ಶನಿವಾರ, ಡಿಸೆಂಬರ್ 17, 2022

ನಾಯಿಬಂದಾವೋ ಬೆನ್ಹತ್ತಿ

ಪ್ರತಿದಿನ ಮುಂಜಾನೆ ಐದರಿಂದ ಐದೂವರೆಯ ಒಳಗೆ ನಾನು ವಾಯು ಸಂಚಾರಕ್ಕೆ ಹೊರಡುತ್ತೇನೆ.

ಕೆಲವೊಮ್ಮೆ ಐದಕ್ಕೆ ಮುಂಚೆಯೂ ಹೊರಬೀಳುವುದುಂಟು. ಈ ಡಿಸೆಂಬರ ತಿಂಗಳಿನಲ್ಲಿ ಆ

ಸಮಯದಲ್ಲಿ ಹೊರಗೆ ಇನ್ನೂ ಕತ್ತಲಿರುತ್ತದೆ. ಬೀದಿ ದೀಪಗಳು  ನನಗೆ ಹಾದಿ ತೋರುತ್ತವೆ.

ಚಳಿಯಿದ್ದರೆ ಯಾವುದಾದರೂ ಬೆಚ್ಚಗಿನ ಬಟ್ಟೆ ತೊಟ್ಟು ಮುಂಜಾನೆಯ ಅಹ್ಹ್ಲಾದಕರ ಹವೆಯಲ್ಲಿ

ಏನೋ ಚಿಂತಿಸುತ್ತಲೋ, ಅಥವಾ ಎಂಥದೋ ಶ್ಲೋಕವೋ, ಹಾಡೋ ಗುನುಗುತ್ತಲೋ, ಆಸುಪಾಸಿನ

ಪರಿವೆಯಿಲ್ಲದೆ ನಾನು ಹೆಜ್ಜೆ ಹಾಕುತ್ತಿರುತ್ತೇನೆ. 


ನನ್ನ ಸಂಚಾರಕ್ಕೆ ಮುದನೀಡುವ ಪರಿಸರವನ್ನು  ಸೃಷ್ಟಿಸಿರುವ ಭಗವಂತ, ನನ್ನ ಸಂತೋಷವನ್ನು

ಭಗ್ನಮಾಡಲು ಎರಡು ಸಂಗತಿಗಳ ಸೃಷ್ಟಿಮಾಡಿದ್ದಾನೆ. ಒಂದು, ಬೆಳಗಿನ ಶುದ್ಧ ಗಾಳಿಗೆ ತಮ್ಮ ದಟ್ಟ

ಹೊಗೆ ಬೆರಸಿ ಕಿರಿಕಿರಿ ಮಾಡುವ ವಾಹನಗಳು. ಎರಡನೆಯದು ಬೀದಿ ನಾಯಿಗಳು. ಬೆಳಗ್ಗೆ

ದಿನಪತ್ರಿಕೆ ಮತ್ತು ಹಾಲು ಸರಬರಾಜುಮಾಡುವ ದ್ವಿಚಕ್ರಿಗಳು ಸಂದಿಸಂದಿಗಳಲ್ಲೂ 

ಸುತ್ತಾಡುತ್ತಿರುತ್ತವೆ. ಜತೆಗೇ ತರಕಾರಿ ಮತ್ತಿತರ ನಿತ್ಯೋಪಯೋಗಿ ವಸ್ತುಗಳನ್ನು

ಸರಬರಾಜುಮಾಡುವ ಲಾರಿ, ರಿಕ್ಷಾಗಳು ಎಲ್ಲೆಡೆಯೂ ಎದುರಾಗುತ್ತವೆ. ಇವುಗಳಿಂದ

ಕಿರಿಕಿರಿಯಾಗುವುದು ನಿಜ. ಆದರೆ ಅವುಗಳಿಂದ ಯಾವುದೇ  ಹೆದರಿಕೆ, ಬೆದರಿಕೆ ಇಲ್ಲ. 


ಮತ್ತೆ ಬೀದಿನಾಯಿಗಳು. ನನ್ನ ಮಟ್ಟಿಗೆ ಹೇಳುವುದಾದರೆ ಬೀದಿನಾಯಿಗಳಿಂದ ಆಗುವ ತೊಂದರೆ

ಹೆಚ್ಚು. ಬೀದಿ ದೀಪ ತಾಗದಂಥ  ಯಾವುದೋ ವಾಹನದ ಕೆಳಗೋ, ಮರದ ಬುಡದಲ್ಲೋ,

ಗೋಡೆಯ ಪಕ್ಕದಲ್ಲೋ, ಕತ್ತಲ ಸಂದಿಯಲ್ಲಿ ನನ್ನ ಕಣ್ಣಿಗೆ ಬೀಳದೆ ಮಲಗಿರುವ ನಾಯಿಯೊಂದು

ಇದ್ದಕ್ಕಿದ್ದಂತೆ ಯಾವುದೋ ಆವೇಶಕ್ಕೊಳಗಾದಂತೆ ಗವ್ವೆಂದು ನನ್ನ ಮೇಲೆರಗಿ, ನನ್ನನ್ನು ನನ್ನ ಚಿಂತನೆಯ

ಆಕಾಶದಿಂದ ಭೂಮಿಗೆ ಎಳೆದು ಅಪ್ಪಳಿಸುತ್ತದೆ. ಗಾಬರಿಯಿಂದ ಮೈ ಬೆವರಿ, ನನ್ನ ಹೃದಯ

ಬಾಯಿಗೆ ಬರುತ್ತದೆ. 


ಅಷ್ಟೇಅಲ್ಲ, ಒಂದು ನಾಯಿ ಬೊಗಳಿದರೆ ಆ ಬೀದಿಯಲ್ಲಿನ ಉಳಿದ ನಾಯಿಗಳಷ್ಟೇ ಅಲ್ಲದೆ ಪಕ್ಕದ

ಬೀದಿಯ ನಾಯಿಗಳೂ ಎಚ್ಚೆತ್ತುಕೊಂಡು ನನ್ನ ಮೇಲೆ ಆಕ್ರಮಣಕ್ಕೆ ತಯಾರಾಗಿ, ಗುರುಗುಟ್ಟುತ್ತಾ

ನನ್ನ ಹಾದಿ ಕಾಯುತ್ತಾ ನಿಲ್ಲುತ್ತವೆ.  ನಾನು ನನ್ನ ಬಡಿದುಕೊಳ್ಳುವ ಹೃದಯವನ್ನು ಘಟ್ಟಿಯಾಗಿ

ಹಿಡಿದು, ಇಲ್ಲದ ಧೈರ್ಯ ತೋರುತ್ತಾ, ಕೈಯಲ್ಲಿ ಕೋಲಿದ್ದರೆ ಅದನ್ನು ಝಳಪಿಸಿ  ಹಿಂದೆ ಮುಂದೆ

ನಡೆದಾಡುತ್ತಾ ಹೇಗೋ ಮಾಡಿ ಆ ನಾಯಿಗಳ ಸೈನ್ಯದಿಂದ ಪಾರಾಗಿ ನಡೆಯಬೇಕಾಗುತ್ತದೆ.

ಹೀಗಾಗಿ ನನ್ನ ದೈನಂದಿನ ಜೀವನದ ಮೇಲೆ ಬಹಳವೇ ಪರಿಣಾಮ ಬೀರುವ ಪ್ರಾಣಿ ನಮ್ಮ ಬೀದಿ ನಾಯಿ. 


ಅನೇಕ ವರುಷಗಳ ಓಡಾಟದ ಅಭ್ಯಾಸದಿಂದ ನಾನು ನಾಯಿಗಳು ಇರಬಹುದಾದ ಸಾಧ್ಯತೆಯನ್ನು

ಗುರುತಿಸುವ ಪರಿಣಿತಿಯನ್ನು ಗಳಿಸಿಕೊಂಡು, ಅಂಥ ರಸ್ತೆಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ

ನಡೆದಾಡುವ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ. ಆದರೂ ಒಂದೇ ದಾರಿಯಲ್ಲಿ ಸುತ್ತಿ ಸುತ್ತಿ

ಬೇಸತ್ತು ಒಮ್ಮೊಮ್ಮೆ ಹೊಸಬೀದಿಗಳನ್ನು ಹಿಡಿದು ನಡೆಯುವುದುಂಟು. ಅಥವಾ ನಮ್ಮೂರು ಬಿಟ್ಟು

ಬೇರೆ ಸ್ಥಳಗಳಲ್ಲಿ ಇರುವಾಗ ಪರಿಚಯವಿಲ್ಲದ ರಸ್ತೆಗಳಿಗೆ ಕಾಲಿಟ್ಟು ತೊಂದರೆಗೆ ಸಿಕ್ಕುವುದುಂಟು.

ಇಂದು ಮುಂಜಾನೆ ಅಂಥದೊಂದು ಮುಖಾಮುಖಿಯಲ್ಲಿ ನಾನು ಸಿಕ್ಕಿಕೊಳ್ಳಬೇಕಾಯಿತು. ಆ

ಪ್ರಸಂಗದಿಂದ ಪ್ರೇರಿತವಾದ ಪದ್ಯ ಈ ಕೆಳಗಿನದು. 



ಮುದದ ಮುಂಜಾವಿನ 

ಮಸುಕು ಬೆಳಕಿನಲ್ಲಿ 

ಮನ ಹರಿಯಬಿಟ್ಟು  

ಮೈಮರೆತು ನಡೆವಾಗ 


ಬೀದಿ ದೀಪದ 

ಕಿರಣ ತಾಗದ 

ಕತ್ತಲೆಯ ಮೂಲೆಯಿಂದ  

ಗವ್ವೆಂದು ಎಗರಿಬಂದು 


ಬೆಚ್ಚಿಬೀಳಿಸಿ ಬೆದರಿಸಿ

ಬಾಯ್ಬಿರಿದು ಹೆದರಿಸಿ 

ಬೊಗಳುತ್ತ ಹಿಂಬಾಲಿಸಿ 

ಚಳಿಯಲ್ಲೂ ಬೆವರಿಳಿಸುವ,  


ಬೀದಿ ಬೀದಿಗಳಲ್ಲಿ 

ಬೀಡು ಬಿಟ್ಟು 

ಭಿಡೆಯಿಲ್ಲದೆ 

ಬೆಳೆಯುತ್ತಿರುವ 


ಬೀದಿನಾಯಿಗಳ 

ಕಾರಣ, ಪ್ರೇರಣೆಯಿಂದ 

ಪ್ರ್ರಾಣತಳೆದ ಈ ಪದ್ಯ,

ಆ ಶ್ವಾನಗಳಿಗೇ ಸಮರ್ಪಣೆ  ! 


ಇದನ್ನು ಬರೆವಾಗ ಶಿಶುನಾಳ ಶರೀಫರ ನೆನಪಾಯಿತು. ಬೀದಿ ಬೀದಿ ತಿರುಗುವ ದಾಸರಾದ ಸಾಹೇಬರಿಗೂ  

ಸಾಕಷ್ಟು ಬೀದಿ ನಾಯಿಗಳ ಕಾಟದ ಅನುಭವವಿದ್ದಿರಬೇಕು. ಜತೆಗೇ, ನಾಯಿಕಾಟವನ್ನು  ಮೀರಿಸುವ 

ನರರ ಕಾಟ ಕೂಡ ! ಅದರಿಂದಲೇ ಅವರು ಹಾಡಿದರು  -  “ನಾಯಿಬಂದಾವೋ ಬೆನ್ಹತ್ತಿ, ನಾರಾಯಣ,

ನಾಯಿಬಂದಾವೋ ಬೆನ್ಹತ್ತಿ / ನಾಯಿಯಂದರೆ ನಾಯಿಯಲ್ಲ, ಮಾನವಜನ್ಮದ ಹೀನ ನಾಯಿ / ಜ್ಞಾನಾನಂದ

ತಿಳಿಯದಂಥ ಶ್ವಾನಾನಂದದೊಳು ದುಂಧೆ / ನಾಯಿಬಂದಾವೋ ಬೆನ್ಹತ್ತಿ  !” 


ನನ್ನ ಪುಣ್ಯ. ನನಗೆ ಅಂಥ ನರರ ಕಾಟವಿಲ್ಲ !! ಮೇಲೆ ಕಾಣಿಸಿದ ಪದವನ್ನು ಶ್ರೀ ಶಿವಮೊಗ್ಗ ಸುಬ್ಬಣ್ಣನವರು

ಹಾಡಿರುವ ಧಾಟಿ ನನಗೆ ಬಹಳ ಹಿಡಿಸಿತು. ಶರೀಫ ಸಾಹೇಬರ ಪದಗಳ ವಿವರಣೆ ಸುಲಭವಲ್ಲ.

ತಿಳಿದವರು ತಮ್ಮ ತಿಳುವಳಿಕೆಗೆ ತಕ್ಕಂತೆ ಅದನ್ನು ವಿವರಿಸಬಹುದು. ಆಸಕ್ತಿಯಿದ್ದರೆ, ವಿವರಿಸುವ

ಪ್ರಯತ್ನಪಡಿ. ಹಾಗೆಯೇ ಇತರ ಪದಗಳನ್ನೂ ಕೇಳಿ ಅರ್ಥ ಹೊರಗೆಳೆಯುವ ಯತ್ನ ಮಾಡಿ.