ಭಾನುವಾರ, ಸೆಪ್ಟೆಂಬರ್ 17, 2023

ಗಣಪತಿ - ಕಥೆಯ ಹಿಂದಿನ ಚಿಂತನೆ




ಗಣೇಶ ಬಂದ, ಕಾಯಿ ಕಡುಬು ತಿಂದ, ಹೊಟ್ಟೆಮೇಲೆ ಗಂಧ, ಚಿಕ್ಕೆರೇಲಿ ಬಿದ್ದ, ದೊಡ್ಕೆರೇಲಿ  ಎದ್ದ !  ಇದು ನಾವು ಚಿಕ್ಕವರಿದ್ದಾಗ ಹಬ್ಬದ ಸಮಯದಲ್ಲಿ ಹೇಳುತ್ತಿದ್ದ ಶಿಶುಗೀತೆ. ಚಿಕ್ಕಕೆರೆ ದೊಡ್ಡಕೆರೆಗಳು ಯಾಕೆ ಎಂಬುದು ನನಗೆ ಇನ್ನೂ ತಿಳಿದಿಲ್ಲ !  ವಿದ್ಯಾಧಿಪತಿ ಎಂದೂ, ವಿಘ್ನ ನಾಶಕನೆಂದೂ ಹೆಸರಾದ ಗಣೇಶ ಎಲ್ಲರಿಗೂ ಬಹಳ ಪ್ರಿಯನಾದ ದೇವರು. ಅದರಲ್ಲೂ ಅವನ ಸ್ತುತಿಯಿಂದ ಕೆಲವು ಅಂಕ ಹೆಚ್ಚಿಗೆ ಗಳಿಸಬಹುದೆಂಬ ನಂಬಿಕೆಯಿರುವುದರಿಂದ ವಿದ್ಯಾರ್ಥಿಗಳಿಗೆ ‘ಪೆಟ್’ ದೇವರು ! ನನ್ನ ಸ್ನೇಹಿತರನೇಕರು ಪರೀಕ್ಷೆಗೆ ಬರುವ ಮುಂಚೆ ಗಣಪನಿಗೆ ಪ್ರದಕ್ಷಿಣೆ ಹಾಕಿ ಬರುತ್ತಿದ್ದರು! 


ಅದೇನೇ ಇರಲಿ. ನಾವು ಹಬ್ಬಕ್ಕೆಂದೇ ಪೇಟೆಯಿಂದ ಮೂರ್ತಿಯೊಂದನ್ನು ತಂದು, ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ವಿಸರ್ಜಿಸುತ್ತಿದ್ದದ್ದು ಗಣೇಶನ ಹಬ್ಬದಲ್ಲಿ ಮಾತ್ರ. ಮತ್ತು ನಮ್ಮ ಮನೆಗೆ ಪುರೋಹಿತರೊಬ್ಬರು ಬಂದು ಪೂಜೆ ನಡೆಸಿಕೊಡುತ್ತಿದ್ದದ್ದೂ ಗಣೇಶನ ಹಬ್ಬದಲ್ಲಿ ಮಾತ್ರ. ಹಾಗಾಗಿ ಗಣೇಶನ ಹಬ್ಬವೆಂದರೆ ಮಂಟಪ, ತೋರಣ, ಬಾಳೆಕಂಭ, ಕಡುಬುಗಳ  ಸಂಭ್ರಮ. ಕಾಲಾನುಕ್ರಮದಲ್ಲಿ ಆಚರಣೆಗಳು ಕೊಂಚಮಟ್ಟಿಗೆ ಹಿಂದೆ ಮುಂದೆ ಆಗಿವೆಯಾದರೂ ಚಿಕ್ಕಂದಿನ ಸಂಭ್ರಮದ ಒಂದು ಭಾಗವಾದರೂ ಚೌತಿಯ ಸಮಯದಲ್ಲಿ ಈಗಲೂ ಕಾಣಿಸಿಕೊಳ್ಳುತ್ತದೆ !


ಗಣೇಶ ಚೌತಿಯ ಹಿಂದಿನ ದಿವಸ ಅಂದರೆ ತದಿಗೆಯ ದಿವಸ ನಮ್ಮಲ್ಲಿ ಗೌರಿಪೂಜೆ. ನಮ್ಮ ನಂಬಿಕೆಯ ಪ್ರಕಾರ ತವರಿಗೆ, ಅಂದರೆ ನಮ್ಮ ಮನೆಗಳಿಗೆ ಬಂದ ತಾಯಿಯನ್ನು ವಾಪಸು ಕರೆದೊಯ್ಯಲೆಂದು ಗಣಪತಿ ನಮ್ಮಲ್ಲಿಗೆ ಬರುತ್ತಾನೆ. (ಪಾರ್ವತಿದೇವಿಗೆ, ಅಥವಾ ಹಬ್ಬದ ಸಮಯದಲ್ಲಿ ನಾವೆನ್ನುವಂತೆ ಸ್ವರ್ಣಗೌರಿಗೆ, ನಮ್ಮ ಮನೆ ಅದುಯಾಕೆ, ಹೇಗೆ ತವರಾಯಿತೋ ನನಗೆ ತಿಳಿಯದು.) ತಾಯಿಯನ್ನು ಕರೆದೊಯ್ಯಲು ಬಂದ ಗಣಪನಿಗೂ ನಮ್ಮಿಂದ ಸ್ವಾಗತ, ಪೂಜೆ, ಹಬ್ಬ. ಮಗಳು ತವರಿಗೆ ಬಂದರೆ ತಂದೆ ತಾಯಿಯರಿಗೆ ಸಂಭ್ರಮ. ಮತ್ತೆ  ಮೊಮ್ಮಗ ಬಂದರೆ ಆ ಸಂಭ್ರಮ ಇನ್ನೂ ಒಂದು ಕೈ ಹೆಚ್ಚಲ್ಲವೇ ? ಅತ್ಯಂತ ಉಮೇದಿನಿಂದ ನೈವೇದ್ಯದ ಪದಾರ್ಥಗಳು ತಯಾರಾಗುತ್ತವೆ. ಸರಿ, ಮನೆಗೆ ಬಂದ ಗಣಪ ಅಕ್ಕರೆಯಿಂದ ಇಕ್ಕಿದ್ದನ್ನೆಲ್ಲಾ ತಿಂದ. ಚನ್ನಾಗಿ ತಿಂದ. ಭಾರವಾದ ಹೊಟ್ಟೆಹೊತ್ತು ವಾಪಸು ಹೊರಟ. ಅಜ್ಜಿ, ತಾತ ಭಾರವಾದ ಮನದಿಂದ ಬೀಳ್ಕೊಟ್ಟು ಮತ್ತೊಮ್ಮೆ ಬೇಗ ಬಾ ಎಂದು ಕೈಬೀಸಿದರು. ಮಹಾರಾಷ್ಟ್ರದಲ್ಲಿ ಗಣಪತಿ ವಿಸರ್ಜನೆಯ ಸಮಯದಲ್ಲಿ ಕೂಗುವಂತೆ, “ಫುಡಚಾ ವರ್ಷಿ ಲೌಕರ ಯಾ” ! 


ಗಣಪನ ಭಾರ ಹೊತ್ತ ಮೂಷಿಕ (ಅದಕ್ಕೂ ಹೊಟ್ಟೆಭಾರ!) ಹಾಗೂ ಹೀಗೂ ಹೆಜ್ಜೆ ಹಾಕುತ್ತಿತ್ತು. ಮೊದಲೇ ಕತ್ತಲೆ, ದಾರಿಕಾಣದು. ತಡವರಿಸುತ್ತಾ ನಡೆವಾಗ ಆ ಹಾವು ಎದುರಿಗೆ ಬರಬೇಕೇ ? ಮೂಷಿಕ ಬೆದರಿತು, ಅದುರಿತು. ಅಂಬಾರಿಯಿಲ್ಲದ ಮೂಷಿಕದ ಮೇಲೆ ಕುಳಿತಿದ್ದ ಇವ ಕೆಳಗೆ ಬಿದ್ದ. ಒಡೆದೇ ಹೋಯಿತು ಹೊಟ್ಟೆ. ಉಂಡೆ, ಲಡ್ಡುಗೆಗಳು ಉರುಳಾಡಿದವು. ತನಗೆ ಅಷ್ಟು ಪ್ರಿಯವಾದ ಉಂಡೆಗಳು, ಅಜ್ಜಿ ತಾತ ಪ್ರೀತಿಯಿಂದ ತಿನ್ನಿಸಿದ ತಿಂಡಿಗಳು. ಬಿಡುವುದುಂಟೇ ? ಹೇಗೂ ಯಾರೂ ನೋಡುತ್ತಿಲ್ಲವೆಂದು ಎಲ್ಲವನ್ನೂ ಎತ್ತಿ ಮತ್ತೆ ಹೊಟ್ಟೆಗೆ ತುಂಬಿಸಿದ. ಹತ್ತಿರವಿದ್ದ ಹಾವನ್ನೇ ಸೆಳೆದು ಬೆಲ್ಟ್ ಮಾಡಿ ಕಟ್ಟಿದ. ಪ್ರಯಾಣ ಮುಂದುವರೆಸಿದ. 


ಆದರೆ ಇದು ಆಕಾಶದಲ್ಲಿದ್ದ ಚಂದ್ರನ ಕಣ್ಣಿಗೆ ಬೀಳದಿರುವುದುಂಟೇ ? ಅವ ಕಂಡ. ನಕ್ಕ. ಬಿದ್ದು ಬಿದ್ದು ನಕ್ಕ. ಇವನಿಗೆ ರೇಗಿತು. ತನ್ನ ಹಲ್ಲನ್ನೇ ಮುರಿದು ಅವನಿಗೊಂದು ಪೆಟ್ಟು ಕೊಟ್ಟ! ಚಂದ್ರನ ಮೂತಿ ಸೊಟ್ಟಗಾಯಿತು. 


ಇದು ನಾವೆಲ್ಲರೂ ಬಲ್ಲ ಕಥೆಯಲ್ಲವೇ ? ಇದು ಬರಿಯ ರಂಜನೆಗೆಂದು ಕಟ್ಟಿದ ಕಥೆಯಲ್ಲದೆ ಇದರ ಹಿಂದೆ ಏನಾದರೂ ಹೆಚ್ಚಿನ ಅರ್ಥ ಇರಬಹುದೇ ಎಂಬ ಕುತೂಹಲ ನನಗೆ. ಆ ದಿಸೆಯಲ್ಲಿ ಚಿಂತನೆಮಾಡಿದಾಗ, ಗಣೇಶನಿಗೆ ಮತ್ತು ಮೇಲ್ಕಾಣಿಸಿದ ಪ್ರಸಂಗಕ್ಕೆ, ನಮಗೆ ಮೇಲುನೋಟಕ್ಕೆ ಕಾಣಿಸುವುದಕ್ಕಿಂತ ಹೆಚ್ಚಿನ ಅರ್ಥವೊಂದು ಕಾಣಬರುತ್ತದೆ.  


ಗಣೇಶನಿಗೆ ಆನೆಯ ತಲೆ. ನಾವು ಕಾಣುವ ಪ್ರಾಣಿಗಳ ಪೈಕಿ ಬುದ್ಧಿಗೂ, ನೆನಪಿನ ಶಕ್ತಿಗೂ ಹೆಸರುವಾಸಿಯಾದ ಪ್ರಾಣಿ, ಆನೆ.   ಅದರ ತಲೆಯಲ್ಲಿ ಎದ್ದುಕಾಣುವ ಭಾಗ ಅದರ ಕಿವಿ.  ಮೊರದಗಲ !  “ಮೋರೆಗಪ್ಪಿನ ಭಾವ, ಮೊರದಗಲದ ಕಿವಿ, ಕೋರೆದಾಡೆಯವನ್ಯಾರಮ್ಮಾ ?” ಎನ್ನುತ್ತಾರೆ ಕನಕದಾಸರು. “ನಮ್ಮಮ್ಮ ಶಾರದೆ” ಗೀತೆಯಲ್ಲಿ. ನಾವು ಗುರುಗಳಿಂದ ಪಾಠಕೇಳಿ ಬುದ್ಧಿವಂತರಾಗುವುದಲ್ಲವೇ? ದೊಡ್ಡ ಕಿವಿಗಳು, ಎಲ್ಲ ವಿಷಯಗಳನ್ನು ಸೆಳೆದುಕೊಂಡು ಕೇಳಿ, ಸಂಗ್ರಹಿಸಿ, ಬುದ್ಧಿ ಬೆಳಸಿಕೊಳ್ಳುವ ಸಂಕೇತ. ಜ್ಞಾನಾರ್ಜನೆಯ ಸಂಕೇತ. ತಾನು ಬುದ್ಧಿ ಬೆಳಸಿಕೊಳ್ಳುತ್ತಿದ್ದರೆ ತಾನೆ ಮತ್ತೊಬ್ಬರಿಗೆ ಕೊಡುವುದು ? ಗಣಪತಿ ತನ್ನ ಜ್ಞಾನ ಬೆಳಸಿಕೊಳ್ಳುತ್ತಾನೆ, ಕೇಳಿಕೊಂಡವರಿಗೆ ಹಂಚುತ್ತಾನೆ !


ಗಣೇಶ ಇಂದ್ರಿಯ ಚಪಲಗಳಿಂದ ದೂರವುಳಿದವ. ಮೇಲೆ ತಿಳಿಸಿದ ಗೀತೆಯ ಮತ್ತೊಂದು ಚರಣದಲ್ಲಿ “ರಾಶಿ ವಿದ್ಯೆಯಬಲ್ಲ, ರಮಣಿಹಂಬಲನೊಲ್ಲ, ಭಾಷಿಗನಿವನ್ಯಾರಮ್ಮಾ” ಎಂದರು ಕನಕದಾಸರು. ಹೀಗೆ ಬಹಳ ಬಲವಾದ ಇತರ ಚಾಪಲ್ಯಗಳಿಂದ ದೂರವುಳಿದ ಗಣಪನೂ ಜಿಹ್ವಾಚಾಪಲ್ಯಕ್ಕೆ ಬಲಿಯಾದ ! ಪ್ರಕೃತಿಯ ಸೆಳೆತ ಒಮ್ಮೊಮ್ಮೆ ಎಂಥವರನ್ನೂ ದಾರಿತಪ್ಪಿಸಬಹುದೆಂಬ ಸೂಚನೆ ಇದು. ಇಂಥ ಉದಾಹರಣೆಗಳನ್ನು ನಮ್ಮ ಪುರಾಣಗಳಲ್ಲಿ ಅನೇಕ ಕಡೆ ನೋಡಬಹುದು. 


ಸರಿ, ಹೊಟ್ಟೆಬಿರಿಯತಿಂದ ಗಣಪತಿ ದಾರಿಯಲ್ಲಿ ಬಿದ್ದ. ಒಡೆಯಿತು ಹೊಟ್ಟೆ. ಒಡೆದ ಹೊಟ್ಟೆಯನ್ನು ಕಟ್ಟಿದ್ದು ಯಾವುದರಿಂದ ? ಹಾವಿನಿಂದ. ಹಾವು ನಮ್ಮ ದೇಹದಲ್ಲಿನ ಕಾಮನೆಗಳ ಸಂಕೇತ. ಅವು ನಮ್ಮ ಕೈಗೆ ಸಿಗದಂತೆ ನುಣುಚಿಕೊಂಡು ಹಾವಿನಂತೆ ನಮ್ಮೊಳಗೆ ಹರಿದಾಡುತ್ತವೆ, ಅಥವಾ ಎಲ್ಲೋ ಮೂಲೆಯಲ್ಲಿ ನಮಗೆ ಕಾಣದಂತೆ ಅಡಗಿದ್ದು  ಇದ್ದಕ್ಕಿದ್ದಂತೆ ಯಾವಾಗಲೋ ಹೊರಬಂದು ಭುಸ್ಸೆನ್ನುತ್ತವೆ ! ಆದ್ದರಿಂದ ಗಣಪತಿ ತನ್ನ ಹೊಟ್ಟೆಯನ್ನು ಹಾವಿನಿಂದ ಕಟ್ಟಿದ್ದು ತನ್ನ ಜಿಹ್ವಾಚಾಪಲ್ಯದ ಕಾಮನೆಯನ್ನೂ ಕಟ್ಟಿಟ್ಟ ಸಂಕೇತ.  


ಇದನ್ನು ಕಂಡು ನಕ್ಕವನ್ಯಾರು? ಚಂದ್ರ. ನಮ್ಮ ಎಲ್ಲ ಕಾಮನೆಗಳಿಗೆ ಚಂದ್ರ ಅಧಿಪತಿ. ನಾವು ಇಂಗ್ಲೀಷಿನಲ್ಲಿ ‘ಮೂಡ್ಸ್’ ಎನ್ನುತ್ತೇವಲ್ಲ, ಅದಕ್ಕೆ ಸೂಕ್ತ ಕನ್ನಡ ಪದವೇನೋ  ತಿಳಿಯದು. ಮನಸ್ಥಿತಿ ಎನ್ನೋಣವೇ ? ಅದರ ನಿಯಂತ್ರಕ ಚಂದ್ರನಂತೆ.  ಅದರಿಂದಲೇ “ಹುಣ್ಣಿಮೆ ಅಮಾವಾಸ್ಯೆ ಸಮಯದಲ್ಲಿ ಹುಚ್ಚು ಏರಿಳಿತವಾಗುತ್ತದೆ” ಎಂಬ ಪ್ರತೀತಿ ಇರುವುದು. ಬೇರೆ ವಿಷಯಗಳಲ್ಲಿ ತನ್ನ ಅಂಕೆಗೆ ಸಿಗದಂತಿದ್ದ ಗಣಪನೂ ತನ್ನ ಅಧೀನದಲ್ಲಿರುವ ನಾಲಿಗೆ ಚಪಲಕ್ಕೆ ಸಿಕ್ಕಿಬಿದ್ದು, ನಂತರ ನೆಲಕ್ಕೂ ಉರುಳಿಬಿದ್ದನೆಂದು ಚಂದ್ರ ನಕ್ಕ. ರುಚಿಯನ್ನು ಅನುಭವಿಸುವುದು ನಾಲಿಗೆಯಾದರೂ, ರುಚಿ ನಾಲಿಗೆಗೆ ತೋರುವಂತೆ ಜಗಿದು ನೀಡುವುದು ಹಲ್ಲಲ್ಲವೇ ? ಅದರಿಂದ ಮತ್ತೊಮ್ಮೆ ತಾನು ಹೀಗೆ ಚಪಲಕ್ಕೆ ಸಿಲುಕುವುದಿಲ್ಲವೆಂದು ತೋರಿಸಲು ಗಣಪತಿ ತನ್ನ ಹಲ್ಲನ್ನೇ ಮುರಿದು ಚಂದ್ರನಿಗೆ ಬಡಿದ ! 


ಕಾಮನೆಗಳಿಗೆ ಸಿಲುಕಿದರೆ ಕೊನೆಗೆ ಉರುಳಿಬೀಳುವ ಪರಿಸ್ಥಿತಿಯೇ ಎಂದು ಭಗವದ್ಗೀತೆಯೂ ಹೇಳುತ್ತದೆ. ಎರಡನೇ ಅಧ್ಯಾಯದ ೬೨ - ೬೩ ನೇ ಶ್ಲೋಕಗಳ  “ಧ್ಯಾಯತೋ ವಿಷಯಾನ್ ಪುಂಸಃ, ಸಂಗಸ್ತೇಷೂಪಜಾಯತೇ” ಎಂಬ ಸಾಲಿನಿಂದ ಹಿಡಿದು  “ಬುದ್ಧಿನಾಶಾತ್ ವಿನಶ್ಯತಿ” ವರೆಗಿನ ಸಾಲುಗಳ ಅರ್ಥ ಅದೇ. ಹಾಗೆಂದರೆ ಎಲ್ಲ ಕಾಮನೆಗಳನ್ನು ಪೂರ್ತಿ ಕಟ್ಟಿ ಹೂತಿಡಬೇಕೆ ಎಂಬ ಪ್ರಶ್ನೆ ಬಂತು. ಕಟ್ಟಿಡಬೇಕಿಲ್ಲ ಅಂಕೆಯಲ್ಲಿಡಬೇಕು ಎಂದು ಕೃಷ್ಣ ಹೇಳಿದ. ಇಂದ್ರಿಯಗಳು ನಮ್ಮನ್ನು ಆಡಿಸಬಾರದು. ನಮಗೆ ಬೇಕಾದಂತೆ ಅವು ಆಡಬೇಕು!


ತಾನು ಉರುಳಿಬಿದ್ದು ಹೊಟ್ಟೆ ಒಡೆದುಕೊಂಡ ಕಥೆಯ ಮೂಲಕ  -  ಹೊಟ್ಟೆ ತುಂಬುವಷ್ಟು ಊಟಮಾಡಿ, ಹೊಟ್ಟೆ ಬಿರಿಯ ಉಣ್ಣಬೇಡಿ. ಕಾಮನೆಗಳಿರಲಿ, ನಿಮ್ಮ ಹದ್ದುಬಸ್ತಿನಲ್ಲಿರಲಿ ಎಂದು ಗಣಪತಿ ನಮಗೆ ತಿಳಿಯಹೇಳುತ್ತಿದ್ದಾನೆ ! 


ಇಲ್ಲಿಯವರೆಗೂ ನನ್ನ ಬರಹವನ್ನು ಓದಿಕೊಂಡು ಬಂದ ನಿಮಗೆ ಧನ್ಯವಾದಗಳು ಹಾಗೂ  ನಾಳೆಯ ಗಣೇಶನ ಹಬ್ಬದ ಶುಭಾಶಯಗಳು. ಗಜಮುಖಗೆ, ಗಣಪತಿಗೆ, ನನ್ನ ವಂದನೆಗಳು.  


  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ