ಶನಿವಾರ, ಡಿಸೆಂಬರ್ 17, 2022

ನಾಯಿಬಂದಾವೋ ಬೆನ್ಹತ್ತಿ

ಪ್ರತಿದಿನ ಮುಂಜಾನೆ ಐದರಿಂದ ಐದೂವರೆಯ ಒಳಗೆ ನಾನು ವಾಯು ಸಂಚಾರಕ್ಕೆ ಹೊರಡುತ್ತೇನೆ.

ಕೆಲವೊಮ್ಮೆ ಐದಕ್ಕೆ ಮುಂಚೆಯೂ ಹೊರಬೀಳುವುದುಂಟು. ಈ ಡಿಸೆಂಬರ ತಿಂಗಳಿನಲ್ಲಿ ಆ

ಸಮಯದಲ್ಲಿ ಹೊರಗೆ ಇನ್ನೂ ಕತ್ತಲಿರುತ್ತದೆ. ಬೀದಿ ದೀಪಗಳು  ನನಗೆ ಹಾದಿ ತೋರುತ್ತವೆ.

ಚಳಿಯಿದ್ದರೆ ಯಾವುದಾದರೂ ಬೆಚ್ಚಗಿನ ಬಟ್ಟೆ ತೊಟ್ಟು ಮುಂಜಾನೆಯ ಅಹ್ಹ್ಲಾದಕರ ಹವೆಯಲ್ಲಿ

ಏನೋ ಚಿಂತಿಸುತ್ತಲೋ, ಅಥವಾ ಎಂಥದೋ ಶ್ಲೋಕವೋ, ಹಾಡೋ ಗುನುಗುತ್ತಲೋ, ಆಸುಪಾಸಿನ

ಪರಿವೆಯಿಲ್ಲದೆ ನಾನು ಹೆಜ್ಜೆ ಹಾಕುತ್ತಿರುತ್ತೇನೆ. 


ನನ್ನ ಸಂಚಾರಕ್ಕೆ ಮುದನೀಡುವ ಪರಿಸರವನ್ನು  ಸೃಷ್ಟಿಸಿರುವ ಭಗವಂತ, ನನ್ನ ಸಂತೋಷವನ್ನು

ಭಗ್ನಮಾಡಲು ಎರಡು ಸಂಗತಿಗಳ ಸೃಷ್ಟಿಮಾಡಿದ್ದಾನೆ. ಒಂದು, ಬೆಳಗಿನ ಶುದ್ಧ ಗಾಳಿಗೆ ತಮ್ಮ ದಟ್ಟ

ಹೊಗೆ ಬೆರಸಿ ಕಿರಿಕಿರಿ ಮಾಡುವ ವಾಹನಗಳು. ಎರಡನೆಯದು ಬೀದಿ ನಾಯಿಗಳು. ಬೆಳಗ್ಗೆ

ದಿನಪತ್ರಿಕೆ ಮತ್ತು ಹಾಲು ಸರಬರಾಜುಮಾಡುವ ದ್ವಿಚಕ್ರಿಗಳು ಸಂದಿಸಂದಿಗಳಲ್ಲೂ 

ಸುತ್ತಾಡುತ್ತಿರುತ್ತವೆ. ಜತೆಗೇ ತರಕಾರಿ ಮತ್ತಿತರ ನಿತ್ಯೋಪಯೋಗಿ ವಸ್ತುಗಳನ್ನು

ಸರಬರಾಜುಮಾಡುವ ಲಾರಿ, ರಿಕ್ಷಾಗಳು ಎಲ್ಲೆಡೆಯೂ ಎದುರಾಗುತ್ತವೆ. ಇವುಗಳಿಂದ

ಕಿರಿಕಿರಿಯಾಗುವುದು ನಿಜ. ಆದರೆ ಅವುಗಳಿಂದ ಯಾವುದೇ  ಹೆದರಿಕೆ, ಬೆದರಿಕೆ ಇಲ್ಲ. 


ಮತ್ತೆ ಬೀದಿನಾಯಿಗಳು. ನನ್ನ ಮಟ್ಟಿಗೆ ಹೇಳುವುದಾದರೆ ಬೀದಿನಾಯಿಗಳಿಂದ ಆಗುವ ತೊಂದರೆ

ಹೆಚ್ಚು. ಬೀದಿ ದೀಪ ತಾಗದಂಥ  ಯಾವುದೋ ವಾಹನದ ಕೆಳಗೋ, ಮರದ ಬುಡದಲ್ಲೋ,

ಗೋಡೆಯ ಪಕ್ಕದಲ್ಲೋ, ಕತ್ತಲ ಸಂದಿಯಲ್ಲಿ ನನ್ನ ಕಣ್ಣಿಗೆ ಬೀಳದೆ ಮಲಗಿರುವ ನಾಯಿಯೊಂದು

ಇದ್ದಕ್ಕಿದ್ದಂತೆ ಯಾವುದೋ ಆವೇಶಕ್ಕೊಳಗಾದಂತೆ ಗವ್ವೆಂದು ನನ್ನ ಮೇಲೆರಗಿ, ನನ್ನನ್ನು ನನ್ನ ಚಿಂತನೆಯ

ಆಕಾಶದಿಂದ ಭೂಮಿಗೆ ಎಳೆದು ಅಪ್ಪಳಿಸುತ್ತದೆ. ಗಾಬರಿಯಿಂದ ಮೈ ಬೆವರಿ, ನನ್ನ ಹೃದಯ

ಬಾಯಿಗೆ ಬರುತ್ತದೆ. 


ಅಷ್ಟೇಅಲ್ಲ, ಒಂದು ನಾಯಿ ಬೊಗಳಿದರೆ ಆ ಬೀದಿಯಲ್ಲಿನ ಉಳಿದ ನಾಯಿಗಳಷ್ಟೇ ಅಲ್ಲದೆ ಪಕ್ಕದ

ಬೀದಿಯ ನಾಯಿಗಳೂ ಎಚ್ಚೆತ್ತುಕೊಂಡು ನನ್ನ ಮೇಲೆ ಆಕ್ರಮಣಕ್ಕೆ ತಯಾರಾಗಿ, ಗುರುಗುಟ್ಟುತ್ತಾ

ನನ್ನ ಹಾದಿ ಕಾಯುತ್ತಾ ನಿಲ್ಲುತ್ತವೆ.  ನಾನು ನನ್ನ ಬಡಿದುಕೊಳ್ಳುವ ಹೃದಯವನ್ನು ಘಟ್ಟಿಯಾಗಿ

ಹಿಡಿದು, ಇಲ್ಲದ ಧೈರ್ಯ ತೋರುತ್ತಾ, ಕೈಯಲ್ಲಿ ಕೋಲಿದ್ದರೆ ಅದನ್ನು ಝಳಪಿಸಿ  ಹಿಂದೆ ಮುಂದೆ

ನಡೆದಾಡುತ್ತಾ ಹೇಗೋ ಮಾಡಿ ಆ ನಾಯಿಗಳ ಸೈನ್ಯದಿಂದ ಪಾರಾಗಿ ನಡೆಯಬೇಕಾಗುತ್ತದೆ.

ಹೀಗಾಗಿ ನನ್ನ ದೈನಂದಿನ ಜೀವನದ ಮೇಲೆ ಬಹಳವೇ ಪರಿಣಾಮ ಬೀರುವ ಪ್ರಾಣಿ ನಮ್ಮ ಬೀದಿ ನಾಯಿ. 


ಅನೇಕ ವರುಷಗಳ ಓಡಾಟದ ಅಭ್ಯಾಸದಿಂದ ನಾನು ನಾಯಿಗಳು ಇರಬಹುದಾದ ಸಾಧ್ಯತೆಯನ್ನು

ಗುರುತಿಸುವ ಪರಿಣಿತಿಯನ್ನು ಗಳಿಸಿಕೊಂಡು, ಅಂಥ ರಸ್ತೆಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ

ನಡೆದಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ. ಆದರೂ ಒಂದೇ ದಾರಿಯಲ್ಲಿ ಸುತ್ತಿ ಸುತ್ತಿ

ಬೇಸತ್ತು ಒಮ್ಮೊಮ್ಮೆ ಹೊಸಬೀದಿಗಳನ್ನು ಹಿಡಿದು ನಡೆಯುವುದುಂಟು. ಅಥವಾ ನಮ್ಮೂರು ಬಿಟ್ಟು

ಬೇರೆ ಸ್ಥಳಗಳಲ್ಲಿ ಇರುವಾಗ ಪರಿಚಯವಿಲ್ಲದ ರಸ್ತೆಗಳಿಗೆ ಕಾಲಿಟ್ಟು ತೊಂದರೆಗೆ ಸಿಕ್ಕುವುದುಂಟು.

ಇಂದು ಮುಂಜಾನೆ ಅಂಥದೊಂದು ಮುಖಾಮುಖಿಯಲ್ಲಿ ನಾನು ಸಿಕ್ಕಿಕೊಳ್ಳಬೇಕಾಯಿತು. ಆ

ಪ್ರಸಂಗದಿಂದ ಪ್ರೇರಿತವಾದ ಪದ್ಯ ಈ ಕೆಳಗಿನದು. 



ಮುದದ ಮುಂಜಾವಿನ 

ಮಸುಕು ಬೆಳಕಿನಲ್ಲಿ 

ಮನ ಹರಿಯಬಿಟ್ಟು  

ಮೈಮರೆತು ನಡೆವಾಗ 


ಬೀದಿ ದೀಪದ 

ಕಿರಣ ತಾಗದ 

ಕತ್ತಲೆಯ ಮೂಲೆಯಿಂದ  

ಗವ್ವೆಂದು ಎಗರಿಬಂದು 


ಬೆಚ್ಚಿಬೀಳಿಸಿ ಬೆದರಿಸಿ

ಬಾಯ್ಬಿರಿದು ಹೆದರಿಸಿ 

ಬೊಗಳುತ್ತ ಹಿಂಬಾಲಿಸಿ 

ಚಳಿಯಲ್ಲೂ ಬೆವರಿಳಿಸುವ,  


ಬೀದಿ ಬೀದಿಗಳಲ್ಲಿ 

ಬೀಡು ಬಿಟ್ಟು 

ಭಿಡೆಯಿಲ್ಲದೆ 

ಬೆಳೆಯುತ್ತಿರುವ 


ಬೀದಿನಾಯಿಗಳ 

ಕಾರಣ, ಪ್ರೇರಣೆಯಿಂದ 

ಪ್ರ್ರಾಣತಳೆದ ಈ ಪದ್ಯ,

ಆ ಶ್ವಾನಗಳಿಗೇ ಸಮರ್ಪಣೆ  ! 


ಇದನ್ನು ಬರೆವಾಗ ಶಿಶುನಾಳ ಶರೀಫರ ನೆನಪಾಯಿತು. ಬೀದಿ ಬೀದಿ ತಿರುಗುವ ದಾಸರಾದ ಸಾಹೇಬರಿಗೂ  

ಸಾಕಷ್ಟು ಬೀದಿ ನಾಯಿಗಳ ಕಾಟದ ಅನುಭವವಿದ್ದಿರಬೇಕು. ಜತೆಗೇ, ನಾಯಿಕಾಟವನ್ನು  ಮೀರಿಸುವ 

ನರರ ಕಾಟ ಕೂಡ ! ಅದರಿಂದಲೇ ಅವರು ಹಾಡಿದರು  -  “ನಾಯಿಬಂದಾವೋ ಬೆನ್ಹತ್ತಿ, ನಾರಾಯಣ,

ನಾಯಿಬಂದಾವೋ ಬೆನ್ಹತ್ತಿ / ನಾಯಿಯಂದರೆ ನಾಯಿಯಲ್ಲ, ಮಾನವಜನ್ಮದ ಹೀನ ನಾಯಿ / ಜ್ಞಾನಾನಂದ

ತಿಳಿಯದಂಥ ಶ್ವಾನಾನಂದದೊಳು ದುಂಧೆ / ನಾಯಿಬಂದಾವೋ ಬೆನ್ಹತ್ತಿ  !” 


ನನ್ನ ಪುಣ್ಯ. ನನಗೆ ಅಂಥ ನರರ ಕಾಟವಿಲ್ಲ !! ಮೇಲೆ ಕಾಣಿಸಿದ ಪದವನ್ನು ಶ್ರೀ ಶಿವಮೊಗ್ಗ ಸುಬ್ಬಣ್ಣನವರು

ಹಾಡಿರುವ ಧಾಟಿ ನನಗೆ ಬಹಳ ಹಿಡಿಸಿತು. ಶರೀಫ ಸಾಹೇಬರ ಪದಗಳ ವಿವರಣೆ ಸುಲಭವಲ್ಲ.

ತಿಳಿದವರು ತಮ್ಮ ತಿಳುವಳಿಕೆಗೆ ತಕ್ಕಂತೆ ಅದನ್ನು ವಿವರಿಸಬಹುದು. ಆಸಕ್ತಿಯಿದ್ದರೆ, ವಿವರಿಸುವ

ಪ್ರಯತ್ನಪಡಿ. ಹಾಗೆಯೇ ಇತರ ಪದಗಳನ್ನೂ ಕೇಳಿ ಅರ್ಥ ಹೊರಗೆಳೆಯುವ ಯತ್ನ ಮಾಡಿ.  

ಸೋಮವಾರ, ಸೆಪ್ಟೆಂಬರ್ 26, 2022

ದಸರಾ


ನಮ್ಮ ಚಿಕ್ಕಂದಿನಲ್ಲಿ ದಸರಾಹಬ್ಬಕ್ಕೆ ಶಾಲೆಗೆ ರಜೆ. ಅದಕ್ಕೆ ಮುಂಚೆ ಮುಂಚೆ ನಾವು

‘ಚಿಕ್ಕ ಪರೀಕ್ಷೆ’ ಎಂದು ಕರೆಯುತ್ತಿದ್ದ ಮಧ್ಯಕಾಲೀನ ಪರೀಕ್ಷೆ ಮುಗಿದಿರುತ್ತಿತ್ತು. ಹಾಗಾಗಿ

ದಸರಾರಜೆಯಲ್ಲಿ ವಿದ್ಯಾಭ್ಯಾಸಕ್ಕೂ ರಜೆ. 


ದಸರಾ ಎಂದಕೂಡಲೇ ಹಬ್ಬಕ್ಕೆ ಬೊಂಬೆಗಳನ್ನು ಜೋಡಿಸುವ ಖುಷಿ ನಮಗೆ. ಮನೆಯಲ್ಲಿದ್ದ

ಮೇಜು, ಬೆಂಚು, ಟೀಪಾಯಿ ಎಲ್ಲವನ್ನೂ ಜೋಡಿಸಿ ಎರಡು - ಮೂರು  ಮೆಟ್ಟಲುಗಳನ್ನಾಗಿ ಮಾಡಿ,

ಅದರಮೇಲೊಂದು ವಸ್ತ್ರಹಾಸಿ, ಮಧ್ಯದಲ್ಲಿ ಪಟ್ಟದ ಗೊಂಬೆಗಳನ್ನಿಟ್ಟು ಅದರ ಸುತ್ತ

ಮನೆಯಲ್ಲಿರುತ್ತಿದ್ದ ಎಲ್ಲ ಗೊಂಬೆಗಳು ಮತ್ತು ಆಟದಸಾಮಾನುಗಳನ್ನು ಓರಣವಾಗಿ

ಜೋಡಿಸಿಡುತ್ತಿದ್ದೆವು. ನಂತರ ಸರಸ್ವತೀಪೂಜೆಯದಿವಸ ಸರಸ್ವತಿಯ ವಿಗ್ರಹ, ಆಯುಧಪೂಜೆಗೆ

ಚಾಕು, ಕತ್ತರಿ, ಮಚ್ಚು, ಸ್ಕ್ರೂ ಡ್ರೈವರ್, ಎಲ್ಲಕ್ಕೂ ಜಾಗಮಾಡಿ ಇಡುವ, ಪೂಜಿಸುವ,

ಸಂಭ್ರಮವೇ ಸಂಭ್ರಮ.  ಹತ್ತುದಿನದ ಚಟುವಟಿಕೆಯ ನಂತರ ಅದೆಲ್ಲವನ್ನೂ ತೆಗೆದು

ಪೆಟ್ಟಿಗೆಗೆ ಸೇರಿಸಿ, ಶಾಲೆಯ ಚೀಲ ಹುಡುಕಿ, ಪುಸ್ತಕ ಜೋಡಿಸಿಕೊಂಡು, ಜೋಲುಮುಖದಿಂದ

ಮತ್ತೆ ಶಾಲೆಯಕಡೆ ನಡೆಯುವುದು.  


ನಾನು ಬೆಳೆದಂತೆ ಅನೇಕ ವರುಷಗಳ ಕಾಲ ಎಲ್ಲ ಮನೆಗಳಲ್ಲೂ ದಸರೆಯ ಸಂಭ್ರಮ

ಬಹಳವೇ ಇಳಿಮುಖವಾಗಿ ಹೋಗಿತ್ತು. ಗೊಂಬೆಗಳ ಪ್ರದರ್ಶನ ನಿಂತೇಹೋಗಿ,

ಪೂಜೆಗೋಸ್ಕರ ಎರಡು ಪಟ್ಟದ ಗೊಂಬೆಗಳು ಹಾಗೂ ಸರಸ್ವತಿಯ ವಿಗ್ರಹ ಮಾತ್ರ

ಒಂದು ಮೇಜಿನಮೇಲೆ ಕಾಣುತ್ತಿದ್ದವು. 


ಈಗ ಕೆಲವು ವರುಷಗಳಿಂದ ಮತ್ತೆ ದಸರಾಗೊಂಬೆಗಳನ್ನು ಕೊಳ್ಳುವುದು, ವಿಧ ವಿಧವಾಗಿ

ಅಲಂಕರಿಸಿ ಜೋಡಿಸಿ ಪ್ರದರ್ಶನ ಮಾಡುವುದು ಮುಂತಾದ ಚಟುವಟಿಕೆಗಳು ಕಾಣಬರುತ್ತಿವೆ.

ಈ ನಮ್ಮ ಸಂಪ್ರದಾಯ ಮತ್ತೆ ಉತ್ತೇಜಿತವಾಗಿ ಮನೆಮನೆಗಳಲ್ಲೂ ಕಾಣುತ್ತಿರುವುದು ನನಗೆ

ಬಹಳ ಸಂತೋಷದ ವಿಷಯ. ಅದರೊಂದಿಗೆ  ದಸರಾ ಹತ್ತಿರಬಂದಂತೆ ಅಂಗಡಿಗಳಲ್ಲಿ,

ರಸ್ತೆಪಕ್ಕಗಳಲ್ಲಿ, ಗೊಂಬೆಗಳ ಮಾರಾಟದ ಬಿರುಸು ಸಹ ಕಾಣುತ್ತಿದೆ. ಮೊನ್ನೆ ಹಾಗೆಯೇ



ಒಂದು ಅಂಗಡಿಯಲ್ಲಿ ಮಾರಾಟಕ್ಕಿದ್ದ ಗೊಂಬೆಗಳನ್ನು ಕಂಡಾಗ ಮನದಲ್ಲಿ ಮೂಡಿತು ಕೆಳಗಿನ ಪದ್ಯ.  



ಗೊಂಬೆಯಂಗಡಿಯಲ್ಲಿ ಕಂಡಿತು 

ದಸರಾಗೊಂಬೆ ಪ್ರದರ್ಶನ

ನೆಲದಿಂದ ಸೂರಿನವರೆಗೆ 

ಗೊಂಬೆಗಳ ಸೋಪಾನ 


ರಾಮ ಆಂಜನೇಯರ 

ಪ್ರೀತಿಪೂರ್ವಕ ಆಲಿಂಗನ 

ನೋಡುವನು ಶೇಷತಲ್ಪದಲೊರಗಿ

ಅನಂತಶಯನ


ಪಕ್ಕದಲ್ಲೆ ಬಾಲ ಕೃಷ್ಣನ 

ಕಾಳಿಂಗ ಮರ್ದನ 

ಈ ಪಕ್ಕ ಭಾರ್ಯೆ ನಡೆಸಿಹಳು  

ಮಹಿಷಾಸುರ ಮರ್ದನ


ಮೇಲೆ ಶ್ವೇತಧಾರಿಣಿ 

ಸರಸತಿಯ ವೀಣಾವಾದನ

ಆಲಿಸುತ್ತ ಮೈಮರೆತಿಹನು  

ರಾಮಬಂಟ ಹನುಮಾನ


ಕೆಳಗೆ ಸಾಲಿನಲ್ಲಿ ನಡೆದಿದೆ 

ಭೂಸುರರ ಭೂರಿಭೋಜನ

ಅದಕೆ ವೀಕ್ಷಕ ನಮ್ಮ 

ಗಣಪ, ಮೂಷಿಕ ವಾಹನ


ಅತ್ತ ನೋಡಿದರೆ, ಅವನಪ್ಪ 

ಶಿವ, ಧ್ಯಾನಮಗ್ನ 

ಇತ್ತ ಕಮಲನೇತ್ರನ ನಾಭಿಯಲಿ 

ಶಿವನ ಅಪ್ಪನ ಜನನ ! 


ಕೊಳುವವರ ಕಿಸೆಯೆಡೆಗೆ 

ಮಾರುವವರ ಗಮನ 

ನಾಡಹಬ್ಬದ ಸಂಭ್ರಮ 

ನಾಡಿಗೆ ನಿತ್ಯನೂತನ !  


ಶುಕ್ರವಾರ, ಜೂನ್ 24, 2022

ಹಲಸು ಹೆಚ್ಚುವಾಗ .........


 

ಹೊರಗಡೆ ಸಣ್ಣಗೆ ಮಳೆ ಸುರಿಯುತ್ತಲೇ ಇದೆ. ಒಮ್ಮೊಮ್ಮೆ ಜೋರಾಗುತ್ತದೆ, ಕೊಂಚವೇಕಾಲ

ನಿಲ್ಲುತ್ತದೆ.  ಇಂಥ ಮಳೆಯಲ್ಲಿ, ತಡೆಯಲಾಗದ ಹಲ್ಲುನೋವಾದರೆ ಮಾತ್ರ ಜನ ನಮ್ಮ

ಚಿಕಿತ್ಸಾಲಯಕ್ಕೆ ಬರುತ್ತಾರೆ. ಇದುವರೆಗೂ ಯಾರ ಸುಳಿವೂ ಇಲ್ಲ. ಹಾಗಾಗಿ ಕೆಲಸವಿಲ್ಲ.

ನನ್ನ ಸ್ನೇಹಿತ ಮರಾಠೆಯವರು ಮೊನ್ನೆ ತಂದುಕೊಟ್ಟಿದ್ದ ಹಲಸಿನಹಣ್ಣಿನ ಪರಿಮಳ ಬೀದಿಬಾಗಿಲಿಗೇ

ಬಡಿಯುತ್ತಿದೆ. ಹಣ್ಣು ಕೊಯ್ಯಲು ಸರಿಯಾದ ಸಮಯ. 


ಹಲಸಿನ ಹಣ್ಣಿನ ಪರಿಮಳ ಎಂದೆ. ಅದು ನನಗೆ ಪರಿಮಳ. ನಮ್ಮ ಭಾವನವರಿಗೆ ಅದು ದುರ್ವಾಸನೆ.

ಹಲಸಿನಹಣ್ಣು  ಜನರಲ್ಲಿ ವಿಪರೀತವಾದ  ಭಾವನೆಗಳನ್ನು ಮೂಡಿಸುತ್ತದೆ. ನಮ್ಮ ಮನೆಯಲ್ಲಿ

ಎಲ್ಲರಿಗೂ ಅದು ಪ್ರಿಯ. ನಾವು ತೊಳೆಗಳನ್ನು ರೆಫ್ರಿಜೆರೇಟರಿನಲ್ಲಿ ಇಟ್ಟು ಹಾಲಿಗೆ, ಮೊಸರಿಗೆ

ಎಲ್ಲಕ್ಕೂ ಹಲಸಿನ ವಾಸನೆ ಹಿಡಿಸಿ ತಿಂದು ಆನಂದಿಸುತ್ತೇವೆ. ನನ್ನ ಸ್ನೇಹಿತರು ಕೆಲವರು ಹಣ್ಣು

ತಿನ್ನುವವರಾದರೂ ವಾಸನೆ ಮತ್ತೆಲ್ಲೂ ತಾಗದಂತೆ ಎಚ್ಚರವಹಿಸಿ ಇಟ್ಟಿರುತ್ತಾರೆ. 


ನನಗೆ ಹಲಸು ಬಹಳ ಪ್ರಿಯವಾದರೂ, ಮಾರುಕಟ್ಟೆಯಲ್ಲಿ ಹಣ್ಣನ್ನು ನೋಡಿ ಅದರ ಗುಣವನ್ನು

ಗುರುತಿಸಿ ತರುವ ಚಾಕಚಕ್ಯತೆ ಇಲ್ಲ. ಅನೇಕಬಾರಿ ಗಾತ್ರ ನೋಡಿ ಹಣ್ಣುತಂದು ಬೇಸ್ತುಬಿದ್ದಿದ್ದೇನೆ.

ನನಗನ್ನಿಸುವಂತೆ ಹಣ್ಣು ಕತ್ತರಿಸದೆಯೇ ಒಳ್ಳೆಯಹಣ್ಣಿನ ಪತ್ತೆ ಹಚ್ಚಬೇಕಾದರೆ ಅದರ ಮರದ

ಗುರುತಿದ್ದರೆ ಮಾತ್ರ ಸಾಧ್ಯ. ಯಾರೋ ಹೇಳಿದರು ಸಿಪ್ಪೆ ಮೇಲಿನ ಮುಳ್ಳುಗಳ ಗಾತ್ರ ದೊಡ್ಡದಿದ್ದರೆ

ತೊಳೆ ದಪ್ಪವಿರುತ್ತದೆಂದು. ಮತ್ಯಾರೋ ಎಂದರು ಮುಳ್ಳು ಚೂಪಾಗಿದ್ದರೆ ಹಣ್ಣು ಸಿಹಿಯಿರುತ್ತದೆ

ಎಂದು. ಎಲ್ಲವೂ ಸುಳ್ಳು. ನನಗನ್ನಿಸುವಂತೆ, ಹಣ್ಣನ್ನು ನೋಡಿ ಅದರ ಗುಣವನ್ನು ಗುರುತಿಸುವುದು

ಸಾಧ್ಯವಿಲ್ಲ. ಹಲವಾರುಬಾರಿ ಬೇಸ್ತುಬಿದ್ದಮೇಲೆ ನಾನು ಮಾರುಕಟ್ಟೆಯಿಂದ ಹಣ್ಣು ತರುವುದನ್ನು

ನಿಲ್ಲಿಸಿದ್ದೇನೆ. ನನ್ನ ಪುಣ್ಯಕ್ಕೆ ತಮ್ಮ ತೋಟಗಳಲ್ಲಿ  ಹಲಸಿನ ಮರವಿರುವ ಸ್ನೇಹಿತರು ಕೆಲವರಿದ್ದಾರೆ.

ಅದರಿಂದಾಗಿ ವರ್ಷಕ್ಕೆ ಮೂರ್ನಾಲ್ಕು ಹಣ್ಣುಗಳಿಗೆ ಕೊರತೆಯಿಲ್ಲ. 


ನಾನು ಸಣ್ಣವನಿದ್ದಾಗ ನಮ್ಮ ತಂದೆಯವರು ವರ್ಷಕ್ಕೊಮ್ಮೆಯೋ ಎರಡೋಬಾರಿಯೋ ಮಾರುಕಟ್ಟೆಯಿಂದ

ಹಣ್ಣು ತರುತ್ತಿದ್ದರು. ವಿದ್ಯಾಭ್ಯಾಸಕ್ಕೆಂದು ತಮ್ಮ ಹಳ್ಳಿಯಿಂದ ಬಂದು ನಮ್ಮ ಮನೆಯಲ್ಲಿ ನಮ್ಮೊಡನೆ

ಇದ್ದ ಸೋದರಸಂಭಂದಿಗಳು ಯಾರಾದರೂ ಅದನ್ನು ಕೊಯ್ಯಲು ಕೂಡುತ್ತಿದ್ದರು. ಅವರ ಸುತ್ತಲೂ

ಮನೆಯವರೆಲ್ಲಾ ಕೂತು ಹರಟೆಹೊಡೆಯುತ್ತಾ ತೊಳೆಬಿಡಿಸಿ ಒಂದನ್ನು ತಟ್ಟೆಗೆಹಾಕಿದರೆ ಒಂದನ್ನು

ಬಾಯಿಗೆ ತುರುಕಿ ತಿನ್ನುತ್ತಾ ಖುಷಿಪಡುತ್ತಿದ್ದೆವು. ಹಣ್ಣು ಖಾಲಿಯಾದಮೇಲೆ ಮಾರನೇದಿನ ಅದರ

ಬೀಜಗಳನ್ನು ಬಚ್ಚಲುಮನೆಯ ನೀರೊಲೆಯಲ್ಲಿ ಸುಟ್ಟು ತಿನ್ನುವ ಸಂಭ್ರಮ ಮತ್ತು ಬೀಜದ ಹುಳಿಯ

ಊಟ ಬೇರೆ ಇರುತ್ತಿತ್ತು. ಆದ್ದರಿಂದ ಮತ್ತೆ ಮತ್ತೆ ಹಲಸಿನಹಣ್ಣು ತರುವಂತೆ ನಾನು ನಮ್ಮ

ತಂದೆಯವರಿಗೆ ದುಂಬಾಲು ಬೀಳುತ್ತಿದ್ದೆ. ಇಂದು ನಾಳೆ ಎಂದು ಸಬೂಬುಹೇಳಿ ಕೊನೆಗೆ,

“ನೀನು ಮಾರುಕಟ್ಟೆಗೆ ಬಂದರೆ ಹಣ್ಣು ಕೊಡಿಸುತ್ತೇನೆ ಆದರೆ ಅದನ್ನು ಮನೆಗೆ ಸಾಗಿಸುವ 

ಜವಾಬ್ದಾರಿ ನಿನ್ನದು” ಎನ್ನುತ್ತಿದ್ದರು. ಅಲ್ಲಿಗೆ ನನ್ನ ಕಾಟ ನಿಲ್ಲುತ್ತಿತ್ತು. 


ಹಲಸಿನಹಣ್ಣು ತರಲು ತಂದೆಯವರಿಗೇನೂ ಅಭ್ಯಂತರವಿರಲಿಲ್ಲ. ನಮ್ಮ ತಂದೆಯವರು

ಕೆಲಸಮಾಡುತ್ತಿದ್ದದ್ದು ಬೆಂಗಳೂರಿನ ಚಿಕ್ಕಪೇಟೆಯ ಅಂಗಡಿಯೊಂದರಲ್ಲಿ. ಮಾರುಕಟ್ಟೆಯ ಮೂಲಕ

ಹಾದುಬಂದು ಬಸ್ಸು ಹಿಡಿದು ಅವರು ಮನೆಗೆ ಬರುತ್ತಿದ್ದರು. ಅನೇಕ ಬಾರಿ ನಡೆದು ಬರುತ್ತಿದ್ದದ್ದೂ

ಉಂಟು.  ಹಲಸಿನಹಣ್ಣು ಹೊತ್ತುಬಂದರೆ ಬಸ್ಸಿನ ನೂಕುನುಗ್ಗಲಿನಲ್ಲಿ ಬರುವುದಾಗಲೀ ಅಥವಾ

ನಡೆದುಬರುವುದಾಗಲೀ ಆಗುತ್ತಿರಲಿಲ್ಲ. ಅವರು ಆಗ ರಿಕ್ಷಾ ಬಾಡಿಗೆಗೆ  ಹಿಡಿದು ಬರಬೇಕಾಗುತ್ತಿತ್ತು.

ಹತ್ತೋ ಹನ್ನೆರಡೋ ರೂಪಾಯಿ ಹಣ್ಣಿಗೆ ಕೊಟ್ಟು ಮತ್ತೆ ಮೂರು ರೂಪಾಯಿ ರಿಕ್ಷಾಗೆ ತೆರುವುದು

ಅವರಿಂದ ಸಾಧ್ಯವಾಗದಾಗುತ್ತಿತ್ತು. ಅದು ತೊಂದರೆ.  ಆದರೆ ಆಗ ನನಗೆ ಅದು ತಿಳಿದಿರಲಿಲ್ಲ.    


ನಮ್ಮ ಮನೆಯಲ್ಲಿ  ಹಲಸಿನಹಣ್ಣು ಹೆಚ್ಚುವ ಕೆಲಸ ಯಾವಾಗಲೂ ನನ್ನದೇ. ಮೇಜಿನಮೇಲೆ ಹರಡಲು

ದಿನ ಪತ್ರಿಕೆ, ಕೈಗೆ ಬಳಿಯಲು ಎಣ್ಣೆ, ಸರಿಯಾದ ಚಾಕು, ಪಾತ್ರೆಗಳನ್ನೆಲ್ಲಾ ಹೊಂದಿಸಿಕೊಂಡು

ತಯಾರಾಗುತ್ತೇನೆ. ಯೂ ಟ್ಯೂಬಿನಲ್ಲೋ ಮತ್ತೆಲ್ಲೋ ಯಾರು ಯಾರೋ ಹಲಸಿನಹಣ್ಣನ್ನು ಬಾಳೆಹಣ್ಣಿನಂತೆ

ಸುಲಿದು ತೋರಿಸುತ್ತಾರೆ. ನಾನು ಅವರಿಗೆ ತಲೆಬಾಗಿ ವಂದಿಸುತ್ತೇನೆ. ಅವರಂತೆ ಹಣ್ಣು ಸುಲಿಯಲು

ನನ್ನಿಂದ ಸಾಧ್ಯವಿಲ್ಲ. ನನ್ನ ಕೆಲಸ ಕಷ್ಟಸಾಧ್ಯವಾದದ್ದು. ಚಾಕುವಿಗೆ, ಕೈಗೆ ಎಲ್ಲಕಡೆ ಎಣ್ಣೆ ಬಳಿದುಕೊಂಡು,

ಜಾರುವ ಹಿಡಿಯನ್ನು ಆದಷ್ಟು ಘಟ್ಟಿಯಾಗಿ ಹಿಡಿದು, ನನ್ನ ಕೈಯನ್ನು ಕುಯ್ದುಕೊಳ್ಳದೇ ಹೆಗೋಮಾಡಿ

ಹಣ್ಣನ್ನು ನಾಲ್ಕುಭಾಗ ಮಾಡುತ್ತೇನೆ. ಎಷ್ಟೇ ಎಚ್ಚರವಹಿಸಿದರೂ ಕೈಗೆ, ಮೈಗೆ, ಮೇಜಿಗೆ, ನೆಲಕ್ಕೆ

ಅಂಟಿಕೊಳ್ಳಲು ಪ್ರಯತ್ನಿಸುವ, ಸೋರುವ ಅಂಟನ್ನು ಹದ್ದುಬಸ್ತಿನಲ್ಲಿರಿಸಲು ಸಾಹಸ ಪಡುತ್ತಾ ಮಧ್ಯದ

ದಿಂಡನ್ನು ಕತ್ತರಿಸಿ ತೆಗೆದು, ಸಹಾಯಕ್ಕೆ ಬಂದವರಿದ್ದರೆ ಅವರಿಗೆ ತೊಳೆಗಳನ್ನು ಬಿಡಿಸಲು ಅನುವು

ಮಾಡಿಕೊಡುತ್ತೇನೆ. ಈ ದಿನ ನನ್ನ ಸಹಾಯಕ್ಕೆ ನಮ್ಮ ಮನೆಕೆಲಸದಾಕೆ ಬಂದಳು. ಹಣ್ಣು ಹೆಚ್ಚಿ ಮುಗಿಸಿ

ತೆಗೆದಿಟ್ಟಿದ್ದೇನೆ. ಏಕಾದಶಿ ಆದ್ದರಿಂದ ಹಣ್ಣುತಿನ್ನುವಂತಿಲ್ಲ. ತೊಳೆಗಳನ್ನು ಹಾಗೆಯೇ ತುಂಬಿ ಇರಿಸಿದ್ದೇನೆ.

ಇದುವರೆಗೂ ವಾಸನೆ ಮಾತ್ರ ಸೇವಿಸುತ್ತಾ ಕುಳಿತಿದ್ದೇನೆ. ಆದರೆ ಏಕಾದಶಿ ಗೆಲ್ಲುತ್ತದೋ, ಹಲಸಿನ

ಹಣ್ಣು ಗೆಲ್ಲುತ್ತದೋ ಹೇಳಲಾರೆ. 


ಪ್ರತಿಬಾರಿ ಹಲಸಿನ ಹಣ್ಣು ಹೆಚ್ಚಲು ತೊಡಗಿದಾಗಲೆಲ್ಲಾ ಮನದಲ್ಲಿ ಮೂಡುವ ಭಾವನೆಗಳಿವು.

ಇಂದು ಬರಹದ ರೂಪಕ್ಕೆ ಬಂದವಷ್ಟೇ !











ಗುರುವಾರ, ಮೇ 19, 2022

ಕಾಸೆಂದರೆ ಕ್ಯಾಷು !

 



ತರಕಾರಿ, ಕೊತ್ತಂಬರಿಸೊಪ್ಪು, ಹಾಲು ತರಬೇಕೆಂದು ಅಪ್ಪಣೆಯಾಯಿತು. ಮಳೆಯಲ್ಲಿ ಹೊರಗೆ

ಕಾಲಿಡಲು ಬೇಜಾರು.  ಆದರೂ ಜಿಟಿಜಿಟಿಮಳೆಯಲ್ಲೇ ಹೊರಟೆ. ಒಂದು ಕೈಲಿ ಛತ್ರಿ, ಒಂದು ಕೈಲಿ ಚೀಲ.

ತರಕಾರಿ, ಹಾಲು ಕೊಂಡೆ. ತರಕಾರಿಯವನ ಬಳಿ ಕೊತ್ತಂಬರಿಸೊಪ್ಪು ಇರಲಿಲ್ಲ. ಸ್ವಲ್ಪ ಮುಂದೆ ರಸ್ತೆ

ಪಕ್ಕದಲ್ಲಿ ಸೊಪ್ಪುಮಾರುತ್ತಿದ್ದಾಕೆಯ ಬಳಿ ಕೊತ್ತಂಬರಿ ಕೇಳಿದೆ. ಒಂದು ಕಟ್ಟಿಗೆ ನಲವತ್ತು ರೂಪಾಯಿ.

ನನಗೆ ಸ್ವಲ್ಪವೇ ಕೊತ್ತಂಬರಿ ಬೇಕಿದ್ದರಿಂದ ಹತ್ತು ರೂಪಾಯಿನಷ್ಟು ಮಾತ್ರ ಕೊಡಲು ಸಾಧ್ಯವೇ ಎಂದು

ಕೇಳಿದೆ. ಆಕೆ ಗೊಣಗುತ್ತ ಕಟ್ಟು ಬಿಡಿಸಿ ಒಂದಿಷ್ಟು ಕೊತ್ತಂಬರಿ ಸೊಪ್ಪು ಕೈಯಲ್ಲಿರಿಸಿದಳು. ಛತ್ರಿ, ಚೀಲ,

ಮಾಸ್ಕು ಇತ್ಯಾದಿ ಹೊಂದಿಸಿಕೊಳ್ಳುವ ಗಡಿಬಿಡಿಯಲ್ಲಿ ಪರ್ಸು ತೆಗೆದುಕೊಳ್ಳುವುದನ್ನು ಮರೆತಿದ್ದೆ. ನಗದು

ಹಣವಿಲ್ಲವೆಂದು ತಿಳಿಸಿದ್ದರಿಂದ ಸೊಪ್ಪಿನಾಕೆ ತನ್ನ ಸೊಪ್ಪಿನ ಕಟ್ಟುಗಳ ಮಧ್ಯದಿಂದ ಪೇ ಫೋನ್ ಕೋಡಿನ

ಚಿತ್ರ ಹುಡುಕಿ ತೆಗೆದು ಕೊಟ್ಟಳು. “ಇದ್ಕೇ ಕಟ್ಟಿ” ಎಂದಳು. 


ಛತ್ರಿ, ಚೀಲಗಳನ್ನು ಹಿಡಿದಿದ್ದ ಕೈಗಳಲ್ಲೇ ಮೊಬೈಲಿಗೂ ಅವಕಾಶ ಕಲ್ಪಿಸಿ ಗೂಗಲ್ ಪೇ ಮಾಡಲೆಂದು

ಪರದಾಡುತ್ತಿದ್ದೆ. ಆ ಸಮಯದಲ್ಲಿ, ಕೋಲೆ ಬಸವನನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದ ಹೆಣ್ಣುಮಗಳೊಬ್ಬಳು

ನನ್ನ ಹಿಂದೆ ಬಸವನನ್ನು ಪಾರ್ಕಿಂಗ್ ಮಾಡಿ ಹಣ ಬೇಡಿದಳು. ನನ್ನ ಬಳಿ ನಗದು ಏನೂ ಇರಲಿಲ್ಲವಾದ್ದರಿಂದ

ಇಲ್ಲವೆಂದು ತಲೆಯಾಡಿಸಿದೆ.  ಆದರೆ ಆಕೆ ಮುಂದೆ ಹೋಗದೆ ಅಲ್ಲಿಯೇ ನಿಂತು ಮತ್ತೆ ಮತ್ತೆ ಬೇಡಹತ್ತಿದಳು.

ಅಗಾಧವಾದ ಬಸವ ನನ್ನ ಹಿಂದೆ ನಿಂತು ಕತ್ತು ಅಲ್ಲಾಡಿಸುತ್ತಿದ್ದ. ಮೊದಲೇ ಚೀಲ, ಛತ್ರಿ, ಮೊಬೈಲುಗಳನ್ನು

ಸಂಭಾಳಿಸುವುದಕ್ಕೆ ಪರದಾಡುತ್ತಿದ್ದ ನಾನು ಈಗ ಬಸವನ ಕೊಂಬನ್ನೂ ಗಮನದಲ್ಲಿಡಬೇಕಾಯಿತು. 


ಆಗ ಸೊಪ್ಪುಮಾರುವಾಕೆ ನನ್ನ ಸಹಾಯಕ್ಕೆ ಬಂದಲು. ಮುಂದೆಹೋಗದೆ ನನ್ನನ್ನು ಕಾಡುತ್ತಿದ್ದ

ಕೋಲೆಬಸವನ ಒಡತಿಯನ್ನುದ್ದೇಶಿಸಿ “ಮುಂದಕ್ಕೋಗಮ್ಮಾ, ಈ ಸ್ವಾಮೇರ ಹತ್ರ ಕಾಸೇ ಇಲ್ಲ. ನೋಡು,

ಕೊತ್ತಂಬ್ರಿ ಸೊಪ್ಗೆ ಹತ್ರೂಪಾಯಿ ಇಲ್ಲಾಂತ ನನಗೇ ಫೋನ್ ಪೇ ಮಾಡ್ತಾ ಅವ್ರೆ, ನಿನಗೇನು ಕೊಡ್ತಾರೆ?” ಎಂದಳು !! 


ಕೈಲಿ ಕ್ಯಾಷಿದ್ದರೆ ಅದು ಕಾಸು 

ಮೊಬೈಲಿನ ಥೈಲಿಯೊಳು 

ವೀಸ ಹಣ ಇದ್ದೊಡೇನು?

ಕಾಸಿಲ್ಲದೆ ಮಾನ ಲಾಸೇ - ಸರ್ವಜ್ಞ !











ಭಾನುವಾರ, ಮೇ 8, 2022

‘ಕಾಂಕ್ರೀಟ್ ಕಾಡಿನ ಮಾನವಹೃದಯಗಳು’ - ಮತ್ತೊಂದು ಕಂತು.

ಸ್ವಚ್ಛವಾದ ಪರಿಸರದಲ್ಲಿ ಜೀವಿಸಬೇಕೆಂಬುದು ನನಗೆ ಈ ಜನ್ಮದಲ್ಲಿ ಎಟುಕದ ಕನಸು. ಈ ನನ್ನ ನಗರದ

ಬಹುತೇಕ ಸಹವಾಸಿಗಳಿಗೆ ಸ್ವಚ್ಛತೆಯ ಪ್ರಜ್ಞೆಯೇ ಇಲ್ಲದಿರುವುದು ಕಂಡು ನನಗೆ ಬಹಳ ಖೇದವಾಗುತ್ತದೆ.

ಆದರೆ ಆ ಪ್ರಜ್ಞೆಯಿಲ್ಲದ ಅವರು ತಮ್ಮ ಕೊಳಚೆಯಲ್ಲೇ ತಾವು ಸಂತೋಷವಾಗಿದ್ದಾರೆ ! ಶುಚಿತ್ವದ

ಪ್ರಜ್ಞೆಯಿರುವುದೇ ನನ್ನ ಅಸಂತೋಷಕ್ಕೆ ಕಾರಣವಾಯಿತಲ್ಲವೇ ! 


ತನ್ನ ಅನೇಕ ಜನ್ಮಗಳ ಬಗ್ಗೆ ತಿಳುವಳಿಕೆಯಿದ್ದ ಒಬ್ಬ ಗುರು ಇದ್ದನಂತೆ. ಅದೇನೋ ಕಾರಣದಿಂದ

ಮರುಜನ್ಮದಲ್ಲಿ ತಾನು ಒಂದು ಹಂದಿಯಾಗಿ ಜನಿಸಿ ಬದುಕುವನಿದ್ದೇನೆಂದು ಅವನಿಗೆ ತಿಳಿದಿತ್ತಂತೆ.

ಆ ಅರಿವಿನಿಂದ ಅವನಿಗೆ ತನ್ನ ಮುಂದಿನ ಜನ್ಮ ಬಹಳ ಅಸಹ್ಯವೆನಿಸಿ ಆದಷ್ಟುಬೇಗ ಅದರಿಂದ

ಮುಕ್ತಿಹೊಂದಲು ಅವನು ನಿರ್ಧರಿಸಿದನಂತೆ. ತಾನು ತೀರಿಕೊಂಡ ಕೆಲಕಾಲದ ನಂತರ ಇಂತಲ್ಲಿ

ತಾನು ಹಂದಿಯಾಗಿರುತ್ತೇನೆಂದೂ, ತನ್ನನ್ನು ಹುಡುಕಿ ತಾನು ಹಂದಿಯರೂಪದಲ್ಲಿ ಕಂಡ ತಕ್ಷಣ

ತನ್ನನ್ನು ಕೊಲ್ಲಬೇಕೆಂದೂ ತನ್ನ ಶಿಷ್ಯರಿಗೆ ಅವನು ನಿರ್ದೇಶಿಸಿದನಂತೆ. 


ಅವನ ಮರಣದ ನಂತರ ಅವನ ಶಿಷ್ಯರು ಅವನ ನಿರ್ದೇಶನದಂತೆ ವರಾಹರೂಪಿ ಗುರುವನ್ನು

ಗುರುತಿಸಿದರಂತೆ. ಆ ಹಂದಿ ತನ್ನ ಸಂಸಾರದೊಂದಿಗೆ ಒಂದು ಕೊಳಚೆಯ ಕೂಪದಲ್ಲಿ

ಓಲಾಡಿಕೊಂಡಿತ್ತಂತೆ. ಅದನ್ನು ತಕ್ಷಣ ಕೊಲ್ಲಲು ಶಿಷ್ಯರು ತಯಾರಾಗುತ್ತಿದ್ದಂತೆ ಹಂದಿ

“ಕೊಲ್ಲಬೇಡಿ, ಕೊಲ್ಲಬೇಡಿ” ಎಂದು ಕೇಳಿಕೊಂಡಿತಂತೆ. “ನಾನು ನನ್ನ ಹಿಂದಿನ ಗುರುವಿನ ಜನ್ಮಕ್ಕಿಂತ

ಈ ಹಂದಿಯ ಜನ್ಮದಲ್ಲಿ ಬಹಳವೇ ಸಂತೋಷದಿಂದಿದ್ದೇನೆ. ನನ್ನನ್ನು ಹೀಗೆಯೇ ಇರಲುಬಿಡಿ” ಎಂದು

ಹಂದಿರೂಪಿ ಗುರು, ಶಿಷ್ಯರಿಗೆ ಸೂಚನೆ ಕೊಟ್ಟನಂತೆ! ಆ ಕೋರಿಕೆಯನ್ನು ಮನ್ನಿಸಿ, ಹಂದಿಯನ್ನು

ಕೊಳಚೆಯಲ್ಲಿ ಬಿಟ್ಟು ಕೈಮುಗಿದು, ಶಿಷ್ಯರು ವಾಪಸಾದರಂತೆ. 


ಬೀಡಾ ಅಂಗಡಿಯಮುಂದೆ, ಬೋಂಡಾ ಅಂಗಡಿಯಮುಂದೆ, ಅಥವಾ ಯಾವುದೋ ದರ್ಶಿನಿಯಮುಂದೆ

ನಿಂತೋ, ಪಕ್ಕದಲ್ಲೇ ಮೆಟ್ಟಲಿನ ಮೇಲೋ, ಫುಟ್ ಪಾತಿನಮೇಲೋ, ಮತ್ತೆಲ್ಲೋ ಸಿಕ್ಕಿದೆಡೆ ಕೂತೋ,

ಸ್ನೇಹಿತರೊಂದಿಗೆ ಮಾತುಕತೆಯಾಡುತ್ತಾ, ಬೋಂಡಾ, ಪಾನಿಪುರಿ ತಿಂದು ಖಾಲಿ ಪೊಟ್ಟಣ ಅಲ್ಲೇ

ಬದಿಗೆಸೆದು, ತಂಬಾಕು, ಬೀಡಾ ಜಗಿದು ಕೂತಲ್ಲೇ ಸುತ್ತ ಮುತ್ತ ಉಗುಳುತ್ತಾ ಆನಂದವಾಗಿ

ಕಾಲಕಳೆಯುವ ಜನರನ್ನು ಕಂಡಾಗ ನನಗೆ ಈ ಕಥೆ ನೆನಪಾಗುತ್ತದೆ. ಅಂಥ ಸುಖದಿಂದ

ವಂಚಿತನಾದ ನನ್ನ ಬಗ್ಗೆ ನನಗೇ ವ್ಯಥೆಯಾಗುತ್ತದೆ ! 


ಏನೋ ವಿಷಯದ ಬಗೆಗೆ ಚಿಕ್ಕದಾದೊಂದು ಬರಹ ಬರೆಯ ಹೊರಟು ಮತ್ತೇನೋ ಕಥೆ ಹೇಳಲು

ತೊಡಗಿದೆ! ಉಪಕಥೆ ಪಕ್ಕಕ್ಕಿರಲಿ. ಸಿಕ್ಕಸಿಕ್ಕಲ್ಲಿ  ತಾಜ್ಯಬಿಸಾಡುವ, ಎಗ್ಗಿಲ್ಲದೆ ರಸ್ತೆಯಲ್ಲಿ, ಅಲ್ಲಿ

ಇಲ್ಲಿ ಉಗುಳುವ, ಗಲೀಜು ಮಾಡುವ ಜನರನ್ನು ಕಂಡರೆ ನನ್ನ ಮನಸ್ಸು ಚಿಟಿಚಿಟಿಗುಟ್ಟುತ್ತದೆ.

ನನ್ನ ಮನೆಯ ಪಕ್ಕದಲ್ಲೇ ಇರುವ ಅಂಗಡಿಯವರು ಕಾಫಿ, ಚಹಾ, ಕಬ್ಬಿನಹಾಲು ಇತ್ಯಾದಿ ಖಾದ್ಯ

ಪದಾರ್ಥ ಮಾರುತ್ತಾರೆ. ಜತೆಗೇ ಕಡಲೆಬೀಜ, ಬಿಸ್ಕತ್ತು, ಚಿಪ್ಸ್ ಮುಂತಾದುವು ಸಹಾ. ಗಿರಾಕಿಗಳು

ಉಪಯೋಗಿಸಿ ಬಿಸುಡುವ ತಾಜ್ಯವಸ್ತುಗಳಿಗೆಂದು ಅಂಗಡಿಯವರು ಒಂದು ಡಬ್ಬವನ್ನಿಟ್ಟಿದ್ದಾರೆ.

ಆದರೆ ಆ ಗಿರಾಕಿಗಳು ಅಲ್ಲಿ ನಿಂತು ಮಾತನಾಡುತ್ತ, ತಿಂದು, ಕುಡಿದು ಮಾಡಿ, ಕಸದ ಡಬ್ಬವನ್ನು

ನಿರ್ಲಕ್ಷಿಸಿ, ರಸ್ತೆಯಮೇಲೆ ಕಾಗದದ ಲೋಟ, ಚಿಪ್ಸ್ ನ ಪ್ಯಾಕೆಟ್ಗಳನ್ನು ಎಸೆದು ಹೋಗುತ್ತಾರೆ.

ಹಾಗಾಗಿ ನಮ್ಮ ರಸ್ತೆಯ ಮೇಲೆ ಸದಾ ಒಂದಷ್ಟು ಖಾಲಿ ಪ್ಲಾಸ್ಟಿಕ್ ಕವರಗಳು, ಪೇಪರ

ಕಪ್ಪುಗಳು ನಲಿದಾಡುತ್ತಿರುತ್ತವೆ. 


ಅವರಿವರು ಬಿಸಾಕಿದ ಕಾಗದ, ಪ್ಲಾಸ್ಟಿಕ್ ವಸ್ತುಗಳನ್ನು ರಸ್ತೆಯಿಂದ ತೆಗೆದು ಒಂದೆಡೆ ಸೇರಿಸಿ ಕಸ

ಎತ್ತುವರು ಬಂದಾಗ ಕೊಡುವ ಹುಚ್ಚುಕೆಲಸವನ್ನು ನಾನು ಆಗಾಗ ಮಾಡುತ್ತೇನೆ. ಜನರು ಎಸೆಯುವ

ಕಸದೊಂದಿಗೆ ಮನೆಯ ಮುಂದಿನ ಮರದಿಂದ ಉದುರಿದ ತರಗೆಲೆ, ಕಡ್ಡಿಗಳೂ ಸೇರುತ್ತವೆ. ಪೂರ್ತಿ

ರಸ್ತೆಗುಡಿಸುವ ಹುಚ್ಚುತನಕ್ಕೆ ನಾನು ಹೋಗಿಲ್ಲವಾದರೂ ಪ್ರತಿಮುಂಜಾನೆ ನನ್ನ ಮನೆಯ

ಮುಂಭಾಗದಲ್ಲಿ ರಸ್ತೆಬದಿಯಲ್ಲಿ ಶೇಖರವಾಗಿರುವ ತರಗೆಲೆ ಇತ್ಯಾದಿಗಳನ್ನು ಮಾತ್ರ ಗುಡಿಸಿ

ಒಂದೆಡೆ ಗುಡ್ಡೆ ಹಾಕುತ್ತೇನೆ. ಮುನಿಸಿಪಾಲಿಟಿಯ ಕಸಒಯ್ಯುವವರು ಮನಬಂದಾಗ 

ಒಮ್ಮೊಮ್ಮೆ ಅದನ್ನು ಕೊಂಡೊಯ್ಯುತ್ತಾರೆ. 


ನಿನ್ನೆ ಬೆಳಗ್ಗೆ ಎಂದಿನಂತೆಯೇ ರಸ್ತೆಬದಿಯ ಕಸಗುಡಿಸುತ್ತಿದ್ದೆ. ನಾನಿನ್ನೂ ಗುಡಿಸುತ್ತಿರುವಂತೆಯೇ

ಕೈಯಲ್ಲಿ ಲೋಟಹಿಡಿದು ಕಾಫಿ ಕುಡಿಯುತ್ತಾ, ಮೊಬೈಲಿನಲ್ಲಿ ಮಾತಾಡುತ್ತಾ ಬಂದ ಒಬ್ಬ ವ್ಯಕ್ತಿ,

ಕಾಫಿ ಕುಡಿದು ಮುಗಿಸಿ, ಲೋಟವನ್ನು ನಾನು ಆಗತಾನೆ ಗುಡಿಸಿದ್ದ ಜಾಗದಲ್ಲಿ ಒಗೆದ. 

“ಅಲ್ರೀ, ನಿಮ್ಮೆದುರಿಗೇ ಕಸಗುಡಿಸುತ್ತಿದ್ದೇನೆ.  ಖಾಲಿ ಲೋಟವನ್ನು ಕಸದ ಡಬ್ಬದಲ್ಲಿ ಹಾಕುವುದುಬಿಟ್ಟು

ನಾನು ಈಗತಾನೇ ಗುಡಿಸಿದೆಡೆ ಎಸೆಯುತ್ತೀರಲ್ಲಾ” ಎಂದೆ. 


“ರಸ್ತೆ ಏನು ನಿಮ್ಮ ಅಪ್ಪನದೇನ್ರೀ” ಎಂದೋ, “ಹೇಗೂ ಗುಡಿಸುತ್ತಿದ್ದೀರಲ್ಲಾ ಅದನ್ನೂ ಗುಡಿಸಿ” ಎಂದೋ,

ಉದ್ಧಟತನದ ಉತ್ತರವನ್ನು ಪ್ರತೀಕ್ಷಿಸುತ್ತಿದ್ದೆ. 

“ತಪ್ಪಾಯ್ತು ಸಾರ, ಕ್ಷಮಿಸಿ” ಎಂಬ ಉತ್ತರಕೇಳಿ ಅವಾಕ್ಕಾದೆ. ಆ ವ್ಯಕ್ತಿ ತಾನು ಬಿಸುಟಿದ್ದ ಲೋಟ

ತೆಗೆದು ಸಮೀಪದಲ್ಲಿದ್ದ ಕಸದರಾಶಿಯಲ್ಲಿ ಹಾಕಿ ಮುನ್ನಡೆದ. 

ಅದೇ ರಾತ್ರಿ ಊಟವಾದನಂತರ ಹಾಗೆಯೇ ಮನೆಯಮುಂದೆ ಅತ್ತಿತ್ತ ಠಳಾಯಿಸುತ್ತಿದ್ದೆ. ಅಂಗಡಿ

ಮುಚ್ಚುವ ಕಾರ್ಯದಲ್ಲಿದ್ದ ಅಂಗಡಿಯಾತ ಹೊರಬಂದು ನನ್ನನ್ನುದ್ದೇಶಿಸಿ ಕೈಮುಗಿದು “ಬೆಳಗ್ಗೆ  ನೀವು

ರಸ್ತೆ ಗುಡಿಸಿದ್ದನ್ನು ನೋಡಿದೆ ಸಾರ, ನಮ್ಮ ಅಂಗಡಿ ಸುತ್ತಮುತ್ತ ಕ್ಲೀನಾಗಿದೆಯಲ್ಲವೇ? ನಮ್ಮಿಂದಾದಷ್ಟು

ಪ್ರಯತ್ನ ನಾವು ಮಾಡುತ್ತೇವೆ” ಎಂದ ! ಇಂಥ ಕಾರ್ಯ, ವಿಷಯಗಳ ಬಗೆಗೆ ಯಾರೂ

ಲಕ್ಷ್ಯನೀಡುವುದಿಲ್ಲವೆಂದು ಭಾವಿಸಿದ್ದ ನನಗೆ ಆಶ್ಚರ್ಯವಾಯಿತು. ನನ್ನನ್ನು ತಲೆಕೆಟ್ಟವನೆಂದು

ಭಾವಿಸದೇ ನನ್ನ ಸಣ್ಣ ಕೆಲಸಕ್ಕೆ ಕೊಂಚ ಬೆಲೆಕಟ್ಟುವವರೂ ಇರುವುದು ಕಂಡು ಸಂತೋಷವಾಯಿತು.

ಜತೆಗೆ, ಹೃದಯವಂತಿಕೆಯಿಲ್ಲವೆಂದು ನಾನು ಭಾವಿಸಿದ್ದ  ಕಾಂಕ್ರೀಟ್ ಕಾಡಿನಲ್ಲಿ  ಹೃದಯದ ಬಡಿತ

ಕೇಳಿ ಸಮಾಧಾನವಾಯಿತು.  

 


ಮಂಗಳವಾರ, ಮಾರ್ಚ್ 15, 2022

ಕಾಂಕ್ರೀಟ್ ಕಾಡಿನಲ್ಲಿ ಮಾನವ ಹೃದಯಗಳು !




ಮೊನ್ನೆ ಸುಮಾರು ಹತ್ತು ದಿನಗಳನ್ನು ನನ್ನ ಹುಟ್ಟೂರು ಬೆಂಗಳೂರಿನಲ್ಲಿ ಕಳೆದೆ. ನಾನು ಹುಟ್ಟಿದ

ಮತ್ತು ನನ್ನ ಜೀವಿತದ ಮೊದಲ ಮೂವತ್ತು ದಶಕಗಳನ್ನು ಕಳೆದ ನಗರ ಈಗ ಕೆಲವು ವರುಷಗಳಿಂದ

ನನಗೆ ಅಪರಿಚಿತವೆನಿಸುತ್ತದೆ. ಅಲ್ಲಿಯ ಸ್ಥಳಾಕೃತಿಯಲ್ಲಿ ಆಗಿರುವ ಬದಲಾವಣೆಗಳು, ರಸ್ತೆ,

ಕಟ್ಟಡಗಳು, ಜೀವನ, ರೀತಿ ನೀತಿಗಳು, ಹೊಸದೆನಿಸುತ್ತದೆ. ಇಂಚಿಂಚನ್ನು ಆವರಿಸಿಕೊಂಡಿರುವ

ಕಟ್ಟಡಗಳು, ಉಳಿದ ಸ್ಥಳವನ್ನೆಲ್ಲಾ ತುಂಬಿಕೊಂಡಿರುವ ವಾಹನಗಳು, ರಭಸದ ಸಂಚಾರ, ಅಷ್ಟೇ

ರಭಸದ ಜೀವನ, ಅಕ್ಕಪಕ್ಕದವರ ಪರಿಚಯವಿಲ್ಲದ, ಯಾರದೂ ಎಗ್ಗಿಲ್ಲದ ಜೀವನ ಶೈಲಿ ಬೇಸರ

ತರುತ್ತದೆ. ವರುಷದಲ್ಲಿ ಎರಡು ಮೂರುಬಾರಿಯಾದರೂ ಬೆಂಗಳೂರಿನ ದರ್ಶನವಾಗುತ್ತಾದರೂ

ಆ ಕಾಂಕ್ರೀಟು ಕಾಡಿನ ವಿಹಂಗಮ ದೃಶ್ಯ ಕಂಡಿರಲಿಲ್ಲ. ಮೊನ್ನೆ ನನ್ನ ಸಂಭಂದಿಕರೊಬ್ಬರು ವಾಸವಿರುವ

ಕಟ್ಟಡದ ಇಪ್ಪತ್ತೈದನೆಯ ಮಜಲಿನಿಂದ ಕಂಡ ಬೆಂಗಳೂರಿನ ದೃಶ್ಯ ಖೇದಕರವಾಗಿತ್ತು. ಆದರೂ ಈ

ಯಾಂತ್ರಿಕ ಜೀವನದ ಗಡಿಬಿಡಿಯ ಮಧ್ಯದಲ್ಲಿಯೇ ಸಂಭವಿಸಿದ ಕೆಲವು ಘಟನೆಗಳು,

ಅಪರಿಚಿತರೊಡನೆಯ ಸಂವಹನ, ಸಂಭಾಷಣೆಗಳು ಕಾಂಕ್ರೀಟು ಕಾಡಿನ ಅಂತರಾಳದೊಳಗೆ  ಇನ್ನೂ

ಬಡಿದುಕೊಳ್ಳುತ್ತಿರುವ ಮಾನವ ಹೃದಯವನ್ನು, ನಗರವಾಸಿಗಳ ಪರಸ್ಪರ ಹೃದಯ ಸಂಭಂದವನ್ನು

ತೋರಿಸಿದವು. 


ಮೇಲೆ ಹೇಳಿದ ಸಂಭಂದಿಕರ ಮನೆಗೆ ಮುಂಜಾನೆ ಒಂಭತ್ತರ ಹೊತ್ತಿಗೆ ತಲುಪುವುದೆಂದು

ನಿರ್ಧಾರವಾಗಿತ್ತು. ಅಂತೆಯೇ ನಾನು ನನ್ನ ಪತ್ನಿಯೊಡನೆ  ಸುಮಾರು ಎಂಟೂವರೆಗೆ ಮನೆಯಿಂದ

ಹೊರಬಿದ್ದೆ. ಆಟೋರಿಕ್ಷಾ ಹಿಡಿಯಲು ಆಚೀಚೆ ನೋಡುತ್ತಾ ಕೊಂಚದೂರ ನಡೆದಿದ್ದಾಗ ನನ್ನ ಪತ್ನಿಯ ಲಕ್ಷ್ಯ

ನಾನು ಧರಿಸಿದ್ದ ಅಂಗಿಯ ಮೇಲೆ ಬಿತ್ತು. “ಇದೇನು ಬಟ್ಟೆ ಹಾಕಿಕೊಂಡಿದೀರಿ? ಮಾಸಲಾಗಿಹೋಗಿದೆ.

ಇಷ್ಟೊಂದು ಸುಕ್ಕು. ಜತೆಗೆ ಮಸಿ ಕಲೆಗಳು ಬೇರೆ. ರಾತ್ರಿ ಇದನ್ನು ಹಾಕಿಕೊಂಡೇ ಮಲಗಿದ್ದಿರೇನೋ.

ಸರಿಯಾದ ಬಟ್ಟೆ ಹಾಕಿಕೊಳ್ಳಬಾರದೇ ? ಬಂದಲ್ಲಿ ಹೋದಲ್ಲಿ ಮಾನ ತೆಗೆಯುತ್ತೀರಿ” ಆಕೆಯ

ಮಾತಿನ ಪ್ರವಾಹ ಇನ್ನೂ ಮುಂದುವರೆಯುತ್ತಿತ್ತೇನೋ ? ನಮ್ಮ ಹಿಂದಿನಿಂದ ಬಂದ ಒಂದು ಧ್ವನಿ

ಆ ಪ್ರವಾಹಕ್ಕೆ ತಡೆಹಾಕಿತು  “ಬಿಡೀಮ್ಮಾ, ಯಾಕೆ ಬೇಜಾರು ಮಾಡ್ಕೋತೀರಿ? ಗಂಡಸರಿಗೇನು ?

ಏನು ಹಾಕ್ಕೊಂಡಿದ್ರೂ ನಡೆಯತ್ತೆ. ಈ ಬಟ್ಟೆ ಬರೆ ಒಡವೆ ಅಲಂಕಾರ ಎಲ್ಲಾ ನಮಗೇ ಅಲ್ವ

ಬಂದಿರೋದು ?”   ಹಿಂದೆ ತಿರುಗಿದೆವು. ನಮ್ಮ ಹಿಂದೆ ನಡೆದು ಬರುತ್ತಿದ್ದ ಯಾರೋ ಒಬ್ಬ

ಮನೆಕೆಲಸದಾಕೆ ನಮ್ಮ ಮಾತು ಕೇಳಿಸಿಕೊಂಡು, ನಮ್ಮ ಸಂಭಾಷಣೆಯಲ್ಲಿ ಪಾಲ್ಗೊಂಡು,

ನನ್ನ ಪರ ವಹಿಸಿ ನನ್ನಾಕೆಯ ಬಾಯಿ ಮುಚ್ಚಿಸಿದ್ದಳು !  


ಒಂದು ಸಂಜೆ ಹಾಗೆಯೇ ನಡೆದಾಡಿಕೊಂಡು ಬರಲೆಂದು ಹೊರಟು ಮನೆಯಿಂದ ದೂರಬಂದಿದ್ದೆ.

ಕತ್ತಲಾಗುತ್ತಿತ್ತು. ಮೋಡ ಕಟ್ಟಿಕೊಂಡು ಮಳೆಬರುವಂತೆ ಕಂಡಿತು. ಕೊಂಚ ಬೇಗ ಮನೆ ತಲುಪಿದರೆ

ವಾಸಿ ಎನಿಸಿ, ರಸ್ತೆಯಲ್ಲಿ ಕಂಡ ಆಟೋರಿಕ್ಷಾ ನಿಲ್ಲಿಸಿ ಹತ್ತಿದೆ. ಎಲ್ಲಿಗೆ ಹೋಗಬೇಕೆಂದು ಕೇಳಿ, ಮೀಟರ

ಚಾಲೂ ಮಾಡಿದ ಆಟೋ ಚಾಲಕ, ನನ್ನ ಚಡ್ಡಿ ಟೀ  ಷರಟು, ಬೂಟು  ಕಂಡು  “ವಾಕಿಂಗ್ ಹೊರಟಿದ್ರಾ

ಸಾರ” ಎಂದ.   “ಹೌದು ಸ್ವಾಮೀ”.    “ಮತ್ತೆ ಗಾಡಿ ಹತ್ಬುಟ್ರೀ?”   “ಏನೋ ಕೊಂಚ ಅರ್ಜೆಂಟು ಕೆಲಸ

ನೆನಪಾಯ್ತು ನೋಡಿ, ಬೇಗ ಮನೇಗೆ ಹೋಗಬೇಕಾಯ್ತು.”  “ಸರಿ ಬಿಡಿ. ದಿನಾ ವಾಕಿಂಗ್ ಮಾಡ್ತೀರಾ

ಸಾರ?”   “ಹೌದು ಸ್ವಾಮೀ”.   “ಅದಕ್ಕೇ ನೋಡಿ, ಫಿಟ್ಟಾಗಿದೀರಾ”.    “ಏನೋ ಸ್ವಾಮೀ ದೇವರ ದಯೆ.

ಇದುವರೆಗೂ ಚೆನ್ನಾಗಿದೀನಿ.”   “ಹಂಗೇ ಇರ್ಬೇಕು ಬಿಡಿ. ಒಳ್ಳೇದು. ನಿಮ್ಮಂತೋರನ್ನ ನೋಡ್ದ್ರೆ ನಮಗೂ

ವಾಕಿಂಗು ಗೀಕಿಂಗು ಮಾಡ್ಬೇಕು ಅನ್ನಿಸ್ತದೆ. ಆದ್ರೆ ನೋಡಿ, ಆಗೋದೇ ಇಲ್ಲ. ಒಳ್ಳೇದೆಲ್ಲಾ ಹಂಗೇ ಸ್ವಾಮೀ.

ಶುರುಮಾಡೋದು ಬಾಳ ಕಷ್ಟ. ಅದೇ ಕೆಟ್ಟದ್ದೇನಾದ್ರೂ ಮನಸ್ಗೆ ಬರ್ಲಿ ನೋಡಿ, ತಕ್ಷಣ ಸುರು ಆಗೋಗತೈತೆ”   

ಹೀಗೆ ಪ್ರಾರಂಭವಾದ ಮಾತುಕತೆಯು ಉಭಯ ಕುಶಲೋಪರಿ, ನೌಕರಿ, ಸಂಸಾರ, ಮಕ್ಕಳು ಮರಿಗಳ

ವಿದ್ಯಾಭ್ಯಾಸ, ಮದುವೆ ಮುಂತಾದ ಹಾದಿಗಳಲ್ಲಿ ಹರಿದಾಡುವ ಹೊತ್ತಿಗೆ ನಾನು ಇಳಿಯುವ ಸ್ಥಳ ಬಂತು.

“ನಾನು ಸುಮ್ನೆ ಇರಲ್ಲ ನೋಡಿ, ಎಲ್ರನ್ನೂ ಮಾತಾಡಿಸ್ ಬಿಡ್ತೀನಿ. ಕೆಲವ್ರು ಮಾತಾಡ್ತಾರೆ. ಕೆಲವ್ರು

ಬೇಜಾರಾಗ್ತಾರೆ. ನಿಮ್ಮಂತೋರು ಸಿಕ್ಕಿದ್ರೆ ಮನಸ್ಗೆ ಏನೋ ಸಂತೋಷ.  ನಮಸ್ಕಾರ, ಬರ್ತೀನಿ” ಎಂದು

ಆಟೋ ಚಾಲಕ ಬೀಳ್ಕೊಂಡ.  ಆತನೊಡನೆ ನಡೆಸಿದ ಸಂಭಾಷಣೆ ನನಗೂ ಮನಸ್ಸಿಗೆ ಹಿತವೆನ್ನಿಸಿತು. 



ಬೇಕರೀಗೆ ತಿಂಡಿ ತೊಗೊಳೋಕೆ ಹೋಗಿದ್ದೆ. ಎರಡು ಖಾರ ಬನ್ನು, ಒಂದು ಪ್ಯಾಕೆಟ್ ಖಾರಸೇವು ಕೊಂಡೆ.

ಬೇಕರಿಯ ಅಯ್ಯಂಗಾರಿ ಹಬ್ಬಕ್ಕಾಗಿ ಸಿಹಿಬೂಂದಿ ಮಾಡಿ ಇಟ್ಟಿದ್ದ. 

“ಸ್ವೀಟ್ ಬೇಡ್ವಾ ಸಾರ? ಹಬ್ಬಕ್ಕೆ ಬರೀ ಖಾರ ತೊಗೊಂಡಿದ್ದೀರಿ”. 

“ಬೇಡಾ ಸ್ವಾಮೀ ಇಷ್ಟು ಸಾಕು” 

“ಹಂಗಂದ್ರೆ ಹೆಂಗೆ ಸಾರ್ ? ಬೂಂದಿ ಏನ್ ದಿನಾ ಮಾಡ್ತೀವಾ? ಹಬ್ಬಕ್ಕೆ ಅಂತ ಮಾಡಿದ್ದು. ಫ್ರೆಶ್ ಆಗಿದೆ. 

ತೊಗೋಳಿ ಕಾಲ್ ಕೆಜಿ” 

“ಬೇಡಾ ಸ್ವಾಮೀ. ಈಚೆಗೆ ಹುಡುಗರು ಸಿಹಿ ತಿನ್ನೋದೇ ಇಲ್ಲ.”


ನಮ್ಮ ಮಾತುಕತೆ ಕೇಳುತ್ತಿದ್ದ ಮತ್ತೊಬ್ಬ ಗಿರಾಕಿ ಮಧ್ಯೆ ಬಾಯಿ ಹಾಕಿದರು


“ಅವರಿಗೇನು ಬೇಕೋ ಅದನ್ನ ಕೊಡ್ರೀ. ನೀವು ಯಾವಾಗ್ಲೂ ಬಂದೋರಿಗೆ ನಾಮ ಹಾಕಿ ನಿಮ್ಮ ವ್ಯಾಪಾರ

ಗಿಟ್ಟಿಸ್ಕೊಳ್ಳೋಕೆ ನೋಡ್ತಿರ್ತೀರ”

“ಅಷ್ಟೇ ಅಲ್ವಾ ಸ್ವಾಮೀ ವ್ಯವಹಾರ ? ಎಲ್ರೂ ಒಬ್ಬರಿಗೊಬ್ಬರು ನಾಮ ಹಾಕಕ್ಕೇ ನೋಡ್ತಿರ್ತಾರೆ. ನನಗೆ

ನಾಮ ಹಾಕೋರೂ ಇರ್ತಾರೆ. ಅದಕ್ಕೇ ನೋಡಿ, ಬೇರೆಯವರಿಗೆ ಯಾಕೆ ಕೆಲಸ ಅಂತ ನನ್ನ ನಾಮ

ನಾನೇ ಹಾಕಿಕೊಂಡು ಬಿಡ್ತೀನಿ” ಬೇಕರಿಯ ಅಯ್ಯಂಗಾರಿ ತನ್ನ ಹಣೆಯ ಮೇಲೆ ಢಾಳಾಗಿ ಕಾಣುತ್ತಿದ್ದ

ನಾಮವನ್ನು ಬೊಟ್ಟು ಮಾಡಿ ತೋರಿಸಿದ ! 


ಮೊನ್ನೆ ಗೋವಾದ ಪಣಜಿಯಲ್ಲಿ ಒಂದು ಚಿತ್ರ ಪ್ರದರ್ಶನವನ್ನು ನೋಡುತ್ತಿದ್ದೆ.  ಗೋವಾದ ಸಣ್ಣ

ಹಳ್ಳಿಯೊಂದರಲ್ಲಿ ಅನೇಕ ದಶಕಗಳ ಕಾಲ ವಾಸವಾಗಿದ್ದು,  ಸಾವಿರದೊಂಭೈನೂರ ಎಂಭತ್ತರ

ಸಮಯದಲ್ಲಿ ತನ್ನ ದೇಶಕ್ಕೆ ವಾಪಸಾದ ವಿದೇಶಿ ಕಲಾಕಾರನೊಬ್ಬನ ಚಿತ್ರಗಳ ಪ್ರದರ್ಶನ. ತಾನು

ವಾಪಸಾಗುವ ಮುನ್ನ ಆತ ಹೇಳಿದ ಮಾತು ಹೀಗೆ “ಇನ್ನು ಇಲ್ಲಿ ವಾಸಿಸಲು ಸಾಧ್ಯವಾಗದು. ಎಲ್ಲೆಡೆ

ಅಭಿವೃದ್ಧಿ ಮತ್ತು ಹಣದ ತಾಂಡವ. ಹಳ್ಳಿಗರಿಗೆ ಪರಸ್ಪರ ಮಾತುಕತೆಯಾಡಲು, ಹರಟಲು,

ಸಮಯವಿಲ್ಲ. ಅವರು ನಗುವುದನ್ನೂ ಮರೆತುಬಿಟ್ಟಿದ್ದಾರೆ ಎನಿಸುತ್ತದೆ”. ನನ್ನ ಹುಟ್ಟೂರಿನಬಗ್ಗೆ ನನಗೆ

ಅಂಥಹುದೇ ಅಭಿಪ್ರಾಯ ಮೂಡುತ್ತಿತ್ತು. ಹಾಗಾಗಿಯೇ ಮೇಲೆ ಬರೆದ ಸಂಭಾಷಣೆಗಳ ಅನುಭವ

ಮನಸ್ಸಿನ ಮೇಲೆ ತಂಗಾಳಿ ಬೀಸಿದಂತೆನಿಸಿತು !