ನನ್ನ ಜೀವನದ ಮೊದಲ ಮೂವತ್ತು ವರುಷ ನಾವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಮನೆ ಇದ್ದದ್ದು
ಮೂರುರಸ್ತೆಗಳು ಕೂಡುವೆಡೆಯಲ್ಲಿ. ನಾನು ಗೋವಾದಲ್ಲಿ ನೌಕರಿಗೆ ಸೇರಿ ನಮ್ಮ ಬೆಂಗಳೂರಿನ
ಮನೆಯನ್ನು ಖಾಲಿಮಾಡಿದ ನಂತರ ಆ ಮನೆಗೆ ಬಾಡಿಗೆಗೆ ಬಂದಾತ ಮೊದಲು ಮನೆಯ ಮುಂದೆ
ಒಂದು ಗಣಪತಿಯ ಚಿತ್ರವನ್ನು ಹಚ್ಚಿ ನಂತರ ತನ್ನ ಸಂಸಾರ ತಂದ. ಮೂರು ರಸ್ತೆ ಸೇರುವ ಜಾಗ
ಅಶುಭವಂತೆ. ಹಾಗಾಗಿ ನಾವು ಅಂಥ ಸ್ಥಳದಲ್ಲಿ ವಾಸಿಸಬೇಕಾಗಿ ಬಂದಾಗ ಮೊದಲು ಗಣಪತಿಯನ್ನು
ಅಲ್ಲಿ ಸ್ಥಾಪಿಸಿ ಅವನನ್ನು ಆ ಜಾಗದ ವಾರಸುದಾರನನ್ನಾಗಿ ನಿಯಮಿಸಿ ನಂತರ ಅವನ ರಕ್ಷಣೆಯಲ್ಲಿ
ನಾವು ಅಲ್ಲಿ ವಾಸಮಾಡುವುದು. ನಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟಾಗಲೇ ನನಗೆ ತಿಳಿದದ್ದು ನಮ್ಮ
ಗಣಪನ ಮತ್ತು ಮೂರು ರಸ್ತೆಯ ಸಂಭಂದ. ಈಗ ನಾನು ಮೂರು ರಸ್ತೆ ಸೇರುವೆಡೆಯೆಲ್ಲ
ಕುತೂಹಲದಿಂದ ಗಣಪತಿಯನ್ನು ಹುಡುಕುತ್ತೇನೆ. ನಮ್ಮ ವಿಘ್ನನಾಶಕ ಇಂದಿನವರೆಗೆ ನನ್ನನ್ನು ನಿರಾಸೆಗೊಳಿಸಿಲ್ಲ.
ಕೆಲವರು ಮನೆಯ ಮುಂದಿನ ಕಂಪೌಂಡಿನಲ್ಲಿ ಒಂದು ಗೂಡುಮಾಡಿ ಅವನನ್ನು ಇರಿಸಿರುತ್ತಾರೆ.
ಮತ್ತೆ ಕೆಲವರು ತಮ್ಮದಲ್ಲದ ಫುಟ್ ಪಾತ್ ಮೇಲೆ ಚಂದದ ಮಂದಿರಕಟ್ಟಿ ಗಣಪತಿಯನ್ನಿಟ್ಟು
ನಿತ್ಯ ಪೂಜೆ ನಡೆಸುತ್ತಾರೆ. ಕೆಲವರು ಒಂದು ಕಲ್ಲಿನ ಫಲಕದಲ್ಲಿ ಏಕದಂತನನ್ನು ಕೆತ್ತಿ ಮನೆಯ
ಮುಂದಿನ ಗೋಡೆಗೆ ಲಗತ್ತಿಸಿರುತ್ತಾರೆ. ಏನಿಲ್ಲವಾದರೆ ಮನೆಯ ಮುಂದೆ ಗೋಡೆಗೊಂದು ಮೊಳೆ
ಹೊಡೆದು ವರುಷಕಳೆದ ಒಂದು ಹಳೆ ಕೆಲೆಂಡರಿನ ಗಣಪನನ್ನು ಅಲ್ಲಿ ನೇತು ಹಾಕಿರುತ್ತಾರೆ.
ಒಟ್ಟಿನಲ್ಲಿ ಮನೆಯಮುಂದೆ ಗಣಪತಿಗೊಂದು ಸ್ಥಾನ ಇರುತ್ತದೆ.
ನಾವು ಅನೇಕ ವರುಷಗಳ ಹಿಂದೆಯೇ ಮಾರಿದ್ದ ನಮ್ಮ ಮನೆಯ ಬಳಿ ಇನ್ನೂ ವಾಸವಿದ್ದ ಸ್ನೇಹಿತರೊಬ್ಬರನ್ನು
ನೋಡಲೆಂದು ಮೊನ್ನೆ ಹೋಗಿದ್ದೆ. ನಮ್ಮ ಮನೆ ಇನ್ನೂ ಅಲ್ಲಿಯೇ ಇತ್ತು. ಆದರೆ ಕೊಂಚ ಬದಲಾಗಿತ್ತು.
ನನಗೆ ಎದ್ದು ಕಂಡದ್ದು ನಮ್ಮ ಬಾಡಿಗೆಯಾತ ಮನೆಯ ಮುಂದೆ ಲಗತ್ತಿಸಿದ್ದ ಗಣಪ ಮಾಯವಾಗಿದ್ದದ್ದು.
ಕುತೂಹಲದಿಂದ ಅದರ ಬಗ್ಗೆ ಸ್ನೇಹಿತನನ್ನು ವಿಚಾರಿಸಿದೆ. ನಮ್ಮಿಂದ ಮನೆ ಕೊಂಡಿದ್ದವರು ಅದನ್ನು
ಮತ್ಯಾರಿಗೋ ಮಾರಿಬಿಟ್ಟರಂತೆ. ಈಗ ಆ ಮನೆಯಲ್ಲಿ ಮುಸಲ್ಮಾನರೊಬ್ಬರು ವಾಸವಿದ್ದಾರಂತೆ.
ಹಾಗಾಗಿ ನಮ್ಮ ಗಣಪನಿಗೆ ಎತ್ತಂಗಡಿಯಾಗಿತ್ತು.
ಇಂದು ಮುಂಜಾನೆ ನಾನು ನನ್ನ ನಿತ್ಯದ ವಾಯುಸಂಚಾರ ಮುಗಿಸಿ ವಾಪಸು ಬರುವಾಗ ನನಗಿಂತ
ಕೊಂಚ ಮುಂದೆ ನಡೆಯುತ್ತಿದ್ದಾತ ತಟಕ್ಕನೆ ರಸ್ತೆಯಲ್ಲಿಯೇ ನಿಂತು, ಅಲ್ಲೇ ಪಕ್ಕದ ಮನೆಯ ಕಾಂಪೌಂಡಿನ
ಮೇಲಿದ್ದ ಗಣಪತಿಯ ಕಡೆಗೆ ತಿರುಗಿ, ಮೆಟ್ಟಿದ್ದ ಚಪ್ಪಲಿ ಕಳಚಿ, ಕೈಜೋಡಿಸಿ, ಕಣ್ಣು ಮುಚ್ಚಿದ. ಮರುಕ್ಷಣ
ಹಿಂದಿನಿಂದ ಬಂದ ರಿಕ್ಷಾದ ಹಾರನ್ನಿಗೆ ಬೆದರಿ, ಮುಂದಕ್ಕೆ ಎಗರಿ, ಗಡಿಬಿಡಿಯಲ್ಲಿ ತನ್ನ ಚಪ್ಪಯಲ್ಲಿ
ಕಾಲು ತುರುಕಿ ಮುಂದೆ ನಡೆದ.
ಆ ದೃಶ್ಯದಿಂದ ಪ್ರೇರಿತವಾಗಿ, ಮನದಲ್ಲಿ ಬಹುದಿನಗಳಿಂದ ಸೇರಿದ್ದ ಭಾವನೆಗಳಿಂದ ಪೂರಿತವಾಗಿ,
ಹೊರಬಿದ್ದ ಪದ್ಯ ಈ ಕೆಳಗಿನದು.
ಮೂರು ರಸ್ತೆ
ಕೂಡುವೆಡೆಯೆಲ್ಲಾ
ತಾನೂ ಕೂಡುತ್ತಾನೆ
ನಮ್ಮ ಗಣಪ
ಬಿಸಿಲಿಗೆ ಬೇಯುತ್ತಾ
ಚಳಿಗೆ ನಡುಗುತ್ತಾ
ಮಳೆಯಲ್ಲಿ ನೆನೆಯುತ್ತಾ
ರಸ್ತೆ ಧೂಳು ಕುಡಿಯುತ್ತಾ
ಕೆಲವರು
ಇರಿಸುತ್ತಾರೆ ಇವನನ್ನು
ಚಂದದ ಮಂದಿರಕಟ್ಟಿ
ಕೆಲವರು ಕೂರಿಸಿರುತ್ತಾರೆ
ಹಾಗೆಯೇ ಬೇಕಾಬಿಟ್ಟಿ
ಬಳಿಯಲ್ಲಿ ಸುಳಿವವರು
ನಿಲ್ಲುತ್ತಾರೆ ಅರೆಕ್ಷಣ
ಚಪ್ಪಲಿ ಬಿಚ್ಚಿ
ಕಣ್ಣು ಮುಚ್ಚಿ
ಹಣೆಗೆ ಕೈ ಹಚ್ಚಿ
ನೆಗೆದು ನಡೆಯುತ್ತಾರೆ
ಮರುಕ್ಷಣ
ಹಿಂದಿನಿಂದ ಬಂದ
ರಿಕ್ಷಾ ಸದ್ದಿಗೆ ಬೆಚ್ಚಿ !
ನಮ್ಮ ಮನೆಯಿತ್ತು
ಮೂರುರಸ್ತೆ ಕೂಡುವೆಡೆ
ಆದರೆ ಮನೆ ಮುಂದೆ
ಗಣಪನಿರಲಿಲ್ಲ
ಅದೇಕೆಂದು ಅಪ್ಪನ
ಕೇಳೋಣವೆಂದರೆ
ಈಗ ಅಪ್ಪನೇ ಇಲ್ಲ
ಮುಂದೆಯೂ ಗಣಪ
ಅಲ್ಲಿ ಕೂಡುವುದಿಲ್ಲ
ಏಕೆಂದರೆ ಅಲ್ಲಿ
ಒಳಗೆ ಕುಳಿತಿದ್ದಾನಲ್ಲ
ಯಾ ಅಲ್ಲಾ !!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ