ಭಾನುವಾರ, ಜೂನ್ 21, 2009

ಹಲ್ಲು ನೋವು

ಹಲ್ಲುನೋವು ಎಂಬ ವಿಷಯದ ಮೇಲೆ ಬರಹವೇ? ಅದೃಷ್ಟ ಕೆಟ್ಟಾಗ ಬಂದು ಸತಾಯಿಸುತ್ತದೆ, ಎದೆ ಗಟ್ಟಿಮಾಡಿ ದಂತವೈದ್ಯನೆಂಬ ನರರಾಕ್ಷಸನೋರ್ವನ ಬಳಿಗೆ ಹೋಗಿ ಹಲ್ಲು ಕಿತ್ತಿಸಿದರೆ ಮುಗಿಯುತ್ತದೆ. ಅನುಭವಿಸಿ ನಿವಾರಿಸಿಕೊಳ್ಳುವುದೇ ಸಾಕು. ಬರೆಯುವುದೇನು? ಓದುವುದೇನು?ಎಂದು ತಳ್ಳಿಹಾಕಬೇಡಿ. ನೀವೇನೋ ಅದೊಂದು ಕಿರುಕುಳ ಮಾತ್ರವೆಂದು ತಳ್ಳಿಹಾಕಿಬಿಡುತ್ತೀರಿ. ಆದರೆ ನಾನು ಹಾಗೆ ಮಾಡಲು ಸಾಧ್ಯವಿಲ್ಲ.

ಒಬ್ಬರ ಜೀವ ತಿನ್ನುವ ಹಲ್ಲುನೋವು ಒಬ್ಬರಿಗೆ ಜೀವನ. ಇಪ್ಪತ್ತೈದು ವರ್ಷ ಹಲ್ಲುನೋವಿನ ದಯದಿಂದ ಜೀವನ ನಡೆಸಿರುವ ನಾನು ನನ್ನ ಬರಹಕ್ಕೆ ಅದನ್ನು ವಿಷಯವಾಗಿ ಆರಿಸದಿದ್ದರೆ ಕೃತಘ್ನ ಎನಿಸಲಾರೆನೆ? ದಂತವೈದ್ಯನಾದ ನನ್ನ ಜೀವನದ ಜೀವಾಳವೇ ಹಲ್ಲುನೋವು. ಅದು ನನ್ನನ್ನು ಮತ್ತು ನನ್ನ ಸಂಸಾರವನ್ನು ಸಾಕಿ ಸಲಹುತ್ತದೆ. ಹಲ್ಲುನೋವು ಇಲ್ಲದಿದ್ದರೆ ನನ್ನನ್ನು ಕೇಳುವರು ಯಾರು? ನನ್ನ ಅಸ್ತಿತ್ವದ ಬೆನ್ನೆಲುಬೇ ಹಲ್ಲುನೋವು. ನನ್ನ ಜೀವನದಲ್ಲಿ ಅದಕ್ಕೊಂದು ಆದರಣೀಯ ಸ್ಥಾನವಿದೆ. ನಾನು ಅದನ್ನು ಗೌರವಿಸುತ್ತೇನೆ. ಹಾಗಾಗಿ, ಈ ಹಲ್ಲುನೋವು ಒಬ್ಬರಿಗೆ ನೀಡಬಹುದಾದ ಯಾತನೆ ಮತ್ತು ಕಿರುಕುಳವನ್ನು ಕಡೆಗಾಣಿಸಿ, ಅದು ಒಬ್ಬರಲ್ಲಿ ಪ್ರೇರೇಪಿಸುವ ಇತರ ಸುಗುಣಗಳ ಮೇಲೆ ನೋಟ ಹರಿಸಲು ನನಗೆ ಸಾಧ್ಯವಾಗುತ್ತದೆ.

ಹಲ್ಲುನೋವು ನಿಮ್ಮನ್ನು ಬಾಧಿಸತೊಡಗಿದರೆ ನೀವು ಮಾಡುವುದೇನು? ತಕ್ಷಣ ದಂತವೈದ್ಯನಲ್ಲಿಗೆ ಓಡುತ್ತೀರೇನು? ಖಂಡಿತ ಇಲ್ಲ.
ಅಷ್ಟು ಎದೆಗಾರಿಕೆ ನಿಮಗೆಲ್ಲಿರುತ್ತದೆ? ಆ ದಂತವೈದ್ಯನೆಂಬುವನ ಬಗೆಗಿನ ಭೀತಿ ಹಲ್ಲುನೋವಿನ ಭಾದೆಗಿಂತಲೂ ಹೆಚ್ಚಿನದು. ಮೊದಲು, ಕನ್ನಡಿಯ ಮುಂದೆನಿಂತು, ಕತ್ತುಸೊಟ್ಟಮಾಡಿ, ಬಾಯಿಹಿಗ್ಗಲಿಸಿ, ಬಾಧೆಕೊಡುತ್ತಿರುವ ಹಲ್ಲು ಯಾವುದೆಂದು ಹುಡುಕಲು ಯತ್ನಿಸುತ್ತೀರಿ. ಬಾಯಲ್ಲಿ ಬೆರಳು ನುಗ್ಗಿಸಿ ತಡಕಾಡುತ್ತೀರಿ. ಕಣ್ಣಿಗಾಗಲೀ ಬೆರಳಿಗಾಗಲೀ ಕಾಡುತ್ತಿರುವ ಹಲ್ಲು ಸಿಗದಾದಾಗ, ಎಲ್ಲ ಹಲ್ಲುಗಳಿಗೂ ತಾಕುವಂತೆ ಬಿಸಿನೀರು, ಉಪ್ಪುನೀರು, ತಣ್ಣೀರುಗಳ ಪ್ರಯೋಗ ಮಾಡುತ್ತೀರಿ. ಒಂದುವೇಳೆ ಭಾದಿಸುತ್ತಿರುವ ಹುಳುಕು ಹಲ್ಲು ಕಂಡುಬಿಟ್ಟರೆ, ಅದರೊಳಕ್ಕೆ ಉಪ್ಪು, ಅರಿಶಿನ, ಅಮೃತಾಂಜನ, ತೆಂಗಿನೆಣ್ಣೆ, ಸೀಮೆ‍ಎಣ್ಣೆ ಸಹ ಹಾಕಿ ನೋವುನಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತೀರಿ. ಅಷ್ಟುಹೊತ್ತಿಗೆ ಹಲ್ಲುನೋವಿನ ಕಾಟ ಅಧಿಕವಾಗಿ, ಮುಂದಿನ ಸಂಶೋಧನೆಯನ್ನು ಕೈಬಿಟ್ಟು ದಂತವೈದ್ಯನಬಳಿಗೆ ಓಡುವ ನಿರ್ಧಾರ ಮಾಡುತ್ತೀರಿ.

ಹಲ್ಲುನೋವು ನಿಮ್ಮನ್ನು ಕಾಡತೊಡಗಿದ್ದು ನಿನ್ನೆರಾತ್ರಿ. ಇಂದುಬೆಳಿಗ್ಗೆ ಆಗಲೇ ನೀವು ದಂತವೈದ್ಯನಲ್ಲಿಗೆ ಹೋಗಲು ನಿರ್ಧರಿಸಿದ್ದೀರಿ. ಹೋದತಿಂಗಳು ನಿಮ್ಮನ್ನು ಕೆಮ್ಮು ಕಾಡುತ್ತಿದ್ದಾಗ, ನೀವು ವೈದ್ಯನನ್ನು ಕಾಣದೇ ವಿಧಿಯಿಲ್ಲವೆಂದು ನಿರ್ಧರಿಸಲು ಎರಡುವಾರ ಬೇಕಾಯಿತು. ಮಗನ ಹೊಟ್ಟೆನೋವಿಗೆ ಎರಡುವಾರ ಮನೆಔಷಧಿ ಆದಮೇಲೆಯೇ ಡಾಕ್ಟರನ ಬಾಗಿಲು ತಟ್ಟಿದಿರಿ. ಗಲ್ಲದ ಮೇಲೆ ಬೆಳೆದಿರುವ ಬೆಳೆಯನ್ನು ಇಂದೇ ತೆಗೆಯಬೇಕೋ, ನಾಳೆಯೋ, ನಿರ್ಧರಿಸಲು ಒಂದು ಘಂಟೆ ಯೋಚಿಸಿ ಮತ್ತೆ ಪತ್ನಿಯೊಂದಿಗೆ ಸಮಾಲೋಚಿಸುತ್ತೀರಿ. ಹೆಡ್‍ಆಫೀಸಿನಿಂದ ಬಂದ ಪತ್ರಕ್ಕೆ ಏನು ಉತ್ತರಿಸಬೇಕೆಂದು ನಿರ್ಧರಿಸಲು ಒಂದುವಾರ ಮತ್ತು ನಾಲ್ಕು ಮೀಟಿಂಗ್ ಬೇಕಾಗುತ್ತದೆ. ಆದರೆ ಈಗ ದಂತವೈದ್ಯನ ಬಳಿಗೆ ಹೋಗಲು ಅದೆಷ್ಟು ಬೇಗ ನಿರ್ಧರಿಸಿದಿರಿ! ಇಂತಹ ಗುಣಕ್ಕೆ "ಡಿಸಿಷನ್ ಮೇಕಿಂಗ್" ಎಂದು ಹೆಸರಿಟ್ಟು ದೊಡ್ಡ ಕಾಲೇಜುಗಳಲ್ಲಿ ಆರು ತಿಂಗಳು ಪಾಠ ಹೇಳಿ ಕಲಿಸುತ್ತಾರಂತೆ. ಹಲ್ಲು ನೋವು ಅದನ್ನು ನಿಮಗೆ ಕೆಲವೇ ಘಂಟೆಗಳಲ್ಲಿ ಕಲಿಸಿತು.

ನಿರ್ಧಾರ ಮಾಡಿದಿರಿ ನಿಜ. ಆದರೆ ಇಂಥ ನಿರ್ಧಾರ ಕೈಗೊಳ್ಳಲು ಬೇಕಾದ ಗಟ್ಟಿ ಎದೆ ನಿಮ್ಮೊಳಗೆಲ್ಲಿತ್ತು ಹೇಳಿ? ದಂತವೈದ್ಯನೆಂಬ ಹೆಸರು ಕೇಳಿದ ತಕ್ಷಣ ನಿಮ್ಮ ಕಾಲುಗಳು ಥರಥರಗುಟ್ಟುತ್ತಿರಲಿಲ್ಲವೇ? ಹೋದವರುಷ ನಿಮ್ಮ ಪತ್ನಿಯ ಅಲುಗಾಡುತ್ತಿದ್ದ ಹಲ್ಲು ಕೀಳಬೇಕಾದಾಗ ಆಕೆಯೊಡನೆ ದವಾಖಾನೆಯ ಬಾಗಿಲವರೆಗೆ ಹೋಗಿ, ಒಳಗೆ ಕಾಲಿಡುವ ಧೈರ್ಯ ಬಾರದೆ ಹೊರಗೇ ನಿಂತು ಆಕೆಯೊಬ್ಬಳನ್ನೇ ಒಳಕಳುಹಿಸಿ ಎರಡೂ ಕೈಗಳಿಂದ ನಿಮ್ಮ ಧಡಗುಟ್ಟುವ ಎದೆ ಹಿಡಿದಿರಲಿಲ್ಲವೇ? ಹಲ್ಲು ನೋವು ಬರದಿದ್ದರೆ ನಿಮ್ಮ ಆ ಮಣ್ಣೆದೆ ಘಟ್ಟಿಯಾಗುವುದಿತ್ತೇ?

ನೀವು ಈಗ ದಂತವೈದ್ಯನೆಂಬ ನರರೂಪಿ ಯಮಕಿಂಕರನನ್ನು ಮುಖತಃ ಎದುರಿಸುವವರಿದ್ದೀರಿ. ದಂತವೈದ್ಯನನ್ನು ಕಂಡುಬಂದನಂತರ ನಿಮ್ಮ ಧೈರ್ಯ ಎಷ್ಟು ಹೆಚ್ಚುತ್ತದೆಂದರೆ ಅಮಾವಾಸ್ಯೆಯ ರಾತ್ರಿ ಸ್ಮಶಾನದ ಮುಂದೆ ಹೋಗುವಾಗ ಬ್ರಹ್ಮರಾಕ್ಷಸನೇನಾದರೂ ಎದುರಿಗೆ ಬಂದರೆ, ನಿರಾಳವಾಗಿ ಅವನನ್ನು ಪಕ್ಕಕ್ಕೆ ತಳ್ಳಿ ಗುಡ್‍ನೈಟ್ ಹೇಳಿ ಮುಂದೆ ಹೋಗುತ್ತೀರಿ.

ದಂತವೈದ್ಯನ ಬಳಿಗೆ ಹೋಗುವುದೆಂದಾಯಿತಲ್ಲವೇ? ಅವನ ಟಾರ್ಚರ‍್ಚೇಂಬರ್ ತೆಗೆಯುವುದು ಹತ್ತು ಘಂಟೆಗೆ. ಆದರೆ ಅದಕ್ಕೆ ಹತ್ತು ನಿಮಿಷ ಮುಂಚೆಯೇ ಅಲ್ಲಿ ಹೋಗಿರುವುದು ನಿಮ್ಮ ಯೋಚನೆ. ಈ ಸಮಯ ತತ್ಪರತೆ ನಿಮ್ಮಲ್ಲಿ ಹಿಂದೆ ಎಂದಾದರೂ ಕಂಡಿತ್ತೆ? ಹತ್ತು ಘಂಟೆಯ ಆಫೀಸಿಗೆ ಹೋಗಲು ಹತ್ತುಇಪ್ಪತ್ತರ ಬಸ್ಸು ಹಿಡಿದರೆ ಬೇಕಾದಷ್ಟಾಯಿತು ಎನ್ನುವವರು ನೀವು. ಮದುವೆ ಮುಹೂರ್ತ ಹನ್ನೊಂದೂವರೆಗಿದ್ದರೆ, ಊಟ ಹನ್ನೆರಡರ ಮೇಲೆ ತಾನೇ ಎನ್ನುತ್ತೀರಿ. ಶಾಲೆಗೆ ತಡವಾಯಿತೆಂದು ಮಗ ಅರಚುತ್ತಿದ್ದರೆ
"ಐದು ನಿಮಿಷ ತಡವಾದರೆ ಪರವಾಗಿಲ್ಲ ಬಿಡೋ. ಇನ್ನೂ ಪ್ರಾರ್ಥನೆ ನಡೆಯುತ್ತಿರುತ್ತದೆ" ಎನ್ನುತ್ತೀರಿ. ಇಷ್ಟೇಕೆ ರೈಲು ಹಿಡಿಯಬೇಕಾದಾಗಲೂ "ಆ ರೈಲು ಯಾವಾಗಲೂ ಅರ್ಧಘಂಟೆ ಲೇಟೇ" ಎಂದು ನಿರಾಳವಾಗಿರುತ್ತೀರಿ.

ಈಗ ನೋಡಿ, ಹತ್ತು ಘಂಟೆಗೆ ತೆಗೆಯುವ ಚಿಕಿತ್ಸಾಲಯದ ಮುಂದೆ ಒಂಭತ್ತೂಮುಕ್ಕಾಲಿಗೆ ನಿಮ್ಮನ್ನು ನಿಲ್ಲಿಸುತ್ತದೆ ನಿಮ್ಮ ಹಲ್ಲುನೋವು.

ಒಂದು ಕೈಯಿಂದ ದವಡೆಯನ್ನು ಒತ್ತಿ ಹಿಡಿದು ಒಂದೇಕೈಯಿಂದ ಶರಟು ಪ್ಯಾಂಟು ಧರಿಸಿ, ದಂತವೈದ್ಯನಲ್ಲಿಗೆ ಹೋಗಲು ತಯಾರಾದಿರಿ. ನಿಮ್ಮಾಕೆಯನ್ನು ಗಮನಿಸಿದಿರಾ? ನೀವು ಮುಖ ತೊಳೆದು ಬಾಯಿ ಮುಕ್ಕಳಿಸುವಾಗ ಆಕೆ ನೀರು ಕಾಸಿ ತಂದಿಟ್ಟಿರಲಿಲ್ಲವೇ? ನೋವಿನ ಉಪಟಳದಿಂದ ರಾತ್ರಿ ಊಟಸಹ ಮಾಡಲಾಗಲಿಲ್ಲವೆಂದು, ನೀವು ತಯಾರಾಗುವ ಹೊತ್ತಿಗೆ ಮೆತುವಾಗಿ ಮಾಡಿದ ಉಪ್ಪಿಟ್ಟು, ಹಾರ್ಲಿಕ್ಸ್ ತಂದಿಟ್ಟಿದ್ದಳು ಆಕೆ. ನೀವು ಒಕ್ಕೈನಿಂದ ಬಟ್ಟೆ ಧರಿಸುವ ಹೊತ್ತಿಗೆ ಮೇಜಿನಮೇಲೆ ನಿಮ್ಮ ಪರ್ಸು, ಕರ್ಚೀಫು ಹಾಗೂ ಬಸ್ಸಿಗೆ ಚಿಲ್ಲರೆ ತಯಾರಾಗಿರಲಿಲ್ಲವೇ? ನಿಮ್ಮಾಕೆಯೊಳಗಿದ್ದ ಈ ಮದರ್ ಥೆರೇಸಾಳನ್ನು ಹಿಂದೆ ಕಂಡಿದ್ದ ನೆನಪಿದೆಯೇ ನಿಮಗೆ? ನೀವು ಆಫೀಸಿಗೆ ಹೊರಟು ನಿಂತು ಕರ್ಚೀಫು, ಚಿಲ್ಲರೆ ಕೇಳಿದಾಗ, ದೊಡ್ಡಮಗನ ಊಟದ ಡಬ್ಬ, ಚಿಕ್ಕವನ ಸಾಕ್ಸು ಹೊಂದಿಸುವುದರಲ್ಲಿ ಮುಳುಗಿರುತ್ತಿದ್ದ ನಿಮ್ಮಾಕೆಯೆಂಬ ಡೈನಾಮೈಟ್ ಸಿಡಿಯುತ್ತಿದ್ದ ರೀತಿ ಹೇಗಿರುತ್ತಿತ್ತು? ಈ ಸಿಂಹಿಣಿಯ ಎದೆಯೊಳಗಿದ್ದ ಕರುಣಾರಸವೆಂಬ ಬೇಸಗೆಯ ಕಾವೇರಿಯನ್ನು, ಮಳೆಗಾಲದ ಬ್ರಹ್ಮಪುತ್ರೆಯನ್ನಾಗಿಸಿದ್ದು ನಿಮ್ಮ ಹಲ್ಲುನೋವು.

ಹತ್ತಕ್ಕೆ ಮೊದಲೇ ನೀವು ದಂತವೈದ್ಯನ ಬಾಗಿಲು ತಲುಪಿದಿರಿ ನಿಜ. ಆದರೆ ನಿಮಗಿಂತ ಹೆಚ್ಚು ಸಮಯತತ್ಪರರನೇಕರು ಆ ಮುಂಚೆಯೇ ಅಲ್ಲಿ ತಲುಪಿದ್ದರಲ್ಲ! ನೀವು ಕಾದುಕುಳಿತು, ಅರ್ಧಘಂಟೆ, ಘಂಟೆ, ಒಂದೂವರೆಘಂಟೆಯಾದರೂ ನಿಮ್ಮ ಸರತಿ ಬರಲಿಲ್ಲವಲ್ಲ! ನಿಮ್ಮಂತೆಯೇ ಕಾದಿದ್ದ ಇತರ ದುರ್ದೈವಿಗಳ ಮುಖ ನೋಡುತ್ತಾ ಆರು ತಿಂಗಳು, ವರ್ಷದ ಹಿಂದಿನ ಪತ್ರಿಕೆ ತಿರುವಿಹಾಕುತ್ತಾ ಎಷ್ಟು ಸಹನೆಯಿಂದ ಕಾದಿರಿ ಅಲ್ಲವೇ? ನಿಮ್ಮಲ್ಲಿ ಇಷ್ಟು ಸಹನಾ ಶಕ್ತಿ ಇದೆಯೆಂದು ನಿಮಗೆ ತಿಳಿದಿತ್ತೆ?
ಬ್ಯಾಂಕಿನಲ್ಲಿ ಚೆಕ್ ಕ್ಯಾಶ್ ಆಗಲು ಹತ್ತುನಿಮಿಷ ತಡವಾದಾಗ ಸಿಡಿಮಿಡಿಗುಟ್ಟುತ್ತಾ ಮೆನೇಜರನಲ್ಲಿ ದೂರುಸಲ್ಲಿಸಿದವರು ನೀವೇ ಅಲ್ಲವೇ? ಆಫೀಸಿನ ಅಟೆಂಡರ್ ಕಾಫಿ ತರಲು ಐದುನಿಮಿಷ ತಡಮಾಡಿದಾಗ, ಆಕಾಶ ಭೂಮಿ ಒಂದುಮಾಡಿದ ನಿಮ್ಮೊಳಗೆ ಸಹನೆ ಎಂಬ ದೊಡ್ಡಗುಣವನ್ನು ತುಂಬಿದ್ದು ನಿಮ್ಮ ಹಲ್ಲು ನೋವಲ್ಲವೇ?

ಸರಿ, ಕೊನೆಗೂ ನಿಮಗೆ ಒಳಕೋಣೆಗೆ ಹೊಕ್ಕು ದಂತಾಸನದಮೇಲೆ ಅಸೀನರಾಗುವ ಭಾಗ್ಯ ಬಂತಲ್ಲ! ನಿಮ್ಮ ನೋವನ್ನು ದಂತವೈದ್ಯನ ಮುಂದೆ ಅದೆಷ್ಟು ಬಗೆಯಿಂದ ವರ್ಣಿಸಿದಿರಲ್ಲವೇ?

ಆ ನೋವು ಹೇಗೆ ನಿಮ್ಮ ಹುಳುಕು ಹಲ್ಲಿನ ಬೇರಿನಿಂದ, ತಲಕಾವೇರಿಯಲ್ಲಿ ಮೂಡುವ ಕಾವೇರಿಯ ಸೆಲೆಯಂತೆ ಸುರುವಾಗಿ, ಎಲ್ಲ ಹಲ್ಲುಗಳ ಬುಡದಲ್ಲೂ ಮಂದವಾಗಿ ಹರಿಹಾಯುತ್ತಾ ದವಡೆಯ ಒಂದು ಕೊನೆಯಲ್ಲಿ ಕೇಆರೆಸ್ಸಿನಂತೆ ನೆಲೆಗಟ್ಟಿ ನಿಂತು, ನಂತರ ಆ ಕಟ್ಟೆಯ ಎಲ್ಲ ಬಾಗಿಲುಗಳನ್ನೂ ಒಮ್ಮೆಗೇ ತೆರೆದಾಗ ಭೋರ್ಗರೆಯುತ್ತಾ ನುಗ್ಗುವ ಕಾವೇರಿಯಂತೆ ಮುಖದ ಎಲ್ಲ ನರನಾಡಿಗಳಲ್ಲೂ ಹರಿದು ಹಾಯುತ್ತಾ ಕೊನೆಗೆ ತೆಲೆಯ ಮೇಲ್ಭಾಗವನ್ನೋ ಬೆನ್ನಿನ ಹಿಂಭಾಗವನ್ನೋ ತಲುಪಿ ಅರಬ್ಬಿಸಮುದ್ರದ ಅಲೆಗಳಂತೆ ಹೋಗಿ ಬಂದು- ಹೋಗಿಬಂದು ಆಗುತ್ತಿತ್ತೆಂದು ವರ್ಣಿಸಿದರಲ್ಲವೇ?

ಆಗುಂಬೆಯ ಸೂರ್ಯಾಸ್ತ ಹೇಗಿತ್ತು ಎಂದರೆ "ಚೆನ್ನಾಗಿತ್ತು" ಎಂದೂ, ತಾಜಮಹಲ್ ಹೇಗಿತ್ತೆಂದರೆ "ತುಂಬಚೆನ್ನಾಗಿತ್ತು" ಎಂದೂಹೇಳಿ ಸುಮ್ಮನಾಗುತ್ತಿದ್ದ ನಿಮ್ಮೊಳಗೆ ಹುದುಗಿದ್ದ ಕವಿ ಹೊರಬಂದದ್ದು ಯಾವುದರಿಂದ? ನಿಮ್ಮ ಹಲ್ಲುನೋವನ್ನು ಅದೆಷ್ಟು ವೈಖರಿಯಿಂದ ವರ್ಣಿಸಿ ಹಲ್ಲನ್ನು ಕಿತ್ತುಹಾಕುವಂತೆ ಅಂಗಲಾಚಿದಿರೆಂದರೆ, ಯಾವುದೇ ಚಿಕಿತ್ಸೆಗೆ ಯಾರನ್ನಾದರೂ ನಾಕು ಬಾರಿ ತನ್ನ ಚಿಕಿತ್ಸಾಲಯಕ್ಕೆ ತಾಕಲಾಡಿಸುವ ದಂತವೈದ್ಯ ಆಗಿಂದಾಗ್ಗೆ ನಿಮ್ಮ ಹಲ್ಲು ತೆಗೆದುಹಾಕಲು ಒಪ್ಪಿಕೊಂಡುಬಿಟ್ಟನಲ್ಲಾ!

ಹಲ್ಲು ಕೀಳುವಂತೆ ಅವನನ್ನು ಒಪ್ಪಿಸಿ ಬಾಯಿತೆಗೆದು ಕೂತಿರಲ್ಲವೇ? ಅಗೋ ನಿಮ್ಮ ಹಲ್ಲಿನ ಮೇಲಿನ ಯುಧ್ಧಕ್ಕೆ ಆತ ತಯಾರಾಗಿ, ಒಂದು ಕೈಯಲ್ಲಿ ಸಿರಿಂಜು ಮತ್ತೊಂದು ಕೈಯಲ್ಲಿ ಇಕ್ಕಳ ಹಿಡಿದು ಬರುತ್ತಿದ್ದಾನಲ್ಲ!
ಈಗ, ಮುಚ್ಚಿದ ನಿಮ್ಮ ಕಣ್ಣಪರದೆಯ ಹಿಂದೆ ರಾಗಿಗುಡ್ಡದ ಆಂಜನೇಯ, ಮಂತ್ರಾಲಯದ ರಾಯರು, ತಿರುಪತಿ ವೆಂಕಟೇಶ್ವರ, ಧರ್ಮಸ್ಥಳದ ಮಂಜುನಾಥ ಮೆರವಣಿಗೆಯಲ್ಲಿ ಬರುತ್ತಿದ್ದಾರಲ್ಲವೇ? ರಾಮಮಂದಿರದಲ್ಲಿ ಭಜನೆಗೆ ಕೂತು ಕಣ್ಣುಮುಚ್ಚಿದ್ದಾಗಲೂ ಕಣ್ಣಪರದೆಯನ್ನು ಆಕ್ರಮಿಸುತ್ತಿದ್ದ ಐಶ್ವರ್ಯರೈ, ಮಾಧುರಿ ದೀಕ್ಷಿತರನ್ನು ಉಚ್ಚಾಟಿಸಿ, ವೆಂಕಟೇಶ್ವರ, ಮಂಜುನಾಥರಿಗೆ ಜಾಗ ಕೊಡಿಸಿ ನಿಮ್ಮನ್ನು ಉಧ್ಧರಿಸಿದ್ದು ನಿಮ್ಮ ಹಲ್ಲುನೋವು.

ಹೀಗೆ ನೀವು ಅದೆಷ್ಟು ತನ್ಮಯತೆಯಿಂದ ಮರೆತಿದ್ದ ದೇವರುಗಳನ್ನು ನೆನಸಿಕೊಳ್ಳುತ್ತ ಹನುಮಾನ್ ಚಾಳೀಸ, ಗಾಯತ್ರಿ ಮಂತ್ರ,
ಸಹಸ್ರನಾಮಗಳಲ್ಲಿ ಮುಳುಗಿಹೋಗಿದ್ದಿರೆಂದರೆ, ದಂತವೈದ್ಯರು ಸೂಜಿಚುಚ್ಚಿದ್ದಾಗಲೀ, ಹಲ್ಲು ತೆಗೆದದ್ದಾಗಲೀ ನಿಮಗೆ ತಿಳಿಯಲೇ ಇಲ್ಲ. ಹಿಂದೆಂದಾದರೂ ನೀವು ಹೀಗೆ ಏಕಚಿತ್ತದಿಂದ ಪರಮಾತ್ಮನನ್ನು ಧ್ಯಾನಿಸಿದ್ದುಂಟೇ? ಜೀವನದಲ್ಲಿ ಒಂದುಬಾರಿ ನಾರಾಯಣ ಎಂದರೆ ಅದೆಷ್ಟೋ ಟನ್ ಪುಣ್ಯ ಪ್ರಾಪ್ತಿಯಾಗುತ್ತದಂತೆ. ನೀವು ಈಗ ಅರ್ಧ ಘಂಟೆಯಷ್ಟುಕಾಲ ಒಂದೇ ಚಿತ್ತದಿಂದ ನಾಮಸ್ಮರಣೆ ನಡೆಸಿದ್ದರಿಂದ ನಿಮ್ಮ ಅಕೌಂಟಿಗೆ ಅದೆಷ್ಟು ಪುಣ್ಯ ಸಂದಾಯವಾಯಿತೋ? ನರಸಿಂಹರಾಯರ ಸರಕಾರಕ್ಕೆ ವರದಾನವಾಗಿಬಂದು, ಡೆಫಿಸಿಟ್ ವಿದೇಶಿ ವಿನಿಮಯವನ್ನು ನಿಭಾಯಿಸಿದ ಮನಮೋಹನಸಿಂಗರಂತೆ ನಿಮ್ಮ ಪಾಲಿಗೆ ಹಲ್ಲುನೋವು ವರದಾನವಾಗಿ ಬಂದು, ನಿಮ್ಮ ಪಾಪ ಪುಣ್ಯದ ಅಕೌಂಟನ್ನು ನಿಭಾಯಿಸಿತು.

ಹಲ್ಲು ಕಿತ್ತದ್ದಾಯಿತಲ್ಲವೇ? ಅರೆ, ಇದೇನಾಶ್ಚರ್ಯ? ರಾಕ್ಷಸನಂತೆ ಕಾಣುತ್ತಿದ್ದ ದಂತವೈದ್ಯ ದೇವರಾಗಿಬಿಟ್ಟನೇ? ಅವನಿಗೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದೆನಿಸುತ್ತದಲ್ಲವೇ? ಅರವಳಿಕೆಯಿಂದ ಮರಗಟ್ಟಿರುವ ಬಾಯಿಂದ ಅದೇನು ಧನ್ಯವಾದ ಹೇಳಲಾದೀತು? ಅಷ್ಟಾಗಿ ದಂತವೈದ್ಯನಿಗೆ ಧನ್ಯವಾದ ಬೇಕಾಗಿರುವುಸು ನಿಮ್ಮ ಬಾಯಿಂದ ಅಲ್ಲ, ಪರ್ಸಿನಿಂದ.

ಅವನನ್ನು ಸಂತುಷ್ಟ ಪಡಿಸಿ ಹೊರಬಂದರೆ ರಸ್ತೆಯ ವಾತಾವರಣ ಅದೆಷ್ಟು ಸುಂದರವಾಗಿದೆಯಲ್ಲವೇ? ಆ ಹಲ್ಲು ಕಳೆದುಕೊಂಡದ್ದು ಅದೆಷ್ಟು ಸಂತೋಷ? ಏನನ್ನಾದರೂ ಕಳೆದುಕೊಂಡದ್ದಕ್ಕೆ ನೀವು ಹೀಗೆ ಎಂದಾದರೂ ಸಂತೋಷಪಟ್ಟದ್ದುಂಟೇ?
ಎಲ್ಲರೂ ಪಡೆದುಕೊಳ್ಳುವುದರಲ್ಲಿ ಸಂತೋಷ ಪಟ್ಟರೆ ನೀವು ಕಳೆದುಕೊಂಡು ಸಂತೋಷ ಪಡುತ್ತಿದ್ದೀರಿ. ಸಂಸಾರದ ಮೋಹಗಳಲ್ಲಿ ನಾನು ಎಂಬುದು ಅತ್ಯಂತ ಪ್ರಭಾವಿ ಮೋಹವಂತೆ. ಆ ’ನಾನು’ವಿನ ಒಂದು ಭಾಗವನ್ನು ಕಳೆದುಕೊಂದು ನೀವು ಆನಂದಿಸುತ್ತಿದ್ದೀರಿ. ತ್ಯಾಗದಿಂದ ಪರಮಾನಂದ ಪಡೆಯುವ ಪ್ರವೃತ್ತಿ ಈ ಹಲ್ಲುನೋವಿನಿಂದಲೇ ಮೊದಲಾಗಿ, ನೀವು ಈ ಸಂಸಾರದ ಮೋಹವನ್ನು ತ್ಯಜಿಸಿ ಮೋಕ್ಷದೆಡೆಗೆ ನಡೆಯಲು ಅನುವಾಯಿತು. ನಿಮ್ಮಜೀವನ ಸಾರ್ಥಕವಾಯಿತು.


ಈಗ ಹೇಳಿ, ಹಲ್ಲುನೋವು ಬರಹಕ್ಕೆ ತಕ್ಕುದಾದ ವಸ್ತುವಲ್ಲವೇ?

ಶುಕ್ರವಾರ, ಜೂನ್ 19, 2009

KURUDU NAAYI
















"ಕನ್ನಡಕೆ ಹೋರಾಡು ಕನ್ನಡದ ಕಂದ. " ಈ ಬ್ಲಾಗಿನಲ್ಲಿ ಕನ್ನಡಲಿಪಿ ತರಿಸಬೇಕಾದರೆ ಅದರೊಂದಿಗೆ ಹೋರಾಟವಿಲ್ಲದೆ ಸಾಧ್ಯವೇ ಇಲ್ಲ.!

ಭಾನುವಾರ, ಜೂನ್ 7, 2009

ಕನ್ನಡ ತಾಯಿ

"ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು ಮರೆಯದಿರುಚಿನ್ನ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ"
ಎಂದು ಪ್ರಾರಂಭವಾಗುವ ಕನ್ನಡ ತಾಯಿಯ ಪದ್ಯ "ಕನ್ನಡವ ಕೊಲುವ ಮುನ್ನ ಓ ನನ್ನ ಕೊಲ್ಲು" ಎಂದು ಮುಕ್ತಾಯ ವಾಗುತ್ತದೆ. ನಾನು ಪ್ರೈಮರಿ ತರಗತಿಯಲ್ಲಿದ್ದಾಗ ಓದಿದ್ದ ಪದ್ಯ ಇದು. ಪೂರ್ತಿಸಾಲುಗಳಾಗಲಿ ಕವಿಯ ಹೆಸರಾಗಲೀ ನೆನಪಿಲ್ಲ.
ಕನ್ನಡ ಟಿವಿ ವಾಹಿನಿಗಳಲ್ಲಿ, ಚಲನ ಚಿತ್ರಗಳಲ್ಲಿ ಮತ್ತು ಸಾಪ್ತಾಹಿಕಗಳ ಬರಹಗಳಲ್ಲಿ ಸಹ ಇತ್ತೀಚಿಗೆ ಉಪಯೋಗವಾಗುತ್ತಿರುವ ಕನ್ನಡವನ್ನು ಕಂಡಾಗ ಅವರೆಲ್ಲರ ಕೈಗಳಿಗೂ ಒಂದೊಂದು ಚೂರಿ ಕೊಟ್ಟು, ಮೊದಲು ಕನ್ನಡತಾಯಿಯನ್ನು ಹುಡುಕಿ ಕೊಲೆಮಾಡಿ ಬನ್ನಿರೆಂದು ಹೇಳಿ ಕಳಿಸಬೇಕೆಂದು ಅನಿಸುತ್ತದೆ. ಕನ್ನಡದಲ್ಲಿ ಪಂಡಿತನಲ್ಲದ, ವ್ಯಾಕರಣಬದ್ಧ ಉಪಯೋಗವನ್ನು ಸ್ವಲ್ಪಮಟ್ಟಿಗೆ ಮಾತ್ರ ಬಲ್ಲವನಾದ, ನನಗೇ ಭಾಷೆ ಕೊಲೆಯಾಗುತ್ತಿದೆಯೆಂದು ಅನಿಸುವುದಾದರೆ ಕನ್ನಡವನ್ನು ಶಾಸ್ತ್ರಬದ್ಧವಾಗಿ ಕಲಿತು ಉಪಯೋಗಿಸುವ ಅಭಿಮಾನಿಗಳಿಗೆ ಅದೆಷ್ಟು ಕಸಿವಿಸಿಯಾಗುವುದೋ ತಿಳಿಯದು.
ಅನೇಕ ಹಿರಿಯ ಲೇಖಕರು ನನಗೆಹಿತವೆನ್ನಿಸುವ ಕನ್ನಡವನ್ನು ಬರೆದು ನಮ್ಮ ಮುಂದಿರಿಸಿದ್ದಾರೆ. ನನಗೆ ಮೆಚ್ಚಿಗೆಯಾದ ಸಾಲುಗಳನ್ನು ಈ ಕಾಡು ಹರಟೆಯಲ್ಲಿ ತಂದಿರಿಸುವ ಪ್ರೆಯತ್ನ ಮಾಡುತ್ತೇನೆ. ಈ ಮಾಧ್ಯಮದಲ್ಲಿ ಬರಹವನ್ನು ನನಗೆಬೇಕಾದಂತೆ ಬಗ್ಗಿಸುವುದು ಕಷ್ಟ. ಏನಾಗುತ್ತದೋ ನೋಡೋಣ.