ಗುರುವಾರ, ಜುಲೈ 20, 2017

ಏಕಾದಶಿ ಉಪವಾಸ



ಇವತ್ತು ಏಕಾದಶಿ. ಉಪವಾಸಮಾಡಿದರೆ ಪುಣ್ಯಸಂಪಾದನೆ ಯಾಗುತ್ತದಂತೆ. ಸುಮ್ಮನೆ ಉಪವಾಸವಲ್ಲ. ಉಪವಾಸಮಾಡಿ ಭಗವಂತನ ಸ್ಮರಣೆಯಲ್ಲಿ ದಿನ ಕಳೆಯಬೇಕು. ನನಗೂ ವಯಸ್ಸು ಅರುವತ್ತಾಯಿತು. ಇದುವರೆಗೂ ಪುಣ್ಯಗಳಿಸುವಂಥ ಕೆಲಸವೇನೂ ಮಾಡಿದ ನೆನಪಿಲ್ಲ. ಅರವತ್ತೆಂದರೆ ಗೊತ್ತಲ್ಲ? ಒಂದುಕಾಲು ಸಂಸಾರದಾಚೆ ಎಂದರ್ಥ. ಕಾಲು ಆಚೆಹೋದಮೇಲೆ ದೇಹ ಅದರಹಿಂದೆಯೇ ಅಲ್ಲವೇ? ಆದ್ದರಿಂದ ಈಗ ಮುಂದಿನ ಚಿಂತೆ. “ಮುಪ್ಪು ಬಂದಿತಲ್ಲಾ , ಪಾಯಸ ತಪ್ಪದೆ ಉಣಲಿಲ್ಲಾ.  ತುಪ್ಪದಬಿಂದಿಗೆ ತಿಪ್ಪೆ ಮೇಲೆ ಧೊಪ್ಪನೆ ಬಿತ್ತಲ್ಲಾ”  ದಾಸರು ನನ್ನಂಥವರನ್ನು ಕಂಡೇ ಹಾಡಿರಬೇಕು! ದಾಸರು ಒಮ್ಮೊಮ್ಮೆ ಒಗಟಾಗಿ ಹಾಡುತ್ತಾರೆ. ತಿಳಿಯುವುದು ಕಠಿಣ. ಇಲ್ಲಿ ತುಪ್ಪದ ಬಿಂದಿಗೆ ಎನ್ನುವುದು ಈ ದೇಹ. ಪಾಯಸ ಎಂಬುವುದು ಜ್ಞಾನ. ಆ ಪಾಯಸ ಈ ತುಪ್ಪ ಸೇರಬೇಕು. ದೇಹ ಮುಪ್ಪಾಗುವವರೆಗೂ  ಜ್ಞಾನ ಸಂಪಾದನೆಯಾಗದಿದ್ದರೆ, ಈ ದೇಹವೆಂಬ ತುಪ್ಪ ಬರಿಯ ಸಂಸಾರವೆಂಬ ತಿಪ್ಪೆಗೇ ಪ್ರಾಪ್ತಿ. ಇದು ದಾಸರ ಮಾತು.  ಜ್ಞಾನದ ಪಾಯಸ ನನ್ನ ದೇಹವೆಂಬ ತುಪ್ಪದ ಬಿಂದಿಗೆಗೆ ಸೇರೀತೇ? ನನಗೆ ಗೊತ್ತಿರುವುದು ತಟ್ಟೆಗೆ ಬಿದ್ದ ಬೆಲ್ಲದ ಪಾಯಸ ಮಾತ್ರ. ಅದು ಸೇರಿದ್ದು ನನ್ನ  ಹೊಟ್ಟೆ ಎಂಬ  ತಿಪ್ಪೆಗೆ. ಅಷ್ಟೇ.


ಆ ಪಾರಮಾರ್ಥ, ತಪಸ್ಸು, ಜ್ಞಾನ ಇವನ್ನೆಲ್ಲ ಅರಿತು ನಡೆಯುವುದು ನನ್ನನ್ನು ಮೀರಿದ ಕೆಲಸ. ಆದ್ದರಿಂದ ಸುಲಭವಾದ ಏಕಾದಶಿ  ಉಪವಾಸವನ್ನಾದರೂ ಮಾಡಿ ಒಂದಷ್ಟು ಪುಣ್ಯ ಸಂಪಾದಿಸಿಬಿಟ್ಟರೆ ಮುಂದಿನ ಹಾದಿ ಸುಗಮವಾದೀತೆಂಬ ಯೋಚನೆಯಿಂದ ಉಪವಾಸಮಾಡುವ ಮನಸ್ಸು ಮಾಡಿಬಿಟ್ಟೆ. ದಶಕಗಳ ಹಿಂದೆ ಕಾಲೇಜಿನಲ್ಲಿದ್ದಾಗ ಒಮ್ಮೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಇಪ್ಪತ್ತನಾಲ್ಕು ತಾಸು ನಿಜಕ್ಕೂ ಏನೂ  ತಿನ್ನದೇ ಇದ್ದಿದ್ದು ನೆನಪಿತ್ತು. ಅಂದು ಮಾಡಿದ ಉಪವಾಸ ದೇಹಕ್ಕಾಗಲೀ ಮನಸ್ಸಿಗಾಗಲೀ ಏನೂ ತೊಂದರೆಮಾಡಿರಲಿಲ್ಲ. ಆದ್ದರಿಂದ ಒಂದುದಿನದ ಉಪವಾಸ ಎನ್ನುವುದು ಸುಲಭದ ಸಾಧನೆ ಎಂದು ನನ್ನ ನಂಬಿಕೆ.


ದಶಮಿಯ ದಿವಸ ಸಂಜೆ ನನ್ನ ಪತ್ನಿಯಮುಂದೆ “ನಾಳೆ ನಾನು ಉಪವಾಸ” ವೆಂದು ತಿಳಿಸಿ  ತಿಂಡಿಗಾಗಲೀ, ಊಟಕ್ಕಾಗಲೀ ನನ್ನನ್ನು ಲೆಕ್ಕವಿಡಬಾರದೆಂದು ತಿಳಿಸಿದೆ. “ಇದೇನಾಯಿತು ನಿಮಗೆ” ಎಂದು ಆಶ್ಚರ್ಯ ಸೂಚಿಸಿದಳಾದರೂ, ನಾನು ಇಂಥದ್ದೇನಾದರೂ ಮಾಡುವುದು ಹೊಸತಲ್ಲವಾದ್ದರಿಂದ, ಹೆಚ್ಚು ಏನೂ  ಹೇಳದೆ “ಅಯ್ಯೋ ದೋಸೆಗೆ ರುಬ್ಬಿಟ್ಟನಲ್ಲಾ, ಹೋಗಲಿ ಬಿಡಿ ಫಲಾರಾಕ್ಕಾಯಿತು” ಎಂದಳು. ನನ್ನ  ಸ್ವಾಭಿಮಾನಕ್ಕೆ ಧಕ್ಕೆಯಾಯಿತು. “ಮಸಾಲೆ ದೋಸೆ, ಚಪಾತಿ ಸಾಗು, ಇಡ್ಲಿಸಾಂಬಾರ ತಿನ್ನುವ ಉಪವಾಸವಲ್ಲ ನನ್ನದು. ಪೂರ್ತಿ ನಿರಾಹಾರ” ಎಂದು ಘೋಷಿಸಿಬಿಟ್ಟೆ.  ಆಕೆಯ ಕಣ್ಣುಗಳು  ಅಗಲವಾದರೂ ಆಕೆ “ಆಗಲಿ ಬಿಡಿ ಹಾಗೆ ನಿಮಗೆ ಬೇಕಾದರೆ ಹಣ್ಣು ಹಾಲು ಇದೆ” ಎಂದು ಹೇಳಿ ಸುಮ್ಮನಾದಳು.


ನಾನು ಪ್ರತಿದಿನ ಏಳುವುದು ಮುಂಜಾನೆ ಐದು ಐದೂವರೆಗೆ. ಒಂದಷ್ಟು ವ್ಯಾಯಾಮ, ವಾಯುಸೇವನೆ, ಇತ್ಯಾದಿಗಳನ್ನು ನಿವಾರಿಸಿಕೊಂಡು ಸ್ನಾನ ಮುಗಿಸಿ, ದೇವರ ತಲೆಯಮೇಲೊಂದು ಹೂವಿಟ್ಟು ಅಡಿಗೆಮನೆಯಿಂದ ತಿಂಡಿಯ ಸೂಚನೆಯನ್ನು ಎದುರುನೋಡುವ ಹೊತ್ತಿಗೆ ಎಂಟಾಗಿರುತ್ತದೆ. ಅಲ್ಲಿಯವರೆಗೂ ನನಗೆ ಹೊಟ್ಟೆ ಎನ್ನುವುದೊಂದು ಇದೆ ಎಂಬುದು ನನ್ನ ಗಮನಕ್ಕೇ ಬರುವುದಿಲ್ಲ. ಆದರೆ ಏಕಾದಶಿಯದಿವಸ ನಸುಕು ನಾಲ್ಕಕ್ಕೇ ಎಚ್ಚರವಾಯಿತು. ನನ್ನ ದೈನಂದಿನ ಕಾರ್ಯಕ್ರಮಗಳನ್ನೆಲ್ಲಾ  ಮುಗಿಸಿಕೊಂಡು ಸ್ನಾನಕ್ಕೆ ಹೊರಡುವ ಹೊತ್ತಿಗೇ ಹೊಟ್ಟೆ ಕುರುಕುರು ಎನ್ನುತ್ತಿತ್ತು. ಸಮಯ ಇನ್ನೂ ಏಳುಘಂಟೆಯೂ ಇಲ್ಲ. ತಿಂಡಿಗೆ ಇನ್ನೂ ಒಂದುಘಂಟೆಯಾದರೂ ಇದೆ ಎಂದುಕೊಳ್ಳುತ್ತಾ ಬಾಳೆಹಣ್ಣಿನ ಬುಟ್ಟಿಗೆ ಕೈಹಾಕಿದಾಗ ಬಂತು ಏಕಾದಶಿಯ ನೆನಪು. ಧೃಡ ಮನಸ್ಸಿನಿಂದ ಕೈ ಹಿಂದೆ ತೆಗೆದುಕೊಂಡು ಪೇಪರ ಹಿಡಿದು ಕೂಡುವಹೊತ್ತಿಗೆ ನನ್ನ ಪತ್ನಿ ಕೈಯಲ್ಲಿ ತನ್ನ ಕಾಫಿ ಲೋಟ ಹಿಡಿದು ಬಂದಳು.


ನನಗೆ ಬೆಳಗ್ಗೆ ಎದ್ದ  ತಕ್ಷಣ ಚಹಾ ಆಗಲೀ, ಕಾಫಿಯಾಗಲೀ, ಕುಡಿಯುವ ಅಭ್ಯಾಸವಿಲ್ಲ. ಬೇಕೆಂದು ಅನಿಸುವುದೂ ಇಲ್ಲ. ಆದರೆ ಆದಿನ ಅದೇನೋ ಆ ಕಾಫಿಯ ವಾಸನೆ ನನ್ನ ಮೂಗನ್ನಷ್ಟೆ ಅಲ್ಲ ಮನವನ್ನೆಲ್ಲ ಆವರಿಸಿಕೊಂಡು ಪೇಪರಿನಲ್ಲಿ ಓದುತ್ತಿದ್ದುದೇನೂ  ಗ್ರಹಿಕೆಗೇ ಬರದಂತಾಯಿತು. ಈ ಕಾಫಿಯ ವಾಸನೆ ನನ್ನ ಏಕಾದಶಿ ಆಚರಣೆಗೆ ಧಕ್ಕೆ ಎನಿಸಿ ಜಾಗಖಾಲಿಮಾಡಿ ಹೊರಗೆ  ಕುಳಿತು ಓದಲು ಪ್ರಯತ್ನ ಪಟ್ಟೆ. ಆದರೆ ಮನಸ್ಸೆಲ್ಲಾ ಹೊಟ್ಟೆಯಮೇಲೆಯೇ! ಪೇಪರು ಕೈಲಿ ಹಿಡಿದರೆ ಸಾಮಾನ್ಯವಾಗಿ ಅರ್ಧತಾಸು ನಾನು ಅದರಲ್ಲಿ ಮುಳುಗಿಹೋಗುತ್ತೇನೆ. ಆದರೆ ಏಕಾದಶಿಯಂದು, ಪೇಪರಿನಲ್ಲಿ ಏನೂ  ಸ್ವಾರಸ್ಯವೇ ಇಲ್ಲವೆನಿಸಿತು. ಹೊಟ್ಟೆಯೊಂದಿಗೆ ತಲೆಯೂ ಖಾಲಿ ಖಾಲಿ. ಪೇಪರು ಪಕ್ಕಕ್ಕಿಟ್ಟು ಭಗವಂತನ ನಾಮ ಸ್ಮರಣೆಯಾದರೂ ಆಗಲೆಂದು ಪುಸ್ತಕಗಳ ಕಪಾಟಿನಲ್ಲಿ ತಡಕಿ ಶ್ಲೋಕಗಳ ಪುಸ್ತಕ ಕೈಲಿಹಿಡಿದೆ. ‘ರೇಲ್ವೆ ಎಂಜಿನ್ ಹೊತ್ತು ಬರುತ್ತಿದ್ದ ಲಾರಿಗೆ ಜನರಿಂದ ತಡೆ’, ‘ಕ್ಯಾಸಿನೊ ಹಡಗಿಗೆ ಮರಳಿನಿಂದ ತಡೆ’, ‘ಶಶಿಕಲಾಗೆ ಜೈಲಿನಲ್ಲಿ ರಾಜೋಪಚಾರದ ಆರೋಪ’ ಇತ್ಯಾದಿ ಸ್ವಾರಸ್ಯಕರ ಸುದ್ದಿಗಳನ್ನೇ ಲಕ್ಷ್ಯಮಾಡದ ಮಿದುಳಿಗೆ ನಾಮಸ್ಮರಣೆ ಸಾಧ್ಯವಾದೀತೆ? ಅದನ್ನೂ ಕೈಬಿಟ್ಟು ಕುಳಿತೆ. ಹಾಗೂ ಹೀಗೂ ಮನಸ್ಸನ್ನು ಕಾಫಿಯಿಂದ ಬಿಡಿಸಿಕೊಳ್ಳುವ ಹೊತ್ತಿಗೆ ಅಡಿಗೆಮನೆಯಿಂದ ದೋಸೆಯ ಶಬ್ದ, ವಾಸನೆ. ಬೇರೆ ತಿಂಡಿಗಳೆಲ್ಲಾ ಬರಿ ವಾಸನೆಯಿಂದ ಕಾಡಿದರೆ ಈ ದೋಸೆ ಎಂಬುದು ವಾಸನೆಯೊಂದಿಗೆ ಶಬ್ದವನ್ನೂ ಮಾಡಿ ಕಿವಿ, ಮೂಗು ಎರಡೂ ದಾರಿಯ ಮೂಲಕ ಮನಸ್ಸನ್ನು ತುಂಬಿಬಿಡುತ್ತದೆ. ಆಕ್ಷಣದಲ್ಲಿ “ಒಂದು ದೋಸೆ ತಿಂದರೆ  ತಪ್ಪೇನು”  ಎನಿಸಿದರೂ ಬಿಗುಮಾನ ಬಿಡಲಾರದೆ, ಮನದ ಮತ್ತು ಹೊಟ್ಟೆಯ ತಳಮಳ ಸಹಿಸಿಕೊಂಡು ಘಟ್ಟಿ ಮನಸ್ಸಿನಿಂದ ಕೂತೆ.


ಅಂತೂ ದವಾಖಾನೆ ತೆಗೆಯುವವರೆಗೆ ಕಾಲಕಳೆದೆ. ಅಷ್ಟುಹೊತ್ತಿಗೆ ಚಿಕಿತ್ಸೆಗೆಂದು ಒಂದಿಬ್ಬರು ಬಂದುದರಿಂದ ಮನಸ್ಸು, ಉಪವಾಸ - ಹೊಟ್ಟೆ - ದೋಸೆ ಗಳನ್ನು  ಬಿಟ್ಟು ಕೆಲಸದ ಕಡೆಗೆ ತಿರುಗಿತು. ಅದೂ ಇದೂ ಮಾಡುವುದರಲ್ಲಿ ತೊಡಗಿ ಮಧ್ಯಾಹ್ನದವರೆಗೂ ನನ್ನ ಏಕಾದಶಿ ಆಚರಣೆ ನಡೆದುಬಿಟ್ಟಿತು. ಮಧ್ಯಾಹ್ನ ತಾಸೆರಡು ತಾಸು ನಿದ್ರಿಸಿಬಿಟ್ಟರೆ ಸಂಜೆಯವರೆಗೂ ತಳ್ಳಬಹುದೆಂದು ಹೊಟ್ಟೆತುಂಬ ನೀರು ಕುಡಿದು ಮಲಗಿದರೆ, ಒಂದು ನಿಮಿಷವಾದರೂ ಸರಿಯಾಗಿ ನಿದ್ದೆ ಹತ್ತಬೇಡವೇ? ತಲೆಯನ್ನು ಪೂರ್ತಿ ತಿಂಡಿಗಳೇ ಆವರಿಸಿಕೊಂಡು ನಿದ್ರೆಗೆ ಜಾಗವೇ ಸಿಗದಾಯಿತೇನೋ. ಸಂಜೆಯ ಚಾ ಸಮಯದ ಹೊತ್ತಿಗೆ ಪರಿಸ್ಥಿತಿ ಪೂರಾ ಬಿಗಡಾಯಿಸಿ ಬಿಟ್ಟಿತು. ಈಗ ಬರಿಯ ಹೊಟ್ಟೆ, ಮನಸ್ಸು ಮಾತ್ರವಲ್ಲಾ ಪೂರ್ತಿ ನನ್ನ ದೇಹವೇ ನನ್ನ ಏಕಾದಶಿ ನಿಶ್ಚಯದ ವಿರುಧ್ದ ತಿರುಗಿ ನಿಂತುಬಿಟ್ಟಿತು.


ಸಂಜೆ ಆರರ ಹೊತ್ತಿಗೆ ಎದೆ ಬಡಿತ ಜೋರಾಯಿತು, ಕೈಕಾಲುಗಳು ನನ್ನ ಮಾತನ್ನು ಕೇಳದಾದವು, ಯಾರು ನನ್ನನ್ನು ಮಾತನಾಡಿಸಿದರೂ ಸಿಡಿಸಿಡಿ ಉತ್ತರಿಸುವಂತಾಯಿತು. ಆ ಸಮಯದಲ್ಲಿ ಬಂದ ಒಬ್ಬ ನತದೃಷ್ಟನಿಗೆ ಮೇಲ್ದವಡೆಯ ಹಲ್ಲು ಕೀಳಲು ಹೋಗಿ ಕೆಳದವಡೆಗೆ ಇಂಜಕ್ಷನ್ ಚುಚ್ಚುವುದರಲ್ಲಿದ್ದೆ. ನನ್ನ ಸಹಾಯಕರು ಎಚ್ಚರವಾಗಿದ್ದುದರಿಂದ ಆಗಬಹುದಾಗಿದ್ದ ಅಪಘಾತ ತಪ್ಪಿತು. ಇನ್ನೊಂದಿಬ್ಬರು ಬಂದವರು “ಡಾಕ್ಟರು ಏಕೋ ಸರಿಯಿಲ್ಲ” ಎಂದುಕೊಳ್ಳುತ್ತಾ ವಾಪಸು ಹೊರಟರು. ದವಾಖಾನೆ ಮುಚ್ಚಿಬಿಟ್ಟೆ.


ಹೊಟ್ಟೆಯ ತಳಮಳ ಸಹಿಸಲಾರದಾಯಿತು. ಬಿಗುಮಾನಬಿಟ್ಟು, ಕುಡಿಯಲು ಏನನ್ನಾದರೂ ಕೇಳಬೇಕೆನ್ನುವ ಹೊತ್ತಿಗೆ “ಹೀಗೆ ಎಂದೂ ಇಲ್ಲದೆ ಒಮ್ಮೆಗೇ ಪೂರ್ತಿ ನಿರಾಹಾರ ಉಪವಾಸ ಮಾಡಬಾರದಂತೆ, ಒಂದು ಲೋಟ ಹಾಲನ್ನಾದರೂ ಕುಡಿಯಿರಿ” ಎಂದಳು ನನ್ನಾಕೆ. ಎಂಥ ಒಳ್ಳೆಯ ಸಲಹೆ ! “ಎಷ್ಟು ವಿವೇಕಸ್ಥಳು ನನ್ನಾಕೆ “ ಎಂದು ಅಭಿಮಾನವಾಯಿತು. ಆದರೂ ಏನೋ ಉಪಕಾರಮಾಡುವವನಂತೆ “ಒಂದು ಸಣ್ಣ ಲೋಟ ಮಾತ್ರ ಕೊಡು” ಎಂದು ಹಾಲು ಕುಡಿದೆ.


ಮುಂದಿನದೆಲ್ಲಾ ಮಂಗಗಳ ಉಪವಾಸ. “ಬಾಳೆಯ ತೋಟದ ಪಕ್ಕದ ಕಾಡೊಳು” ನೆನಪಿದೆಯೇ?


ಆದರೂ  ನನ್ನ ಏಕಾದಶಿ ಆಚರಣೆ ಪೂರ್ತಿ ಬಿಟ್ಟಿಲ್ಲ. ಬೆಳಿಗ್ಗೆ ಒಂದು ಬಾಳೆಹಣ್ಣು ತಿಂದು, ಲೋಟ ಕಾಫಿ ಕುಡಿದು ಸಂಜೆಯವರೆಗೂ ಹಾಗೂ ಹೀಗೂ ತಳ್ಳಿಬಿಡುತ್ತೇನೆ. ನಂತರ ರಾತ್ರಿ ಹೊಟ್ಟೆಗೆ ಏನಾದರೂ ಇಷ್ಟು ತುಂಬಿಸಿಬಿಟ್ಟರೆ ಮರುಮುಂಜಾನೆಯವರೆಗೂ ನಡೆದುಹೋಗುತ್ತದೆ.


ಆದರೆ ಇದರ ಅರ್ಥ ಏನಾಯಿತೆಂದರೆ, ಏಕಾದಶಿ ಉಪವಾಸ, ದ್ವಾದಶಿ ಪಾರಣೆ ಮಾಡಲು ಹೊರಟವನು (ಏಕಾದಶಿಯ ದಿವಸ ಉಪವಾಸ ಎಷ್ಟು ಮುಖ್ಯವೋ, ದ್ವಾದಶಿಯ ಬೆಳಗಿನ ಪಾರಣೆಯೂ ಅಷ್ಟೇ ಮುಖ್ಯವಂತೆ) ಹೋಗಿ ತಲುಪಿದ್ದು  ರೋಜಾ ಆಚರಣೆ ಮತ್ತು ಇಫ್ತಾರ ಉಪಾಹಾರಕ್ಕೆ! ನಾನೇನು ಮಾಡಲಿ? ನನ್ನಿಂದ ಸಾಧ್ಯವಾದದ್ದನ್ನು ನಾನು ಮಾಡುತ್ತೇನೆ. ಸರಿಯೋ ತಪ್ಪೋ ನಿರ್ಧರಿಸಿ ಪಾಪ ಪುಣ್ಯ ಬಟವಾಡೆ ಮಾಡುವುದು ಅವನಿಗೆ ಬಿಟ್ಟದ್ದು!