ಶ್ರೀ ಪುರಂದರದಾಸರ ಪದಗಳಬಗ್ಗೆ ತಿಳಿದವರನೇಕರು ಅವುಗಳನ್ನು ಅನೇಕ
ರೀತಿಗಳಲ್ಲಿ ವಿಂಗಡಿಸಿದ್ದಾರೆ. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ,
ನಿಂದನಾಸ್ತೋತ್ರ, ಹರಿ ಕೀರ್ತನೆ, ಅನ್ಯದೇವತಾ ಕೀರ್ತನೆ ಇತ್ಯಾದಿ ಇತ್ಯಾದಿ.
ತಲೆಬರಹ ಏನೇ ಇರಲಿ, ದಾಸರ ರಚನೆಗಳ ವಸ್ತು, ಭಕ್ತಿ - ಧರ್ಮ - ನೀತಿ.
ಭಗವಂತನನ್ನು ಆರಾಧಿಸುವ ಅಥವಾ ಧರ್ಮಮಾರ್ಗದಲ್ಲಿ ಸಾಗುವ
ಬಗೆಯನ್ನು ದಾಸರು ನೇರವಾದ ಮಾತುಗಳಲ್ಲಿ ತಿಳಿಸುತ್ತಾರೆ. ಇಂದು ಪ್ರಸ್ತುತ
ಪಡಿಸಲಿರುವ ಪದದಲ್ಲಿ ಅದೇ ಮುಕ್ತಿಮಾರ್ಗದಲ್ಲಿ ಸಾಗುವ ಪರಿಯನ್ನು ‘ಹೀಗೆ
ಮಾಡಬೇಕು’ ಎಂದು ಹೇಳದೆ, ‘ತಾನು ಈ ರೀತಿ ಮಾಡಿದೆ’ ಎಂಬ ರೀತಿಯಲ್ಲಿ
ಹೇಳಿ, ನಾವು ಹಿಡಿಯಬೇಕಾದ ಹಾದಿಯನ್ನು ಪರೋಕ್ಷವಾಗಿ ತೋರಿಸಿದ್ದಾರೆ.
ಕೊಂಚ ಅಪರೂಪದ ಗೀತೆ. ಕೇಳೋಣ, ‘ಒಂಭತ್ತು ಬಾಗಿಲೊಳು ಒಂದೇ
ದೀವಿಗೆ ಹಚ್ಚಿ’. ಆನಂದ ಭೈರವಿ ರಾಗ, ಏಕ ತಾಳ.
‘ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ ನಂಬಿಕಿಲ್ಲದ ಸಂಸಾರ
ಮಾಡಿದೆನೆ’ ಎಂದು ಗೀತೆ ಪ್ರಾರಂಭವಾಗುತ್ತದೆ. ಒಂಭತ್ತು ಬಾಗಿಲಿರುವುದು
ನವದ್ವಾರಗಳನ್ನು ಹೊಂದಿರುವ ನಮ್ಮ ದೇಹ. ‘ದೀವಿಗೆ’ ಎಂದರೆ ದೀಪ.
ದೀಪವೆಂದರೆ ಪ್ರಕಾಶ. ನಮ್ಮ ದೇಹಕ್ಕೆ ಸಂಬಂಧಿಸಿದಂತೆ ಪ್ರಕಾಶಮಯವಾದದ್ದು
‘ಬುದ್ಧಿ’. ಒಂದೇ ದೀವಿಗೆ ಹಚ್ಚಿ ಎಂದರೆ ‘ಒಂದೇ ಬುದ್ಧಿಯಿಂದ ಅಥವಾ ಸ್ಥಿರವಾದ
ಬುದ್ಧಿಯಿಂದ’ ಎಂದು ಅರ್ಥ. ‘ನಂಬಿಕೆಯಿಲ್ಲದ ಸಂಸಾರ’ ಎಂದರೆ ಈ ಇಹ
ಸಂಸಾರದಲ್ಲಿ ಆಸಕ್ತಿ ಇಲ್ಲದಿರುವುದು, ಆಸಕ್ತಿ ಇಲ್ಲವೆಂದರೆ ಅದು ವೈರಾಗ್ಯ
ಎಂದಾಯಿತು.. ಮಾನವ ದೇಹಪಡೆದು, ಸ್ಥಿರವಾದ ಬುದ್ಧಿಯಿರಿಸಿಕೊಂಡು,
ವಿರಕ್ತಿ ಭಾವದಿಂದ ಸಂಸಾರ ನಡೆಸಿದೆ ಎನ್ನುವುದು ಮೊದಲ ಚರಣದ ಅರ್ಥ.
‘ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವತುಂಬಿ’ ಎನ್ನುವುದು ಸರಳವಾದ
ಸಾಲು. ಆದರೆ ಧಾನ್ಯವನ್ನು ತುಂಬಿ ಮಾಡಿದ್ದೇನು? ‘ವನವನೆದು ನವಬೇಳೆ
ಬೀಸಿದೆನೆ’. ನವ ವಿಧ ಭಕ್ತಿಯನ್ನು ನವಬೇಳೆಗಳು ಎಂದಿದ್ದಾರೆ.. ಶ್ರವಣ,
ಮನನ, ಕೀರ್ತನ, ಅರ್ಚನ, ಪಾದಸೇವನ, ವಂದನ, ದಾಸ್ಯ, ಸಖ್ಯ,
ಆತ್ಮನಿವೇದನಗಳು ಸೇರಿ ನವವಿಧ ಭಕ್ತಿ. ಎಲ್ಲವೂ ಕೇಳಿದೊಡನೆ ಅರ್ಥ
ತಿಳಿಯುವ ಪದಗಳು. ಈ ನವವಿಧ ಭಕ್ತಿಯನ್ನು ವನವನೆದು ಅಂದರೆ
ಜರಡಿಯಾಡಿ, ಬೀಸಿ, ದೇಹದಲ್ಲಿ ತುಂಬಿದೆ ಎನ್ನುವುದು ಎರಡನೇ ಚರಣದ
ಸಾರಾಂಶ.
ಅಷ್ಟಕರ್ತೃಗಳೆಂಬ ಅಷ್ಟನವಧಾನ್ಯವ ತಂದು ಕುಟ್ಟಿ ಕುಟ್ಟಿ ಕಜ್ಜಾಯ ಮಾಡಿದೆನೆ.
ನಮ್ಮ ದೇಹದಿಂದ ಯಾವುದೇ ಕಾರ್ಯವಾಗಬೇಕಾದರೆ ಅಷ್ಟಕರ್ತೃಗಳ
ಸಹಕಾರವಿಲ್ಲದೆ ಸಾಧ್ಯವಿಲ್ಲ. ಕರ್ತೃ ಎಂದರೆ ಮಾಡುವವನು. ನಾವು ಮಾಡುವ
ಕೆಲಸವನ್ನು ಸಾಧ್ಯಮಾಡುವ ಅಷ್ಟಕರ್ತೃಗಳು ಭೂತ, ತನ್ಮಾತ್ರ, ಗುಣ, ಕಾಲ,
ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಅಂತಃಕರಣ, ಮತ್ತು ಪ್ರವೃತ್ತಿ. ಸ್ವಚ್ಛವಾದ
ಭಕ್ತಿಯನ್ನು ಈ ಅಷ್ಟಕರ್ತೃಗಳ ಸಹಾಯದಿಂದ ಭಗವದಾರಾಧನೆಯ ರೂಪಕ್ಕೆ
ತಂದೆ ಎನ್ನುವುದು ‘ಕುಟ್ಟಿ ಕುಟ್ಟಿ ಕಜ್ಜಾಯಮಾಡಿದೆನೆ’ ಎಂಬ ಸಾಲಿನ ಅರ್ಥ.
ಪಾತ್ರೆಯಾಯಿತು, ಧಾನ್ಯವಾಯಿತು, ಇಚ್ಛೆಯಾಯಿತು. ಅಡುಗೆಗೆ ಬೆಂಕಿ ಬೇಕಲ್ಲವೇ ?
ಶಮ, ದಮ, ತಪಸ್ಸು, ಶೌಚ, ಕ್ಷಾಂತಿ, ಜ್ಞಾನ, ವಿಜ್ಞಾನ, ಆರ್ಜವ ಎಂಬ ಎಂಟು
ಕಟ್ಟಿಗೆಗಳು. ಶಮ ಎಂದರೆ ಶಾಂತಿ ಅಥವಾ ಸಮಾಧಾನ ಸ್ಥಿತಿ, ದಮ ಎಂದರೆ
ಇಂದ್ರಿಯ ನಿಗ್ರಹ, ತಪಸ್ಸು ಎಂದರೆ - ಏಕಾಗ್ರತೆ, ಶೌಚ ಎನ್ನುವುದು - ಮಾನಸಿಕ,
ದೈಹಿಕ ಸ್ವಚ್ಛತೆ, ಕ್ಷಾಂತಿ ಎಂದರೆ ಸಹನೆ, ಜ್ಞಾನ ಎಂದರೆ ತಿಳುವಳಿಕೆ, ವಿಜ್ಞಾನ -
ವಿಶೇಷ ತಿಳುವಳಿಕೆ ಮತ್ತು ಆರ್ಜವ ಎಂದರೆ ಸಹಿಷ್ಣುತೆ - ಈ ಎಂಟು ಕಟ್ಟಿಗೆಗಳನ್ನುರಿಸಿ
ನಿಷ್ಠೆಯಿಂದ ‘ಅನ್ನವ ಮಾಡಿದೆ’ ಎಂದರೆ ಪರಮಾತ್ಮನನ್ನು ಆರಾಧನೆ ಮಾಡಿದೆ
ಎನ್ನುತ್ತಾರೆ ದಾಸರು.
ಇಷ್ಟಾಗುವಾಗ ಗಂಡ ಬಂದು ಮಡಕೆ ಒಡೆದು ಮೂಲೆಗೆ ಹಾಕಿದ. ಯಾವ ಗಂಡ ?
ಇಲ್ಲೊಂದು ಕುತೂಹಲಕರ ವಿಷಯ. “ಲಕ್ಷ್ಮೀದೇವಿ ನಾರಾಯಣನಿಗೆ ಮಾತ್ರ ಪತ್ನಿ,
ಆದರೆ ನಾರಾಯಣ ಎಲ್ಲ ಸ್ತ್ರೀಯರಿಗೂ ಗಂಡ, ಅಷ್ಟೇ ಅಲ್ಲ ಆ ಎಲ್ಲ ಸ್ತ್ರೀಯರ
ಗಂಡಂದಿರಿಗೂ ಗಂಡ” ಇದು ನನ್ನ ಹೇಳಿಕೆಯಲ್ಲ, ಶ್ರೀ ಬನ್ನಂಜೆ ಗೋವಿಂದಾಚಾರ್ಯರ
ಹೇಳಿಕೆ. ಆ ಗಂಡ ಬಂದು, ‘ಮಡಿಕೆಯ ಒಡೆದು’ ಅಂದರೆ ಸಂಸಾರಯೋಗವನ್ನು
ಮುರಿದು ಒಗೆದು, ‘ಉಡುವ ಸೀರೆಯ ಸೆಳೆದು’ ಅಂದರೆ ಜೀವವನ್ನು ಸುತ್ತುವರಿದಿದ್ದ
ಮಾಯೆಯ ಆವರಣವನ್ನು ಕಳೆದು, ಗಿಡದ ತೊಪ್ಪಲ ಸುತ್ತಿ, ಗಿಡವೆಂದರೆ ಪರಮಾತ್ಮನ
ಪ್ರತೀಕವಾದ ಅಶ್ವತ್ಥ ವೃಕ್ಷ. ಅದರ ತೊಪ್ಪಲ ಸುತ್ತಿ ಎಂದರೆ ಜ್ಞಾನವ ನೀಡಿ ಅಥವಾ
ಸಾಕ್ಷಾತ್ಕಾರದ ಕೃಪೆಮಾಡಿ ಎಂದು ಅರ್ಥ- ‘ತಿರುಗಿ ಬಾರದ ಹಾಂಗೆ ಮಾಡಿದನೆ’
ಎಂದರೆ ಸಾಕ್ಷಾತ್ಕಾರ ನೀಡಿ ಮರುಜನ್ಮವಿಲ್ಲದಂತೆ ಮಾಡಿದ ಅಥವಾ ಮುಕ್ತಿಗೊಳಿಸಿದ
ಎಂಬ ಭಾವ.
ಈ ರೀತಿಯ ನಂಬಿಕೆಯಿಂದ ಸಂಸಾರನಡೆಸಿ ‘ಪುರಂದರ ವಿಠಲನ ದಾಸರ ಸೇರಿದೆನೆ’
ಎಂದು ದಾಸರು ತಮ್ಮ ರಚನೆಯನ್ನು ಕೊನೆಗಾಣಿಸಿದರು. ಅಂದರೆ, ಈ ರೀತಿಯ
ಜೀವನದ ಮೂಲಕ ಇತರ ಮುಕ್ತಿಯೋಗ್ಯರನ್ನು ಸೇರಿಕೊಂಡೆ ಎಂದು ಹೇಳಿ, ನೀವು
ಇಂಥ ಸಂಸಾರ ನಡೆಸಿ ಮುಕ್ತಿಯೋಗ್ಯರಾಗಿ - ಎಂದು ನಮಗೆ ತಿಳಿಯಹೇಳಿದ್ದಾರೆ
ಪುರಂದರ ದಾಸರು.
ಕೃತಿಗೆ ತಕ್ಕಂತೆ ವಿವರಣೆ, ಅದಕ್ಕೆ ತಕ್ಕಂತೆ ನನ್ನ ಮಾತು, ಕೊಂಚ ಉದ್ದವಾಯಿತು.
ಅರ್ಥವಾಗುವಂತೆ ಹೇಳಿದ್ದೇನೆಂದು ನಂಬಿಕೊಂಡಿದ್ದೇನೆ. ಕೃಷ್ಣಾರ್ಪಣವಾಗಲಿ.