ಡಾ ಜಿ ವರದರಾಜರಾವ್ ಅವರ ‘ಹರಿದಾಸ ಸಾಹಿತ್ಯಸಾರ’ ಪುಸ್ತಕವನ್ನು ಓದುತ್ತಿರುವಾಗ ಅದರಲ್ಲಿ ಉಲ್ಲೇಖಿಸಿರುವ
ಪೂಜ್ಯರುಗಳು ಬರೆದಿರುವ ಅನೇಕ ಪದ್ಯಗಳ ಪರಿಚಯವಾಯಿತು. ನಾನು ಸಾಹಿತ್ಯ ಪ್ರಕಾರಗಳನ್ನು ಕ್ರಮವಾಗಿ
ಅಭ್ಯಾಸಮಾಡಿ ತಿಳಿದವನಲ್ಲ. ಆದರೆ ಪದ್ಯ, ಕಾವ್ಯ, ಕವನ ಏನೇ ಇರಲಿ ಅದರಲ್ಲಿ ಪ್ರಾಸ ಇರಬೇಕೆಂದು ನನ್ನ
ಅಭಿಪ್ರಾಯ. ಪ್ರಾಸವಿಲ್ಲದ ದಾಸರಪದಗಳು ಬಹಳ ಅಪರೂಪ. ಹಾಗಾಗಿ ಪ್ರಾಸ, ಭಾವ ಪೂರ್ವಕವಾದ
ದಾಸರಪದಗಳು ನನಗೆ ಬಹಳ ಪ್ರಿಯವಾದ ಸಾಹಿತ್ಯಪ್ರಕಾರ. ಮೇಲ್ಕಾಣಿಸಿರುವ ಪುಸ್ತಕದಲ್ಲಿ ಮಧ್ವಾಚಾಚಾರ್ಯ
ರಿಂದ ಮೊದಲಾಗಿ, ಉಲ್ಲೇಖಿಸಲ್ಪಟ್ಟಿರುವ ಯತಿಗಳು, ದಾಸರು ಅನೇಕರು. ಅವರೆಲ್ಲರನ್ನೂ ಹೆಸರಿಸಿ ಅವರ
ಕೃತಿಗಳ ಒಂದು ಸಾಲು ಸೇರಿಸಿ, ಒಂದು ಪದ್ಯ ಬರೆಯುವ ಪ್ರಯತ್ನ ಮಾಡಬಹುದೆನಿಸಿತು. ಅವರವರ
ಹೆಸರಿನೊಂದಿಗೆ ಸಾಮಾನ್ಯವಾಗಿ ಪ್ರಚಲಿತವಾಗಿರುವ ಗೀತೆಗಳ ಸಾಲುಗಳನ್ನು ಉದ್ಧರಿಸಿ ಒಂದು ಪದ್ಯ ರಚಿಸಿ
ಇಂದು ಆಷಾಢ ಶುದ್ಧ ಏಕಾದಶಿಯಂದು ‘ಕೃಷ್ಣಾರ್ಪಣ’ಮಾಡಿದ್ದೇನೆ.
ಭುಜವೇರಿಸಿ ಘೋಷಿಸಿದರು ಉಡುಪಿಯಲಿ ಮಧ್ವರು,
‘ನ ಹರೇ ಪರಮೋ ನ ಹರೇ ಸದೃಶ’
‘ವಾದಿರಾಜಗೆ ಮುದದಿ ಜ್ಞಾನ ಭಕುತಿ ಕೊಡುವ’ ಕುದುರೆ
ವಾದಿರಾಜ ತೀರ್ಥರಿಗಾಯ್ತು ಕೃಷ್ಣ ಸದೃಶ
‘ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ’
ಕಂಗಳಿದ್ಯಾತಕೆಂದರು ಚಂದದಲಿ ಶ್ರೀಪಾದರಾಜರು
‘ರಂಗಯ್ಯ ಬಂದರೆ ಅಂತರಂಗದಿ ಗುಡಿಕಟ್ಟಿ ಕುಣಿವೆ’ ನೆಂದರು
ಡಿಂಗರಿಗರುಗಳಿಗೆ ದೀಕ್ಷೆಯಿತ್ತ ವ್ಯಾಸತೀರ್ಥರು
‘ಕಲಿಯುಗದಲಿ ಹರಿನಾಮವ’ ಪರಿಪರಿಯಿಂದಲಿ
ಪಾಡುತ್ತ ಪುನೀತರಾದರು ಪೂಜ್ಯ ಪುರಂದರನ ದಾಸರು
‘ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆ’ನೆಂದು
ಕೇಶವನ ಭಜಿಸಿದರು ಪಾವನರು ಕನಕದಾಸರು
‘ಕಂದನಂತೆಂದೆನ್ನ ಕುಂದುಗಳನೆಣಿಸದೆಯೆ’ ಕಾಯಬೇಕೆಂದು
ಕಂದರ್ಪನ ತಂದೆಯ ಆರಾಧಿಸಿದರು ಮಂಚಾಲೆ ರಾಯರು
‘ಹರಿಕಥಾಮೃತಸಾರ’ವೆಂಬ ಅಮೃತಾಭಿಷೇಕವಮಾಡಿ
ಜಗದೊಡೆಯನ ಅಡಿಗೆರಗಿದರು ಜಗನ್ನಾಥದಾಸರು
ನಿನ್ನ ಬಣ್ಣಿಸಿ ಕುಣಿವ ಆಶೆಯುಂಟೆನಗೆ ಹರಿ, ದಿಶೆ ತಿಳಿಯದು
ನಿನ್ನ ಪೂಜಿಸಲು ಕಾಯವುಂಟೆನಗೆ, ಉಪಾಯ ತಿಳಿಯದು
ನಿನ್ನ ಬಂಟರಿಂದ ಪಡೆದ ಎಂಟಕ್ಷರಗಳ ಗಂಟ ಬಳಸಿ
ತಂಟೆ ಮಾಡುವ ಶ್ರೀಕಂಠಸುತನ, ತುಂಟು ಸಹಿಸೋ ವೆಂಕಟೇಶ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ