ಶನಿವಾರ, ಆಗಸ್ಟ್ 15, 2020

ಇಂದು ಮುಂಜಾನೆಯ ಮಾತು.


Add caption



ದುಗುಡ ತುಂಬಿದಂಥ ಮುಂಜಾವು. ಓತ ಪ್ರೋತ ಸುರಿಯುತ್ತಿದೆ ಮಳೆ. ಏಳಾದರೂ ಸೂರ್ಯನ

ಸುಳಿವೇ ಇಲ್ಲ. ಈಚೆಗೆ ಅವನು ಹೀಗೆಯೇ. ಮನಬಂದರೆ, ದಿನದಲ್ಲೊಮ್ಮೆ ಯಾವಾಗಲೋ ಮನಬಂದಾಗ

ನಮ್ಮ ಮುಂದೆ ಸುಳಿದಾಡಿ, ಬದುಕನ್ನಿಷ್ಟು ಬೆಳಕುಮಾಡಿ, ಮತ್ತೆ ಮರೆಯಾಗಿಬಿಡುತ್ತಾನೆ.  

ನಮ್ಮ ಮನೆಯ ಬೆಳೆದ ಮಕ್ಕಳಂತೆ ! 

ಮೋಡಗಳೂ ಮುಗಿಲ ಪೂರ್ತಿ ಹರಡಿಕೊಂಡು ಮಲಗಿಬಿಟ್ಟಿವೆ. ಎರಡುತಿಂಗಳಿಂದ ನಡೆದು ನಡೆದು

ಸುಸ್ತಾಯಿತೇನೋ ! ತಾವು ತುಂಬಿಕೊಂಡ ನೀರೆಲ್ಲಾ ಒಂದೇಕಡೆ ಸುರಿದುಹೋಗುತ್ತಿದೆಯೆಂಬ ಪರಿವೆಯೂ

ಇಲ್ಲ ಅವಕ್ಕೆ ! 

ಎದ್ದು ಹೊರಬಿದ್ದವನು ನಾನೊಬ್ಬನೇ ಎನಿಸುತ್ತದೆ. ನನ್ನ ನಿತ್ಯಸಂಚಾರದ ಚಟದ ದಾಸ. 

ನನ್ನ ಜತೆಗೆ, ಅಲ್ಲಿ ದೂರದ ಮರವೊಂದರಮೇಲೆ, ಪೂರ್ತಿ ತೋಯ್ದು ತೊಪ್ಪೆಯಾಗಿ, ಕಪ್ಪುಕಲೆಯಾಗಿ

ಕುಳಿತಿರುವ ಕಾಗೆಯೊಂದೇ ! ಅದರದೇನು ಸಂಕಟವೋ ದೇವರೇಬಲ್ಲ. 

ಹಾಗೆ ನೋಡಿದರೆ, ಕಪ್ಪು ಛತ್ರಿಕವುಚಿಕೊಂಡು ನಡೆಯುತ್ತಿರುವ ನಾನೂ ರಸ್ತೆಯಮೇಲೆ ಒಂದು ಕಪ್ಪು ಕಲೆಯೇ.  

ನನ್ನನ್ನು ಕಂಡವರು, ‘ಈ ಮಳೆಯಲ್ಲಿ ಹೊರಬಿದ್ದ ಈ ಮನುಷ್ಯನದು ಅದೇನು ಸಂಕಟವೋ,


ಹುಚ್ಚೋ’ ಎನ್ನುವರೇನೋ !   


ಶುಕ್ರವಾರ, ಆಗಸ್ಟ್ 14, 2020

ಕೋತಿ ಕೆಲಸ ಹಾಗೂ ಪ್ರಾರಬ್ಧ ಕರ್ಮ.




ಯಾರಾದರೂ ತಮಗೆ ಸಂಭಂದವಿಲ್ಲದ ಅಥವಾ ಅಗತ್ಯವಿಲ್ಲದ ಯಾವುದಾದರೂ ಇಲ್ಲ ಸಲ್ಲದ

ಕೆಲಸಕ್ಕೆ ಕೈಹಾಕಿ ಆ ಮೂಲಕ ಪದಾರ್ಥಗಳನ್ನು ಅಥವಾ ವಸ್ತುಗಳನ್ನು  ಹಾಳುಮಾಡಿದಾಗ ಅಥವಾ

ಕಾರಣವಿಲ್ಲದೆ ‘ಕೈಕಡಿತದಿಂದ’ ಏನಾದರೂ ಮಾಡಿ ಏನನ್ನಾದರೂ ಹಾಳುಗೆಡವಿದಾಗ ಅಂಥದನ್ನು

ನಮ್ಮಲ್ಲಿ ‘ಕೋತಿ ಕೆಲಸ’ ಎನ್ನುತ್ತೇವೆ.  ಉದಾ : ಏನೋ ನೋಡುತ್ತಲೋ, ಮಾತನಾಡುತ್ತಲೋ ನಿಂತಿದ್ದಾಗ

ಕೈಗೆ ಸಿಕ್ಕಿದ ಕಡ್ಡಿಯನ್ನು ಪಕ್ಕದ ಕಪಾಟಿನ ಬಾಗಿಲ ಬೀಗದ ತೂತಿನೊಳಗೆ ಹಾಕಿ ತಿರುಗಿಸುತ್ತಾ

ಅದರೊಳಗೆ ಕಡ್ಡಿಯನ್ನು ಮುರಿದುಬಿಡುವುದು. ಕುಳಿತು ಮಾತನಾಡುತ್ತಿದ್ದಾಗ ಪಕ್ಕದಲ್ಲಿದ್ದ ಕಾಗದ ತುಂಡನ್ನು

ಮಡಿಸಿ, ಬಿಡಿಸಿ ಮಾಡುತ್ತಾ, ಅದನ್ನು ಹರಿದು, ನಂತರ ಅದು ಯಾವುದೋ ಮುಖ್ಯವಾದ ಪತ್ರವೋ,

ರಸೀತಿಯೋ ಎಂದು ತಿಳಿದು ಪರಿತಪಿಸುವುದು, ಇಂಥ ಕೆಲಸಗಳು. ಮಕ್ಕಳು, ಮಕ್ಕಳು ಮಾತ್ರವೇಕೆ

ದೊಡ್ಡವರೂ ಸಹ, ಅಂಥ ಯಾವುದಾದರೂ ಕೆಲಸದಲ್ಲಿ ನಿರತರಾದದ್ದನ್ನು ಕಂಡಾಗ  “ಸುಮ್ಮನೆ

ಇರಬಾರದೇ? ಕೋತಿ ಕೆಲಸ ಮಾಡುವುದೇಕೆ?” ಎಂಬ ಟೀಕೆ ನಮ್ಮ ಮನೆಯಲ್ಲಿ ಯಾರಿಂದಲಾದರೂ

ಬರುತ್ತದೆ.  


ಅಂತೆಯೇ, ನಮ್ಮ ಪಾತ್ರವೇನು ಇಲ್ಲದ, ನಾವು ಯಾವ ರೀತಿಯಲ್ಲೂ  ಅದಕ್ಕೆ ಕಾರಣರಲ್ಲದ

ಯಾವುದಾದರೂ ಘಟನೆ ಘಟಿಸಿ ಅದರಿಂದ ನಮಗೆ  ತೊಂದರೆಯಾದಾಗ ಅದನ್ನು ‘ಪ್ರಾರಬ್ಧ ಕರ್ಮ’

ಎನ್ನುತ್ತೇವೆ.  ನಮ್ಮ ಪುರಾಣಗಳ ಪ್ರಕಾರ  ‘ಪ್ರಾರಬ್ಧ ಕರ್ಮ’ ಎಂಬುದಕ್ಕೆ ಬೇರೆಯೇ ಅರ್ಥವಿದೆ. ನಾನು ಇಲ್ಲಿ

ಸಾಮಾನ್ಯ ಬಳಕೆಯ ಬಗ್ಗೆ ಹೇಳುತ್ತಿದ್ದೇನೆ. ಇವೆರಡೂ ಪದಗಳ ಬಳಕೆಯನ್ನು ಉದಾಹರಣೆ ಮೂಲಕ ತಿಳಿಸುವ

ಒಂದು ಪ್ರಸಂಗ ಮೊನ್ನೆ ಬಂದಿತು. 


ಕೋತಿಗಳು ನಮ್ಮ ಅಂಗಳಕ್ಕೆ ಬರುವುದು ಹೊಸದೇನಲ್ಲ. ಎರಡುಮೂರು ತಿಂಗಳಿಗೊಮ್ಮೆ ಒಂದು ಕೋತಿಗಳ

ಗುಂಪು ಬಂದು ಧಾಳಿ ಮಾಡಿ ನಮ್ಮ ಅಂಗಳದ ಗಿಡಮರಗಳ ರೆಂಬೆ ಕೊಂಬೆ ಗಳನ್ನು ಮುರಿದು, ಎಲೆ, ಚಿಗುರು,

ಹೀಚು, ಕಾಯಿಗಳನ್ನೆಲ್ಲಾ ಕಿತ್ತು, ಸ್ವಲ್ಪವನ್ನು  ತಿಂದು, ಉಳಿದದ್ದನ್ನು  ಚೆಲ್ಲಾಡಿ, ತಮ್ಮ ದಾರಿ ಹಿಡಿದು

ಹೊರಟುಹೋಗುತ್ತವೆ. ಇದರ ಬಗ್ಗೆ ನನ್ನ ಆಕ್ಷೇಪಣೆ ಏನಿಲ್ಲ. ಕೋತಿಗಳು ಬದುಕಬೇಕಾಗಿರುವುದೆ ಹಾಗೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ವಾನರ ಸೈನ್ಯವೇ ಲಂಕೆಯಿಂದ ಹಿಂದಿರುಗುವಾಗ, ತಮಗೆ ಆಹಾರ

ಸ್ವೀಕರಿಸಲು ಆಹ್ವಾನ ನೀಡಿದ  ಯಾರದೋ ವನವನ್ನು ಹೊಕ್ಕು, ಹಣ್ಣು ಕಾಯಿಗಳನ್ನು ತಿಂದು ಹೊಟ್ಟೆ

ತುಂಬಿಕೊಂಡು, ಅಷ್ಟಕ್ಕೆ ಬಿಡದೆ, ಉಳಿದ ವನವನ್ನು ಕಿತ್ತು ತೂರಾಡಿ ಧ್ವಂಸಮಾಡಿ ಬಂದವೆಂದು ಓದಿದ್ದೇನೆ.

‘ರಾಮಸೇನಾ’ ಎನ್ನುವ ವಾನರಗಳೆಲ್ಲಾ ಹಾಗೆಯೇ ಎಂದು ಹೇಳುವ ಉಧ್ಧಟತನವನ್ನು ನಾನು ಮಾಡಲಾರೆ.

ಆದರೆ ಆ ವಾನರ ಸೈನ್ಯದ ಕತೆಯೇ ಹಾಗಾದರೆ ಇನ್ನು ನಮ್ಮ ನಾಡಿನ ಕೋತಿಗಳ ಕಥೆ ಕೇಳಬೇಕೆ ?  


ಮೊನ್ನೆ  ಮಧ್ಯಾಹ್ನ ಮಹಡಿಯಮೇಲೆ ಕೋಣೆಯಲ್ಲಿ ಕೂತು ಏನೋ ಓದುತ್ತಿದ್ದಾಗ ಹೊರಗಡೆ ಸದ್ದಾಯಿತು.

ಕಿಟಕಿಯಿಂದ ಇಣುಕಿದಾಗ ಪಕ್ಕದ ಮನೆಯ ಬಾಲ್ಕನಿಯ ಮೇಲೆ ಎರಡು ಮಂಗಗಳು ಕಾಣಿಸಿದವು.

ಅದರಲ್ಲೊಂದು ಮಂಗ ಬಾಲ್ಕನಿಯ ಮೇಲಿಂದ ಅವರ ಅಂಗಳದಲ್ಲಿದ್ದ ಬಾಳೆಗಿಡಕ್ಕೆ ಹಾರಿತು. ಗೊನೆಯ

ಭಾರದಿಂದ ಆಗಲೇ ಬಗ್ಗಿದ್ದ ಬಾಳೆಗಿಡ, ಮಂಗನ ಭಾರಕ್ಕೆ ಮುರಿದು ನಮ್ಮ ಕಂಪೌಂಡಿನ ಮೇಲೆ ಬಿತ್ತು.

ಎರಡೂ ಕೋತಿಗಳು ಬಿದ್ದ ಗಿಡದಿಂದ ಎರಡೆರಡು ಬಾಳೆಯ ಕಾಯಿಗಳನ್ನು ಮುರಿದುಕೊಂಡು ಕಚ್ಚಿ ರುಚಿ

ನೋಡಿ, ಬಹುಶಃ ರುಚಿ ಸರಿಬರದೆ, ಅದನ್ನು ಬಿಸುಟು, ಪಕ್ಕದಲ್ಲಿದ್ದ ನಮ್ಮ ಸೀಬೆಗಿಡಕ್ಕೆ ಏರಿದವು.

ಬಲಿತು ಹಣ್ಣಾಗುತ್ತಿದ್ದ ಕಾಯಿಗಳೆರಡನ್ನು ಕಿತ್ತು  ತಿನ್ನುತ್ತಾ ಅದರ ಬದಿಯಲ್ಲಿದ್ದ ಮಾವಿನ ಮರಕ್ಕೆ ಹಾರಿ

ಕುಳಿತವು. ಆ ಹೊತ್ತಿಗೆ ಕಿಟಕಿಯಲ್ಲಿ ನನ್ನನ್ನು ಕಂಡು ಹಲ್ಲುಕಿರಿದು, ಗುರೆ್ರಂದು ಬೆದರಿಸಿ, ಮಾಳಿಗೆಯ

ಮೇಲಕ್ಕೆ ಹತ್ತಿ ನನಗೆ ಕಾಣದಾದವು. ಮತ್ಯಾವುದೋ ಕೆಲಸದಲ್ಲಿ ಮಗ್ನನಾದ ನನಗೆ ಕೋತಿಗಳ

ವಿಷಯ ಮರೆತೇ ಹೋಯಿತು.


ಒಂದೆರಡು ಘಂಟೆಗಳ ನಂತರ ಏನೋ ಕೆಲಸಕ್ಕೆಂದು ಹೊರಹೋದವನು ವಾಪಸು ಬಂದಾಗ ಮನೆಯ

ತಾರಸಿಯಿಂದ ಕೆಳಕ್ಕೆ ನೀರಿಳಿಯುತ್ತಿದ್ದುದು ಕಾಣಿಸಿತು. ಮಳೆಯಿಲ್ಲದ ಸಮಯದಲ್ಲಿ  ಹೀಗೆ ನೀರು ಸುರಿದರೆ

ಸಾಮಾನ್ಯವಾಗಿ ತಾರಸಿ ಮೇಲಿರುವ ನೀರಿನ ತೊಟ್ಟಿ ತುಂಬಿಕೊಂಡು, ಹೆಚ್ಚಾದ ನೀರು ಹೊರಗೆ ಬೀಳುತ್ತಿದೆಯೆಂದು

ಅರ್ಥ. ಆದರೆ ಅದು ನಲ್ಲಿಯಲ್ಲಿ ನೀರು ಬರುವ ಸಮಯವಲ್ಲವಾದ್ದರಿಂದ, ಅನುಮಾನ ಬಂದು,

ಏನಾಗಿದೆಯೆಂದು ತಿಳಿಯಲು ತಾರಸಿಯ ಮೇಲಕ್ಕೆ ಹತ್ತಿದೆ. ನಮ್ಮ ತಾರಸಿಯ ಮೇಲೆ ನೀರಿನ

ಟಾಕಿಯೊಂದಿಗೆ ಸೌರಶಕ್ತಿಯಿಂದ  ನೀರು ಬಿಸಿಮಾಡುವ ಉಪಕರಣವೂ ಇದೆ. ಅದರಿಂದ  ಬಿಸಿನೀರು

ಹೊರಗೆ ಬರುವ ಕೊಳವೆ ಮುರಿದು ನೀರು ಬುಗ್ಗೆ ಬುಗ್ಗೆ ಯಾಗಿ ಹೊರಗೆ ಸುರಿಯುತ್ತಿತ್ತು. ಅದು ಹೇಗೆ ಮುರಿಯಿತೆಂದು

ತಿಳಿಯದೆ ಅತ್ತಿತ್ತ ನೋಡಿದಾಗ ಪಕ್ಕದ ಮನೆಯ ಎರಡನೇ ಮಜಲಿನ ಮೇಲೆ ಕುಳಿತು ನೀರು ಹೊರಹೊಮ್ಮುತ್ತಿದ್ದ

ದೃಶ್ಯವನ್ನು ನೋಡಿ ಸಂತೋಷಪಡುತ್ತಿದ್ದ ಮಂಗ ಕಣ್ಣಿಗೆ ಬಿತ್ತು. ಅದರ ಕುಚೇಷ್ಟೆಯನ್ನು  ಕಂಡು ಅಸಾಧ್ಯ ಸಿಟ್ಟು

ಬಂದರೂ ಸಹ, ಅದಕ್ಕೆ ನಾನು ಏನೂ ಮಾಡುವಂತೆ ಇರದಿದ್ದ ಕಾರಣ, ಮುರಿದು ಕೆಳಗೆ ಬಿದ್ದಿದ್ದ ಕೊಳವೆಯನ್ನು

ಕೈಗೆತ್ತಿಕೊಂಡು ಅದರ ಕಡೆಗೆ ಬೀಸುವ ನಟನೆ ಮಾಡಿದೆ. ನನ್ನಂಥವರು ಅದೆಷ್ಟು ಜನರನ್ನು ಕಂಡಿದೆಯೋ ಆ

ಮಂಗ ! ನನ್ನಿಂದ ಏನೂ ಆಗದೆಂದು ಅದಕ್ಕೆ ಚೆನ್ನಾಗಿ ಗೊತ್ತು. ನನ್ನ ಸಮಾಧಾನಕ್ಕೆಂಬಂತೆ  ಎರಡು ಹೆಜ್ಜೆ ಹಿಂದೆ

ಸರಿದು, ಮತ್ತೆ ನನ್ನೆಡೆ ತಿರುಗಿ ಅಣಕಿಸಿ, ಹಲ್ಲುಕಿರಿದು, ಗುರ ಗುಟ್ಟಿ ಓಡಿಹೋಯಿತು. ಮುರಿದ ಕೊಳವೆ,

ಮಂಗನದೇ ಕೆಲಸವೆಂದು ಗೊತ್ತಾಯಿತು. 


ಇಲ್ಲಿಯವರೆಗೂ ಸುಮ್ಮನೆ ನಡೆದ  ವಿಷಯ ಮಾತ್ರ  ತಿಳಿಸಿದೆ. ಇದು ಬರಿಯ ಒಂದು ನೀರಿನ ಕೊಳವೆ

ಮುರಿದು ಸರಿಪಡಿಸಿದ ಕೆಲಸವಾಗಿ ಮುಗಿಯಲಿಲ್ಲ.  ಆದಿನ ಮನೆಯಲ್ಲಿ ಏನೋ ವಿಶೇಷವಿದ್ದ ಕಾರಣ ಕೆಲವು

ಅತಿಥಿಗಳು ಮನೆಗೆ ಬರುವವರಿದ್ದರು. ನನ್ನ ಪತ್ನಿ ಅವರ ಉಪಾಹಾರದ ತಯಾರಿಯಲ್ಲಿದ್ದಂತೆ ನೀರು

ಖಾಲಿಯಾಗಿ ನಲ್ಲಿ ಗೊರ ಗೊರ ಎಂದುಬಿಟ್ಟಿತು. ಆಕೆಗೆ ಕೊಳವೆ ಮುರಿದಿದ್ದ ವಿಷಯ ತಿಳಿದಿರಲಿಲ್ಲವಾದ್ದರಿಂದ,

ತಾರಸಿ ಮೇಲಿನ ತೊಟ್ಟಿಯಲ್ಲಿ ನೀರು ಖಾಲಿಯಾಯಿತೆಂದುಕೊಂಡು ಕೆಳಗೆ ನೀರು ಸಂಗ್ರಹ ವಾಗಿದ್ದ ಇನ್ನೊಂದು

ತೊಟ್ಟಿಯಿಂದ ನೀರನ್ನು ಮೇಲಕ್ಕೆ ಪಂಪ್ ಮಾಡಿದಳು. ಮೇಲೇರಿದ ನೀರು, ಮುರಿದ ಕೊಳವೆಯಿಂದ ಮತ್ತೆ 

ಹೊರಹರಿದು, ಮೇಲಿನ, ಕೆಳಗಿನ, ಎರಡೂ ನೀರಿನ ತೊಟ್ಟಿಗಳು ಖಾಲಿಯಾಗುವುದರಲ್ಲಿದ್ದವು. ಆ

ಸಮಯದಲ್ಲೇ ನಾನು ಅದನ್ನು ಕಂಡಿದ್ದು. ಕೊನೆಗೆ ಪಕ್ಕದ ಮನೆಯಿಂದ ಬಕೆಟ್ಟುಗಳನ್ನೂ ನೀರನ್ನೂ ಕೇಳಿ

ಪಡೆದು ಅಂದಿನ ಕೆಲಸವನ್ನು ಸಾಗಹಾಕಿದ್ದಾಯಿತು.   


ಮುಂದಿನದು ಗೊತ್ತೇ ಇದೆಯಲ್ಲ, ಮಾರನೆಯ ದಿನ ಗಡಿಬಿಡಿಯಲ್ಲಿ ನಲ್ಲಿ ಕೆಲಸದವನನ್ನು ಕರೆದು, ಐನೂರು

ರೂಪಾಯಿ ಖರ್ಚುಮಾಡಿ, ಮುರಿದ ಕೊಳವೆಯ ರಿಪೇರಿ ಮಾಡಿಸಿದ್ದಾಯಿತು. ಏನೂ ಕಾರಣವಿಲ್ಲದೆ, ನನ್ನ

ತಪ್ಪೇನೂ ಇಲ್ಲದೆ, ನನಗೆ ವೃಥಾ ಶ್ರಮ ಮತ್ತು  ಖರ್ಚು. ಅದಕ್ಕೆ ಮಿಗಿಲಾಗಿ, ಏನೆಲ್ಲಾ ಸುವ್ಯವಸ್ಥೆ

ಮಾಡಿಟ್ಟುಕೊಂಡಿದ್ದರೂ ಬೇಕಾದ ಸಮಯದಲ್ಲಿ ಅವೆಲ್ಲ ಕೆಲಸಕ್ಕೆ ಬಾರದಂತಾಗಿ ಅವ್ಯವಸ್ಥೆ ಹಾಗೂ

ಪರದಾಟವಾಯಿತು. 


ಈಗ ನೋಡಿ, ಆ ಕೋತಿ ನಮ್ಮ ಆವರಣಕ್ಕೆ ಬಂದದ್ದು ಆಹಾರ ಹುಡುಕಿಕೊಂಡು. ಅದಕ್ಕೆ ಬೇಕಾದ ಆಹಾರ

ಸಿಕ್ಕಿತ್ತು ಕೂಡ. ತನ್ನ ಆಹಾರ ದೊರಕಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದ ಕೋತಿಯಿಂದ, ಆ ಕಾರ್ಯದ

ಸಂಭಂದದಲ್ಲಿ, ನನ್ನ ತೋಟದ ಇತರ ಗಿಡಮರಗಳಿಗೆ ಆಗಿದ್ದ ವಿಧ್ವಂಸಕ ಕಾರ್ಯಕ್ಕೆ ನನ್ನ ಆಕ್ಷೇಪಣೆ ಇರಲಿಲ್ಲ.

ಆದರೆ ತನ್ನ ಹೊಟ್ಟೆ ತುಂಬಿಸಿಕೊಂಡು ತನ್ನಪಾಡಿಗೆ ತಾನು ತನ್ನ ಜಾಗಕ್ಕೆ ವಾಪಸುಹೋಗುವ ಬದಲು ಅದು

ಮಾಡಿದ್ದೇನು?  ತನ್ನ ದಾರಿಬಿಟ್ಟು, ತಾರಸಿಯಮೇಲೇರಿ, ತನಗೆ ಯಾವ ರೀತಿಯಲ್ಲೂ ಸಂಭಂದವೇ ಇಲ್ಲದಿದ್ದ

ನೀರಿನ ಕೊಳವೆಯನ್ನು ಹಿಡಿದು ನೇತಾಡಿ, ಎಗರಾಡಿ, ಅದನ್ನು ಮುರಿದಿಟ್ಟು  ಹೋಯಿತು. ಇಂಥ ಕೆಲಸಗಳನ್ನೇ

‘ಕೋತಿಕೆಲಸ’ ಎನ್ನುವುದಲ್ಲವೇ ? 


ಈ ‘ಕೋತಿಕೆಲಸ’ದ ಬಗೆಗೆ  ಬರೆಯಬೇಕೆಂದು ಬರಹ ಪ್ರಾರಂಭಮಾಡಿದ್ದ ಸಮಯದಲ್ಲಿ, ನನ್ನ ಪತ್ನಿ ನಮ್ಮ

ಪಕ್ಕದ ಮನೆಯಾಕೆಯೊಡನೆ  ನಡೆಸಿದ್ದ ಮಾತುಕತೆ ಕಿವಿಗೆ ಬಿತ್ತು. ನಮ್ಮ ಬಾಲ್ಕನಿಯಲ್ಲಿ ನಿಂತಿದ್ದ ನನ್ನ ಪತ್ನಿ

ತಮ್ಮ ಮನೆಯ  ಕಿಟಕಿಯಲ್ಲಿ ನಿಂತಿದ್ದ ಪಕ್ಕದ ಮನೆಯಾಕೆಯೊಡನೆ ಮಾತು ನಡೆಸಿದ್ದಳು. ಕೋತಿ ನಮ್ಮ

ನೀರಿನ ಕೊಳವೆಯನ್ನು ಮುರಿದದ್ದು ಮತ್ತೆ ಅದರ ನಂತರ ಆದ ತೊಂದರೆಗಳ  ಬಗೆಗೆ ಆಕೆಗೆ ವಿವರಿಸಿ 

“ ಗಿಡ, ಹಣ್ಣು, ಕಾಯಿ ಹಾಳಾದರೆ ಪರವಾಗಿಲ್ಲ ಬಿಡಿ, ಆದರೆ ಆ ಹಾಳು ಕೋತಿಗೆ ನಮ್ಮ ಪೈಪು ಮುರಿಯುವ

ಮನಸ್ಸೇಕೆ ಬಂತೋ ?” ಎಂದು ಉದ್ಗರಿಸಿ  “ಯಾರಿಗೆ ಗೊತ್ತು? ಒಟ್ಟಿನಲ್ಲಿ ನಮ್ಮ ‘ಪ್ರಾರಬ್ಧ ಕರ್ಮ’ ಅಷ್ಟೇ ”

ಎಂದು ಮಾತು ಮುಗಿಸಿದಳು. ನನ್ನ ‘ಕೋತಿಕೆಲಸ’ಕ್ಕೆ ‘ಪ್ರಾರಬ್ಧಕರ್ಮ’ದ  ಜತೆಸಿಕ್ಕಿತು !







ದೈತ್ಯರನ್ನು ಕಂಡಾಗ ಅನಿಸಿದ್ದು







 


ಮಳೆಗಾಲ ಬರುತ್ತಿದ್ದಂತೆ 

ಇವರು ಅವತರಿಸುತ್ತಾರೆ 

ಕಂಬವನ್ನೋ ಕಾಂಡವನ್ನೋ

ಆವರಿಸಿ ಬೆಳೆಯುತ್ತಾರೆ 

ಭೂತಾಕಾರ ತಳೆದು 

ಕೈಚಾಚಿ ನಿಲ್ಲುತ್ತಾರೆ 

ಕೆಲವು ತಿಂಗಳಕಾಲ 

ಕಂಗೊಳಿಸುತ್ತಾರೆ

ಕಾಲಮುಗಿದಂತೆ  

ನಿಂತಲ್ಲಿಯೇ ನಲುಗಿ 

ಕಂಡಂತೆಯೇ ಕರಗಿ 

ಕಾಣದಾಗುತ್ತಾರೆ 


ಪ್ರತಿ ವರುಷದ ನೆಂಟರು

ಈ ಹಚ್ಚ ಹಸಿರು ದೈತ್ಯರು !  


ಮಳೆಗಾಲ ಕಾಲಿಡುತ್ತಿದ್ದಂತೆಯೇ ನನ್ನ ಸುತ್ತಮುತ್ತಲಿನ ಗಿಡ, ಬಳ್ಳಿಗಳಿಗೆ ಹೊಸ ಚೈತನ್ಯ ಬಂದು

ಹುರುಪಿನಿಂದ ಬೆಳೆಯುತ್ತವೆ. ಅಕ್ಕ ಪಕ್ಕದಲ್ಲಿ ಸಿಕ್ಕ ಖಾಲಿಜಾಗವನ್ನೆಲ್ಲಾ ಆವರಿಸಿಕೊಳ್ಳುತ್ತವೆ.

ತಂತಿ, ಕಂಬ, ಮರಗಳನ್ನು ಆಧರಿಸಿದ  ಬಳ್ಳಿಗಳು ಆಕಾಶದತ್ತ ಪಸರಿಸುತ್ತವೆ. ದೊಡ್ಡ ದೊಡ್ಡ ಹಸಿರಿನ

ರಾಶಿಗಳಾಗುತ್ತವೆ. ಹಸಿರು ದೈತ್ಯರಾಗಿ ಅವತರಿಸುತ್ತವೆ. 


Add caption



Add caption


ಈ ಹಸಿರು ದೈತ್ಯರನ್ನು ನಾನು ಪ್ರತಿ ವರುಷ ನೋಡುತ್ತೇನೆ. ಅವರನ್ನು ನೋಡಿದಾಗಲೆಲ್ಲಾ ನನಗೆ ನಾವು

ದಸರಾ, ದೀಪಾವಳಿಯ ಸಮಯದಲ್ಲಿ ಕಟ್ಟಿ ನಿಲ್ಲಿಸುವ  ರಾವಣಾಸುರ, ನರಕಾಸುರರ ನೆನಪಾಗುತ್ತದೆ. 

ದುಷ್ಟತೆಯ ಪ್ರತೀಕವಾದ ಅಸುರರನ್ನು ಸುಡುವ ಮೂಲಕ ದುಷ್ಟತನವನ್ನು ನಾಶಮಾಡುತ್ತೇವೆಂಬ

ಭಾವನೆಯಿಂದ ನಾವು ಅವರ ಪ್ರತಿಕೃತಿಗಳನ್ನು ಸುಟ್ಟು ಭಸ್ಮಮಾಡುತ್ತೇವೆ.  

ಎಷ್ಟು ಪ್ರತಿಕೃತಿಗಳನ್ನು ಸುಟ್ಟರೂ ನಮ್ಮ ಮನದೊಳಗೆ  ಮನೆಮಾಡಿರುವ ಅಸುರರು ನಿರಂತರವಾಗಿ

ಬೆಳೆಯುತ್ತಲೇ ಇದ್ದಾರೆ. 

ನಮ್ಮ ಒಳಿತಿಗಾಗಿ ತಾವು ಬೆಳೆಯುವ ಹಸಿರುದೈತ್ಯರ ವಂಶ ಮಾತ್ರ ದಿನೇ ದಿನೇ ನಿರ್ವಂಶವಾಗುವತ್ತ ಸಾಗುತ್ತಿದೆ !

(ರಾವಣಾಸುರ, ನರಕಾಸುರರ ಚಿತ್ರಗಳು ನನ್ನವಲ್ಲ. ಅಂತರ್ಜಾಲದಿಂದ ಪಡೆದುಕೊಂಡದ್ದು)