ಶುಕ್ರವಾರ, ಜೂನ್ 24, 2022

ಹಲಸು ಹೆಚ್ಚುವಾಗ .........


 

ಹೊರಗಡೆ ಸಣ್ಣಗೆ ಮಳೆ ಸುರಿಯುತ್ತಲೇ ಇದೆ. ಒಮ್ಮೊಮ್ಮೆ ಜೋರಾಗುತ್ತದೆ, ಕೊಂಚವೇಕಾಲ

ನಿಲ್ಲುತ್ತದೆ.  ಇಂಥ ಮಳೆಯಲ್ಲಿ, ತಡೆಯಲಾಗದ ಹಲ್ಲುನೋವಾದರೆ ಮಾತ್ರ ಜನ ನಮ್ಮ

ಚಿಕಿತ್ಸಾಲಯಕ್ಕೆ ಬರುತ್ತಾರೆ. ಇದುವರೆಗೂ ಯಾರ ಸುಳಿವೂ ಇಲ್ಲ. ಹಾಗಾಗಿ ಕೆಲಸವಿಲ್ಲ.

ನನ್ನ ಸ್ನೇಹಿತ ಮರಾಠೆಯವರು ಮೊನ್ನೆ ತಂದುಕೊಟ್ಟಿದ್ದ ಹಲಸಿನಹಣ್ಣಿನ ಪರಿಮಳ ಬೀದಿಬಾಗಿಲಿಗೇ

ಬಡಿಯುತ್ತಿದೆ. ಹಣ್ಣು ಕೊಯ್ಯಲು ಸರಿಯಾದ ಸಮಯ. 


ಹಲಸಿನ ಹಣ್ಣಿನ ಪರಿಮಳ ಎಂದೆ. ಅದು ನನಗೆ ಪರಿಮಳ. ನಮ್ಮ ಭಾವನವರಿಗೆ ಅದು ದುರ್ವಾಸನೆ.

ಹಲಸಿನಹಣ್ಣು  ಜನರಲ್ಲಿ ವಿಪರೀತವಾದ  ಭಾವನೆಗಳನ್ನು ಮೂಡಿಸುತ್ತದೆ. ನಮ್ಮ ಮನೆಯಲ್ಲಿ

ಎಲ್ಲರಿಗೂ ಅದು ಪ್ರಿಯ. ನಾವು ತೊಳೆಗಳನ್ನು ರೆಫ್ರಿಜೆರೇಟರಿನಲ್ಲಿ ಇಟ್ಟು ಹಾಲಿಗೆ, ಮೊಸರಿಗೆ

ಎಲ್ಲಕ್ಕೂ ಹಲಸಿನ ವಾಸನೆ ಹಿಡಿಸಿ ತಿಂದು ಆನಂದಿಸುತ್ತೇವೆ. ನನ್ನ ಸ್ನೇಹಿತರು ಕೆಲವರು ಹಣ್ಣು

ತಿನ್ನುವವರಾದರೂ ವಾಸನೆ ಮತ್ತೆಲ್ಲೂ ತಾಗದಂತೆ ಎಚ್ಚರವಹಿಸಿ ಇಟ್ಟಿರುತ್ತಾರೆ. 


ನನಗೆ ಹಲಸು ಬಹಳ ಪ್ರಿಯವಾದರೂ, ಮಾರುಕಟ್ಟೆಯಲ್ಲಿ ಹಣ್ಣನ್ನು ನೋಡಿ ಅದರ ಗುಣವನ್ನು

ಗುರುತಿಸಿ ತರುವ ಚಾಕಚಕ್ಯತೆ ಇಲ್ಲ. ಅನೇಕಬಾರಿ ಗಾತ್ರ ನೋಡಿ ಹಣ್ಣುತಂದು ಬೇಸ್ತುಬಿದ್ದಿದ್ದೇನೆ.

ನನಗನ್ನಿಸುವಂತೆ ಹಣ್ಣು ಕತ್ತರಿಸದೆಯೇ ಒಳ್ಳೆಯಹಣ್ಣಿನ ಪತ್ತೆ ಹಚ್ಚಬೇಕಾದರೆ ಅದರ ಮರದ

ಗುರುತಿದ್ದರೆ ಮಾತ್ರ ಸಾಧ್ಯ. ಯಾರೋ ಹೇಳಿದರು ಸಿಪ್ಪೆ ಮೇಲಿನ ಮುಳ್ಳುಗಳ ಗಾತ್ರ ದೊಡ್ಡದಿದ್ದರೆ

ತೊಳೆ ದಪ್ಪವಿರುತ್ತದೆಂದು. ಮತ್ಯಾರೋ ಎಂದರು ಮುಳ್ಳು ಚೂಪಾಗಿದ್ದರೆ ಹಣ್ಣು ಸಿಹಿಯಿರುತ್ತದೆ

ಎಂದು. ಎಲ್ಲವೂ ಸುಳ್ಳು. ನನಗನ್ನಿಸುವಂತೆ, ಹಣ್ಣನ್ನು ನೋಡಿ ಅದರ ಗುಣವನ್ನು ಗುರುತಿಸುವುದು

ಸಾಧ್ಯವಿಲ್ಲ. ಹಲವಾರುಬಾರಿ ಬೇಸ್ತುಬಿದ್ದಮೇಲೆ ನಾನು ಮಾರುಕಟ್ಟೆಯಿಂದ ಹಣ್ಣು ತರುವುದನ್ನು

ನಿಲ್ಲಿಸಿದ್ದೇನೆ. ನನ್ನ ಪುಣ್ಯಕ್ಕೆ ತಮ್ಮ ತೋಟಗಳಲ್ಲಿ  ಹಲಸಿನ ಮರವಿರುವ ಸ್ನೇಹಿತರು ಕೆಲವರಿದ್ದಾರೆ.

ಅದರಿಂದಾಗಿ ವರ್ಷಕ್ಕೆ ಮೂರ್ನಾಲ್ಕು ಹಣ್ಣುಗಳಿಗೆ ಕೊರತೆಯಿಲ್ಲ. 


ನಾನು ಸಣ್ಣವನಿದ್ದಾಗ ನಮ್ಮ ತಂದೆಯವರು ವರ್ಷಕ್ಕೊಮ್ಮೆಯೋ ಎರಡೋಬಾರಿಯೋ ಮಾರುಕಟ್ಟೆಯಿಂದ

ಹಣ್ಣು ತರುತ್ತಿದ್ದರು. ವಿದ್ಯಾಭ್ಯಾಸಕ್ಕೆಂದು ತಮ್ಮ ಹಳ್ಳಿಯಿಂದ ಬಂದು ನಮ್ಮ ಮನೆಯಲ್ಲಿ ನಮ್ಮೊಡನೆ

ಇದ್ದ ಸೋದರಸಂಭಂದಿಗಳು ಯಾರಾದರೂ ಅದನ್ನು ಕೊಯ್ಯಲು ಕೂಡುತ್ತಿದ್ದರು. ಅವರ ಸುತ್ತಲೂ

ಮನೆಯವರೆಲ್ಲಾ ಕೂತು ಹರಟೆಹೊಡೆಯುತ್ತಾ ತೊಳೆಬಿಡಿಸಿ ಒಂದನ್ನು ತಟ್ಟೆಗೆಹಾಕಿದರೆ ಒಂದನ್ನು

ಬಾಯಿಗೆ ತುರುಕಿ ತಿನ್ನುತ್ತಾ ಖುಷಿಪಡುತ್ತಿದ್ದೆವು. ಹಣ್ಣು ಖಾಲಿಯಾದಮೇಲೆ ಮಾರನೇದಿನ ಅದರ

ಬೀಜಗಳನ್ನು ಬಚ್ಚಲುಮನೆಯ ನೀರೊಲೆಯಲ್ಲಿ ಸುಟ್ಟು ತಿನ್ನುವ ಸಂಭ್ರಮ ಮತ್ತು ಬೀಜದ ಹುಳಿಯ

ಊಟ ಬೇರೆ ಇರುತ್ತಿತ್ತು. ಆದ್ದರಿಂದ ಮತ್ತೆ ಮತ್ತೆ ಹಲಸಿನಹಣ್ಣು ತರುವಂತೆ ನಾನು ನಮ್ಮ

ತಂದೆಯವರಿಗೆ ದುಂಬಾಲು ಬೀಳುತ್ತಿದ್ದೆ. ಇಂದು ನಾಳೆ ಎಂದು ಸಬೂಬುಹೇಳಿ ಕೊನೆಗೆ,

“ನೀನು ಮಾರುಕಟ್ಟೆಗೆ ಬಂದರೆ ಹಣ್ಣು ಕೊಡಿಸುತ್ತೇನೆ ಆದರೆ ಅದನ್ನು ಮನೆಗೆ ಸಾಗಿಸುವ 

ಜವಾಬ್ದಾರಿ ನಿನ್ನದು” ಎನ್ನುತ್ತಿದ್ದರು. ಅಲ್ಲಿಗೆ ನನ್ನ ಕಾಟ ನಿಲ್ಲುತ್ತಿತ್ತು. 


ಹಲಸಿನಹಣ್ಣು ತರಲು ತಂದೆಯವರಿಗೇನೂ ಅಭ್ಯಂತರವಿರಲಿಲ್ಲ. ನಮ್ಮ ತಂದೆಯವರು

ಕೆಲಸಮಾಡುತ್ತಿದ್ದದ್ದು ಬೆಂಗಳೂರಿನ ಚಿಕ್ಕಪೇಟೆಯ ಅಂಗಡಿಯೊಂದರಲ್ಲಿ. ಮಾರುಕಟ್ಟೆಯ ಮೂಲಕ

ಹಾದುಬಂದು ಬಸ್ಸು ಹಿಡಿದು ಅವರು ಮನೆಗೆ ಬರುತ್ತಿದ್ದರು. ಅನೇಕ ಬಾರಿ ನಡೆದು ಬರುತ್ತಿದ್ದದ್ದೂ

ಉಂಟು.  ಹಲಸಿನಹಣ್ಣು ಹೊತ್ತುಬಂದರೆ ಬಸ್ಸಿನ ನೂಕುನುಗ್ಗಲಿನಲ್ಲಿ ಬರುವುದಾಗಲೀ ಅಥವಾ

ನಡೆದುಬರುವುದಾಗಲೀ ಆಗುತ್ತಿರಲಿಲ್ಲ. ಅವರು ಆಗ ರಿಕ್ಷಾ ಬಾಡಿಗೆಗೆ  ಹಿಡಿದು ಬರಬೇಕಾಗುತ್ತಿತ್ತು.

ಹತ್ತೋ ಹನ್ನೆರಡೋ ರೂಪಾಯಿ ಹಣ್ಣಿಗೆ ಕೊಟ್ಟು ಮತ್ತೆ ಮೂರು ರೂಪಾಯಿ ರಿಕ್ಷಾಗೆ ತೆರುವುದು

ಅವರಿಂದ ಸಾಧ್ಯವಾಗದಾಗುತ್ತಿತ್ತು. ಅದು ತೊಂದರೆ.  ಆದರೆ ಆಗ ನನಗೆ ಅದು ತಿಳಿದಿರಲಿಲ್ಲ.    


ನಮ್ಮ ಮನೆಯಲ್ಲಿ  ಹಲಸಿನಹಣ್ಣು ಹೆಚ್ಚುವ ಕೆಲಸ ಯಾವಾಗಲೂ ನನ್ನದೇ. ಮೇಜಿನಮೇಲೆ ಹರಡಲು

ದಿನ ಪತ್ರಿಕೆ, ಕೈಗೆ ಬಳಿಯಲು ಎಣ್ಣೆ, ಸರಿಯಾದ ಚಾಕು, ಪಾತ್ರೆಗಳನ್ನೆಲ್ಲಾ ಹೊಂದಿಸಿಕೊಂಡು

ತಯಾರಾಗುತ್ತೇನೆ. ಯೂ ಟ್ಯೂಬಿನಲ್ಲೋ ಮತ್ತೆಲ್ಲೋ ಯಾರು ಯಾರೋ ಹಲಸಿನಹಣ್ಣನ್ನು ಬಾಳೆಹಣ್ಣಿನಂತೆ

ಸುಲಿದು ತೋರಿಸುತ್ತಾರೆ. ನಾನು ಅವರಿಗೆ ತಲೆಬಾಗಿ ವಂದಿಸುತ್ತೇನೆ. ಅವರಂತೆ ಹಣ್ಣು ಸುಲಿಯಲು

ನನ್ನಿಂದ ಸಾಧ್ಯವಿಲ್ಲ. ನನ್ನ ಕೆಲಸ ಕಷ್ಟಸಾಧ್ಯವಾದದ್ದು. ಚಾಕುವಿಗೆ, ಕೈಗೆ ಎಲ್ಲಕಡೆ ಎಣ್ಣೆ ಬಳಿದುಕೊಂಡು,

ಜಾರುವ ಹಿಡಿಯನ್ನು ಆದಷ್ಟು ಘಟ್ಟಿಯಾಗಿ ಹಿಡಿದು, ನನ್ನ ಕೈಯನ್ನು ಕುಯ್ದುಕೊಳ್ಳದೇ ಹೆಗೋಮಾಡಿ

ಹಣ್ಣನ್ನು ನಾಲ್ಕುಭಾಗ ಮಾಡುತ್ತೇನೆ. ಎಷ್ಟೇ ಎಚ್ಚರವಹಿಸಿದರೂ ಕೈಗೆ, ಮೈಗೆ, ಮೇಜಿಗೆ, ನೆಲಕ್ಕೆ

ಅಂಟಿಕೊಳ್ಳಲು ಪ್ರಯತ್ನಿಸುವ, ಸೋರುವ ಅಂಟನ್ನು ಹದ್ದುಬಸ್ತಿನಲ್ಲಿರಿಸಲು ಸಾಹಸ ಪಡುತ್ತಾ ಮಧ್ಯದ

ದಿಂಡನ್ನು ಕತ್ತರಿಸಿ ತೆಗೆದು, ಸಹಾಯಕ್ಕೆ ಬಂದವರಿದ್ದರೆ ಅವರಿಗೆ ತೊಳೆಗಳನ್ನು ಬಿಡಿಸಲು ಅನುವು

ಮಾಡಿಕೊಡುತ್ತೇನೆ. ಈ ದಿನ ನನ್ನ ಸಹಾಯಕ್ಕೆ ನಮ್ಮ ಮನೆಕೆಲಸದಾಕೆ ಬಂದಳು. ಹಣ್ಣು ಹೆಚ್ಚಿ ಮುಗಿಸಿ

ತೆಗೆದಿಟ್ಟಿದ್ದೇನೆ. ಏಕಾದಶಿ ಆದ್ದರಿಂದ ಹಣ್ಣುತಿನ್ನುವಂತಿಲ್ಲ. ತೊಳೆಗಳನ್ನು ಹಾಗೆಯೇ ತುಂಬಿ ಇರಿಸಿದ್ದೇನೆ.

ಇದುವರೆಗೂ ವಾಸನೆ ಮಾತ್ರ ಸೇವಿಸುತ್ತಾ ಕುಳಿತಿದ್ದೇನೆ. ಆದರೆ ಏಕಾದಶಿ ಗೆಲ್ಲುತ್ತದೋ, ಹಲಸಿನ

ಹಣ್ಣು ಗೆಲ್ಲುತ್ತದೋ ಹೇಳಲಾರೆ. 


ಪ್ರತಿಬಾರಿ ಹಲಸಿನ ಹಣ್ಣು ಹೆಚ್ಚಲು ತೊಡಗಿದಾಗಲೆಲ್ಲಾ ಮನದಲ್ಲಿ ಮೂಡುವ ಭಾವನೆಗಳಿವು.

ಇಂದು ಬರಹದ ರೂಪಕ್ಕೆ ಬಂದವಷ್ಟೇ !











ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ