ಭಾನುವಾರ, ಅಕ್ಟೋಬರ್ 7, 2018

ಇರುವೆ ನೀನೆಲ್ಲೆಲ್ಲೂ ಇರುವೆ

ಹೊರದೇಶದಲ್ಲಿರುವ ನನ್ನ ತಮ್ಮನ ಮಗ ತನ್ನ ಊರು, ಮನೆ, ಪರಿಸರ, ಕಾಲೇಜು, ಶಿಕ್ಷಕರು, ಸಹಪಾಠಿಗಳು ಇವುಗಳೆಲ್ಲದರ  ಬಗೆಗೆ ಆಗಿಂದಾಗ್ಗೆ ನಮಗೆ ತಿಳಿಸಿ ಬರೆಯುತ್ತಿರುತ್ತಾನೆ. ಹಾಗೆಯೇ ಈಚೆಗೊಮ್ಮೆ ಬರೆದಾಗ ತನ್ನ ಸ್ನೇಹಿತನೊಬ್ಬನ ವಿಚಾರ ತಿಳಿಸಿದ. ಅವನ ಸ್ನೇಹಿತ  ತನ್ನ ಕೋಣೆಯಲ್ಲಿ ಒಂದು ಗಾಜಿನಪೆಟ್ಟಿಗೆಯಲ್ಲಿ ಇರುವೆಗಳನ್ನು ಸಾಕುತ್ತಾನಂತೆ. ಅದರ ಮೂಲಕ ಆ ಇರುವೆಗಳು ಬದುಕುವ ರೀತಿ, ಅವುಗಳು ಗೂಡು ಕಟ್ಟುವ ಕೌಶಲ್ಯ , ರಾಣಿ ಮತ್ತಿತರ ಇರುವೆಗಳ ನಡವಳಿಕೆ, ಆಹಾರ ಪದ್ಧತಿ ಇವುಗಳನ್ನೆಲ್ಲಾ ಅಭ್ಯಾಸಮಾಡುವುದು ಅವನ ಸ್ನೇಹಿತನ ಹವ್ಯಾಸವಂತೆ.

ಇದನ್ನು ಓದಿದ ನನ್ನ ತಮ್ಮನ ತಮಾಷೆಯ ಪ್ರತಿಕ್ರಿಯೆ ಹೀಗಿತ್ತು.

"ನಾವು ಶಾಂತಿನಗರದಲ್ಲಿ (ಬೆಂಗಳೂರಿನಲ್ಲಿ ನಾವಿದ್ದ ಮನೆ) ವಸತಿಗೆ ಹೋದಾಗ, ಇರುವೆಗಳು ತಮ್ಮ ಬಡಾವಣೆಯ ಮಧ್ಯೆ ನಮಗೆ ಮನೆಕಟ್ಟಲು ಅವಕಾಶಕೊಟ್ಟು, ನಾವು ಮನೆ ಕಟ್ಟುವ ಪದ್ಧತಿ, ನಮ್ಮ ರೀತಿ ನೀತಿಗಳು ಮತ್ತು ನಮ್ಮ ನಡವಳಿಕೆಯನ್ನು ಅಭ್ಯಾಸ ಮಾಡುತ್ತಿದ್ದವು. ಆ ಬಡಾವಣೆಯ ಮೂರುಕೋನಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಇರುವೆಗಳು ತಮ್ಮ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದವು."

ನನ್ನ ತಮ್ಮ ತಮಾಷೆಗೆಂದು ಹಾಗೆ ಬರೆದಿದ್ದರೂ ಅದು ಹೆಚ್ಚುಕಮ್ಮಿ ನಿಜವೇ ಆಗಿತ್ತು. ಹಿಂದೆ ಹೊಲವಾಗಿದ್ದ ಪ್ರದೇಶವನ್ನು  ಬಡಾವಣೆಯನ್ನಾಗಿಮಾಡಿ ಅಲ್ಲಿ ಮನೆಗಳು ಕಟ್ಟಲು ಪರವಾನಗಿ ಕೊಟ್ಟಿದ್ದ ಜಾಗ ಅದು. ಅಲ್ಲಿ ಮನೆಕಟ್ಟಿದ  ಮೊದಲಿಗರಲ್ಲಿ ನಾವೊಬ್ಬರು. ಮನೆಯ ಸುತ್ತಲೂ ಇನ್ನೂ ಹೊಲಗಳ ಅವಶೇಷ ಉಳಿದಿತ್ತು. ಮಧ್ಯೆ ಮಧ್ಯೆ ಹತ್ತಾರು ದೊಡ್ಡ ದೊಡ್ಡ ಹುತ್ತಗಳೂ ಇದ್ದವು. ಅಂದಮೇಲೆ ಅದು ನಿಜವಾಗಿ ಇರುವೆಗಳ ಸಾಮ್ರಾಜ್ಯವೇ.

ನಮ್ಮ ಮನೆಯ ಅಡಿಪಾಯ ಮಾತ್ರ ಸಿಮೆಂಟಿನಿಂದ ಕಟ್ಟಿದ್ದು. ಇಟ್ಟಿಗೆಯ ಗೋಡೆಗಳು ಮಣ್ಣಿನಿಂದಲೇ ಜೋಡಿಸಲ್ಪಟ್ಟಿದ್ದವು. ನಮ್ಮ ಮನೆಯ ಕೆಳಗೇ ಇರುವೆಗಳ ಕಾಲೋನಿ ಇತ್ತೋ ಏನೋ . ನಾವು ಆ ಮನೆಸೇರಿದ ಕೆಲವೇ ದಿನಗಳೊಳಗೆ ಇರುವೆಗಳು ವಾಸದ ಕೋಣೆಯ ಗೋಡೆಯತುಂಬೆಲ್ಲಾ ಸಣ್ಣ ಸಣ್ಣ  ತೂತುಗಳನ್ನು ಮಾಡಿ ಅದರಿಂದ ಹೊರಗೆ ಒಳಗೆ ಓಡಾಡುತ್ತಿದ್ದವು.  ಅದರಿಂದಲೇ  ನನ್ನ ತಮ್ಮ "ಇರುವೆಗಳು  ನಮ್ಮ ನಡವಳಿಕೆಯನ್ನು ಅಭ್ಯಾಸಮಾಡುತ್ತಿದ್ದವು" ಎಂದದ್ದು. ನಮ್ಮ ಮನೆಯಲ್ಲೋ ಆಗ ಕುರ್ಚಿ ಸೋಫಾಗಳಿರಲಿಲ್ಲ. ನಮ್ಮ ಹಾಲಿನಲ್ಲಿ - ಲಿವಿಂಗ್ ರೂಮ್ - ಒಂದು ಚಾಪೆ ಹಾಸಿರುತ್ತಿದ್ದೆವು. ಯಾರು ಬಂದರೂ ಅದರಮೇಲೆಯೇ ಕೂಡುವುದು. ಹಾಗೆ ಯಾರಾದರೂ ಬಂದು ಕೂತು ಬೆನ್ನನ್ನು ಗೋಡೆಗೆ ಒರಗಿಸಿದರೆ ನಿಮಿಷಾರ್ಧದಲ್ಲಿ ಇರುವೆಗಳು ಅವರ ಬೆನ್ನು ಕತ್ತನ್ನೆಲ್ಲಾ ಆವರಿಸಿ ಕಚ್ಚುತ್ತಿದ್ದವು.

ಇರುವೆಗಳನ್ನು ನಿವಾರಿಸಲೆಂದು ನಮ್ಮ ಸೋದರತ್ತೆ, ಬಹಳ ಸಣ್ಣ ವಯಸ್ಸಿನಲ್ಲೇ ತಮ್ಮ ಪತಿಯನ್ನು ಕಳೆದುಕೊಂಡು ನಮ್ಮೊಡನಿದ್ದವರು, ಆ ತೂತುಗಳಿಗೆಲ್ಲಾ ಸೀಮೆಯೆಣ್ಣೆ ಹಾಕುತ್ತಿದ್ದರು. ಒಮ್ಮೆ ಸೀಮೆಎಣ್ಣೆ ಬಿದ್ದರೆ ಹಲವಾರು ದಿನಗಳ ಕಾಲ ಇರುವೆಗಳು ಅಲ್ಲಿ ಸುಳಿಯುತ್ತಿರಲಿಲ್ಲ.

ಆದರೆ ಆ ಕಾಲ ಸೀಮೆಎಣ್ಣೆಯ ರೇಷನ್ನಿನ ಕಾಲ. ನಮಗೆ ನಿಗದಿಯಾಗಿದ್ದ ಸೀಮೆಎಣ್ಣೆಯ ಪ್ರಮಾಣ ನಮ್ಮ ಮನೆಯ ಅಡಿಗೆ ಒಲೆಗೇ ಸಾಲುತ್ತಿರಲಿಲ್ಲ. ಜತೆಗೆ ಆ ಎಣ್ಣೆ ನಮಗೆ ಬೇಕೆಂದಾಗ ಸಿಕ್ಕುತ್ತಿರಲಿಲ್ಲ. ರೇಷನ್ನಿನಲ್ಲಿ ಕೊಡುತ್ತಿದ್ದ ಎಣ್ಣೆಯನ್ನು ಸೀಮೆಎಣ್ಣೆ ಗಾಡಿ ರೇಷನ್ನಿನ ಅಂಗಡಿಮುಂದೆ ಬಂದಾಗ ಕ್ಯೂ ನಿಂತು ಕೊಳ್ಳಬೇಕಿತ್ತು. ಗಾಡಿ ಯಾವಾಗ ಬರುತ್ತದೆಂಬುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ರೇಷನ್ ಅಂಗಡಿಯ ಶೆಟ್ಟಿ ಅದನ್ನು ತಿಳಿದುಕೊಂಡಿರುತ್ತಿದ್ದ. ಆದರೆ ಅವನ ಅಂಗಡಿಗೆ ಬರಿಯ ರೇಷನ್ ಗಾಗಿ ಮಾತ್ರ ಹೋಗುತ್ತಿದ್ದ ನಮಗೆ ಅದನ್ನು ತಿಳಿಸುತ್ತಿರಲಿಲ್ಲ. ಸೀಮೆಯೆಣ್ಣೆಯ ಗಾಡಿಯ ಬಗ್ಗೆ ಸುದ್ದಿ ಬೇಕಾದರೆ ಮನೆಗೆ ಬೇಕಾದ ಇತರೇ ಸಾಮಾನುಗಳೆಲ್ಲವನ್ನೂ ಅವನ ಬಳಿಯೇ ಕೊಳ್ಳಬೇಕಿತ್ತು ! ಅವನ ಬಳಿ ಮನೆ ಸಾಮಾನು ಕೊಂಡರೆ ಅವನು ನಮ್ಮ ಸೀಮೆಎಣ್ಣೆ ಡಬ್ಬವನ್ನು ತನ್ನೊಡನೆ ಇಟ್ಟುಕೊಂಡಿದ್ದು, ಗಾಡಿ ಬರುವ ಹೊತ್ತಿನಲ್ಲಿ ಅವನ ಅಂಗಡಿಯ ಮುಂದೆ ಮೂಡುತ್ತಿದ್ದ ಡಬ್ಬಗಳ ಸಾಲಿನಲ್ಲಿ ಮುಂದೆ ಇಟ್ಟಿರುತ್ತಿದ್ದ.

ಆದರೆ ಅವನ ಅಂಗಡಿಯ ಬೇಳೆಯಲ್ಲಿ ಹುಳ, ಅಕ್ಕಿ ಮುಗ್ಗಲುವಾಸನೆ, ಬೆಲ್ಲ ಅಂಟು ಎಂದೆಲ್ಲಾ ಅಮ್ಮ ತಗಾದೆ ಮಾಡಿ ಅವನ ಬಳಿ ನಮ್ಮ ಮನೆಸಾಮಾನು ಕೊಳ್ಳುತ್ತಿರಲಿಲ್ಲ. ಹಾಗಾಗಿ ನಾವು ಅತ್ತಿತ್ತ ಓಡಾಡುವಾಗ, ಶಾಲೆಗೆ ಹೋಗುವಾಗ, ಬರುವಾಗ ಅಂಗಡಿಯ ಮೇಲೆ ಕಣ್ಣಿಟ್ಟಿದ್ದು ಅಲ್ಲಿ ಡಬ್ಬಗಳ ಸಾಲು ಶುರುವಾಗುವ ಸುಳಿವು ಕಂಡಾಕ್ಷಣ ಡಬ್ಬ ಇಟ್ಟು, ಗಾಡಿಬರುವವರೆಗೂ ಕಾವಲು ನಿಂತು ಎಣ್ಣೆ ಕೊಳ್ಳಬೇಕಿತ್ತು. ನಾವು ಅಲ್ಲಿ ಡಬ್ಬ ಇಟ್ಟು ಮನೆಗೆ ಬಂದರೆ ಮತ್ತೊಮ್ಮೆ ಹೋಗುವ ಹೊತ್ತಿಗೆ ನಮ್ಮ ಡಬ್ಬ ಸಾಲಿನ ಕೊನೆಯಲ್ಲಿರುತ್ತಿತ್ತು!


ಸೀಮೆಎಣ್ಣೆಗೆ ಹೀಗೆ ಪರದಾಟವಾದ್ದರಿಂದ ನಮ್ಮ ಅತ್ತೆ ಇರುವೆಗಳ ತೂತಿಗೆ ಸುಣ್ಣ ತುಂಬಲು ಪ್ರಾರಂಭಿಸಿದರು. ಸದಾ ಒಂದು ತೆಂಗಿನ ಕರಟದಲ್ಲಿ ಸುಣ್ಣ ಕಲಸಿ ತಯಾರಿರುತ್ತಿತ್ತು. ಗೋಡೆಯಲ್ಲಿ ತೂತು ಕಂಡಾಕ್ಷಣ ಅತ್ತೆ ಅದಕ್ಕೆ ಸುಣ್ಣ ತುಂಬಿ ಮುಚ್ಚುತ್ತಿದ್ದರು. ಆದರೇನು? ಮಾರನೆಯ ದಿನ ಅಲ್ಲಿ ಮತ್ತೆ ತೂತಾಗಿ ಇರುವೆಗಳು ಸಾಲಿಟ್ಟಿರುತ್ತಿದ್ದವು. ಹಾಗಾಗಿ ಇರುವೆಗಳಿಗೂ ನಮ್ಮತ್ತೆಗೂ ಸದಾ ಮುಗಿಯದ ಸ್ಫರ್ದೆ.

ಇರುವೆಗಳಿಗೆ ನಮ್ಮ ಮನೆಯ ಎಲ್ಲ ಜಾಗಗಳಿಗಿಂತ ಬಹಳ ಇಷ್ಟವಾದ ಜಾಗ ನಮ್ಮ ನೀರೊಲೆ. ಬಚ್ಚಲು ಮನೆಯ ಒಂದು ಮೂಲೆಯಲ್ಲಿ ದೊಡ್ಡ ತಾಮ್ರದ ಹಂಡೆಯೊಂದನ್ನು ಇರಿಸಿ ಸುತ್ತಲೂ ಕಟ್ಟೆ ಕಟ್ಟಿ ಅದರ ಬುಡದಲ್ಲಿ ಸೌದೆಯೊಟ್ಟಿ ಬೆಂಕಿಹಾಕಲು ಅನುವುಮಾಡಲಾಗಿತ್ತು. ದಿನಾ ರಾತ್ರಿ ಹಂಡೆಗೆ ನೀರುತುಂಬಿ ಬೆಳಗ್ಗೆ ಎದ್ದಾಕ್ಷಣ ಒಲೆಗೆ ಸೌದೆ ತುಂಬಿ ಉರಿಹಾಕುತ್ತಿದ್ದೆವು. ಆ ಒಲೆಯೊಳಗೆ ಕೆಂಪಿರುವೆಗಳು ಗೂಡುಮಾಡಿಕೊಂಡಿದ್ದವು. ಒಲೆಗೆ ಸೌದೆ ಒಟ್ಟುವಾಗ ಎಚ್ಚರ ಇಲ್ಲದಿದ್ದರೆ ನಮ್ಮ ಕೈಗೆಲ್ಲಾ ಕೆಂಪಿರುವೆ ಹತ್ತಿಕೊಂಡು ಒಲೆಯಬದಲು ನಮ್ಮ ಮೈಯಲ್ಲಿ ಉರಿಯೇಳುತ್ತಿತ್ತು !

ಚಳಿಗಾಲದಲ್ಲಿ ಈ ನೀರೊಲೆಯ ಮುಂದೆ ಕೂತು ಮೈಕಾಯಿಸುವುದು ಒಂದು ಬಹಳ ಹಿತವಾದ ಅನುಭವ. ಬೆಳಗ್ಗೆ ಎದ್ದ ತಕ್ಷಣ ಬಚ್ಚಲುಮನೆಯಲ್ಲಿ ಒಲೆಯಮುಂದೆ ಕೂತರೆ ಎದ್ದು ಹೊರಹೋಗುವ ಮನಸ್ಸೇ ಬರುತ್ತಿರಲಿಲ್ಲ. ಎಲ್ಲರ ಸ್ನಾನವಾದಮೇಲೆ ಒಲೆಯಲ್ಲಿ ಉಳಿದ ಬೂದಿಯಲ್ಲಿ ಒಂದೆರಡು ಈರುಳ್ಳಿ ಆಲೂಗಡ್ಡೆಗಳನ್ನು ಹಾಕಿ ಮುಚ್ಚುತ್ತಿದ್ದೆವು. ಒಂದರ್ಧ ಘಂಟೆಯನಂತರ ಅವುಗಳನ್ನು ಹೊರತೆಗೆದು ಸುಟ್ಟ ಸಿಪ್ಪೆ ಸುಲಿದು ತಿನ್ನುವುದು ಅದೆಂಥ ರುಚಿಯೋ !

ಇರುವೆಗಳಿಂದ ಶುರುವಾದ ಬರಹ ಎತ್ತಲೋ ಹೋಯಿತು. ನಮ್ಮ ಮನೆಕಟ್ಟಿದ ಮೊದಮೊದಲಲ್ಲಿ ನಮಗೆ ಕಾಣುತ್ತಿದ್ದ ಕರಿ, ಕೆಂಪು ಇರುವೆಗಳ ಜತೆ ಬಿಳಿ ಇರುವೆಗಳು - ಗೆದ್ದಲು - ಕಂಡಾಗ ನಮ್ಮ ತಂದೆಯವರಿಗೆ ಬಹಳವೇ ಘಾಬರಿಯಾಯಿತು. ಗೆದ್ದಲು ನಮ್ಮ ಮನೆಗೇನೂ ಹತ್ತಿರಲಿಲ್ಲ. ನಮ್ಮ ಮನೆಮುಂದಿದ್ದ ಸೀಬೆಗಿಡದ ಕಾಂಡದಲ್ಲಿ ಒಣಗಿದ್ದ ಒಂದು ಕೊಂಬೆಯಮೇಲೆ ಗೆದ್ದಲಿನ ಗೂಡು ಕಾಣಿಸಿಕೊಂಡಿತು. ತಂದೆಯವರು ತಕ್ಷಣ ಅದನ್ನು ಕೆರೆದು ಹಾಕಿ ಅಲ್ಲಿ ಸುತ್ತಲೂ ಅಗೆದು ಡಿ ಡಿ ಟಿ ಪುಡಿಹಾಕಿದರು. ಆದರೇನು? ಕೆಲವೇದಿನಗಳಲ್ಲಿ ಗೆದ್ದಲು ಮತ್ತೊಂದೆಡೆ ಕಂಡಿತು. ಮತ್ತೆ ಅದೇ ಕೆಲಸ. ಅಗೆತ ಮತ್ತು ಡಿ ಡಿ ಟಿ. ನಮ್ಮ ಅತ್ತೆಯವರಿಗೆ ಮನೆಯೊಳಗಿನ ಇರುವೆಗಳೊಡನೆ ಹೋರಾಟವಾದರೆ ತಂದೆಯವರಿಗೆ ಹೊರಗೆ ಗೆದ್ದಲುಗಳೊಡನೆ ಕಾದಾಟ. ಸಾಲಮಾಡಿ ಜಾಗಕೊಂಡು, ಸಾಲಮಾಡಿ ಕಟ್ಟಿದ್ದ ಮನೆ. ಮಣ್ಣಿನಗೋಡೆ . ಇನ್ನೂ ಹದಿನೈದು ವರುಷ ಕಂತು ತೀರಿಸಬೇಕಿರುವಾಗ ಗೆದ್ದಲುಹತ್ತಿ ಗೋಡೆ ಬಾಗಿಲು ಬಿದ್ದರೆ ಗತಿಯೇನು ಎಂಬುದು ಅವರ ಚಿಂತೆ. ಆ ಆತಂಕ ನಮಗೆ ಆಗ ಅರ್ಥವಾಗುತ್ತಿರಲಿಲ್ಲ.

ತಿಳಿದವರು ಕೆಲವರನ್ನು ಕೇಳಿ ತಂದೆಯವರು ಮನೆಯ ಸುತ್ತಲೂ ಮೂರು ಅಡಿ ಅಗಲ, ಆರು ಆಡಿ ಆಳದ ಕಂದಕ ಅಗೆಸಿದರು. ಕಂದಕದ ಬುಡದಲ್ಲಿ ಯಾವುಯಾವುದೋ ಕೀಟನಾಶಕಗಳನ್ನು ಬೆರೆಸಿ ಹರಡಿ, ಕಂದಕವನ್ನು ಮರಳಿನಿಂದ ತುಂಬಿ ಮುಚ್ಚಿಸಿದರು. ಆ ಕೆಲಸ ನಡೆಯುತ್ತಿರುವಾಗ ನಮಗೆ ಆಟವಾಡಲು ಮರಳುರಾಶಿ, ನೋಡಿ ಕೌತುಕಪಡಲು ಗೆದ್ದಲುಗೂಡು, ರಾಣಿಗೆದ್ದಲು ಮತ್ತು ಮನೆಯಿಂದ ಹೊರಗೆ ಒಳಗೆ ಓಡಾಡಲು ಇಟ್ಟಿದ್ದ ಹಲಗೆಗಳ ಸೇತುವೆಯಮೇಲೆ ಪದೇಪದೇ ನಡೆದಾಡುವ ಸಂಭ್ರಮ ! ಒಟ್ಟಿನಲ್ಲಿ ಆ ಕೆಲಸ ಮುಗಿದನಂತರ ಐವತ್ತು ವರುಷ ನಾವು ಆಮನೆಯಲ್ಲಿದ್ದೆವು. ಗೆದ್ದಲು ಮತ್ತೆ ಕಾಣಬರಲಿಲ್ಲ. ಇರುವೆಗಳ ಕಾಟವೂ ಕೊಂಚ ಕಡಿಮೆಯಾಯಿತು.

ಈಗ ನಾವಿರುವುದು ಸಿಮೆಂಟಿನಿಂದ ಕಟ್ಟಿದ ಮನೆ. ನಮ್ಮ ಕಿಟಕಿಗಳೆಲ್ಲಾ ಅಲ್ಯೂಮಿನಿಯಂ ಲೋಹದ್ದು. ಗೆದ್ದಲಿನ ಭಯವಿಲ್ಲ. ಆದರೆ ಇರುವೆಗಳು ನಮ್ಮನ್ನು ಕಾಡುವುದು ತಪ್ಪಿಲ್ಲ. ಯಾವುದೇ ತಿಂಡಿ ಪದಾರ್ಥ ಅಪ್ಪಿತಪ್ಪಿ ಮುಚ್ಚಳ ಘಟ್ಟಿಯಾಗಿ ಮುಚ್ಚದೆ ಇಟ್ಟಿದ್ದರೆ ಇರುವೆಸಾಲಿಡುವುದು ಖಂಡಿತ. ಈಗ ಅವುಗಳೊಡನೆ ಕಾದಾಡುವ ಬಾರಿ ನನ್ನ ಪತ್ನಿಯದು. ಅಡಿಗೆ ಮನೆಯ ಬಡು ಗಳನ್ನೆಲ್ಲಾ ಆಕೆ ಪದೇಪದೇ ಒದ್ದೆಬಟ್ಟೆಯಿಂದ ಒರೆಸಿಡುತ್ತಾಳೆ. ಇರುವೆಗಳನ್ನು ದೂರವಿಡುವವೆಂದು ಹೆಸರಾದ ರಾಮರೇಖೆ, ಲಕ್ಷ್ಮಣರೇಖೆ ಮುಂತಾಗಿ ಹೆಸರಿರುವ ಸೀಮೆಸುಣ್ಣದಂಥ ಕಡ್ಡಿಗಳನ್ನು ತಂದು ಬಡುಗಳ ಅಂಚುಗಳಲ್ಲಿ ಗೆರೆಯೆಳೆಯುತ್ತಾಳೆ. ಕೀಟನಾಶಕ ಪುಡಿಗಳುದುರಿಸುತ್ತಾಳೆ. ಆದರೆ ಇರುವೆಗಳು ಅದುಹೇಗೋ ಅದೆಲ್ಲವನ್ನು ನಿವಾರಿಸಿಕೊಂಡು ಡಬ್ಬಗಳಿಗೆ ದಾಳಿಯಿಡುತ್ತವೆ. ಪ್ಲಾಸ್ಟಿಕ್ ನ ಡಬ್ಬವನ್ನೇ ತೂತುಕೊರೆದು ಒಳನುಗ್ಗುತ್ತವೆ. ಬೇಸಗೆಯಲ್ಲಂತೂ ಅವುಗಳ ಕಾಟ ಹೇಳತೀರದು. ಕೊನೆಗೆ ನನ್ನ ಪತ್ನಿ ನಮ್ಮ ಡೈನಿಂಗ್ ಟೇಬಲಿನ ನಾಲ್ಕುಕಾಲುಗಳ ತಳಕ್ಕೆ ನಾಲ್ಕು ಬಟ್ಟಲುಗಳನ್ನಿಟ್ಟು ಅದರಲ್ಲಿ ನೀರುತುಂಬಿ, ಟೇಬಲ್ಲಿನ ಮೇಲೆ ತಿಂಡಿ ಪದಾರ್ಥಗಳನ್ನಿಟ್ಟು "ಈಗ ಇವು ಏನು ಮಾಡುತ್ತವೋ ನೋಡುತ್ತೇನೆ. ಈ ಇರುವೆಗಳು ಏನು ಮಾಡಿದರೂ ನೀರಿನಲ್ಲಿ ಈಜಿಕೊಂಡು ಬರುವ ವಿದ್ಯೆಯನ್ನಂತೂ ಇನ್ನೂ ಕಲಿಯಲಿಲ್ಲ" ಎಂದು ಇರುವೆಗಳಿಗೆ ಸವಾಲೆಸೆದಳು. ಇರುವೆಗಳು ಸೋಲೊಪ್ಪಿಕೊಂಡೆವೆನಿಸುತ್ತದೆ. ಅದಾಗಿ ಹದಿನೈದು ದಿನವಾದರೂ ಮೇಜಿನ ಮೇಲೆ ಇರುವೆಗಳು ಕಾಣಲಿಲ್ಲ. ನನ್ನ ಪತ್ನಿ ತಾನು ಗೆದ್ದೆನೆಂದು ಬೀಗಿದಳು.

ತಿಂಗಳುಗಳಿಂದ ಸಿಹಿತಿಂಡಿ ಮಾಡದೇ ಹೆದರಿಕೊಂಡಿದ್ದವಳು ನನ್ನ ಮಗನ ಹುಟ್ಟುಹಬ್ಬಕ್ಕೆಂದು ಗುಲಾಬ್ ಜಾಮೂನ್ ಮಾಡಿ ಧೈರ್ಯವಾಗಿ ಮೇಜಿನಮೇಲಿಟ್ಟು ರಾತ್ರಿ ನಿರಾಳವಾಗಿ ನಿದ್ದೆ ಮಾಡಿದಳು. ಮಾರನೇ ದಿವಸ ಮುಂಜಾನೆ ಎದ್ದು ನೋಡಿದರೆ ಆಘಾತ ! ಮೇಜಿನಮೇಲೆ ಜಾಮೂನಿನ ಬೋಗುಣಿಯೇ ಕಾಣದಂತೆ ಇರುವೆಗಳು ಮುತ್ತಿಕೊಂಡಿದ್ದವು. ನನ್ನಾಕೆಯನ್ನು ಸುಧಾರಿಸಲು ನನಗೆ ಅರ್ಧದಿನ ಬೇಕಾಯಿತು. ಇಂಗ್ಲಿಷಿನಲ್ಲಿ ಟ್ಯಾಕ್ಟಿಕಲ್ ರಿಟ್ರೀಟ್ ಎಂಬ ಪದವಿದೆ. ಯುದ್ಧಭೂಮಿಯಿಂದ ಕೊಂಚ ಹಿಮ್ಮೆಟ್ಟಿ ಅವಕಾಶಕ್ಕಾಗಿ ಕಾಯುವುದು. ಇರುವೆಗಳು ಹಾಗೆ ಕಾದಿದ್ದವೇನೋ. ನನ್ನಾಕೆ ತಾನು ಗೆದ್ದೆನೆಂಬ ಧೈರ್ಯದಿಂದ ಜಾಮೂನುಮಾಡಿ ಮೇಜಿನಮೇಲಿಟ್ಟು, ತನ್ನ ಸ್ನೇಹಿತೆಗೆ ಆಬಗ್ಗೆ ಮೊಬೈಲಿನಿಂದ ಮೆಸೇಜ್ ಕಳುಹಿಸಿ, ಮೊಬೈಲನ್ನು ಚಾರ್ಜುಮಾಡಲೆಂದು ಮೇಜಿನಮೇಲೆಯೇ ಇಟ್ಟು ಚಾರ್ಜರ್ ಅನ್ನು ಮೇಜಿನಪಕ್ಕದ ಪ್ಲಗ್ ಪಾಯಿಂಟಿಗೆ ತಗುಲಿಸಿ ಹೋಗಿದ್ದಳು. ಸಮಯಕಾದಿದ್ದ ಇರುವೆಗಳು ಗೋಡೆಹತ್ತಿ , ಪ್ಲಗ್ ಪಾಯಿಂಟ್ ತಲುಪಿ, ಚಾರ್ಜರಿನ ತಂತಿಯಮೆಲಿಂದ ಮೊಬೈಲಿಗಿಳಿದು, ಮೇಜನ್ನು ಆಕ್ರಮಿಸಿಕೊಂಡವು ! ಈ ಮಾನವರು ಏನೇಮಾಡಿದರು ಒಂದಲ್ಲ ಒಂದುಕಡೆ ಎಚ್ಚರ ಕಳೆದುಕೊಳ್ಳುತ್ತಾರೆಂದು ಅವಕ್ಕೆ ತಿಳಿಯದೇ ?

ನಾವು ಇರುವೆಗಳನ್ನು ಪೆಟ್ಟಿಗೆಯಲ್ಲಿಟ್ಟು ಅವುಗಳ ಜೀವನಕ್ರಮವನ್ನು ನೋಡಿ ಕಲಿಯತೊಡಗಿದ್ದೇವೆ. ಅವುಗಳ ಗೂಡುಗಳಲ್ಲಿ ಸಣ್ಣ ಸಣ್ಣ ಕ್ಯಾಮರಾಗಳನ್ನು ಅಳವಡಿಸಿ ಅವು ಬಾಳುವ ರೀತಿಯನ್ನು ಅಭ್ಯಾಸಮಾಡುತ್ತೇವೆ. ಆದರೆ ನೋಡಿ, ನಾವು ಮಾನವರು ಈ ಭೂಮಿಯಮೇಲೆ ಕಾಣಿಸಿಕೊಂಡದ್ದು ಎರಡು ಲಕ್ಷವರುಷಗಳ ಹಿಂದೆ ಎಂದು ಅಂದಾಜು. ಇರುವೆಗಳು ಭೂಮಿಯಮೇಲೆ ಕಾಣಿಸಿಕೊಂಡದ್ದು ತೊಂಭತ್ತೆರಡು ದಶಲಕ್ಷಗಳಿಗೂ ಮೊದಲಂತೆ ! ನಾವು ಅವುಗಳ ಜೀವನವನ್ನು ಈಚೆಗೆ, ಇಪ್ಪತ್ತೋ , ಮೂವತ್ತೋ , ಐವತ್ತೋ ವರುಷಗಳಿಂದ ಅಭ್ಯಾಸಮಾಡುತ್ತಿದ್ದೇವೆ. ಅವು ನಮ್ಮನ್ನು, ನಾವು ಭೂಮಿಯಮೇಲೆ ಕಾಣಿಸಿಕೊಂಡಾಗಿನಿಂದ ಅಂದರೆ ಎರಡು ಲಕ್ಷ ವರುಷಗಳಿಂದ ನೋಡುತ್ತಿವೆ ! ನಾವು ಅವುಗಳಿಗೆ ಸಾಟಿಯೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ