ಹತ್ತುಹದಿನೈದು ವರುಷಗಳ ಹಿಂದೆ ಒಮ್ಮೆ ಉಡುಪಿಯಿಂದ ಗೋವಾಕ್ಕೆ ಬರುತ್ತಿದ್ದಾಗ ಬೈಂದೂರು ದಾಟಿ ೩-೪
ಕಿಲೋಮೀಟರ್ ಕಳೆದ ನಂತರ ನಿರ್ಜನ ಪ್ರದೇಶವೊಂದರಲ್ಲಿ, ರಸ್ತೆಯ ಎಡಭಾಗದಲ್ಲಿ ‘ಕಿರುಮಂತ್ರಾಲಯ’ -
‘ರಾಘವೇಂದ್ರಸ್ವಾಮಿಗಳ ಬೃಂದಾವನ’ ಎಂಬ ಫಲಕ ಕಂಡು ಅಚ್ಚರಿಗೊಂಡು ಗಾಡಿ ನಿಲ್ಲಿಸಿದೆ. ಫಲಕದಲ್ಲಿದ್ದ ಬಾಣ,
ಪಕ್ಕದಲಿದ್ದ ಒಂದು ಗುಡ್ಡದ ಮೇಲಕ್ಕೆ ದಾರಿ ತೋರುತ್ತಿತ್ತು. ಡಾಂಬರು ರಸ್ತೆಯಿದ್ದುದರಿಂದ ಗುಡ್ಡದ ಮೇಲಕ್ಕೆ ಗಾಡಿ
ನಡೆಸಿದೆ. ಹೆದ್ದಾರಿಯಿಂದ ಅನತಿ ದೂರದಲ್ಲಿಯೇ ಗುಡ್ಡದ ಮೇಲಿನ ಸಮತಟ್ಟಾದ ಸ್ಥಳದಲ್ಲಿ ಒಂದು ಸಣ್ಣ ಕೊಠಡಿ
ಮತ್ತು ಅದರೊಳಗೆ ಒಂದು ಚಿಕ್ಕದಾದ ಸುಂದರ ಕೆತ್ತನೆಯ ಬೃಂದಾವನ, ಪ್ರಾಣದೇವರು ಮತ್ತು
ಶ್ರೀ ರಾಘವೇಂದ್ರಸ್ವಾಮಿಗಳ ಮೂರ್ತಿ ಇದ್ದವು.
ಬೈಂದೂರು - ಭಟ್ಕಳ ಎರಡೂ ಮುಸಲ್ಮಾನರ ಸಂಖ್ಯೆ ಹೆಚ್ಚು ಇರುವ ಜಾಗಗಳು. ಅವೆರಡರ ಮಧ್ಯೆ ನಿರ್ಜನವಾದ
ಒಂದು ಗುಡ್ಡದಮೇಲೆ ರಾಯರ ಬೃಂದಾವನ ! ಅದರ ಬಗ್ಗೆ ವಿಚಾರಿಸಲು ಸುತ್ತಮುತ್ತ ಯಾರೂ ಇಲ್ಲ.
ಯಾವುದೂ ವಸತಿಯಿಲ್ಲ. ಏನೇ ಇರಲಿ, ಬೃಂದಾವನ ಕಂಡು ಸಂತೋಷವಾಯಿತು. ಒಂದೆರಡು ನಿಮಿಷ
ಆಚೀಚೆ ಅಡ್ಡಾಡಿ ನೋಡಿ, ರಾಯರಿಗೆ ನಮಸ್ಕರಿಸಿ ವಾಪಸುಬಂದೆ. ಗುಡ್ಡದ ಮೇಲೆ ಅದೊಂದು ಕೊಠಡಿಯ ವಿನಾ
ಮತ್ತೇನೂ ಇಲ್ಲ. ರಾಯರ ವಿನಾ ಮತ್ಯಾರೂ ಇಲ್ಲ !
ನಂತರ ಅನೇಕಬಾರಿ ಉಡುಪಿ/ ಮಂಗಳೂರುಗಳಿಗೆ ಹೋದಾಗ ರೈಲಿನಲ್ಲಿ ಹೋಗಿಬಂದದ್ದರಿಂದಲೂ,
ಅಥವಾ ರಾತ್ರಿಯ ಬಸ್ಸಿನಲ್ಲಿ ಹೋಗಿದ್ದರಿಂದಲೂ ಮತ್ತೆ ರಾಯರ ದರ್ಶನವಾಗಿರಲಿಲ್ಲ. ಮೊನ್ನೆ ಉಡುಪಿಯಿಂದ
ಬರುವಾಗ ಹೊಸ ಹೆದ್ದಾರಿಯ ಒಂದು ತಿರುವಿನಲ್ಲಿ ಮತ್ತೆ ಫಲಕ ಕಣ್ಣಿಗೆ ಬಿತ್ತು. ಗುಡ್ಡದ ಮೇಲೆ ಹೋದೆ.
ಈ ಬಾರಿ ಹೋದಾಗ ಅಲ್ಲಿ ಏನೋ ಕಟ್ಟಡದ ಕೆಲಸನಡೆಯುತ್ತಿತ್ತು. ಇಬ್ಬರು ಕೆಲಸಗಾರರು ಗುಂಡಿ ತೋಡುತ್ತಿದ್ದರು.
ಅರ್ಚಕರೊಬ್ಬರು ಅಭಿಷೇಕ ಮುಗಿಸಿ ಪುಷ್ಪಾರ್ಚನೆಗೆ ಅಣಿಯಾಗಿದ್ದರು. ಅರ್ಚಕರಿಂದ ಮಠದ ಬಗೆಗೆ ಕೆಲವು
ವಿವರ ಮತ್ತು ಆ ಪ್ರದೇಶದಲ್ಲಿ ರಾಯರ ಮಠ ಏಕೆ ಬಂತೆಂಬ ಪ್ರಶ್ನೆಗೆ ಉತ್ತರ ದೊರಕಿತು.
ಸುಮಾರು ಮೂವತ್ತೈದು ನಲವತ್ತು ವರುಷಗಳ ಹಿಂದೆ - ನಾನು ಗೋವಾದಲ್ಲಿ ನೌಕರಿಪಡೆದು ಬಂದ ಸಮಯ -
ಮೇಲೆ ತಿಳಿಸಿದ ಗುಡ್ಡ ಇರುವ ‘ವತ್ತಿನಣೆ’ ಗ್ರಾಮದ ಬಳಿ ಮೈಸೂರಿನ ಕಂಪನಿ ಒಂದು ಬಾಕ್ಸೈಟ್
ಗಣಿಗಾರಿಕೆಯಲ್ಲಿ ತೊಡಗಿತ್ತಂತೆ. ಆ ಸಮಯದಲ್ಲಿ ಅಲ್ಲಿ ಕೆಲಸಮಾಡುತ್ತಿದ್ದ ಇಂಜಿನಿಯರ ಒಬ್ಬರು
ರಾಘವೇಂದ್ರಸ್ವಾಮಿಗಳ ಆರಾಧಕರಾಗಿದ್ದರಂತೆ. ಅವರಿಗೆ ಒಮ್ಮೆ ಸ್ವಪ್ನದಲ್ಲಿ, ಈಗ ಮಠವಿರುವ ಸ್ಥಳ ಕಂಡುಬಂದು,
ಅಲ್ಲಿ ನಿತ್ಯ ರಾಯರ ಸೇವೆಗೆ ವ್ಯವಸ್ಥೆ ಮಾಡಬೇಕೆಂದು ಪ್ರೇರಣೆಯಾಯಿತಂತೆ. ಆತ ಗುಡ್ಡದಮೇಲೆ ಒಂದು
ಗುಡಿಸಿಲು ಹಾಕಿ ಅದರಲ್ಲಿ ರಾಯರ ಒಂದು ಚಿತ್ರವಿಟ್ಟು ಪ್ರತಿದಿನ ತಪ್ಪದೆ ಅಲ್ಲಿ ಬಂದು ಪೂಜೆ ಮಾಡುತ್ತಿದ್ದರಂತೆ.
ಇದು ಕೆಲವು ವರ್ಷಗಳಕಾಲ ನಡೆಯಿತಂತೆ.
ಈ ವಿಷಯ ತಿಳಿದ ಸಜ್ಜನರು ಕೆಲವರು ಅಲ್ಲಿ ಒಂದು ಬೃಂದಾವನವನ್ನು ಸ್ಥಾಪಿಸುವ ಸಂಕಲ್ಪಮಾಡಿ ಕಾರ್ಯವನ್ನು
ಕೈಗೊಳ್ಳುವ ಮೊದಲು ಆಗಿನ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥರ ಅಭಿಪ್ರಾಯ ಮತ್ತು ಸಲಹೆ
ಕೇಳಿದರಂತೆ. ಬೃಂದಾವನದ ಸ್ಥಾಪನೆಗೆ ಹೃತ್ಪೂರ್ವಕವಾಗಿ ಬೆಂಬಲ ಸೂಚಿಸಿದ ಶ್ರೀಪಾದರು ಬೃಂದಾವನದ
ಪ್ರತಿಷ್ಠಾಪನೆಗೆ ಸಹಕರಿಸಿ ೧೯೯೧ರಲ್ಲಿ ತಮ್ಮ ಹಸ್ತದಿಂದಲೇ ಪ್ರತಿಷ್ಠಾಪನಾಕಾರ್ಯ ನೆರವೇರಿಸಿಕೊಟ್ಟರಂತೆ.
ಬೃಂದಾವನ ಮತ್ತು ಮೂರ್ತಿಯ ಕೆತ್ತನೆ ಕೆಲಸವನ್ನು ಸಮೀಪದ ಶಿರೂರು ಗ್ರಾಮದ ಶಿಲ್ಪಿಯೊಬ್ಬರಿಂದ
ಮಾಡಿಸಲಾಯಿತಂತೆ. ಈಗ ನಿತ್ಯ ಪೂಜೆ ಮುಂತಾದ ಕಾರ್ಯಗಳ ವ್ಯವಸ್ಥೆಯ ಉಸ್ತುವಾರಿಗಾಗಿ ಒಂದು
ಸಮಿತಿಯನ್ನು ರಚಿಸಿ, ಅದರ ಮೂಲಕ ಅರ್ಚಕರೊಬ್ಬರು ಬಂದು ಪೂಜೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಸಧ್ಯದಲ್ಲಿ ಬೃಂದಾವನ ಇರುವ ಸ್ಥಳ ಮೇಲಿನ ಚಿತ್ರದಲ್ಲಿರುವಂತಿದೆ. ಬಲಭಾಗದಲ್ಲಿ ಪ್ರಾಣದೇವರ ಗುಡಿ,
ಎಡಭಾಗದಲ್ಲಿ ನವಗ್ರಹಗಳು ಹಾಗೂ ಎದುರಿನಲ್ಲಿ ಕಾಣುವ ಕೊಠಡಿಯಲ್ಲಿ ಬೃಂದಾವನವಿದೆ. ಬಹುಶಃ
ಅದನ್ನು ‘ಮಠ’ ಎಂದು ಕರೆಯುವಂತಿಲ್ಲ. ಅಲ್ಲಿ ಯಾವುದೇ ವಿದ್ಯಾ ಪ್ರಸಾರಕ ಕಾರ್ಯವಾಗಲೀ, ಧರ್ಮ
ಪ್ರಚಾರ ಕಾರ್ಯವಾಗಲೀ, ಊಟೋಪಚಾರಗಳ ವ್ಯವಸ್ಥೆಯಾಗಲೀ ಇಲ್ಲ. ಕಟ್ಟಡವಾದಮೇಲೆ ಇದೆಲ್ಲವನ್ನೂ
ಮಾಡುವ ಆಲೋಚನೆ ಇರಬಹುದು.
ನನ್ನ ಮಟ್ಟಿಗೆ ಹೇಳುವುದಾದರೆ ಈಗ ಇರುವ ಸ್ಥಳವನ್ನೇ ಕೊಂಚ ಅಚ್ಚುಕಟ್ಟಾಗಿಸಿ, ಚೊಕ್ಕವಾದ ಸ್ಥಳದಲ್ಲಿ
ಚಿಕ್ಕದಾದ ಮಂದಿರವೊಂದರ ನಿರ್ಮಾಣವಾದರೆ ಸಾಕು. ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆಗೆ ಬೇಕಾದಷ್ಟು
ಕಟ್ಟಡವಾದರೆ ಸರಿ. ಬಾಗಿಲು - ಬೀಗವಿಲ್ಲದ, ಮುಕ್ತವಾದ ದರ್ಶನದ ವ್ಯವಸ್ಥೆ, ಯಾವುದೇ ಆಡಂಬರ -
ಅಡಾವುಡಿಯಿಲ್ಲದ ಸೇವೆ, ರಾಯರಲ್ಲಿ, ರಾಯರ ಬೋಧನೆಯಲ್ಲಿ, ಮನತೊಡಗಿಸುವಂಥ ವಾತಾವರಣ,
ಇಷ್ಟಿದ್ದರೆ ಸಾಕು. ಆದರೆ ನಾನೊಂದು ಎಡಬಿಡಂಗಿ. ನನಗೆ ಬೇಕಾದಂತೆ ಮಠ, ಮಂದಿರ ಇರುವುದು ಸಾಧ್ಯವೇ?
ಅದು ಸಮಾಜಕ್ಕೆ ಬೇಕಾದಂತೆ ಇರತಕ್ಕದ್ದು. ಹಾಗಾಗಿ ಒಂದಲ್ಲ ಒಂದು ದಿನ, ಮಠ, ಬೆಳ್ಳಿ ಪಾತ್ರೆ, ಚಿನ್ನದ ಕವಚ,
ಅದರ ರಕ್ಷಣೆಗೆ ಭದ್ರತೆ, ಜಾತ್ರೆ, ಜನಜಂಗುಳಿ ಎಲ್ಲವೂ ಆಗತಕ್ಕದ್ದೇ. ಆಗಲಿ. ಸಧ್ಯಕ್ಕಂತೂ ಅದಕ್ಕೆಲ್ಲಾ ಬೇಕಾದ
ಆರ್ಥಿಕ ಸಾಮರ್ಥ್ಯ ಅಲ್ಲಿ ಇರುವಂತೆ ಕಾಣುತ್ತಿಲ್ಲ.
ಹೊಸ ಛಾವಣಿ ಹಾಕುವ ಕೆಲಸ ಕೈಗೊಂಡಿರುವುದಾಗಿ ಸಮಿತಿಯ ಕರಪತ್ರ ತಿಳಿಸುತ್ತದೆ. ಅದು ಸಮರ್ಪಕವಾಗಿ
ನೆರವೇರಲೆಂದು ಪ್ರಾರ್ಥಿಸಿ ನನ್ನಿಂದಾದ ಸಹಾಯ ಮಾಡಿ ಕೈಮುಗಿದು ಕೂಡುತ್ತೇನೆ. ಯಾರಿಗಾದರೂ ಈ ಕೆಲಸಕ್ಕೆ
ಆರ್ಥಿಕ ಸಹಾಯ ಮಾಡುವ ಇಚ್ಛೆಯಿದ್ದರೆ ಚಿತ್ರದಲ್ಲಿರುವ ಬ್ಯಾಂಕಿನ ಖಾತೆಗೆ ಹಣ ಸಂದಾಯ ಮಾಡಬಹುದು.
ನಿರ್ಮಾಣಮಾಡಬೇಕೆಂದಿರುವ ಕಟ್ಟಡ ಉಡುಪಿಯ ದೇವಸ್ಥಾನಗಳ ಶೈಲಿಯಲ್ಲಿದೆ. ಪರಿಸರ ಸುಂದರವಾಗಿದೆ.
ಎದುರಿಗೆ ಸಹ್ಯಾದ್ರಿ ಪರ್ವತಗಳ ಸಾಲು, ಹಿಂದೆ ಅರಬ್ಬೀ ಸಮುದ್ರ. ಪ್ರಶಾಂತವಾದ, ಸ್ವಚ್ಛವಾದ ಮಂದಿರವಾಗಿ,
ದರ್ಶನಾಕಾಂಕ್ಷಿಗಳ ಮನಕ್ಕೆ ಮುದನೀಡುವಂಥ ವ್ಯವಸ್ಥೆ ಆದರೆ ಬಹಳ ಚೆನ್ನ.
ಆಗುವುದಾಗಲಿ. ನಾನೇನಾದರೂ ಮತ್ತೊಮ್ಮೆ ಉಡುಪಿಯ ದಾರಿಯಲ್ಲಿ ಹೋದರೆ ಇನ್ನಷ್ಟು ವಿವರಗಳನ್ನು
ತಿಳಿಯುವ ಪ್ರಯತ್ನ ಮಾಡುತ್ತೇನೆ. ಏನಾಗುತ್ತಿದೆ ಎಂಬುದನ್ನು ನಿಮಗೂ ತಿಳಿಸುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ