ಮೊದಲ ಸಾಲು ‘ಮುಳ್ಳುಕೊನೆಯ ಮೇಲೆ
ಮೂರುಕೆರೆಯ ಕಟ್ಟಿ’. ಯಾವ ಮುಳ್ಳು ? ಯಾವ ಕೆರೆ ?
ನಮ್ಮ ಹೃದಯದ ಕೆಳಭಾಗದಲ್ಲಿ, ಮುಳ್ಳು ಮೊನೆಗಿಂತ
ಅತಿ ಸೂಕ್ಷ್ಮವಾದ ಗಾತ್ರದಲ್ಲಿ, ನಮ್ಮದೇ ರೂಪದಲ್ಲಿ
ಪರಮಾತ್ಮನ ಇರುವಿದೆ ಎನ್ನುವುದು ನಂಬಿಕೆ. ಆ
ಜಾಗವನ್ನು ದಾಸರು ‘ಮುಳ್ಳು ಕೊನೆ’ ಎಂದರು.
ಅದು ನಮ್ಮ ದೇಹದ ಕೇಂದ್ರಭಾಗ. ಅದರ ಸುತ್ತಲೂ
ಕಟ್ಟಿರುವುದು ಈ ದೇಹ. ನಾವು ‘ದೇಹ’ ಎಂದು
ಯಾವುದನ್ನು ತೋರುತ್ತೇವೋ ಅದನ್ನು ಅಧ್ಯಾತ್ಮ
ಶಾಸ್ತ್ರದಲ್ಲಿ ‘ಸ್ಥೂಲ ದೇಹ’ ಎನ್ನುತ್ತಾರೆ. ಅದರೊಂದಿಗೆ
ನಮಗೆ ಕಾಣದಿರುವ ಲಿಂಗದೇಹ ಮತ್ತು
ಅನಿರುದ್ಧದೇಹಗಳೆಂಬ ಮತ್ತೆರಡು ದೇಹಗಳಿವೆ
ಎನ್ನುವ ನಂಬಿಕೆಯಿದೆ. ಈ ಮೂರೂ ದೇಹಗಳನ್ನು
ಮೂರು ಕೆರೆಗಳು ಎಂದರು ದಾಸರು. ಆ ಕೆರೆಗಳನ್ನು
‘ತುಂಬಿಸುವುದು’ ಎಂದರೆ ಅವುಗಳನ್ನು ಸತ್ಕರ್ಮ
ಅಥವಾ ಮೋಕ್ಷ ಸಾಧನೆ ಗಾಗಿ ಬಳಸುವುದು.
ಲಿಂಗ ದೇಹ, ಅನಿರುದ್ಧ ದೇಹಗಳು ನಮ್ಮ ಗಣನೆಗೇ ಬಾರದಿರುವುದರಿಂದ ಅವು ನಮ್ಮ ಸಾಧನೆಗೆ ಸಿಗುವವಲ್ಲ .
ಹಾಗಾಗಿ ಎರಡು ‘ತುಂಬವು’. ಸ್ಥೂಲದೇಹದಿಂದ
ಸತ್ಕರ್ಮ ಸಾಧನೆ ಸಾಧ್ಯ. ಆದರೆ ಮಾನವ ಜನ್ಮ
ಬಂದು ಆ ದೇಹ ಸಿಕ್ಕಿರುವಾಗ ಅದರ ಉಪಯೋಗ
ಪಡೆಯದಿದ್ದರೆ ಅದು ಇದ್ದೂ ಇಲ್ಲದಂತೆ. ಆದ್ದರಿಂದ
‘ಎರಡು ತುಂಬವು, ಒಂದು ತುಂಬಲೇ ಇಲ್ಲ’.
ಈ ಪದ್ಯದಲ್ಲಿ ತುಂಬಲಿಲ್ಲ, ತಾಗಲಿಲ್ಲ, ಕಾಲಿಲ್ಲ,
ಕೈಯಿಲ್ಲ ಮುಂತಾದ ಪದಗಳೆಲ್ಲವನ್ನೂ
ಮಾಡಬಹುದಾದದ್ದನ್ನು ಮಾಡಲಿಲ್ಲ ಅಥವಾ
ಆಗಬಹುದಾದದ್ದು ಆಗಲಿಲ್ಲ ಎಂಬ ಭಾವದಲ್ಲಿ
ಉಪಯೋಗಿಸಲಾಗಿದೆ. ಅವುಗಳ ಪ್ರತಿ ಪದಾರ್ಥ
ವನ್ನು ಹುಡುಕಿ ಗೊಂದಲ ಪಡಬೇಕಾಗಿಲ್ಲ. ಒಟ್ಟು
ಭಾವ ತಿಳಿಯುವುದು ಮುಖ್ಯ.
ಮುಳ್ಳು ಕೊನೆಯ ಮೇಲೆ ಮೂರುಕೆರೆಯ ಕಟ್ಟಿ
ಎರಡುತುಂಬದು ಒಂದು ತುಂಬಲೇ ಇಲ್ಲ ಎಂಬ
ಸಾಲಿನ ವಿವರಣೆ ಈ ಮೊದಲು ಕೇಳಿದಿರಿ.
ಮುಂದಿನ ಸಾಲು, ‘ತುಂಬಲಿಲ್ಲದ ಕೆರೆಗೆ ಬಂದರು
ಮೂವರು ಒಡ್ಡರು ’. ಎಲ್ಲ ಶರೀರಗಳಿಗೂ
ಪ್ರಾಪ್ತವಾಗುವ ಬಾಲ್ಯ, ಯೌವನ, ವೃದ್ಧಾಪ್ಯಗಳೆಂಬ
ಮೂರು ಅವಸ್ಥೆಗಳನ್ನು - ದಾಸರು ಮೂವರು
ಒಡ್ಡರು ಎಂದರು. ಬಾಲ್ಯದಲ್ಲಿ ತಿಳುವಳಿಕೆಯಿಲ್ಲ
ಮತ್ತು ವೃದ್ಧಾಪ್ಯದಲ್ಲಿ ದೇಹ ಶಕ್ತಿ ಇಲ್ಲ ಆದ್ದರಿಂದ
ಅವೆರಡೂ ಅವಸ್ಥೆಗಳಲ್ಲಿ ಆಧ್ಯಾತ್ಮಿಕ ಸಾಧನೆ
ಸಾಧ್ಯವಿಲ್ಲ. ಹಾಗಾಗಿ ಮೂರು ಒಡ್ಡರಲ್ಲಿ ಇಬ್ಬರು
ಕುಂಟರು. ಯೌವನದಲ್ಲಿ ಸಾಧನೆ ಸಾಧ್ಯ. ಆದರೆ
ಆ ಸಮಯವನ್ನು ಸಾಧನೆಗೆ ಬಳಸದಿದ್ದರೆ ಅದು
ಇದ್ದೂ ಇಲ್ಲದಂತೆ. ಆದ್ದರಿಂದ ಇಬ್ಬರು ಕುಂಟರು
ಒಬ್ಬಗೆ ಕಾಲೇ ಇಲ್ಲ.
ಕಾಲಿಲ್ಲದ ಒಡ್ಡಗೆ ಕೊಟ್ಟರು ಮೂರು ಎಮ್ಮೆಗಳ,
ಎರಡು ಬರಡು ಒಂದಕೆ ಕರುವೇ ಇಲ್ಲ. ಯೌವನದಲ್ಲಿ
ಸಾಮಾನ್ಯವಾಗಿ ಪ್ರತಿಯೊಬ್ಬ ಜೀವನಿಗೂ ಲಭ್ಯವಾಗುವ
ಧನ, ಸತಿ, ಸುತರನ್ನು ಮೂರು ಎಮ್ಮೆಗಳು ಎಂದರು.
‘ಈಶಣತ್ರಯ’ ಎಂದು ಇವುಗಳಿಗೆ ಹೆಸರು. ಸತಿ
ಸುತರು ಜೀವನನ್ನು ಸಂಸಾರವೆಂಬ ಮಾಯೆಯಲ್ಲಿ
ಸಿಲುಕಿಸುವುದರಿಂದ ಅವೆರಡೂ ಸಾಧನೆಗೆ
ಉಪಯೋಗವಿಲ್ಲ ಎಂಬುದು ನಮ್ಮ ಪೂರ್ವಿಕರ
ಭಾವನೆ. ಹಾಗಾಗಿ ಮೂರು ಎಮ್ಮೆಗಳಲ್ಲಿ ಎರಡು
ಬರಡು. ಧನವನ್ನು ಸತ್ಕಾರ್ಯಕ್ಕೆ ಉಪಯೋಗಿಸಿ
ಸಾಧನೆಯಲ್ಲಿ ಮುಂದುವರೆಯಬಹುದು. ಆದರೆ
ಧನದ ಹಿಡಿತ ಬಹು ಜೋರಾದ್ದರಿಂದ ಅದು
ವಿನಿಯೋಗವಾಗದೆ ಜೀವನಲ್ಲೇ ಉಳಿದುಬಿಟ್ಟಿತು.
ಆದ್ದರಿಂದ ಆ ಧನವನ್ನು ಕರುವೇ ಇಲ್ಲದ ಎಮ್ಮೆ ಎಂದರು.
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ,
ಎರಡು ಸವಕಲು ಒಂದು ಸಲ್ಲಲೇಇಲ್ಲ. ಜೀವನದಲ್ಲಿ
ಗಳಿಸಿದ ಧನದ ಮೂರುತರಹದ ವಿನಿಯೋಗವನ್ನು
ಮೂರು ಹೊನ್ನೆಂದು ಹೆಸರಿಸಿದರು. ಒಂದು
ಸದ್ವಿನಿಯೋಗ, ಎರಡನೆಯದು ದುರ್ವಿನಿಯೋಗ
ಮತ್ತು ಮೂರನೆಯದು ಖರ್ಚುಮಾಡದೆ ಕೂಡಿಸಿಡುವುದು.
ಲೋಭ ಮತ್ತು ದುರ್ವಿನಿಯೋಗದಿಂದ ಪುಣ್ಯ ಪ್ರಾಪ್ತಿ
ಇಲ್ಲವಾದ್ದರಿಂದ ಎರಡು ಹೊನ್ನನ್ನು ಸವಕಲು ಎಂದರು. ಸದ್ವಿನಿಯೋಗವಾಗಿ ತಕ್ಕ ಫಲನೀಡಬೇಕಾದ ಧನ ವಿನಿಯೋಗವಾಗದಿದ್ದರೆ ಅದು ಇದ್ದರೂ ಇಲ್ಲದಂತೆ.
ಆದ್ದರಿಂದ ಒಂದು ಸಲ್ಲಲೇ ಇಲ್ಲ.
‘ಸಲ್ಲದಿದ್ದ ಹೊನ್ನಿಗೆ ಬಂದರು ಮೂವರು ನೋಟಗಾರರು’.
ಇದು ಕೊಂಚ ಗೊಂದಲದ ಸಾಲು. ಇಲ್ಲಿ ಮೂವರು
ನೋಟಗಾರರು ಎಂದರೆ ನೋಡಲು ಬಂದವರಲ್ಲ.
ತೋರಿಸಲು ಬಂದವರು. ನಾವು ಆಡಿಟರ್ಸ್
ಎನ್ನುತ್ತೇವಲ್ಲಾ ಅವರು. ನಮ್ಮ ತಪ್ಪನ್ನು ತೋರಿಸುವವರು. ಅವರಾರೆಂದರೆ ಸಂಚಿತ, ಆಗಾಮಿ ಮತ್ತು ಪ್ರಾರಬ್ಧ
ಎಂಬ ಮೂರು ತರಹದ ಕರ್ಮಫಲಗಳು. ಸಂಚಿತ
ಎನ್ನುವುದು ನಮ್ಮ ಹಿಂದಿನ ಅನೇಕಾನೇಕ ಜನ್ಮಗಳ
ಒಟ್ಟು ಫಲ. ಆಗಾಮಿ ಎನ್ನುವುದು ಮುಂದಿನ
ಜನ್ಮಗಳಲ್ಲಿ ನಾವು ಕಾಣಲಿರುವ ಫಲ. ಸದ್ಯದ ಜನ್ಮದಲ್ಲಿ
ಇವೆರಡೂ ನಮಗೆ ಕಾಣವು. ಹಾಗಾಗಿ ಇಬ್ಬರು ಕುರುಡರು.
ಪ್ರಾರಬ್ಧ ಕರ್ಮದ ಫಲ ನಮಗೆ ಈ ಜನ್ಮದಲ್ಲೇ
ಕಾಣಸಿಗುತ್ತದೆ. ಅದನ್ನು ಕಂಡು ಎಚ್ಛೆತ್ತುಕೊಂಡು
ನಾವು ಸಾಗುತ್ತಿರುವ ಪಥವನ್ನು ಬದಲಾಯಿಸಿಕೊಳ್ಳಬೇಕು.
ಅದನ್ನು ಕಂಡೂ ಅದರ ಸೂಚನೆಯನ್ನು
ನಾವುತಿಳಿಯದಿದ್ದರೆ, ಕಣ್ಣಿದ್ದೂ ಇಲ್ಲದಂತೆ.
ಅಂತೆಯೇ ಇಬ್ಬರು ಕುರುಡರು. ಒಬ್ಬಗೆ ಕಣ್ಣೇ ಇಲ್ಲ.
‘ಕಣ್ಣಿಲ್ಲದ ನೋಟಗಾರಗೆ ಕೊಟ್ಟರು ಮೂರು
ಊರುಗಳ’ ಕರ್ಮಫಲವನ್ನು ಕಂಡರೂ ಎಚ್ಛೆತ್ತುಕೊಳ್ಳದ
ಜೀವನಲ್ಲಿ ಇರುವ ಗುಣಗಳು ಮೂರು. ಸತ್ವ, ರಜಸ್ಸು,
ಮತ್ತು ತಮೋಗುಣಗಳು. ಅದನ್ನು ಮೂರು ಊರುಗಳೆಂದರು.
ಅದರಲ್ಲಿ ರಜೋ ಮತ್ತು ತಮೋ ಗುಣಗಳಿಂದ ಸದ್ಗತಿ
ದೊರಕದು. ಹಾಗಾಗಿ ಎರಡು ‘ಹಾಳು’. ಸತ್ವ ಗುಣದ ಉಪಯೋಗದಿಂದ ಜೀವದ ಗತಿ ಉತ್ತಮವಾಗುತ್ತದೆ.
ಆದರೆ ಸತ್ವಗುಣದ ಉಪಯೋಗವೇ ಆಗದಿದ್ದರೆ
ಗುಣವಿದ್ದೂ ಇಲ್ಲದಂತೆ. ಊರಿದೆ, ಜನವಿಲ್ಲ. ಆದ್ದರಿಂದ
ಎರಡು ಹಾಳು, ಒಂದಕೆ ಒಕ್ಕಲೆ ಇಲ್ಲ.
ಒಕ್ಕಲಿಲ್ಲದ ಊರಿಗೆ ಬಂದರು ಮೂವರು
ಕುಂಬಾರರು - ಎಲ್ಲ ಜೀವರಿಗೂ ಲಭ್ಯವಿರುವ ಮೂರು
ದೈವರೂಪಗಳು. ಬ್ರಹ್ಮ, ವಿಷ್ಣು, ಮಹೇಶ್ವರರು. ಆದರೆ
ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ. ಈ ಚರಣದಲ್ಲಿ
ದಾಸರ ಮೇಲಾಗಿತ್ತೆನ್ನುವ ಮಧ್ವ ಸಂಪ್ರದಾಯದ
ಪ್ರಭಾವ ಕಾಣಸಿಗುತ್ತದೆ. ಮಧ್ವ ಸಂಪ್ರದಾಯದ
ಪ್ರಕಾರ ಬ್ರಹ್ಮ, ಮಹೇಶ್ವರರು ಸ್ವತಂತ್ರರಲ್ಲ. ವಿಷ್ಣುವಿನ
ಅನುಜ್ಞೆಯಿಲ್ಲದೆ ಅವರಿಂದ ಏನೂ ಸಾಧ್ಯವಿಲ್ಲ.
ಆದ್ದರಿಂದ ಇಬ್ಬರು ಚೊಂಚರು, ಕೆಲಸಮಾಡಲಾರದವರು. ಹರಿಪ್ರೇರಣೆಯಿಂದ ಹರಿಯ ಇಚ್ಛೆಯಂತೆ ಮಾತ್ರ
ಅವರು ಕಾರ್ಯ ನಿರ್ವಹಿಸುವವರು. ಹರಿಯ
ಆರಾಧನೆಯಾಗಿ ಹರಿ ಪ್ರೀತಿಯಾದರೆ ಜೀವದ
ಉನ್ನತಿ ಸಾಧ್ಯ. ಆದರೆ ಆ ದಿಸೆಯಲ್ಲಿ ಕಾರ್ಯಗಳೇ
ಆಗದಿದ್ದರೆ, ಹರಿಯೂ ಏನೂ ಮಾಡಲಾರ.
ಅವನ ಕೈಮುರಿದಂತೆ. ಅದ್ದರಿಂದ ಇಬ್ಬರು ಚೊಂಚರು
ಒಬ್ಬಗೆ ಕೈಯೇ ಇಲ್ಲ.
‘ಕೈಯಿಲ್ಲದ ಕುಂಬಾರನು ಮಾಡಿದ ಮೂರು ಮಡಕೆಗಳ’ -
ತನ್ನ ಸಹಾಯಹಸ್ತ ಚಾಚಲು ತನಗೆ ಮನಬರುವಂಥ
ಕಾರ್ಯ ಜೀವನಿಂದ ಆಗಲೆಂದು ಕೈ ಇಲ್ಲದ ಕುಂಬಾರನು
ಜ್ಞಾನ, ಭಕ್ತಿ, ವೈರಾಗ್ಯಗಳೆಂಬ ಮೂರು ಮಡಕೆಗಳನ್ನು
ಮಾಡಿ ನೀಡಿದ. ಈ ಕಲಿಗಾಲದಲ್ಲಿ ಜ್ಞಾನ, ವೈರಾಗ್ಯಗಳ
ಮೂಲಕ ಹರಿ ಪ್ರೀತಿ ಸಂಪಾದಿಸುವುದು ಸುಲಭತರವಲ್ಲ.
ಅದು ಒಡೆದ ಮಡಕೆಯಲ್ಲಿ ನೀರು ತುಂಬಿದಂತೆ. ಆದ್ದರಿಂದ ಮೂರುಮಡಿಕೆಗಳಲ್ಲಿ ಎರಡು ಒಡಕು. ಭಕ್ತಿಯಿಂದ
ಹರಿಪ್ರೀತಿ ಪಡೆಯಲು ಸಾಧ್ಯ. ಆದರೆ ಆ ದಿಸೆಯಲ್ಲಿ
ಪ್ರಯತ್ನವೇ ಆಗದಿದ್ದರೆ ಆ ಮಡಕೆಯ ಅಂದರೆ ಭಕ್ತಿಯ ಪ್ರಯೋಜನವೇ ಇಲ್ಲ. ಬುಡವಿಲ್ಲದ ಮಡಕೆಯಂತೆ.
ಅದರಿಂದ ಎರಡು ಒಡಕು ಒಂದಕೆ ಬುಡವೇ ಇಲ್ಲ.
ಬುಡವಿಲ್ಲದ ಮಡಕೆಗೆ ಹಾಕಿದರು ಮೂರು ಅಕ್ಕಿಕಾಳ - ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ, ‘ಜ್ಞಾನ,
ಭಕ್ತಿಗಳು ಮುಕ್ತಿಯೆಡೆಸಾಗಲು ಅತ್ತ್ಯುತ್ತಮ ಸಾಧನಗಳು’.
ಆದರೆ ಶ್ರದ್ಧೆಯಿಂದ ಮಾಡಿದ ಕರ್ಮ ಕೂಡ ಅಷ್ಟೇ
ಫಲದಾಯಕ. ಕರ್ಮಗಳೂ ಮೂರು ಬಗೆ. ಸಾತ್ವಿಕ,
ರಾಜಸಿಕ, ತಾಮಸಿಕ ಕರ್ಮಗಳು. ಮೂರು ಅಕ್ಕಿ
ಕಾಳುಗಳು. ರಾಜಸಿಕ, ತಾಮಸಿಕ ಕರ್ಮಗಳು ಭಗವಂತನ ಅಗ್ನಿಪರೀಕ್ಷೆಯಲ್ಲಿ ಗೆಲ್ಲಲಾರದವು. ಅವನ ಮೂಸೆಯಲ್ಲಿ
ಬೇಯವು. ಅದ್ದರಿಂದ ಎರಡು ಬೇಯವು. ಸಾತ್ವಿಕ
ಕರ್ಮ ಗಳನ್ನು ಮಾಡುವ ಯೋಗ್ಯತೆ ಇದ್ದರೂ ಮಾಡಲಿಲ್ಲ.
ಆದ್ದರಿಂದ ಬೇಯಬಹುದಾಗಿದ್ದ ಒಂದು, ಬೇಯಲೇ ಇಲ್ಲ.
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ. ಈ
ಜೀವದೊಂದಿಗೆ ಸದಾ ಇರುವ ಮೂವರು ನೆಂಟರು
ಕಾಯ, ವಾಕ್ ಮತ್ತು ಮನಸ್ಸು. ಇದರಲ್ಲಿ ಕಾಯ
ಮತ್ತು ವಾಕ್ ಗಳು ಮನಸ್ಸಿನ ನೆರವಿಲ್ಲದೆ ಏನೂ
ಮಾಡಲಾರವು. ಇಬ್ಬರು ನೆಂಟರು ಸ್ವತಃ ಏನನ್ನೂ
ತಿನ್ನಲಾರರು. ಇಬ್ಬರು ಉಣ್ಣರು. ಮನಸ್ಸು
ಭಕ್ತಿರಸವನ್ನುಂಡು, ಸತ್ಕರ್ಮಕ್ಕೆ ಪ್ರೇರೇಪಿಸಿದ್ದರೆ
ಅಧ್ಯಾತ್ಮ ಸಾಧನೆ ಆಗುತ್ತಿತ್ತು. ಆದರೆ ಆ ಮನಸ್ಸಿಗೆ
ಭಕ್ತಿಯನ್ನುಣ್ಣುವ ಹಸಿವೇ ಆಗಲಿಲ್ಲ. ಅದರಿಂದ
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ.
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ,
ಎರಡು ತಾಗದು ಒಂದು ತಾಕಲೇ ಇಲ್ಲ. ಹೀಗೆ ಅಧ್ಯಾತ್ಮದ,
ಸತ್ಕಾರ್ಯದ, ಮುಕ್ತಿಯೆಡೆ ಸಾಗುವ ತಿಳಿವು, ಚಿಂತನೆಯೇ
ಇಲ್ಲದ ಜೀವಕ್ಕೆ ಆದದ್ದೇನು? ಮತ್ತೆ ಮತ್ತೆ ಜನನ. ಮತ್ತೆ
ಮತ್ತೆ ಮರಣ. ಪುನರಪಿ ಜನನಂ, ಪುನರಪಿ ಮರಣಂ,
ಪುನರಪಿ ಜನನೀ ಜಠರೇ ಶಯನಂ ಎಂದರಲ್ಲವೇ
ಶಂಕರಾಚಾರ್ಯರು ತಮ್ಮ ಭಜಗೋವಿಂದಂ
ರಚನೆಯಲ್ಲಿ ? ಅದೇ. ಮೂರು ಟೊಣಪೆಗಳು,
ಅಂದರೆ ಪೆಟ್ಟುಗಳು. ಒಂದು ಜನ್ಮವೆಂದರೆ ಒಂದು ಪೆಟ್ಟು.
ಪದೇ ಪದೇ ಪೆಟ್ಟು ತಿಂದಾದರೂ ಜೀವನಿಗೆ ಬುದ್ಧಿ
ಬಂದೀತೇನೋ ಎಂಬ ಭಾವ. ಜನ್ಮಗಳು ಮೂರು ವಿಧ.
ಅತೀತ, ಅನಾಗತ ಮತ್ತು ವರ್ತಮಾನ ಜನ್ಮಗಳು.
ಅದರಲ್ಲಿ ಅತೀತ, ಅನಾಗತ ಜನ್ಮದ ಅರಿವು ಜೀವಕ್ಕೆ
ತಿಳಿಯುವುದೇ ಇಲ್ಲವಾದ್ದರಿಂದ ಎರಡು ತಾಗದು.
ವರ್ತಮಾನದ ಆಗು, ಹೋಗುಗಳಿಂದ ಬುದ್ಧಿಬರಬೇಕಿತ್ತು,
ಬರಲಿಲ್ಲ. ಆದ್ದರಿಂದ ಒಂದು ತಾಕಲೇ ಇಲ್ಲ.
ಇನ್ನು ಮುಂದಾದರೂ ಟೊಣಪೆಯ ತಾಕಿಸಿ,
ಅಂದರೆ ಈ ಮಾನವ ಜನ್ಮದ ಸಂಸಾರತಾಪವನ್ನು
ತಾಕಿಸಿ, ಅದರ ಕಾರಣ, ಫಲಗಳನ್ನು ಮನದಟ್ಟುಮಾಡಿಸಿ,
ವಿರಕ್ತಿ ಮೂಡಿಸಿ, ಭಕ್ತಿಮಾರ್ಗದಲ್ಲಿ ನಡೆಸಿ, ಸದ್ಗತಿ
ನೀಡಬೇಕೆಂದು ಪುರಂದರ ವಿಠಲ ನಲ್ಲಿ ಪುರಂದರ
ದಾಸರು ಮನವಿಮಾಡಿ ಕೊಳ್ಳುತ್ತಾ ತಮ್ಮ ರಚನೆಯನ್ನು ಕೊನೆಗಾಣಿಸುತ್ತಾರೆ. ಮಹಾಭಾರತ ಯುದ್ಧಮುಗಿದು,
ಧರ್ಮಜನಿಗೆ ಪಟ್ಟ ಕಟ್ಟಿ ಕೃಷ್ಣ ದ್ವಾರಕೆಗೆ ಹೊರಟಾಗ
ಕುಂತಿ ಕೇಳಿದ್ದು ಹಾಗೆಯೇ ಅಂತೆ. ‘ನನಗೆ ವಿಪತ್ತುಗಳು
ಬರುತ್ತಿರಲಿ ಕೃಷ್ಣಾ, ಏಕೆಂದರೆ ನನಗೆ ವಿಪತ್ತು ಬಂದಾಗ
ನಿನ್ನ ನೆನಪಾಗುತ್ತದೆ’. ಸಂಕಟ ಬಂದಾಗ ವೆಂಕಟರಮಣ !
ವಿವರಣೆ ಧೀರ್ಘವಾಯಿತು. ತಾಳ್ಮೆಯಿಂದ ಓದಿದವರಿಗೆ, ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ