ಗುರುವಾರ, ಮೇ 1, 2014

avaravara bhaavakke avaravara bhakutige ...............

 ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ  ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ ತಲೆಗೇರಿಸಿಕೊಂಡು ಮನೆಗೆ ಬಂದೆ. ಮನೆಗೆಬಂದು ಮುಖತೊಳೆದು ತಲೆಬಾಚಿದಾಗ ಹಲವು ಅಕ್ಷತೆ ಕಾಳುಗಳು ಕೆಳಗೆ ಬಿದ್ದವು. ಅವು ಕಾಲಿಗೆ ಸಿಕ್ಕುವುದು ಸರಿಯಲ್ಲವೆನಿಸಿ  ಅವನ್ನು ತೆಗೆದು ಪಕ್ಕಕ್ಕೆಹಾಕಿದೆ. ನಂತರ ರಾಯರು, ಅಕ್ಷತೆ , ಮಠ ಎಲ್ಲವೂ ಮರೆತವು .

ಸಂಜೆ ಏನೂ ಕೆಲಸವಿರಲಿಲ್ಲ.  ಗಿಡಗಳಿಗೆ ನೀರುಹಾಕಿ, ಕಾರುತೊಳೆದು, ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನೆಲ್ಲಾ ಮುಗಿಸಿದರೂ ಆರೂವರೆ ಆಗಿತ್ತು ಅಷ್ಟೇ. ಏನು ಮಾಡಲೂ ತೋರಲಿಲ್ಲ. ಸುಮ್ಮನೆ ಕೂರಲು ಬೇಜಾರು. ಓದಲು ಯಾವುದೂ ಪುಸ್ತಕ ಸಿಗಲಿಲ್ಲ. ಹಾಗಾಗಿ ಹಜಾಮತಿಯಾದರೂ ಮುಗಿಸಿಕೊಳ್ಳೋಣವೆಂದು ಕ್ಷೌರದ ಅಂಗಡಿಗೆ ಹೋದೆ.

"ಬರ್ರೀ  ಸರ್ ಭಾಳದಿನಾತು " ಸ್ವಾಗತಿಸಿದ ಯಜಮಾನ ಶರಣಪ್ಪ.

ಕನ್ನಡಿಯ ಮುಂದೆ ಕೂರಿಸಿ, ತಲೆಗೆ ನೀರು ಸಿಂಪಡಿಸಿ ಕೂದಲಿನಮೇಲೆ ಕೈಯಾಡಿಸಿದ.  ಅವನಕೈಗೆ ಎರಡು  ಅಕ್ಷತೆ ಕಾಳು ಸಿಕ್ಕವು.

"ಇದೇನ್ರಿಸರ್ ಅಕ್ಕಿಕಾಳು?"

ತಲೆಯಲ್ಲಿ ಅಕ್ಕಿಕಾಳು ಹೇಗೆ ಬಂತು? ಯೋಚಿಸಿದೆ. ಹೊಳೆಯಲಿಲ್ಲ.

"ಕೆಂಪದಾವ್ರಿ "

ಟ್ಯೂಬು ಹೊತ್ತಿಕೊಂಡಿತು.

"ಓಹೋ ಅದಾ? ಬೆಳಗ್ಗೆ ಮಠಕ್ಕೆ ಹೋಗಿದ್ದೆ ನೋಡು ಅಕ್ಷತೆ ಕೊಟ್ಟಿದ್ರು ತಲೆಗೆಹಾಕ್ಕೊಂಡಿದ್ದೆ."

"ಮಠಕ್ಕೆ ಹೋಗಿದ್ರೇನ್ರಿ? ಯಾವ ಮಠಾರೀ ?"

"ರಾಯರ ಮಠ"

"ರಾಯರ ಮಠಾಂದ್ರೆ ? ರಾಘವೇಂದ್ರ ಸ್ವಾಮಿ ಮಠ  ಏನ್ರಿ?

"ಹೌದಪ್ಪ"

ಶರಣಪ್ಪ ತಕ್ಷಣ  ತನ್ನ ಕೈಲಿ ಹಿಡಿದಿದ್ದ ಅಕ್ಷತೆಕಾಳನ್ನು ಕಣ್ಣಿಗೊತ್ತಿಕೊಂಡ.

"ಭಾಳ ಛಲೋ ಆತ್ರಿ. ನನ್ನ ಅದೃಷ್ಟ ನೋಡ್ರಿ. ಇವತ್ತು ಅಲ್ಲಿಗೆ ಹೋಗಬೇಕೆಂದು ಭಾಳ ಅನಿಸಿತ್ರಿ. ಆದ್ರ ಅಗವಲ್ಲದಾತ್ರಿ. ಈಗ ನೋಡ್ರಿ ನಿಮ್ಮ ತಲೇದಾಗ ನನಗ ಪ್ರಸಾದ ಸಿಕ್ತಲ್ರಿ ? ಮನಸು ಹಗೂರಾತ್ರಿ. ನನ್ನ ಮನಸಿನಾಗಿದ್ದ ಪ್ರಶ್ನೆಗೆ ಸ್ವಾಮಿಗಳು  ಉತ್ತರ ಕೊಟ್ಟಾರ ನೋಡ್ರಿ. ನಾ ಮತ್ತೇನೂ ವಿಚಾರ ಮಾಡೂದು ಬೇಕಿಲ್ರಿ."

ನನ್ನ ತಲೆಯಲ್ಲಿ ಸಿಕ್ಕ ಅಕ್ಕಿಕಾಳಿನಿಂಡ ಅವನಿಗೆ ಬಹಳ ಸಂತೋಷ ವಾಯಿತೆನ್ನುವುದನ್ನು ಬಿಟ್ಟು ನನಗೆ ಮತ್ತೇನೂ ತಿಳಿಯಲಿಲ್ಲ. ನಾನು ಅವನ ಮುಖ ನೋಡಿದೆ.

"ಇವನ್ನ ನಾನು ಇಟಗೊಳ್ಳೇನ್ರಿ"?

ಆಗಬಹುದೆಂದು  ತಲೆಹಾಕಿದೆ.

 ಅಕ್ಷತೆಕಾಳುಗಳನ್ನು ಕಿಸೆಗೆ ಹಾಕಿಕೊಂಡು ವಿವರ ಹೇಳಿದ.  ಅವನ ಮಗಳಿಗೆ ಹುಬ್ಬಳ್ಳಿಯಲ್ಲಿ ಸಂಭಂಧ ಕೂಡಿ ವಿವಾಹ ನಿಶ್ಚಿತ ವಾಗುವಲ್ಲಿಗೆ ಬಂದಿದೆಯಂತೆ. ನಾನು ಅವನಲ್ಲಿಗೆ ಹೋಗಿದ್ದ ಮಾರನೆಯದಿನ ಅವನ ಮನೆಯವರೆಲ್ಲಾ ಹುಬ್ಬಳ್ಳಿಗೆ ಹೋಗಿ ವಿವಾಹ ನಿಶ್ಚಯಮಾಡಿಕೊಂದು ಬರುವುದಿತ್ತಂತೆ. ತನ್ನ ಕೋಮಿನ ಹಿರಿಯ ಮುಖಂಡರೊಬ್ಬರನ್ನು ತಮ್ಮೊಡನೆ ಬರಬೇಕೆಂದು ಕರೆಯಲು ಶರಣಪ್ಪ ಅವರಲ್ಲಿಗೆ ಹೋದನಂತೆ. ಸಂಭಂದದ ಪ್ರಸ್ತಾಪ ಬಂದಾಗ ತಮ್ಮ ಸಲಹೆ ಕೇಳದೆ, ಎಲ್ಲಾ ಮುಗಿದು ನಿಶ್ಚಯವಾಗುವ ಕಾಲಕ್ಕೆ ತಮ್ಮನ್ನು ಕರೆದನೆಂದು ಆ ಹಿರಿಯರ ಅಭಿಮಾನಕ್ಕೆ ಧಕ್ಕೆಬಂದು, ಅವರು ಸಿಟ್ಟಾಗಿ,  ಯದ್ವಾ ತದ್ವಾ ಮಾತನಾಡಿ, ಈ ಸಂಭಂದದಿಂದ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿಬಿಟ್ಟರಂತೆ. (ಆ ಮುಖಂಡರ ಮಗಳಿಗೂ  ಶರಣಪ್ಪ ನೋಡಿದ್ದ ಸಂಭಂದವನ್ನೇ ವಿಚಾರಿಸಿದ್ದು, ಅದು ಆಗಿಬರಲಿಲ್ಲವೆಂದು ನಂತರ ಮತ್ತಾರೋ ತಿಳಿಸಿದರಂತೆ)

ಆ ಹಿರಿಯರೇನೂ ಭಗವಂತನ ತುಂಡಾಗಲೀ ಅಥವಾ ನುಡಿದದ್ದು ನಡೆಯುವಂಥ ಅವಧೂತರಾಗಲೀ ಅಲ್ಲವಾದರೂ ಶರಣಪ್ಪನ ಮನಸ್ಸಿಗೆ ಬಹಳ ಕೆಡುಕೆನಿಸಿ ತಳಮಳವಾಯಿತಂತೆ. ನೋಡಿದ್ದ ಸಂಭಂದ ಮುಂದುವರೆಸುವುದೋ ಬೇಡವೋ ತಿಳಿಯದೆ ಶರಣಪ್ಪ ಒದ್ದಾಡಿದನಂತೆ. ನಂತರ ತಾನು ಸದಾ ನಡೆದುಕೊಳ್ಳುವ ಒಂದು ದೇವಸ್ಥಾನಕ್ಕೆ ಹೋಗಿ ಪ್ರಶ್ನೆ ಕೇಳಿದನಂತೆ. ದೇವರನ್ನು ಕೇಳಿದ ಪೂಜಾರಿ, ಪರಮಾತ್ಮನ ಒಪ್ಪಿಗೆಯನ್ನು ತಿಳಿಯಪಡಿಸಿ ಮುಂದುವರೆಯುವಂತೆ ಹೇಳಿದನಾದರೂ ಶರಣಪ್ಪನಿಗೆ ಪೂರ್ತಿ ಸಮಾಧಾನವಿರಲಿಲ್ಲವಂತೆ. ಮಂತ್ರಾಲಯದ ಸ್ವಾಮಿಗಳ ಪಾದಕ್ಕೆ ಬಿದ್ದರೆ ಅವರು ಕಾಯುವರೆಂದು ಯಾರೋ ಹೇಳಿದ್ದರಿಂದ ಊರಿಗೆ ಹೊರಡುವಮುನ್ನ ರಾಯರ ಪಾದಕ್ಕೆ ಬೀಳಬೇಕೆಂದು ಶರಣಪ್ಪ ಆಶಿಸಿದ್ದನಾದರೂ ಹೊರಡುವದಿನ ಹತ್ತಿರಬಂದರೂ ಅದು ಆಗಿರಲಿಲ್ಲವಂತೆ. ನನ್ನ ತಲೆಯಲ್ಲಿ ರಾಯರ ಮಂತ್ರಾಕ್ಷತೆ ಸಿಕ್ಕು ಶರಣಪ್ಪನಿಗೆ ರಾಯರೇ ತನ್ನಲ್ಲಿಗೆ ನಡೆದುಬಂದು ಅವನ ಮಗಳ ವಿವಾಹಕ್ಕೆ ತಮ್ಮ ಒಪ್ಪಿಗೆ ನೀಡಿದಂತೆನಿಸಿ ಬಹಳವೇ ಸಂತೋಷ, ಸಮಾಧಾನವಾಗಿಬಿಟ್ಟಿತಂತೆ. ಇದು ವಿಷಯ.

"ಮತ್ತೇನೂ ವಿಚಾರ ಮಾಡೂದು ಬೇಕಿಲ್ಲ  ನೋಡ್ರಿ. ನಾಳೆ ಮುಂಜಾನೆ ಗಾಡಿಗೆ ಹೇಳೀನ್ರಿ. ನನ್ನ ಸಂಸಾರ, ನಮ್ಮ ಅವ್ವಾರು, ನನ್ನ ಭಾವ, ಮಾತ್ತೊಂದೆರಡು ಮಂದಿ ಹೋಗಿ ನಿಶ್ಚಯ ಮಾಡಿ ಬಂದುಬಿಡ್ತೀವ್ರಿ. ದ್ಯಾವ್ರೇ ನಿಮ್ಮನ್ನಿಲ್ಲಿಗೆ ಕಳಿಸಿದ ನೋಡ್ರೀ." ಎಂದು ಮತ್ತೆ ಮತ್ತೆ ಹೇಳುತ್ತಾ ನನ್ನ ತಲೆಯ ಕೆಲಸ ಮುಗಿಸಿದ ಶರನಪ್ಪ.

ಮಠಕ್ಕೆ ಹೋದವನು  ನಾನು. ನಮಸ್ಕಾರ ಹಾಕಿದ್ದು ನಾನು. ಅಕ್ಷತೆ ಬಿದ್ದದ್ದು ನನ್ನ ಕೈಗೆ. ಅದು ಏರಿದ್ದು ನನ್ನ ತಲೆಗೆ. ಆದರೆ ನನ್ನ ಮಟ್ಟಿಗೆ ಇದೆಲ್ಲಾ ಯಾಂತ್ರಿಕವಾಗಿ ನಡೆಯಿತು. ನಾನು ಮಠಕ್ಕೆ ಹೋಗಬೇಕೆಂಬ ಭಕ್ತಿಯಿಂದ ಹೋದದ್ದಲ್ಲ. ಹತ್ತಿರ ಹೋಗಿದ್ದೆನಲ್ಲಾ ಎಂದು ಹಾಗೆಯೇ ಒಳ ಹೊಕ್ಕದ್ದು. ಮಿಕ್ಕಿದ್ದೆಲ್ಲಾ ಹಾಗೆಯೇ.  ಅಭ್ಯಾಸಬಲದಿಂದ ಮಾಡಿದ್ದು. ಆದರೆ ಶರಣಪ್ಪ ನನ್ನ ತಲೆಯಲ್ಲಿ ಉಳಿದಿದ್ದ ಎರಡು ಅಕ್ಕಿ ಕಾಳಿನಲ್ಲಿ ರಾಯರನ್ನೇ ಕಂಡ. ಅದನ್ನು ಭಕ್ತಿಯಿಂದ ಕೈಲಿ ಹಿಡಿದು ಅದರ ಮೂಲಕ ತನ್ನನ್ನು ತೊಳಲಾಡಿಸುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಕೊಂಡ. ಮನಸ್ಸು ಹಗುರ ಮಾಡಿಕೊಂಡು ಉತ್ಸಾಹಗೊಂಡ.

ಅದಕ್ಕೇ ಅಲ್ಲವೇ ನಮ್ಮ ನಮ್ಮ ಭಕ್ತಿ, ಭಾವನೆಗಳಿಗನುಗುಣವಾಗಿ ಭಗವಂತ ನಮಗೆ ಕಾಣುವನೆಂದು ತಿಳಿದವರು ಹೇಳಿರುವುದು?

ನಾನು ಒಂದು ಘಂಟೆ ಕೂತು ತಿಣುಕಿ, ಬರೆದು ತಿಳಿಸಿದ್ದನ್ನು ನಿಜಗುಣ ಶಿವಯೋಗಿಗಳು ನಾಲ್ಕೇಸಾಲಿನಲ್ಲಿ ಅದೆಷ್ಟು ಸುಂದರವಾಗಿ ಬರೆದಿದ್ದಾರೆ ನೋಡಿ,

ಅವರವರ ಭಾವಕ್ಕೆ, ಅವರವರ ಭಕುತಿಗೆ
ಅವರವರ ತೆರನಾಗಿ  ಇರುತಿಹನು ಶಿವಯೋಗಿ.
ಹರಿಯಭಕ್ತರಿಗೆ ಹರಿ, ಹರನ  ಭಕ್ತರಿಗೆ ಹರ
ನರರೇನು ಭಾವಿಪರೋ ಅದರಂತೆ ತೋರುವನು.







ಬುಧವಾರ, ಮಾರ್ಚ್ 26, 2014

ನನ್ನ  ಹಾಡುಗಾರಿಕೆ. 

ಛಳಿ ಮುಗಿದು ಬೇಸಗೆ ಕಾಲಿಟ್ಟಿರುವುದು ಗೊತ್ತಾಗುತ್ತಿದೆ. ಆದರೂ ಮುಂಜಾನೆ ಸೂರ್ಯ ಮೂಡುವ ಮೊದಲು ಹಾಗೂ ಸಂಜೆ ಸೂರ್ಯ ಮುಳುಗಿದನಂತರ  ಕೊಂಚ ತಂಪಾಗಿರುತ್ತದೆ. ಒಂದುವೇಳೆ ಮನೆಯೊಳಗೆ ಸೆಖೆಯೆನ್ನಿಸಿದರೂ  ಹೊರಗೆ ತಂಪು. ರಾತ್ರಿ ಊಟವಾದನಂತರ ಹೊರಗಿನ ಹಿತಕರವಾದ ಹವೆಯಲ್ಲಿ ಕೊಂಚ ಅಡ್ಡಾಡೋಣವೆನ್ನಿಸಿತು. ಕೆಳಗಿಳಿದು ಹೊರಗೆ ಬಂದೆ. ನನ್ನ ಪತ್ನಿ ಕೋಣೆಯಲ್ಲಿ ಟೀವಿ ನೋಡುತ್ತ ಕುಳಿತಳು.

ನಾನು ಹೊರಗೆ ಬಂದಾಗ, ಗಿಡಗಳ ಪಾತಿ  ಒಣಗಿದಂತೆ ಕಂಡುಬಂದು, ಒಂದೈದು ನಿಮಿಷ ಕೆಲವು ಸಣ್ಣ ಗಿಡಗಳಿಗೆ ನೀರು ಹಾಕಿ ನಂತರ ರಸ್ತೆಗೆಬಂದೆ. ನಮ್ಮ ಮನೆಯ ಮುಂದಿನ ದಾರಿಯಲ್ಲಿ ಕತ್ತಲಾದಬಳಿಕ ಯಾವುದೇ ಓಡಾಟವಿಲ್ಲ. ಆಗೊಂದು ಈಗೊಂದು ಇಲಿಯೋ ಹೆಗ್ಗಣವೋ ಅಕ್ಕ ಪಕ್ಕ ಸರಿದಾಡೀತಷ್ಟೆ. ಹಿತಕರವಾದ ಹವೆಯಲ್ಲಿ ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡತೊಡಗಿದಂತೆ ಮನಸ್ಸಿಗೆ ಹಿತವೆನಿಸಿ ಬಾಯಿಗೆ ಬಂದ ಗೀತೆಗಳ ಒಂದೆರಡು ಸಾಲುಗಳನ್ನು ಗುನುಗತೊಡಗಿದೆ.
ಹಾಗೆಯೇ ಲಹರಿಬಂದು ಒಂದು ದಾಸರಪದ ನೆನಪಾಗಿ ಅದನ್ನು ನನಗಿಷ್ಟವಾದ ಶೈಲಿಯಲ್ಲಿ ಸ್ವಲ್ಪ ಮೇಲುದನಿಯಲ್ಲೇ ಹಾಡತೊಡಗಿದೆ. ಅದರ ಕೆಲವು ಸಾಲುಗಳನ್ನು ಇನ್ನೂ ದೊಡ್ಡದನಿಯಲ್ಲಿ ಹಾಡಿದರೆ ಚಂದವೆನಿಸಿ ದನಿ ಇನ್ನೂ ಮೇಲೇರಿಸಿದೆ. ಹೇಗೂ ದಾಸರಪದಗಳನ್ನು ರಸ್ತೆಯಲ್ಲಿ ಹಾಡುವುದಕ್ಕೆಂದೇ ಬರೆದದ್ದಲ್ಲವೇ? ಅಷ್ಟೇ ಅಲ್ಲದೆ ಮನೆಯಲ್ಲಿ ನಾನು ಯಾವಾಗಲಾದರೂ ಪದವೊಂದನ್ನು ಹೀಗೆ ಹಾಡತೊಡಗಿದರೆ  ಒಂದು ಕೋಣೆಯಿಂದ "ಸಾಕು. ಸೀರಿಯಲ್ ದು ಮಾತೇನೂ ಕೇಳುತ್ತಿಲ್ಲ" ಎಂದೂ ಮತ್ತೊಂದು ಕೋಣೆಯಿಂದ "ಅಪ್ಪಾ ಫೋನ್ ನಲ್ಲಿ ಮಾತಾಡ್ತಾ ಇದೀನಿ" ಎಂದೂ ದನಿಗಳು  ಕೇಳಿಬರುತ್ತವೆ. ರಸ್ತೆಯಲ್ಲಿ ಯಾರದೂ ಅಡ್ಡಿ ಆತಂಕಗಳಿಲ್ಲದೆ ನನ್ನ ಗಂಟಲು ಸರಾಗವಾಗಿ ಮೇಲೇರಿತು.

ಪಕ್ಕದ ಮನೆಯೊಂದರ ಕಿಟಕಿಯ ಬಾಗಿಲು ತೆರೆದು ತಲೆಯೊಂದು ಕಂಡುಬಂದು ನನ್ನೆಡೆ ತಿರುಗಿನೋಡಿ ಮತ್ತೆ ಒಳಹೊಕ್ಕು ಕಿಟಕಿ ಮುಚ್ಚಿಕೊಂಡಿತು. ನನ್ನ ದನಿ ಅಡಗಿತು. ನಿಶ್ಯಬ್ದವಾಗಿ ಮನೆಯೊಳಗೆ ಬಂದೆ.

ನನ್ನ ಪತ್ನಿ ಕೋಣೆಯಿಂದ ಹೊರಬಂದಳು. "ಅದೇನು ರಸ್ತೆಯಲ್ಲಿ ಶಬ್ದ? ಹೊರಗೆ ಹೋಗಿ ಹಾಡ್ತಾ ಇದ್ರಾ? ಏನಾಗಿದೆ ನಿಮಗೆ? ಅದೇನೋ ನೀರು ಹರಿದ ಹಾಗೆ ಬೇರೆ ಕೇಳ್ತಾ ಇತ್ತು?"

ಒಂದು ಒಳ್ಳೆಯ ವಾಕ್ಯ ತಲೆಗೆ ಹೊಳೆಯಿತು.  ಹೇಳಿದೆ  "ನೀರಿನ ಶಬ್ದಾನಾ? ಅದು ರಸ್ತೆಯಲ್ಲಿ ಸಂಗೀತದ ರಸಗಂಗೆ ಹರಿಯುತ್ತಿದ್ದ ಶಬ್ದ."

ಅಷ್ಟರಲ್ಲಿ ನನ್ನ ಮಗ ಹೊರಗೆ ಬಂದ  "ಅಮ್ಮಾ  ಮೊದಲು ಕೇಳಿದ ನೀರಿನ ಶಬ್ದ ರಸಂಗೀತದ ರಸಗಂಗೆ. ಅಮೇಲೆ ಕೇಳಿತಲ್ಲಾ  ಪ್ರವಾಹದ ಶಬ್ದ, ಅದು, ಆ ಸಂಗೀತದ ರಸಗಂಗೆಯನ್ನು ಸವಿದವರ ಕಣ್ಣಿನಿಂದ ಹರಿದ ಗಂಗಾಭವಾನಿ." 


ಶನಿವಾರ, ಮಾರ್ಚ್ 15, 2014

 ಫಲಮಾಗುವಂದು ತುತ್ತೂರಿ ದನಿಯಿಲ್ಲ - ಮತ್ತು  - ಅಜ್ಜ. 

ಮತ್ತೊಮ್ಮೆ ನಮ್ಮ ಸಪೋಟ ಗಿಡದಲ್ಲಿ ಹೊಸ ಚಿಗುರು ಚಿಗುರಿ, ಹೂವಾಗಿ, ಕಾಯಿಕಚ್ಚಿ, ಬಲಿಯತೊಡಗಿದವು. ಕಾಯಿಗಳು ಬಲಿತಂತೆ ಎಂದಿನಂತೆ ಬಾವಲಿಗಳು ಬಂದೆರಗಿದವು. ಬಾವಲಿ ಕಚ್ಚಿದ ಕಾಯಿಗಳು ಒಂದೊಂದಾಗಿ ನೆಲಕ್ಕುರುಳತೊಡಗಿದಂತೆ ನನ್ನ ಪತ್ನಿಯ ವರಾತ ಸುರುವಾಯಿತು. "ಎಷ್ಟೊಂದು ಕಾಯಾಗಿತ್ತು. ಈಗ ಅದರಲ್ಲಿ ಅರ್ಧವೂ ಉಳಿದಿಲ್ಲ. ಈ ಬಾವಲಿಗಳಿಗೋಸ್ಕರ ಗಿಡ ಬೆಳಸಿದಂತಾಗಿದೆ. ಹೊಟ್ಟೆ ಉರಿಯತ್ತೆ. ಕಾಯಿ ಕಿತ್ತಿಡಿ ಅಂದರೆ ನೀವು ಕೇಳಲ್ಲ. ನನಗೆ ಮರಹತ್ತಕ್ಕಾಗಿದ್ದಿದ್ರೆ ನಿಮ್ಮ ಕೈ ಕಾಯಬೇಕಾದ್ದೆ ಇರಲಿಲ್ಲ. ಏನುಮಾಡೋದು ನನ್ನ ಕರ್ಮ" ಇತ್ಯಾದಿ ಇತ್ಯಾದಿ. 

"ಹೋಗಲಿ ಬಿಡು. ಅವು ತಿಂದರೇನು  ನಾವು ತಿಂದರೇನು? ಬಾವಲಿಗಳೂ ಭಗವಂತನ ಸೃಷ್ಟಿಯೇ ತಾನೇ? ಅವರವರ ಹಣೆಯಲ್ಲಿ ಬರೆದದ್ದು ಅವರವರಿಗೆ." 

ಅವಳಿಗೆ ರೇಗಿತು. "ನಿಮ್ಮ ಸೋಮಾರಿತನಕ್ಕೆ ಅಧ್ಯಾತ್ಮದ ಬಣ್ಣ ಹಚ್ಚಬೇಡಿ. ಅವನಾದರೂ ಕೈಗೆ ಸಿಕ್ಕಿದ್ದರೆ (ಅವನು - ನಮ್ಮ ಮಗ) ಕೀಳಿಸುತ್ತಿದ್ದೆ. ಆದರೆ ಈ ವಿಷಯದಲ್ಲಿ ಅವನು ನಿಮ್ಮ ಮಗನಲ್ಲ ಅಪ್ಪ. ಒಟ್ಟಿನಲ್ಲಿ ನಾನು ಕೇಳಿಕೊಂಡು ಬಂದಿಲ್ಲ ಅಷ್ಟೇ"


ಅಲ್ಲಿಗೆ ಅದು ನಿಂತಿತ್ತು. ಆಹೊತ್ತಿಗೆ ಅಜ್ಜ ಬಂದ. ಬಂದವನು ಸುಮ್ಮನಿರಬಾರದೇ?

"ಚಿಕ್ಕು ಹಣ್ಣಾಗೈತ್ರಿ. ಕಿತ್ತುಕೋರಿ.  ಸುಮ್ಮಗ ಹಕ್ಕಿಪಕ್ಕಿ ತಿಂದುಹೊಗ್ತಾವು."

ನನ್ನಿಂದ ಉತ್ತರ ಬರದಿದ್ದುದನ್ನು ನೋಡಿ ಮುಂದುವರೆದ.

"ನಾ ಮರಹತ್ತಿ ಕಿತ್ತುಕೊಡಲೇನ್ರಿ"

"ಅಜ್ಜ ಹೇಳಿದ್ದು ಕೇಳಿತೇನು? ನಾಚಿಕೆಯಾಗಬೇಕು ನಿಮಗೆ."


ಈ ಅಜ್ಜ ಸುಮ್ಮನಿರಲಾರ. ನನಗೆ ನಾಚಿಗೆಯಾಗಬೇಕಾದದ್ದೇನೋ ನಿಜವೇ. ನಮ್ಮ ಅಂಗಳದಲ್ಲಿನ ಕಳೆಕಿತ್ತು, ಗುಡಿಸಿ, ಗಿಡಗಳಿಗೆ ಪಾತಿಮಾಡಿ, ಒಂದು ರೂಪಕ್ಕೆ ತಂದಿಡಲು ತಿಂಗಳಿಗೊಮ್ಮೆ ಅಜ್ಜ ಬರುತ್ತಾನೆ. ಅವನಿಂದ ಆ ಕೆಲಸಮಾಡಿಸಿಕೊಳ್ಳುವುದೇ ನನಗೆ ನಾಚಿಗ್ಗೇಡು. ಇನ್ನು ಅವನನ್ನು ಮರಹತ್ತಿಸಿದರೆ? ಅವನೇನೋ ನಿಜಕ್ಕೂ ತಯಾರೇ!

"ನಾ ಅಂಜೂದಿಲ್ರಿ. ಮುದುಕದಾನಂತ ಚಿಂತಿಮಾಡಬ್ಯಾಡ್ರಿ. ಕೈಕಾಲು ತಡೀತೈತ್ರಿ. ಚಾ ಐದುಪೈಸೆ ಇದ್ದಾಗ ಇಲ್ಲಿಗೆ ಬಂದೀನ್ರಿ. ದುಡಿದು ಮುಪ್ಪಾಗೇನ್ರಿ."

ಅದೇನೋ ನಿಜ. ಅಜ್ಜ ಮಾಡುವನೇ. ಈ ಅಜ್ಜನ ಹೆಸರೇನೋ ತಿಳಿಯದು. ದಶಕಗಳ ಹಿಂದೆ ಉತ್ತರ ಕರ್ನಾಟಕದಿಂದ ಇಲ್ಲಿಗೆ ಕೆಲಸಕ್ಕೆ ಬಂದು ಇಲ್ಲಿಯೇ ಇದ್ದಾನೆ. ಒಮ್ಮೆ ಕೇಳಿದಾಗ ಯಮುನಪ್ಪನೆಂದೋ ಏನೋ ಹೇಳಿದ. ಆದರೆ ಅವನಿಗೆ ಅಜ್ಜ ಎಂಬ ಹೆಸರೇ ಒಪ್ಪುತ್ತದೆ. ಎಲ್ಲರೂ ಅವನನ್ನು ಅಜ್ಜ ಎಂದೇ ಕರೆಯುತ್ತಾರೆ. ಈ ಅಜ್ಜನ ಅಜ್ಜಿಯಂತೆ ಕಾಣುವ ಹೆಂಡತಿ ಯೊಬ್ಬಳಿದ್ದಾಳೆ. "ನನಕಿಂತ ದೊಡ್ಡಾಕಿ ಅದಾಳ್ರೀ" ಎಂದು ನಗುತ್ತಾನೆ ಅಜ್ಜ. ಊಟ ತಿಂಡಿ ಏನೇ ಕೊಟ್ಟರೂ ಅವಳ ನೈವೇದ್ಯವಾದನಂತರವೇ ಅಜ್ಜ ಬಾಯಿಗಿಡುವುದು. ಆನೆಕಿವಿ, ಬೊಚ್ಚುಬಾಯಿ, ಸಣ್ಣಬಿಳಿಕೂದಲಿನ ಅಜ್ಜ ನಕ್ಕಾಗ ಬಹಳ ಚಂದ ಕಾಣುತ್ತಾನೆ. ಹಿತವಾದ ನಗೆ ಅವನದು. ಅವನು ನಗುವಾಗೊಮ್ಮೆ ಫೋಟೋತೆಗೆದಿಟ್ಟುಕೊಳ್ಳಬೇಕೆಂಬಾಸೆ ನನಗೆ. ಆದರೆ ಹೇಳಿನಗಿಸಿದರೆ ಆ ಸೊಬಗು ಬರಲಾರದು.

ನಮ್ಮ ಪಕ್ಕದಮನೆಯ ಅಂಗಳ ಶುಚಿಮಾಡಲು ಅಜ್ಜ ಅಜ್ಜಿ ಬಂದಿದ್ದಾಗ ನಾನು ಅವನನ್ನು ಮೊದಲಬಾರಿ ಕಂಡದ್ದು. ನಮ್ಮಲ್ಲಿಗೂ ಕೆಲಸಕ್ಕೆ  ಕರೆಯಬೇಕೆನ್ನಿಸಿದರೂ ನನ್ನ ತಾತನಂತೆ ಕಾಣುವ ಅವನಕೈಯಲ್ಲಿ  ಕೆಲಸ ಮಾಡಿಸಲು ನಾಚಿಕೆಯಾಗಿ ಸುಮ್ಮನಿದ್ದೆ. ಅದಾದ ಎರಡುದಿನದ ನಂತರ ಸಣ್ಣ ಹುಡುಗಿಯೊಬ್ಬಳ ಕೈಹಿಡಿದುಕೊಂಡು ಅಜ್ಜ ನನ್ನ ಚಿಕಿತ್ಸಾಲಯದ ಬಾಗಿಲಲ್ಲಿ ಹಾಜರಾದ.

"ಈಕಿ ಹಲ್ಲು ಭಾಳ ಬ್ಯಾನಿಯಾಗ್ಯಾವ್ರಿ"

 ಆ ಮಗುವಿನ ಹಲ್ಲು ಹಾಳಾಗಿದ್ದು ಹಲ್ಲನ್ನು ತೆಗೆಯಬೇಕಾಗಿತ್ತು. ಹುಡುಗಿಯನ್ನು ನಮ್ಮ ಕುರ್ಚಿಯಲ್ಲಿ ಕೂರಲು ಹೇಳಿದೆ. ಹುಡುಗಿ ಹಿಂಜರಿಯಿತು.

"ಆಕಿ ಅಂಜತಾಳ್ರಿ. ಇಲ್ಲೇ ನೋಡ್ರಿ."

ಹಾಗಾಗಲಾರದೆಂದು ತಿಳಿಸಿ, ಅದನ್ನು ರಮಿಸಿ ಕೂಡಿಸಿದೆ. ಹುಡುಗಿ ನಡುಗುತ್ತಾ ಕುಳಿತಿತ್ತು.

ಸಿರಿಂಜ್ ಕೈಗೆ ತೆಗೆದುಕೊಂಡೆ.

"ಸೂಜಿ ನಿಧಾನ ಮಾಡ್ರಿ. ಸಣ್ಣಾಕಿ ಅದಾಳ"

ಸೂಜಿ ತಾಕಿದ್ದೇ ಹುಡುಗಿ "ಹಾ" ಎಂದಿತು.

"ನೋಯಿಸ್ತೈತ್ರಿ ಹಗುರ ಮಾಡ್ರಿ "

ಒಂದುಬದಿಗೆ ಚುಚ್ಚಿ ಮತ್ತೊಂದೆಡೆಗೆ ಇಂಜಕ್ಷನ್ ಕೊಡಲು ತಯಾರಾದೆ.

"ಎಷ್ಟು ಹಾಕ್ತೀರ್ರಿ? ಬ್ಯಾನಿಯಾಗೂದಿಲ್ಲೇನ್ರಿ?. ರೊಕ್ಕ ಎಷ್ಟಾದ್ರೂ ತಗೋರಿ ಚಲೋಮಾಡ್ರಿ".

ಅವನನ್ನು ಬಾಯಿಮುಚ್ಚಿ  ಕೂಡಲು ಹೇಳಿ ಹಲ್ಲು ತೆಗೆದು ಮುಗಿಸಿದೆ. ಹುಡುಗಿ ಕುರ್ಚಿಯಿಂದಿಳಿದು ನಕ್ಕಿತು. ಅಜ್ಜನಿಗೆ ಮಹದಾನಂದ. "ನನ್ನ ಮೊಮ್ಮಗಳದಾಳ್ರಿ. ಸಾಲಿ ಕಲೀತಾಳ್ರಿ. ಮೂರ್ದಿನಾತ್ರಿ ಹಲ್ಲುಬ್ಯಾನಿ ಆಗಿ ಊಟ ಸದಿ ಮಾಡಿಲ್ರಿ. ಆಕಿಗ ನೋವಾದ್ರ  ನನಗ ತಡಿಯೂದಿಲ್ರಿ. ತಪ್ತಿಳೀಬ್ಯಾಡ್ರಿ" ಎಂದು ನೇರ ಕಾಲಿಗೆ ಬಿದ್ದ.  ಇತರೇ ಪೇಷಂಟ್  ಗಳ ಮುಂದೆ ನನಗೆ ಬಹಳ ಇರುಸುಮುರುಸಾಯಿತು. ಅವನನ್ನೆಬಿಸಿ ಒಂದೆರಡು ಮಾತನಾಡಿ ಅವನ ಹಣ ನಿರಾಕರಿಸಿ ಕಳಿಸಿಕೊಟ್ಟೆ.

"ನಾಳಿ ಬಂದು ನಿಮ್ಮ ಅಂಗಳ ಸ್ವಚ್ಛ ಮಾಡಿ ಕೊಡ್ತೀನ್ರಿ " ಎಂದು ಹೇಳಿ ಹೋದ.

ಅವನು ಬರುತ್ತಾನೆಂಬ ನಂಬಿಕೆ ನನಗಿರಲಿಲ್ಲ. ಆದರೆ ಎರಡುದಿನದ ನಂತರ ಒಂದು ಬೆಳಗ್ಗೆ ಕೈಲಿ ಕುಡುಗೋಲು ಹಿಡಿದು ಅಜ್ಜ ಅಜ್ಜಿ ಮನೆಮುಂದೆ ಹಾಜರಾದರು.

ನನ್ನನ್ನು ಕಂಡಕೂಡಲೇ ಅಜ್ಜ "ಹಲ್ಲು ಬೇಸಾತ್ರಿ ಸಾಯೇಬ್ರ, ಭಾಳ ಉಪಕಾರಾತ್ರಿ" ಎಂದು ನೆಲಮುಟ್ಟಿದ. ಅಜ್ಜಿಯನ್ನು ನೆರಳಿನಲ್ಲಿ ಕೂಡಿಸಿ ಕೆಲಸಕ್ಕೆ ತೊಡಗಿದ. ಅಂಗಳದಲ್ಲಿ ಬೆಳದಿದ್ದ ಕಳೆಕಿತ್ತು, ಗಿಡಗಳಿಗೆ ಪಾತಿಮಾಡಿ, ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ರೆಂಬೆ ಕೊಂಬೆಗಳನ್ನು ಕತ್ತರಿಸಿ, ಬಾಗಿದ್ದ ಗಿಡ, ಬಳ್ಳಿಗಳನ್ನು ಆಸರೆ ಕೊಟ್ಟು ನಿಲ್ಲಿಸಿ, ಕಸಗುಡಿಸಿ ನಮ್ಮ 'ತೋಟ'ವನ್ನೊಂದು ರೂಪಕ್ಕೆ ತಂದುನಿಲ್ಲಿಸಿದ.ಕುಕ್ಕುರುಗಾಲಿನಲ್ಲಿ ಕೂತು ಮೂರುಗಿಡಗಲಿಗೆ ಪಾತಿಮಾಡಿದರೆ ನನಗೆ ಮೂರುದಿನ ಸೊಂಟ ಹಿಡಿದುಕೊಳ್ಳುತ್ತದೆ.  ಮೂವತ್ತು ಪಾತಿಮಾಡಿದ್ದ ಅಜ್ಜ. ನಾನು ನಾಚಬೇಕಾದ್ದೆ. ನಮ್ಮಲ್ಲೇ ಊಟ ಮುಗಿಸಿ, ಕೆಲಸ ಮುಗಿಸಿ, ಹೊರಟವನು ನಾನು ಕೊಡಹೋದ ಹಣವನ್ನು ಕೊಳ್ಳಲೇ ಒಲ್ಲ. ಬಲವಂತವಾಗಿ ಅವನಿಗೆ ಸಲ್ಲಬೇಕಾದಕ್ಕಿಂತ ಇಷ್ಟು ಹೆಚ್ಚೇ ಹಣ ಕೊಟ್ಟು ಜತೆಗೆ ಹಬ್ಬದ ಸಮಯವಾದದ್ದರಿಂದ 'ಹಿರಿ ಮುತ್ತೈದೆ' ಗೆಂದು ಅಕ್ಕಿ, ಸೀರೆ ಕೊಟ್ಟು ಕಳಿಸಿಸಿದಳು ನನ್ನ ಪತ್ನಿ.

ಅಂದಿನಿಂದ ಸುರುವಾದದ್ದು ನನ್ನ, ಅಜ್ಜನ ಸ್ನೇಹ. ಕೆಲಸವಿಲ್ಲದಿದ್ದರೂ ಆಗಾಗ ಬರುತ್ತಾನೆ. ಅದೂ ಇದೂ ಮಾತನಾಡುತ್ತನೆ. ಅವನ ಬೊಚ್ಚುಬಾಯಿಯ ಉತ್ತರ ಕರ್ನಾಟಕದ ಧಾಟಿ ನನಗೆ ತಿಳಿಯುವುದು ಕಠಿಣ ವಾದರೂ ಹೆಚ್ಚೂ ಕಡಿಮೆ ಗೊತ್ತಾಗುತ್ತದೆ. ಅಜ್ಜನ ಮಗನೊಬ್ಬನಿದ್ದಾನಂತೆ. ಕುಡಿದು ಹಾಳಾಗಿ ಅಲ್ಲಿ ಇಲ್ಲಿ ಅಲೆದಾಡಿಕೊಂಡಿದ್ದನೆ ಅಷ್ಟೆ. ಅವನೊಡನೆ ಬಾಳಲಾರದೆ   ಸೊಸೆ ಮನೆಬಿಟ್ಟು ಹೋಗಿದ್ದಾಳೆ. ಈ ಮೊಮ್ಮಗಳು ಅಜ್ಜನ ಪಾಲಿಗೆ. ಅಜ್ಜ ಅಜ್ಜಿ , ಅಲ್ಲಿ ಇಲ್ಲಿ ಮಾಡುವ ಕೆಲಸದಿಂದ ಹೇಗೋ ಮೂರೂಜನರ ಹೊಟ್ಟೆ ಬಟ್ಟೆ ಸಾಗುತ್ತದೆ.

ಅಜ್ಜ ಬಂದಾಗಲೆಲ್ಲ ಅವನಕೈಗೆ ಒಂದಿಷ್ಟು ಕಾಸು ಕೊಟ್ಟಿರುತ್ತೇನೆ. "ಬ್ಯಾಡ್ರಿ, ಬ್ಯಾಡ್ರಿ , ನಿಮ್ ಋಣ ಹೆಚ್ಚಾತ್ರಿ"  ಎಂದು ತೆಗೆದುಕೊಳ್ಳುತ್ತಾನೆ. ಅವನ ಕಣ್ಣಿನ ಆಪರೇಷನ್ ಆಗಬೇಕಾಗಿದ್ದಾಗ ಔಷಧಗಳನ್ನು ಕೊಡಿಸಿದ್ದೆ. ಅದಾದ ಕೆಲವುದಿನಗಳಲ್ಲಿ ಅವನು ಬಂದಿದ್ದಾಗ ನನ್ನ ಪತ್ನಿ ಅವನಿಗೆ ಚಾ ತಂದುಕೊಟ್ಟಳು. "ಕಣ್ಣು ಚಲೋ ಆತ್ರಿ. ದ್ಯಾವರಂತಾ ಮನಿಷಾರಿದ್ದಾರ್ರಿ " ಎಂದು ನನ್ನ ಕಡೆ ಕೈತೋರಿಸಿದ. "ನೀನೇ ಹೇಳಬೇಕು ಅದನ್ನು" ಎಂದು ನನ್ನ ಮೂತಿ ತಿವಿದಳು ಅವಳು.

ಅಜ್ಜ ನನಗೆ ಪರಿಚಯವಾಗಿ ಈಗ  ಐದು ವರುಷದ ಮೇಲಾಯಿತು. ಮೊನ್ನೆ ಇನ್ನೂ ಹದಿನಾಲ್ಕು ತುಂಬದ ಬುಧ್ಧಿಗೇಡಿ ಮೊಮ್ಮಗಳು ಯಾರನ್ನೋ 'ಪ್ರೀತಿಸಿ' ಮದುವೆಯಾಗುತ್ತೇನೆಂದಿತು. ಘಾಬರಿಯಾದ ಅಜ್ಜ 'ತಾಬಡ್ತೋಬ್' ಅದನ್ನೊಯ್ದು ಊರಿನಲ್ಲಿ ತನ್ನ ಮಗಳ ಬಳಿ ಬಿಟ್ಟು ಬಂದ. ಈಗ ಮತ್ತೆ ಇಲ್ಲಿ ಅಜ್ಜ ಅಜ್ಜ್ಜಿ ಇಬ್ಬರೇ.

ಈ ಅಜ್ಜ ಮರಹತ್ತುವುದನ್ನು ತಪ್ಪಿಸಲು ನಾನು ಮರಹತ್ತಲೇ ಬೇಕಾಯಿತು. ಹತ್ತಿದ್ದೇನೋ ಸಾರ್ಥಕವಾಯಿತು ಬಿಡಿ. ಮೈ, ಕೈ, ಕೂದಲೆಲ್ಲಾ ಅಂಟು, ಗಂಟಾದರೂ ಸುಮಾರು ನಲವತ್ತು ಕಾಯಿ ಸಿಕ್ಕಿತು.


ಕೈ ಕೆಸರಾದರೆ ಬಾಯಿ ಮೊಸರು.



ನಾನು ಆ ಕೆಲಸ ಮಾಡುತ್ತಿದ್ದಾಗ ಹಿಂಬದಿಗೆ ಹೋದ ಅಜ್ಜ ಬಾಳೆಗೊನೆ ಕಂಡು ಅದನ್ನು ಕೊಯ್ದು ತಂದುಬಿಟ್ಟ. ಕಾಯಿ ಇನ್ನೂ ಬಲಿತಿರಲಿಲ್ಲವೆಂದ ನನ್ನಾಕೆಗೆ "ನಿಮಗೆ ತಿಳಿಯಾಂಗಿಲ್ಲ ಬಿಡ್ರಿ  ಅಕ್ಕಾರೆ"  ಎಂದುಬಿಟ್ಟ. "ಈ ಅಜ್ಜನನ್ನು ಬಹಳ ಹೆಚ್ಚಿಸಿ ಕೂಡಿಸಿದ್ದೀರಿ ನೀವು" ಎಂದು ದೂರಿದಳು ಅವಳು.

ಹಾಗೆ ಕಿತ್ತಿಟ್ಟ ಸಪೋಟ, ಬಾಳೆಕಾಯಿಗಳು ನಾಲ್ಕು ದಿನವಾದರೂ ಹಣ್ಣಾಗುವ ಸೂಚನೆಯೇ ಕಂಡುಬರಲಿಲ್ಲ. ತನ್ನ ಸಪೋಟ ಹಣ್ಣಾಗದೆ ಉಳಿದದ್ದನ್ನು ಪಕ್ಕಕ್ಕೆ ಸರಿಸಿ, ನನ್ನ ಪತ್ನಿ "ನಿಮ್ಮ ಅಜ್ಜನಿಗೆ ಬಾಳೆಗೊನೆ ತೋರಿಸಿ. ಬೇಡವೆಂದರೂ ಕಿತ್ತಿಟ್ಟ. ಪಲ್ಯ ಮಾಡಬೇಕಷ್ಟೆ" ಎಂದಳು.

ಕೈಕೆಸರಾದದ್ದಷ್ಟೇ ಭಾಗ್ಯ ಎಂದುಕೊಳ್ಳುತ್ತಿರುವಂತೆಯೇ ಮೊನ್ನೆ ಬೆಳಗ್ಗೆ ಎದ್ದು ನೋಡುವಾಗ ಒಂದು ಡಜನ್ ಸಪೋಟ ಕಾಯಿಗಳು ಸದ್ದಿಲ್ಲದೇ ಹಣ್ಣಾಗಿ ಘಮಘಮಿಸಿದ್ದವು. ಹಾಗೆಯೇ ಗೊನೆಯ ಕೆಳಗಿನ ಅರ್ಧಭಾಗದ ಬಾಳೆಕಾಯಿಗಳು ಹಳದಿಬಣ್ಣಕ್ಕೆ ತಿರುಗಿದ್ದವು. ಪ್ರಕೃತಿಗೆ ಎದುರಿಲ್ಲ!

ಇದನ್ನು ಕಂಡೇ ಡಿ ವಿ ಜಿ ಯವರೆಂದದ್ದು  "ಫಲ ಮಾಗುವಂದು ತುತ್ತೂರಿದನಿಯಿಲ್ಲ"





ನಮ್ಮಲ್ಲಿ ಮತ್ತೊಂದು ಮಾತುಂಟು. "ಹಣ್ಣು ಹಂಚಿತಿನ್ನು, ಹೂವು ಕೊಟ್ಟು ಮುಡಿ" ಎಂದು. ಅದರಂತೆ ಹಣ್ಣು ಹಂಚಲು ಹೊರಟೆ. ನಮಸ್ಕಾರ.