ಶುಕ್ರವಾರ, ನವೆಂಬರ್ 13, 2020

ನೀರು ತುಂಬುವ ಹಬ್ಬ (ಒಂದು ಸಣ್ಣ ಲಘುಬರಹ)

ನಾಳೆ ನರಕ ಚತುರ್ದಶಿ. ಅದರ ಹಿಂದಿನ ದಿನ, ತ್ರಯೋದಶಿಯ ಸಂಜೆ ‘ನೀರುತುಂಬುವ ಹಬ್ಬ’ ಎಂದು

ಆಚರಿಸುವುದು ಪದ್ಧತಿ. ನನ್ನ ಚಿಕ್ಕಂದಿನಲ್ಲಿ, ಬೆಂಗಳೂರಿನ ನಮ್ಮ ಮನೆಯಲ್ಲಿ, ನಮ್ಮಮ್ಮ, ಹಂಡೆ,

ಬಿಂದಿಗೆಗಳಲ್ಲಿ ನೀರು ತುಂಬಿಸಿಟ್ಟು, ಅದರ ಮುಂದೆ ರಂಗೋಲಿ ಬಿಡಿಸಿ, ಅವುಗಳಿಗೆ ಅರಿಶಿನ ಕುಂಕುಮವಿಟ್ಟು 

ಪೂಜೆ ಮಾಡುತ್ತಿದ್ದರು. 


ನಾನು ಬೆಂಗಳೂರು ಬಿಟ್ಟು ನಲವತ್ತು ವರುಷಗಳೇ ಆಗಿಹೋದವು.  ಹಿಂದೆ ಬೆಂಗಳೂರಿನ ನಮ್ಮ ಮನೆಯಲ್ಲಿದ್ದ

ಎಲ್ಲಾ ನಲ್ಲಿಗಳಲ್ಲೂ ನೀರು ಬರುತ್ತಿದ್ದದ್ದು ನನಗೆ ಚೆನ್ನಾಗಿ ನೆನಪಿದೆ. ಆದರೆ ನನ್ನ ವಿದ್ಯಾಭ್ಯಾಸ ಮುಗಿಯುವ

ಹೊತ್ತಿಗೆ ನಲ್ಲಿಯಿಂದ ಸುರಿಯುತ್ತಿದ್ದ ನೀರು, ನಿಧಾನವಾಗಿ ಬೀಳಲು ತೊಡಗಿ, ದಿನೇ ದಿನೇ ಕ್ಷೀಣಿಸಿ, ಕೊನೆಗೆ

ದಾರದಂತೆ ತೆಳ್ಳಗೆ ಅಲುಗಾಡುತ್ತಿತ್ತು ಅಷ್ಟೇ. ಮುಂದಿನ ದಿನಗಳಲ್ಲಿ ನೀರಿನ ಧಾರೆ ಪೂರ್ತಿ ನಿಂತು, ನಲ್ಲಿ

ಒಣಗಿ ಅದರಿಂದ ಬರಿಯ ಗಾಳಿಮಾತ್ರ ಆಗಾಗ ಹೊರಬೀಳುತ್ತಿತ್ತು. 


ಶ್ರೀ ಕೈಲಾಸಂ ಅವರ ‘ಕೋಳಿಕೆ ರಂಗ’ನ ಪರಿಚಯ ಇರುವವರಿಗೆ 


‘ಎತ್ತಿಲ್ಲದ್ ಬಂಡಿಗಳು 

ಎಣ್ಣೆ ಇಲ್ಲದ್  ದೀಪಗಳು 

ತುಂಬಿದ್ ಮೈಸೂರಿಗ್ಬಂದೆ’ 

ಎಂಬ ಸಾಲುಗಳು ನೆನಪಿರಬಹುದು.  


ತನ್ನ ಹಳ್ಳಿಯಿಂದ ಮೈಸೂರು ಶಹರಿಗೆ  ಬಂದ ಕೋಳೀಕೇರಂಗ ಅಲ್ಲಿಯ ಮೋಟಾರುಕಾರು,

ವಿದ್ಯುತ್ ದೀಪಗಳನ್ನು ಕಂಡು ಬೆರಗಾಗಿ ನುಡಿದ ಮಾತು ಅದು.  


ಹಾಗೆಯೇ, ಬೆಂಗಳೂರಿನ ವಾಸಿಯಾಗಿದ್ದ ನಾನು,

‘ನೀರಿಲ್ಲದ್ ನಲ್ಲಿಗಳು, 

ದೀಪ ಇಲ್ಲದ್ ಕಂಬಗಳು, 

ತುಂಬಿದ್ ಬೆಂಗ್ಳೂರ್ನಲ್ಲಿದ್ದೆ ’ ಎಂದು ಹಾಡಬಹುದೇನೋ  !  


ನಮ್ಮ ರಸ್ತೆಯ ಇನ್ನೊಂದು  ಬದಿಯಿಂದ ಸಂಪರ್ಕ ಪಡೆದಿದ್ದ ನಮ್ಮ ಎದುರು ಮನೆಯಲ್ಲಿ ನೀರು ಬರುತ್ತಿತ್ತು.

ನಮ್ಮ ನಲ್ಲಿಗಳು ಒಣಗಿಹೋದಮೇಲೆ ನಮ್ಮ ಎದುರು ಮನೆಯವರ ಔದಾರ್ಯದಿಂದ ನಾವು ಅನೇಕ 

ವರುಷಗಳ ಕಾಲ ಅವರ ಅಂಗಳದ ನಲ್ಲಿಯಿಂದ ನೀರು ಹೊತ್ತು ತಂದು ನಮ್ಮ ಮನೆಯ ಹಂಡೆ, ಬಿಂದಿಗೆ,

ಕೊಳದಪ್ಪಲೆ,ಡಬರಿ, ಚೊಂಬು, ಕೊನೆಗೆ ಲೋಟ ಬಟ್ಟಲುಗಳಲ್ಲೂ ನೀರು ತುಂಬಿಸಿ ಇಟ್ಟುಕೊಳ್ಳುತ್ತಿದ್ದೆವು.

ತುಂಬಿದ್ದ ನೀರಿನಲ್ಲಿ ದಿನಕಳೆದು ಮರುದಿನ ಮತ್ತೆ ಯಥಾರೀತಿ ನೀರು ಹೊತ್ತು ತಂದು ತುಂಬುವುದು !

ಹಾಗಾಗಿ, ನಮ್ಮ ಮನೆಯಲ್ಲಿ ಪ್ರತಿದಿನ ನೀರು ತುಂಬುವ ಹಬ್ಬ !


ಆ ಸಮಯದಲ್ಲಿ ನನ್ನ ತಂಗಿಯ ಮದುವೆಯಾಯಿತು. ಮೊದಲ ದೀಪಾವಳಿಗೆಂದು ನಮ್ಮ ಭಾವನವರು

ನಮ್ಮ ಮನೆಗೆ  ಬಂದಾಗ ಕೆ ಎಸ ನರಸಿಂಹಸ್ವಾಮಿಯವರ ‘ರಾಯರು ಬಂದರು ಮಾವನ ಮನೆಗೆ’ ಪದ್ಯದಂತೆ

  “ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ” ಬರುವ ಬದಲು ಬಾಗಿಲ ಬಳಿ ಅಳಿಯಂದಿರ ಕೈಗೂ ಒಂದು

ಖಾಲಿ ಬಕೆಟ್ ಬಂದಿತ್ತು ! ಅಂದು ಸಂಜೆ ಹೊಸ ಅಳಿಯರಿಂದಲೂ  ಭರ್ಜರಿ ‘ನೀರು ತುಂಬುವ ಹಬ್ಬ’

ಮಾಡಿಸಿದೆವು. 


ಪ್ರತಿವರುಷ ನೀರು ತುಂಬುವ ಹಬ್ಬ ಬಂದಾಗ ನನಗೆ ನಮ್ಮ ಬೆಂಗಳೂರಿನ ನೀರಿಲ್ಲದ ಹಬ್ಬದ  ನೆನಪಾಗುತ್ತದೆ .

ಭಗವಂತನ ಕೃಪೆಯಿಂದ ಗೋವಾದ ನಮ್ಮೂರಿನಲ್ಲಿ ಪ್ರತಿವರುಷ ಮಳೆಯಾಗಿ, ನಲ್ಲಿಯಲ್ಲಿ ನೀರು ಬರುತ್ತಿದೆ.

ನನ್ನಾಕೆ ಒಂದೆರಡು ಪಾತ್ರೆಗಳಿಗೆ ಅರಿಶಿನ ಕುಂಕುಮ ಹಚ್ಚಿ ನೀರು ತುಂಬುತ್ತಾಳೆ. ಆ ಕಾರ್ಯಕ್ರಮ ಇಂದು

ಸಂಜೆಯೂ ನೆರವೇರಲಿದೆ. 


ಈ ಸಂಧರ್ಭದಲ್ಲಿ, ಪರಮಾತ್ಮನ ಕೃಪೆ ಹೀಗೆಯೇ ನಮ್ಮ ಮೇಲೆ ಮತ್ತು ನಿಮ್ಮೆಲ್ಲರ ಮೇಲೆ ಸದಾ ಇರಲೆಂದು

ಹಾರೈಸುತ್ತೇನೆ.  ಸ್ನೇಹಿತರಿಗೆಲ್ಲಾ  ದೀಪಾವಳಿಯ ಶುಭಾಶಯಗಳು.