ದಾಸಪಂಥವನ್ನು ಸ್ವೀಕರಿಸಿ, ಗಾನ ನೃತ್ಯಗಳ ಮೂಲಕ
ಭಗವಂತನನ್ನು ಆರಾಧಿಸಿದ, ದಾಸರು ಎಂದು ಸಾಮಾನ್ಯವಾಗಿ
ನಾವು ಸಂಭೋದಿಸುವ ಮಹಾನುಭಾವರು ಅನೇಕರಿದ್ದಾರೆ.
ಬಹುತೇಕ ಎಲ್ಲರಿಗೂ ತಿಳಿದಿರುವ ಹೆಸರು ಶ್ರೀ ಪುರಂದರ ದಾಸರು.
ದಾಸರುಗಳು ರಚಿಸಿರುವ ಭಕ್ತಿಗೀತೆಗಳನ್ನು ನಾವು
‘ದಾಸರಪದಗಳು’ ಎಂದೆವು. ಕೇಳಿದವರಲ್ಲಿ ಭಕ್ತಿ
ಭಾವನೆಯನ್ನು ಉದ್ದೀಪನಗೊಳಿಸುವುದು ದಾಸರಪದಗಳ
ಉದ್ದೇಶ್ಯ. ಬಹುತೇಕ ದಾಸರಪದಗಳು ಬಹಳ ಸರಳವಾಗಿದ್ದು
ಅವುಗಳಿಗೆ ಅರ್ಥವಿವರಣೆ ಬೇಕಿಲ್ಲ. ಕೆಲವು ಗೀತೆಗಳ ಕೆಲವು
ಸಾಲುಗಳಿಗೆ ವಿವರಣೆ ಬೇಕಾಗಬಹುದು ಮತ್ತೆ ಕೆಲವು ಗೀತೆಗಳ
ತಲೆಬುಡ ತಿಳಿಯದಿರಬಹುದು. ತಿಳಿದವರು ಕೆಲವರು ಅವುಗಳಿಗೆ
ತಮಗೆ ತಿಳಿದಂತೆ ಅರ್ಥ ತಿಳಿಸಿದ್ದಾರೆ. ನಮಗೆ
ಎಟಕುವಂತಿರುವ ಕೆಲವು ದಾಸರಪದಗಳ ಗಾಯನ,
ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ
ಮಾಡುವುದು ನಮ್ಮ ಈ ಯು ಟ್ಯೂಬ್ ವಿಡಿಯೋಗಳ
ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,
ವಿವರಣೆ ರಘುನಂದನ ಎಂಬ ಹೆಸರಿನ ನನ್ನದು.
ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು
ತಿಳಿಸಿದರೆ ಹೆಚ್ಚಿನ ಸಂತೋಷ. ಇನ್ನು ಮುಂದೆ ಈ ಸಂಚಿಕೆಯ ಗಾಯನ.
ದಾಸರದು ಭಕ್ತಿಪಂಥ. ಇತರರಲ್ಲೂ ಭಕ್ತಿಭಾವನೆಯನ್ನು
ಜಾಗೃತಗೊಳಿಸುವುದು ಅವರು ಆಯ್ದುಕೊಂಡ ಭಗವತ್ಸೇವೆ.
ಆದರೆ ನೀತಿಯಿಲ್ಲದ ಭಕ್ತಿಯಿಂದೇನು ಪ್ರಯೋಜನ ? ಆದ್ದರಿಂದ
ತಾವು ರಚಿಸಿದ ಅನೇಕ ಪದಗಳಲ್ಲಿ ಅವರು ನಮಗೆ
ನೀತಿಬೋಧನೆಯನ್ನೂ ಮಾಡಿದರು. ಆ ರೀತಿಯ ಪುರಂದರದಾಸರ
ಒಂದು ಪದ ‘ರಾಗಿ ತಂದೀರಾ’.
ಯಾರಮನೆಯಲ್ಲೋ ಒಮ್ಮೆ ದಾಸರ ಜೋಳಿಗೆಗೆ ರಾಗಿ ಬಿತ್ತು.
ರಾಗಿಯನ್ನು ಕಂಡ ದಾಸರು ಆ ಕ್ಷಣದಲ್ಲೇ ‘ರಾಗಿ’ ಪದವನ್ನುಪಯೋಗಿಸಿ
ಒಂದು ಚಮತ್ಕಾರವನ್ನೇ ರಚಿಸಿದರು. ನಾಮಪದವಾದ ರಾಗಿಯನ್ನು
ಕ್ರಿಯಾಪದವಾಗಿಸಿದರು. ಭೋಧಿಸಿದರು.
ಬಹಳ ಸರಳವಾದ ಗೀತೆ. ಕೆಲವೇ ಕೆಲವು ಸಾಲುಗಳಿಗೆ ವಿವರಣೆ
ಬೇಕೆನಿಸಬಹುದು. ಒಂದು, ‘ಅನ್ಯವಾರ್ತೆಯ ಬಿಟ್ಟವರಾಗಿ’ ಎನ್ನುವುದು.
ಸಾಮಾನ್ಯವಾಗಿ ನಾವು ಏನೆಲ್ಲವನ್ನು ‘ವಾರ್ತೆ’ ಎನ್ನುತ್ತೀವೋ ಅದೆಲ್ಲಾ
ದಾಸರಿಗೆ ಅನ್ಯವಾರ್ತೆ. ಬೇಡವಾದ ಸುದ್ದಿ. ಯಾವ ವಿಷಯಗಳು
ನಮ್ಮ ಆಧ್ಯಾತ್ಮ ಸಾಧನೆಗೆ ಅಡ್ಡಿ ಮಾಡಿ ಮನಸ್ಸನ್ನು ಭಗವಂತನಿಂದ
ದೂರ ಸೆಳೆಯುತ್ತವೋ ಅವೆಲ್ಲಾ ‘ಅನ್ಯ ವಾರ್ತೆ’. ಆದ್ದರಿಂದ
‘ಅನ್ಯವಾರ್ತೆಯ ಬಿಟ್ಟವರಾಗಿ’.
ಮತ್ತೊಂದು ಸಾಲು ‘ಜಾತಿಯಲ್ಲಿ ಮಿಗಿಲಾದವರಾಗಿ’ ಎನ್ನುವುದು.
ನಾವು ಹುಟ್ಟಿನಿಂದ ಹೊತ್ತುಬಂದದ್ದೇ ನಮ್ಮ ಜಾತಿಯಲ್ಲವೇ ?
ಅದನ್ನು ಬದಲಾಯಿಸುವುದೆಂತು ? ದಾಸರು ಹೇಳುವ ಜಾತಿ
ನಾವು ಜನಗಣತಿಯಲ್ಲೋ, ಜಾತಿಗಣತಿಯಲ್ಲೋ ಬರೆಯುವ
ಜಾತಿಯಲ್ಲ. ನಮ್ಮ ತತ್ವದ ಪ್ರಕಾರ ನಮ್ಮ ಜಾತಿಯನ್ನು
ನಿರ್ಧಾರಮಾಡುವುದು ನಮ್ಮಲ್ಲಿರುವ ಗುಣಗಳ ಪ್ರಮಾಣ.
ಸತ್ವ, ರಜಸ್ಸು ಮತ್ತು ತಮೋಗುಣಗಳು ಪ್ರತಿಯೊಬ್ಬರಲ್ಲೂ
ಇರುವಂತಹವು. ಯಾರಲ್ಲಿ ಸತ್ವಗುಣಗಳ ಪ್ರಮಾಣ ಹೆಚ್ಚೊ,
ಅವರದು ಉತ್ತಮ ಜಾತಿ. ಆದ್ದರಿಂದ ನಿಮ್ಮ ಸತ್ವಗುಣದ ಪ್ರಮಾಣ
ಹೆಚ್ಚಲಿ. ನೀವು ‘ಸಾತ್ವಿಕ ಜೀವನ ನಡೆಸಿ’ ಎನ್ನುವುದು ‘ಜಾತಿಯಲ್ಲಿ
ಮಿಗಿಲಾದವರಾಗಿ’ ಎಂಬ ಸಾಲಿನ ಅರ್ಥ.
ಮೂರನೆಯದು ‘ಗುರುತಿಗೆ ಬಾಹೋರಂಥವರಾಗಿ,
ಕರೆಕರೆ ಸಂಸಾರ ನೀಗುವರಾಗಿ’ ಎಂಬ ಸಾಲು. ನೀತಿಮಾರ್ಗದಲ್ಲಿ
ನಡೆದರೆ ನಾವು ಗುರುತಿಸಲ್ಪಡುತ್ತೇವೆ. ಯಾರಿಂದ ? ಸಮಾಜದಿಂದ
ಅಥವಾ ಸರ್ಕಾರದಿಂದ ಅಲ್ಲ. ಭಗವಂತನಿಂದ. ಅವನ ದೃಷ್ಟಿ ನಮ್ಮ
ಮೇಲೆ ಬಿದ್ದರೆ ಅದು ಮೋಕ್ಷಕ್ಕೆ ನಾಂದಿ. ಅಂದರೆ, ಈ ‘ಕರೆ ಕರೆ
ಸಂಸಾರದಿಂದ, ಅಥವಾ ಹುಟ್ಟು ಸಾವಿನ ಬಂಧನದಿಂದ ಮುಕ್ತಿ ಅಲ್ಲವೇ ?
ಹೀಗೆ ದಾಸರು ಹಾಡಿ, ನೀತಿ ಬೋಧನೆಮಾಡಿ ತಮ್ಮದಾರಿ ಹಿಡಿದರು.
ಅವರ ಬೋಧನೆಯಂತೆ ನಡೆಯುವುದು, ಬಿಡುವುದು, ನಮಗೆ ಬಿಟ್ಟದ್ದು !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ