ಶುಕ್ರವಾರ, ಡಿಸೆಂಬರ್ 18, 2020

ಜೀವನ ಧರ್ಮ ಯೋಗ

 


ನಾನು ಪ್ರೈಮರಿ ಎರಡನೇ ತರಗತಿಯಲ್ಲಿದ್ದಾಗ ಭಗವದ್ಗೀತೆ ಎಂಬ ಹೆಸರು ಕೇಳಿದ್ದು. ನಮ್ಮ ಶಾಲೆಯಲ್ಲಿ

ಪ್ರತಿ ಶುಕ್ರವಾರ ಕೊನೆಯ ತರಗತಿಯ ಅವಧಿಯಲ್ಲಿ ಭಗವದ್ಗೀತಾ ಪಠಣ. ಎರಡನೇ ಅಧ್ಯಾಯದ

“ಸ್ಥಿತಪ್ರಗ್ನ್ಯಸ್ಯ ಕಾ ಭಾಷಾ” ದಿಂದ ಪ್ರಾರಂಭವಾಗಿ ಕೊನೆಯವರೆಗೆ. ನಮ್ಮಿಂದ ಎಂಟಾಣೆಯೋ ಒಂದು

ರುಪಾಯಿಯೋ ತಗೆದುಕೊಂಡು ಅಂಗೈಯಲ್ಲಿ ಹಿಡಿಸುವ ಒಂದು ಕೈಹೊತ್ತಿಗೆಯನ್ನು ಎಲ್ಲರಿಗೂ ಕೊಟ್ಟಿದ್ದರು.

ನಾನು ಮೂರನೆಯ ತರಗತಿಗೆ ಬರುವಹೊತ್ತಿಗೆ ಅಷ್ಟೂ ಶ್ಲೋಕಗಳು ಬಾಯಿಪಾಠವಾಗಿದ್ದವು. ಐದನೇ

ತರಗತಿಯಲ್ಲಿದ್ದಾಗ ಅದನ್ನು ಸ್ಫರ್ಧೆಯಲ್ಲಿ ಒಪ್ಪಿಸಿ ಒಂದು ಸ್ಟೀಲಿನ ಚಮಚವನ್ನು ತೃತೀಯ ಬಹುಮಾನವಾಗಿ

ಪಡೆದಿದ್ದೆ. ಇಂದಿಗೂ ಶ್ಲೋಕಗಳು ನೆನಪಿನಲ್ಲಿವೆ. ಆ ಶ್ಲೋಕಗಳ  ಅರ್ಥ ತಿಳಿದುಕೊಳ್ಳಬೇಕೆನಿಸಿದ್ದು ಶಾಲೆಯಿಂದ

ಹೊರಬಿದ್ದ ಮೂವತ್ತು ವರುಷಗಳ ನಂತರ. ತಿಳಿದಿದೆಯೆಂದು ಈಗಲೂ ಹೇಳಲಾರೆ.  


ಭಗವದ್ಗೀತೆಯ ಕೀರ್ತಿ ಬಹು ದೊಡ್ಡದು. ‘ಯದಾ  ಯದಾ  ಹಿ ಧರ್ಮಸ್ಯ’, ‘ಕರ್ಮಣ್ಯೇವಾಧಿಕಾರಸ್ತೇ’,

‘ನಹಿ ಜ್ಞಾನೇನ ಸದೃಶಂ’ ಮುಂತಾದ ಸಾಲುಗಳು ಎಲ್ಲರ ನಾಲಗೆಯಮೇಲೂ ಸುಳಿದಾಡುತ್ತಿರುತ್ತವೆ.

ಆದರೆ ಅದನ್ನು ಪೂರ್ತಿ ಓದಿ, ಅರ್ಥಮಾಡಿಕೊಂಡು, ಅನುಸರಿಸಲು ಸಾಧ್ಯವಾಗಿರುವುದು ಎಷ್ಟುಜನರಿಗೋ

ತಿಳಿಯದು. ನಾನು ಗೀತೆಯನ್ನು ಮೊದಲಿನಿಂದ ಕೊನೆಯವರೆಗೂ ಓದಬೇಕೆಂದು ಅನೇಕಬಾರಿ ಪ್ರಾರಂಭಮಾಡಿ

ಎರಡನೇ ಅಧ್ಯಾಯಕ್ಕೆ ಕೊನೆಮಾಡಿದ್ದೆ. ಈ ಬಾರಿ ಐದನೆಯ ಅಧ್ಯಾಯವನ್ನು ತಲುಪಿದ್ದೇನೆ. ಕೃಷ್ಣಪರಮಾತ್ಮ

ಏನು ಹೇಳುತ್ತಿದ್ದಾನೆಂದು ತಿಳಿದಂತೆ ಅನಿಸುತ್ತದೆ. ಆದರೆ ಏನೂ ತಿಳಿದಿಲ್ಲವೆಂಬುದು ನಿಜ. ಆತ ಹೇಳುತ್ತಿರುವುದೂ

ಹಾಗೆಯೇ. ಇಂಗ್ಲಿಷಿನಲ್ಲಿ ‘beating around the bush’ ಎನ್ನುತ್ತಾರಲ್ಲವೇ ? ಹಾಗೆ. 


ಮೂರನೆಯ ಅಧ್ಯಾಯದಿಂದಲೂ ಅರ್ಜುನ ಕೇಳುತ್ತಲೇ ಇದ್ದಾನೆ. “ಸ್ವಾಮೀ, ಕರ್ಮಮಾರ್ಗ ಒಳ್ಳೆಯದೋ,

ಜ್ಞಾನಮಾರ್ಗವೋ? ಎರಡರಲ್ಲಿ ಒಂದನ್ನು ಖಚಿತವಾಗಿ ಹೇಳು” ಎಂದು. ಭಗವಂತ  ಅದೂ ಇದೂ ಇಪ್ಪತ್ತೆಂಟು

ಹೇಳುತ್ತಿದ್ದಾನೆಯೇ ಹೊರತು, ಖಚಿತವಾದ ಉತ್ತರ ಕೊಟ್ಟಿಲ್ಲ. ಇಂಥ ಸಮಯದಲ್ಲಿ ನಮಗೆ ಬೇಕಾಗುವುದು

ಗೀತೆಯ ಅಕ್ಷರಗಳ ಹಿಂದಿನ ಭಾವವನ್ನು ತಾವು ತಿಳಿದು, ನಮಗೆ ತಿಳಿಸಿ ಹೇಳಬಲ್ಲವರ ಸಹಾಯ. ಅವರ ಜ್ಞಾನ.

ಪರಿಣಿತಿ. ಹೀಗೆ ಹೇಳುವವರೂ, ಹೇಳಿರುವವರೂ ಅನೇಕರಿದ್ದಾರೆ. ಅವರ ನಂಬಿಕೆ, ತಿಳುವಳಿಕೆ, ವಿಚಾರಗಳಿಗೆ

ತಕ್ಕಂತೆ. ಆದರೆ ಹೇಳುವವರಲ್ಲಿ ನಮಗೆ ವಿಶ್ವಾಸ ಬೇಕಲ್ಲವೇ ? ಹಾಗೆ ನನಗೆ ವಿಶ್ವಾಸವಿರುವುದು ನಮ್ಮ ಡಿವಿಜಿ

ಯವರಲ್ಲಿ. ಆದ್ದರಿಂದಲೇ ಮತ್ತೊಮ್ಮೆ ‘ಜೀವನ ಧರ್ಮಯೋಗ’ದ ಪಠಣವೂ ನಡೆದಿದೆ.  


ಕೃಷ್ಣಪರಮಾತ್ಮನ ಮಾತುಗಳನ್ನು  ಡಿವಿಜಿಯವರು ಅರ್ಥಮಾಡಿಕೊಂಡು, ಅದರ ಬಗೆಗೆ ಚಿಂತನೆಮಾಡಿ ತಮ್ಮ

ವಿಚಾರವನ್ನು ನಮಗೆ ತಲುಪಿಸಿದ್ದಾರೆ. ಅರ್ಜುನನ ಪ್ರಶ್ನೆಗೆ ಡಿವಿಜಿಯವರ ಉತ್ತರ, “ಕರ್ಮ, ಜ್ಞಾನ ಗಳು ಎರಡು

ಬೇರೆ ಬೇರೆ ಮಾರ್ಗಗಳಲ್ಲ. ಮೊದಲಿಗೆ ಕರ್ಮ ಜ್ಞಾನಕ್ಕೆ ಸಾಧನವಾಗಿರುತ್ತದೆ. ನಂತರ ಅದು ಜ್ಞಾನದ

ಫಲಿತಾಂಶವಾಗುತ್ತದೆ.  ಎರಡರ ಗುರಿಯೂ ಒಂದೇ”. ನನಗೆ ಕೊಂಚ ಸಮಾಧಾನವಾಯಿತು. ಸರಿ, ಹಾಗಾದರೆ 

ಯಾವುದನ್ನು ನಾವು ‘ಕರ್ಮ’ ಎನ್ನಬೇಕು? ಅದು ಮುಂದಿನ ಪ್ರಶ್ನೆ ! 


“ನಮ್ಮ ಪೂರ್ವಿಕರ ದೃಷ್ಟಿಯಲ್ಲಿ ಭಗವದ್ಗೀತೆ ಮೋಕ್ಷಶಾಸ್ತ್ರ. ಅವರ ಮನಸ್ಸು ಪಾರತ್ರಿಕ ಗತಿಯನ್ನು ಹೆಚ್ಚಾಗಿ

ಚಿಂತಿಸುತ್ತಿತ್ತು. ಇಂದಿನ ನಾವು ಹೊರಬೇಕಾಗಿರುವ ಹೊರೆ ಇಹ ಜೀವನದ್ದು. ಅನ್ನವಸ್ತ್ರ ಸಂಪಾದನೆ,

ಉದ್ಯೋಗಾವಕಾಶ, ಹೇಳೋಣ ಕೇಳೋಣಗಳು, ಸಾಲಸುಲಿಗೆಗಳು, ಎಡೆಬಿಡದ ದುಡಿತ, ಬಿಡುವಿಲ್ಲದ

ಹಾರಾಟ, ಆಚಾರ ಕ್ಲೇಶ, ವಿಮತ ಘರ್ಷಣೆ, ವರ್ಣ ಸಾಂಕರ್ಯ - ಈ ಅನಂತ ಚಿಂತನೆಗಳು ನಮ್ಮ ಪಾಡು.

ಅದರ ನಡುವೆ ಮೋಕ್ಷವಿಚಾರಕ್ಕೆ ಅವಧಾನವೆಲ್ಲಿ ? ಅಂದಂದಿನ ಸಂಸಾರಭಾರ ಅಂದಂದಿಗೆ ಸಾಕಾಗಿದೆ.

ಇಂಥಾದ್ದರಲ್ಲಿ ಗೀತೆ ನಮ್ಮ ಸಹಾಯಕ್ಕೆ ಬಂದಿತೋ ? ಹಾಗಾಗುವುದಾದರೆ ಅದಕ್ಕೊಂದು ಬೆಲೆಯುಂಟು.

ನಾವು ನಿರೀಕ್ಷಿಸುವುದು ಈ ಉಪಕಾರವನ್ನು.” - ಇದು ಜೀವನ ಧರ್ಮಯೋಗದ ಶುರುವಿನಲ್ಲಿ ಡಿವಿಜಿಯವರ

ಮಾತು. 


ಅವರ ಈ ಬರಹದಲ್ಲಿ ನಮ್ಮ ಜೀವನಕ್ಕೆ ಸಹಾಯಕವಾದ, ನೆಮ್ಮದಿ ನೀಡುವಂಥ ಮಾತುಗಳನ್ನು ನಮಗೆ

ನೀಡಿದ್ದಾರೆ. ಡಿವಿಜಿಯವರು ಹೇಳುವಂತೆ ಗೀತೆ, ಅವರವರ ಯೋಗ್ಯತೆ, ಕ್ಷಮತೆ, ಅನುಭವಗಳಿಗೆ ತಕ್ಕಂತೆ

ಅವರವರಿಗೆ ಅರ್ಥವಾಗುವ ಸಂದೇಶ. ನನ್ನ ತಿಳುವಳಿಕೆಗೆ ತಕ್ಕಂತೆ ನನ್ನ ಮಾತು, ಬರಹ. ನನ್ನ ವ್ಯಾಸಂಗ

ಮುಂದುವರೆದರೆ, ಹಂಚಿಕೊಳ್ಳುವಂಥ ವಿಚಾರಗಳು ಕೈಗೆಟುಕಿದರೆ  ಮತ್ತೆ ಬರೆಯುತ್ತೇನೆ.ನಮಸ್ಕಾರ. 

ಶುಕ್ರವಾರ, ಡಿಸೆಂಬರ್ 11, 2020

‘ಬೆಳ್ಳಕ್ಕಿ’

ನಾನು ಮುಂಜಾನೆ ಸುತ್ತಾಟ ಮುಗಿಸಿ ಮನೆಯಕಡೆ ತಿರುಗುವ ಸಮಯದಲ್ಲಿ ಇವು ನನಗೆ ಎದುರಾಗುತ್ತವೆ.

ಸಾಮಾನ್ಯವಾಗಿ ‘ಬೆಳ್ಳಕ್ಕಿ’ ಎಂದು  ಕರೆಸಿಕೊಳ್ಳುವ ಒಂದು ಪಕ್ಷಿ ಸಮೂಹ. ಅದರಲ್ಲಿ ಕೆಲವು ಕೊಕ್ಕರೆಗಳೂ ಇವೆ.

ತಾವು ವಾಸಿಸುವ ಸ್ಥಾನದಿಂದ  ಅದೆಲ್ಲಿಗೋ ಹಾರುತ್ತಿರುತ್ತವೆ. ಹೊಟ್ಟೆಪಾಡೋ, ಮತ್ತೇನು ಕಾರ್ಯಗೌರವವೋ? 

ಅದನ್ನು ಮುಗಿಸಿ ಸಂಜೆ ತಮ್ಮ ಮರಕ್ಕೆ ಹಿಂತಿರುಗುತ್ತವೆ. 


ನಮ್ಮ ಮುಖ್ಯ ರಸ್ತೆಯಿಂದ ಕೊಂಚ ದೂರದಲ್ಲಿರುವ ಒಂದು ತಗ್ಗು ಪ್ರದೇಶದ ಸಣ್ಣ ಮರಗಳ ಗುಂಪು ಅವುಗಳ

ವಾಸಸ್ಥಾನ. ನಾನು ಒಮ್ಮೊಮ್ಮೆ ಸಂಜೆಯ ಸಮಯ ಸುತ್ತಾಟಕ್ಕೆ ಹೊರಟಾಗ ಅವು ಗುಂಪು ಗುಂಪಾಗಿ ಹಾರಿಬಂದು

ತಮ್ಮ ತಮ್ಮ ಸ್ಥಾನ ಸೇರುವುದನ್ನು ಕಂಡಿದ್ದೆ. ಅವು ಗುಂಪಿನಲ್ಲಿ ಬಂದು, ರೆಕ್ಕೆ ಬಡಿತ ನಿಲ್ಲಿಸಿ ಹಾಗೆಯೇ ಹಾರಿಬಂದು

ಇಳಿಯುವಾಗ ಒಂದು ವಿಮಾನ ನೆಲಕ್ಕಿಳಿಯುವಂತೆ ಕಾಣುತ್ತದೆ ! ಬಿಡುವಾಗಿ ನಿಂತು ಅದನ್ನು ನೋಡುವ

ವ್ಯವಧಾನವಾಗಿರಲಿಲ್ಲ. 


ಇಂದುಸಂಜೆ ಅವು ಬರುವ ಸಮಯಕಾದು ಅಲ್ಲಿಯೇ ನಿಂತಿದ್ದು ಪದೇ ಪದೇ ಆ ದೃಶ್ಯ ಕಂಡು ಸಂತೋಷಪಟ್ಟು


ಕೆಲವು ಚಿತ್ರಗಳನ್ನೂ ತೆಗೆದುಕೊಂಡೆ. 





ಅವುಗಳ ಕಷ್ಟ ಏನಿದೆಯೋ ಅವಕ್ಕೇ ಗೊತ್ತು. ನನಗಂತೂ ಅವುಗಳ ಜೀವನ ಸುಂದರವೆನಿಸುತ್ತದೆ !


ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ?

ಇಕ್ಕುವರಾರದನು ಕರೆದು ತಿರುಪೆಯನು?

ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು

ತಕ್ಕುದಾ ವ್ರತನಿನಗೆ - ಮಂಕುತಿಮ್ಮ


ಶ್ರೀ ಡಿ ವಿ ಜಿ ಯವರ ‘ಸ್ಮೃತಿ ಚಿತ್ರ’ - ಬೆಂಗಳೂರು ನಾಗರತ್ನಮ್ಮನವರು

ಶ್ರೀ ಡಿ ವಿ ಜಿ ಯವರ ‘ಸ್ಮೃತಿ ಚಿತ್ರ’ ಗಳನ್ನು ನಾಲ್ಕನೆಯ ಬಾರಿಯೋ ಆರನೆಯ ಬಾರಿಯೋ ಓದುತ್ತಿದ್ದೇನೆ. 

ಪಿ ಜಿ ವೋಡ್ ಹೌಸ್, ಜಿಮ್ ಕಾರ್ಬೆಟ್, ಜೇಮ್ಸ್ ಹೆರಿಯಟ್, ಗೊರೂರು, ಕಾರಂತರು, ಕೈಲಾಸಂ ಇವರ

ಕೆಲವು ಪುಸ್ತಕಗಳು ಸದಾ ನನಗೆ ‘ಬ್ಯಾಕ್ಅಪ್’ ಪುಸ್ತಕಗಳು. ಬೇರೇನೂ ಓದಲು ಸಿಗದಿದ್ದಾಗ ತೆಗೆಯುವುದಕ್ಕೆ.

ಡಿವಿಜಿಯವರ ಸ್ಮೃತಿ ಚಿತ್ರಗಳು ಈ ಪುಸ್ತಕಗಳ ಸಾಲಿನ ಮುಂಚೂಣಿಯಲ್ಲಿದೆ.


ತಮ್ಮ ನೆನಪಿನ ಆಳದಿಂದ ಡಿವಿಜಿ ಯವರು ಹೊರತೆರೆದಿರುವ ಕಾಲದ, ವ್ಯಕ್ತಿಗಳ ಚಿತ್ರಣವನ್ನು ಪದೇ ಪದೇ ಓದಿ

ಸಂತೋಷಿಸುತ್ತೇನೆ. ಆ ದಿನಗಳು, ಆ ಜನಗಳು ಹೋದವಲ್ಲಾ  ಎಂದು ವ್ಯಥೆಪಡುತ್ತೇನೆ. ಡಿವಿಜಿಯವರು

ಚಿತ್ರಿಸಿರುವ ವ್ಯಕ್ತಿಗಳೆಲ್ಲರೂ ಅವರ ದೃಷ್ಟಿಯಲ್ಲಿ ಗಣ್ಯರು, ಸಭ್ಯರು, ರಸಿಕರು, ಸರಳರು, ಪೂಜ್ಯರು, ಪ್ರಾತಃ

ಸ್ಮರಣೀಯರು. ಡಿವಿಜಿ ಯವರ ಈ ಬರಹ ಯಾವುದೇ ವ್ಯಕ್ತಿಯ ಗುಣಾವಗುಣಗಳ ವಿಶ್ಲೇಷಣೆಯಲ್ಲ. ಇದು

ಅವರೆಲ್ಲರ ಸದ್ಗುಣಗಳ ಪರಿಚಯ. ರಂಜನೀಯ ವ್ಯಕ್ತಿತ್ವದ ಅವಲೋಕನ. 


ತಾವು ಕಂಡಿದ್ದ ವ್ಯಕ್ತಿಯೊಬ್ಬರ ಬಗ್ಗೆ ಬರೆಯುವಾಗ, ತಾವು ಪರಿಗಣಿಸಿದ್ದೇನು ಎಂಬುದನ್ನು ಡಿ ವಿ ಜಿ ಯವರು

ಒಬ್ಬ ರಾಯರ ಚಿತ್ರಣದಲ್ಲಿ ಬರೆದ ಸಾಲುಗಳಲ್ಲಿ ಕಾಣಬಹುದು. ಆ ರಾಯರಲ್ಲಿ ಕೆಲವು ಅವಗುಣಗಳೂ

ಇದ್ದಿರಬಹುದೆಂದು ಸೂಚ್ಯವಾಗಿ ತಿಳಿಸಿ  “ನನ್ನ ಮನಸ್ಸಿನಲ್ಲಿ ಉಳಿದಿರುವ ಮುದ್ರಿಕೆ ಒಟ್ಟಿನ ಮೇಲೆ ಒಬ್ಬ

ರಸಿಕ ಭಕ್ತರದು. ರಾಯರ ಪುಣ್ಯಪಾಪಗಳು ಅವರಿಗೂ ಅವರು ನಂಬಿಕೊಂಡಿದ್ದ ದೈವಕ್ಕೂ ನಡುವೆ ಲೆಕ್ಕಕ್ಕೆ

ಬರತಕ್ಕವು. ಇತರಿಗಾದರೋ ಲೆಕ್ಕಕ್ಕೆ ಸಿಕ್ಕತಕ್ಕದ್ದು ರಾಯರ ಸರಳತೆ, ಅವರ ಸಂಗೀತದ ರಸಭಾವ,

ಅವರ ಔದಾರ್ಯ” ಎನ್ನುತ್ತಾರೆ ಡಿ ವಿ ಜಿ ಯವರು.  ಇಲ್ಲಿರುವ  ಪ್ರತಿಯೊಬ್ಬರೂ ಡಿವಿಜಿ ಯವರ

ಮನಮುಟ್ಟಿದವರು, ಆತ್ಮೀಯರು.


ತಾವು ದಿವಾನರು, ಅಧಿಕಾರಿಗಳು, ಪಂಡಿತರುಗಳ ಬಗೆಗೆ ಎಷ್ಟು ಅಭಿಮಾನದಿಂದ, ಗೌರವದಿಂದ

ಬರೆದಿದ್ದಾರೋ ಅಷ್ಟೇ ಭಾವನಾಪೂರ್ಣವಾಗಿ ಗಾರೆಕೆಲಸದವರು, ದೇವದಾಸಿಯರು ಮತ್ತಿತರಬಗೆಗೂ

ಡಿವಿಜಿಯವರು ಬರೆದಿದ್ದಾರೆ. ಅವರ ಚಿತ್ರಣ  ದಿವಾನ್ ಸರ್ ಎಂ ವಿ ಅವರದಾಗಲೀ ಅಥವಾ ಗಾರೆ ಕೆಲಸದ

ಶಿವಪಿಚ್ಚೈ ಮೊದಲಿಯಾರ್ ಅವರದಾಗಲೀ ಅಷ್ಟೇ  ಹೃದಯಸ್ಪರ್ಶಿ ಯಾಗಿರುತ್ತದೆ. ಈ ಬರಹಗಳಲ್ಲಿ 

ನನ್ನ ಮನತಟ್ಟಿದ ಕೆಲವು ಭಾಗಗಳ ಬಗೆಗೆ ಬರೆದಿಡುವ ಇಚ್ಛೆಯಾಯಿತು. ಪುಸ್ತಕವನ್ನು ಪೂರ್ಣವಾಗಿ

ಓದುವ ವ್ಯವಧಾನ ಅಥವಾ ಅವಕಾಶ ಇಲ್ಲದವರಿಗೆ ಈ ಮೂಲಕ ಆ ಬರಹಗಳ  ಸ್ವರೂಪ ಕೊಂಚವಾದರೂ

ತಿಳಿಯಬಹುದಲ್ಲವೇ ? ನನಗೆ ಪ್ರಿಯವಾದ, ಗತಿಸಿಹೋದ, ಆ ಕಾಲ ಮತ್ತು ಆ ರೀತಿಯ ಜನಗಳ

ಪರಿಚಯವನ್ನು  ಇತರರಿಗೂ ಮಾಡಿಸೋಣವೆಂಬ ಆಶಯ. ಹಾಗೆ ಬರೆದ ಮೊದಲ ಬರಹ ಇದು.

ಮುಂದುವರೆಸುತ್ತೇನೆಂದು ನಂಬಿದ್ದೇನೆ. 


ಬೆಂಗಳೂರು ನಾಗರತ್ನಮ್ಮನವರು ದೇವದಾಸಿಯರ ಕುಲದಲ್ಲಿ ಜನ್ಮಪಡೆದವರು. ಅವರ ಜನನವಾದದ್ದು

1878 ರಲ್ಲಿ,  ಮೈಸೂರಿನಲ್ಲಿ. ಅವರಿಗೆ ಸಂಗೀತ, ಸಂಸ್ಕೃತ ಕಾವ್ಯ, ಕನ್ನಡ ಕಾವ್ಯಗಳ ಅಭ್ಯಾಸವಾಗಿದ್ದು,

ಸಂಸ್ಕೃತ ಶ್ಲೋಕ, ಗಮಕಗಳನ್ನು ಅರ್ಥಪೂರ್ಣವಾಗಿ, ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರಂತೆ. ನಂತರ

ಸಂಗೀತ, ನೃತ್ಯಕಲೆಗಳಲ್ಲಿ ಹೆಚ್ಚಿನ ಕಲಿಕೆಗಾಗಿ ಬೆಂಗಳೂರಿಗೆ ಬಂದು, ಬೆಂಗಳೂರಿನ ಗಣ್ಯರಲ್ಲಿ ಒಬ್ಬರಾಗಿದ್ದು,

ಸಂಗೀತದಲ್ಲಿ ಬಹಳ ಹೆಸರುಮಾಡಿದರಂತೆ. ಬೆಂಗಳೂರಿನಲ್ಲಿ ಆಕೆ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾದ

ಶ್ರೀ ನರಹರಿರಾಯರ ಆಶ್ರಯದಲ್ಲಿದ್ದರೆಂದು ಡಿ ವಿ ಜಿ ಯವರು ತಿಳಿಸುತ್ತಾರೆ. ಮುಂದೆ ಅವರು ಮದರಾಸಿಗೆ

ತೆರಳಿ ಅಲ್ಲಿ ತಮ್ಮ ಸಂಗೀತದ ಸಾಮರ್ಥ್ಯದಿಂದ ಹಣ ಪ್ರಸಿದ್ಧಿಗಳೆರಡನ್ನೂ ಹೇರಳವಾಗಿ ಗಳಿಸಿ ಯಾರದೇ

ಆಶ್ರಯದ ಅವಶ್ಯಕತೆಯಿಲ್ಲದಂತೆ ಸ್ವತಂತ್ರ ಜೀವನ ನಡೆಸುವ ಸ್ಥಿತಿಗೆ ತಲುಪಿದರಂತೆ. 


ತಮ್ಮ ಮಕ್ಕಳನ್ನೂ, ಸಾಕಿದ್ದ ಮಗುವನ್ನೂ ಅಕಾಲವಾಗಿ ಕಳೆದುಕೊಂಡ ಆಕೆ ತಮ್ಮ ವೈಯುಕ್ತಿಕ ಜೀವನದಲ್ಲಿ

ನೋವು ಅನುಭವಿಸಿ ಕೊನೆಗೆ ಶ್ರೀರಾಮಪಾದಾರವಿಂದ ಸೇವೆಯಲ್ಲಿ ಶಾಂತಿಪಡೆಯುವ

ಮನಸ್ಸುಮಾಡಿದರಂತೆ. ತ್ಯಾಗರಾಜ ಸ್ವಾಮಿಯವರ ಆರಾಧಕಿಯಾದ ಆಕೆ ತಮ್ಮಲ್ಲಿದ್ದ ಸಂಪತ್ತನ್ನೆಲ್ಲಾ

ಖರ್ಚುಮಾಡಿ ತಿರುವಾಯೂರಿನಲ್ಲಿ ತ್ಯಾಗರಾಜ ಸ್ವಾಮಿಗಳ ಸಮಾಧಿಯ ಜೀರ್ಣೋದ್ಧಾರಮಾಡಿಸಿ ಅಲ್ಲಿ

ಸೀತಾರಾಮದೇವರ ದೇವಾಲಯವನ್ನು ಕಟ್ಟಿಸಿದರಂತೆ.  ಆ ಕಾರ್ಯಕ್ಕೆ ತಮ್ಮಲ್ಲಿದ್ದ ಹಣವನ್ನೆಲ್ಲಾ ವ್ಯಯಿಸಿ,

ಜತೆಗೆ ತಮ್ಮ ಮನೆ ಹಾಗೂ ಆಭರಣಗಳನ್ನು ಮಾರಿ ಹಣ ಹೊಂದಿಸಿದರೆಂದು ಡಿ ವಿ ಜಿ ಯವರು

ತಿಳಿಸುತ್ತಾರೆ. ತದನಂತರ ಅನಾರೋಗ್ಯಕ್ಕೆ ತುತ್ತಾಗಿ ಆದಾಯವಿಲ್ಲದೆ ಬಳಲುತ್ತಿದ್ದಾಗಲೂ  ಆಕೆ

ತಿರುವಾಯೂರಿನಲ್ಲಿ ತಮ್ಮ ಊರಾದ ಮೈಸೂರಿನ ಹೆಸರಿನಲ್ಲಿ ಒಂದು ಸತ್ರವನ್ನು ಕಟ್ಟಿಸುವ ಮನಸ್ಸುಮಾಡಿ

ತಮಗೆ ಪರಿಚಯವಿದ್ದ ಧನಿಕರಿಂದಲೂ ಇತರ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಆ ಕಾರ್ಯವನ್ನು

ನಡೆಸಿದರಂತೆ. ಮದರಾಸಿನ ಸಾರ್ವಜನಿಕ ಸಂಘಟನೆಗಳಿಂದ “ತ್ಯಾಗಸೇವಾಸಕ್ತ”, “ಗಾನಕಲಾವಿಶಾರದ”,

“ವಿದ್ಯಾಸುಂದರಿ” ಮೊದಲಾದ ಬಿರುದುಗಳನ್ನು ಅವರು ಪಡೆದಿದ್ದರೆಂದು ಡಿ ವಿ ಜಿ ಯವರು ಬರೆದಿದ್ದಾರೆ.  


ನಾಗರತ್ನಮ್ಮನವರ ಏರುದಿನಗಳಲ್ಲಿ ಅನೇಕಬಾರಿ ತಾವು ಆಕೆಯ ಸಂಗೀತ ಕೇಳಲು ಅವರ ಮನೆಗೆ

ಹೋಗಿದ್ದುದಾಗಿ ತಮ್ಮ ಬರಹದಲ್ಲಿ ಡಿ ವಿ ಜಿ ಯವರು ತಿಳಿಸಿದ್ದಾರೆ. ಕೊನೆಯ ದಿನಗಳಲ್ಲಿ ಆಕೆ

ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಅವರನ್ನು ಕಾಣಲು ಹೋಗಿದ್ದ ಡಿವಿಜಿಯವರೊಡನೆ ಸಂಗೀತ

ಕಲಿಯುವಿಕೆ/ ಕಲಿಸುವಿಕೆಯ ಬಗೆಗೆ ಮಾತನಾಡುತ್ತಾ ನಾಗರತ್ನಮ್ಮನವರು  ಅಶಕ್ತರಾಗಿದ್ದರೂ

ಎದ್ದುಕುಳಿತು ರಾಗಾಲಾಪನೆಮಾಡಿ ಸಂಗೀತದ ಸೂಕ್ಷ್ಮಗಳನ್ನು ವಿವರಿಸಿದರಂತೆ. ಕೊನೆಗೆ ತಮ್ಮ ಜೀವನದ

ಬಗ್ಗೆ ಮಾತನಾಡುತ್ತಾ  “ಮೊದಲು ನಾಗರತ್ನ, ನಂತರ ಭೋಗರತ್ನ, ಈಗ ರೋಗರತ್ನ” ಎಂದು 

ನೊಂದುಕೊಂಡರಂತೆ.  


“ಇನ್ನೆರಡನ್ನು ಮರೆತುಬಿಟ್ಟಿರಿ. ಒಂದು ರಾಗರತ್ನ , ಮತ್ತೊಂದು ತ್ಯಾಗರತ್ನ. ಭೋಗ ರೋಗಗಳು ಕ್ಷಣಿಕವಾದವು.

ನಿಮ್ಮ ರಾಗ ಕೇಳಿದವರ ಮನಸ್ಸಿನಲ್ಲಿ ಪರಿಣಾಮ ಮಾಡಿ ಅವರ  ಜೀವನೋಲ್ಲಾಸದಾಲ್ಲೂ

ಜೀವನೋನ್ನತಿಯಲ್ಲೂ ಚಿರಕಾಲ ಉಳಿದಿರುತ್ತದೆ. ನಿಮ್ಮ ತ್ಯಾಗದ ಪ್ರತ್ಯಕ್ಷ ರೂಪವಾದ ತಿರುವಾಯೂರು

ಕ್ಷೇತ್ರದ ದೇವತಾ ಮಂದಿರಗಳು ಶಾಶ್ವತವಾಗಿ ನಿಂತಿರುತ್ತವೆ”  ಎಂದು ಡಿವಿಜಿಯವರು ಸೇರಿಸಿದಾಗ

ನಾಗರತ್ನಮ್ಮನವರು ಕೈಮುಗಿದು “ನಿಮ್ಮ ಈ ಮಾತನ್ನು ನೀವೇ ಇಟ್ಟುಕೊಳ್ಳಿ” ಎಂದುಬಿಟ್ಟರಂತೆ ! 


ಅದೆಂಥ ಘನವಾದ ವ್ಯಕ್ತಿತ್ವಗಳು! ಬರಹಕ್ಕೆ ವಸ್ತುವಾದವರದು, ಬರೆದವರದು !

ಭಾನುವಾರ, ಡಿಸೆಂಬರ್ 6, 2020

‘ಗಂಡುಗವಿ’ ಶ್ರೀ ಜಿ ಪಿ ರಾಜರತ್ನಂ



ನಿನ್ನೆ ಡಿಸೆಂಬರ್ ಐದರಂದು ಕನ್ನಡದ ಮೇರುಕವಿ, ಸಾಹಿತಿ, ಗಳಲ್ಲೊಬ್ಬರಾದ ‘ಗಂಡುಗವಿ’ ಶ್ರೀ ಜಿ ಪಿ

ರಾಜರತ್ನಂ ಅವರ ಜನ್ಮದಿನ ಸದ್ದಿಲ್ಲದೇ ಸರಿದು ಹೋಯಿತು. ಅದರಿಂದಲೇ ಡಿ ವಿ ಜಿ ಯವರು ಬರೆದದ್ದು

“ಲೆಕ್ಕವಿರಿಸಿಲ್ಲ ಜಗ ತನ್ನಾದಿ  ಬಂಧುಗಳ, ದಕ್ಕುವುದೇ ಜಸ ನಿನಗೆ, ಮಂಕುತಿಮ್ಮ.”


ರಾಜರತ್ನಂ ಅವರ ಜನ್ಮದಿನದ ಬಗ್ಗೆ ನನ್ನ ಸ್ನೇಹಿತರೊಬ್ಬರು ಇಂದು ನೆನಪುಮಾಡಿದರು. ನನಗೆ ಬಹಳ

ಪ್ರಿಯವಾದ ಕವಿಯ ನೆನಪಿಗಾಗಿ  ಕೆಳಗಿನ ಕೆಲವು ಸಾಲುಗಳು. 


“ಕವಿಯಲ್ಲ, ವಿಜ್ಞಾನಿಯಲ್ಲ, ಬರಿಯ  ತಾರಾಡಿ” ಎಂದು ತಮ್ಮನ್ನು ತಾವು ಡಿ ವಿ ಜಿ ಯವರು

ಪರಿಚಯಿಸಿಕೊಂಡರೆ, “ಅಕ್ಸಾರ ಗಿಕ್ಸಾರ ನಂಗೇನೂ ಬರದು, ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು”

ಎನ್ನುತ್ತಾ ತಮ್ಮ ಪದಗಳನ್ನು ಪ್ರಾರಂಭಿಸಿದರು ಈ ಮಹಾಕವಿ. ಅವರಿಗೇನು ಬರಲಿ ಬಿಡಲಿ, ನಮಗೆ

ಕನ್ನಡ, ಕೊಂಚ ಉರ್ದು ( ಹಳೇಮೈಸೂರಿನ ಸಾಹೇಬರುಗಳ ಕನ್ನಡೀಕರಣಗೊಂಡ ಉರ್ದು) ಹಾಗೂ

ಇವೆರಡರ ಗ್ರಾಮ್ಯ ರೂಪ ಇವುಗಳ ಪರಿಚಯವಿಲ್ಲದಿದ್ದರೆ ರತ್ನನ ಪದಗಳು ಕಬ್ಬಿಣದ ಕಡಲೆಯೇ.


ರತ್ನನ ಪದಗಳನ್ನು ಕೇಳಿಲ್ಲದಿರುವವರು ಇರಬಹುದು. ಆದರೆ “ನಾಯಿಮರಿ ನಾಯಿಮರಿ ತಿಂಡಿಬೇಕೇ?”

ಮತ್ತು “ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ “ ಮುಂತಾದ  ಮಕ್ಕಳ ಗೀತೆಗಳ

ಪರಿಚಯವಿಲ್ಲದ ಕನ್ನಡಿಗರು ಇರಲಾರರು.


“ಗಂಡುಗವಿ” ಎಂದು ಹೆಸರಾದ ಜಿ ಪಿ ರಾಜರತ್ನಂ ಅವರು. “ನರಕಕ್ಕಿಳಿಸಿ, ನಾಲ್ಗೆ ಸೀಳ್ಸಿ, ಬಾಯ್

ಹೊಲಿಸಾಕಿದ್ರೂನೂವೆ, ಮೂಗ್ನಲ್ ಕನ್ನಡ ಪದವಾಡ್ತೀನಿ” ಎಂದ ಕನ್ನಡಾಭಿಮಾನಿ. ನಂಜನಗೂಡಿನ

ಸಮೀಪದ ಗುಂಡ್ಲುಪೇಟೆಯಲ್ಲಿ ಜನಿಸಿದ ರಾಜರತ್ನಂ ಅವರ ಮಾತೃಭಾಷೆ ತಮಿಳು. ಬಡತನದಲ್ಲಿ

ಬೆಳೆದು ಓದಿ, ಕನ್ನಡ ಆನರ್ಸ್ ಪದವಿಗಳಿಸಿ ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿಪಡೆದರು.

ಕನ್ನಡ ಪಾಠಮಾಡಿ ಜೀವನ ನಡೆಸಿ, ಗದ್ಯ, ಪದ್ಯ, ಮಕ್ಕಳ ಸಾಹಿತ್ಯ ಮುಂತಾಗಿ ವಿಪುಲವಾಗಿ ಕನ್ನಡ

ಸಾಹಿತ್ಯಸೇವೆ ನಡೆಸಿ, ಜೀವನವನ್ನೇ ಕನ್ನಡ ಸಾಹಿತ್ಯಾರಾಧನೆಗೆ  ಮುಡುಪಿಟ್ಟರು.


ಕನ್ನಡವಷ್ಟೇ ಅಲ್ಲದೆ ಸಂಸ್ಕೃತ ಹಾಗೂ ಪಾಲಿಭಾಷೆಗಳಲ್ಲಿ ಪರಿಣಿತರಾಗಿದ್ದ  ರಾಜರತ್ನಂ ಅವರು

ಪಾಲಿಭಾಷೆಯನ್ನು ಕೈಗೂಡಿಸಿಕೊಂಡು ಬೌದ್ಧ ಸಾಹಿತ್ಯವನ್ನು ಆಳವಾಗಿ ಅಭ್ಯಾಸಮಾಡಿ, ಅನೇಕ

ಪ್ರೌಢ ಪ್ರಭಂದಗಳಲ್ಲದೇ ಮಕ್ಕಳಿಗಾಗಿ “ಬೋಧಿಸತ್ವನ ಕಥೆ “ಗಳನ್ನು ಬರೆದರು. “ತುತ್ತೂರಿ”, “ಕಡಲೆಪುರಿ”

ಅವರ ಮಕ್ಕಳ ಗೀತಗಳ ಸಂಗ್ರಹಗಳು.


ರಾಜರತ್ನಂ ಅವರ ಹೆಸರು ಕೇಳಿಲ್ಲದವರೂ ಸಹ ದಿವಂಗತ ಕಾಳಿಂಗರಾಯರ ಕಂಠದ “ಬ್ರಮ್ಮ ನಿಂಗೆ ಜೋಡಿಸ್ತೀನಿ

ಎಂಡ  ಮುಟ್ಟಿದ್ ಕೈನ”  ಮತ್ತು “ಎಳ್ಕೊಳ್ಳೋಕ್ ಒಂದೂರು”  ಗೀತೆ ಗಳನ್ನು ಕೇಳದಿರುವ ಸಾಧ್ಯತೆ ಬಹುಕಡಿಮೆ.

ಭಾವಗೀತೆಗಳೆಂಬ ಒಂದು ಪ್ರಕಾರದ ಹಾಡುಗಾರಿಕೆ ಪ್ರಾರಂಭವಾದ ಕಾಲದಲ್ಲಿ ಬಹಳ ಜನಪ್ರಿಯವಾದ

ಗೀತೆಗಳು ಇವು. ಇಂಥಗೀತೆಗಳನ್ನು ಒಳಗೊಂಡ  “ರತ್ನನ ಪದಗಳು” ಕನ್ನಡ ಕವನ ಸಾಹಿತ್ಯದಲ್ಲಿ ಒಂದು

ಹೊಸಪ್ರಯೋಗ . ಕೈಲಾಸಂ ರವರ ನಾಟಕಗಳಿದ್ದಂತೆ.


ರಾಜರತ್ನಂ ಅವರು ರತ್ನನ ಪದಗಳನ್ನು ಬರೆದಾಗ ಅದನ್ನು ಅಚ್ಚುಮಾಡಲು ಯಾವ ಪ್ರಕಾಶಕನೂ ಮುಂದೆ

ಬರಲಿಲ್ಲವಂತೆ. ತಾವು  ಪದವಿ ಪರೀಕ್ಷೆಯಲ್ಲಿ ಮೊದಲಿಗರಾದಾಗ ತಮಗೆ ದೊರಕಿದ್ದ ಸ್ವರ್ಣ ಪದಕವನ್ನು

ಅಡವಿಟ್ಟು, ಮೂವತ್ತೈದು ರೂಪಾಯಿಗಳನ್ನು ಹೊಂದಿಸಿಕೊಂಡು, ತಾವೇ ತಮ್ಮ ಪದಗಳನ್ನು ಅಚ್ಚುಮಾಡಿಸಿದರಂತೆ.

ಪುಸ್ತಕಗಳೆಲ್ಲಾ ಮಾರಾಟವಾಗಿ ಮರುಮುದ್ರಣವಾದಾಗ ಬಂದ ಹಣದಿಂದ ತಮ್ಮ ಪದಕವನ್ನು ವಾಪಸು ಪಡೆದರಂತೆ.


ನನ್ನ ಸೋದರಮಾವ ಶ್ರೀ ಜಗಲೂರು ಲಕ್ಷ್ಮಣರಾಯರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಾಜರತ್ನಂ

ಅವರ ವಿದ್ಯಾರ್ಥಿಯಾಗಿದ್ದರು. ನಂತರ ಅವರು ರಾಸಾಯನಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ,

ರಾಜರತ್ನಂ ಅವರ ಸಹ ಅಧ್ಯಾಪಕರಾದವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಅಧ್ಯಾಪಕರ

ವೇತನ, ಭಾಷೆಯ ಅಧ್ಯಾಪಕರ ವೇತನಕ್ಕಿಂತ ಒಂದುಮಟ್ಟ ಹೆಚ್ಚು ಇದ್ದಿತಂತೆ. ತಾವು ರಸಾಯನಶಾಸ್ತ್ರದ

ಅಧ್ಯಾಪಕರಾಗಿ, ತಮಗೆ ಕನ್ನಡ ಪಾಠಹೇಳಿದ ಗುರು ರಾಜರತ್ನಂ ಅವರಿಗಿಂತ ಹೆಚ್ಚು ವೇತನ ಪಡೆಯುವುದು

ನನ್ನ ಸೋದರಮಾವನವರಿಗೆ ಕಿರಿಕಿರಿಯಾಗುತ್ತಿತ್ತಂತೆ. ಒಮ್ಮೆ ಇಬ್ಬರೂ ಕಾರ್ಯಾಲಯದಲ್ಲಿ ಒಟ್ಟಿಗೆ ವೇತನ

ಪಡೆಯಲು ಹೋದಾಗ ಹಣ ಪಡೆದು ಎಣಿಸಿಕೊಳ್ಳಲು ಹಿಂದೆಮುಂದೆ  ನೋಡುತ್ತಿದ್ದ ನಮ್ಮ ಮಾವನವರನ್ನು

ಗಮನಿಸಿದ ರಾಜರತ್ನಂ ಅವರು, ವಿಷಯ ತಿಳಿದುಕೊಂಡು, “ನಾಚಿಕೆಯಾಗಬೇಕಿರುವುದು ವಿಶ್ವವಿದ್ಯಾಲಯಕ್ಕೆ.

ನೀ ಯಾಕೆ ಬೇಸರಪಡುತ್ತೀಯಾ, ಬಾ. ಕಾಫಿ ಕುಡಿಯೋಣ” ಎನ್ನುತ್ತಾ ಹೆಗಲಮೇಲೆ ಕೈಹಾಕಿಕೊಂಡು

ಕ್ಯಾಂಟೀನಿಗೆ ಕರೆದೊಯ್ದರಂತೆ. 


ಗಂಡುಗವಿಯ ಮೈಕಟ್ಟು ಕೂಡ ಗುಂಡುಕಲ್ಲು. ತರಗತಿಯಲ್ಲಿ ಹುಡುಗರು ತರಲೆಮಾಡಿದರೆ “ಕಿಟಕಿಗೆ

ಕಂಬಿಯಿಲ್ಲ, ತೋಳಿನಲ್ಲಿ ಕಸುವಿದೆ, ಎತ್ತಿ ಹೊರಗೆ ಒಗೆದುಬಿಡುವೆ” ಎಂದು ಗುಡುಗಿದರೆ ತರಗತಿ

ನಿಶ್ಯಬ್ಧವಾಗುತ್ತಿತ್ತಂತೆ  !


ನಾನು ಬಿ ಡಿ ಎಸ್  ಎರಡನೇ  ವರ್ಷದಲ್ಲಿದ್ದಾಗ ಕನ್ನಡ ಸಂಘದ ಒಂದು ಕಾರ್ಯಕ್ರಮಕ್ಕೆ ಶ್ರೀ ರಾಜರತ್ನಂ

ಅವರನ್ನು ಆಹ್ವಾನಿಸಿದ್ದೆವು. ಯಾವುದೇ ಕಾರ್ಯಕ್ರಮಕ್ಕೆ ತಾವು ಬರಬೇಕಾದರೆ ಕನಿಷ್ಠ ನೂರುರುಪಾಯಿ

ಬೆಲೆಯ ಕನ್ನಡ ಪುಸ್ತಕಗಳನ್ನು ಕಾರ್ಯಕ್ರಮ ನಡೆಸುವವರು ಖರೀದಿಸಬೇಕೆಂಬುದು ಅವರ ಕರಾರಾಗಿತ್ತು.

“ನೂರು ರುಪಾಯಿಯ ಪುಸ್ತಕ ಕೊಳ್ಳದ ಕನ್ನಡ ಸಂಘ ಮತ್ತೇನು ಮಾಡೀತು?” ಎಂಬುದು ಅವರ ವಾದ.


ಕಾರ್ಯಕ್ರಮ ಮುಗಿದ ನಂತರ ತಮ್ಮ ಪುಸ್ತಕಗಳನ್ನು ಅಲ್ಲಿಯೇ ಹಸ್ತಾಕ್ಷರಮಾಡಿ ಕೊಟ್ಟರು. ನಾನೂ 

ಒಂದು ಪುಸ್ತಕ ಕೊಂಡೆ. ಅದೆಲ್ಲಿಹೋಯಿತೋ ದೇವರೇ ಬಲ್ಲ. ನನಗೆ ಅಷ್ಟು ಪ್ರಿಯವಾದ ಲೇಖಕರೊಬ್ಬರ

ಹಸ್ತಾಕ್ಷರವಿದ್ದ ಪುಸ್ತಕ ಕಳೆದುಕೊಂಡ ವ್ಯಥೆ ಬಾಧಿಸುತ್ತದೆ.


ರತ್ನನ ಪದಗಳು ಸಂಗ್ರಹದ ಮೊದಲ ಪದ ಇಲ್ಲಿದೆ. ಪದಗಳನ್ನು ಓದಿಲ್ಲದವರಿಗೆ ಪದಗಳ ರುಚಿತೋರಿಸುವ

ಪ್ರಯತ್ನ ಇದು. 


ಯೆಂಡಕ್ಕು ನಂಗೂನೆ ಬಲ್ಬಲೇ ದೋಸ್ತಿ ,

ಕುಡುದ್ಬುಟ್ಟಾಗ್ ಆಡೋದು ನಂಗ್ ಪೂರಾ ಜಾಸ್ತಿ

ನಂಗೆ ಎಸ್ರು ಏಳ್ತಾರೆ ರ್ರ ರ್ರ ರ್ರ ರತ್ನ,

ನಾನಾಡೋ ಪದಗೋಳು ಯೆಂಡದ್ ಪರ್ಯತ್ನ


ಮಾಬಾರ್ತ ಬರೆಯಾಕೆ ಯಾಸಂಗಿನಾಯ್ಕ

ಸಿಕ್ಕಂಗ್ ನಂಗ್ ಸಿಕ್ಕೋನೊಬ್ಬ ಬೇವಾರ್ಸಿನಾಯ್ಕ

ನಾನಾಡಿದ್ ಪದಗೊಳ್ನ ಕೂಡಿಸ್ದ ಬರ್ದು

ಏನೈತೊ ಯಾರಿಗ್ ಗೊತ್ ಔನ್ಗಿರೋ ದರ್ದು


ಬರಕೊಂಡ್ರೆ ಬರಕೊಂಡ್ ಓಗ್ , ನಿಂಗೂನೆ ಐಲು,

ಮಾಡಾನಾ ಆಗಿದ್ದೊಂದ್ ಸಾಯ ನಂಕೈಲು

ಅಂತ್ ಅವ್ನ್ ಬರ್ದಿದ್ನ ಅಚ್ಗಾಕೋಕ್ ಒಪ್ಪಿ

ಕಳಿಸಿವ್ನಿ ಬೈದೀರ ನಂಗೇನ್ರಾ ತಪ್ಪಿ


ಅಕ್ಸಾರ ಗಿಕ್ಸಾರ ನಂಗೇನೂ ಬರ್ದು

ದೊಡ್ ಚಾಕ್ರಿ ಬೇಕಿದ್ರೆ ಓದ್ಬೇಕು ದರ್ದು

ಪದಗೊಳ್ ಚಂದಾಗಿದ್ರೆ ಯೆಂಡಕ್ ಸಿಪಾರ್ಸಿ

ಚಂದಾಗಿಲ್ದಿದ್ರನಕ ತಪ್ಗೆ ಬೇವಾರ್ಸಿ.