ತರಕಾರಿ, ಕೊತ್ತಂಬರಿಸೊಪ್ಪು, ಹಾಲು ತರಬೇಕೆಂದು ಅಪ್ಪಣೆಯಾಯಿತು. ಮಳೆಯಲ್ಲಿ ಹೊರಗೆ
ಕಾಲಿಡಲು ಬೇಜಾರು. ಆದರೂ ಜಿಟಿಜಿಟಿಮಳೆಯಲ್ಲೇ ಹೊರಟೆ. ಒಂದು ಕೈಲಿ ಛತ್ರಿ, ಒಂದು ಕೈಲಿ ಚೀಲ.
ತರಕಾರಿ, ಹಾಲು ಕೊಂಡೆ. ತರಕಾರಿಯವನ ಬಳಿ ಕೊತ್ತಂಬರಿಸೊಪ್ಪು ಇರಲಿಲ್ಲ. ಸ್ವಲ್ಪ ಮುಂದೆ ರಸ್ತೆ
ಪಕ್ಕದಲ್ಲಿ ಸೊಪ್ಪುಮಾರುತ್ತಿದ್ದಾಕೆಯ ಬಳಿ ಕೊತ್ತಂಬರಿ ಕೇಳಿದೆ. ಒಂದು ಕಟ್ಟಿಗೆ ನಲವತ್ತು ರೂಪಾಯಿ.
ನನಗೆ ಸ್ವಲ್ಪವೇ ಕೊತ್ತಂಬರಿ ಬೇಕಿದ್ದರಿಂದ ಹತ್ತು ರೂಪಾಯಿನಷ್ಟು ಮಾತ್ರ ಕೊಡಲು ಸಾಧ್ಯವೇ ಎಂದು
ಕೇಳಿದೆ. ಆಕೆ ಗೊಣಗುತ್ತ ಕಟ್ಟು ಬಿಡಿಸಿ ಒಂದಿಷ್ಟು ಕೊತ್ತಂಬರಿ ಸೊಪ್ಪು ಕೈಯಲ್ಲಿರಿಸಿದಳು. ಛತ್ರಿ, ಚೀಲ,
ಮಾಸ್ಕು ಇತ್ಯಾದಿ ಹೊಂದಿಸಿಕೊಳ್ಳುವ ಗಡಿಬಿಡಿಯಲ್ಲಿ ಪರ್ಸು ತೆಗೆದುಕೊಳ್ಳುವುದನ್ನು ಮರೆತಿದ್ದೆ. ನಗದು
ಹಣವಿಲ್ಲವೆಂದು ತಿಳಿಸಿದ್ದರಿಂದ ಸೊಪ್ಪಿನಾಕೆ ತನ್ನ ಸೊಪ್ಪಿನ ಕಟ್ಟುಗಳ ಮಧ್ಯದಿಂದ ಪೇ ಫೋನ್ ಕೋಡಿನ
ಚಿತ್ರ ಹುಡುಕಿ ತೆಗೆದು ಕೊಟ್ಟಳು. “ಇದ್ಕೇ ಕಟ್ಟಿ” ಎಂದಳು.
ಛತ್ರಿ, ಚೀಲಗಳನ್ನು ಹಿಡಿದಿದ್ದ ಕೈಗಳಲ್ಲೇ ಮೊಬೈಲಿಗೂ ಅವಕಾಶ ಕಲ್ಪಿಸಿ ಗೂಗಲ್ ಪೇ ಮಾಡಲೆಂದು
ಪರದಾಡುತ್ತಿದ್ದೆ. ಆ ಸಮಯದಲ್ಲಿ, ಕೋಲೆ ಬಸವನನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದ ಹೆಣ್ಣುಮಗಳೊಬ್ಬಳು
ನನ್ನ ಹಿಂದೆ ಬಸವನನ್ನು ಪಾರ್ಕಿಂಗ್ ಮಾಡಿ ಹಣ ಬೇಡಿದಳು. ನನ್ನ ಬಳಿ ನಗದು ಏನೂ ಇರಲಿಲ್ಲವಾದ್ದರಿಂದ
ಇಲ್ಲವೆಂದು ತಲೆಯಾಡಿಸಿದೆ. ಆದರೆ ಆಕೆ ಮುಂದೆ ಹೋಗದೆ ಅಲ್ಲಿಯೇ ನಿಂತು ಮತ್ತೆ ಮತ್ತೆ ಬೇಡಹತ್ತಿದಳು.
ಅಗಾಧವಾದ ಬಸವ ನನ್ನ ಹಿಂದೆ ನಿಂತು ಕತ್ತು ಅಲ್ಲಾಡಿಸುತ್ತಿದ್ದ. ಮೊದಲೇ ಚೀಲ, ಛತ್ರಿ, ಮೊಬೈಲುಗಳನ್ನು
ಸಂಭಾಳಿಸುವುದಕ್ಕೆ ಪರದಾಡುತ್ತಿದ್ದ ನಾನು ಈಗ ಬಸವನ ಕೊಂಬನ್ನೂ ಗಮನದಲ್ಲಿಡಬೇಕಾಯಿತು.
ಆಗ ಸೊಪ್ಪುಮಾರುವಾಕೆ ನನ್ನ ಸಹಾಯಕ್ಕೆ ಬಂದಲು. ಮುಂದೆಹೋಗದೆ ನನ್ನನ್ನು ಕಾಡುತ್ತಿದ್ದ
ಕೋಲೆಬಸವನ ಒಡತಿಯನ್ನುದ್ದೇಶಿಸಿ “ಮುಂದಕ್ಕೋಗಮ್ಮಾ, ಈ ಸ್ವಾಮೇರ ಹತ್ರ ಕಾಸೇ ಇಲ್ಲ. ನೋಡು,
ಕೊತ್ತಂಬ್ರಿ ಸೊಪ್ಗೆ ಹತ್ರೂಪಾಯಿ ಇಲ್ಲಾಂತ ನನಗೇ ಫೋನ್ ಪೇ ಮಾಡ್ತಾ ಅವ್ರೆ, ನಿನಗೇನು ಕೊಡ್ತಾರೆ?” ಎಂದಳು !!
ಕೈಲಿ ಕ್ಯಾಷಿದ್ದರೆ ಅದು ಕಾಸು
ಮೊಬೈಲಿನ ಥೈಲಿಯೊಳು
ವೀಸ ಹಣ ಇದ್ದೊಡೇನು?
ಕಾಸಿಲ್ಲದೆ ಮಾನ ಲಾಸೇ - ಸರ್ವಜ್ಞ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ