ನನ್ನ ಹಾಡುಗಾರಿಕೆ.
ಛಳಿ ಮುಗಿದು ಬೇಸಗೆ ಕಾಲಿಟ್ಟಿರುವುದು ಗೊತ್ತಾಗುತ್ತಿದೆ. ಆದರೂ ಮುಂಜಾನೆ ಸೂರ್ಯ ಮೂಡುವ ಮೊದಲು ಹಾಗೂ ಸಂಜೆ ಸೂರ್ಯ ಮುಳುಗಿದನಂತರ ಕೊಂಚ ತಂಪಾಗಿರುತ್ತದೆ. ಒಂದುವೇಳೆ ಮನೆಯೊಳಗೆ ಸೆಖೆಯೆನ್ನಿಸಿದರೂ ಹೊರಗೆ ತಂಪು. ರಾತ್ರಿ ಊಟವಾದನಂತರ ಹೊರಗಿನ ಹಿತಕರವಾದ ಹವೆಯಲ್ಲಿ ಕೊಂಚ ಅಡ್ಡಾಡೋಣವೆನ್ನಿಸಿತು. ಕೆಳಗಿಳಿದು ಹೊರಗೆ ಬಂದೆ. ನನ್ನ ಪತ್ನಿ ಕೋಣೆಯಲ್ಲಿ ಟೀವಿ ನೋಡುತ್ತ ಕುಳಿತಳು.
ನಾನು ಹೊರಗೆ ಬಂದಾಗ, ಗಿಡಗಳ ಪಾತಿ ಒಣಗಿದಂತೆ ಕಂಡುಬಂದು, ಒಂದೈದು ನಿಮಿಷ ಕೆಲವು ಸಣ್ಣ ಗಿಡಗಳಿಗೆ ನೀರು ಹಾಕಿ ನಂತರ ರಸ್ತೆಗೆಬಂದೆ. ನಮ್ಮ ಮನೆಯ ಮುಂದಿನ ದಾರಿಯಲ್ಲಿ ಕತ್ತಲಾದಬಳಿಕ ಯಾವುದೇ ಓಡಾಟವಿಲ್ಲ. ಆಗೊಂದು ಈಗೊಂದು ಇಲಿಯೋ ಹೆಗ್ಗಣವೋ ಅಕ್ಕ ಪಕ್ಕ ಸರಿದಾಡೀತಷ್ಟೆ. ಹಿತಕರವಾದ ಹವೆಯಲ್ಲಿ ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡತೊಡಗಿದಂತೆ ಮನಸ್ಸಿಗೆ ಹಿತವೆನಿಸಿ ಬಾಯಿಗೆ ಬಂದ ಗೀತೆಗಳ ಒಂದೆರಡು ಸಾಲುಗಳನ್ನು ಗುನುಗತೊಡಗಿದೆ.
ಹಾಗೆಯೇ ಲಹರಿಬಂದು ಒಂದು ದಾಸರಪದ ನೆನಪಾಗಿ ಅದನ್ನು ನನಗಿಷ್ಟವಾದ ಶೈಲಿಯಲ್ಲಿ ಸ್ವಲ್ಪ ಮೇಲುದನಿಯಲ್ಲೇ ಹಾಡತೊಡಗಿದೆ. ಅದರ ಕೆಲವು ಸಾಲುಗಳನ್ನು ಇನ್ನೂ ದೊಡ್ಡದನಿಯಲ್ಲಿ ಹಾಡಿದರೆ ಚಂದವೆನಿಸಿ ದನಿ ಇನ್ನೂ ಮೇಲೇರಿಸಿದೆ. ಹೇಗೂ ದಾಸರಪದಗಳನ್ನು ರಸ್ತೆಯಲ್ಲಿ ಹಾಡುವುದಕ್ಕೆಂದೇ ಬರೆದದ್ದಲ್ಲವೇ? ಅಷ್ಟೇ ಅಲ್ಲದೆ ಮನೆಯಲ್ಲಿ ನಾನು ಯಾವಾಗಲಾದರೂ ಪದವೊಂದನ್ನು ಹೀಗೆ ಹಾಡತೊಡಗಿದರೆ ಒಂದು ಕೋಣೆಯಿಂದ "ಸಾಕು. ಸೀರಿಯಲ್ ದು ಮಾತೇನೂ ಕೇಳುತ್ತಿಲ್ಲ" ಎಂದೂ ಮತ್ತೊಂದು ಕೋಣೆಯಿಂದ "ಅಪ್ಪಾ ಫೋನ್ ನಲ್ಲಿ ಮಾತಾಡ್ತಾ ಇದೀನಿ" ಎಂದೂ ದನಿಗಳು ಕೇಳಿಬರುತ್ತವೆ. ರಸ್ತೆಯಲ್ಲಿ ಯಾರದೂ ಅಡ್ಡಿ ಆತಂಕಗಳಿಲ್ಲದೆ ನನ್ನ ಗಂಟಲು ಸರಾಗವಾಗಿ ಮೇಲೇರಿತು.
ಪಕ್ಕದ ಮನೆಯೊಂದರ ಕಿಟಕಿಯ ಬಾಗಿಲು ತೆರೆದು ತಲೆಯೊಂದು ಕಂಡುಬಂದು ನನ್ನೆಡೆ ತಿರುಗಿನೋಡಿ ಮತ್ತೆ ಒಳಹೊಕ್ಕು ಕಿಟಕಿ ಮುಚ್ಚಿಕೊಂಡಿತು. ನನ್ನ ದನಿ ಅಡಗಿತು. ನಿಶ್ಯಬ್ದವಾಗಿ ಮನೆಯೊಳಗೆ ಬಂದೆ.
ನನ್ನ ಪತ್ನಿ ಕೋಣೆಯಿಂದ ಹೊರಬಂದಳು. "ಅದೇನು ರಸ್ತೆಯಲ್ಲಿ ಶಬ್ದ? ಹೊರಗೆ ಹೋಗಿ ಹಾಡ್ತಾ ಇದ್ರಾ? ಏನಾಗಿದೆ ನಿಮಗೆ? ಅದೇನೋ ನೀರು ಹರಿದ ಹಾಗೆ ಬೇರೆ ಕೇಳ್ತಾ ಇತ್ತು?"
ಒಂದು ಒಳ್ಳೆಯ ವಾಕ್ಯ ತಲೆಗೆ ಹೊಳೆಯಿತು. ಹೇಳಿದೆ "ನೀರಿನ ಶಬ್ದಾನಾ? ಅದು ರಸ್ತೆಯಲ್ಲಿ ಸಂಗೀತದ ರಸಗಂಗೆ ಹರಿಯುತ್ತಿದ್ದ ಶಬ್ದ."
ಅಷ್ಟರಲ್ಲಿ ನನ್ನ ಮಗ ಹೊರಗೆ ಬಂದ "ಅಮ್ಮಾ ಮೊದಲು ಕೇಳಿದ ನೀರಿನ ಶಬ್ದ ರಸಂಗೀತದ ರಸಗಂಗೆ. ಅಮೇಲೆ ಕೇಳಿತಲ್ಲಾ ಪ್ರವಾಹದ ಶಬ್ದ, ಅದು, ಆ ಸಂಗೀತದ ರಸಗಂಗೆಯನ್ನು ಸವಿದವರ ಕಣ್ಣಿನಿಂದ ಹರಿದ ಗಂಗಾಭವಾನಿ."

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ