ಶನಿವಾರ, ಏಪ್ರಿಲ್ 25, 2026

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ


ಶ್ರೀ ಪುರಂದರದಾಸರ ಪದಗಳಬಗ್ಗೆ ತಿಳಿದವರನೇಕರು ಅವುಗಳನ್ನು ಅನೇಕ

ರೀತಿಗಳಲ್ಲಿ ವಿಂಗಡಿಸಿದ್ದಾರೆ. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ,

ನಿಂದನಾಸ್ತೋತ್ರ, ಹರಿ ಕೀರ್ತನೆ, ಅನ್ಯದೇವತಾ ಕೀರ್ತನೆ ಇತ್ಯಾದಿ ಇತ್ಯಾದಿ.

ತಲೆಬರಹ ಏನೇ ಇರಲಿ, ದಾಸರ ರಚನೆಗಳ ವಸ್ತು, ಭಕ್ತಿ - ಧರ್ಮ - ನೀತಿ.  

ಭಗವಂತನನ್ನು ಆರಾಧಿಸುವ ಅಥವಾ ಧರ್ಮಮಾರ್ಗದಲ್ಲಿ ಸಾಗುವ

ಬಗೆಯನ್ನು ದಾಸರು ನೇರವಾದ ಮಾತುಗಳಲ್ಲಿ ತಿಳಿಸುತ್ತಾರೆ. ಇಂದು ಪ್ರಸ್ತುತ

ಪಡಿಸಲಿರುವ ಪದದಲ್ಲಿ ಅದೇ ಮುಕ್ತಿಮಾರ್ಗದಲ್ಲಿ ಸಾಗುವ ಪರಿಯನ್ನು ‘ಹೀಗೆ

ಮಾಡಬೇಕು’ ಎಂದು ಹೇಳದೆ, ‘ತಾನು ಈ ರೀತಿ ಮಾಡಿದೆ’ ಎಂಬ ರೀತಿಯಲ್ಲಿ

ಹೇಳಿ, ನಾವು ಹಿಡಿಯಬೇಕಾದ ಹಾದಿಯನ್ನು ಪರೋಕ್ಷವಾಗಿ ತೋರಿಸಿದ್ದಾರೆ.

ಕೊಂಚ ಅಪರೂಪದ ಗೀತೆ. ಕೇಳೋಣ, ‘ಒಂಭತ್ತು ಬಾಗಿಲೊಳು ಒಂದೇ

ದೀವಿಗೆ ಹಚ್ಚಿ’. ಆನಂದ ಭೈರವಿ ರಾಗ, ಏಕ ತಾಳ. 


‘ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ ನಂಬಿಕಿಲ್ಲದ ಸಂಸಾರ

ಮಾಡಿದೆನೆ’ ಎಂದು ಗೀತೆ ಪ್ರಾರಂಭವಾಗುತ್ತದೆ. ಒಂಭತ್ತು ಬಾಗಿಲಿರುವುದು

ನವದ್ವಾರಗಳನ್ನು ಹೊಂದಿರುವ ನಮ್ಮ ದೇಹ. ‘ದೀವಿಗೆ’ ಎಂದರೆ ದೀಪ.

ದೀಪವೆಂದರೆ ಪ್ರಕಾಶ. ನಮ್ಮ ದೇಹಕ್ಕೆ ಸಂಬಂಧಿಸಿದಂತೆ ಪ್ರಕಾಶಮಯವಾದದ್ದು

‘ಬುದ್ಧಿ’. ಒಂದೇ ದೀವಿಗೆ ಹಚ್ಚಿ ಎಂದರೆ ‘ಒಂದೇ ಬುದ್ಧಿಯಿಂದ ಅಥವಾ ಸ್ಥಿರವಾದ

ಬುದ್ಧಿಯಿಂದ’ ಎಂದು ಅರ್ಥ. ‘ನಂಬಿಕೆಯಿಲ್ಲದ ಸಂಸಾರ’  ಎಂದರೆ ಈ ಇಹ

ಸಂಸಾರದಲ್ಲಿ ಆಸಕ್ತಿ ಇಲ್ಲದಿರುವುದು, ಆಸಕ್ತಿ ಇಲ್ಲವೆಂದರೆ ಅದು ವೈರಾಗ್ಯ

ಎಂದಾಯಿತು.. ಮಾನವ ದೇಹಪಡೆದು, ಸ್ಥಿರವಾದ ಬುದ್ಧಿಯಿರಿಸಿಕೊಂಡು,

ವಿರಕ್ತಿ ಭಾವದಿಂದ ಸಂಸಾರ ನಡೆಸಿದೆ ಎನ್ನುವುದು ಮೊದಲ ಚರಣದ ಅರ್ಥ. 


‘ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವತುಂಬಿ’ ಎನ್ನುವುದು ಸರಳವಾದ

ಸಾಲು. ಆದರೆ ಧಾನ್ಯವನ್ನು  ತುಂಬಿ ಮಾಡಿದ್ದೇನು?  ‘ವನವನೆದು ನವಬೇಳೆ

ಬೀಸಿದೆನೆ’. ನವ ವಿಧ ಭಕ್ತಿಯನ್ನು ನವಬೇಳೆಗಳು ಎಂದಿದ್ದಾರೆ..   ಶ್ರವಣ,

ಮನನ, ಕೀರ್ತನ, ಅರ್ಚನ, ಪಾದಸೇವನ, ವಂದನ, ದಾಸ್ಯ, ಸಖ್ಯ,

ಆತ್ಮನಿವೇದನಗಳು ಸೇರಿ ನವವಿಧ ಭಕ್ತಿ. ಎಲ್ಲವೂ ಕೇಳಿದೊಡನೆ ಅರ್ಥ

ತಿಳಿಯುವ ಪದಗಳು. ಈ ನವವಿಧ ಭಕ್ತಿಯನ್ನು ವನವನೆದು ಅಂದರೆ

ಜರಡಿಯಾಡಿ, ಬೀಸಿ, ದೇಹದಲ್ಲಿ ತುಂಬಿದೆ ಎನ್ನುವುದು ಎರಡನೇ ಚರಣದ

ಸಾರಾಂಶ. 


ಅಷ್ಟಕರ್ತೃಗಳೆಂಬ ಅಷ್ಟನವಧಾನ್ಯವ ತಂದು ಕುಟ್ಟಿ ಕುಟ್ಟಿ ಕಜ್ಜಾಯ ಮಾಡಿದೆನೆ.

ನಮ್ಮ ದೇಹದಿಂದ ಯಾವುದೇ ಕಾರ್ಯವಾಗಬೇಕಾದರೆ ಅಷ್ಟಕರ್ತೃಗಳ

ಸಹಕಾರವಿಲ್ಲದೆ ಸಾಧ್ಯವಿಲ್ಲ. ಕರ್ತೃ ಎಂದರೆ ಮಾಡುವವನು. ನಾವು ಮಾಡುವ

ಕೆಲಸವನ್ನು ಸಾಧ್ಯಮಾಡುವ  ಅಷ್ಟಕರ್ತೃಗಳು ಭೂತ, ತನ್ಮಾತ್ರ, ಗುಣ, ಕಾಲ,

ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಅಂತಃಕರಣ, ಮತ್ತು ಪ್ರವೃತ್ತಿ. ಸ್ವಚ್ಛವಾದ

ಭಕ್ತಿಯನ್ನು ಈ ಅಷ್ಟಕರ್ತೃಗಳ ಸಹಾಯದಿಂದ ಭಗವದಾರಾಧನೆಯ ರೂಪಕ್ಕೆ

ತಂದೆ ಎನ್ನುವುದು ‘ಕುಟ್ಟಿ ಕುಟ್ಟಿ ಕಜ್ಜಾಯಮಾಡಿದೆನೆ’ ಎಂಬ ಸಾಲಿನ ಅರ್ಥ. 


ಪಾತ್ರೆಯಾಯಿತು, ಧಾನ್ಯವಾಯಿತು, ಇಚ್ಛೆಯಾಯಿತು. ಅಡುಗೆಗೆ ಬೆಂಕಿ ಬೇಕಲ್ಲವೇ ?

ಶಮ, ದಮ, ತಪಸ್ಸು, ಶೌಚ, ಕ್ಷಾಂತಿ, ಜ್ಞಾನ, ವಿಜ್ಞಾನ, ಆರ್ಜವ ಎಂಬ ಎಂಟು

ಕಟ್ಟಿಗೆಗಳು. ಶಮ ಎಂದರೆ ಶಾಂತಿ ಅಥವಾ ಸಮಾಧಾನ ಸ್ಥಿತಿ,  ದಮ ಎಂದರೆ

ಇಂದ್ರಿಯ ನಿಗ್ರಹ, ತಪಸ್ಸು ಎಂದರೆ - ಏಕಾಗ್ರತೆ, ಶೌಚ ಎನ್ನುವುದು - ಮಾನಸಿಕ,

ದೈಹಿಕ ಸ್ವಚ್ಛತೆ, ಕ್ಷಾಂತಿ ಎಂದರೆ ಸಹನೆ, ಜ್ಞಾನ ಎಂದರೆ ತಿಳುವಳಿಕೆ, ವಿಜ್ಞಾನ -

ವಿಶೇಷ ತಿಳುವಳಿಕೆ ಮತ್ತು ಆರ್ಜವ ಎಂದರೆ ಸಹಿಷ್ಣುತೆ - ಈ ಎಂಟು ಕಟ್ಟಿಗೆಗಳನ್ನುರಿಸಿ

ನಿಷ್ಠೆಯಿಂದ  ‘ಅನ್ನವ ಮಾಡಿದೆ’ ಎಂದರೆ ಪರಮಾತ್ಮನನ್ನು ಆರಾಧನೆ ಮಾಡಿದೆ

ಎನ್ನುತ್ತಾರೆ ದಾಸರು.  


ಇಷ್ಟಾಗುವಾಗ ಗಂಡ ಬಂದು ಮಡಕೆ ಒಡೆದು ಮೂಲೆಗೆ ಹಾಕಿದ.  ಯಾವ ಗಂಡ ?

ಇಲ್ಲೊಂದು ಕುತೂಹಲಕರ ವಿಷಯ. “ಲಕ್ಷ್ಮೀದೇವಿ ನಾರಾಯಣನಿಗೆ ಮಾತ್ರ ಪತ್ನಿ,

ಆದರೆ ನಾರಾಯಣ ಎಲ್ಲ ಸ್ತ್ರೀಯರಿಗೂ ಗಂಡ, ಅಷ್ಟೇ ಅಲ್ಲ ಆ ಎಲ್ಲ ಸ್ತ್ರೀಯರ

ಗಂಡಂದಿರಿಗೂ ಗಂಡ” ಇದು ನನ್ನ ಹೇಳಿಕೆಯಲ್ಲ, ಶ್ರೀ ಬನ್ನಂಜೆ ಗೋವಿಂದಾಚಾರ್ಯರ

ಹೇಳಿಕೆ. ಆ ಗಂಡ ಬಂದು,  ‘ಮಡಿಕೆಯ ಒಡೆದು’ ಅಂದರೆ ಸಂಸಾರಯೋಗವನ್ನು

ಮುರಿದು ಒಗೆದು,  ‘ಉಡುವ ಸೀರೆಯ ಸೆಳೆದು’ ಅಂದರೆ ಜೀವವನ್ನು ಸುತ್ತುವರಿದಿದ್ದ

ಮಾಯೆಯ ಆವರಣವನ್ನು ಕಳೆದು, ಗಿಡದ ತೊಪ್ಪಲ ಸುತ್ತಿ, ಗಿಡವೆಂದರೆ ಪರಮಾತ್ಮನ

ಪ್ರತೀಕವಾದ ಅಶ್ವತ್ಥ ವೃಕ್ಷ. ಅದರ ತೊಪ್ಪಲ ಸುತ್ತಿ ಎಂದರೆ ಜ್ಞಾನವ ನೀಡಿ ಅಥವಾ

ಸಾಕ್ಷಾತ್ಕಾರದ ಕೃಪೆಮಾಡಿ ಎಂದು ಅರ್ಥ- ‘ತಿರುಗಿ ಬಾರದ ಹಾಂಗೆ ಮಾಡಿದನೆ’

ಎಂದರೆ ಸಾಕ್ಷಾತ್ಕಾರ ನೀಡಿ ಮರುಜನ್ಮವಿಲ್ಲದಂತೆ ಮಾಡಿದ ಅಥವಾ ಮುಕ್ತಿಗೊಳಿಸಿದ

ಎಂಬ ಭಾವ. 


ಈ ರೀತಿಯ ನಂಬಿಕೆಯಿಂದ ಸಂಸಾರನಡೆಸಿ ‘ಪುರಂದರ ವಿಠಲನ ದಾಸರ ಸೇರಿದೆನೆ’ 

ಎಂದು ದಾಸರು ತಮ್ಮ ರಚನೆಯನ್ನು ಕೊನೆಗಾಣಿಸಿದರು. ಅಂದರೆ, ಈ ರೀತಿಯ

ಜೀವನದ ಮೂಲಕ ಇತರ ಮುಕ್ತಿಯೋಗ್ಯರನ್ನು ಸೇರಿಕೊಂಡೆ ಎಂದು ಹೇಳಿ, ನೀವು

ಇಂಥ ಸಂಸಾರ ನಡೆಸಿ ಮುಕ್ತಿಯೋಗ್ಯರಾಗಿ - ಎಂದು ನಮಗೆ ತಿಳಿಯಹೇಳಿದ್ದಾರೆ

ಪುರಂದರ ದಾಸರು. 


ಕೃತಿಗೆ ತಕ್ಕಂತೆ ವಿವರಣೆ, ಅದಕ್ಕೆ ತಕ್ಕಂತೆ ನನ್ನ ಮಾತು, ಕೊಂಚ ಉದ್ದವಾಯಿತು.

ಅರ್ಥವಾಗುವಂತೆ ಹೇಳಿದ್ದೇನೆಂದು ನಂಬಿಕೊಂಡಿದ್ದೇನೆ. ಕೃಷ್ಣಾರ್ಪಣವಾಗಲಿ. 

ಶುಕ್ರವಾರ, ಏಪ್ರಿಲ್ 17, 2026

ಪಾಪೋಸು ಹೋದುವಲ್ಲಾ

ಶತಮಾನಗಳ ಹಿಂದೆ ಒಮ್ಮೆ ತಿರುಪತಿ

ಕ್ಷೇತ್ರದಲ್ಲಿ ಕಾರಣಾಂತರಗಳಿಂದ

ನಿತ್ಯಪೂಜೆಮಾಡುವವರು ಯಾರೂ ಇಲ್ಲವಾದಾಗ

ಶ್ರೀ ವ್ಯಾಸರಾಜ ಸ್ವಾಮಿಗಳು ತಿರುಪತಿಯಲ್ಲೇ

ನೆಲಸಿ ದೈನಂದಿನ ಪೂಜಾ ಕಾರ್ಯವನ್ನು

ನಡೆಸಿಕೊಂಡು ಬಂದರೆಂದು ಹೇಳುತ್ತಾರೆ.

ತಮ್ಮ ಗುರುಗಳು ಆದರದಿಂದ ಪೂಜಿಸಿದ

ದೇವನಮೇಲೆ ಪುರಂದರದಾಸರಿಗೂ ಬಹಳ

ಭಕ್ತಿಯಿದ್ದದ್ದು ಸಹಜವೇ. ಆದ್ದರಿಂದಲೇ ಅವರು

ಕೂಡ ಅನೇಕಬಾರಿ ತಿರುಪತಿ ಯಾತ್ರೆ ಮಾಡಿ

ಗಿರಿರಾಜನನ್ನು ಆರಾಧಿಸಿದ್ದರೆಂದು ಕೇಳಿದ್ದೇವೆ.

ಹಾಗೊಮ್ಮೆ ಅವರು ದೇವಸ್ಥಾನದ ಒಳಗೆ

ಹರಿಕಥೆಕೇಳಿ ಹೊರ ಬಂದಾಗ ಅವರ ಪಾದರಕ್ಷೆಗಳು

ಅವರು ಹೊರಗೆ ಇಟ್ಟಿದ್ದ  ಎಡೆಯಲ್ಲಿ

ಇರಲಿಲ್ಲವೆಂದೂ ಆ ಸಮಯದಲ್ಲಿ ಅವರು

‘ಪಾಪೋಸು ಹೋದುವಲ್ಲಾ’ ಎಂಬ ಗೀತೆಯನ್ನು

ರಚಿಸಿದರೆಂದೂ ಹೇಳುತ್ತಾರೆ. ಪಾಪೋಸು

ಎಂದರೆ ಪಾದರಕ್ಷೆ ಅಥವಾ ಚಪ್ಪಲಿ. ಅದನ್ನು

ಉದ್ದೇಶಿಸಿ ಪ್ರಾರಂಭಿಸಿದ ಗೀತೆಯನ್ನು ತಮ್ಮ

ಪದಬಳಕೆಯ ಚಮತ್ಕಾರದಿಂದ ದಾಸರು ಒಂದು

ಸುಂದರ ರಚನೆಯಾಗಿಸಿದರು. ಆ ಗೀತೆಯನ್ನು

ಮೊದಲು ಕೇಳೋಣ. ರಾಗ ಅಭೋಗಿ, ಮಿಶ್ರನಡೆ. 



‘ಪಾಪೋಸು ಹೋದುವಲ್ಲಾ, ಅಪಾರದಿನಗಳಿಂದ

ಅರ್ಜನೆಮಾಡಿದ ಪಾಪೋಸು ಹೋದುವಲ್ಲಾ’

ಎಂದು ಪ್ರಾರಂಭವಾಗುತ್ತದೆ ಗೀತೆ. ಪಾಪೋಸು

ಎಂದರೆ ಪಾದರಕ್ಷೆ ಎಂದೆ. ದೇವಸ್ಥಾನದಿಂದ

ತಾವು ಹೊರಬಂದಾಗ ತಮ್ಮ ಪಾದರಕ್ಷೆಗಳು

ಮಾಯವಾಗಿದ್ದನ್ನು ಕಂಡ ದಾಸರು ಚಪ್ಪಲಿ

ಕಳೆಯಿತೆಂದು ಪರಿತಪಿಸಲಿಲ್ಲ. ಸರ್ವಸ್ವವನ್ನೂ

ದಾನಮಾಡಿ ಹರಿದಾಸರಾದವವರಿಗೆ ಪಾದರಕ್ಷೆ

ಒಂದು ಲೆಕ್ಕವೇ ?  ಆ ಪಾಪೋಸೆಂಬ ಪದವನ್ನು

ಪಾಪ ಮತ್ತು ಓಸು ಎಂದು ವಿಭಾಗ ಮಾಡಿ

‘ಕೂಡಿಕೊಂಡಿದ್ದ ಪಾಪಗಳೆಲ್ಲಾ’ ಎನ್ನುವ ಅರ್ಥ

ತಂದು, ಪರಮಾತ್ಮನ ದಿವ್ಯಮೂರ್ತಿಯ ದರ್ಶನ

ಮತ್ತು ಹರಿಕಥಾ ಶ್ರವಣದಿಂದ, ತಮ್ಮ

ಪಾಪಗಳೆಲ್ಲಾ ಹೋದುವೆಂದು ಕುಣಿದಾಡಿದರು.

ಬಹಳ ಸರಳ ರಚನೆ. ಅದರ ಭಾವತಿಳಿಯಲು

ಸಹಾಯ ಬೇಕಿಲ್ಲ. ‘ಉರಗಾದ್ರಿಯಲಿ ಸ್ವಾಮಿ

ಪುಷ್ಕರಿಣಿ ಮೊದಲಾದ ತೀರ್ಥಗಳ ಸ್ನಾನ ಮಾಡಿ ಹರಿದಾಸರೊಡಗೂಡಿ ಗಿರಿರಾಯನ  ದರುಶನದಿ

ಮೈಮರೆತಿರಲು - ಪಾಪೋಸು ಹೋದುವಲ್ಲಾ’.

ಬಹಳ ಸುಂದರವಾದ ಸಾಲುಗಳು.  ಉರಗಾದ್ರಿ

ಎಂದರೆ ಶೇಷಾಚಲ ಅಥವಾ ತಿರುಮಲ.

ಗಿರಿರಾಯನೆಂದರೆ ವೆಂಕಟೇಶ್ವರ. 



ಅಷ್ಟೇ ಸರಳವಾದ ಎರಡನೇ ಚರಣದಲ್ಲಿ

ಬರುವ ‘ಪರಮ ಪಾಪಿಗಳ ಪಾಲಾಗಿ ಹೋದುವು’

ಎಂಬ ವಾಕ್ಯದಲ್ಲಿ ಕೊಂಚ ಹೆಚ್ಚಿನ ಅರ್ಥವಿದೆ.

‘ಪಾಪಗಳೆಲ್ಲಾ ಹೋದವು’ ಅಷ್ಟೇ ಅಲ್ಲ, ಅವು

‘ಪರಮಪಾಪಿಗಳ ಪಾಲಾಗಿ ಹೋದವು’.

‘ಪರಮಪಾಪಿಗಳ ಪಾಲಾಗಿ’ ಏಕೆ ? ಅದಕ್ಕೆ

ವಿವರಣೆ ಹೀಗಿದೆ. 

ನಮ್ಮ ಸತ್ಕರ್ಮಫಲದಲ್ಲಿ ಒಂದಿಷ್ಟು ಪಾಲು

ಆಂದರೆ ಪುಣ್ಯದ ಕೆಲವು ಪಾಲು ನಮಗಿಂತ

ಉತ್ತಮರಾದ ಎಲ್ಲಜೀವರಿಂದ ಹಿಡಿದು

ಜೀವೋತ್ತಮನಾದ ಮುಖ್ಯಪ್ರಾಣನವರೆಗೂ,

ಹಾಗೂ ದುಷ್ಕರ್ಮಗಳ ಮೂಲಕ ಗಳಿಸಿದ

ಪಾಪದ  ಪಾಲು ನಮಗಿಂತ ಕೆಳದರ್ಜೆಯ

ಜೀವರಿಂದ ಹಿಡಿದು ಮಹಾ ಅಧಮನಾದ

ಕಲಿಯ ವರೆಗೂ ಎಲ್ಲರಿಗೂ ಹಂಚಿಕೆಯಾಗುತ್ತದೆ

ಎನ್ನುತ್ತದೆ ಶಾಸ್ತ್ರ. ಇದು ಸುಲಭವಾಗಿ

ತಿಳಿಯಬೇಕಾದರೆ  - ಸರಕಾರೀ ಆಫೀಸುಗಳಲ್ಲಿ

ಕೊಟ್ಟ ಲಂಚ ಅತಿ ಕೆಳದರ್ಜೆಯ ಕಾರಕೂನನಿಂದ 

ಹಿಡಿದು ಮಂತ್ರಿಗಳವರೆಗೂ ಹಂಚಿಕೆಯಾಗುತ್ತದೆಂದು ಹೇಳುತ್ತೇವಲ್ಲವೇ, ಹಾಗೆ ಎಂದುಕೊಳ್ಳಿ.

ನಮ್ಮ ಕರ್ಮಗಳನ್ನೆಲ್ಲಾ - ಅವು

ಸತ್ಕರ್ಮಗಳಾಗಲೀ, ದುಷ್ಕರ್ಮಗಳಾಗಲೀ

- ಶ್ರೀಹರಿಗೆ ಅರ್ಪಣೆಮಾಡಿದರೆ ನಮಗೆ

ಸಂದಾಯವಾಗಬೇಕಾದ ಪುಣ್ಯದಲ್ಲಿ

ಹೆಚ್ಚಿನಭಾಗವನ್ನು ಅವನು ನಮಗೆ ನೀಡಿ

ಕೊಂಚಮಾತ್ರವನ್ನು ಉಳಿದವರಿಗೆ ಹಂಚುತ್ತಾನಂತೆ.

ಅದೇ ನಮಗೆ ಪಾಪಗಳಿಕೆಯಾಗಿದ್ದರೆ

ಹೆಚ್ಚಿನಭಾಗವನ್ನು ಇತರ ಪಾಪಿಗಳಿಗೆ ಹಂಚಿ

ಸ್ವಲ್ಪಮಾತ್ರವನ್ನು ನಮಗೆ ಉಳಿಸುತ್ತಾನಂತೆ

ಕರುಣಾಮಯನಾದ ಶ್ರೀಹರಿ. ನಮ್ಮ ಒಳಿತೇ

ಅವನ ಕರ್ಮವಲ್ಲವೇ. ಇದು ನಮ್ಮ ನಂಬಿಕೆ.

ಈಗ ನಾವು ತಿಳಿಯಬೇಕಾದದ್ದು ಇಷ್ಟೇ.

ದಾಸರು ಗಿರಿರಾಯನ  ದರ್ಶನಮಾಡಿ ತಮ್ಮ

ಕರ್ಮಗಳನ್ನೆಲ್ಲಾ ಅವನಿಗೆ ಅರ್ಪಿಸಿದರು.

ಅದರಲ್ಲಿದ್ದ ಪಾಪವನ್ನೆಲ್ಲಾ ಅವನು ಇತರ

ಪರಮ ಪಾಪಿಗಳಿಗೆ ಹಂಚಿಬಿಟ್ಟ. ಅದ್ದರಿಂದಲೇ

ದಾಸರು ತಮ್ಮ ಪಾಪಗಳೆಲ್ಲಾ ಪರಮಪಾಪಿಗಳ

ಪಾಲಾಗಿ ಹೋದವು ಎಂದು ಹಾಡಿದರು. 


ಮುಂದಿನ ಚರಣದಲ್ಲಿ ದಾಸರು ಪಾಪಗಳನ್ನು  

‘ಮಾಯಾದೇವಿ ಮೆಚ್ಚಿ ಕೊಟ್ಟದ್ದು’ ಎಂದಿದ್ದಾರೆ.

ದುಷ್ಕರ್ಮಗಳಿಂದ ಪಾಪಗಳಿಕೆ. ಸಂಸಾರಮೋಹ

ಅಥವಾ ಮಾಯೆಯ ಸೆಳೆತದಿಂದ ದುಷ್ಕರ್ಮಗಳು.

ಅದ್ದರಿಂದ ಕೊನೆಯ ಚರಣದಲ್ಲಿ ಪಾಪವನ್ನು

‘ಮಾಯಾದೇವಿ ಮೆಚ್ಚಿಕೊಟ್ಟದ್ದು’ ಎಂದರು

ದಾಸರು. ಪಾಪ ನಮ್ಮ ಆಸ್ತಿಯಾಯಿತು.

ಆಸ್ತಿಯ ಭಾಗ ಪಡೆಯುವವರು,

ದಾಯಾದಿಗಳಲ್ಲವೇ?  ಆದ್ದರಿಂದ ತಮ್ಮ

ಪಾಪವನ್ನು ಕೊಂಡೊಯ್ದ ಪರಮಪಾಪಿಗಳನ್ನು

ತಮ್ಮ ಆಸ್ತಿಯನ್ನು ನೋಡಿ ಸಹಿಸದ

ದಾಯಾದಿಗಳು ಎಂದರು ದಾಸರು. 


‘ಪುರಂದರವಿಠ್ಠಲನ ಮಾಯದಿಂದ ಮಾಯವಾದವು

ಮಾಯಾದೇವಿ ಮೆಚ್ಚಿಕೊಟ್ಟಿದ್ದ ಪಾಪೋಸುಗಳು’

ಎಂದು ದಾಸರು ತಮ್ಮ ಗೀತೆಯನ್ನು ಮುಗಿಸಿದರು.

ಇಷ್ಟನ್ನು ಹೇಳಿ, ನನ್ನ ಈ ಕರ್ಮವನ್ನು ನಾನೂ

ಇಲ್ಲಿಂದಲೇ ಗಿರಿರಾಜನಿಗರ್ಪಿಸಿ  ‘ಕೃಷ್ಣಾರ್ಪಣ’

ಎನ್ನುತ್ತೇನೆ. 



ಶನಿವಾರ, ಏಪ್ರಿಲ್ 11, 2026

ತಾರಕ್ಕ ಬಿಂದಿಗೆ

ತಮ್ಮ ಜೀವಿತಕಾಲದಲ್ಲಿ ಪುರಂದರ ದಾಸರು

ಭಾರತದಾದ್ಯಂತ ಸಂಚಾರ ಮಾಡಿದ್ದರೆಂಬುದು ಪ್ರತೀತಿ.


ದಕ್ಷಿಣಭಾರತದಲ್ಲಿ ಅವರು ಅನೇಕ ಪುಣ್ಯ

ಕ್ಷೇತ್ರಗಳ ದರ್ಶನ ಮಾಡಿದ್ದರೆನ್ನುವುದಕ್ಕೆ

ಆಧಾರಗಳಿವೆ

ಎನ್ನುತ್ತಾರೆ. ಉತ್ತರ ಭಾರತದ ಕ್ಷೇತ್ರಗಳ ಭೇಟಿ

ಕೊಂಚಮಟ್ಟಿಗೆ ಊಹಾಪೋಹ ಹೌದಾದರೂ

ಅವರ ಅನೇಕ ಗೀತೆಗಳಲ್ಲಿ ಆ ಕ್ಷೇತ್ರಗಳ ದೈವಗಳ

ಉಲ್ಲೇಖವಿದೆ. ಆ ರೀತಿ ವಾರಣಾಸಿಯ

ಬಿಂದುಮಾಧವನನ್ನು ಹೆಸರಿಸಿರುವ, ಬಹು

ಜನಪ್ರಿಯವಾದ ಒಂದು ಗೀತೆ ‘ತಾರಕ್ಕ ಬಿಂದಿಗೆ’. 


‘ಬಿಂದಿಗೆ’ ಎನ್ನುವಲ್ಲಿ ಈ ದೇಹವನ್ನೂ, ‘ನೀರಿಗೆ

ಹೋಗುವೆ’ ಎಂಬಲ್ಲಿ ಪರಮಾತ್ಮನ ಸಾಕ್ಷಾತ್ಕಾರವನ್ನು

ಪಡೆಯುವ ಉದ್ದೇಶ್ಯವನ್ನೂ ಸೂಚಿಸಿ ದಾಸರು

ಈ ಗೀತೆಯನ್ನು ರಚಿಸಿದ್ದಾರೆಂಬುದು ಒಂದು ಅನಿಸಿಕೆ.

ದೇಹವನ್ನು ಬಿಂದಿಗೆಗೆ ಹೋಲಿಸಿ ಮಾತನಾಡುವುದು

ಸಾಮಾನ್ಯ. ಯಾರಾದರೂ ತೀರಿಕೊಂಡರೆಂದು

ಹೇಳುವುದಕ್ಕೆ ‘ಘಟ ಬಿತ್ತು’ ಎನ್ನುತ್ತೇವಲ್ಲವೇ?

ಆ ಘಟವೇ ದಾಸರ ಕೀರ್ತನೆಯಲ್ಲಿ ‘ಬಿಂದಿಗೆ’

ಯಾಗಿದೆ. ಮತ್ತೆ ಪರಮಾತ್ಮನ, ನೀರಿನ ಸಂಭಂದ

ನಮ್ಮ ಪುರಾಣಗಳಲ್ಲಿ ಅನೇಕ ಕಡೆಗಳಲ್ಲಿ ಕಾಣ

ಸಿಗುತ್ತದೆ. ಎಷ್ಟಾದರೂ ಅವನು ಕೃಪಾಸಾಗರ,

ಗುಣಸಾಗರ, ವಿದ್ಯಾಸಾಗರ ಅಲ್ಲವೇ? ಅದಲ್ಲದೆ

ಋಗ್ವೇದದಲ್ಲಿ ಕೆಲವೆಡೆ ಅವನನ್ನು ‘ಸಮುದ್ರ’ ಎಂದೇ

ಕರೆದಿದ್ದಾರೆ.  


ಮುಂದಿನದು ‘ಬಿಂದಿಗೆ ಒಡೆದರೆ ಒಂದೇಕಾಸು’. 

ಬಿಂದಿಗೆಗೆ ಅಂದರೆ ಈ ದೇಹಕ್ಕೆ ಬೆಲೆ ಅದರಲ್ಲಿ

ಪರಮಾತ್ಮನ ಸಾನ್ನಿಧ್ಯ ಇರುವವರೆಗೆ ಮಾತ್ರ.

ಅದಿಲ್ಲವಾದ ಪಾರ್ಥಿವ ಶರೀರಕ್ಕೆ ಕಾಸಿನ ಕಿಮ್ಮತ್ತೂ

ಇಲ್ಲ. ಆದ್ದರಿಂದಲೇ, ‘ಬಿಂದಿಗೆ ಒಡೆದರೆ ಒಂದೇಕಾಸು’.

ಎಂದರೆ ಇದಕ್ಕೆ ಏನೂ ಬೆಲೆಯಿಲ್ಲ ಎಂದರ್ಥ. 


‘ರಾಮನಾಮವೆಂಬ ರಸವುಳ್ಳ ನೀರಿಗೆ ತಾರೇ ಬಿಂದಿಗೆಯಾ’.

ಪರಮಾತ್ಮನ ಒಂದೊಂದು ನಾಮವೂ ಅವನ

ಒಂದೊಂದು ಗುಣಗಳನ್ನು ಸೂಚಿಸುತ್ತದೆ.

ರಾಮನಾಮವೆಂಬುದು ‘ರಸವುಳ್ಳದ್ದು’ ಅಂದರೆ

ಸುಖಪೂರ್ಣವಾದದ್ದು.  ರಾಮನೆಂದರೆ ತಾನು

ಸಂಪೂರ್ಣ ಸುಖಿಯಾಗಿದ್ದು ಇತರರಿಗೆ ಸುಖ

ನೀಡುವವನು. ಆ ರಾಮನ ಅಥವಾ ಅವನ

ಮೂಲರೂಪ ನಾರಾಯಣನ, ಸುತ್ತ ಸದಾ

ಸುಳಿದಾಡುವ ತತ್ವಾಭಿಮಾನಿ ಅಥವಾ ಪರಿವಾರ

ದೇವತೆಗಳು ಅವನ  ‘ಕಾಮಿನಿಯರು’. 

‘ಕಾಮಿನಿಯರೊಡನೆ ಏಕಾಂತವಾಡುವೆ’ ಎಂದರೆ

ಮೊದಲು ಆ  ತತ್ವಾಭಿಮಾನಿದೇವತೆಗಳನ್ನು

ಆರಾಧಿಸಿ ನಂತರ ಪರಮಾತ್ಮನೆಡೆಗೆ ಹೋಗುವುದೆಂಬ

ಸೂಚನೆ. 


ಮುಂದೆ  ‘ಗೋವಿಂದನೆಂಬ ಗುಣವುಳ್ಳ ನೀರಿಗೆ

ತಾರೇ ಬಿಂದಿಗೆಯಾ’. ‘ಗೋ’ ಎಂದರೆ ವೇದಗಳು.

ವೇದಗಳು ಎಂದರೆ ಜ್ಞಾನ. ಜ್ಞಾನ ಸಂಪಾದನೆಯ

ಮೂಲಕ ದೊರೆಯುವವನು ಜ್ಞಾನಸಾಗರನಾದ

ಗೋವಿಂದ. ಮತ್ತೆ ಅದು ‘ಆವಾವ ಪರಿಯಲ್ಲಿ

ಅಮೃತದ ನೀರು’. ಅಂದರೆ ಭಗವಂತನ ನಾಮಗಳು,

ಗುಣಗಳು, ಐಶ್ವರ್ಯ, ವೈಭವ, ಕರುಣೆ ಮತ್ಯಾವುದಕ್ಕೂ

ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಅವನಿಗೆ ಸಂಭಂದಿಸಿದ

ಎಲ್ಲವೂ ಅಮೃತ. ಜ್ಞಾನಸಂಪಾದನೆ ಮಾಡಿ ಅಂಥ

ಗೋವಿಂದನೆಡೆಗೆ ಸಾಗುತ್ತೇನೆಂದು ಎರಡನೇ ಚರಣದ

ಅರ್ಥ. 


ಕೊನೆಯ ಚರಣದಲ್ಲಿ ವಾರಣಾಸಿಯ ಬಿಂದುಮಾಧವನನ್ನು

ಮತ್ತು ತಮ್ಮ ಅಂಕಿತ ದೈವ ಪುರಂದರ ವಿಠಲನನ್ನು

ಸ್ಮರಿಸಿಕೊಂಡು ದಾಸರು ತಮ್ಮ ಗೀತೆಯನ್ನು

ಕೊನೆಗೊಳಿಸುತ್ತಾರೆ. ಅದಕ್ಕೇನೂ ವಿವರಣೆ

ಬೇಕಿಲ್ಲವಾದ್ದರಿಂದ ನನ್ನ ಮಾತುಗಳೂ ಇಲ್ಲಿ

ಕೊನೆಯಾಗಲಿ, ನಮಸ್ಕಾರ.