ಶನಿವಾರ, ಜುಲೈ 22, 2023

ಡಿ ವಿ ಜಿ - ದೇವರು - ನನ್ನ ಪದ್ಯ

 

ತಮ್ಮ ‘ಮಂಕುತಿಮ್ಮನ ಕಗ್ಗ’ ದ ಮೊದಲಮಾತಿನಲ್ಲಿ ಶ್ರೀ ಡಿವಿಜಿಯವರು, ಆಸಕ್ತರು

ತಮ್ಮ ಪುಸ್ತಕವನ್ನು ಓದಬೇಕಾದ ರೀತಿಯನ್ನು ತಿಳಿಸಿದ್ದಾರೆ. ಮನಬಂದಾಗ

ಒಂದೊಂದು ಪದ್ಯವನ್ನು ಆರಿಸಿಕೊಂಡು ನಿಧಾನವಾಗಿ ಪೆಪ್ಪರಮಿಂಟಿನಂತೆ

ಚಪ್ಪರಿಸಬೇಕೆಂದು ಅವರ ಸಲಹೆ. ನನ್ನ ಮಟ್ಟಿಗೆ ಅವರ ‘ಜೀವನಧರ್ಮಯೋಗ’ವೂ

ಹಾಗೆಯೇ. ಅದನ್ನು ಒಮ್ಮೆಗೇ ಹಿಡಿದು ಕೂತು ಓದಿ ಮುಗಿಸಬೇಕಿಲ್ಲ. ಮನಬಂದಾಗ,

ಯಾವುದೋ ಒಂದು ಪುಟವನ್ನು ತೆರೆದು ಓದುತ್ತಿದ್ದರೆ ಸಾಕು. ಅದರಲ್ಲಿ ಮನತಟ್ಟುವಂಥ,

ಮೆಲುಕುಹಾಕುವಂಥ ಏನಾದರೂ ವಿಷಯವಿದ್ದೇ ಇರುತ್ತದೆ. ಆದುದರಿಂದ ನಾನು

ಅದನ್ನು ಆಗಾಗ ಅವಲೋಕಿಸುತ್ತಿರುತ್ತೇನೆ. ಮೊನ್ನೆ ತೆಗೆದ ಒಂದು ಪುಟದಲ್ಲಿ

ಡಿ ವಿ ಜಿ ಯವರು ತಮ್ಮನ್ನು ಭೇಟಿಯಾಗಲು ಬಂದಿದ್ದ ಜಪಾನೀ ಯುವಕನೊಬ್ಬನೊಡನೆ

ನಡೆಸಿದ ಸಂಭಾಷಣೆಯ ಬಗ್ಗೆ ಬರೆದಿದ್ದು ಕಂಡಿತು. 


ಸಂಸ್ಕೃತಿ, ತತ್ವ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಆತ ಭಾರತೀಯ

ತತ್ವ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಡಿ ವಿ ಜಿ ಯವರನ್ನು ಭೇಟಿಯಾಗಿದ್ದನಂತೆ.

ಎರಡು ಮೂರುಘಂಟೆಗಳಕಾಲ ಸಂವಾದ ನಡೆಸಿ ಆತ ಹೊರಡಲು ಅನುವಾದಾಗ

ಡಿ ವಿ ಜಿ ಯವರು ಆತನಿಗೆ ‘ದೇವರು ನಿನಗೆ ಒಳ್ಳೆಯದು ಮಾಡಲಿ’ ಎಂದು

ಹರಸಿದರಂತೆ. ಆತ ‘ಹಾಗಾದರೆ ನಿಮಗೆ ದೇವರಲ್ಲಿ ನಂಬಿಕೆಯಿದೆಯೇ’ ಎಂದು

ಕೇಳಿದನಂತೆ. ಆ ಪ್ರಶ್ನೆಗೆ ಡಿ ವಿ ಜಿ ಯವರು ಉತ್ತರಿಸಿದ್ದು ಹೀಗಿದೆ. 


“ನಾನು ಈಗ ಎರಡು ಶಬ್ದಗಳ ಬಳಕೆ ಮಾಡಿದೆ. ಒಂದು ‘ದೇವರು’,

ಮತ್ತೊಂದು ‘ಒಳ್ಳೆಯದು’. ನಾವು ಏನೆಲ್ಲವನ್ನು ‘ಒಳ್ಳೆಯದು’ ಎಂದು ತಿಳಿಯುತ್ತೇವೋ

ಅದರ ಹಿಂದೆ ನಿಂತು, ಅದನ್ನು ‘ಒಳ್ಳೆಯ’ದಾಗಿಸಿದ ಶಕ್ತಿಯನ್ನು ನಾನು ದೇವರೆಂದು

ಭಾವಿಸುತ್ತೇನೆ. ನಾನು ನಿಮಗೆ ಒಂದು ಲೋಟ ಕಾಫಿಯನ್ನು ಕೊಟ್ಟೆ. ನೀವು ಅದನ್ನು

ಕುಡಿದು ಕಾಫಿ ಚೆನ್ನಾಗಿದೆ ಎಂದಿರಿ. ನಾ ಕೊಟ್ಟ ಕಾಫಿಯನ್ನು ‘ಚೆನ್ನಾಗಿ’ಸಿದ

ಶಕ್ತಿಯನ್ನು ನಾನು ದೇವರೆನ್ನುತ್ತೇನೆ.”  


‘ದೇವರು’ ಎಂಬ ಪರಿಕಲ್ಪನೆಯ ವಿವರಣೆ ಸುಲಭಸಾಧ್ಯವಲ್ಲ. ನಾವು ಕೆಲವರು

ಒಂದಲ್ಲಾ ಒಂದು ಕಾರಣದಿಂದ, ನಮ್ಮ ಸ್ವಂತ ಅರಿವಿಂದಲೋ - ಇಲ್ಲದೆಯೋ,

ದೇವರಿದ್ದಾನೆ ಎಂಬ ನಂಬಿಕೆಯನ್ನೋ, ಅಥವಾ ಇಲ್ಲವೆಂಬ ಮನಸ್ಥಿತಿಯನ್ನೋ

ಪಡೆದುಕೊಂಡು ಅದಕ್ಕೆ ತಕ್ಕಂತೆ ನಮ್ಮ ಬಾಳನ್ನು ರೂಪಿಸಿಕೊಂಡಿರುತ್ತೇವೆ. ಹೀಗೆ

ಯಾವುದೇ ಕಾರಣದಿಂದ ಧೃಡವಾಗಿ ಒಂದು ಮನಸ್ಥಿತಿಯನ್ನು ಗಳಿಸಿಕೊಂಡಿರುವವರು

ಅದೃಷ್ಟವಂತರೆಂದು ನನ್ನ ನಂಬಿಕೆ. ಡಿ ವಿ ಜಿ ಯವರ ಮಾತಿನಲ್ಲೇ ಹೇಳುವುದಾದರೆ 

“ನಂಬಿದನು ಪ್ರಹ್ಲಾದ ನಂಬದಿರ್ದನು ತಂದೆ - ಕಂಬದಿನೋ, ಬಿಂಬದಿನೋ

ಮೋಕ್ಷ ಅವರವರಿಂಗಾಯ್ತು”. 


ಅವೆರಡೂ ಇಲ್ಲದೆ “ನಂಬಿಯೂ ನಂಬದ ಇಬ್ಬಂದಿಯಾಗಿ ಸಿಂಬಳದ ನೊಣದಂತೆ”

ಒದ್ದಾಡುವವರು ನನ್ನಂಥವರು. ನಾವು ದೇವರ ಅಸ್ತಿತ್ವದ ಬಗ್ಗೆ ಒಂದು ನಿಲುವನ್ನು

ತಾಳಬೇಕಾದರೆ, ಅನೇಕ ಚಿಂತಕರ ಮೂಲಕ ನಮಗೆ ಲಭ್ಯವಿರುವ ವಿವರಣೆಗಳನ್ನು

ತಿಳಿದುಕೊಂಡು ಅದನ್ನು ಮನದಲ್ಲಿ ಮತ್ತೆ ಮತ್ತೆ ಮಂಥನ ಮಾಡಿ ನಮ್ಮದೇ ಒಂದು

ತೀರ್ಮಾನಕ್ಕೆ ಬರಬೇಕಾಗುತ್ತದೆ. ಅದು ಎಲ್ಲರಿಗೂ ಸಾಧ್ಯವಿಲ್ಲ, ಸಮಯವಿಲ್ಲ

ಅಥವಾ ಅದಕ್ಕೆ ಬೇಕಾದ ಮನಸ್ಥಿತಿಯಿಲ್ಲ. ಜತೆಗೆ ಆ ರೀತಿಯ ಚಿಂತನೆಯ

ಅವಶ್ಯಕತೆಯಿದೆಯೇ ಎಂಬುದಕ್ಕೂ ಖಚಿತವಾದ ಉತ್ತರವಿಲ್ಲ ! ಡಿವಿಜಿಯವರಂಥ

ಕೆಲವರು ಅದರ ಬಗ್ಗೆ ಚಿಂತನೆಮಾಡಿ ತಮ್ಮ ನಿಲುವನ್ನು ಸರಳವಾಗಿ ಬರೆದಿರಿಸುವ

ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೂ ಕೊನೆಗೆ ದಕ್ಕಿದ್ದು “ಕಾವನೊರ್ವನಿರಲ್ಕೆ

ಜಗದ ಕಥೆಯೇಕಿಂತು?” ಎಂಬ ಪ್ರಶ್ನೆಯೇ !


ಹಾಗಾಗಿ, ಆ ತೊಂಚಾವಂಚಕ್ಕೆ ಬೀಳದೆ, ಒಂದು ಮೂರ್ತಿಯನ್ನು ದೇವರೆಂದು

ಭಾವಿಸಿ ಅದಕ್ಕೆ ಕೈಮುಗಿದು ಪೂಜೆ ಸಲ್ಲಿಸುವುದು ಸುಲಭವಾದ ಕೆಲಸ.

ಅದರಿಂದಲೇ ನಮ್ಮ ಸುತ್ತ ಮುತ್ತ ಇಷ್ಟೊಂದು ದೇವಸ್ಥಾನಗಳು, ಪೂಜೆಗಳು,

ಹಬ್ಬ ಹರಿದಿನಗಳು. 


ಗಹನವಾದ ಈ ವಿಷಯ ಒಂದು ಬದಿಗಿರಲಿ. ನಾನೇನೋ ಹೇಳಲು ಹೊರಟು

ಈ ಚಕ್ರವ್ಯೂಹದಲ್ಲಿ ಕಾಲಿಟ್ಟುಬಿಟ್ಟೆ ! ನಾನು ಈ ಬರಹವನ್ನು ಪ್ರಾರಂಭಿಸಿದ

ಉದ್ದೇಶ್ಯ ಏನೆಂದರೆ, ಈ ಕೆಳಗೆ ಕಾಣಿಸಿರುವ ನನ್ನ ಪದ್ಯ, ನಾನು ಮೇಲೆ ತಿಳಿಸಿರುವ,

ಡಿವಿಜಿ ಮತ್ತು ಜಪಾನೀ ಯುವಕನ ಮಧ್ಯೆ ನಡೆದ ಸಂಭಾಷಣೆಯಿಂದ

ಪ್ರಚೋದಿತವಾದದ್ದು ಎಂಬ ವಿಷಯವನ್ನು ತಿಳಿಸುವುದಷ್ಟೇ ! 



ಎಲ್ಲಿ ಕಾಣಲೊ ಹರಿಯೇ 

ನನ್ನ ಅರಿವಿಗೆ ಬಾರದ 

ನಿನ್ನ ಇರವನು 


ಬೆಳಗಿನಲಿ ಹೊಳೆಹೊಳೆವ    

ಎಳೆಬಿಸಲ ಕಿರಣದಲಿ 


ಪರಿಪರಿಯ ಪುಷ್ಪಗಳ    

ಪರಿಮಳದ ಘಮಲಿನಲಿ 


ಹಕ್ಕಿ ಇಂಚರದ 

ಇಂಪಾದ ಗಾನದಲಿ 


ಮುಂಜಾನೆ ಮುದವೀವ  

ತಂಗಾಳಿ ತಂಪಿನಲಿ  


ಕಂಗಳನು ತಂಗೊಳಿಪ

ನಳನಳಿಪ ಹಸುರಿನಲಿ 


ಜೀವದಲಿ ಜಡಗಳಲಿ

ತೃಣರೇಣು ಕಣಗಳಲಿ 


ಕಂಡಲ್ಲಿ, ಕಾಣದಲಿ

ಕಾಣ್ವ ಮನವಿದ್ದಲ್ಲಿ

ಬಗೆಬಗೆಯವೇಷದಲಿ 

ಬ್ರಹ್ಮಾಂಡ ರೂಪದಲಿ ! 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ