ಶುಕ್ರವಾರ, ಫೆಬ್ರವರಿ 16, 2024

ಮಧ್ವನವಮಿ - ಮಧ್ವಾಚಾರ್ಯರು - ಮತ್ತು ದ್ವಾದಶಸ್ತೋತ್ರ



ಮಾಘ ಶುದ್ಧ ನವಮಿಯಂದು ಶ್ರೀಮದಾನಂದತೀರ್ಥ ಶ್ರೀಪಾದರು ನಮಗೆ ಕಾಣದಂತಾಗಿ

ತಾವು ಪ್ರತಿ ಕ್ಷಣ ಪೂಜಿಸುತ್ತಿದ್ದ ವೇದವ್ಯಾಸದೇವರೊಡನಿರಲು ಬದರಿಕಾಶ್ರಮಕ್ಕೆ ತೆರಳಿದರು.

ಆ ದಿನವನ್ನು ನಾವು ಮಧ್ವನವಮಿ ಎನ್ನುತ್ತೇವೆ. ನಾಳೆ ಭಾನುವಾರ ಫೆಬ್ರುವರಿ ೧೯ರಂದು

ಮಧ್ವನವಮಿ. ಕೆಳಕಾಣಿಸಿರುವುದು ಈ ಸಂಧರ್ಭದಲ್ಲಿ ಆಚಾರ್ಯರ ಹೆಸರಿನಲ್ಲಿ ಒಂದು

ಬರಹ. ಈ ಸಮಯಕ್ಕೆ ನನ್ನ ಮನದಲ್ಲಿ ಮೂಡಿದ ಆಲೋಚನೆಗಳನ್ನು ಬರೆದಿರಿಸಿದ್ದೇನೆ ಅಷ್ಟೆ. 


ತಾವು ನಮ್ಮೊಡನಿದ್ದ ಕಾಲದಲ್ಲಿ ಶ್ರೀಮದಾಚಾರ್ಯರು ರಚಿಸಿದ ೩೭ ಗ್ರಂಥಗಳು

ಸರ್ವಮೂಲ ಗ್ರಂಥಗಳೆಂದು ಹೆಸರಾಗಿ ಆಚಾರ್ಯರು ನಿರೂಪಿಸಿರುವ ತತ್ವಗಳ ಅಭ್ಯಾಸಕ್ಕೆ

ಮೂಲಸಾಮಗ್ರಿಯಾಗಿವೆ. ಅವುಗಳಲ್ಲಿ ಬ್ರಹ್ಮಸೂತ್ರ ಭಾಷ್ಯ, ಅನುವ್ಯಾಖ್ಯಾನ, ಗೀತಾ ಭಾಷ್ಯ,

ಗೀತಾ ತಾತ್ಪರ್ಯ, ಮಹಾಭಾರತ ತಾತ್ಪರ್ಯನಿರ್ಣಯ, ಸದಾಚಾರಸ್ಮೃತಿ, ತಂತ್ರಸಾರಸಂಗ್ರಹ

ಮುಂತಾದ ಕೆಲವು ಹೆಸರುಗಳ ಪರಿಚಯ ನನಗುಂಟೆ ಹೊರತು, ಯಾವುದೇ

ಒಂದುಗ್ರಂಥವನ್ನಾದರೂ ಪೂರ್ಣವಾಗಿ ವ್ಯಾಸಂಗ ಮಾಡಿ ಅದರ ಸಾರವನ್ನು ತಿಳಿದುಕೊಳ್ಳುವ

ಕಾರ್ಯ  ನನ್ನಿಂದ ಆಗಿಲ್ಲ. ಹಾಗಾಗಿ, ಆಚಾರ್ಯರ ಕೃತಿಗಳಲ್ಲಿ ನಮಗೆ ಎಟಕುವಂತಿರುವ

ಕಂದುಕಸ್ತುತಿ (ಕೃಷ್ಣ ಪದ್ಯ), ನಖ ಸ್ತುತಿ, ದ್ವಾದಶ ಸ್ತೋತ್ರ ಗಳನ್ನು  ಬಾಯಿಪಾಠ ಮಾಡಿ,

ಅವುಗಳ ಅರ್ಥ ತಿಳಿದುಕೊಂಡು, ನಿತ್ಯಪಾರಾಯಣ ಮಾಡುವ ಪ್ರಯತ್ನ ನಡೆಸಿದ್ದೇನೆ. 


ಮೇಲೆ ತಿಳಿಸಿರುವ ಪ್ರಯತ್ನದಲ್ಲಿದ್ದಾಗ, ದ್ವಾದಶಸ್ತೋತ್ರದ ಶ್ಲೋಕಗಳನ್ನು ಪದ್ಯರೂಪದಲ್ಲೇ

ಕನ್ನಡದಲ್ಲಿ ಬರೆಯಬಹುದೆನಿಸಿತು. ಅದರಂತೆ ಕೆಲವು ಅಧ್ಯಾಯಗಳನ್ನು ಕನ್ನಡಕ್ಕೆ

ಪರಿವರ್ತಿಸಿದ್ದೇನೆ. ಮೊದಲ ಅಧ್ಯಾಯವನ್ನು ಇಲ್ಲಿ ಕೆಳಗೆ ಕಾಣಿಸಿದ್ದೇನೆ. ಈ ರೀತಿಯ

ಬರವಣಿಗೆ ನನ್ನ ಮನಸ್ಸಿಗೆ ತೃಪ್ತಿ ನೀಡುವುದಲ್ಲದೆ ಈ ವಿಷಯದ ಬಗೆಗೆ ನನ್ನ ತಿಳುವಳಿಕೆ

ಎಷ್ಟಿದೆ ಎಂಬುದು ಸಹ ನನಗೆ ಮನವರಿಕೆಯಾಗುತ್ತದೆ. ಇದರಿಂದ ಮತ್ತೂ ಕೆಲವರಿಗೆ

ಏನಾದರೂ  ಉಪಯೋಗವಾದರೆ ಇನ್ನೂ ಒಳ್ಳೆಯದಾಯಿತು.  


ವಂದಿಪೆನಿವಗೆ, ವಂದನಯೋಗ್ಯ ಸದಾನಂದಗೆ, ವಸುದೇವಪುತ್ರಗೆ, ದೋಷರಹಿತನಿಗೆ 

ಇಂದಿರಾಪತಿಗೆ, ವರವನೀವ ದೇವತೆಗಳಿಗೆ ತಾ ವರವನೀವನಿಗೆ ! 


ನಮಿಪೆನಾತಗೆ ದೇವತಾ ಕಿರೀಟ ಘರ್ಷಿತ ಪೀಠ ಉಳ್ಳವಗೆ, 

ಹೃದಯಾಂಧಕಾರವ ಕರಗಿಪ ಸೂರ್ಯಪ್ರಭೆ ಆತನ ಪದಪಂಕಜಗಳಿಗೆ !  


ಬಂಗಾರ ಪೀತಾಂಬರಕಾಧಾರ ಸ್ವರ್ಣ ಸರಪಳಿಯಾವೃತ 

ಜಗದಂಬಾಲಂಕೃತ ನಡುವ ಚಿಂತಿಪುದೀಶನದು 


ಜಗವನುಂಗಿಯೂ ಕೃಶವದು ಈಶನುದರವ ಚಿಂತಿಪುದು  

ಮೂರು ರೇಖೆಗಳುದರವನು ಶ್ರೀದೇವಿಯಾಲಂಗಿಸಿಹಳು ನಿತ್ಯ  


ಸ್ಮರಣೆಗೆ ತಕ್ಕುದದು ಇಂದಿರೆಯಾವಾಸಸ್ಥಾನ, ವಿಷ್ಣುವಿನ

ಸೀಮೆಯಿಲ್ಲದ ವಕ್ಷ  ಸೀಮಿತವಾದುದಾತನದೇ ಭುಜಗಳಿಂದ!


ಶಂಖ ಚಕ್ರ ಗದಾ ಪದ್ಮಾಲಂಕೃತ ಹರಿಯ ಭುಜವ ಚಿಂತಿಪುದು ಸತತ  

ವೃತ್ತ, ಸಪುಷ್ಟವವು, ಜಗದ್ರಕ್ಷಣಾ ಕಾರ್ಯಕೆಂದೇ ಇಹವು !


ಸ್ಮರಿಸು ಸದಾ, ಹೊಳೆಯುವ ಕೌಸ್ತುಭಕ್ಕೇ ಹೊಳಪನೀವುದನು 

ಅಖಿಳವೇದಗಳು ಸತತ ಹೊರಮ್ಮುವ ವೈಕುಂಠ ನಾಮನ ಕಂಠವನು !


ಸಹಸ್ರ ಚಂದ್ರಕಾಂತಿಯುಕ್ತ  ಶ್ರೀಪತಿಯ ಮುಖಕಮಲವ ಸ್ಮರಿಸು  

ಶ್ಲಾಘನೆಗೆ ಯೋಗ್ಯವದು ಭವತಾಪವನಪಹರಿಪುದದು


ಅನ್ಯರಿಗೆಟುಕದ ಪೂರ್ಣಾನಂದಸೂಸುವ ಗೋವಿಂದನ 

ಮೋಕ್ಷಪ್ರದ ಮಂದಹಾಸದಲಿರಲಿ ಸದಾಧ್ಯಾನ

    

ಭವ ತಾಪತ್ರಯ ವಿನಾಶಕ ಶ್ರೀರಾಮನ ಪ್ರೀತಿಯುಕ್ತ ನೋಟ 

ಪೂರ್ಣಾನಂದ ಭರಿತ ಅಮೃತಸಾಗರವು, ಎನ್ನ ಸ್ಮರಣೆಯಲ್ಲಿರಲಿ ಸದಾ 


ಬ್ರಹ್ಮಾದಿ ದೇವತೆಗಳ ಪದದಾತ, ಮುಕ್ತಿದಾತ, ಬ್ರಹ್ಮಾದಿವಂದಿತ  

ಈಶನ ಹುಬ್ಬಿನ ವಿಲಾಸ ನೆನಪಿರಲಿ ಅನವರತ 


ಅನಾದಿಕಾಲದಿಂದ ಬ್ರಹ್ಮಾದಿಗಳು ಅನವರತ ಸ್ತುತಿಸುತ್ತಲೂ 

ಪೂರ್ಣವಾಗದೀತನ ಗುಣಗಾನ. ಅಂಥ ಅನಂತನ ಚಿಂತೆ 

ನಮ್ಮಂತರಂಗದೊಳಿರಲಿ ಸದಾ, ಅಂತ್ಯಕಾಲದೊಳಂತು ಅತ್ಯವಶ್ಯ  


ತಮ್ಮ ಕಣ್ಣಿಗೆ ಕಂಡದ್ದೆಲ್ಲದರಲ್ಲೂ ಪರಮಾತ್ಮನ ರೂಪವನ್ನೆ ಕಂಡು, ಕಿವಿಗೆ ಬಿದ್ದ ಶಬ್ದಗಳೆಲ್ಲದರಲ್ಲೂ

ಪರಮಾತ್ಮನ ನಾಮ ಕೇಳುತ್ತ, ಪ್ರಣವೋಪಾಸನೆಯ ಮೂಲಕ ಸದಾ ಪರಮಾತ್ಮನ

ಪೂಜಿಸುತ್ತಿರುವ ಆಚಾರ್ಯರಿಗೆ ಇತರ ಸ್ತೋತ್ರಗಳ ಮೂಲಕ ಶ್ರೀಹರಿಯನ್ನು ಸ್ತುತಿಸುವ

ಅಗತ್ಯವಿಲ್ಲ. ಶ್ರೀ ರಾಘವೇಂದ್ರಸ್ವಾಮಿಗಳು ಪ್ರಾತಃಸಂಕಲ್ಪ ಗದ್ಯದಲ್ಲಿ ತಿಳಿಸಿರುವಂತೆ ಸರ್ವತ್ರ,

ಸರ್ವದಾ, ಸರ್ವಾಕಾರ, ಸರ್ವಾಧಾರ, ಎಂದು ಮೊದಲ್ಗೊಂಡು, ಸರ್ವತ್ಯಂತವಿಲಕ್ಷಣ,

ಸ್ವಗತಭೇದವಿವರ್ಜಿತ ಮುಂತಾಗಿ ಅನೇಕ ಗುಣವಿಶೇಷಣಗಳನ್ನು ಮುಖ್ಯಪ್ರಾಣರು

ಭಗವಂತನಲ್ಲಿ  ಕಂಡು, ಸದಾ ಭಗವಂತನ ಆರಾಧನೆಯಲ್ಲಿ ತೊಡಗಿರುತ್ತಾರೆ. ರಾಯರೇ

ಮತ್ತೆ ಹೇಳುವಂತೆ, “ಸದಾ ಭಗವತ್ಪರಾಣಾಮ್, ಭಗವದನ್ಯತ್ರ ಸರ್ವ ವಸ್ತುಷು ಮನಸ್ಸಂಗ

ರಹಿತಾನಾಮ್” (ಸದಾ ಭಗವಂತನಲ್ಲೇ ತೊಡಗಿರುವವರು, ಭಗವಂತನನ್ನುಳಿದು

ಮತ್ಯಾವ ವಿಷಯದಲ್ಲೂ ಆಸಕ್ತಿಯಿಲ್ಲದಿರುವವರು).  ಆ ರೀತಿಯ ಆರಾಧನೆಯನ್ನು

ಊಹಿಸಲೂ ಸಾಧ್ಯವಿಲ್ಲದ ನಮ್ಮಂಥವರಿಗೆ ಶ್ರೀಹರಿಯಲ್ಲಿ ಮನವನಿರಿಸಲು ಒಂದು

ಪ್ರತಿಕೃತಿಯ ಅಗತ್ಯಕಂಡ  ಆಚಾರ್ಯರು ದ್ವಾದಶ ಸ್ತೋತ್ರದಲ್ಲಿ ಶ್ರೀಹರಿಯ ಚಿತ್ರವನ್ನು

ನಮಗೆ ಕಾಣಿಸಿದ್ದಾರೆ. 


ವಂದೇವಂದ್ಯಂ ಸದಾನಂದಂ ಎಂದು ಪ್ರಾರಂಭವಾಗುವ ಮೊದಲ ಅಧ್ಯಾಯದಲ್ಲಿ

ಆಚಾರ್ಯರು ಶ್ರೀಹರಿಯನ್ನು  ಪಾದದಿಂದ ಮುಖದವರೆಗೆ ವರ್ಣಿಸಿ ಸ್ತುತಿಸುತ್ತಾ ಮನದಲ್ಲಿ

ಸದಾ ಶ್ರೀಹರಿಯ ಚಿಂತನೆಯಿರಲಿ, ವಿಶೇಷವಾಗಿ ಅಂತ್ಯಕಾಲದಲ್ಲಿ ಶ್ರೀಹರಿಯ

ಧ್ಯಾನವಿರಲೆಂದು ಸೂಚಿಸುತ್ತಾರೆ.  ಸದಾ ಮನದಲ್ಲಿ ಶ್ರೀಹರಿಯ ಚಿಂತನೆಯಿದ್ದರೆ,

ಅಂತ್ಯಕಾಲದಲ್ಲೂ ಮನದಲ್ಲಿ ಆ ಚಿಂತನೆ ಸಾಧ್ಯವಾಗಬಹುದೇನೋ ಎಂಬುದು ಇಲ್ಲಿರುವ

ಭಾವನೆ. 


‘ನಿಜಪೂರ್ಣಸುಖಾಮಿತಬೋಧತನು’, ‘ವಿಗ್ರಹೋ ಯಸ್ಯ ಸರ್ವೇಗುಣಾ ಏವಹಿ’,

‘ಪುಷ್ಟಷಾಡ್ಗುಣ್ಯಸದ್ವಿಗ್ರಹ’, ‘ಅಪರಿಮಿತಸುಖನಿಧಿವಿಮಲಸುದೇಹ’  ಮುಂತಾದ ಪದಗಳ

ಮೂಲಕ ಪರಮಾತ್ಮನ ದೇಹವೆನ್ನುವುದು ಒಂದು ನಿರ್ಮಲಗುಣಜ್ಞಾನಾನಂದ ರೂಪ ಮಾತ್ರ

ಎಂದು ವಿಶದಪಡಿಸಿರುವ ಆಚಾರ್ಯರು, ನಮ್ಮ ಅನುಕೂಲಕ್ಕೆಂದು ಪರಮಾತ್ಮನ ಪಾದ,

ಕಟಿ, ಎದೆ, ಭುಜ, ಕತ್ತು, ಕಣ್ಣು ಮುಂತಾಗಿ ಅಂಗಗಳ ವರ್ಣನೆಯನ್ನು ಮಾಡಿದ್ದಾರೆ. ಆದರೆ 

ಆ ರೀತಿಯಾಗಿ ಪರಮಾತ್ಮನ ಅಂಗಯುಕ್ತವಾದ ದೇಹವನ್ನು ಕಲ್ಪಿಸಿಕೊಂಡು ಪೂಜಿಸುವಾಗ

ಸಹ ಪರಮಾತ್ಮನ ನಿಜಸ್ವರೂಪದ ಅರಿವು ನಮಗಿರಬೇಕೆಂದು ಮೇಲ್ಕಾಣಿಸಿರುವ

ವಿಶೇಷಣಗಳ ಮೂಲಕ ಸೂಚಿಸಿದ್ದಾರೆ. 


ಸಕಲ ಜಡ, ಜೀವಗಳಲ್ಲಿ ಪರಮಾತ್ಮನನ್ನು ಕಾಣು, ಸಕಲ ಶಬ್ದಗಳಲ್ಲಿ ಭಗವಂತನ

ನಾಮವ ಕೇಳು, (“ಲೌಕಿಕ ವೈದಿಕ ಬೇಧ ಭಿನ್ನ ವರ್ಣಾತ್ಮಕ ಧ್ವನ್ಯಾತ್ಮಕ”  - ಮುಂತಾದ 

ಅಶೇಷ ಶಬ್ದಗಳೆಲ್ಲವೂ ಭಗವಂತನನ್ನೇ ಸೂಚಿಸುತ್ತವೆ ಎನ್ನುತ್ತಾರೆ ರಾಯರು.) ಮಾಡುವ

ಕರ್ಮಗಳೆಲ್ಲ ಶ್ರೀ ಹರಿಯ ಪೂಜೆಯಾಗಲಿ - ಇದು ನಾವು ಭಗವಂತನನ್ನು ಆರಾಧಿಸಬೇಕಾದ

ರೀತಿ. ರಾಯರು, ಆಚಾರ್ಯರು ಮತ್ತು ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣಪರಮಾತ್ಮ ಸಹ

ಸೂಚಿಸಿರುವ ರೀತಿ ಇದು. 


ಈ ಚಿಂತನೆಯನ್ನು ನಾಲ್ಕೇ ಸಾಲುಗಳಲ್ಲಿ ವಿಜಯದಾಸರು ಸುಂದರವಾಗಿ ತಿಳಿಸಿದ್ದಾರೆ.. 


ಕಂಡ ಕಂಡದ್ದೆಲ್ಲ ಪದುಮನಾಭನ ಮೂರ್ತಿ 

ಉಂಡು ಉಟ್ಟಿದ್ದೆಲ್ಲ ವಿಷ್ಣುಪೂಜೆ 

ತಂಡ ತಂಡದವಾರ್ತೆ ವಾರಿಜಾಕ್ಷನ ಕೀರ್ತಿ 

ಹಿಂಡು ಹಿಂಡಿನ ಮಾತು ಹರಿಯನಾಮ 


ಆಚಾರ್ಯರ ಸ್ತೋತ್ರಗಳ ಅಭ್ಯಾಸ, ಪಠನೆ, ತತ್ವಗಳ ಚಿಂತನೆಯ ಮೂಲಕ ನಾವು ಕೂಡ

ದಾಸರು ಸೂಚಿಸುತ್ತಿರುವ  ಮಟ್ಟವನ್ನು  ತಲುಪವುದಾಗಲೆಂದು ಬೇಡಿಕೊಳ್ಳುತ್ತಾ, ಶ್ರೀಹರಿಯ, ಶ್ರೀಮದಾನಂದತೀರ್ಥರ, ಪಾದಪದ್ಮಗಳಿಗೆ ಈ ಕೆಲವು ಸಾಲುಗಳ ಬರಹದ ಮೂಲಕ ನನ್ನ

ನಮನ. 

“ಶ್ರೀಮದಾನಂದ ತೀರ್ಥ ತ್ರೈಲೋಕಾಚಾರ್ಯ ಪಾದೋಜ್ವಲ ಜಲಜ ಲಸತ್ ಪಾಂಸವೋಸ್ಮಾನ್ ಪುನಂತು”

( ತ್ರಿಲೋಕ ಗುರು ಶ್ರೀಮದಾನಂದ ತೀರ್ಥರ ಪಾದಧೂಳಿಯ ಕಣಗಳು ನಮ್ಮನ್ನು ರಕ್ಷಿಸಲಿ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ