ಶನಿವಾರ, ಮಾರ್ಚ್ 15, 2014

 ಫಲಮಾಗುವಂದು ತುತ್ತೂರಿ ದನಿಯಿಲ್ಲ - ಮತ್ತು  - ಅಜ್ಜ. 

ಮತ್ತೊಮ್ಮೆ ನಮ್ಮ ಸಪೋಟ ಗಿಡದಲ್ಲಿ ಹೊಸ ಚಿಗುರು ಚಿಗುರಿ, ಹೂವಾಗಿ, ಕಾಯಿಕಚ್ಚಿ, ಬಲಿಯತೊಡಗಿದವು. ಕಾಯಿಗಳು ಬಲಿತಂತೆ ಎಂದಿನಂತೆ ಬಾವಲಿಗಳು ಬಂದೆರಗಿದವು. ಬಾವಲಿ ಕಚ್ಚಿದ ಕಾಯಿಗಳು ಒಂದೊಂದಾಗಿ ನೆಲಕ್ಕುರುಳತೊಡಗಿದಂತೆ ನನ್ನ ಪತ್ನಿಯ ವರಾತ ಸುರುವಾಯಿತು. "ಎಷ್ಟೊಂದು ಕಾಯಾಗಿತ್ತು. ಈಗ ಅದರಲ್ಲಿ ಅರ್ಧವೂ ಉಳಿದಿಲ್ಲ. ಈ ಬಾವಲಿಗಳಿಗೋಸ್ಕರ ಗಿಡ ಬೆಳಸಿದಂತಾಗಿದೆ. ಹೊಟ್ಟೆ ಉರಿಯತ್ತೆ. ಕಾಯಿ ಕಿತ್ತಿಡಿ ಅಂದರೆ ನೀವು ಕೇಳಲ್ಲ. ನನಗೆ ಮರಹತ್ತಕ್ಕಾಗಿದ್ದಿದ್ರೆ ನಿಮ್ಮ ಕೈ ಕಾಯಬೇಕಾದ್ದೆ ಇರಲಿಲ್ಲ. ಏನುಮಾಡೋದು ನನ್ನ ಕರ್ಮ" ಇತ್ಯಾದಿ ಇತ್ಯಾದಿ. 

"ಹೋಗಲಿ ಬಿಡು. ಅವು ತಿಂದರೇನು  ನಾವು ತಿಂದರೇನು? ಬಾವಲಿಗಳೂ ಭಗವಂತನ ಸೃಷ್ಟಿಯೇ ತಾನೇ? ಅವರವರ ಹಣೆಯಲ್ಲಿ ಬರೆದದ್ದು ಅವರವರಿಗೆ." 

ಅವಳಿಗೆ ರೇಗಿತು. "ನಿಮ್ಮ ಸೋಮಾರಿತನಕ್ಕೆ ಅಧ್ಯಾತ್ಮದ ಬಣ್ಣ ಹಚ್ಚಬೇಡಿ. ಅವನಾದರೂ ಕೈಗೆ ಸಿಕ್ಕಿದ್ದರೆ (ಅವನು - ನಮ್ಮ ಮಗ) ಕೀಳಿಸುತ್ತಿದ್ದೆ. ಆದರೆ ಈ ವಿಷಯದಲ್ಲಿ ಅವನು ನಿಮ್ಮ ಮಗನಲ್ಲ ಅಪ್ಪ. ಒಟ್ಟಿನಲ್ಲಿ ನಾನು ಕೇಳಿಕೊಂಡು ಬಂದಿಲ್ಲ ಅಷ್ಟೇ"


ಅಲ್ಲಿಗೆ ಅದು ನಿಂತಿತ್ತು. ಆಹೊತ್ತಿಗೆ ಅಜ್ಜ ಬಂದ. ಬಂದವನು ಸುಮ್ಮನಿರಬಾರದೇ?

"ಚಿಕ್ಕು ಹಣ್ಣಾಗೈತ್ರಿ. ಕಿತ್ತುಕೋರಿ.  ಸುಮ್ಮಗ ಹಕ್ಕಿಪಕ್ಕಿ ತಿಂದುಹೊಗ್ತಾವು."

ನನ್ನಿಂದ ಉತ್ತರ ಬರದಿದ್ದುದನ್ನು ನೋಡಿ ಮುಂದುವರೆದ.

"ನಾ ಮರಹತ್ತಿ ಕಿತ್ತುಕೊಡಲೇನ್ರಿ"

"ಅಜ್ಜ ಹೇಳಿದ್ದು ಕೇಳಿತೇನು? ನಾಚಿಕೆಯಾಗಬೇಕು ನಿಮಗೆ."


ಈ ಅಜ್ಜ ಸುಮ್ಮನಿರಲಾರ. ನನಗೆ ನಾಚಿಗೆಯಾಗಬೇಕಾದದ್ದೇನೋ ನಿಜವೇ. ನಮ್ಮ ಅಂಗಳದಲ್ಲಿನ ಕಳೆಕಿತ್ತು, ಗುಡಿಸಿ, ಗಿಡಗಳಿಗೆ ಪಾತಿಮಾಡಿ, ಒಂದು ರೂಪಕ್ಕೆ ತಂದಿಡಲು ತಿಂಗಳಿಗೊಮ್ಮೆ ಅಜ್ಜ ಬರುತ್ತಾನೆ. ಅವನಿಂದ ಆ ಕೆಲಸಮಾಡಿಸಿಕೊಳ್ಳುವುದೇ ನನಗೆ ನಾಚಿಗ್ಗೇಡು. ಇನ್ನು ಅವನನ್ನು ಮರಹತ್ತಿಸಿದರೆ? ಅವನೇನೋ ನಿಜಕ್ಕೂ ತಯಾರೇ!

"ನಾ ಅಂಜೂದಿಲ್ರಿ. ಮುದುಕದಾನಂತ ಚಿಂತಿಮಾಡಬ್ಯಾಡ್ರಿ. ಕೈಕಾಲು ತಡೀತೈತ್ರಿ. ಚಾ ಐದುಪೈಸೆ ಇದ್ದಾಗ ಇಲ್ಲಿಗೆ ಬಂದೀನ್ರಿ. ದುಡಿದು ಮುಪ್ಪಾಗೇನ್ರಿ."

ಅದೇನೋ ನಿಜ. ಅಜ್ಜ ಮಾಡುವನೇ. ಈ ಅಜ್ಜನ ಹೆಸರೇನೋ ತಿಳಿಯದು. ದಶಕಗಳ ಹಿಂದೆ ಉತ್ತರ ಕರ್ನಾಟಕದಿಂದ ಇಲ್ಲಿಗೆ ಕೆಲಸಕ್ಕೆ ಬಂದು ಇಲ್ಲಿಯೇ ಇದ್ದಾನೆ. ಒಮ್ಮೆ ಕೇಳಿದಾಗ ಯಮುನಪ್ಪನೆಂದೋ ಏನೋ ಹೇಳಿದ. ಆದರೆ ಅವನಿಗೆ ಅಜ್ಜ ಎಂಬ ಹೆಸರೇ ಒಪ್ಪುತ್ತದೆ. ಎಲ್ಲರೂ ಅವನನ್ನು ಅಜ್ಜ ಎಂದೇ ಕರೆಯುತ್ತಾರೆ. ಈ ಅಜ್ಜನ ಅಜ್ಜಿಯಂತೆ ಕಾಣುವ ಹೆಂಡತಿ ಯೊಬ್ಬಳಿದ್ದಾಳೆ. "ನನಕಿಂತ ದೊಡ್ಡಾಕಿ ಅದಾಳ್ರೀ" ಎಂದು ನಗುತ್ತಾನೆ ಅಜ್ಜ. ಊಟ ತಿಂಡಿ ಏನೇ ಕೊಟ್ಟರೂ ಅವಳ ನೈವೇದ್ಯವಾದನಂತರವೇ ಅಜ್ಜ ಬಾಯಿಗಿಡುವುದು. ಆನೆಕಿವಿ, ಬೊಚ್ಚುಬಾಯಿ, ಸಣ್ಣಬಿಳಿಕೂದಲಿನ ಅಜ್ಜ ನಕ್ಕಾಗ ಬಹಳ ಚಂದ ಕಾಣುತ್ತಾನೆ. ಹಿತವಾದ ನಗೆ ಅವನದು. ಅವನು ನಗುವಾಗೊಮ್ಮೆ ಫೋಟೋತೆಗೆದಿಟ್ಟುಕೊಳ್ಳಬೇಕೆಂಬಾಸೆ ನನಗೆ. ಆದರೆ ಹೇಳಿನಗಿಸಿದರೆ ಆ ಸೊಬಗು ಬರಲಾರದು.

ನಮ್ಮ ಪಕ್ಕದಮನೆಯ ಅಂಗಳ ಶುಚಿಮಾಡಲು ಅಜ್ಜ ಅಜ್ಜಿ ಬಂದಿದ್ದಾಗ ನಾನು ಅವನನ್ನು ಮೊದಲಬಾರಿ ಕಂಡದ್ದು. ನಮ್ಮಲ್ಲಿಗೂ ಕೆಲಸಕ್ಕೆ  ಕರೆಯಬೇಕೆನ್ನಿಸಿದರೂ ನನ್ನ ತಾತನಂತೆ ಕಾಣುವ ಅವನಕೈಯಲ್ಲಿ  ಕೆಲಸ ಮಾಡಿಸಲು ನಾಚಿಕೆಯಾಗಿ ಸುಮ್ಮನಿದ್ದೆ. ಅದಾದ ಎರಡುದಿನದ ನಂತರ ಸಣ್ಣ ಹುಡುಗಿಯೊಬ್ಬಳ ಕೈಹಿಡಿದುಕೊಂಡು ಅಜ್ಜ ನನ್ನ ಚಿಕಿತ್ಸಾಲಯದ ಬಾಗಿಲಲ್ಲಿ ಹಾಜರಾದ.

"ಈಕಿ ಹಲ್ಲು ಭಾಳ ಬ್ಯಾನಿಯಾಗ್ಯಾವ್ರಿ"

 ಆ ಮಗುವಿನ ಹಲ್ಲು ಹಾಳಾಗಿದ್ದು ಹಲ್ಲನ್ನು ತೆಗೆಯಬೇಕಾಗಿತ್ತು. ಹುಡುಗಿಯನ್ನು ನಮ್ಮ ಕುರ್ಚಿಯಲ್ಲಿ ಕೂರಲು ಹೇಳಿದೆ. ಹುಡುಗಿ ಹಿಂಜರಿಯಿತು.

"ಆಕಿ ಅಂಜತಾಳ್ರಿ. ಇಲ್ಲೇ ನೋಡ್ರಿ."

ಹಾಗಾಗಲಾರದೆಂದು ತಿಳಿಸಿ, ಅದನ್ನು ರಮಿಸಿ ಕೂಡಿಸಿದೆ. ಹುಡುಗಿ ನಡುಗುತ್ತಾ ಕುಳಿತಿತ್ತು.

ಸಿರಿಂಜ್ ಕೈಗೆ ತೆಗೆದುಕೊಂಡೆ.

"ಸೂಜಿ ನಿಧಾನ ಮಾಡ್ರಿ. ಸಣ್ಣಾಕಿ ಅದಾಳ"

ಸೂಜಿ ತಾಕಿದ್ದೇ ಹುಡುಗಿ "ಹಾ" ಎಂದಿತು.

"ನೋಯಿಸ್ತೈತ್ರಿ ಹಗುರ ಮಾಡ್ರಿ "

ಒಂದುಬದಿಗೆ ಚುಚ್ಚಿ ಮತ್ತೊಂದೆಡೆಗೆ ಇಂಜಕ್ಷನ್ ಕೊಡಲು ತಯಾರಾದೆ.

"ಎಷ್ಟು ಹಾಕ್ತೀರ್ರಿ? ಬ್ಯಾನಿಯಾಗೂದಿಲ್ಲೇನ್ರಿ?. ರೊಕ್ಕ ಎಷ್ಟಾದ್ರೂ ತಗೋರಿ ಚಲೋಮಾಡ್ರಿ".

ಅವನನ್ನು ಬಾಯಿಮುಚ್ಚಿ  ಕೂಡಲು ಹೇಳಿ ಹಲ್ಲು ತೆಗೆದು ಮುಗಿಸಿದೆ. ಹುಡುಗಿ ಕುರ್ಚಿಯಿಂದಿಳಿದು ನಕ್ಕಿತು. ಅಜ್ಜನಿಗೆ ಮಹದಾನಂದ. "ನನ್ನ ಮೊಮ್ಮಗಳದಾಳ್ರಿ. ಸಾಲಿ ಕಲೀತಾಳ್ರಿ. ಮೂರ್ದಿನಾತ್ರಿ ಹಲ್ಲುಬ್ಯಾನಿ ಆಗಿ ಊಟ ಸದಿ ಮಾಡಿಲ್ರಿ. ಆಕಿಗ ನೋವಾದ್ರ  ನನಗ ತಡಿಯೂದಿಲ್ರಿ. ತಪ್ತಿಳೀಬ್ಯಾಡ್ರಿ" ಎಂದು ನೇರ ಕಾಲಿಗೆ ಬಿದ್ದ.  ಇತರೇ ಪೇಷಂಟ್  ಗಳ ಮುಂದೆ ನನಗೆ ಬಹಳ ಇರುಸುಮುರುಸಾಯಿತು. ಅವನನ್ನೆಬಿಸಿ ಒಂದೆರಡು ಮಾತನಾಡಿ ಅವನ ಹಣ ನಿರಾಕರಿಸಿ ಕಳಿಸಿಕೊಟ್ಟೆ.

"ನಾಳಿ ಬಂದು ನಿಮ್ಮ ಅಂಗಳ ಸ್ವಚ್ಛ ಮಾಡಿ ಕೊಡ್ತೀನ್ರಿ " ಎಂದು ಹೇಳಿ ಹೋದ.

ಅವನು ಬರುತ್ತಾನೆಂಬ ನಂಬಿಕೆ ನನಗಿರಲಿಲ್ಲ. ಆದರೆ ಎರಡುದಿನದ ನಂತರ ಒಂದು ಬೆಳಗ್ಗೆ ಕೈಲಿ ಕುಡುಗೋಲು ಹಿಡಿದು ಅಜ್ಜ ಅಜ್ಜಿ ಮನೆಮುಂದೆ ಹಾಜರಾದರು.

ನನ್ನನ್ನು ಕಂಡಕೂಡಲೇ ಅಜ್ಜ "ಹಲ್ಲು ಬೇಸಾತ್ರಿ ಸಾಯೇಬ್ರ, ಭಾಳ ಉಪಕಾರಾತ್ರಿ" ಎಂದು ನೆಲಮುಟ್ಟಿದ. ಅಜ್ಜಿಯನ್ನು ನೆರಳಿನಲ್ಲಿ ಕೂಡಿಸಿ ಕೆಲಸಕ್ಕೆ ತೊಡಗಿದ. ಅಂಗಳದಲ್ಲಿ ಬೆಳದಿದ್ದ ಕಳೆಕಿತ್ತು, ಗಿಡಗಳಿಗೆ ಪಾತಿಮಾಡಿ, ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ರೆಂಬೆ ಕೊಂಬೆಗಳನ್ನು ಕತ್ತರಿಸಿ, ಬಾಗಿದ್ದ ಗಿಡ, ಬಳ್ಳಿಗಳನ್ನು ಆಸರೆ ಕೊಟ್ಟು ನಿಲ್ಲಿಸಿ, ಕಸಗುಡಿಸಿ ನಮ್ಮ 'ತೋಟ'ವನ್ನೊಂದು ರೂಪಕ್ಕೆ ತಂದುನಿಲ್ಲಿಸಿದ.ಕುಕ್ಕುರುಗಾಲಿನಲ್ಲಿ ಕೂತು ಮೂರುಗಿಡಗಲಿಗೆ ಪಾತಿಮಾಡಿದರೆ ನನಗೆ ಮೂರುದಿನ ಸೊಂಟ ಹಿಡಿದುಕೊಳ್ಳುತ್ತದೆ.  ಮೂವತ್ತು ಪಾತಿಮಾಡಿದ್ದ ಅಜ್ಜ. ನಾನು ನಾಚಬೇಕಾದ್ದೆ. ನಮ್ಮಲ್ಲೇ ಊಟ ಮುಗಿಸಿ, ಕೆಲಸ ಮುಗಿಸಿ, ಹೊರಟವನು ನಾನು ಕೊಡಹೋದ ಹಣವನ್ನು ಕೊಳ್ಳಲೇ ಒಲ್ಲ. ಬಲವಂತವಾಗಿ ಅವನಿಗೆ ಸಲ್ಲಬೇಕಾದಕ್ಕಿಂತ ಇಷ್ಟು ಹೆಚ್ಚೇ ಹಣ ಕೊಟ್ಟು ಜತೆಗೆ ಹಬ್ಬದ ಸಮಯವಾದದ್ದರಿಂದ 'ಹಿರಿ ಮುತ್ತೈದೆ' ಗೆಂದು ಅಕ್ಕಿ, ಸೀರೆ ಕೊಟ್ಟು ಕಳಿಸಿಸಿದಳು ನನ್ನ ಪತ್ನಿ.

ಅಂದಿನಿಂದ ಸುರುವಾದದ್ದು ನನ್ನ, ಅಜ್ಜನ ಸ್ನೇಹ. ಕೆಲಸವಿಲ್ಲದಿದ್ದರೂ ಆಗಾಗ ಬರುತ್ತಾನೆ. ಅದೂ ಇದೂ ಮಾತನಾಡುತ್ತನೆ. ಅವನ ಬೊಚ್ಚುಬಾಯಿಯ ಉತ್ತರ ಕರ್ನಾಟಕದ ಧಾಟಿ ನನಗೆ ತಿಳಿಯುವುದು ಕಠಿಣ ವಾದರೂ ಹೆಚ್ಚೂ ಕಡಿಮೆ ಗೊತ್ತಾಗುತ್ತದೆ. ಅಜ್ಜನ ಮಗನೊಬ್ಬನಿದ್ದಾನಂತೆ. ಕುಡಿದು ಹಾಳಾಗಿ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದನೆ ಅಷ್ಟೆ. ಅವನೊಡನೆ ಬಾಳಲಾರದೆ   ಸೊಸೆ ಮನೆಬಿಟ್ಟು ಹೋಗಿದ್ದಾಳೆ. ಈ ಮೊಮ್ಮಗಳು ಅಜ್ಜನ ಪಾಲಿಗೆ. ಅಜ್ಜ ಅಜ್ಜಿ , ಅಲ್ಲಿ ಇಲ್ಲಿ ಮಾಡುವ ಕೆಲಸದಿಂದ ಹೇಗೋ ಮೂರೂಜನರ ಹೊಟ್ಟೆ ಬಟ್ಟೆ ಸಾಗುತ್ತದೆ.

ಅಜ್ಜ ಬಂದಾಗಲೆಲ್ಲ ಅವನಕೈಗೆ ಒಂದಿಷ್ಟು ಕಾಸು ಕೊಟ್ಟಿರುತ್ತೇನೆ. "ಬ್ಯಾಡ್ರಿ, ಬ್ಯಾಡ್ರಿ , ನಿಮ್ ಋಣ ಹೆಚ್ಚಾತ್ರಿ"  ಎಂದು ತೆಗೆದುಕೊಳ್ಳುತ್ತಾನೆ. ಅವನ ಕಣ್ಣಿನ ಆಪರೇಷನ್ ಆಗಬೇಕಾಗಿದ್ದಾಗ ಔಷಧಗಳನ್ನು ಕೊಡಿಸಿದ್ದೆ. ಅದಾದ ಕೆಲವುದಿನಗಳಲ್ಲಿ ಅವನು ಬಂದಿದ್ದಾಗ ನನ್ನ ಪತ್ನಿ ಅವನಿಗೆ ಚಾ ತಂದುಕೊಟ್ಟಳು. "ಕಣ್ಣು ಚಲೋ ಆತ್ರಿ. ದ್ಯಾವರಂತಾ ಮನಿಷಾರಿದ್ದಾರ್ರಿ " ಎಂದು ನನ್ನ ಕಡೆ ಕೈತೋರಿಸಿದ. "ನೀನೇ ಹೇಳಬೇಕು ಅದನ್ನು" ಎಂದು ನನ್ನ ಮೂತಿ ತಿವಿದಳು ಅವಳು.

ಅಜ್ಜ ನನಗೆ ಪರಿಚಯವಾಗಿ ಈಗ  ಐದು ವರುಷದ ಮೇಲಾಯಿತು. ಮೊನ್ನೆ ಇನ್ನೂ ಹದಿನಾಲ್ಕು ತುಂಬದ ಬುಧ್ಧಿಗೇಡಿ ಮೊಮ್ಮಗಳು ಯಾರನ್ನೋ 'ಪ್ರೀತಿಸಿ' ಮದುವೆಯಾಗುತ್ತೇನೆಂದಿತು. ಘಾಬರಿಯಾದ ಅಜ್ಜ 'ತಾಬಡ್ತೋಬ್' ಅದನ್ನೊಯ್ದು ಊರಿನಲ್ಲಿ ತನ್ನ ಮಗಳ ಬಳಿ ಬಿಟ್ಟು ಬಂದ. ಈಗ ಮತ್ತೆ ಇಲ್ಲಿ ಅಜ್ಜ ಅಜ್ಜ್ಜಿ ಇಬ್ಬರೇ.

ಈ ಅಜ್ಜ ಮರಹತ್ತುವುದನ್ನು ತಪ್ಪಿಸಲು ನಾನು ಮರಹತ್ತಲೇ ಬೇಕಾಯಿತು. ಹತ್ತಿದ್ದೇನೋ ಸಾರ್ಥಕವಾಯಿತು ಬಿಡಿ. ಮೈ, ಕೈ, ಕೂದಲೆಲ್ಲಾ ಅಂಟು, ಗಂಟಾದರೂ ಸುಮಾರು ನಲವತ್ತು ಕಾಯಿ ಸಿಕ್ಕಿತು.


ಕೈ ಕೆಸರಾದರೆ ಬಾಯಿ ಮೊಸರು.



ನಾನು ಆ ಕೆಲಸ ಮಾಡುತ್ತಿದ್ದಾಗ ಹಿಂಬದಿಗೆ ಹೋದ ಅಜ್ಜ ಬಾಳೆಗೊನೆ ಕಂಡು ಅದನ್ನು ಕೊಯ್ದು ತಂದುಬಿಟ್ಟ. ಕಾಯಿ ಇನ್ನೂ ಬಲಿತಿರಲಿಲ್ಲವೆಂದ ನನ್ನಾಕೆಗೆ "ನಿಮಗೆ ತಿಳಿಯಾಂಗಿಲ್ಲ ಬಿಡ್ರಿ  ಅಕ್ಕಾರೆ"  ಎಂದುಬಿಟ್ಟ. "ಈ ಅಜ್ಜನನ್ನು ಬಹಳ ಹೆಚ್ಚಿಸಿ ಕೂಡಿಸಿದ್ದೀರಿ ನೀವು" ಎಂದು ದೂರಿದಳು ಅವಳು.

ಹಾಗೆ ಕಿತ್ತಿಟ್ಟ ಸಪೋಟ, ಬಾಳೆಕಾಯಿಗಳು ನಾಲ್ಕು ದಿನವಾದರೂ ಹಣ್ಣಾಗುವ ಸೂಚನೆಯೇ ಕಂಡುಬರಲಿಲ್ಲ. ತನ್ನ ಸಪೋಟ ಹಣ್ಣಾಗದೆ ಉಳಿದದ್ದನ್ನು ಪಕ್ಕಕ್ಕೆ ಸರಿಸಿ, ನನ್ನ ಪತ್ನಿ "ನಿಮ್ಮ ಅಜ್ಜನಿಗೆ ಬಾಳೆಗೊನೆ ತೋರಿಸಿ. ಬೇಡವೆಂದರೂ ಕಿತ್ತಿಟ್ಟ. ಪಲ್ಯ ಮಾಡಬೇಕಷ್ಟೆ" ಎಂದಳು.

ಕೈಕೆಸರಾದದ್ದಷ್ಟೇ ಭಾಗ್ಯ ಎಂದುಕೊಳ್ಳುತ್ತಿರುವಂತೆಯೇ ಮೊನ್ನೆ ಬೆಳಗ್ಗೆ ಎದ್ದು ನೋಡುವಾಗ ಒಂದು ಡಜನ್ ಸಪೋಟ ಕಾಯಿಗಳು ಸದ್ದಿಲ್ಲದೇ ಹಣ್ಣಾಗಿ ಘಮಘಮಿಸಿದ್ದವು. ಹಾಗೆಯೇ ಗೊನೆಯ ಕೆಳಗಿನ ಅರ್ಧಭಾಗದ ಬಾಳೆಕಾಯಿಗಳು ಹಳದಿಬಣ್ಣಕ್ಕೆ ತಿರುಗಿದ್ದವು. ಪ್ರಕೃತಿಗೆ ಎದುರಿಲ್ಲ!

ಇದನ್ನು ಕಂಡೇ ಡಿ ವಿ ಜಿ ಯವರೆಂದದ್ದು  "ಫಲ ಮಾಗುವಂದು ತುತ್ತೂರಿದನಿಯಿಲ್ಲ"





ನಮ್ಮಲ್ಲಿ ಮತ್ತೊಂದು ಮಾತುಂಟು. "ಹಣ್ಣು ಹಂಚಿತಿನ್ನು, ಹೂವು ಕೊಟ್ಟು ಮುಡಿ" ಎಂದು. ಅದರಂತೆ ಹಣ್ಣು ಹಂಚಲು ಹೊರಟೆ. ನಮಸ್ಕಾರ. 








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ