮ ಕೈಲಿದ್ದ

ಮೊಬೈಲಿನಲ್ಲಿ ಮಗ್ನರಾದರು. ಕೊಂಚದೂರದಲ್ಲಿ ಗಾಡಿ ನಿಲ್ಲಿಸಿಕೊಂಡು

ಅರ್ಧಕಣ್ಮುಚ್ಚಿ ತೂಕಡಿಸುತ್ತಿದ್ದ, ನನಗಿಂತ ವಯಸ್ಸಾದವನಂತೆ ಕಾಣುತ್ತಿದ್ದ ಒಬ್ಬ

ಚಾಲಕ “ಸ್ವಾಮೀ ಬರ್ತೀರಾ” ಎಂಬ ನನ್ನ ಮಾತುಕೇಳಿ ಕಣ್ಣುತೆರೆದು “ಎಲ್ಲಿಗೆ” ಎಂದ. 


“ಪದ್ಮನಾಭನಗರ”

“ಅಲ್ಲಿ ಎಲ್ಲಿ ?”  

“ಕಿಡ್ನಿ ಆಸ್ಪತ್ರೆ ಗೊತ್ತಾ?”

“ಗೊತ್ತು. ಹೇಳಿ.”

“ಅಲ್ಲಿಂದ ಕೊಂಚ ಮುಂದಕ್ಕೆ”   

“ಆಸ್ಪತ್ರೆ ಮುಂದೆಬಿಟ್ಟರೆ ಸಾಕಾ?”  

 ಸಾಕೆಂದು ತಲೆಹಾಕಿದೆ. 

“ಮೇಲೆ ಏನಾದ್ರೂ ಕೊಡ್ತೀರಾ?”

ಮತ್ತೊಮ್ಮೆ ತಲೆಹಾಕಿ “ಇಪ್ಪತ್ತು” ಎಂದೆ 

“ಬನ್ನಿ” ಎಂದು ಗಾಡಿ ಸ್ಟಾರ್ಟ್ ಮಾಡಿ ಮೀಟರ್ ತಿರುಚಿದ. 


ಸೀಟಿನ ಎರಡೂ ಕೊನೆಗಳು ಮಳೆಹನಿ ಬಿದ್ದು ಒದ್ದೆಯಾಗಿದ್ದರಿಂದ ಅದನ್ನು ಬಿಟ್ಟು,

ಮಧ್ಯದಲ್ಲಿ ಮುದುರಿ ಕೂತೆ. ಅವನ ರಿಕ್ಷಾಗೆ ಹೆಡ್ ಲೈಟಿಲ್ಲ, ಗಾಜು ಒರಸುವ ವೈಪರ್

ಇಲ್ಲ. ರಸ್ತೆ ದೀಪ ಮತ್ತು ಇತರ ಗಾಡಿಗಳ ದೀಪದ ಬೆಳಕಿನಲ್ಲಿ ರಿಕ್ಷಾ ನಡೆಸುತ್ತಾ,

ರಸ್ತೆ ಗುಂಡಿಗಳನ್ನು ತಪ್ಪಿಸುತ್ತಾ, ಮತ್ಯಾವ ವಾಹನಕ್ಕೂ ಬಡಿಯದಂತೆ ನೋಡಿಕೊಂಡು

ಚಾಕಚಕ್ಯತೆಯಿಂದ ಅವುಗಳ ಮಧ್ಯೆ ನುಸುಳುತ್ತಾ ಹತ್ತುನಿಮಿಷದಲ್ಲಿ ಆಸ್ಪತ್ರೆ

ಮುಂದೆ ಗಾಡಿ ನಿಲ್ಲಿಸಿದ. ರಿಕ್ಷಾದಿಂದ ಇಳಿದು “ಎಷ್ಟಾಯಿತು ಸ್ವಾಮಿ” ಎಂದೆ. 

“ಕೊಡಿ ನೋಡಿಕೊಂಡು, ನೀವೇ ಏಳಿದೀರಲ್ಲಾ” ಎಂದ. ಮೀಟರಿನ ಮೇಲೆ ಇಪ್ಪತ್ತು

ಕೊಟ್ಟೆ. 


ದುಡ್ಡು ಜೇಬಿಗಿರಿಸಿ ಕೇಳಿದ “ಎಷ್ಟು ವಯಸ್ಸು ನಿಮಗೆ”  

“ಅರವತ್ತೇಳು, ಯಾಕೆ?”

“ಈ ಮಳೇಲಿ, ಕತ್ತಲಲ್ಲಿ, ಹೊರಗೆ ಹೊರಟರಲ್ಲಾ ಅದಕ್ಕೆ ಕೇಳಿದೆ” ಎಂದ 

“ಹೊರಡಲಿಲ್ಲ ಸ್ವಾಮೀ, ವಾಪಸು ಬಂದೆ” ಎಂದು ಹೇಳಿ “ನಿಮಗೆಷ್ಟು ವಯಸ್ಸು?”  

“ಎಷ್ಟಿರಬಹುದು, ಹೇಳಿ” ಮರುಪ್ರಶ್ನೆ ಬಂತು !

“ಎಪ್ಪತ್ತರ ಸುತ್ತ ಮುತ್ತ”

“ಮೇಲೈದು ಹಾಕಿ”

“ಎಪ್ಪತ್ತೈದು! ಪರವಾಗಿಲ್ಲ ಬಿಡಿ, ಈ ಮಳೇಲಿ, ಕತ್ತಲಲ್ಲಿ, ಲೈಟಿಲ್ಲದೆ, ವೈಪರಿಲ್ಲದೇ,

ಗಾಡಿ ಓಡಿಸ್ತೀರ, ಮತ್ತೆ ನನ್ನ ಕೇಳ್ತೀರಲ್ಲಾ !”

“ಹೊಟ್ಟೆ ಪಾಡು ಸ್ವಾಮೀ. ಮತ್ತೆ ಹಂಗೇ ಅಭ್ಯಾಸ ಆಗಿದೆ ಬಿಡಿ. ಕತ್ತಲು, ಮಳೆ

ಅಂತ ಕೂತ್ರೆ ಜೀವನ ನಡೀಬೇಕಲ್ಲ?”

“ಅದುಸರಿ ಬಿಡಿ. ಆದ್ರೆ ಗಾಡಿ ಚೆನ್ನಾಗಿ ನಡೆಸ್ತೀರಾ. ನನಗೆ ಕತ್ತಲೇಲಿ ಕಾಣೋದೇ ಇಲ್ಲ.”

“ಎಪ್ಪತ್ತೈದು ವರ್ಷ ಆದ್ರೂ ಕಣ್ಣು ಚೆನ್ನಾಗಿದೆ, ಕೈಕಾಲು ಘಟ್ಟಿ ಇದೆ. ಹೆಂಗೆ ಹೇಳಿ?” ಎಂದು

ಕೇಳಿ, ನನ್ನ ಉತ್ತರಕ್ಕೆ ಕಾಯದೆ 

“ರಾಗಿ ಅಂಬಲಿ ಸ್ವಾಮೀ, ರಾಗಿ ಅಂಬಲಿ” ಎಂದ. ಮತ್ತೆ ಮುಂದುವರೆಯುತ್ತಾ 

“ನಾ ಸಣ್ಣವನಿದ್ದಾಗ ಊಟಕ್ಕೆ ರಾಗಿ ಅಂಬಲಿ. ನಾವು ಜಮೀನಲ್ಲಿ ಕೆಲಸ ಮಾಡುತ್ತಿದ್ದರೆ,

ನಮ್ಮಮ್ಮ ಮಡಕೇಲಿ ಅಂಬಲಿ ತರ್ತಾ ಇದ್ಲು. ರಾತ್ರೀಗೆ ಕುಸಲಕ್ಕಿ ಅನ್ನ. ರಾತ್ರಿ ಉಳಿದ

ಅನ್ನಕ್ಕೆ ನೀರುಹಾಕಿಟ್ಟು ಬೆಳಗ್ಗೆ ಕೆಲಸಕ್ಕೆ ಹೊರಡೋ ಮುಂಚೆ, ಮಜ್ಜಿಗೆ ಬೆರೆಸಿ ತಿನ್ನೋದು.

ಹಿಂಗೇ ಬೆಳೆದೆ ಸ್ವಾಮೀ. ನಾವು ಬೆಳೆದಿದ್ ಅಕ್ಕಿ, ನಾವು ಬೆಳೆದ ರಾಗಿ. ಕಲಬೆರಕೆ

ಊಟ ಅಲ್ಲ. ಅದಕ್ಕೇ ಇವತ್ತೂ ಹೀಗಿದ್ದೀನಿ ನೋಡಿ” 

“ಆವಾಗಿನ ಊಟ ಏನೋ ಒಳ್ಳೆದಾಯ್ತು. ಈಗೇನು ತಿಂತಿದೀರಿ ಹೇಳಿ” 

“ಈಗ ? ನನ್ನ ಕರ್ಮ ತಿಂತಿದೀನಿ ಸ್ವಾಮೀ, ನನ್ನ ಕರ್ಮ. ಅದನ್ನ ಏನು ಕೇಳ್ತೀರಿ”

ಎಂದು ರಿಕ್ಷಾ ಇಂಜಿನ್ ಆಫ್ ಮಾಡಿದ.   


ನಾನು ರಿಕ್ಷಾದಿಂದ ಇಳಿದು, ಅವನಿಗೆ ಹಣಕೊಟ್ಟ ನಂತರ ಪರ್ಸು ಕೈಯಲ್ಲಿಯೇ

ಹಿಡಿದು, ಛತ್ರಿ ಕಂಕುಳಲ್ಲಿಟ್ಟು ನಿಂತಿದ್ದೆ. ಮಳೆಹನಿಯೊಂದಿಗೆ ಪಕ್ಕದಲ್ಲಿದ್ದ ಮರದ

ಮೇಲಿಂದಲೂ ನೀರು ತೊಟ್ಟಿಕ್ಕುತ್ತಿತ್ತು. ಇವನೊಡನೆ ಮಾತಾಡಲು ಶುರುಮಾಡಿ

ತಪ್ಪುಮಾಡಿದೆನೇನೋ ಎನ್ನಿಸಿತು. ಆದರೆ ಅವ ತನ್ನ ಕರ್ಮದ ಕಥೆ ಹೇಳಲು

ತಯಾರಾಗಿದ್ದಂತೆ ಕಂಡಿತು. ಆದ್ದರಿಂದ, ಅವನಿಂದ ಬಿಡಿಸಿಕೊಳ್ಳುವ ಪ್ರಯತ್ನ

ಮಾಡದೆ ಛತ್ರಿ ಬಿಡಿಸಿಕೊಂಡು ನಿಂತೆ.   

 

“ಚೆಂಗಮ್ ಸ್ವಾಮೀ ನನ್ನೂರು. ತಮಿಳುನಾಡು. ತಿರುವಣ್ಣಾಮಲೈ ಹತ್ರ. ನಾವೆಲ್ಲಾ

ಬೇರೆಯವರ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೆವು. ಅವರು ಜಮೀನು

ಕೊಟ್ಟುಬಿಟ್ರು, ನಮಗೆ ಊಟಕ್ಕಿಲ್ಲ ಆಯ್ತು. ಬೆಂಗಳೂರಿಗೆ ಬಂದೆ. ಹದಿನೇಳು

ವರ್ಷ ನನಗೆ. ಸಿಮೆಂಟ್ ಗೋದಾಮಿನಲ್ಲಿ ಸಿಮೆಂಟ್ ಚೀಲ ಅನ್ ಲೋಡಿಂಗ್ ಕೆಲಸ.

ಇನ್ನೂರು ಚೀಲ ಎತ್ತಿ ಹಾಕಿದ್ರೆ ಮೂರು ರೂಪಾಯಿ ಕೂಲಿ. ಅಲ್ಲೇ ಗೋಡೌನಿನಲ್ಲೇ

ಮಲಗೋದು. ಹಂಗೆ ಮೂರುವರ್ಷ ಕೆಲಸ ಮಾಡಿ ಆಮೇಲೆ ಗಾರೆಕೆಲಸದವರಿಗೆ

ಹೆಲ್ಪರ್ ಆಗಿ ಸೇರಿಕೊಂಡೆ. ದಿನಕ್ಕೆ ಆರು ರೂಪಾಯಿ ಕೂಲಿ. ಐದು ವರುಷ

ಕೆಲಸಮಾಡಿ ಆದಮೇಲೆ ರಿಕ್ಷಾ ಓಡಿಸೋದು ಕಲಿತು ರಿಕ್ಷಾ ಬಾಡಿಗೆಗೆ ತಗೊಂಡು

ಓಡಿಸಕ್ಕೆ ಶುರುಮಾಡಿದೆ. ಮೂರು ವರುಷ ಬೇರೆಯವರ ಗಾಡಿ ಓಡಿಸಿ ಆದಮೇಲೆ

ಸಾಲಮಾಡಿ ಸ್ವಂತ ಗಾಡಿ. ನಲವತ್ತು ವರುಷದ ಮೇಲಾಯಿತು ಸ್ವಾಮೀ ರಿಕ್ಷಾ

ಶುರುಮಾಡಿ. ಇಟ್ಟಮಡುವಿನಲ್ಲಿ ಚಿಕ್ಕ ಸೈಟು ತೊಗೊಂಡು ಗುಡಿಸಿಲು ಹಾಕಿಕೊಂಡಿದ್ದೆ.

ಆಮೇಲೆ ಸುತ್ತ ಶೀಟು ಇಟ್ಟು ಶೆಡ್ ಕಟ್ಟಿ, ಈಗ ಗೋಡೆ ಕಟ್ಟಿ ತಾರಸಿ ಹಾಕಿದೀನಿ.

ಮನೇಲಿ ಹೆಂಡತಿ ಮಗ ಇದಾರೆ.” 


“ಬಿಡಿ ಹಾಗಾದ್ರೆ. ಈಗ ಚೆನ್ನಾಗಿದೀರಲ್ಲ ಸಂತೋಷ.” 


“ಏನು ಚೆನ್ನ ಸ್ವಾಮೀ, ಪೂರ್ತಿ ಕೇಳಿ ಆಮೇಲೆ ಹೇಳಿ.”


ನನಗೆ ತಡವಾಗುತ್ತಿತ್ತು. ಮೈ ಅರ್ಧ ತೋಯ್ದು ಚಳಿಯಾಗುತ್ತಿತ್ತು. ಪಕ್ಕದಲ್ಲಿದ್ದ

ಹಣ್ಣಿನ ಗಾಡಿಗೆ ನಾವು ಅಡ್ಡವಾಗಿ ನಿಂತಿದ್ದರಿಂದ ಅವನು ನಮ್ಮನ್ನು ಕೆಕ್ಕರಗಣ್ಣಿನಿಂದ

ನೋಡುತ್ತಿದ್ದ. ಆದರೆ ರಿಕ್ಷಾದವನ ಕಥೆ ಕೇಳದೆ ಹೋಗುವಂತಿಲ್ಲವಲ್ಲ. ಹಾಗೇ ನಿಂತೆ. 


“ನನ್ನ ಹೆಂಡತಿಗೆ ಯಾರೋ ಮಾಟ ಮಾಡಿ, ಅವಳು ನನ್ನನ್ನ ಬಿಟ್ಟು ಹೋಗಿ ಬಿಟ್ಲು.

ಮಗನಿಗೆ ಮೂವತ್ತೆರಡು ವರುಷ. ನನ್ನ ಹೆಂಡತಿ ಜತೆ ಇದಾನೆ. ಮದುವೆ ಇಲ್ಲ.

ಕೆಲಸ ಇಲ್ಲ. ದಿನಾ ಪೂರ್ತಿ ಟಿ ವಿ ನೋಡ್ತಾನೆ. ಹೊಟ್ಟೇಲಿ ಬೆಂಕಿ ಬೀಳತ್ತೆ ಸ್ವಾಮೀ

ನಂಗೆ. ಏನು ಮಾಡೋದು ? ಸಾಲ ಮಾಡಿ ಅವನಿಗೆ ಅಂತ ಇನ್ನೊಂದು ರಿಕ್ಷಾ

ಕೊಂಡು ಕೊಟ್ಟೆ. ಎರಡು ತಿಂಗಳು ಓಡಿಸಿದ. ಆಮೇಲೆ ರಿಕ್ಷಾ ಮಾರಿ ಅಮ್ಮ ಮಗ

ಹಣ ತಿಂದು ಬಿಟ್ರು. ನಾನು ಸಾಲ ತೀರಿಸ್ತಾ ಇದ್ದೀನಿ. ನಾನು ಕಟ್ಟಿದ ಮನೇಲಿ

ಅವರಿದ್ದಾರೆ. ನಾನು ಬೇರೆ ರೂಮು ಬಾಡಿಗೆ ಹಿಡಿದು ಇದ್ದೀನಿ. ಈಗ್ಲೂ ತಿಂಗಳಿಗೆ

ಐದು ಸಾವಿರ ಅವರಿಗೆ ಕೊಡ್ತೀನಿ ಸ್ವಾಮೀ. ಏನೇ ಆದ್ರೂ ಹೊಟ್ಟೇಲಿ ಹುಟ್ಟಿದ ಮಗ,

ಕಟ್ಟಿಕೊಂಡ ಹೆಂಡತಿ, ಹೆಂಗೆ ಬಿಟ್ಟು ಬಿಡೋದು ? ಪ್ರತಿ ತಿಂಗಳೂ ಎರಡನೇ

ತಾರೀಖು ಬಾಗಿಲ ಮುಂದೆ ಕಾಸಿಟ್ಟು ಬರ್ತೀನಿ. ಏನೋ ಯಾವತ್ತಾದ್ರೂ ಮತ್ತೆ

ನನ್ನ ಜತೆ ಬಂದು ಇರ್ತಾರೇನೋ ಅನ್ನೋ ಆಸೆ. ಕೆಟ್ಟ ಜನ್ಮ ಸ್ವಾಮೀ ಇದು.”  


ಇಷ್ಟುಹೇಳಿ ಅರೆಕ್ಷಣ ನಿಲ್ಲಿಸಿ ಏನೋ ಯೋಚಿಸಿ, ಉಸಿರೆಳೆದು ಕೊಂಡು

ಮುಂದುವರೆಸಿದ. “ಮೂರುಬಾರಿ ನಮ್ಮ ದೇವರಿಗೆ ಹರಕೆ ಹೊತ್ತು ಹೋಗಿ ಬಂದೆ.

ತಿರುಪತಿಗೆ  ಹೋಗಿ ಕಾಲಿಂದ ಬೆಟ್ಟ ಹತ್ತಿ ಬಂದೆ. ಏನೂ ಉಪಯೋಗ ಇಲ್ಲ

ಸ್ವಾಮೀ. ಈಗ ಮೂರುತಿಂಗಳ ಹಿಂದೆ ಒಂದಿನ ನನ್ನ ಹೆಂಡತಿ, ಮಗ ನನ್ನ ನೋಡೋಕೆ

ಅಂತ ಬಂದ್ರು. ವಾಪಸು ಬಂದಾರೇನೋ ಅಂತ ಅಂದು ಕೊಂಡೆ. ಆದ್ರೆ ಅವಳು ನನಗೆ

ಏನು ಹೇಳಿದ್ಲು ಹೇಳಿ” ಎಂದ 


“ಗೊತ್ತಾಗಲ್ಲ ಸ್ವಾಮೀ, ನೀವೇ ಹೇಳಿಬಿಡಿ” ಎಂದೆ 


“ನಿನಗೆ ಎಪ್ಪತ್ತೈದಾಯ್ತು. ನೀನಿರೋ ಗಂಟಾ ಮನೆಗೆ ತೊಂದರೆ ಇಲ್ಲ. ನೀ ಸತ್ತ

ಮೇಲೆ ನಾವೇನು ಮಾಡಬೇಕು ? ಮನೆ ನಮ್ಮ ಹೆಸರಿಗೆ ಮಾಡಿಕೊಡು, ಆಮೇಲೆ

ತೊಂದರೆ ಬೇಡ ಅಂದ್ಲು ಸ್ವಾಮೀ. ನೀವೇ ಹೇಳಿ. ಹೆಂಡತಿ ಗಂಡನಿಗೆ ಹೇಳೋ

ಮಾತಾ ಇದು?” ಅಂದ. 


ನನಗೇನೂ ಹೇಳಲು ತೋರದೆ ಸುಮ್ಮನೆ ಲೊಚಗುಟ್ಟಿದೆ. 


“ಬೆಳಗ್ಗೆ ಐದು ಘಂಟೆಗೆ ಏಳ್ತೀನಿ. ಕಸ ಗುಡಿಸಿ, ಗಾಡಿ ತೊಳೆದು, ಸ್ನಾನ ಮಾಡಿ

ದೇವರ ಪೂಜೆ ಮಾಡ್ತೀನಿ. ವಿಭೂತಿ, ಕುಂಕುಮ ಇಟ್ಟುಕೊಂಡು, ಅಲ್ಲೇ ಚಾ

ಅಂಗಡೀಲಿ ನಾಷ್ಟಾಮಾಡಿ ಕಾಫಿ ಕುಡಿದು ಗಾಡಿ ಶುರು ಮಾಡ್ತೀನಿ. ಯಾವಾಗ ಎಲ್ಲಿ

ಏನು ಸಿಕ್ಕಿದ್ರೆ ಅದೇ ತಿಂಡಿ, ಊಟ. ಈಗ ನೋಡಿ ಮನೇಗೆ ಹೋಗಿ ಅನ್ನ ಮಾಡಿಕೊಂಡು

ಊಟ ಮಾಡ್ಬೇಕು. ದೇವರು ಯಾವಾಗ ಕಣ್ಣು ಬಿಡ್ತಾನೋ” ಅಂದ. 


“ಇಷ್ಟಾದಮೇಲೂ ನಿಮಗೆ ದೇವರಮೇಲೆ ನಂಬಿಕೆ ಹೋಗಿಲ್ಲವಲ್ಲ, ಏನೋ

ಮುಂದಾದರೂ ಒಳ್ಳೆದಾಗಲಿ ಬಿಡಿ” ಎಂದೆ 


“ಇದಾನೋ ಇಲ್ಲವೋ, ನನಗೆ ಒಳ್ಳೇದು ಮಾಡ್ತಾನೋ ಇಲ್ಲವೋ, ಗೊತ್ತಿಲ್ಲ ಸ್ವಾಮೀ.

ಇದಾನೆ ಅಂತ ನಂಬಿಕೆ ಇಟ್ಕೊಂಡು ಇರೋದು ನಮ್ಕೆಲಸ. ಇದೀನಿ. ಕೈಕಾಲು

ಘಟ್ಟಿ ಇರೋವರೆಗೂ ಪರವಾಗಿಲ್ಲ. ಇರೋ ಅಷ್ಟುದಿನ ಹಿಂಗೇ ಇದ್ಬಿಡ್ತೀನಿ ಬಿಡಿ”

ಎಂದು ಹೇಳಿ ಗಾಡಿ ಸ್ಟಾರ್ಟ್ ಮಾಡಿದ. 


“ಒಳ್ಳೆದಾಗಲಿ, ಹೋಗಿಬನ್ನಿ” ಎಂದು ಹೇಳಿ ಮನೆ ಕಡೆ ತಿರುಗಿದೆ. 


ಶ್ರೀ ರಾಜರತ್ನಂ ಅವರ ‘ರತ್ನನ ಪದ’ಗಳ  ‘ದೇವ್ರು’  ನೆನಪಿಗೆ ಬಂತು. 


ಮುಚ್ಚು ನಿನ್ಬಾಯ್ ಏ ಬೇವರ್ಸಿ ಭಗವಂತನೆಸ್ರು ನಮ್ಗೆ ತಾರ್ಸಿ 

ಇಲ್ಲದ್ದೆಲ್ಲಾ ಉಟ್ಟಿಸ್ಕೊಂಡಿ ಯಾಕ್ ಸುಂಕೂಗ್ತಿ ಕಾಲಿ 

ನಮ್ಗೆ ದೇವ್ರು ಯೆಂಗವ್ನೆಂದ್ರೆ  ಮುತ್ತೈದೆಗೆ ತಾಲಿ ಮುತ್ತೈದೆಗೆ ತಾಲಿ .. ..... 


ದೇವ್ರಿಲ್ಲಾಂತ ಏಳ್ದ್ರೆ ನೀನು ದೇವ್ರವ್ನೇಂತ ಯೋಳ್ತೀನ್ನಾನು    

ನಂ ತಾಪತ್ರೇನ್ ಮುಳುಗಿಸ್ತೈತೆ ಭಗವಂತ್ನೆಸ್ರಿನ್ ಸಕ್ತಿ 

ಅದಕೆ ನಮ್ಗೆ ಭಗವಂತ್ನೆಸ್ರು ಅಂದ್ರಾಪಾಟಿ ಬಕ್ತಿ 


ದೇವ್ರ್ ಔನಂತೆ ದೇವ್ರ್ ಇಲ್ವಂತೆ 

ಯೊಳೋರು ಯೋಳ್ಳಿ ಅದಕೇನಂತೆ 

ದೇವ್ರ್ ಔನೆಂತ ನಂಕೊಳ್ಳೋದು ನಮ್ಗೆ ಜೀವ ಉಸ್ರು 

ಔನ್ನಲ್ ನಂಕೆ ಮಡಿಕೊಳ್ಳಾದು ನಮ್ಗೆ ನಮ್ದೆ ನಸ್ರು …… ……. 


ಪದವನ್ನು ಮನದಲ್ಲೇ ಗುನುಗುಟ್ಟುತ್ತ ಮನೆಗೆ ಬಂದೆ.  




 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ