ಭಾನುವಾರ, ಜನವರಿ 22, 2023

ಪಕ್ಕದ ಮನೆಯ, ಬೆಕ್ಕಿನ ಮರಿಯ, ಚಿಕ್ಕ ಕಥೆ



ಅದೊಂದು ಬೆಕ್ಕಿನ ಮರಿ. ಎಲ್ಲಿಂದ ಬಂತೋ ತಿಳಿಯದು. ಬಿಳಿಯ ಮೈಮೇಲೆ ಕಪ್ಪು ಚಿತ್ತಾರ

ಅಥವಾ ಕರಿಯ ಮೈ ಮೇಲೆ ಬಿಳಿಯ ಚಿತ್ತಾರ ಎನ್ನಿ. ಎರಡೂ ಸರಿಯೇ. ಒಟ್ಟಿನಲ್ಲಿ

ಕಪ್ಪು - ಬಿಳುಪು. ಮುದ್ದಾಗಿತ್ತು. ಮರಿಯಲ್ಲವೇ ? ಚಿಕ್ಕಂದಿನಲ್ಲಿ ಎಲ್ಲವೂ ಮುದ್ದೇ !

ವಿಕಾರಗಳೆಲ್ಲಾ ಕಾಣಿಸಿಕೊಳ್ಳುವುದು ವಯಸ್ಸಾದಮೇಲೆಯೇ ! ಅದಕ್ಕೇ ಬೀಚಿಯವರು

ಬರೆದರು “ಎಂತೊಳ್ಳೆ ಮರಿಕತ್ತೆ, ಚೆನ್ನಿತ್ತು ಚೆಲುವಿತ್ತು, ತನ್ನಪ್ಪನಂತಾಗಿ ಹಾಳಾಯ್ತೋ ತಿಂಮ!”.

ಅದಿರಲಿ ನಾ ಹೇಳಹೊರಟದ್ದು ಬೆಕ್ಕಿನ ಮರಿಯ ಕಥೆ. 


ನಾನು ಅದನ್ನು ಮೊದಲು ಕಂಡಾಗ, ಕ್ಷಮಿಸಿ, ನಾನು ಅದನ್ನು ಮೊದಲು ಕಾಣಲಿಲ್ಲ,

ಅದರ ಧ್ವನಿಯನ್ನು ಕೇಳಿದೆ. ಮೇಲೆ ಬರೆದ ವಿವರವೆಲ್ಲಾ ಅದನ್ನು ಕಂಡ ನಂತರ ತಿಳಿದದ್ದು.

ಮೊದಲಬಾರಿಗೆ ನನಗೆ ಅದರ ಇರುವಿಕೆಯ ಅರಿವಾದಾಗ ಅದು ನಮ್ಮ ಪಕ್ಕದ ಮನೆಯ

ಹಿಂಭಾಗದ ಯಾವುದೋ ಸಂದಿಯಲ್ಲಿ ಅಡಗಿ ಕುಳಿತಿತ್ತು. ನಮ್ಮ ಪಕ್ಕದ ಮನೆಯಾಕೆ

ಅದನ್ನು ಅಲ್ಲಿಂದ ಹೊರ ಹೊರಡಿಸುವ ಪ್ರಯತ್ನದಲ್ಲಿದ್ದರು. ಸುಮಾರು ಅರ್ಧಘಂಟೆ ಕಾಲ

ಅವರು ಅದರೊಡನೆ ಕನ್ನಡದಲ್ಲಿ, ಇಂಗ್ಲಿಷಿನಲ್ಲಿ, ತಮಿಳಿನಲ್ಲಿ, ಅಂದರೆ - ಬೆಕ್ಕಿನ ಭಾಷೆಬಿಟ್ಟು

ತಮಗೆ ತಿಳಿದ ಮಿಕ್ಕ ಎಲ್ಲ ಭಾಷೆಗಳಲ್ಲೂ, ಸಂಭಾಷಣೆ ನಡೆಸಿದರೂ ಅದು ಹೊರಬಂದಂತೆ

ಕಾಣಲಿಲ್ಲ. ಆಮೇಲೆ ಏನಾಯಿತೋ ನನಗೆ ತಿಳಿಯದು. 


ಅದಾದ ಕೆಲವುದಿನದ ನಂತರ ನಮ್ಮ ಮನೆಗೂ ಪಕ್ಕದ ಮನೆಗೂ ಮಧ್ಯೆ ಇರುವ ತಂತಿ

ಜಾಲರಿಯ ಆಚೆಬದಿಯಲ್ಲಿ ನಾನು ಅದನ್ನು ಕಂಡೆ. ನಮ್ಮ ಎರಡೂ ಮನೆಗಳ ಮಧ್ಯದಲ್ಲಿರುವ

ಕಂಪೌಂಡು ಗೋಡೆಯ ಅವರ ಕಡೆಯ ಅರ್ಧಭಾಗದಮೇಲೆ ಅದು ಕುಳಿತಿತ್ತು. ನಾನು ಸೌಜನ್ಯಕ್ಕೆಂದು

ಅದರ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿ ನನ್ನ ಹೆಸರು ಹೇಳಿದೆ. ಪುಸ್ ಪುಸ್ ಎಂದೆ.

ಮ್ಯಾವ್ ಮ್ಯಾವ್ ಎಂದೆ. ಬೆಂಗಳೂರಿಗೆ ಬಂದಿದ್ದ ಕೈಲಾಸಂ ಅವರ ಬೋರೇಗೌಡನಂತೆ. ಕೇಳಿದ್ದೀರಾ ?

ನಮ್ಮ ತಿಪ್ಪಾರಳ್ಳಿ ?  “ ತಮಾಸೆ ನೋಡಕ್ ಬೋರಾ ವೊಂಟ ಲಾಲಬಾಗ್ ತೋಟಕ್ಕೆ,

ಉಲಿನ್ನೋಡಿ ಬರೆ ಆಕಿದ್ ದೊಡ್ಬೆಕ್ಕನ್ಕೊಂಡ, ಬೋನ್ನೊಳಗ್ ನುಗ್ಗಿ ಉಲಿನ್ ಸವರ್ತಾ

ಪುಸ್ ಪುಸ್ ಅಂತಿದ್ದ, ಬೋರಾ ಪುಸ್ ಪುಸ್ ಅಂತಿದ್ದ  ..... ..... “.  ಹಾಗೆ. ಆದರೆ

ಇದು ನಿಜವಾಗಿಯೂ ಬೆಕ್ಕಿನ ಮರಿಯೇ.  ಹುಲಿಯಲ್ಲ. ಮತ್ತೆ, ನಾನು ಬೋನಿನ ಹೊರಗಿದ್ದೆ

ಅಷ್ಟೇ. ಸರಿ, ಬೆಕ್ಕಿನ ಮರಿ ನನಗೆ ಉತ್ತರಿಸಲಿಲ್ಲ. ಕೈ - ಕಾಲು ಕುಲುಕಲು ಸಾಧ್ಯವಿರಲಿಲ್ಲ.

ತಂತಿ ಜಾಲರಿ ಅಡ್ಡವಿತ್ತು. ನಾನು ಒಂದರ್ಧ ನಿಮಿಷ ಅದನ್ನು ನೋಡುತ್ತಾ ನಿಂತೆ. ಅದು

ನನ್ನನ್ನು ನೋಡುತ್ತಿತ್ತು. ನಂತರ ನಾನು ಅದಕ್ಕೆ ವಿದಾಯ ಹೇಳಿ ಬಂದು ಬಿಟ್ಟೆ. 


ಒಂದೆರಡು ದಿನದ ನಂತರ ಪಕ್ಕದ ಮನೆಯಾಕೆ ಸಿಕ್ಕಿದರು. ಬೆಕ್ಕಿನ ಮರಿಯ ಬಗ್ಗೆ ತಿಳಿಸಿದರು.

ಸುಮಾರು ಹತ್ತುನಿಮಿಷ ಅದರ ಪ್ರವರ ವಿವರಗಳು ಹಾಗೂ ಅದು ಅವರ ಸುಪರ್ದಿಗೆ

ಬಂದ ಸಂಧರ್ಭವನ್ನು ವಿವರಿಸಿದರು. ವಿವರಗಳು ನಿಮಗೆ ಬೇಸರ ತರಿಸಬಹುದೇನೋ.

ಅದರ ಸಾರಾಂಶ ಹೀಗೆ. 


ಆ ಮರಿ ಹೋದವಾರ ನಾವು ಊರಿಗೆ ಹೋಗಿದ್ದ ಸಮಯದಲ್ಲಿ ಯಾವಾಗಲೋ ಬಂದು ನಮ್ಮ

ಮನೆಯ ನೀರಿನ ಮೀಟರಿನ ಡಬ್ಬಿಯಲ್ಲಿ ಹುದುಗಿತ್ತಂತೆ. ಒಂದು ರಾತ್ರಿಯಿಡೀ ಅರಚುತ್ತಿತ್ತಂತೆ.

ಮರುದಿನ ಮುಂಜಾನೆ ಆಕೆ ಬಂದು ಅದನ್ನು ಅಲ್ಲಿಂದ ಎತ್ತಿ ಹೊರಗೆ ಬಿಟ್ಟು ಅದರ ತಾಯಿ

ಬಂದು ಮರಿಯನ್ನು ಒಯ್ಯುತ್ತದೇನೋ ಎಂದು ನೋಡಿದರಂತೆ. ತಾಯಿ ಬರಲಿಲ್ಲ. ಆ ಮರಿ

ನಮ್ಮ ಮನೆಗಳ ಸುತ್ತಮುತ್ತವೇ ಓಡಾಡುತ್ತಿದ್ದು, ಪಕ್ಕದ ಮನೆಯಾಕೆ ಹಾಕಿದ ಹಾಲು

ಕುಡಿದುಕೊಂಡು ಇದ್ದಿತಂತೆ. ಕಾಲಾನುಕ್ರಮೇಣ ಆಕೆಗೆ ಅದರಮೇಲೆ ಮಮತೆ ಹುಟ್ಟಿ ಆಕೆ

ಅದನ್ನು ದತ್ತು ಪಡೆದರಂತೆ. ಹಾಗಾಗಿ ಅದು ಅವರ ಸ್ವತ್ತಾಯಿತು. 


ಇಷ್ಟೆಲ್ಲಾ ಆದದ್ದು ನಮಗೆ ತಿಳಿಯಲಿಲ್ಲ. ಏನೇ ಆಗಲಿ ಅದು ಮೊದಲು ಕಂಡಿದ್ದು ನಮ್ಮ

ಮೀಟರಿನ ಡಬ್ಬದಲ್ಲಾದ್ದರಿಂದ ಬೆಕ್ಕಿನ ಮರಿಯ ಮೇಲಿನ ಮೊದಲ ಹಕ್ಕು ನನ್ನದಿತ್ತು.

ಅವರು ಅದನ್ನು ದತ್ತು ಪಡೆಯುವ ಮೊದಲು ನನ್ನನ್ನು ಒಂದು ಮಾತು ಕೇಳಬಹುದಿತ್ತೇನೋ.

ಹೋಗಲಿ ಬಿಡಿ ಇಂಥ ಸಣ್ಣ ಸಣ್ಣ ವಿಷಯಗಳನ್ನು ಹಚ್ಚಿಕೊಂಡು ಕೂಡುವುದಲ್ಲ. ಅಷ್ಟಲ್ಲದೆ,

ನನಗೇನೂ ಬೆಕ್ಕಿನ ಮರಿ ಬೇಕಿರಲಿಲ್ಲ. 


ಈಗ ನನಗೆ ಪ್ರತಿದಿನ ಸಾಕುತಾಯಿ ಮತ್ತು ದತ್ತು ಬೆಕ್ಕಿನ ಮರಿಯ ಸಂಭಾಷಣೆ ಕೇಳುವ

ಸುಯೋಗ. ನನಗೆ ಅವರ ಮಾತನ್ನು ಕದ್ದು ಕೇಳುವ ಚಟವೇನೂ ಇಲ್ಲ. ಆದರೆ ಅದು

ಸಾಮಾನ್ಯವಾಗಿ ನಾನು ಮುಂಜಾನೆ ವಾಕಿಂಗ್ ಮುಗಿಸಿ ಬರುವ ಹೊತ್ತಿಗೆ ಶುರುವಾಗುತ್ತದೆ.

ಮತ್ತು, ಅಪ್ರಯತ್ನವಾಗಿ ನಮ್ಮ ವರಾಂಡದಲ್ಲಿ ಬಂದು ಕುಳಿತ ನನ್ನ ಕಿವಿಗೆ ಬೀಳುತ್ತದೆ.

ಬೆಂಗಳೂರಿನಲ್ಲಿ ಎರಡುಮನೆಗಳ ಮಧ್ಯೆ ಜಾಗ ಎಷ್ಟು?  ಆರಿಂಚು ಇದ್ದೀತು ! ನಮ್ಮ

ವರಾಂಡಕ್ಕೂ ಅವರ ಮನೆಗೂ ಮೂರಡಿ ದೂರವಷ್ಟೇ ! ಇಂದು ಮುಂಜಾನೆ ನನ್ನ ಕಿವಿಗೆ

ಬಿದ್ದ ಸಂಭಾಷಣೆ ಹೀಗಿತ್ತು. 


“ಮ್ಯಾವ್ ಮ್ಯಾವ್”

“ಓ ಎದ್ಬಿಟ್ಯಾ ಪುಟ್ಟ?” 

 “ಮ್ಯಾವ್ ಮ್ಯಾವ್”

“ಅದ್ಯಾಕೆ ಇಷ್ಟು ಬೇಗ ಎದ್ದೆ”

 “ಮ್ಯಾವ್ ಮ್ಯಾವ್”

“ನಿದ್ದೆ ಬರಲಿಲ್ವಾ ?”

“ಮ್ಯಾವ್ ಮ್ಯಾವ್”

“ಹಾಲು ಕೊಡಲಾ”

 “ಮ್ಯಾವ್ ಮ್ಯಾವ್”

“ಯಾಕೆ? ಹಸಿವಿಲ್ವಾ?”

“ಮ್ಯಾವ್ ಮ್ಯಾವ್”

“ಹಾಲು ಬೇಡ್ವಾ ?”

“ಮ್ಯಾವ್ ಮ್ಯಾವ್”

“ಅದೇನು ಸರಿಯಾಗಿ ಹೇಳು ಮರೀ”

“ಮ್ಯಾವ್ ಮ್ಯಾವ್”

“ಒಳಗ್ ಬರ್ತೀಯಾ ?”

“ಮ್ಯಾವ್ ಮ್ಯಾವ್”

“ಚಳಿ ಆಗತ್ತಾ ?”

“ಮ್ಯಾವ್ ಮ್ಯಾವ್”

“ತಾಳು ಕಿಟಕಿ ತೆಗೀತೀನಿ”

“ಮ್ಯಾವ್ ಮ್ಯಾವ್”

“ಬೇಡ್ವಾ”

“ಮ್ಯಾವ್ ಮ್ಯಾವ್”

“ಅದೇನದು ಹೇಳು ಕಂದಾ”

“ಮ್ಯಾವ್ ಮ್ಯಾವ್”

“ಹಾರ್ಲಿಕ್ಸ್ ಕೊಡ್ಲಾ”

“ಮ್ಯಾವ್ ಮ್ಯಾವ್”

“ಬೇಡ್ವಾ ? ಹಾಲೇ ತರ್ತೀನಿ ತಾಳು”


ಅವರು ಹಾಲು ತಂದರೋ, ಬಿಟ್ಟರೋ, ಮರಿ ಕುಡಿಯಿತೋ ಬಿಟ್ಟಿತೋ ನನಗೆ ತಿಳಿಯುವ

ಮುನ್ನ, ಮುಂಜಾನೆ ನಾನು ತರಬೇಕಾಗಿದ್ದ ಹಾಲನ್ನು ನಾನಿನ್ನೂ ತಂದಿಲ್ಲವೆಂದು ನನಗೆ

ನೆನಪಾಗಿ ನಾನು ಹೊರಗೆ ಹೊರಟುಬಿಟ್ಟೆ. ಮುಂಜಾನೆ ಏಳುವ ಹೊತ್ತಿಗೆ, ಬಿಸಿ ಕಾಫಿಗೆ

ಹೊಸ ಹಾಲಿಲ್ಲದಿದ್ದರೆ ನನ್ನಾಕೆ ತನಗೆ ಹೇಳಬೇಕೆನಿಸಿದ್ದನ್ನು ಸ್ಪಷ್ಟವಾಗಿ ನನ್ನ ಭಾಷೆಯಲ್ಲೇ,

ಪೂರ್ಣ ನನಗೆ ವಿಶದವಾಗುವಂತೆ ಹೇಳಿ ಬಿಡುತ್ತಾಳೆ. ಆದ್ದರಿಂದ ನನ್ನ ಎಚ್ಚರಿಕೆಯಲ್ಲಿ

ನಾನಿರಬೇಕಲ್ಲವೇ ? ಹಾಗಾಗಿ ನಾನು ಜಾಗ ಖಾಲಿ ಮಾಡಿದೆ. 


ಪ್ರತಿದಿನವೂ ಮೇಲೆ ತಿಳಿಸಿದ ಧಾಟಿಯಲ್ಲೇ ಅಷ್ಟಿಷ್ಟು ಸಂಭಾಷಣೆ ನನ್ನ ಕಿವಿಗೆ ಬೀಳುತ್ತಲೇ

ಇರುತ್ತದೆ. ಆ ಬೆಕ್ಕಿನ ಮರಿ ಏನು ಹೇಳಿತೆಂದು ತಿಳಿಯುವ ಕುತೂಹಲ ನನಗೆ. ಆದರೆ

ಬೆಕ್ಕಿನ ಭಾಷೆ ನನಗಿನ್ನೂ ಗೊತ್ತಾಗಿಲ್ಲ. ನಮ್ಮ ಪಕ್ಕದ ಮನೆಯಾಕೆಗೆ ತಿಳಿಯುತ್ತದೇನೋ ?

ಅವರು ಸಿಕ್ಕರೆ ಕೇಳಿನೋಡಬೇಕು. ಒಂದು ವೇಳೆ ನನಗೆ ತಿಳಿದರೆ ನಿಮಗೂ ತಿಳಿಸುತ್ತೇನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ