ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ. ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ್ಕರಹಳ್ಳಿ ಕೆರೆ ಮತ್ತು ಕೃಷ್ಣರಾಜಸಾಗರ. ಎಲ್ಲವೂ ನನ್ನ ಬಾಲ್ಯದ ಅತಿ ಸುಂದರ ನೆನಪುಗಳು. ಹಾಗಾಗಿ ಅಂದಿನಿಂದಲೂ ಮೈಸೂರೆಂದರೆ ನನಗೆ ಮನಸ್ಸಿಗೆ ಮುದ. ಈಗಲೂ ಹಾಗೆಯೇ. ವಿರಳವಾಗಿ ವಿಸ್ತಾರಗೊಂಡಿರುವ ನಗರ, ಅಗಲವಾದ ರಸ್ತೆಗಳು, ಜನದಟ್ಟಣೆ, ವಾಹನ ದಟ್ಟಣೆ ಇಲ್ಲದೆ ನಾನು ನೋಡಿರುವ ಊರುಗಳಲ್ಲಿ ವಾಸಕ್ಕೆ ಬಹಳ ಯೋಗ್ಯವೆಂದು ನನಗೆ ಅನಿಸುವುದು, ಮೈಸೂರು.
ನನ್ನ ಹುಟ್ಟೂರು ಬೆಂಗಳೂರು. ನಮ್ಮ ಸಂಸಾರ, ನೆಂಟರಿಷ್ಟರು, ಸ್ನೇಹಿತರೆಲ್ಲಾ ಬೆಂಗಳೂರೇ. ಬೆಂಗಳೂರು ಬಿಟ್ಟರೆ ನಮ್ಮ ವಾರಿಗೆಯ ಮಕ್ಕಳಿದ್ದ ನಮ್ಮ ಹತ್ತಿರದ ಸಂಭಂದಿಗಳಿದ್ದದ್ದು ಮೈಸೂರಿನಲ್ಲಿ. ಹಾಗಾಗಿ ನಮಗೆ ಬೇಸಗೆಯರಜಾ ಹಾಗೂ ದಸರಾರಜಕ್ಕೆ ತಾಣ ಮೈಸೂರು. ನನ್ನ ಸೋದರಮಾವನವರು ಹಾಗು ದೊಡ್ಡಮ್ಮನವರು ಇಬ್ಬರೂ ಇದ್ದದ್ದು ಮೈಸೂರಿನಲ್ಲಿ. ಸರಸ್ವತಿಪುರದಲ್ಲಿ. ಮೈಸೂರಿನಲ್ಲಿ ನಮ್ಮ ವಾಸ ಅವರಮನೆಗಳಲ್ಲೇ. ನನ್ನ ಸೋದರಮಾವ ಶ್ರೀ ಜೆ ಆರ್ ಲಕ್ಷ್ಮಣರಾಯರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಮಹಾರಾಜಾ ಕಾಲೇಜು, ಮಾನಸ ಗಂಗೋತ್ರಿಗಳಲ್ಲಿ ಸೇವೆ ಸಲ್ಲಿಸಿದರು. ಅದರಿಂದಾಗಿ ಸರಸ್ವತಿಪುರ, ಮಾನಸಗಂಗೋತ್ರಿ, ಕುಕ್ಕನಹಳ್ಳಿಕೆರೆ ಸುತ್ತಮುತ್ತಲಿನ ಜಾಗಗಳೆಲ್ಲ ನನಗೆ ಸ್ವಂತ ಊರಿನಷ್ಟೇ ಪರಿಚಯ ಮತ್ತು ನನ್ನ ಮನಸ್ಸಿಗೆ ಅಷ್ಟೇ ಆತ್ಮೀಯ.
ಸರಸ್ವತಿಪುರದಲ್ಲಿ ನನ್ನ ಮಾವನವರಿದ್ದ ಮನೆಯ ಮುಂದೆ ಅಗಲವಾದ ರಸ್ತೆ. ರಸ್ತೆಯ ಎರಡೂಬದಿಗೆ ಒತ್ತಾಗಿ ಬೆಳೆದ ಮರಗಳು. ಮರಗಳ ತುಂಬಾ ಮೈನಾ, ಗೊರವಂಕ, ಗಿಣಿ, ಗುಬ್ಬಚ್ಚಿ, ಮತ್ತಿತರ ಹಕ್ಕಿಗಳು ತುಂಬಿಕೊಂಡು ಕಲರವ. ರಸ್ತೆ ತುಂಬಾ ನೆರಳು. ಅದರ ಪಕ್ಕಕ್ಕೆ ಅಗ್ನಿಶಾಮಕ ದಳದ ವಿಶಾಲ ಮೈದಾನ. ನಲವತ್ತು ವರುಷಗಳ ಹಿಂದೆ ರಸ್ತೆಯಲ್ಲಿ ಆಗೊಂದು ಈಗೊಂದು ಕಾರು ಕಂಡರೆ ಹೆಚ್ಚು. ಪಕ್ಕದಲ್ಲೇ ಮೈದಾನವಿದ್ದರೂ ರಸ್ತೆಯೇ ನಮಗೆ ಆಟಕ್ಕೆ ಸ್ಥಳ. ದಿನದ ಮುಕ್ಕಾಲು ಪಾಲು ಸಮಯ ನಾವು ರಸ್ತೆಯಲ್ಲೇ ಕಳೆಯುತ್ತಿದ್ದೆವು. ನಾನು ಸೈಕಲು ನಡೆಸಲು ಕಲಿತಿದ್ದು ಆ ರಸ್ತೆಯಲ್ಲೇ!
ನನ್ನ ಮಾವನವರಿದ್ದದ್ದು ಪ್ರಸಿದ್ಧ ರಂಗ ಕಲಾವಿದ ಹಾಗೂ ‘ಸುರುಚಿ’ಪ್ರಕಾಶನದ ಮಾಲೀಕರಾಗಿದ್ದ ಸಿಂಧುವಳ್ಳಿ ಅನಂತಮೂರ್ತಿ ಯವರ ಮನೆಯ ಹಿಂಭಾಗದ ಔಟ್ ಹೌಸಿನಲ್ಲಿ. ಎರಡೂ ಸಂಸಾರಗಳಿಗೆ ಮಧುರ ಭಾಂಧವ್ಯವಿದ್ದು ಎದುರುಬದುರಾಗಿದ್ದ ಇವರ ಹಿಂಬಾಗಿಲು ಅವರ ಮುಂಬಾಗಿಲು ಸದಾ ತೆರೆದೇ ಇರುತ್ತಿದ್ದವು. ಆಟವಾಡಿ ಸಾಕಾದಾಗ ಮನೆಯೊಳಗೆ ನುಗ್ಗಿ ಒಂದು ಮೂಲೆಯಲ್ಲಿ ಸದಾ ನೇತಾಡುತ್ತಿರುತ್ತಿದ್ದ ರಸಬಾಳೆ ಗೊನೆಯಿಂದ ಹಣ್ಣು ಕಿತ್ತು ತಿಂದು, ಅನಂತಮೂರ್ತಿಯವರ ಮನೆ ಸೇರಿ ಅವರ ಗ್ರಂಥಭಂಡಾರದ ಒಂದು ಪುಸ್ತಕ ಹಿಡಿದು ಕೂತರೆ ನನಗೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ಬಹುಶಃ ನಾನು ಮೊದಲಬಾರಿಗೆ ‘ಪೋಲಿಕಿಟ್ಟಿ’ ಓದಿದ್ದು ಅಲ್ಲಿಯೇ ಎಂದು ನೆನಪು. ಮತ್ತೂ ಬೇಕಾದರೆ ಹತ್ತಿರದಲ್ಲೇ ಮಾನಸ ಗಂಗೋತ್ರಿಯ ಗ್ರಂಥಾಲಯವಿತ್ತು. ಅಲ್ಲಿ ನೂರಾರು ಹಳೆಯ ‘ಕಸ್ತೂರಿ’ ಮಾಸಪತ್ರಿಕೆಗಳನ್ನು ಒಟ್ಟುಮಾಡಿ ಇಟ್ಟಿದ್ದರು. ಕಸ್ತೂರಿ ಪತ್ರಿಕೆಯ ಲೇಖನಗಳ ಕೊನೆಯಲ್ಲಿರುತ್ತಿದ್ದ ಕಿರುಲೇಖನಗಳು ಹಾಗೂ ಸ್ಥಿರಶೀರ್ಷಿಕೆಗಳಾದ ‘ಇದುವೇ ಜೀವ ಇದು ಜೀವನ’ ಮುಂತಾದುವು ನನಗೆ ಬಹಳ ಇಷ್ಟವಾಗಿದ್ದವು. ಘಂಟೆಗಟ್ಟಲೆ ಇವನ್ನು ಓದುತ್ತಾ ಗಂಗೋತ್ರಿಯ ಗ್ರಂಥಾಲಯದಲ್ಲಿ ನಾನು ಕಾಲ ಕಳೆದಿದ್ದೇನೆ. ಇವೆಲ್ಲಾ ನನ್ನ ಚಿಕ್ಕಂದಿನ ಬಹಳ ಸಂತೋಷಕರ ಅನುಭವಗಳು.
ಮೈಸೂರಿಗೆ ಅನೇಕಬಾರಿ ದಸರೆಯ ಸಮಯದಲ್ಲೇ ಹೋಗಿದ್ದರೂ ಸಹ, ನಾವು ದಸರಾ ವಸ್ತುಪ್ರದರ್ಶನ ಅಥವಾ ಮೆರವಣಿಗೆಗೆ ಹೋದದ್ದು ಬಹಳ ಕಡಿಮೆ. ಜಂಬೂಸವಾರಿಯಂತು ನಾನು ನೋಡಿದ್ದು ಒಮ್ಮೆಯೇ! ಅದು ಇಂದಿರಾಗಾಂಧಿಯವರು ಮಹಾರಾಜರ ಸವಲತ್ತುಗಳನ್ನು ಕಿತ್ತುಕೊಳ್ಳುವ ಮುಂಚೆ. ಆಗಿನ್ನೂ ಜಂಬೂಸವಾರಿಗೆ ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರೇ ಅಂಬಾರಿಯಮೇಲೆ ಕೂಡುತ್ತಿದ್ದರು. ನಾನು, ನನ್ನ ತಮ್ಮ ಹಾಗು ನಮ್ಮ ಸೋದರಸಂಭಂದಿಗಳು ಕೆಲವರನ್ನು ನಮ್ಮ ತಂದೆಯವರು ಜಂಬುಸವಾರಿ ನೋಡಲೆಂದು ಕರೆದೊಯ್ದಿದ್ದರು. ಆಗ ಅದಕ್ಕೆ ಈಗಿರುವಷ್ಟು ಜನಸಂದಣಿ ಇರುತ್ತಿರಲಿಲ್ಲ. ರಸ್ತೆಯಬದಿಯ ಒಂದು ಮರದ ಕೆಳಗೆ ವಿರಾಮವಾಗಿ ನಿಂತು ನಾವು ಜಂಬೂಸವಾರಿಗಾಗಿ ಕಾಯ್ದೆವು.
ದಸರಾ ಮೆರವಣಿಗೆ ನಮ್ಮಿಂದ ಅರ್ಧ ಕಿಲೋಮೀಟರಿನಷ್ಟು ದೂರವಿದ್ದಾಗಲೇ ಮಳೆಹನಿಹಾಕಲು ಶುರುವಾಯಿತು. ಸವಾರಿ ನಮ್ಮಮುಂದೆ ಹಾಯುತ್ತಿದ್ದಂತೆ ಜೋರುಮಳೆ. ನಾವು ಮರದ ಕೆಳಗೇ ಒತ್ತೊತ್ತಾಗಿ ನಿಂತೆವು. ಮಳೆ ಹೆಚ್ಚಾಯಿತು. ಮರದ ಕೊಂಬೆಗಳಿಗೆ ಗೆದ್ದಲು ಕಟ್ಟಿತ್ತು. ಗೆದ್ದಲುಗೂಡಿನ ಮಣ್ಣು ಮಳೆಗೆ ತೋಯ್ದು ನಮ್ಮ ತಲೆಗಳ ಮೇಲೆ ತೊಪ್ಪ ತೊಪ್ಪನೆ ಬೀಳತೊಡಗಿತು. ನಮ್ಮ ತಂದೆಯವರು ಉಟ್ಟ ಪಂಚೆಬಿಚ್ಚಿ, ಚಡ್ಡಿಯಲ್ಲಿ ನಿಂತರು. ಪಂಚೆಯ ನಾಕೂ ತುದಿಗಳನ್ನು ವಿಸ್ತರಿಸಿ ನಾಕುಜನ ಎತ್ತರವಿದ್ದವರು ಚಪ್ಪರದಂತೆ ತಲೆಯಮೇಲೆ ಹರಡಿ ಹಿಡಿದರು. ನಾವು ಮಕ್ಕಳೆಲ್ಲಾ ಮಧ್ಯದಲ್ಲಿ. ಈರೀತಿ ನಾವು ಜಂಬುಸವಾರಿ ವೀಕ್ಷಿಸಿ ನಂತರ ಹಾಗೆಯೇ ನಿಧಾನವಾಗಿ ನಡೆಯುತ್ತಾ ಮನೆತಲುಪಿದೆವು. ಜಂಬುಸವಾರಿ ನೋಡಬಂದಿದ್ದವರಿಗೆ ನಮ್ಮ ಈ ಸವಾರಿ ಜಂಬೂಸವಾರಿಗಿಂತ ಆಕರ್ಷಣೀಯವಾಗಿತ್ತೇನೋ !
ಮಹಾರಾಜರ ಸವಲತ್ತುಗಳು ಹೋದಮೇಲೆ ಮಹಾರಾಜರು ಅಂಬಾರಿಯಮೇಲೆ ಕೂಡಲಿಲ್ಲ ಎಂದು ನನ್ನ ಗ್ರಹಿಕೆ. ಮಹಾರಾಜರಿಲ್ಲದೆ, ಮೆರವಣಿಗೆ ನಿಲ್ಲಿಸಲಾರದೆ ಒಮ್ಮೆ ರಾಜ್ಯಪಾಲರನ್ನು ಕೂಡಿಸಿ ಜಂಬೂಸವಾರಿ ನಡೆಸಲಾಯಿತೆಂದು ನೆನಪು. ಅದರ ಬಗೆಗೆ ಬಹಳ ವಾದವಿವಾದಗಳಾದನಂತರ ಕೊನೆಗೆ ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತಿದೆ. ಈಗ ಇದು ಪೂರ್ತಿ ಸರಕಾರೀ ಕಾರ್ಯಕ್ರಮ.
ಈಚೆಗಿನ ದಿನಗಳಲ್ಲಿ ಬೆಂಗಳೂರು - ಮೈಸೂರಿನ ರಸ್ತೆ ಪ್ರಯಾಣ ನೆನಸಿಕೊಂಡರೆ ದಸರೆಯೂ ಬೇಡ, ಮೈಸೂರೂ ಬೇಡ ಎನಿಸುತ್ತದೆ. ಹಾಗಾಗಿ, ನಾನು ನನ್ನ ನನ್ನ ಬಾಲ್ಯದ ನೆನಪುಗಳಲ್ಲೇ ಕಳೆದುಹೋಗಬಯಸುತ್ತೇನೆ !