ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು ಬಿಟ್ಟರೆ, ಇತರೆ
ಕವಿಗಳು/ಕವನಗಳನ್ನು ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು
ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು ಮಾತ್ರ ನಾನು ಓದಿ ತಿಳಿಯಬಲ್ಲೆ.
ಕವಿಗಳ ಕವನದ ಒಳಹೊಕ್ಕು ನೋಡಿ ಅವರ ಕವನದ ರಸಾಸ್ವಾದನೆ ಮಾಡುವುದಾಗಲೀ ಅಥವಾ
ನನ್ನ ಮನದೊಳಗೆ ಹೊಕ್ಕು ಹುಡುಕಾಡಿ ಅವರು ಬರೆದ ಸಾಲುಗಳ ಅರ್ಥ ಪಡೆದುಕೊಳ್ಳುವುದಾಗಲೀ
ನನಗೆ ಕಷ್ಟಸಾಧ್ಯವಾದ ಕೆಲಸ. ಓದಿದ ಸಾಲುಗಳ ಸೌಂದರ್ಯ ಛಟ್ಟನೆ ತಿಳಿಯುವಂತಿದ್ದರೆ ನಾನು
ಅಂಥ ಪದ್ಯಗಳನ್ನು ಓದಿ ಆನಂದಿಸಬಲ್ಲೆ.
ನನಗೆ ಸುಲಭವಾಗಿ ತಿಳಿಯುವಂಥ ಅನೇಕ ಕವನಗಳ ಮೂಲಕ ನನ್ನ ಮನಸ್ಸಿಗೆ ಮುದನೀಡಿರುವ
ಮಾನ್ಯ ನಿಸ್ಸಾರ ಅಹಮದ್ದರು ತೀರಿಕೊಂಡದ್ದು ನನಗೆ ಬಹಳ ದುಃಖಕರ ಸುದ್ದಿ.
ಅವರ ನಿತ್ಯೋತ್ಸವ, ನಾಡದೇವಿಯೇ, ಬೆಣ್ಣೆ ಕಳ್ಳ ಕೃಷ್ಣ, ಪುರಂದರ ದಾಸರು, ಕುರಿಗಳು ಸಾರ್,
ಗಾಂಧಿಬಜಾರಿನ ಒಂದು ಸಂಜೆ, ಮಾಸ್ತಿ, ರಾಮನ್ ಸತ್ತ ಸುದ್ದಿ, ಅಮ್ಮ ಆಚಾರ ನಾನು, ಗೃಹಪ್ರವೇಶದ
ಉಡುಗೊರೆ ಮುಂತಾದ ಅನೇಕ ಕವನಗಳನ್ನು ಮತ್ತೆ ಮತ್ತೆ ಓದಿ ಬಹಳ ಸಂತೋಷಪಟ್ಟಿದ್ದೇನೆ.
ನಾನು ಹೈಸ್ಕೂಲಿನಲ್ಲಿದ್ದಾಗ ಒಂದು ಸಮಾರಂಭಕ್ಕೆ ಆಗಮಿಸಿದ್ದ ಮೈಸೂರು ಅನಂತಸ್ವಾಮಿಯವರು
ಕುರಿಗಳು ಸಾರ್ ಕುರಿಗಳು ಪದ್ಯವನ್ನು ಮನತಟ್ಟುವಂತೆ ಹಾಡಿದ್ದರು. ಹಾಡು ಹಿಡಿಸಿತ್ತು. ಕವಿ
ಯಾರೆಂದು ತಿಳಿದಿರಲಿಲ್ಲ. ಅದಾದ ಎರಡುಮೂರು ವರುಷಗಳ ನಂತರ ನಾನು ಪಿ ಯು ಸಿ ಯಲ್ಲಿದ್ದಾಗ
ಮೊದಲಬಾರಿಗೆ ನಿಸ್ಸಾರ ಅಹಮದ್ದರ ಹೆಸರು ಕೇಳಿದೆ. ಅವರನ್ನು ಕಂಡೆ. ಅವರು ನಮ್ಮ ಕಾಲೇಜಿಗೆ ಬಂದು
(ನ್ಯಾಷನಲ್ ಕಾಲೇಜು ಬೆಂಗಳೂರು) ಮಾರಲ್ ಸೈನ್ಸ್ ತರಗತಿಯನ್ನು ಉದ್ದೇಶಿಸಿ ಒಂದು ಘಂಟೆಯ
ಕಾಲ ಮಾತನಾಡಿದರು. ನಂತರ ತಮ್ಮ, ರಾಮನ್ ಸತ್ತ ಸುದ್ದಿ ಹಾಗೂ ಗಾಂಧಿಬಜಾರಿನ ಒಂದು ಸಂಜೆ
ಕವನಗಳ ವಾಚನಮಾಡಿದರು.
ಮತ್ತೆ ಅದೆಷ್ಟೋ ಕಾಲದ ನಂತರ ಅವರ ‘ನಿಸ್ಸಾರ ಅಹಮದ್ದರ ಆಯ್ದಕವಿತೆಗಳು’ ಸಂಕಲನ ನನ್ನ ಕೈಗೆ
ಸಿಕ್ಕು ಅದರ ಮೂಲಕ ಅವರ ಇನ್ನಿತರ ಕವಿತೆಗಳ ಪರಿಚಯ ನನಗಾಯಿತು. ಅವರ ಕವನಗಳನ್ನು ಬಹಳ
ಮೆಚ್ಚಿಕೊಂಡಿದ್ದ ನನಗೆ, ಒಮ್ಮೆ ಪದ್ಮನಾಭನಗರದಲ್ಲಿ ನಡೆದು ಹೋಗುತ್ತಿದ್ದಾಗ ಒಂದು ಮನೆಯ ಮುಂದೆ
ಕೆ ಎಸ ನಿಸ್ಸಾರ ಅಹಮದ್ ಎಂಬ ಫಲಕ ಕಂಡು ಬಹಳ ಆನಂದವಾಯಿತು. ಬಾಗಿಲುತಟ್ಟಿ ಅವರನ್ನು
ಕಂಡುಬರಲೇ ಎನಿಸಿದರೂ ಅದೇನೋ ಹಿಂಜರಿಕೆ. ಸುಮ್ಮನಾದೆ. ನನ್ನ ಹತ್ತಿರದ ನೆಂಟರು ಅವರ
ಮನೆಯ ಸಾಲಿನಲ್ಲೇ ವಾಸವಿದ್ದುದರಿಂದ ಅನೇಕಬಾರಿ ಅವರ ಮನೆಯಮುಂದೆಯೇ ಓಡಾಡುತ್ತಿದ್ದೆ.
ಒಳಹೊಕ್ಕುಅವರನ್ನು ಕಂಡು ಕೈಕುಲುಕಿ ಬರಬೇಕೆಂಬ ಆಸೆಯನ್ನು ಮಾತ್ರ ಪ್ರತಿಬಾರಿಯೂ ಹತ್ತಿಕ್ಕಿದ್ದೆ.
ಈಗ್ಗೆ ಐದಾರು ವರುಷಗಳ ಹಿಂದೆ ನಾನು ಏನೋ ಒಂದು ಬರಹವನ್ನು ಬರೆಯುತ್ತಿದ್ದಾಗ, ಅವರ
‘ಗೃಹಪ್ರವೇಶದ ಉಡುಗೊರೆ’ ಕವನವನ್ನು ಉದಾಹರಿಸಬೇಕಿತ್ತು. ನನಗೆ ಆ ಕವನದ ವಸ್ತು ಮತ್ತು
ಕೆಲವುಸಾಲುಗಳು ಮಾತ್ರ ನೆನಪಿದ್ದವು. ಕವನದ ಶೀರ್ಷಿಕೆ ಸಹ ಗೊತ್ತಿರಲಿಲ್ಲ. ಆ ಸಮಯದಲ್ಲಿ ಒಮ್ಮೆ
ಬೆಂಗಳೂರಿಗೆ ಹೋದಾಗ ಅವರನ್ನೇ ಭೇಟಿಯಾಗಿ ಅದನ್ನು ಕೇಳಬಾರದೇಕೆ ಎನಿಸಿತು. ಅಷ್ಟುಹೊತ್ತಿಗೆ
ನಮ್ಮಮನೆಯೇ ಪದ್ಮನಾಭನಗರದಲ್ಲಿತ್ತು. ಅವರ ಮನೆಗೆ ಬಹಳ ಸಮೀಪ. ಆದರೆ ಅಂತಹ ಘನತೆವೆತ್ತ
ಕವಿಯೊಬ್ಬರನ್ನು ಭೇಟಿಯಾಗಿ ಸರಿಯಾಗಿ ತಿಳಿವಳಿಕೆಸಹ ಇಲ್ಲದ ಅವರ ಕವನದ ಬಗ್ಗೆ ವಿಚಾರಿಸಲು
ಬಹಳವೇ ಹಿಂಜರಿಕೆ. ಕೊನೆಗೆ ಧೈರ್ಯಮಾಡಿ ಹಿಂಜರಿಯುತ್ತಲೇ ಅವರ ಮನೆಯ ಕರೆಘಂಟೆ ಬಾರಿಸಿದೆ.
ಅವರೇ ಬಾಗಿಲು ತೆರೆದರು. ನನ್ನ ಪರಿಚಯ ಮಾಡಿಕೊಂಡು ನಾನು ಅವರಲ್ಲಿಗೆ ಹೋದ ಉದ್ದೇಶ್ಯವನ್ನು
ತಿಳಿಸಿದೆ. “ಒಹೋ ಕನ್ನಡ ಬರೆಯುತ್ತೀರೇನು?” ಎಂದು ಉತ್ಸುಕತೆಯಿಂದ ನನ್ನ ಮೂರುಕಾಸಿನ
ಬರವಣಿಗೆಯ ಬಗ್ಗೆ ವಿಚಾರಿಸಿ “ಅದಾ? ಅದು ‘ಗೃಹಪ್ರವೇಶದ ಉಡುಗೊರೆ’ ಎಂಬ ಕವನ. ಯಾವ
ಸಂಕಲನದಲ್ಲಿದೆ ಎಂಬ ನೆನಪಿಲ್ಲ. ಸಪ್ನಾ ಬುಕ್ ಸ್ಟಾಲ್ ನಲ್ಲಿ ನನ್ನ ಸಮಗ್ರ ಕವನ ಸಂಕಲನ
ಇರಬಹುದು. ಅದರಲ್ಲಿನೋಡಿ. ಒಂದುವೇಳೆ ನಿಮಗೆ ಸಿಕ್ಕದಿದ್ದರೆ ತಿಳಿಸಿ. ಖಂಡಿತ ಹುಡುಕಿಕೊಡುತ್ತೇನೆ”
ಎಂದು ಬಹಳ ಸಜ್ಜನಿಕೆಯಿಂದ ಮಾತನಾಡಿಸಿ ಕಳಿಸಿದರು. ಸಪ್ನಾ ಮಳಿಗೆಯಲ್ಲಿ ನನಗೆ ಆ ಕವನ
ಸಿಕ್ಕಿದ್ದರಿಂದ ನಾನು ಮತ್ತೆ ಅವರಲ್ಲಿಗೆ ಹೋಗಲಿಲ್ಲ.
ನಂತರ ಅವರ ಅನೇಕ ಕವನಗಳನ್ನು ಓದಿ, ಆಸಕ್ತಿ ಇರುವವರಿಗೆ ಓದಿ ಕೇಳಿಸಿ ಸಂತೋಷಿಸಿದ್ದೇನೆ.
ಬುರಖಾ ಹಾಕಿದ ಮುಸ್ಲಿಂ ಮಹಿಳೆಯರನ್ನು ಕಂಡಾಗಲೆಲ್ಲ ‘ಅಮ್ಮ ಆಚಾರ ನಾನು’ ನೆನಪಿಗೆ ಬರುತ್ತದೆ.
ನನ್ನ ಅಂಗಳದ ಮಲ್ಲ್ಲಿಗೆ ಬಳ್ಳಿ ಕಂಡಾಗಲೆಲ್ಲ ‘ಗೃಹಪ್ರವೇಶದ ಉಡುಗೊರೆ’ ನೆನಪಾಗುತ್ತದೆ.
ನಿಸ್ಸಾರ ಅಹಮದ್ದರು ಇನ್ನಿಲ್ಲವಾದರೂ ಅವರ ಕವನಗಳ ಮೂಲಕ ಅವರು ಸದಾ ನಮ್ಮೊಡನೆಯೇ
ಇರುತ್ತಾರೆ.
ಆ ಮಹನೀಯರಿಗೆ, ಈ ಬರಹದ ಮೂಲಕ ನನ್ನ ನಮನ.