ಮಂಗಳವಾರ, ಮಾರ್ಚ್ 15, 2022

ದೇವರಪೂಜೆ ಮತ್ತು ನನ್ನ ಕಸದಡಬ್ಬ



ಪ್ರತಿದಿನ ಬೆಳಗ್ಗೆ ಸ್ನಾನಮಾಡಿದ ನಂತರ ದೇವರ ಮುಂದೆ ದೀಪಹಚ್ಚಿ, ನಮ್ಮ ಆವರಣದಲ್ಲಿ

ಬೆಳೆದ ಹೂವೋ, ತುಳಸಿಯೋ ಬಿಡಿಸಿ ತಂದು ದೇವರ ಮುಂದಿಟ್ಟು, ಎರಡು ಸ್ತೋತ್ರಹೇಳಿ

ಅಡ್ಡ ಬೀಳುವುದು ಅನೇಕ ದಶಕ ಗಳಿಂದ ಬಂದ ಅಭ್ಯಾಸ. ಈ ಅಭ್ಯಾಸ ಯಾವಾಗ

ಸುರುವಾಯಿತೋ ನೆನಪಿಲ್ಲ. ಬಹಳ ಸಣ್ಣ ವಯಸ್ಸಿನಲ್ಲೇ ನಮ್ಮಮ್ಮ ಅಭ್ಯಾಸ ಮಾಡಿಸಿರಬೇಕು.

ಇವನ್ನೆಲ್ಲಾ ಮತ್ಯಾರುತಾನೆ ಹೇಳಿ ಮಾಡಿಸುತ್ತಾರೆ ? ಈಗ ಅಮ್ಮ ಇಲ್ಲ. ಆದರೆ ಅಭ್ಯಾಸ ಉಳಿದಿದೆ. 


ವಾರಕ್ಕೊಮ್ಮೆಯೋ ಎರಡುಬಾರಿಯೋ ಇದು ಕೊಂಚ ವಿಸ್ತಾರಗೊಂಡು ‘ಪೂಜೆ’

ಎನಿಸಿಕೊಳ್ಳುವುದುಂಟು. “ಕಂಚು ಹಿತ್ತಾಳೆಯ ಪ್ರತಿಮೆಯನೆರಹಿ, ಮಿಂಚಲೆನುತೆ ಬಲು

ಜ್ಯೋತಿಗಳನೆ ಹಚ್ಚಿ” ಮಾಡುವ ಘನಪೂಜೆಯೇನಲ್ಲ. ಸರಳವಾದ ಪೂಜೆಯೇ. ಆದರೂ ಅದು

ಸುಮಾರು ಅರ್ಧ- ಮುಕ್ಕಾಲು ಘಂಟೆಯ ಕಾರ್ಯಕ್ರಮವಾಗುತ್ತದೆ. ಪೂಜೆಯೆಂದು

ಹೆಸರಿಟ್ಟಮೇಲೆ ಅದರಲ್ಲಿ ಅಭಿಷೇಕ, ಅರ್ಚನೆ, ನೈವೇದ್ಯ ಮುಂತಾದುವು ಸೇರಿಕೊಳ್ಳುತ್ತವೆ.

ಮತ್ತು, ಇವೆಲ್ಲವೂ ಸರಾಗವಾಗಿ ನೆರವೇರಬೇಕಾದರೆ ಅದಕ್ಕೆ ಬೇಕಾದ ಪರಿಕರ, ಪದಾರ್ಥಗಳನ್ನು

ಪೂಜೆ ಪ್ರಾರಂಭಿಸುವ ಮೊದಲು ಹೊಂದಿಸಿ ಇಟ್ಟುಕೊಳ್ಳಬೇಕಾಗುತ್ತದೆ. 


ಬಹುಮಟ್ಟಿಗೆ ಪೂಜೆಯ ಕ್ರಮ ಹಾಗೂ ಅದಕ್ಕೆ ಬೇಕಾದ ತಯಾರಿ ಅಭ್ಯಾಸವಾಗಿದೆಯಾದರೂ

ಒಮ್ಮೊಮ್ಮೆ ಏನನ್ನಾದರೂ ಮರೆಯುವುದು, ಅಥವಾ ಕ್ರಮದಲ್ಲಿ ತಪ್ಪಾಗುವುದು ಉಂಟು.

ಅದನ್ನು ನಿವಾರಿಸಿಕೊಳ್ಳಲೆಂದು ನಾನು ಸಂಕ್ಷಿಪ್ತವಾಗಿ ಪೂಜೆಯಕ್ರಮ ಹಾಗೂ ಅದಕ್ಕೆ

ಬೇಕಾದ ಪದಾರ್ಥ ಪರಿಕರಗಳನ್ನು ಒಂದು ಪಟ್ಟಿಯಂತೆ ಬರೆದು ಪೂಜೆಗೆ ಕೂಡುವ ಜಾಗದಲ್ಲಿ

ಗೋಡೆಗೆ ನೇತುಹಾಕಿದ್ದೇನೆ.  ನಾನು ಸಾಮಾನ್ಯವಾಗಿ ಮರೆಯುತ್ತಿದ್ದ ಮೂರು ವಿಷಯಗಳನ್ನು

ಪಟ್ಟಿಯ ತಲೆಭಾಗದಲ್ಲಿ, ಕೆಂಪುಶಾಯಿಯಲ್ಲಿ ಬರೆದಿದ್ದೇನೆ. “ಮಂಗಳಾರತಿಗೆ - ನೆನಸಿದ ಬತ್ತಿ,

ತೀರ್ಥಕ್ಕೆ - ಕೇಸರಿ, ಕರ್ಪೂರ, ಮತ್ತು ನೈವೇದ್ಯಕ್ಕೆ ಪದಾರ್ಥ”. ಇದರಲ್ಲಿ ವಿಶೇಷ ಏನೂ ಇಲ್ಲ.

ಅವಶ್ಯಕವಾಗಿ ಬೇಕಾದ ವಿಷಯಗಳನ್ನು ಮರೆಯಬಾರದೆಂದು ಅನೇಕರು ಈ ರೀತಿ ಪಟ್ಟಿಗಳನ್ನು

ಬರೆದು ಇಟ್ಟಿರುತ್ತಾರೆ. ಇದು ನನ್ನ ಪೂಜೆಯ ಪಟ್ಟಿಯ ಕಥೆ. ಇನ್ನು ಕಸದ ಡಬ್ಬಕ್ಕೆ ಬರೋಣ.

ನನಗೆ ಬುದ್ಧಿ ತಿಳಿದ ಕಾಲದಿಂದ, ನಾವಿದ್ದ ಮನೆಯ ಸಮೀಪ ಮುನಿಸಿಪಾಲಿಟಿಯ ಕಸದ

ತೊಟ್ಟಿಯಿದ್ದ ನೆನಪಿದೆ. ದಿನವೆಲ್ಲಾ ಕೂಡಿಸಿಟ್ಟ ತಾಜ್ಯಪದಾರ್ಥಗಳನ್ನು ಮರುದಿನ ಮುಂಜಾನೆ

ಸಮೀಪದ ಕಸದ ತೊಟ್ಟಿಗೆ ಸುರಿದು ಬರುತ್ತಿದ್ದೆವು. ಎರಡುದಿನಕ್ಕೊಮ್ಮೆ ಮುನಿಸಿಪಾಲಿಟಿ ಲಾರಿ

ಬಂದು ತೊಟ್ಟಿಯನ್ನು ಖಾಲಿಮಾಡಿ ಕಸವನ್ನು ಕೊಂಡೊಯ್ಯುತ್ತಿತ್ತು. ಒಮ್ಮೊಮ್ಮೆ ಅನೇಕ 

ದಿನಗಳಾದರೂ ಲಾರಿ ಬರುತ್ತಿದ್ದಿಲ್ಲ. ತೊಟ್ಟಿ ತುಂಬಿಕೊಂಡು ಕಸ ಹೊರಸುರಿದು ರಸ್ತೆಯಮೇಲೆ

ಹರಡಿರುತ್ತಿತ್ತು. ನಂತರ ಯಾವಾಗಲೋ ಲಾರಿಬಂದು ಸುತ್ತ ಬಿದ್ದಿದ್ದ ಕಸ, ತೊಟ್ಟಿಯೊಳಗಣ

ಕಸ ಎಲ್ಲವನ್ನೂ ಹೊತ್ತೊಯ್ಯುತ್ತಿತ್ತು. 


ನನ್ನ ಜೀವನದ ಅರ್ಧ ಶತಮಾನ ಹೀಗೆ ಕಳೆದಿದ್ದಾಗ, ನಮ್ಮ ಪ್ರಧಾನ ಮಂತ್ರಿಗಳು ದೇಶವನ್ನು

ಸ್ವಚ್ಛಗೊಳಿಸುವ ಘೋಷಣೆ ಮಾಡಿದರು. ಸುರಿದು ಬಿದ್ದಿರುತ್ತಿದ್ದ ಕಸದಕಡೆ ಜನರ ಗಮನ ಹರಿದು,

ಬದಲಾವಣೆಗಳಾಗಿ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ಮನೆ ಬಾಗಿಲಿನಿಂದ ಕೊಂಡೊಯ್ಯುವ

ವ್ಯವಸ್ಥೆ ಶುರುವಾಯಿತು. ಪ್ರಧಾನ ಮಂತ್ರಿಗಳೇನೋ ಪಾಪ ಜನರಿಗೂ ದೇಶ ಸ್ವಚ್ಛವಾಗಿರುವುದು

ಇಷ್ಟವಾದೀತೇನೋ ಎಂದುಕೊಂಡು ದೇಶವನ್ನು ಶುಚಿಗೊಳಿಸುವ ಘೋಷಣೆ ಮಾಡಿಬಿಟ್ಟರು. ಆದರೆ

ಬಹುತೇಕ ಜನರಿಗೆ ಸುತ್ತಲೂ ಕಸ ಕೊಳಚೆ ಹರಡಿಕೊಂಡಿರುವುದೇ ಮುದವೆನಿಸುತ್ತದೇನೋ!

ಅವರು ಕಸದ ಜವಾಬ್ದಾರಿಯನ್ನು ಪ್ರಧಾನಿಗಳಿಗೆ ಬಿಟ್ಟು ತಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ

ತಮ್ಮ ಪಾಡಿಗೆ ಸುತ್ತ ಮುತ್ತ ಕಸ ಚೆಲ್ಲಾಡಿಕೊಂಡು ಸಂತೋಷವಾಗಿದ್ದಾರೆ ! 


ಅದೇನೇ ಇರಲಿ. ನನ್ನ ಕಸದ ಡಬ್ಬಕ್ಕೆ ಬರುತ್ತೇನೆ. ಸಾಮಾನ್ಯವಾಗಿ ನಾನು ಪೂಜೆ ಮುಗಿಸಿದ ಕೊಂಚ

ಹೊತ್ತಿನಮೇಲೆ ನಮ್ಮ ಮನೆಗಳಿಂದ ತಾಜ್ಯವಸ್ತುಗಳನ್ನು ಕೊಂಡೊಯ್ಯುವ ಮುನಿಸಿಪಾಲಿಟಿಯ ಆಳು

ಮನೆಯಮುಂದೆ ಬಂದು ಸೀಟಿ ಊದುತ್ತಿದ್ದ. ನಾವು ಎರಡುಮೂರುದಿನದಿಂದ  ಕೂಡಿಟ್ಟಿರುತ್ತಿದ್ದ

ತಾಜ್ಯಪದಾರ್ಥಗಳ ಡಬ್ಬಗಳನ್ನು  ಆ ಹೊತ್ತಿಗೆ ಮನೆಯ ಮುಂದೆ ಇಟ್ಟಿರಬೇಕಾದದ್ದು ನಮ್ಮ ಜವಾಬ್ದಾರಿ.

ಅವನು ಬರುವ ಹೊತ್ತಿಗೆ ಡಬ್ಬ ಇಲ್ಲದಿದ್ದರೆ ಅವನು ಮುಂದೆ ಹೊರಟುಬಿಡುತ್ತಿದ್ದ. ಕಸತುಂಬಿದ ಡಬ್ಬ

ಹಾಗೆಯೇ ಉಳಿಯುತ್ತಿತ್ತು. ಆದ್ದರಿಂದ ನನಗೆ ಪೂಜೆಮುಗಿಸಿದ ತಕ್ಷಣದ ಕೆಲಸವೆಂದರೆ ಕಸದ ಡಬ್ಬಗಳನ್ನು

ಹೊರಗಿಡುವುದು. ಈ ಎರಡೂ ಕೆಲಸಗಳನ್ನು ನಾನು ಸಾಂಗವಾಗಿ ಮಾಡುತ್ತಾ ಬಂದಿದ್ದೆ. 


ಮುನಿಸಿಪಾಲಿಟಿ ವ್ಯವಸ್ಥೆ ಬದಲಾಯಿತೋ, ಕಸ ಒಯ್ಯುವ ಮನುಷ್ಯನ ವೇಳೆ ಹೆಚ್ಚುಕಮ್ಮಿಯಾಯಿತೋ

ತಿಳಿಯದು. ಕಸ ಒಯ್ಯುವ ಸಮಯ ಬದಲಾಯಿತು. ಒಂದುಬಾರಿ ನನ್ನ ಮಂಗಳಾರತಿಯ ಸಮಯದಲ್ಲಿ

ಹೊರಗಿನಿಂದ ಕಸದವನ ಸೀಟಿ ಕೇಳಿಸಿತು. ‘ರಿಫ್ಲೆಕ್ಸ್ ಆಕ್ಷನ್’ ಎನ್ನುತ್ತಾರಲ್ಲ, ಆ ರೀತಿ, ತಕ್ಷಣ

ಮಂಗಳಾರತಿಯ ತಟ್ಟೆಯನ್ನು ನೆಲಕ್ಕೆ ಕುಕ್ಕಿ ಕಸದಡಬ್ಬ ಹೊರಗಿಡಲು ಓಡಿದ್ದೆ ! ದೇವರು ಎಲ್ಲ ತಿಳಿದವನೂ,

ದಯಾಮಯನೂ ಆದ್ದರಿಂದ ಬಹುಶಃ ಅವನು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನಿಂದಾದ 

ಅಪಚಾರವನ್ನು ಕ್ಷಮಿಸಿರಬಹುದು ! ಆದರೆ ಆ ರೀತಿಯ ಅಪಚಾರವಾಗುವುದು ನನ್ನ ಮನಸ್ಸಿಗೆ

ಹಿಡಿಸಲಿಲ್ಲವಾದ್ದರಿಂದ  ಪೂಜೆ ಮಾಡುವ ದಿನಗಳಲ್ಲಿ, ಪೂಜೆಗೆಂದು ಕೂಡುವ  ಮುಂಚೆಯೇ ಕಸದ ಡಬ್ಬಗಳನ್ನು

ಹೊರಗಿಡುವ ಅಭ್ಯಾಸ ಮಾಡಿಕೊಂಡೆ. 


ಆದರೂ ಒಂದೊಂದು ದಿನ ಆ ಕೆಲಸ ಮರೆತು ಹೋಗಿ ಪೂಜೆಯ ಮಧ್ಯದಲ್ಲಿ ಕಸದವನ ಸೀಟಿ ಕೇಳುತ್ತಿತ್ತು.

ಪೂಜೆ ಬಿಟ್ಟು ಏಳುವುದೋ ಅಥವಾ ಮತ್ತೆರಡುದಿನ ಕಸವನ್ನು ಮನೆಯಲ್ಲಿ ಉಳಿಸಿಕೊಳ್ಳುವುದೋ

ಎಂಬ ದ್ವಂದ್ವ ಉಂಟಾಗುತ್ತಿತ್ತು. ಒಮ್ಮೆ, ಈ ದ್ವಂದ್ವದ ಕಿತ್ತಾಟದಲ್ಲಿ ಕಸದ ಡಬ್ಬವೇ ಗೆದ್ದು, ಪೂಜೆಬಿಟ್ಟು

ಡಬ್ಬ ಹಿಡಿದು ಹೊರಗೋಡಿದರೂ, ಅದು ತಡವಾಗಿ, ಕಸದವನು ಮುಂದೆ ಹೊರಟು ಹೋಗಿದ್ದ. ನನ್ನ ಪರಿಸ್ಥಿತಿ

ಇದೂ  ಕೆಟ್ಟಿತು, ಅದೂ ಕೆಟ್ಟಿತು ಎಂಬಂತಾಗಿತ್ತು. ಕೆಲವು ಬಾರಿ ಈ ರೀತಿ ತೊಂದರೆ ಆದಮೇಲೆ ಅದನ್ನು

ತಪ್ಪಿಸುವ ಉಪಾಯ ಹೊಳೆಯಿತು. ನನ್ನ ಪೂಜಾಕ್ರಮದ ಪಟ್ಟಿಯ ತಲೆಭಾಗದಲ್ಲಿ, ಮಂಗಳಾರತಿ, ತೀರ್ಥ,

ನೈವೇದ್ಯದ  ಜತೆಗೆ ಕೆಂಪುಶಾಯಿಯಲ್ಲಿ “ಕಸದ ಡಬ್ಬ” ಎಂದು ಬರೆದಿಟ್ಟೆ. ಕಸದ ಡಬ್ಬದ ತೊಂದರೆ

ನಿವಾರಣೆಯಾಗಿ ಪೂಜೆ ಸರಾಗವಾಯಿತು.  


ಮೊನ್ನೆ ಅದೇಕೋ ನನ್ನ ಪತ್ನಿಯ ಗಮನ ನನ್ನ ಪೂಜಾ ಕ್ರಮದ ಪಟ್ಟಿಯೆಡೆಗೆ ಹೋಯಿತು. ಬಹುಶಃ ನನ್ನ

ಪಟ್ಟಿಯ ಜತೆಯಲ್ಲಿ ಗೋಡೆಯ ಮೇಲೆ ನೇತಾಡುತ್ತಿದ್ದ ಪಂಚಾಂಗವನ್ನು ತೆಗೆದುಕೊಳ್ಳಲು ಹೋಗಿರಬೇಕು.

“ಏನ್ರೀ ಇದು ? ನಿಮ್ಮ ಪೂಜೆಯ ಪಟ್ಟಿಯಲ್ಲಿ ಕಸದ ಡಬ್ಬ ಏಕೆ ಬಂತು?” ಎಂಬ ಪ್ರಶ್ನೆಗೆ ಉತ್ತರವಾಗಿ

ಮೇಲೆ ಬರೆದಿರುವುದನ್ನು ವಿವರಿಸಿದೆ. “ಅದೇನು ವಿಚಿತ್ರದ ಮನುಷ್ಯರೋ! ಎಲ್ಲದರಲ್ಲೂ ನಿಮ್ಮದೇ

ಒಂದು ಎಡವಟ್ಟು ರೀತಿ. ನೋಡಿದವರು ಯಾರಾದರೂ ಏನು ತಿಳಿದಾರು? ಹಾಗೇಕೆ ಬರೆದಿದ್ದೀರಿ

ಎಂಬುದನ್ನೂ  ಬರೆದಿಡಿ. ಇಲ್ಲದಿದ್ದರೆ  ನಿಮ್ಮ ಮುಂದಿನ ಪೀಳಿಗೆಗೆ, ನಿಮ್ಮ ಕಸಾದ ಡಬ್ಬ, ಯಜ್ಞಕ್ಕೆ ಕಟ್ಟುವ

ಕರಿಯ ಬೆಕ್ಕಾದೀತು” ಎಂಬ ಟೀಕೆ ಬಂದಿತು.


ಯಾರೋ ಯಜ್ಞಮಾಡುವವರು ಯಜ್ಞಕ್ಕೆ ಮುಂಚೆ ಕಂಬಕ್ಕೆ ಕಟ್ಟುತ್ತಿದ್ದ ಬೆಕ್ಕಿನ ಕಥೆ ಗೊತ್ತಲ್ಲವೇ? ನಿತ್ಯ

ಯಜ್ಞಕಾರ್ಯ ಮಾಡುತ್ತಿದ್ದ ಗುರು ಒಬ್ಬನ ಬಳಿ ಒಂದು ಕರಿಯ ಬೆಕ್ಕಿತ್ತಂತೆ. ಅದೇಕೋ ಅದರ ಮೇಲೆ

ಅವನಿಗೆ ಅತಿ ಪ್ರೀತಿ. ಅವನು ಯಜ್ಞಮಾಡುವಾಗ ಕೂಡ ಅದು ಅವನ ಸುತ್ತಮುತ್ತ ಸುಳಿದಾಡಿಕೊಂಡಿದ್ದು,

ಯಾವುದೋ ಕ್ಷಣದಲ್ಲಿ ಮೈಮೇಲೆ ಏರುವುದು, ಪದಾರ್ಥಗಳನ್ನು ಬೀಳಿಸಿವುದು ಮುಂತಾಗಿ ತಂಟೆ

ಮಾಡುತ್ತಿತ್ತಂತೆ. ಅವನಿಗೆ ಅದನ್ನು ದಂಡಿಸಿ ಬುದ್ಧಿಕಲಿಸುವ ಮನಸ್ಸಿರಲಿಲ್ಲ. ಆದ್ದರಿಂದ ತಾನು ಯಜ್ಞಕ್ಕೆ

ತೊಡಗುವ ಮುನ್ನ ಅದನ್ನು  ಬದಿಯಲ್ಲಿ ಒಂದು ಕಂಬಕ್ಕೆ ಕಟ್ಟಿಹಾಕಬೇಕೆಂದು ಶಿಷ್ಯರಿಗೆ ಸೂಚಿಸಿದ್ದನಂತೆ.

ಹಾಗಾಗಿ ಬೆಕ್ಕನ್ನು ಕಂಬಕ್ಕೆ ಕಟ್ಟುವುದು ಯಜ್ಞಕ್ಕೆ ಸಂಭಂದಪಟ್ಟ ಒಂದು ಕಾರ್ಯವಾಗಿ ಹೋಯಿತು.

ಅವನ ಕಾಲದ ನಂತರ ಬಂದ ಶಿಷ್ಯರಿಗೆ ಕಾರ್ಯದ ಹಿಂದಿನ ಉದ್ದೇಶ್ಯ ತಿಳಿದಿರಲಿಲ್ಲ. ಹಾಗಾಗಿ ಮುಂದಿನ

ಪೀಳಿಗೆಯ ಯಾಜ್ಞಿಕರು ಬೆಕ್ಕು ಸಾಕಿಲ್ಲದಿದ್ದರೂ ಯಜ್ಞಮಾಡುವ ಮುಂಚೆ ಪ್ರಯಾಸಪಟ್ಟು ಊರೆಲ್ಲಾ ಹುಡುಕಿ

ಒಂದು ಕರಿಯ ಬೆಕ್ಕನ್ನು ತಂದು ಪಕ್ಕದಲ್ಲಿ ಕಟ್ಟಿ ಹಾಕಿಕೊಳ್ಳುತ್ತಿದ್ದರಂತೆ !  


ನನ್ನ ಮುಂದಿನ ಪೀಳಿಗೆಯವರೇನಾದರೂ ಪೂಜೆ ಮಾಡುವ ಪದ್ಧತಿ ಯನ್ನು ಉಳಿಸಿಕೊಂಡು ಬಂದರೆ,

ನನ್ನ ಪೂಜೆಯ ಪಟ್ಟಿಯನ್ನು ಅನುಸರಿಸಿದರೆ, ಪೂಜೆಗೆ ಮುಂಚೆ ಒಂದು ಕಸದಡಬ್ಬವನ್ನು ತಂದು

ಬದಿಯಲ್ಲಿ ಇರಿಸಿಕೊಳ್ಳುತ್ತಾರೇನೋ !!  




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ