ಗುರುವಾರ, ಜುಲೈ 26, 2018

'ಉಪನಯನ'


ಪೂಜೆ, ಯಜ್ಞ, ಯಾಗಾದಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ವಿವಾಹ, ಉಪನಯನ, ಶ್ರಾಧ್ದ ಮೊದಲಾದ  ಸಾಮಾಜಿಕ/ಧಾರ್ಮಿಕ ಸಂಧರ್ಭಗಳಲ್ಲಿ ನಾವು ತಲೆತಲಾಂತರಗಳಿಂದ ನಮಗೆ ತಿಳಿದುಬಂದಿರುವ ಪದ್ದ್ಧತಿಗಳನ್ನು ಅನುಸರಿಸಿಕೊಂಡು ಬಂದಿರುತ್ತೇವೆ. ಅವುಗಳ ಔಚಿತ್ಯ, ಅರ್ಥ ನಮಗೆ ತಿಳಿದಿರಬಹುದು, ತಿಳಿದಿಲ್ಲದೆಯೂ ಇರಬಹುದು. ಅವುಗಳಿಗೆ ಧಾರ್ಮಿಕ ನಂಬಿಕೆ ಗಳ ಹಿನ್ನೆಲೆ ಅಷ್ಟೇ ಅಲ್ಲದೆ, ಅವುಗಳ ಆಚರಣೆ ಪ್ರಾರಂಭವಾದ ಕಾಲದಲ್ಲಿ ಕಾರ್ಯೋಚಿತ ವಾಗಿದ್ದ ಕಾರಣಗಳು ಇರಬಹುದೆಂದು ನನ್ನ ಅನಿಸಿಕೆ. ಉಪನಯನದ ಬಗ್ಗೆ ಆ ರೀತಿಯಾಗಿ ಚಿಂತಿಸಿದಾಗ ಹೊಳೆದ ವಿಚಾರವನ್ನು ಒಂದು ಸಣ್ಣ ಕಥೆಯರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದನ್ನೊಂದು ಕಾಲ್ಪನಿಕ ಬರಹವಾಗಿ ಭಾವಿಸಬಹುದು.




ಬರುವ ಕಾರ್ತಿಕ ಮಾಸಕ್ಕೆ ಸುಯುಕ್ತಿಗೆ ಎಂಟುವರ್ಷ ತುಂಬುತ್ತದೆ. ಎಂಟು ವರುಷ ಅವನು ಕುಟೀರದ  ಸುತ್ತಮುತ್ತ ಓಡಾಡಿಕೊಂಡು, ಕರು, ನಾಯಿ, ಬೆಕ್ಕುಗಳೊಡನೆ  ಆಡಿಕೊಂಡು, ಆಗೀಗ ಜತೆಗೆ ಸಿಗುವ ಇತರ ಹುಡುಗರೊಡನೆ ಮರಹತ್ತಿ ಕೀಚು, ಕಾಯಿ, ಹಣ್ಣು ಕಿತ್ತು ತಿಂದುಕೊಂಡು, ಹತ್ತಿರದ ಹೊಂಡದಲ್ಲಿ ಈಜಾಡಿಕೊಂಡು, ಮಿಕ್ಕ ಸಮಯ ಅಮ್ಮನ ಹಿಂದೆ ಸುತ್ತಾಡಿಕೊಂಡು  ಕಾಲಕಳೆದಿದ್ದಾನೆ.

ತಂದೆ ದಿನನಿತ್ಯ ಮಾಡುವ ಕಾರ್ಯಗಳನ್ನು ಅನುಕರಿಸಿ ಆಡುತ್ತಾ ಕಡ್ಡಿಗಳನ್ನು ಸೇರಿಸಿ ಅಗ್ನಿಯಿಲ್ಲದೆ ಹೋಮ ಮಾಡುತ್ತಾನೆ. ಕೇಳಿ ಕೇಳಿಯೇ  ಬಾಯಿಪಾಠವಾಗಿರುವ ಕೆಲವು ಮಂತ್ರಗಳನ್ನು  ತನಗಿಷ್ಟಬಂದಂತೆ ಹೇಳಿಕೊಳ್ಳುತ್ತಾನೆ. ಕುಟೀರದ ಸಮೀಪದಲ್ಲಿ ತೆರವುಮಾಡಿರುವ  ಜಾಗದಲ್ಲಿ ತನ್ನ ತಂದೆ ಅಗೆತಮಾಡಿ ಹಣ್ಣು, ತರಕಾರಿ ಗಿಡಗಳ ಆರೈಕೆ ಮಾಡುವಾಗ ಇವನೂ ಚಿಕ್ಕ ಬುಟ್ಟಿಯಲ್ಲಿ ಮಣ್ಣು ಹೊತ್ತೊಯ್ಯುತ್ತಾನೆ, ಗೊಬ್ಬರ ತುಂಬಿ ತರುತ್ತಾನೆ. ಎಲ್ಲವೂ ಅವನಿಗೆ ಆಟವೇ!

ಈಗ ಎಂಟು ತುಂಬಿದರೆ ಅವನು ಪಾಠಕ್ಕಾಗಿ ಗುರುಕುಲಕ್ಕೆ ಹೋಗಬೇಕು. ಅಲ್ಲಿ ಹೇಗಿರುತ್ತಾನೋ, ಏನುಮಾಡುತ್ತಾನೋ ಎಂದು ತಾಯಿಗೆ ಚಿಂತೆ ಶುರುವಾಗಿದೆ. ಆದರೆ ಗುರುಕುಲಕ್ಕೆ ಹೋಗಬೇಕಾದ್ದು ಕಡ್ಡಾಯ. ತಂದೆಯೇ ಸುಯುಕ್ತಿಗೆ  ಪಾಠಕಲಿಸಲು ಸಮರ್ಥನಾಗಿದ್ದರೂ ಆತ ಗುರುವಾಗಲಾರ. ತಂದೆಯೊಡನೆ ಸದರ ಹೆಚ್ಚು. ಕ್ರಮವಾದ, ಶಿಸ್ತುಬಧ್ಧವಾದ ಕಲಿಕೆ ಅವನೊಡನೆ ಸಾಧ್ಯವಿಲ್ಲ. ಆದ್ದರಿಂದ ಗುರುಕುಲವೇ ಸರಿ. ಸುಯುಕ್ತಿ ಹೋಗಬೇಕಾಗಿರುವ  ಗುರುಗಳ ಆಶ್ರಮ ಇವರ ಕುಟೀರದಿಂದ ಕೊಂಚ ದೂರವೇ. ಕಾಡಿನೊಳಗಿನ ಹಾದಿ. ಗುರುಗಳ ಆಶ್ರಮವೂ ಕಾಡಿನೊಳಗೆಂದೇ  ಹೇಳಬಹುದು. ಗುರು ಮತ್ತು ಗುರುಪತ್ನಿ ಬಹಳ ಒಳ್ಳೆಯವರೇ ಆದರೂ ಮನೆಯಲ್ಲಿರುವ ಮುಚ್ಚಟೆ ಅಲ್ಲಿ ಸಿಗಲಾರದು. ಜತೆಗೆ ಅಲ್ಲಿ ಇವನಂತೆಯೇ ಇತರ ಹುಡುಗರೂ ಇರುತ್ತಾರೆ. ಇವನು ಅಲ್ಲಿ ಹತ್ತರಲ್ಲಿ ಹನ್ನೊಂದು.

ಇನ್ನು ಕೆಲವೇ ದಿನಗಳಲ್ಲಿ ಅವನ ಉಪನಯನದ ಮುಹೂರ್ತವಿದೆ. ಅದಾಗುತ್ತಿದ್ದಂತೆ  ಗುರುಕುಲಕ್ಕೆ ಹೊರಡುವುದೇ. ಎಂಟುವರುಷದ ವರೆಗೆ ಸಮಯ ಬರಿಯ ತುಂಟಾಟದಲ್ಲೇ ಕಳೆಯಿತು. ಇನ್ನು ಮುಂದೆ ಕ್ರಮವಾದ, ಕಠಿಣವಾದ ದಿನಚರಿ. ಗುರುಗಳ ಮನೆ ಕೆಲಸ, ನೀರುತರುವುದು, ಅಗ್ನಿಕಾರ್ಯದ ಪರಿಕರಗಳನ್ನು ತಯಾರಿಸಿಡುವುದು, ಹೋಮಕುಂಡವನ್ನು ತಯಾರುಮಾಡುವುದು ಅಷ್ಟೇಅಲ್ಲದೆ ದನಕರುಗಳ ಆರೈಕೆ, ತರಕಾರಿ ತೋಟದ ಕೆಲಸಗಳು ಎಲ್ಲ ಕೆಲಸಗಳಲ್ಲೂ  ಕೈಗೂಡಿಸಬೇಕು. ಸಮಿತ್ತು ಸಂಗ್ರಹಿಸಲು ಕಾಡಿನೊಳಗೂ ಹೋಗಬೇಕು. ಅದೆಲ್ಲದರ ಜತೆಗೆ ವಿದ್ಯಾಭ್ಯಾಸವಾಗಬೇಕು . ಬೇಕೆನಿಸಿದಾಗ ಬೇಕೆನಿಸಿದ್ದನ್ನು ತಿನ್ನುವಂತಿಲ್ಲ. ಊಟ ತಿಂಡಿ ಎಲ್ಲ ಕ್ಲುಪ್ತ ಸಮಯಕ್ಕೆ, ಹೊಟ್ಟೆ ತುಂಬಲು ಮಾತ್ರ. ತಾಯಿ ಹಾಲುಕಾಸಿದಾಗ ಕೆನೆತೆಗೆದು ಬಾಯಿಗಿಡುವಂತೆ ಅಲ್ಲಿ ಯಾರೂ  ತಿನ್ನಿಸುವವರಿಲ್ಲ. ಹಲಸಿನ ತೊಳೆ ಬಿಡಿಸಿ, ಬೀಜ ತೆಗೆದು ಬಾಯಿಗಿಡುವವರಿಲ್ಲ. ಅಲ್ಲಿಯದು ಎಂಟುವರುಷದ ಹುಡುಗನಿಗೆ ಕಠಿಣವೆನಿಸುವ ಜೀವನವೇ. ನಿಜಕ್ಕೂ ಎರಡನೆಯ ಹುಟ್ಟೇ. ಉಪನಯನದೊಂದಿಗೆ ಅದರ  ಪ್ರಾರಂಭ. ಅದಕ್ಕೇ ಉಪನಯನವಾಗಿ ಗುರುಕುಲಕ್ಕೆ ಹೊರಟ ಹುಡುಗನನ್ನು 'ದ್ವಿಜ' (ಎರಡನೇಬಾರಿ ಜನಿಸಿದವನು) ಎನ್ನುತ್ತಾರೋ ಏನೋ.

ಇದನ್ನೇ ಯೋಚಿಸುತ್ತಾ ನಿಟ್ಟುಸಿರುಬಿಟ್ಟು, ಆಡುತ್ತಿರುವ ಕಂದನನ್ನು ಕಣ್ಣುತುಂಬಿಕೊಂಡು, ತಾಯಿ ಉಪನಯನದ ತಯಾರಿಗೆ ತೊಡಗಿದಳು. 'ಮಾತೃ ಭೋಜನ'ಕ್ಕೆ ತಿನಿಸುಗಳನ್ನು ಅಣಿಮಾಡಬೇಡವೇ? ತಯಾರಿ ನಡೆಯುತ್ತಿದ್ದಂತೆಯೇ 'ಉಪನಯನ' ಎಂಬ ಪದದ ಚಿಂತನೆ ಶುರುವಾಯಿತು. ಉಪನಯನ ಸಂಸ್ಕಾರವೇನು? ವಿದ್ಯಾರ್ಜನೆಗಾಗಿ ಮನೆಬಿಟ್ಟು ಹೊರಡಲಿರುವ ಮಗನನ್ನು ತಂದೆಯಾದವನು ಹತ್ತಿರಕರೆದು ಕೂಡಿಸಿಕೊಂಡು ಬುದ್ಧಿಮಾತುಗಳನ್ನು ಹೇಳುವುದಷ್ಟೇ? ಅದು ಈಗಾಗಲೇ ವರುಷದಿಂದ ನಡೆಯುತ್ತಲೇ ಇದೆ.  ಅಪ್ಪ ಸಂಧ್ಯಾವಂದನೆ ಮಾಡುವಾಗ, ದಿನದ ಅಭ್ಯಾಸಕ್ಕಾಗಿ ಗ್ರಂಥಗಳನ್ನು ಓದಲು ಕುಳಿತಾಗ, ಮಗು ಜತೆಯಲ್ಲಿ ಕುಳಿತು, "ಅದನ್ನು ಮಾಡುವುದೇಕೆ? ಇಷ್ಟು ಗ್ರಂಥಗಳೇಕೆ? ಅಷ್ಟು ಓದುವುದೇಕೆ?" ಇತ್ಯಾದಿ ಪ್ರಶ್ನೆ ಮಾಡುತ್ತದೆ. ಆ ಸಂಧರ್ಭಗಳನ್ನು ಉಪಯೋಗಿಸಿಕೊಂಡು ಅಪ್ಪ ಮಗುವಿನ ತಲೆಯಲ್ಲಿ ಜ್ಞಾನಾರ್ಜನೆಯ ಬೀಜ ಬಿತ್ತಲು ಪ್ರಯತ್ನಿಸುತ್ತಾನೆ. "ಮಗೂ ನಮಗೆ  ಧನಬಲವಿಲ್ಲ, ತೋಳ್ಬಲವಿಲ್ಲ, ನಮಗಿರುವುದು ಬುದ್ಧಿಬಲ ಮಾತ್ರ. ಅದರಿಂದ ನಾವು ಜೀವನ ಸಾಗಿಸಬೇಕು. ಜ್ಞಾನ ಗಳಿಸುವುದು, ಇತರರಿಗೆ ತಿಳಿಸಿಕೊಡುವುದು ನಮ್ಮ ಧರ್ಮ. ಅದಕ್ಕೇ ನಾವು ಭಗವಂತನಲ್ಲಿ ನಮಗೆ ಹೆಚ್ಚು ಹೆಚ್ಚು ಜ್ಞಾನ ದಯಪಾಲಿಸೆಂದು ಪದೇ ಪದೇ ಕೇಳಿಕೊಳ್ಳುವುದು ಮತ್ತು ಜ್ಞಾನಾರ್ಜನೆಯೇ ನಮ್ಮನ್ನು ಕಾಪಾಡುವುದೆಂದು ನಮಗೆ ನಾವೇ ಮನದಟ್ಟು ಮಾಡಿಕೊಳ್ಳುವುದು."

"ಆ ಸಣ್ಣ ಮಗುವಿಗೆ ನಿಮ್ಮದು ಇದೇನು ಉಪದೇಶ" ವೆಂದು ತಾಯಿ ಆಕ್ಷೇಪಿಸುತ್ತಾಳೆ. "ಅದು ನಿಜಸ್ಥಿತಿ. ಮಗು ಎಷ್ಟುಬೇಗ ಅದನ್ನು ಮನದಟ್ಟು ಮಾಡಿಕೊಂಡರೆ ಅಷ್ಟು ಒಳ್ಳೆಯದು. ನಾಳೆ ಉಪನಯನದಲ್ಲಿ ಅದನ್ನೇ ಅಲ್ಲವೇ ಹೇಳುವುದು" ಎನ್ನುತ್ತಾನೆ ತಂದೆ.

ಇವೆಲ್ಲವನ್ನೂ ಯೋಚಿಸುತ್ತಾ ತಾಯಿ ಮಾತೃಭೋಜನದ  ತಿನಿಸುಗಳ ತಯಾರಿಗೆ ತೊಡಗಿದಳು. ಉಪನಯನದ ದಿವಸ ತಾನು ತೊಡೆಯಮೇಲೆ ಕುಳ್ಳಿರಿಸಿಕೊಂಡು ತಿನಿಸುವ ಊಟವೇ ಮಗುವಿಗೆ ತನ್ನ ಕೈಯಿನ ಕೊನೆಯ ಊಟವಲ್ಲವೇ? ಮಗನಿಗೆ  ಏನೇನು ಪದಾರ್ಥಗಳು ಇಷ್ಟವೋ ಅವನ್ನೆಲ್ಲಾ ಮಾಡಿಡಬೇಕು. ನಂತರ ಎಂದಿಗೆ ಆ ತಿನಿಸುಗಳು ಅದಕ್ಕೆ ಮತ್ತೆ ಸಿಗುವುದೋ ತಿಳಿದವರಾರು? ಉಪನಯನವಾಗಿ ಊಟವಾದೊಡನೆ ಗುರುಕುಲಕ್ಕೆ ಹೊರಡುವುದೆಂದು ಆಗಲೇ ನಿರ್ಧಾರವಾಗಿದೆ. ಮತ್ತೆ ತಾನು ಮಗನನ್ನು ಕಾಣುವ ಹೊತ್ತಿಗೆ ಅವನು ಯುವಕನಾಗಿರುತ್ತಾನೆ.  ಅವನು ತನ್ನ ತೊಡೆಯಮೇಲೆ ಕೂತು ಬೇಡಿ ತಿನ್ನುವುದುಂಟೇ? ತನ್ನ ತುತ್ತನ್ನು ಕಸಿದು ಬಾಯಿಗಿಟ್ಟುಕೊಳ್ಳುವುದುಂಟೇ? ನೆನಸಿಕೊಂಡಂತೆ ತಾಯಿಗೆ ಅಳುವೇ ಬಂತು. ಆದರೆ ಎಲ್ಲವೂ ಮಗುವಿನ ಉಧ್ಧ್ದಾರಕ್ಕಾಗಿಯೇ ಅಲ್ಲವೇ ಎಂದು ಸಮಾಧಾನ ಮಾಡಿಕೊಂಡು ಆಕೆ ಕೆಲಸ ಮುಂದುವರೆಸಿದಂತೆಯೇ  ಯೋಚನೆಗಳೂ ಮುಂದುವರೆದವು.

ಈ ಸುತ್ತಮುತ್ತಲಿನ ಹುಡುಗರು ಸುಮ್ಮನಿರುವುದಿಲ್ಲ. ಏನಾದರೂ ಕೀಟಲೆಯೇ. ಮಗನಿಗೆ ಯಾರು ಏನು ಹೇಳಿದರೋ ತಿಳಿಯದು. ಹುಡುಗ ಅಮ್ಮನನ್ನು ಕೇಳಿದ "ಗುರುಕುಲದಲ್ಲಿ ರಾತ್ರಿ ಕುಟೀರದ ಹೊರಗೆ ಮಲಗಬೇಕಂತೆ ಹೌದೇ ಅಮ್ಮ? ಹಾವು ಕಾಲಿಗೆ ಸುತ್ತಿಕೊಳ್ಳುತ್ತದಂತೆ ನಿಜವೇ?"  ಮತ್ತೊಮ್ಮೆ " ಗುರುಗಳ ಆಶ್ರಮದ ಬಳಿ ಹುಲಿ ಬರುತ್ತದಂತೆ ಹೌದೇ?". ಆ ತಾಯಿಗೂ ಅದೇ ಹೆದರಿಕೆಗಳು ಕಾಡುತ್ತವೆ. ತನ್ನ  ಹೆದರಿಕೆಯನ್ನು ಗಂಡನೊಂದಿಗೆ ಹೇಳಿಕೊಂಡಳು ತಾಯಿ. "ಹತ್ತಾರು ಹುಡುಗರು ಗುರುವಿನ ಬಳಿ ಇರುವಾಗ ಎಲ್ಲರಿಗೂ ತಮಗೆ ಬೇಕಂತೆ ಸ್ಥಳ ವ್ಯವಸ್ಥೆ ಆಗುವುದು ಹೇಗೆ? ಕೆಲವು ದೊಡ್ಡಹುಡುಗರು ಜಗಲಿಯಮೇಲೋ ಅಂಗಳದಲ್ಲೋ ರಾತ್ರಿ ಮಲಗಬಹುದು. ಅನೇಕ ಹುಡುಗರು ಅಲ್ಲಿ  ಇದ್ದು ಕಲಿತುಬಂದದ್ದನ್ನು ನಾವು ಕಂಡಿಲ್ಲವೇ? ಕಾಡಿನ ಬಳಿ ಇರುವ ಆಶ್ರಮದ ಬಳಿ ಹಾವು, ಹುಲಿ ಕಾಣುವುದು ಸಹಜವೇ. ಅಂಥ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಸಿಕೊಡೋಣ. ಜತೆಗೆ ಮಂತ್ರದಂಡವೆಂದು  ದಂಡ ಒಂದನ್ನು ತಯಾರಿಸಿಡುತ್ತೇನೆ.  ಹುಡುಗನಿಗೆ ಧೈರ್ಯ ಬಂದೀತು." ಹೇಳಿದ ತಂದೆ.

"ಹಾಗೇ ಮರೆತಿದ್ದೆ ನೋಡಿ. ಬೇಸಗೆಯಲ್ಲಿ ಅಲ್ಲಿಯ ತೊರೆ ಬತ್ತುತ್ತದಂತೆ. ದೂರದಿಂದ ನೀರು ತರಬೇಕಂತೆ. ಇವನ ಬಳಿ ಕುಡಿಯುವ ನೀರಿನ ಪಾತ್ರೆ ಒಂದಿರುವುದು ಒಳ್ಳೆಯದೇನೋ. ಒಂದು ಸರಿಯಾದ ಕಮಂಡಲವನ್ನೂ ತಂದಿಡಿ" ತಾಯಿ ಸೇರಿಸಿದಳು.

ಉಪನಯನದ ದಿನ ಬಂದೇ ಬಿಟ್ಟಿತು. ಅದೊಂದು ವಿಶಿಷ್ಟ ದಿನವೆಂದು ಮಗುವಿಗೆ ಮನದಟ್ಟಾಗಬೇಕಲ್ಲವೇ? ಮುಂಜಾನೆಯಿಂದಲೇ ಅಭ್ಯಂಜನ, ದೇವತಾ ಪೂಜೆ, ಹೋಮ ಹವನ ಪ್ರಾರಂಭವಾದವು. ಮಗುವಿಗೆ ಅಭ್ಯಂಜನವಾದನಂತರ ಮೌಂಜಿ (ಉಡುದಾರ) ಯನ್ನು ಘಟ್ಟಿಯಾಗಿ ಬಿಗಿದ ನಂತರ ಕೌಪೀನ ಕಟ್ಟಿದ ತಂದೆ, ಕೌಪೀನವನ್ನು ಸದಾ ಧರಿಸಿರುವಂತೆ ಎಚ್ಚರಿಕೆ ನೀಡಿದ.

ಕೌಪೀನವನ್ನು ಕಟ್ಟುವುದು ಸಾಂಕೇತಿಕವಾದ ಆದರೆ ಬಹು ಮಹತ್ವವುಳ್ಳ ಒಂದು ಕಾರ್ಯ.  ಗುರುಕುಲದ ವಾಸ ಮಗುವಿಗೆ ಅನೇಕ ವರುಷಗಳ ಕಾಲ ಇರತಕ್ಕದ್ದು. ಇನ್ನು ನಾಕೈದು ವರುಷಗಳಲ್ಲಿ ಮಗ ದೊಡ್ಡವನಾಗಿ ಮನಸ್ಸು ಅತ್ತಿತ್ತ ತಿರುಗುವ ಸಾಧ್ಯತೆ ಇರುತ್ತದೆ. ಆ ಸಮಯದಲ್ಲಿ ಚಿತ್ತ ಚಂಚಲವಾಗದಂತೆ ಮನಸ್ಸನ್ನು ಧೃಡವಾಗಿರಿಸಿಕೊಂಡು ವಿಧ್ಯಾಭ್ಯಾಸದೆಡೆಗೆ ಗಮನ ನೀಡುವುದು ಬಹಳ ಮುಖ್ಯ. ಅದನ್ನು ಸರಿಯಾಗಿ ಮನದಟ್ಟಾಗುವಂತೆ ಗುರುವು ತಿಳಿಸುತ್ತಾನಾದರೂ ತಂದೆಯಾಗಿ ತಾನು ಆ ವಿಚಾರದಲ್ಲಿ ಬುದ್ಧಿವಾದವನ್ನು ಪ್ರಾರಂಭಿಸುವುದು ತನ್ನ ಕರ್ತವ್ಯ.

ಮತ್ತೆ ಮಗ ತನ್ನ ಕೈಗೆ ಸಿಕ್ಕುತ್ತಾನೋ ಇಲ್ಲವೋ ತಿಳಿಯದ ತಾಯಿ ಮುದ್ದಿನಿಂದ ಮಗುವನ್ನು ಪಕ್ಕದಲ್ಲಿ  ಕುಳ್ಳಿರಿಸಿಕೊಂಡು ಕಣ್ಣಲ್ಲಿ ಜಿನುಗುತ್ತಿದ್ದ ನೀರನ್ನು ಮರೆಮಾಚಿಕೊಂಡು, ನಗುತ್ತಾ ಭೋಜನಮಾಡಿಸಿದಳು. ನಂತರ ಮಗನನ್ನು ತೊಡೆಯಮೇಲೆಕುಳ್ಳಿರಿಸಿಕೊಂಡ ಅಪ್ಪ ಕಿವಿಯಲ್ಲಿ "ಭರ್ಗೋ  ದೇವಸ್ಯ ಧೀಮಹಿ, ಧಿಯೋ ಯೋನಃ ಪ್ರಚೋದಯಾತ್" ಉಸುರಿ ತಾನು ಅನೇಕ ಬಾರಿಹೇಳಿದ್ದ ಜ್ಞಾನಾರ್ಜನೆಯ  ಮಹತ್ವವನ್ನು ಮತ್ತೊಮ್ಮೆ ವಿಧ್ಯುಕ್ತವಾಗಿ ತಿಳಿಸಿಕೊಟ್ಟ. ಗಾಯತ್ರಿ ಮಂತ್ರದ ಮಹತ್ವವೆಂದರೆ ಅದೇ ಅಲ್ಲವೇ? ಸರ್ವಶಕ್ತ ಭಗವಂತನನ್ನು ನನಗೆ ಹಣಕೊಡು, ಮನೆ ಕೊಡು, ಸಂತಾನ ಕೊಡು, ಅದು ಕೊಡು, ಇದು ಕೊಡು ಎಂದು ಕೇಳದೆ ಜ್ಞಾನ ಪಡೆದುಕೊಳ್ಳುವಂತೆ ನನ್ನ ಬುದ್ಧಿಯನ್ನು  ಪ್ರಚೋದಿಸು ಎಂದು ಕೇಳಿಕೊಳ್ಳುವುದು. ಅದರಿಂದಲೇ ಗಾಯತ್ರಿ ಎಂದರೆ ಮತ್ತ್ತೆಲ್ಲ ಮಂತ್ರಗಳಿಗಿಂತ ಶ್ರೇಷ್ಠ ವಾದ ಮಂತ್ರವೆಂದು ಹೆಸರಾಗಿರುವುದಲ್ಲವೇ?

ಮಗನಿಗೆ ಗಾಯತ್ರಿ ಉಪದೇಶಮಾಡಿ, ದಂಡ - ಕಮಂಡಲಗಳನ್ನು ಕೈಗಿತ್ತದ್ದಾಯಿತು. ಉಪನಯನದ ಕಾರ್ಯಗಳು ಮುಗಿದು ಹುಡುಗ ಹೊರಟು  ನಿಂತರೆ ಅವನ ಮುಖದಲ್ಲಿ ಅದೇನೋ ಹೊಸ ತೇಜಸ್ಸು ಬಂದಂತೆ ತಾಯಿಯ ಭಾವನೆ. ಒಂದು ಕಣ್ಣಿನಲ್ಲಿ ಸಂತಸ, ಒಂದರಲ್ಲಿ ದುಃಖ ಎನ್ನುವ ಪರಿಸ್ಥಿತಿಯಲ್ಲಿ ತಂದೆಯೊಡನೆ ಗುರುಕುಲಕ್ಕೆ ಹೊರಟ ಮಗನನ್ನು ಕಣ್ತುಂಬಿಕೊಳ್ಳುತ್ತಾ, ಕಣ್ಣೊರೆಸಿಕೊಳ್ಳುತ್ತಾ ನಿಂತಳು ತಾಯಿ.

 ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ವಾಮನಾವಾತಾರವನ್ನು ಬಣ್ಣಿಸಿರುವಂತೆ  "ಮೀನಾಂಕ ನಿರ್ಮಲ ನಿಶಾನಾಥ ಕೋಟಿ ಲಸಮಾನಾತ್ಮ ಮೌಂಜಿ ಗುಣ ಕೌ - ಪೀನಾಚ್ಛ ಸೂತ್ರ ಪದ ಯಾನಾತ ಪತ್ರ ಕರಕಾನಮ್ಯ ದಂಡ ವರ ಭೃತ್ "    "ಮನ್ಮಥನಂಥ ನಿರ್ಮಲ ಸೌಂದರ್ಯದ, ಕೋಟಿಚಂದ್ರರಿಗಿಂತ ಮಿಗಿಲಾದ ತೇಜಸ್ಸಿನ, ಜನಿವಾರ, ಕೌಪೀನ ಧರಿಸಿ, ಕೈಯಲ್ಲಿ ಕಮಂಡಲ ಮತ್ತು ವಂದನೆಗೆ ಯೋಗ್ಯವಾದ ದಂಡವನ್ನು ಹಿಡಿದ, ಧ್ಯಾನಕ್ಕೆ ಅರ್ಹವಾದ ವಾಮನ ಮೂರ್ತಿ"ಯನ್ನು ಆ ತಾಯಿ ಮಗನಲ್ಲಿ ಕಂಡಿರಬಹುದೇನೋ!!