ಕರಾವಳಿಯ ಮಳೆಗಾಲವೆಂದರೆ, ನಮ್ಮ ಒತ್ತಾಯಪೂರ್ವಕವಾದ ಆಹ್ವಾನಕ್ಕೆ ಮಣಿದು, ಮನೆಗೆ ಆಗಮಿಸಿ ಮನಸ್ಸಂತೋಷಪಡಿಸಿದ ಅತಿಥಿಯಂತೆ. ಬರದೆ, ಬರದೆ ಬಂದ ಅತಿಥಿ ಹಾಗೆಯೇ ತಳವೂರಿ, ಹೊರಡುವ ಸೂಚನೆಗಳೇ ಕಾಣದಾದರೆ?
ಬೇಸಗೆಯ ಕೊನೆಯ ಹೊತ್ತಿಗೆ ಧಗೆ ಸಹಿಸಿ ಸಾಕುಸಾಕಾಗಿ, ಕಪ್ಪುಮೋಡ, ಮಿಂಚು ಕಂಡಾಕ್ಷಣ ಕುಣಿಯುವಂತಾಗುತ್ತದೆ. ಕಾಣಿಸಿಕೊಂಡ ಮೋಡ, ಮಿಂಚು, ಬರಿಯ ಬೆಳಕು-ಸದ್ದಿನ ಆಟತೋರಿಸಿ ಮಾಯವಾಗಿ, ನಂತರ ಒಂದೆರಡು ಹನಿ ಮಳೆಬೀಳಿಸಿ ಧಗೆಯನ್ನು ಹೆಚ್ಚಿಸುತ್ತದೆ. ಪತ್ರಿಕೆಗಳಲ್ಲಿ, ಟೀವಿಯಲ್ಲಿ, ಮುಂಗಾರಿನ ಸುದ್ದಿ ಕಾಣತೊಡಗಿ ಇಂದು, ನಾಳೆ, ಬಂತು, ಇಲ್ಲ ಎಂದು ವಾರ-ಎರಡುವಾರ ಕಳೆದನಂತರ ಒಂದುದಿನ ಸುರಿಯತೊಡಗುವ ಮಳೆ ದಿನಪೂರ್ತಿ ಸುರಿದು ಧೂಳಿನಿಂದ ತುಂಬಿದ ಮರ, ಗಿಡ, ರಸ್ತೆ, ಕಟ್ಟಡಗಳನ್ನೆಲ್ಲಾ ತೊಳೆದು ಹವೆಯನ್ನು ತಂಪಾಗಿಸುತ್ತದೆ. ಪರಿಸರ ಅಹ್ಲಾದಕರವಾಗಿ ಜೀವಕ್ಕೆ ಹಾಯೆನಿಸುತ್ತದೆ. ಹೀಗೆ ಹಿತತಂದ ಮಳೆ ವಾರಗಟ್ಟಲೇ ಸುರಿಯುತ್ತಲೇ ಉಳಿದು, ಸೂರ್ಯನ ಕಿರಣಗಳ ದರ್ಶನವೇ ಇಲ್ಲದಾಗಿ, ಮನೆಯೆಲ್ಲಾ ಒದ್ದೆಬಟ್ಟೆ, ಮುಗ್ಗಲುವಾಸನೆ ತುಂಬಿ ಬಾಗಿಲ ಹೊರಗೆ ಒದ್ದೆ ಚಪ್ಪಲಿ, ಒದ್ದೆಛತ್ರಿ ಗುಪ್ಪೆಯಾದಾಗ ಎಂದಿಗೆ ಮಳೆಕೊನೆಯಾದೀತೋ ಎನಿಸುತ್ತದೆ.
ಅದೇನೇ ಇರಲಿ, ನನಗಂತೂ ಮಳೆ ಬಿದ್ದಷ್ಟೂ ಕಡಿಮೆಯೇ.
ನನ್ನ ಸುತ್ತಲಿನ ಪರಿಸರ ಬಹುಮಟ್ಟಿಗೆ ಕಾಂಕ್ರೀಟ್ ಕಾಡಾದರೂ, ಅಲ್ಲಲ್ಲಿ, ಇನ್ನೂ ಕಣ್ಣಿಗೆ ತಂಪೆನಿಸುವ ಹಸಿರು ಹೊನ್ನೂ ಉಳಿದಿದೆ. ಮಳೆ ಪ್ರಾರಂಭವಾಗುತ್ತಿದ್ದಂತೆ, ಉಳಿದಿರುವ ಹಸಿರಿಗೆ ಹೊಸಜೀವ ಬರುತ್ತದೆ. ಹಸಿರಿನ ಸಾಮ್ರಾಜ್ಯ ಒಂದಕ್ಕೆ ಎರಡಾಗಿ ಎಲ್ಲೆಡೆ ಹರಡುತ್ತದೆ. ಕೊರಡು ಕೊನರುತ್ತದೆ. ಕೊರಡಷ್ಟೇ ಏಕೆ, ಕಾಂಪೌಂಡ್ ಗೋಡೆಯ ಚಿರೆ ಇಟ್ಟಿಗೆಯೂ ಕೊನರುತ್ತದೆ.
ಮುಂಜಾನೆಯ ಥಣ್ಣನೆಯ ಹವೆಯಲ್ಲಿ, ಮಧ್ಯೆ ಮಧ್ಯೆ ರಭಸಗೊಳ್ಳುವ ಜಿಟಿ ಜಿಟಿ ಮಳೆಯಲ್ಲಿ ನಾನು ಪ್ಲಾಸ್ಟಿಕ್ ಚಪ್ಪಲಿ ಮೆಟ್ಟಿ, ಛತ್ರಿ ಹಿಡಿದು ಸಂಚಾರಕ್ಕೆ ಹೊರಟುಬಿಡುತ್ತೇನೆ. "ಈ ಮಳೆಯಲ್ಲಿ ಏನು ವಾಕಿಂಗ್ ನಿಮ್ಮದು? ಹುಚ್ಚು. ಹೋಗದಿದ್ದರೆ ಅದ್ಯಾವ ದೇವರು ಅಳುತ್ತಾನೆ?" ಎನ್ನುತ್ತಾಳೆ ನನ್ನಾಕೆ. ನಿಜವೇ. ನಸುಗತ್ತಲಿನ ಚಳಿಯಲ್ಲಿ, ಹೊರಗೆ ಬೀಳುತ್ತಿರುವ ಮಳೆಯ ಶಬ್ದ ಕೇಳುತ್ತಾ ಮತ್ತಷ್ಟು ಹೊದ್ದು ಮುದುರಿ ಮಲಗುವುದು ಬಿಟ್ಟು, ಚಳಿಯನ್ನೂ ಮಳೆಯನ್ನೂ ಸಹಿಸಿಕೊಂಡು ಹವೆಯನ್ನೂ ಹಸಿರನ್ನೂ ಅನುಭವಿಸುತ್ತೇನೆಂದು ಹೊರಹೊರಡಬೇಕಾದರೆ ಹುಚ್ಚಿದ್ದರೇನೇ ಸಾಧ್ಯ.
ಸ್ವಛ್ಚವಾದ ಖಾಲಿ ರಸ್ತೆಯಲ್ಲಿ ಸುತ್ತಮುತ್ತ ನೋಡುತ್ತಾ, ಮುಖಕ್ಕೆ ಸಿಡಿಯುವ ತುಂತುರನ್ನು ಅನುಭವಿಸುತ್ತಾ ನಡೆಯುವಾಗ, ಆಗೊಮ್ಮೆ ಈಗೊಮ್ಮೆ ರಭಸದಿಂದ ನುಗ್ಗಿ ನೀರೆರಚುವ ವಾಹನಗಳಕಡೆ ಲಕ್ಷ್ಯವಿಡಬೇಕಾದ್ದೊಂದೇ ಕಿರಿಕಿರಿ. ರಸ್ತೆಗೆಲ್ಲಾ ನಾನೊಬ್ಬನೇ.
ಬೇಸಗೆಯ ದಿನಗಳಲ್ಲಿ ರಸ್ತೆಯಲ್ಲಿ ಕಾಣುವ ಪತಿಪತ್ನಿಯರಾಗಲೀ, ಮನೆಯಲ್ಲಿಲ್ಲದ "ಪ್ರೈವಸಿ"ಯನ್ನು ರಸ್ತೆಯಲ್ಲಿ ಪಡೆದು ಮುಂಬೆಳಗೇ ಮೊಬೈಲಿನಲ್ಲಿ ಮಾತಾಡುತ್ತಾ ನಾಚಿನಡೆಯುವ ಬೆಡಗಿಯಾಗಲೀ, ಫುಟ್ಬಾಲ್ ಒದೆಯುತ್ತಾ ರಸ್ತೆಯಲ್ಲಿ ಓಡುವ ತುಂಟರಾಗಲೀ ಅಥವಾ ಫಿಟ್‍ನೆಸ್ ಬಂಟರಾಗಲೀ ಯಾರೂ ಇಲ್ಲ. ಇಷ್ಟೇ ಏಕೆ, ನಾಲ್ಕರ ಹೊತ್ತಿಗೇ ಎದ್ದು ಗಂಟಲು ಸರಿಪಡಿಸಿಕೊಂಡು, ಐದರ ಸಮಯಕ್ಕೆ ಪ್ರಪಂಚವನ್ನೆಬ್ಬಿಸುವ ಹಕ್ಕಿಗಳು ಸಹ ಇನ್ನೂ ನಿಶ್ಯಬ್ದವಾಗಿವೆ. ನನ್ನಂಥ ಹುಚ್ಚುಹಕ್ಕಿಯೊಂದು ಅಕಸ್ಮಾತ್ ಎದ್ದು ಕೂಗಿಟ್ಟು, ಪತ್ನಿಯ ಕೊಕ್ಕಿನಿಂದ ಪಕ್ಕೆ ತಿವಿಸಿಕೊಂಡು ಮತ್ತೆ ಮಲಗುತ್ತದೆ.
ಪ್ರತಿಮುಂಜಾನೆ ಸೈಕಲ್ಲಿನ ಮೇಲೆ ರೊಟ್ಟಿಯ ಬುಟ್ಟಿ ಕಟ್ಟಿ, ಮನೆಮನೆಯ ಮುಂದೆ ಪೊಂಯ್,ಪೊಂಯ್ ಎನ್ನುತ್ತಾ ಮನೆಯವರನ್ನೆಚ್ಚರಿಸಿ ರೊಟ್ಟಿ ಸಪ್ಲೈಮಾಡುವ "ಪಾವ್ ವಾಲ" ತಾನು ಪ್ಲಾಸ್ಟಿಕ್ ಟೊಪ್ಪಿತೊಟ್ಟು, ತನ್ನ ಬುಟ್ಟಿಗೆ ಪ್ಲಾಸ್ಟಿಕ್ ಹಾಳೆ ಹೊದಿಸಿ ಸೈಕಲ್ ತುಳಿಯುತ್ತಿದ್ದಾನೆ. ಹಾಲಿನಾತನಿಗೆ ಹಾಲಿನ ಪ್ಯಾಕೆಟ್ಟುಳನ್ನು ತುಂಬಿ ತಲೆಯಮೇಲೆ ಹೊತ್ತಿರುವ ಪ್ಲಾಸ್ಟಿಕ್ ಡಬ್ಬವೇ ಛತ್ರಿ. ಹೊಟ್ಟೆಪಾಡಿಗಾಗಿ ಹೊರಬಂದ ಇವರಿಗೆ ಬಹುಶಃ ಮಳೆಯೊಂದು ಕಾಟ.
ಒಂದೆರಡುವಾರ ಮಳೆಬಿದ್ದಿತೆಂದರೆ ಎಲ್ಲಕಡೆಯೂ ಹಸಿರುಜಿಗಿಯುತ್ತದೆ. ರಸ್ತೆಯ ಪಕ್ಕದ ಮಣ್ಣು ಹಸಿರಾಗುತ್ತದೆ. ಇಟ್ಟಿಗೆಯ ಗೋಡೆ ಹಸಿರಾಗುತ್ತದೆ. ಸೊಂಪಾಗಿ ಚಿಗುರುವ ಮರಗಳನ್ನು ಅವುಗಳಿಗಿಂತ ಬೇಗ ಹರಡುವ ಬಳ್ಳಿಗಳು ಆವರಿಸಿಕೊಂಡು, ಕಾಂಡ ಕೊಂಬೆಗಳೆಲ್ಲವನ್ನೂ ಮುಚ್ಚಿಹಾಕಿ ಹಸಿರುಗುಮ್ಮನೋ, ಗುಪ್ಪೆಯೋ ಆಗುವಂತೆ ಮಾಡುತ್ತವೆ. ನೆಲದಿಂದ ಮರಕ್ಕೇರುವ ಬಳ್ಳಿಗಳು ಹಸಿರುಕಂಬಗಳಂತೆ ಕಾಣುತ್ತವೆ.href="https://blogger.googleusercontent.com/img/b/R29vZ2xl/AVvXsEiGDDE21dSSQX_VSewUphNBU-kzTud9TlSAyQb3IGdXAN6wUo6-qrPpaGLOb3mynqUu23VeUkRENLN0X7B1bO6yW4oN2NT1sDHbqbse0F-1ttP5GyMtBw3YCO3yrvTcjBGdLgWh13D-RBE4/s1600-h/DSCN3216.JPG"> ಇಲೆಕ್ಟ್ರಿಕ್ ಕಂಬಗಳು ಮಿನಿ ಮರಗಳಾಗಿ, ಇಲೆಕ್ಟ್ರಿಕ್ ತಂತಿಗಳು ಹಸಿರು ತೋರಣಗಳಾಗುತ್ತವೆ. ರಸ್ತೆಪಕ್ಕದ ತಗ್ಗಿನಲ್ಲಿ ನಾವು ವರುಷ ಪೂರ್ತಿ ತುಂಬಿರುವ ಕೊಳಕನ್ನೆಲ್ಲಾ ಪ್ರಕೃತಿ ಮುಚ್ಚಿ, ಹಸಿರುಹಾಸಾಗಿಸುತ್ತದೆ.ಜನವಸತಿಯಿಂದ ಕೊಂಚ ದೂರಬಂದರೆ ಎಲ್ಲೆಲ್ಲೂ ಹಸಿರಿನ ಹಿಡಿತವಿಲ್ಲದ ನರ್ತನ ಕಾಣಸಿಗುತ್ತದೆ.
ಛತ್ರಿಹಿಡಿದು ನಡೆಯುತ್ತಾ, ಮಧ್ಯೆ ಮಧ್ಯೆ ಹುಚ್ಚನಂತೆ ಛತ್ರಿ ಮುಚ್ಚಿ ಓಡುವ ಬಿಳಿತಲೆಯ ಮುದಿಯುವಕನನ್ನು ಬೆಚ್ಚಗಿನ ಕಿಟಕಿಯೊಳಗಿಂದ ಪ್ರಪಂಚ ಆಕಳಿಸುತ್ತಾ ನೋಡುತ್ತದೆ.
ನಾವು ಪ್ರಕೃತಿಯೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ,ಮಳೆ ಎಷ್ಟುದಿನವೋ, ಹಸಿರು ಎಷ್ಟುದಿನವೋ ಯಾರಿಗೆ ಗೊತ್ತು? ಓಡಾಡುವ ಕಾಲು ನೋಡುವ ಕಣ್ಣುಗಳೂ ಅಷ್ಟೆಯೇ. ಈ ಪ್ರಪಂಚದಲ್ಲಿ ಯಾವುದೂ ನೆಚ್ಚಿಗೆಯಿಲ್ಲ ಅಲ್ಲವೇ? ಎಲ್ಲವೂ ಇರಬೇಕಾದಂತೆ ಇರುವಾಗ ನಾನಂತೂ ನೋಡಿ, ನಡೆದು, ಸಂತೋಷಪಡುತ್ತೇನೆ.
ಒಂದು ಘಂಟೆಯಕಾಲ ನಡೆದು ಮಳೆಗಾಲಕ್ಕೆಂದು ಕೊಂಡ ಹೊಸ ಪ್ಲಾಸ್ಟಿಕ್ ಚಪ್ಪಲಿ ಕಚ್ಚಿದ ಕಡೆ ಉರಿಯಲು ಶುರುವಾದಾಗ ಮನೆಯಕಡೆ ತಿರುಗುತ್ತೇನೆ. ಹತ್ತಿರದ ಇಗರ್ಜಿಯ ಘಂಟಾನಾದ ಇಗರ್ಜಿ ಎದ್ದಿದೆಯೆಂದು ಸಾರುತ್ತಿದೆ. ಮಳೆಯ ಕಿರಿಕಿರಿಯನ್ನು ಮೀರುವ ದೈವಭಕ್ತಿಯುಳ್ಳವರು ಒಬ್ಬಿಬ್ಬರು ಮುಂಜಾನೆಯ ಪ್ರಾರ್ಥನೆಗೆ ಹೊರಟು ಗೇಟುತೆಗೆದು ಎಚ್ಚರದಿಂದ ರಸ್ತೆಗಿಳಿಯುತ್ತಿದ್ದಾರೆ.
ಮಳೆತಂದಿರುವ ಹಸಿರು ಹೊನ್ನನ್ನುಕಂಡು ಖುಶಿಪಡುವ ಉತ್ಸುಕತೆಯಲ್ಲಿ ಮನೆಯಿಂದ ಹೊರಡುವಾಗ ಬೀಗದಕೈ ಮರೆತು ಬಾಗಿಲೆಳೆದುಕೊಂಡು ಹೊರಟಿದ್ದ ನಾನು, ಮನೆಯ ಕರೆಘಂಟೆ ಬಾರಿಸಿ, ನಿದ್ದೆಮುರಿದೆದ್ದ ಕೆಂಗಣ್ಣುಗಳನ್ನು ಎದುರಿಸಲು ಸಜ್ಜಾಗುತ್ತೇನೆ.
ಮನೆ ಹಿತ್ತಲಲ್ಲಿ ಇಂಥ ಹಸಿರು ನೋಡಲು ನೀನು ನಿಜವಾಗಲೂ ಪುಣ್ಯವಂತ. ಫ಼ೋಟೋಗಳು ತುಂಬಾ ಚನ್ನಾಗಿವೆ. ಪ್ರಾಯಶಃ ನನ್ನ ಪುಣ್ಯ ಚನ್ನಾಗಿದ್ದರೆ ನಾನೂ ಅಲ್ಲಿಗೆ ಈ ಸಾರಿ ಬರುತ್ತೇನೆ.
ಪ್ರತ್ಯುತ್ತರಅಳಿಸಿ