ಶುಕ್ರವಾರ, ಜನವರಿ 6, 2023

ಗೊರೂರು ಮತ್ತು ಗೊರೂರು ರಾಮಸ್ವಾಮಯ್ಯಂಗಾರ್ಯರು


 

 

 

ಯಾವುದೋ ಕಾರಣದಿಂದ ಸಕಲೇಶಪುರಕ್ಕೆ ಹೋಗಿದ್ದೆ. ಅಲ್ಲಿಂದ ಮುಂದೆ ನಾನು ಮೈಸೂರಿಗೆ ಹೋಗಬೇಕಿತ್ತು.

ಸಕಲೇಶಪುರದಿಂದ ಹಾಸನಕ್ಕೆ ಬಂದು ಅಲ್ಲಿಂದ ಮೈಸೂರಿಗೆ ನೇರವಾಗಿ ಪ್ರಯಾಣಿಸಬಹುದಿತ್ತು.

ಆದರೆ ಹೆದ್ದಾರಿಯನ್ನು ಬಿಟ್ಟು ಆಚೆ ಈಚೆಯ ಒಳ ಪ್ರದೇಶಗಳನ್ನು ನೋಡುವ ಇಚ್ಛೆ ನನಗೆ ಇದ್ದಿದ್ದರಿಂದ

ಬೇರೆ ದಾರಿಗಳಿದ್ದರೆ ತಿಳಿಸಬೇಕೆಂದು ನಾನು ಗೂಗಲ್ ಗುರೂಜಿಯವರನ್ನು ಕೇಳಿಕೊಂಡೆ. ನಾನು

ಪ್ರಯಾಣಿಸಬಹುದಾದ ಇತರ ದಾರಿಗಳನ್ನು ತೋರಿಸುವಾಗ ಅವರು ಒಂದು ರಸ್ತೆ ಶ್ರೀ

ರಾಮಸ್ವಾಮಯ್ಯಂಗಾರ್ಯರ ಗೊರೂರಿನ ಮೂಲಕ ಹಾದುಹೋಗುತ್ತದೆಂದು ತಿಳಿಸಿದರು. 

 

ಗೊರೂರು, ಹೇಮಾವತಿ ನದಿ, ಯೋಗಾನರಸಿಂಹಸ್ವಾಮಿ ದೇವಸ್ಥಾನ, ದೇವಾಲಯದ ಮುಂದಿನ ತೋಪು,

ಜಾತ್ರೆ, ದೇವಸ್ಥಾನದ ಹುಳಿಯನ್ನ ಇವುಗಳ ಬಗ್ಗೆ ಗೊರೂರರ ಪುಸ್ತಕಗಳಲ್ಲಿ ಓದಿ, ಮನದಲ್ಲಿಯೇ ಅವುಗಳ

ಚಿತ್ರವನ್ನು ರೂಪಿಸಿಕೊಂಡು ಆನಂದಿಸಿದ್ದ ನನಗೆ ಆ ಎಲ್ಲವನ್ನೂ ಕಣ್ಣಾರೆ ನೋಡಬೇಕೆಂಬುದು ಬಹುಕಾಲದ

ಬಯಕೆ. ಜತೆಗೆ ಕರಿಯ, ಶಾಲುಸಾಬಿ, ಸೀನಪ್ಪ , ರಂಗೇಗೌಡ, ದಪ್ಪ ಹೊಟ್ಟೆಯ ಜೋಡೀದಾರರು

ಎಲ್ಲರನ್ನೂ ಕಾಣುವುದಾಗಿದ್ದರೆ ಬಹಳ ಚನ್ನವಿತ್ತು.  ಆದರೆ ನಾನು ಹುಟ್ಟಿದ್ದು ಕೊಂಚ ತಡವಾಯಿತು.

ಅದಿರಲಿ, ಗೊರೂರು ಮತ್ತು ಹೇಮಾವತಿ ನದಿ ಇನ್ನೂ ಇವೆ ಎಂದು ತಿಳಿದಾಕ್ಷಣ ನಾನು ಗೊರೂರಿನ

ಮೂಲಕ ಮೈಸೂರಿಗೆ ಹೋಗುವುದೆಂದು ತೀರ್ಮಾನಿಸಿದೆ. 

 

ಗೊರೂರು ತಲುಪುವ ಮುಂಚೆ ಗೊರೂರರ ಜೀವನದ ಒಂದು ಪ್ರಸಂಗ ತಿಳಿಸುತ್ತೇನೆ. ಶ್ರೀ ಗೊರೂರು

ರಾಮಸ್ವಾಮಯ್ಯಂಗಾರ್ಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕೂಡಾ ಪಾಸುಮಾಡಿರಲಿಲ್ಲವಂತೆ. ಆದರೆ ಅವರು

ಬರೆದ ‘ಹಳ್ಳಿಯ ಚಿತ್ರಗಳು’ ಪುಸ್ತಕ  ಬಹಳ ಜನಪ್ರಿಯವಾಗಿ, ಹೆಸರುಮಾಡಿದ ನಂತರ ಅವರನ್ನು ಒಮ್ಮೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರೀಕ್ಷಕರನ್ನಾಗಿ ನೇಮಿಸಿದರಂತೆ. ಇದು ಸುಮಾರು ೧೯೩೦ರಲ್ಲಿ. ಏನೂ ಓದಿಲ್ಲದ

ರಾಮಸ್ವಾಮಯ್ಯಂಗಾರ್ಯರು ಪರೀಕ್ಷಕರಾದ ವಿಷಯತಿಳಿದ ಕೆಲವರ ಹೊಟ್ಟೆ ಕೊಂಚ ಉರಿಯಿತಂತೆ.

ಆ ಜನ, ಪರೀಕ್ಷಕರಾಗಲು ಬೇಕಾದ ಯಾವುದೇ ಅರ್ಹತಾಪರೀಕ್ಷೆಯನ್ನು ಗೊರೂರರು ಪಾಸುಮಾಡಿಲ್ಲವೆಂದು

ತಗಾದೆ ತೆಗೆದರಂತೆ. ಗೊರೂರು ಅವರನ್ನು ಪರೀಕ್ಷಕರನ್ನಾಗಿ ನಿಯಮಿಸಿದ ಎನ್ ಎಸ್ ಸುಬ್ಬರಾಯರು,

‘ಹಳ್ಳಿಯ ಚಿತ್ರಗಳು’ ಪುಸ್ತಕವೇ ಅವರ ಅರ್ಹತೆಯೆಂದು ಹೇಳಿ, ತಗಾದೆ ತೆಗೆದವರ ಬಾಯಿಮುಚ್ಚಿಸಿದರಂತೆ.

ಆದರೂ, ಯಾವುದಾದರೂ ಒಂದು ಪರೀಕ್ಷೆ ಪ್ಯಾಸುಮಾಡುವಂತೆ ಗೊರೂರರಿಗೆ ಸೂಚಿಸಿದರಂತೆ.

ಅದರಂತೆ ಗೊರೂರರು ಮದ್ರಾಸ್ ವಿಶ್ವವಿದ್ಯಾಲಯದ ‘ಕನ್ನಡ ವಿದ್ವಾನ್’ ಪರೀಕ್ಷೆಗೆ ನೋಂದಾಯಿಸಿಕೊಂಡರಂತೆ. 

ಆ ಪರೀಕ್ಷೆಗೆ ಗೊರೂರು ಅವರೇ ಬರೆದಿದ್ದ ‘ನಮ್ಮ ಊರಿನ ರಸಿಕರು’ ಪುಸ್ತಕ  ಪಠ್ಯಪುಸ್ತಕವಾಗಿತ್ತಂತೆ.

ಗೊರೂರರು ತಮ್ಮ ಪುಸ್ತಕವನ್ನು ತಾವೇ ಪಠ್ಯವಾಗಿ ಓದಿ, ಪರೀಕ್ಷೆ ಬರೆದರಂತೆ. ಪರೀಕ್ಷೆ ಪ್ಯಾಸಾಯಿತು.

ಆದರೆ ಪರೀಕ್ಷಕರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ಗೊರೂರರನ್ನು ಕುರಿತು “ನೀನು ಬರೆದ ಉತ್ತರಗಳಿಗೆ

ನಾನು ಕೊಟ್ಟ ಅಂಕ ಹೆಚ್ಚಾಯಿತು” ಎಂದರಂತೆ ! ಇದನ್ನು ನಾನು ಶ್ರೀ ಸಿ ಜೆ ವೆಂಕಟಯ್ಯನವರು ಗೊರೂರರ

ಬಗ್ಗೆ ಬರೆದ ಪುಸ್ತಕದಲ್ಲಿ ಇತ್ತೀಚಿಗೆ ನೋಡಿದೆ. 

 

ಸರಿ, ಹೇಮಾವತಿ ಜಲಾಶಯ ಮತ್ತು ನಂತರ ಗೊರೂರಿನ ಮೂಲಕ ಮೈಸೂರಿಗೆ ಪಯಣಿಸುವುದೆಂದು

ನಿರ್ಧರಿಸಿದ ನಾನು  ಸಕಲೇಶಪುರದ ಬಳಿಯ ಬಾಳ್ಳುಪೇಟೆಯ ನಂತರ ಗಾಡಿಯನ್ನು ಬಲಕ್ಕೆ ತಿರುಗಿಸಿದೆ.

ಸಣ್ಣ ಆದರೆ ಸುಸ್ಥಿತಿಯಲ್ಲಿದ್ದ ರಸ್ತೆ, ಅಕ್ಕ ಪಕ್ಕ ಅಡಿಕೆ, ತೆಂಗು ತೋಟಗಳು, ಜೋಳ ಬೆಳೆಯುತ್ತಿದ್ದ ಹಸಿರು

ಹೊಲಗಳು, ಸಣ್ಣ ಸಣ್ಣ ಕೆರೆ ಕುಂಟೆಗಳು, ಚಿಕ್ಕ ಚಿಕ್ಕ ಗುಡ್ಡಗಳಿಂದ ಕೂಡಿದ ಪರಿಸರ ಬಹಳ ಆಹ್ಲಾದಕರವಾಗಿತ್ತು.

“ಅಲ್ಲಿಗಲ್ಲಿಗೆ ಬೆಳೆದ ಬೆಳೆಗಳಿಂ ಮೆಳೆಗಳಿಂ - ಅಲ್ಲಿಗಲ್ಲಿಗೆ ವನಸ್ಥಳಗಳಿಂ ಕೊಳಗಳಿಂ” ಎಂಬಂತೆ ! ಮಗ್ಗೆ ಎಂಬ

ಗ್ರಾಮದ ನಂತರ ರಸ್ತೆ ಕೊಂಚ ಕೊಂಚ ಹಾಳಾಗಿದ್ದರೂ ಗಾಡಿ ಚಲಿಸಲು ತೊಂದರೆ ಇರಲಿಲ್ಲ. ಹೇಮಾವತಿ

ಜಲಾಶಯವನ್ನು ದಾಟಿದ ನಂತರ ಮತ್ತೂ ಹಾಳಾದ ರಸ್ತೆಯ ಸ್ಥಿತಿ ಕಂಡು ನನಗೇಕೆ ಈ ಗೊರೂರಿನ ಭ್ರಮೆ

ಎನ್ನಿಸಿದರೂ ಊರು ಅಲ್ಲಿಂದ ಹೆಚ್ಚು ದೂರವಿರಲಿಲ್ಲವಾದ್ದರಿಂದ ಮುಂದುವರಿದೆವು. ಬಾಳ್ಳುಪೇಟೆಯಿಂದ ಹೊರಟ

ಎರಡುತಾಸಿನ ಒಳಗೆ ನಾವು ಗೊರೂರು ತಲುಪಿದೆವು. ಈಗ ಹೆದ್ದಾರಿಯೂ ಗೊರೂರಿನ ಪಕ್ಕದಲ್ಲೇ ಹಾಯುತ್ತದೆ.

ಹಳೆಯಊರಿನ ಕೆಲವುಭಾಗ, ಹೇಮಾವತಿ ನದಿ, ನರಸಿಂಹ ಸ್ವಾಮಿಯ ದೇವಸ್ಥಾನ ಮತ್ತು ದೇವಾಲಯದ

ಮುಂದಿನ ತೋಪಿನ ಒಂದು ಭಾಗ ಇನ್ನೂ ಹಾಗೆಯೇ ಉಳಿದಂತಿದೆ. ಹಾಗೂ, ಅದು ರಾಮಸ್ವಾಮಯ್ಯಂಗಾರ್ಯರ

ಕಾಲಕ್ಕೂ ಇಂದಿಗೂ ಬಹುಶಃ ಹೆಚ್ಚು ಬದಲಾಗಿಲ್ಲವೆನಿಸುತ್ತದೆ. 

 

ಗೊರೂರಿನ ಯೋಗಾನರಸಿಂಹಸ್ವಾಮಿ ದೇವಸ್ಥಾನ - ಅದರ ಜಾತ್ರೆ, ಹೇಮಾವತಿ ನದಿ - ಅದರ ಮೊಸಳೆ ಮಡುವು,

ಶಾಲುಸಾಬಿ - ಅವನ ಕಠಾರಿ ಗುರುತಿನ ರುಜು, ಸೀನಪ್ಪ - ಅವನ ಬೆಲ್ಲ ಹೆಸರುಬೇಳೆಯ ಪಾನಕ,

ಜೋಡೀದಾರರು - ಅವರ ಹೊಟ್ಟೆ ಮತ್ತು ಕುದುರೆ, ಮಣೆಗಾರರು - ಅವರ ಬಾವುಟ ಇವೆಲ್ಲದರ ಚಿತ್ರಣ

ಸುಮಧುರ ಹಾಗೂ ಮನಕ್ಕೆ ಮುದ. ಜತೆಗೆ, ಕಳೆದು ಹೋದ ಕಾಲದ ಕಥೆಗಳು ಆ ಜೀವನದ ನಿರೂಪಣೆ

ಇವುಗಳು ನನಗೆ ಬಹಳ ಪ್ರಿಯ. ಹಾಗಾಗಿ ನಾನು ಗೊರೂರರ ಚಿತ್ರಣಗಳನ್ನು ಬಹಳ ಆನಂದದಿಂದ ಮತ್ತೆ

ಮತ್ತೆ ಓದಿದ್ದೇನೆ. ಹಾಗೆ ಓದಿ ತಿಳಿದಿದ್ದ ಸ್ಥಳಗಳನ್ನು ಈಗ ನೋಡುವ ಅವಕಾಶ ಸಿಕ್ಕಿದ್ದು ಬಹಳ

ಸಂತೋಷವಾಯಿತು. 

 

ಗೊರೂರಿನ ದೇವಸ್ಥಾನ ಅಂಥ ಹೆಸರುವಾಸಿಯಾದ ಸ್ಥಳವಲ್ಲವಾದ್ದರಿಂದ ಹೆಚ್ಚು ಜನರಿರಲಿಲ್ಲ. ಅಲ್ಲಿ

ಕುಳಿತಿದ್ದ ಕೆಲವು ಹೆಂಗಳೆಯರು ಯೋಗಾನರಸಿಂಹಸ್ವಾಮಿಯು ತಮ್ಮ ಮನೆದೇವರೆಂದೂ ತಾವು ದೇವರ

ಸೇವೆಗೆಂದು ಬಂದಿರುವುದಾಗಿಯೂ ತಿಳಿಸಿ ನಮ್ಮ ಪೂರ್ವಾಪರಗಳನ್ನು ವಿಚಾರಿಸಿಕೊಂಡರು. ಗೋವಾ

ವಾಸಿಯಾದ ನಾನು ಗೊರೂರಿನ ದೇವಸ್ಥಾನವನ್ನು ಹುಡುಕಿಕೊಂಡು ಬಂದಿದ್ದ ಬಗ್ಗೆ ಕುತೂಹಲ ವ್ಯಕ್ತ ಪಡಿಸಿದರು.

ರಾಮಸ್ವಾಮಯ್ಯಂಗಾರ್ಯರ ಪುಸ್ತಕಗಳನ್ನು ಓದಿ, ಅದರಲ್ಲಿ ವಿವರಿಸಿದ್ದ ಸ್ಥಳಗಳನ್ನು ಕಾಣುವ

ಅಪೇಕ್ಷೆಯಿಂದ ನಾನು ಅಲ್ಲಿಗೆ ಬಂದದ್ದೆಂದು ತಿಳಿಸಿದೆ. ಅವರು ಯಾರೂ ಗೊರೂರು ರಾಮಸ್ವಾಮಯ್ಯಂಗಾರ್ಯರ

ಹೆಸರೇ ಕೇಳಿರಲಿಲ್ಲ ! 

 

ಗೊರೂರು ರಾಮಸ್ವಾಮಯ್ಯಂಗಾರ್ಯರ ಹೆಸರು, ಪುಸ್ತಕಗಳ ವಿಷಯ ಕೆಲವು ಕಣ್ಣುಗಳಿಗೆ ಬಿದ್ದರೆ ಅವರ

ಬಗ್ಗೆ ತಿಳಿದಿಲ್ಲದ  ನಾಲ್ಕಾರುಜನ ಅವರ ಪುಸ್ತಕಗಳ ಮೇಲೆ ಕಣ್ಣು ಹಾಯಿಸುವಂತಾಗಲೆಂದು ಆಶಿಸಿ ಗೊರೂರಿನ

ಭೇಟಿಯ ಬಗ್ಗೆ ಮೇಲ್ಕಾಣಿಸಿರುವ ಕೆಲವುಸಾಲು ಬರೆದೆ. ಜತೆಗೇ ಕೆಲವು ಚಿತ್ರಗಳನ್ನೂ ಲಗತ್ತಿಸಿದ್ದೇನೆ. ಒಂದೆರಡು

ಗುಂಪುಗಳಿಗೆ ರವಾನಿಸಿದ್ದೇನೆ. 

 










ಮೇಲಿನ ಚಿತ್ರಗಳಲ್ಲಿ ಕಾಣುವ ದೇವಸ್ಥಾನ ಗೊರೂರಿನ ಯೋಗಾನರಸಿಂಹನದು. ಕಾಣಿಸುವ ನದಿ ಗೊರೂರಿನಲ್ಲಿ

ಹರಿಯುವ  ಹೇಮಾವತಿ ನದಿ. ದೇವಸ್ಥಾನದ ಮುಂದಿನ ತೋಪು ಸಹ ಗೊತ್ತಾಗುವಂತೆಯೇ ಇದೆ. ಉಳಿದ

ಮೂರುಚಿತ್ರಗಳು ನಮ್ಮ ಪ್ರಯಾಣದ ಸಮಯದಲ್ಲಿ  ಕಂಡ ಪ್ರಕೃತಿಯ ಕೆಲವು ಚಿತ್ರಗಳು. 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ