ಶ್ರೀ ಪಿ ಕಾಳಿಂಗರಾಯರ ಭೋರ್ಗರೆಯುವ ಗಾಯನದ ಮೂಲಕ
ಎಲ್ಲರಿಗೂ ಪರಿಚಿತವಾದ ಒಂದು ಪುರಂದರದಾಸರ ರಚನೆ ಅವರ
‘ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ’ ಗೀತೆ. ದಾಸರ
‘ಗೂಢಾರ್ಥ’ ಗೀತೆಗಳ ಸಾಲಿಗೆ ಸೇರುವ ಈ ಕೃತಿಯ ಹಿಂದಿನ
ಭಾವ ಬಹುಜನರಿಗೆ ತಿಳಿದಿರಲಾರದು. ದಾಸ ಸಾಹಿತ್ಯದ ಬಗ್ಗೆ
ಓದಿ, ಕೇಳಿ, ನಾನು ತಿಳಿದುಕೊಂಡದ್ದನ್ನು ಈಗ ತಮ್ಮ ಮುಂದಿರಿಸುತ್ತಿದ್ದೇನೆ.
ಇಲ್ಲಿ ಮಾಡು ಏನು ಮತ್ತು ಅದರೊಳಗಿನ ಗೂಡು ಏನು ?
‘ಮಾಡು’ ಎಂದರೆ ಛಾವಣಿ. ಬಹು ಎತ್ತರದಲ್ಲಿರುವುದು.
ಸುಲಭದಲ್ಲಿ ಕೈಗೆ ಸಿಕ್ಕಲಾರದ್ದು. ಆದ್ದರಿಂದ ಬಹಳ ಎತ್ತರದಲ್ಲಿರುವ,
ಕಷ್ಟಪಡದೆ ಕೈಗೆ ಸಿಕ್ಕದ ಆಧ್ಯಾತ್ಮಿಕ ಜ್ಞಾನವನ್ನು ಅಥವಾ ನಮ್ಮ
ತತ್ವಜ್ಞಾನದ ಅರಿವನ್ನು, ದಾಸರು ‘ಮಾಡು’ ಎಂದರು. ಆ
‘ಮಾಡಿನೊಳಗಿನ ಗೂಡು’ ಪರಮಾತ್ಮನೆಂಬ ವಸ್ತು. ಮಾಡೇ
ಸಿಗಲಾರದಾಗ ಮಾಡಿನೊಳಗಿನ ಗೂಡು ಹೇಗೆ ದಕ್ಕೀತು ?
ಜ್ಞಾನವೇ ಇಲ್ಲದಾಗ ಪರಮಾತ್ಮನ ಸಾಕ್ಷಾತ್ಕಾರ ಎಲ್ಲಿಂದ
ಬಂದೀತು ? ಎಂಬುದು ಗೀತೆಯ ಮೊದಲ ಸಾಲಿನ ಅರ್ಥ.
ಆದರೆ ಜ್ಞಾನ ಸಂಪಾದನೆ ಪ್ರಾರಂಭವಾದಾಗ, ನಮ್ಮ ಸುತ್ತಲಿನ
ಅಂಧಕಾರದ ಗೋಡೆ ಕಳಚಿಬಿದ್ದಾಗ ‘ಅಜ್ಞಾನ ಮತ್ತು ಸಂಸಾರ ಮೋಹ’
ಎಂಬ ‘ಜೋಡು ಹೆಂಡಿರು’ ಅಂಜಿ ಓಡಿಹೋಗಿ ಜ್ಞಾನದ ಬೆಳಕು
ಕಾಣಬಹುದೆಂದು ಮೊದಲ ಚರಣದ ಭಾವ.
ಆದರೆ ಈ ಜೀವ ಜ್ಞಾನಾರ್ಜನೆಗೆ ಪ್ರಯತ್ನಿಸಲೇ ಇಲ್ಲ.
ತಮಸ್ಸಿನ ನಿದ್ದೆಯಿಂದ ಎಚ್ಚರಗೊಳ್ಳಲೇ ಇಲ್ಲ! ಸಂಸಾರ
ಮೋಹದಲ್ಲೇ ಮುಳುಗಿ ಹುಚ್ಚಾಯಿತಲ್ಲಾ ! ಅಚ್ಚಿನೊಳಗೆ
ಮೆಚ್ಚು - ಮೆಚ್ಚಿನೊಳಗೆ ಅಚ್ಚು, ಸಂಸಾರದಲ್ಲಿ ನಾನು,
ನನ್ನೊಳಗೆ ಸಂಸಾರ, ಕಂಬಳಿಯೊಳಗಿನ ನುಸಿಯಂತೆ
ಒಂದರೊಳಗೊಂದು ಉಳಿದು ಬೆಳಕನ್ನೇ ಕಾಣದೆ ಹಾಳಾಗಿ
ಹೋಯಿತಲ್ಲಾ ಎಂಬ ವ್ಯಥೆ ಎರಡನೇ ಚರಣದ ಭಾವ.
ಹೀಗೆ ಬದುಕುತ್ತಾ ಆದದ್ದೇನು? ವಯಸ್ಸಾಯಿತಷ್ಟೆ.
ಮುಪ್ಪುಬಂದಿತು. ಆದರೆ ಮುದಿಯಾಗುವಮುಂಚೆ
ಪಾಯಸವನುಂಡಿತೇ ಈ ಜೀವ ? ಕೃಷ್ಣನಾಮವೆಂಬ ಸಕ್ಕರೆ,
ವಿಠಲನಾಮವೆಂಬ ತುಪ್ಪವ ಬೆರಸಿದ ರಾಮನಾಮವೆಂಬ
ಪಾಯಸದ ರುಚಿ ಕಂಡಿತೇ ? ಇಲ್ಲ. ಅದೆಷ್ಟೋ ಸಾವಿರ ಕ್ರಿಮಿ
ಕೀಟ ಪಶು ಜನ್ಮಗಳ ನಂತರ ದೊರಕಿದ ಈ ಮಾನವ ಜನ್ಮದ,
‘ಸಾಧನಾ ಶರೀರ’ವೆಂಬ ತುಪ್ಪದ ಬಿಂದಿಗೆ ರಾಮನಾಮವೆಂಬ
ಪಾಯಸದಲ್ಲಿ ಬೀಳುವ ಬದಲು ಸಂಸಾರಮೋಹವೆಂಬ
ತಿಪ್ಪೆಯಲ್ಲಿ ಬಿದ್ದು ಹಾಳಾಯಿತಲ್ಲಾ ಎಂಬುದು ಮೂರನೇ ಚರಣದ ಭಾವ.
ಕೊನೆಗೆ ಆದದ್ದೇನು ? ‘ಯೋಗವು ಬಂತಲ್ಲಾ!’ ಯೋಗ ಶಬ್ದಕ್ಕೆ
ಇರುವ ಅನೇಕ ಅರ್ಥಗಳಲ್ಲಿ ‘ಕಾಲ’ ಎನ್ನುವುದೂ ಒಂದು.
ಕೊನೆಗಾಲ ಬಂತು, ಜೀವ, ದೇಹವನ್ನು ಬಿಟ್ಟು ನಡೆಯಿತು !
ದೇಹ, ಜೀವ ಎರಡೂ ಒಂದಾಗಿದ್ದರೆ ಅದು ಬದುಕು. ಜೀವ
ಹೊರಬಿದ್ದಮೇಲೆ ದೇಹಕ್ಕೆ ಬದುಕೆಲ್ಲಿಂದ ? ದೇಹ ಬೇರೆ, ಜೀವ
ಬೇರೆ ಯಾಗಿ ಬದುಕು ವಿಭಾಗವಾಯಿತಲ್ಲಾ ! ಭೋಗಿಶಯನ
ಪುರಂದ ವಿಠಲನನ್ನು ‘ಆಗ’, ಅಂದರೆ ದೇಹದಲ್ಲಿ ಜೀವವಿದ್ದಾಗ
ನೆನೆಯಲಿಲ್ಲವಲ್ಲಾ ಎಂಬ ಭಾವ ಕೊನೆಯ ಚರಣದ್ದು.
ಭೋಗವೆಂದರೆ ಸರ್ಪ. ಅದರಮೇಲೆ ಪವಡಿಸಿರುವವನು ಭೋಗಿ
ಶಯನ. ಒಟ್ಟಿನಲ್ಲಿ ಪಡೆಯಲು ದುಸ್ತರವಾದ ಮನುಶ್ಯ ಜನ್ಮ
ಸಿಕ್ಕಿರುವಾಗ ಅದನ್ನು ಸಂಸಾರದ ಜಂಜಾಟದಲ್ಲಿಯೇ ಸಿಲುಕಿಸಿ
ಹಾಳುಮಾಡದೆ ಅದನ್ನು ಮತ್ತಷ್ಟು ಮೇಲಕ್ಕೇರಿಸುವ ಚಿಂತನೆ,
ಅನುಷ್ಠಾನಗಳಲ್ಲಿ ತೊಡಗಿಸಿರಿ ಎಂಬುದು ಮಾಡು ಸಿಕ್ಕದಲ್ಲಾ
ಗೀತೆಯ ಒಟ್ಟು ಭಾವ. ಇದೇ ಭಾವವನ್ನು ‘ನರಜನ್ಮ ಬಂದಾಗ
ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ’ ಎಂಬ ಸಂದೇಶವಾಗಿ
ಕೂಡ ದಾಸರು ತಿಳಿಸಿರುವುದೆಂದು ಹೇಳುತ್ತಾ ನನ್ನ ವಿಶ್ಲೇಷಣೆಯನ್ನು
ಕೊನೆಗೊಳಿಸುತ್ತೇನೆ, ನಮಸ್ಕಾರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ