ಮೊನ್ನೆ ಸುಮಾರು ಹತ್ತು ದಿನಗಳನ್ನು ನನ್ನ ಹುಟ್ಟೂರು ಬೆಂಗಳೂರಿನಲ್ಲಿ ಕಳೆದೆ. ನಾನು ಹುಟ್ಟಿದ
ಮತ್ತು ನನ್ನ ಜೀವಿತದ ಮೊದಲ ಮೂವತ್ತು ದಶಕಗಳನ್ನು ಕಳೆದ ನಗರ ಈಗ ಕೆಲವು ವರುಷಗಳಿಂದ
ನನಗೆ ಅಪರಿಚಿತವೆನಿಸುತ್ತದೆ. ಅಲ್ಲಿಯ ಸ್ಥಳಾಕೃತಿಯಲ್ಲಿ ಆಗಿರುವ ಬದಲಾವಣೆಗಳು, ರಸ್ತೆ,
ಕಟ್ಟಡಗಳು, ಜೀವನ, ರೀತಿ ನೀತಿಗಳು, ಹೊಸದೆನಿಸುತ್ತದೆ. ಇಂಚಿಂಚನ್ನು ಆವರಿಸಿಕೊಂಡಿರುವ
ಕಟ್ಟಡಗಳು, ಉಳಿದ ಸ್ಥಳವನ್ನೆಲ್ಲಾ ತುಂಬಿಕೊಂಡಿರುವ ವಾಹನಗಳು, ರಭಸದ ಸಂಚಾರ, ಅಷ್ಟೇ
ರಭಸದ ಜೀವನ, ಅಕ್ಕಪಕ್ಕದವರ ಪರಿಚಯವಿಲ್ಲದ, ಯಾರದೂ ಎಗ್ಗಿಲ್ಲದ ಜೀವನ ಶೈಲಿ ಬೇಸರ
ತರುತ್ತದೆ. ವರುಷದಲ್ಲಿ ಎರಡು ಮೂರುಬಾರಿಯಾದರೂ ಬೆಂಗಳೂರಿನ ದರ್ಶನವಾಗುತ್ತಾದರೂ
ಆ ಕಾಂಕ್ರೀಟು ಕಾಡಿನ ವಿಹಂಗಮ ದೃಶ್ಯ ಕಂಡಿರಲಿಲ್ಲ. ಮೊನ್ನೆ ನನ್ನ ಸಂಭಂದಿಕರೊಬ್ಬರು ವಾಸವಿರುವ
ಕಟ್ಟಡದ ಇಪ್ಪತ್ತೈದನೆಯ ಮಜಲಿನಿಂದ ಕಂಡ ಬೆಂಗಳೂರಿನ ದೃಶ್ಯ ಖೇದಕರವಾಗಿತ್ತು. ಆದರೂ ಈ
ಯಾಂತ್ರಿಕ ಜೀವನದ ಗಡಿಬಿಡಿಯ ಮಧ್ಯದಲ್ಲಿಯೇ ಸಂಭವಿಸಿದ ಕೆಲವು ಘಟನೆಗಳು,
ಅಪರಿಚಿತರೊಡನೆಯ ಸಂವಹನ, ಸಂಭಾಷಣೆಗಳು ಕಾಂಕ್ರೀಟು ಕಾಡಿನ ಅಂತರಾಳದೊಳಗೆ ಇನ್ನೂ
ಬಡಿದುಕೊಳ್ಳುತ್ತಿರುವ ಮಾನವ ಹೃದಯವನ್ನು, ನಗರವಾಸಿಗಳ ಪರಸ್ಪರ ಹೃದಯ ಸಂಭಂದವನ್ನು
ತೋರಿಸಿದವು.
ಮೇಲೆ ಹೇಳಿದ ಸಂಭಂದಿಕರ ಮನೆಗೆ ಮುಂಜಾನೆ ಒಂಭತ್ತರ ಹೊತ್ತಿಗೆ ತಲುಪುವುದೆಂದು
ನಿರ್ಧಾರವಾಗಿತ್ತು. ಅಂತೆಯೇ ನಾನು ನನ್ನ ಪತ್ನಿಯೊಡನೆ ಸುಮಾರು ಎಂಟೂವರೆಗೆ ಮನೆಯಿಂದ
ಹೊರಬಿದ್ದೆ. ಆಟೋರಿಕ್ಷಾ ಹಿಡಿಯಲು ಆಚೀಚೆ ನೋಡುತ್ತಾ ಕೊಂಚದೂರ ನಡೆದಿದ್ದಾಗ ನನ್ನ ಪತ್ನಿಯ ಲಕ್ಷ್ಯ
ನಾನು ಧರಿಸಿದ್ದ ಅಂಗಿಯ ಮೇಲೆ ಬಿತ್ತು. “ಇದೇನು ಬಟ್ಟೆ ಹಾಕಿಕೊಂಡಿದೀರಿ? ಮಾಸಲಾಗಿಹೋಗಿದೆ.
ಇಷ್ಟೊಂದು ಸುಕ್ಕು. ಜತೆಗೆ ಮಸಿ ಕಲೆಗಳು ಬೇರೆ. ರಾತ್ರಿ ಇದನ್ನು ಹಾಕಿಕೊಂಡೇ ಮಲಗಿದ್ದಿರೇನೋ.
ಸರಿಯಾದ ಬಟ್ಟೆ ಹಾಕಿಕೊಳ್ಳಬಾರದೇ ? ಬಂದಲ್ಲಿ ಹೋದಲ್ಲಿ ಮಾನ ತೆಗೆಯುತ್ತೀರಿ” ಆಕೆಯ
ಮಾತಿನ ಪ್ರವಾಹ ಇನ್ನೂ ಮುಂದುವರೆಯುತ್ತಿತ್ತೇನೋ ? ನಮ್ಮ ಹಿಂದಿನಿಂದ ಬಂದ ಒಂದು ಧ್ವನಿ
ಆ ಪ್ರವಾಹಕ್ಕೆ ತಡೆಹಾಕಿತು “ಬಿಡೀಮ್ಮಾ, ಯಾಕೆ ಬೇಜಾರು ಮಾಡ್ಕೋತೀರಿ? ಗಂಡಸರಿಗೇನು ?
ಏನು ಹಾಕ್ಕೊಂಡಿದ್ರೂ ನಡೆಯತ್ತೆ. ಈ ಬಟ್ಟೆ ಬರೆ ಒಡವೆ ಅಲಂಕಾರ ಎಲ್ಲಾ ನಮಗೇ ಅಲ್ವ
ಬಂದಿರೋದು ?” ಹಿಂದೆ ತಿರುಗಿದೆವು. ನಮ್ಮ ಹಿಂದೆ ನಡೆದು ಬರುತ್ತಿದ್ದ ಯಾರೋ ಒಬ್ಬ
ಮನೆಕೆಲಸದಾಕೆ ನಮ್ಮ ಮಾತು ಕೇಳಿಸಿಕೊಂಡು, ನಮ್ಮ ಸಂಭಾಷಣೆಯಲ್ಲಿ ಪಾಲ್ಗೊಂಡು,
ನನ್ನ ಪರ ವಹಿಸಿ ನನ್ನಾಕೆಯ ಬಾಯಿ ಮುಚ್ಚಿಸಿದ್ದಳು !
ಒಂದು ಸಂಜೆ ಹಾಗೆಯೇ ನಡೆದಾಡಿಕೊಂಡು ಬರಲೆಂದು ಹೊರಟು ಮನೆಯಿಂದ ದೂರಬಂದಿದ್ದೆ.
ಕತ್ತಲಾಗುತ್ತಿತ್ತು. ಮೋಡ ಕಟ್ಟಿಕೊಂಡು ಮಳೆಬರುವಂತೆ ಕಂಡಿತು. ಕೊಂಚ ಬೇಗ ಮನೆ ತಲುಪಿದರೆ
ವಾಸಿ ಎನಿಸಿ, ರಸ್ತೆಯಲ್ಲಿ ಕಂಡ ಆಟೋರಿಕ್ಷಾ ನಿಲ್ಲಿಸಿ ಹತ್ತಿದೆ. ಎಲ್ಲಿಗೆ ಹೋಗಬೇಕೆಂದು ಕೇಳಿ, ಮೀಟರ
ಚಾಲೂ ಮಾಡಿದ ಆಟೋ ಚಾಲಕ, ನನ್ನ ಚಡ್ಡಿ ಟೀ ಷರಟು, ಬೂಟು ಕಂಡು “ವಾಕಿಂಗ್ ಹೊರಟಿದ್ರಾ
ಸಾರ” ಎಂದ. “ಹೌದು ಸ್ವಾಮೀ”. “ಮತ್ತೆ ಗಾಡಿ ಹತ್ಬುಟ್ರೀ?” “ಏನೋ ಕೊಂಚ ಅರ್ಜೆಂಟು ಕೆಲಸ
ನೆನಪಾಯ್ತು ನೋಡಿ, ಬೇಗ ಮನೇಗೆ ಹೋಗಬೇಕಾಯ್ತು.” “ಸರಿ ಬಿಡಿ. ದಿನಾ ವಾಕಿಂಗ್ ಮಾಡ್ತೀರಾ
ಸಾರ?” “ಹೌದು ಸ್ವಾಮೀ”. “ಅದಕ್ಕೇ ನೋಡಿ, ಫಿಟ್ಟಾಗಿದೀರಾ”. “ಏನೋ ಸ್ವಾಮೀ ದೇವರ ದಯೆ.
ಇದುವರೆಗೂ ಚೆನ್ನಾಗಿದೀನಿ.” “ಹಂಗೇ ಇರ್ಬೇಕು ಬಿಡಿ. ಒಳ್ಳೇದು. ನಿಮ್ಮಂತೋರನ್ನ ನೋಡ್ದ್ರೆ ನಮಗೂ
ವಾಕಿಂಗು ಗೀಕಿಂಗು ಮಾಡ್ಬೇಕು ಅನ್ನಿಸ್ತದೆ. ಆದ್ರೆ ನೋಡಿ, ಆಗೋದೇ ಇಲ್ಲ. ಒಳ್ಳೇದೆಲ್ಲಾ ಹಂಗೇ ಸ್ವಾಮೀ.
ಶುರುಮಾಡೋದು ಬಾಳ ಕಷ್ಟ. ಅದೇ ಕೆಟ್ಟದ್ದೇನಾದ್ರೂ ಮನಸ್ಗೆ ಬರ್ಲಿ ನೋಡಿ, ತಕ್ಷಣ ಸುರು ಆಗೋಗತೈತೆ”
ಹೀಗೆ ಪ್ರಾರಂಭವಾದ ಮಾತುಕತೆಯು ಉಭಯ ಕುಶಲೋಪರಿ, ನೌಕರಿ, ಸಂಸಾರ, ಮಕ್ಕಳು ಮರಿಗಳ
ವಿದ್ಯಾಭ್ಯಾಸ, ಮದುವೆ ಮುಂತಾದ ಹಾದಿಗಳಲ್ಲಿ ಹರಿದಾಡುವ ಹೊತ್ತಿಗೆ ನಾನು ಇಳಿಯುವ ಸ್ಥಳ ಬಂತು.
“ನಾನು ಸುಮ್ನೆ ಇರಲ್ಲ ನೋಡಿ, ಎಲ್ರನ್ನೂ ಮಾತಾಡಿಸ್ ಬಿಡ್ತೀನಿ. ಕೆಲವ್ರು ಮಾತಾಡ್ತಾರೆ. ಕೆಲವ್ರು
ಬೇಜಾರಾಗ್ತಾರೆ. ನಿಮ್ಮಂತೋರು ಸಿಕ್ಕಿದ್ರೆ ಮನಸ್ಗೆ ಏನೋ ಸಂತೋಷ. ನಮಸ್ಕಾರ, ಬರ್ತೀನಿ” ಎಂದು
ಆಟೋ ಚಾಲಕ ಬೀಳ್ಕೊಂಡ. ಆತನೊಡನೆ ನಡೆಸಿದ ಸಂಭಾಷಣೆ ನನಗೂ ಮನಸ್ಸಿಗೆ ಹಿತವೆನ್ನಿಸಿತು.
ಬೇಕರೀಗೆ ತಿಂಡಿ ತೊಗೊಳೋಕೆ ಹೋಗಿದ್ದೆ. ಎರಡು ಖಾರ ಬನ್ನು, ಒಂದು ಪ್ಯಾಕೆಟ್ ಖಾರಸೇವು ಕೊಂಡೆ.
ಬೇಕರಿಯ ಅಯ್ಯಂಗಾರಿ ಹಬ್ಬಕ್ಕಾಗಿ ಸಿಹಿಬೂಂದಿ ಮಾಡಿ ಇಟ್ಟಿದ್ದ.
“ಸ್ವೀಟ್ ಬೇಡ್ವಾ ಸಾರ? ಹಬ್ಬಕ್ಕೆ ಬರೀ ಖಾರ ತೊಗೊಂಡಿದ್ದೀರಿ”.
“ಬೇಡಾ ಸ್ವಾಮೀ ಇಷ್ಟು ಸಾಕು”
“ಹಂಗಂದ್ರೆ ಹೆಂಗೆ ಸಾರ್ ? ಬೂಂದಿ ಏನ್ ದಿನಾ ಮಾಡ್ತೀವಾ? ಹಬ್ಬಕ್ಕೆ ಅಂತ ಮಾಡಿದ್ದು. ಫ್ರೆಶ್ ಆಗಿದೆ.
ತೊಗೋಳಿ ಕಾಲ್ ಕೆಜಿ”
“ಬೇಡಾ ಸ್ವಾಮೀ. ಈಚೆಗೆ ಹುಡುಗರು ಸಿಹಿ ತಿನ್ನೋದೇ ಇಲ್ಲ.”
ನಮ್ಮ ಮಾತುಕತೆ ಕೇಳುತ್ತಿದ್ದ ಮತ್ತೊಬ್ಬ ಗಿರಾಕಿ ಮಧ್ಯೆ ಬಾಯಿ ಹಾಕಿದರು
“ಅವರಿಗೇನು ಬೇಕೋ ಅದನ್ನ ಕೊಡ್ರೀ. ನೀವು ಯಾವಾಗ್ಲೂ ಬಂದೋರಿಗೆ ನಾಮ ಹಾಕಿ ನಿಮ್ಮ ವ್ಯಾಪಾರ
ಗಿಟ್ಟಿಸ್ಕೊಳ್ಳೋಕೆ ನೋಡ್ತಿರ್ತೀರ”
“ಅಷ್ಟೇ ಅಲ್ವಾ ಸ್ವಾಮೀ ವ್ಯವಹಾರ ? ಎಲ್ರೂ ಒಬ್ಬರಿಗೊಬ್ಬರು ನಾಮ ಹಾಕಕ್ಕೇ ನೋಡ್ತಿರ್ತಾರೆ. ನನಗೆ
ನಾಮ ಹಾಕೋರೂ ಇರ್ತಾರೆ. ಅದಕ್ಕೇ ನೋಡಿ, ಬೇರೆಯವರಿಗೆ ಯಾಕೆ ಕೆಲಸ ಅಂತ ನನ್ನ ನಾಮ
ನಾನೇ ಹಾಕಿಕೊಂಡು ಬಿಡ್ತೀನಿ” ಬೇಕರಿಯ ಅಯ್ಯಂಗಾರಿ ತನ್ನ ಹಣೆಯ ಮೇಲೆ ಢಾಳಾಗಿ ಕಾಣುತ್ತಿದ್ದ
ನಾಮವನ್ನು ಬೊಟ್ಟು ಮಾಡಿ ತೋರಿಸಿದ !
ಮೊನ್ನೆ ಗೋವಾದ ಪಣಜಿಯಲ್ಲಿ ಒಂದು ಚಿತ್ರ ಪ್ರದರ್ಶನವನ್ನು ನೋಡುತ್ತಿದ್ದೆ. ಗೋವಾದ ಸಣ್ಣ
ಹಳ್ಳಿಯೊಂದರಲ್ಲಿ ಅನೇಕ ದಶಕಗಳ ಕಾಲ ವಾಸವಾಗಿದ್ದು, ಸಾವಿರದೊಂಭೈನೂರ ಎಂಭತ್ತರ
ಸಮಯದಲ್ಲಿ ತನ್ನ ದೇಶಕ್ಕೆ ವಾಪಸಾದ ವಿದೇಶಿ ಕಲಾಕಾರನೊಬ್ಬನ ಚಿತ್ರಗಳ ಪ್ರದರ್ಶನ. ತಾನು
ವಾಪಸಾಗುವ ಮುನ್ನ ಆತ ಹೇಳಿದ ಮಾತು ಹೀಗೆ “ಇನ್ನು ಇಲ್ಲಿ ವಾಸಿಸಲು ಸಾಧ್ಯವಾಗದು. ಎಲ್ಲೆಡೆ
ಅಭಿವೃದ್ಧಿ ಮತ್ತು ಹಣದ ತಾಂಡವ. ಹಳ್ಳಿಗರಿಗೆ ಪರಸ್ಪರ ಮಾತುಕತೆಯಾಡಲು, ಹರಟಲು,
ಸಮಯವಿಲ್ಲ. ಅವರು ನಗುವುದನ್ನೂ ಮರೆತುಬಿಟ್ಟಿದ್ದಾರೆ ಎನಿಸುತ್ತದೆ”. ನನ್ನ ಹುಟ್ಟೂರಿನಬಗ್ಗೆ ನನಗೆ
ಅಂಥಹುದೇ ಅಭಿಪ್ರಾಯ ಮೂಡುತ್ತಿತ್ತು. ಹಾಗಾಗಿಯೇ ಮೇಲೆ ಬರೆದ ಸಂಭಾಷಣೆಗಳ ಅನುಭವ
ಮನಸ್ಸಿನ ಮೇಲೆ ತಂಗಾಳಿ ಬೀಸಿದಂತೆನಿಸಿತು !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ