ಶುಕ್ರವಾರ, ಮೇ 8, 2026

ಉದರವೈರಾಗ್ಯವಿದು’

 




ಉದರ ವೈರಾಗ್ಯವಿದು 

ನಮ್ಮ ಪದುಮನಾಭನಲಿ ಲೇಶಭಕುತಿಯಿಲ್ಲ 


ಉದಯಕಾಲದೊಳೆದ್ದು ಗಡಗಡ ನಡುಗುತ 

ನದಿಯಲಿ  ಮಿಂದೆನೆಂದು ಹೇಳುತಲಿ 

ಮದ ಮತ್ಸರ ಮೋಹ ಒಳಗೆ ತುಂಬಿಟ್ಟುಕೊಂಡು 

ಬದಿಯಲಿದ್ದವರಿಗಾಶ್ಚರ್ಯ ತೋರುವುದು 


ಕಂಚುಗಾರನ ಅಂಗಡಿಯಂದದಿ 

ಕಂಚು  ಹಿತ್ತಾಳೆಯ ಪ್ರತಿಮೆಯನೆರಹಿ 

ಮಿಂಚಲೆನುತೆ  ಬಲು ಜ್ಯೋತಿಗಳನೆಹಚ್ಚಿ 

ವಂಚನೆಯಲಿ ಘನಪೂಜೆ ಮಾಡುವುದು 


ಕರದೊಳು ಜಪಮಣಿ ಬಾಯೊಳು ಮಂತ್ರವು 

ಅರಿವೆಯ ಮುಸುಕನು ಮೋರೆಗೆ ಹಾಕಿ 

ಪರಸತಿ ಪರಧನಕಾಗಿ ಚಿಂತಿಸುತೆ 

ಪರಮ ವೈರಾಗ್ಯದ ಮೂರ್ತಿಯೆನಿಸುವುದು 


ನಾನು ಎಂಬುದಬಿಟ್ಟು ಜ್ಞಾನಿಗಳೊಡಗೂಡಿ 

ಏನೆಲ್ಲಕೆ ದೇವಪ್ರೇರಣೆಯೆಂದು 

ಮನದಲಿ ಸ್ಮರಿಸುತ ಪುರಂದರವಿಠಲನ 

ಕಾಣದೆ ಮಾಡಿದ ಕಾರ್ಯಗಳೆಲ್ಲವು


ನಾನು ಪ್ರೈಮರಿ ಶಾಲೆಯಲ್ಲಿದ್ದಾಗ - ನಾಲ್ಕನೆಯದೋ ಐದನೆಯದೋ

ತರಗತಿ ಇರಬಹುದು, ನಮಗೆ ಕನ್ನಡ ಪಠ್ಯ ಪುಸ್ತಕದಲ್ಲಿ ಇರುತ್ತಿದ್ದ ಪದ್ಯಗಳನ್ನು

ಬಾಯಿಪಾಠ ಮಾಡಬೇಕಿತ್ತು. ನಮ್ಮ ಪುಸ್ತಕವನ್ನು ಸಂಕಲನ ಮಾಡಿದ

ಪುಣ್ಯಾತ್ಮರು ಯಾರೋ ತಿಳಿಯದು. ಆತನೋ ಆಕೆಯೋ ಅದರಲ್ಲಿ

ಪುರಂದರ ದಾಸರ ಗೀತೆಯೊಂದನ್ನು ಸೇರಿಸಿದ್ದರು. ಅದಾಗಿ ಅರುವತ್ತು

ವರುಷಗಳ ಮೇಲಾಯಿತು, ಆಗ ನಾನು ಬಾಯಿಪಾಠಮಾಡಿದ ಗೀತೆ

ನನ್ನ ಜೀವನವಿಡೀ ನನ್ನ ಮನದಿಂದ ಮರೆಯಾಗದೆ  ಉಳಿದುಬಂದಿದೆ.

ಕೇಳಿ ನಮ್ಮ ಹತ್ತನೆಯ ಗೀತೆ ಶ್ರೀ ಪುರಂದರದಾಸರ ರಚನೆ

‘ಉದರವೈರಾಗ್ಯವಿದು’.   ರಾಗ  ನಾದನಾಮಕ್ರಿಯ,  ಆದಿ ತಾಳ.

ಇಲ್ಲಿಯ ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಗೀತೆಯ ಸಾಹಿತ್ಯ ಲಭ್ಯವಿದೆ. 




ದಾಸರು ಯಾರನ್ನು ಉದ್ದೇಶಿಸಿ ಈ ಗೀತೆಯನ್ನು

ರಚಿಸಿದರೋ ತಿಳಿಯದು. ನಾವು ನೀವು ಅವರು

ಇವರು ಯಾರಾದರೂ ಆಗಬಹುದು. ಗೀತೆಯಲ್ಲಿ

ತಿಳಿಸಿರುವಂಥ  ಡಾಂಭಿಕತನ ಇರುವ ಯಾರಾದರೂ

ಸರಿಯೇ. ‘ಉದರವೈರಾಗ್ಯ’ ಎನ್ನುವ ಪದ ಉದರದಲ್ಲಿನ

ವೈರಾಗ್ಯ ಮತ್ತು ಉದರಕ್ಕಾಗಿ ವೈರಾಗ್ಯ ಇವೆರಡನ್ನೂ

ಸೂಚಿಸುವ ಪದ. ಉದರದಲ್ಲಿ ಬಿದ್ದದ್ದು ಮಲವಾಗಿ

ಹೊರಗೆ ಹೋಗುವುದಷ್ಟೇ ತಾನೇ. ಅದು ಕೆಲವೇ

ಘಳಿಗೆಗಳ ಕಾಲ ಉದರದೊಳಗೆ ಉಳಿಯುವುದು.

ಆದರೆ ಮಿದುಳಿಗೆ ಇಳಿದದ್ದಾದರೆ ತಲೆಯೊಳಗೆ

ಸ್ಥಿರವಾಗಿ ಉಳಿಯುವುದು. ಆದ್ದರಿಂದ ಕ್ಷಣಕಾಲದ

ತೋರಿಕೆಯ ವೈರಾಗ್ಯವನ್ನು ದಾಸರು ಉದರವೈರಾಗ್ಯ

ಎಂದರು. ಪದ್ಯದ ಸಾಲುಗಳೆಲ್ಲಾ ಹೀಗೆಯೇ ಅತ್ಯಂತ

ಸರಳ ಆದರೆ ಅಷ್ಟೇ ಅರ್ಥಪೂರ್ಣವಾದವು. 



ಮುಂಜಾನೆಯ ಚಳಿಯಲ್ಲಿ ನಡುಗುತ್ತಾ ಕೊರೆವ

ನೀರಲ್ಲಿ ಎಷ್ಟುಬಾರಿ ಮುಳುಗೆದ್ದರೇನು ? ಮೈಮೇಲಿನ

ಕೊಳೆ  ತೊಳೆದುಹೋಗಬಹುದು. ಆದರೆ ಮನದೊಳಗಿನ

ಕೊಳೆಯ ಗತಿ? ಅದನ್ನು ಉಳಿಸಿಕೊಂಡು - ಮದ ಮತ್ಸರ

ಮೋಹ ಒಳಗೆ ತುಂಬಿಟ್ಟುಕೊಂಡು - ಚರ್ಮದ ಮೇಲಿನ ಕೊಳೆ ತೊಳೆದುಕೊಂಡರೆ ಬಂದದ್ದೇನು? ಎನ್ನುವುದು  ಮೊದಲ

ಚರಣದ ಭಾವ.   


ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದನ್ನು ಕೇಳಿದ್ದೇವೆ.

‘ಪತ್ರಂ ಪುಷ್ಪಮ್ ಫಲಂ ತೋಯಂ ಯೋ ಮೇ ಭಕ್ತ್ಯಾ

ಪ್ರಯಚ್ಛತಿ ತದಹಂ ಭಕ್ತ್ಯೋಪಹೃತಮಶ್ನಾಮಿ ಪ್ರಯತಾತ್ಮನಃ’

ಎಂದ ಕೃಷ್ಣ. ಅಂದರೆ, ಎಲೆ, ಹೂವು, ಹಣ್ಣು, ನೀರು

ಏನಾದರಾಗಲೀ, ನಿಜಭಕ್ತರು ಭಕ್ತಿಪೂರ್ವಕವಾಗಿ

ಕೊಟ್ಟದ್ದನು ನಾನು ಸ್ವೀಕರಿಸುತ್ತೇನೆ ಎಂದ. ಇಲ್ಲಿ ಕೊಟ್ಟ

ವಸ್ತು ಏನು, ಎಷ್ಟು ಎಂಬುದು ಮುಖ್ಯವಲ್ಲ, 

‘ಭಕ್ತಿಪೂರ್ವಕವಾಗಿ’ ಎಂಬ ಪದ ಮುಖ್ಯವಾದದ್ದು.

ಆ ಭಕ್ತಿಯಿಲ್ಲದೆ ನೂರು ವಿಗ್ರಹಗಳನ್ನಿಟ್ಟು, ಇನ್ನೂರು

ದೀಪಗಳನ್ನು ಬೆಳಗಿಸಿದರೂ ಸಹ ಅದು ‘ವಂಚನೆಯ

ಘನಪೂಜೆ’ ಅಷ್ಟೇ. ಇದು ಎರಡನೆಯ ಚರಣ.  


ಪುರಂದರದಾಸರ ಗುರುಗಳಾದ ವ್ಯಾಸತೀರ್ಥರ

ಕಾಲದಲ್ಲಿ, ವ್ಯಾಸರ ಪ್ರಭಾವದಿಂದ ಸನ್ಯಾಸಕ್ಕೆ

ಹಿರಿಮೆ ದೊರೆತು ಸನ್ಯಾಸಿಗಳ ಬಗ್ಗೆ ಜನರಲ್ಲಿ

ಗೌರವಾದರಗಳು ಹೆಚ್ಚಿದವಂತೆ. ಆದರೆ ಜನರಮನದಲ್ಲಿ

ಹರಿದಾಸರು ಮತ್ತು ಸನ್ಯಾಸಿಗಳ ಬಗ್ಗೆ ಇದ್ದ ಗೌರವವನ್ನು

ದುರುಪಯೋಗ ಮಾಡಿಕೊಂಡವರು ಅನೇಕರಿದ್ದರೆಂದೂ

ಅಂಥವರನ್ನು ಕಂಡು ವ್ಯಾಸತೀರ್ಥರೂ

ಬೇಸರಗೊಂಡಿದ್ದರೆಂದೂ ಓದಿದ್ದೇನೆ. ಅದನ್ನು

ಅರಿತಿದ್ದರಿಂದಲೇ ಮೂರನೆಯ ಚರಣದಲ್ಲಿ

‘ಕರದೊಳು ಜಪಮಣಿ, ಬಾಯೊಳು ಮಂತ್ರವು,

ಅರಿವೆಯ ಮುಸುಕನು ಮೊರೆಗೆ ಹಾಕಿ’ ಎಂಬ

ಸಾಲುಗಳನ್ನು ದಾಸರು ಹಾಡಿದರೆನೋ ?   


ಒಟ್ಟಿನಲ್ಲಿ ಪುರಂದರದಾಸರು ಯಾರನ್ನೂ ಬಿಟ್ಟವರಲ್ಲ.

ಅವರು ಶ್ರೀ ಹರಿಯನ್ನು ನಂಬಿದವರು. ಯಾರದೂ

ಅಂಕೆ, ಅಂಜಿಕೆಯಿಲ್ಲದವರು. ನಮ್ಮ ನಿಮ್ಮ ತಪ್ಪು

ತೋರಿಸಿದರು, ದಾಸರೆಂದು ಕರೆದುಕೊಂಡವರ ತಪ್ಪು

ತೋರಿಸಿದರು, ಸನ್ಯಾಸಿಗಳು ಅಥವಾ

ಮಠಾಧಿಪತಿಗಳೆನಿಸಿಕೊಂಡವರ ತಪ್ಪನ್ನೂ ತೋರಿಸಿದರು.  


ಕೊನೆಯಲ್ಲಿ ಬೂಟಕತನವನ್ನು ಬಿಟ್ಟು, ತಿಳಿದವರೊಡನೆ

ಸೇರಿಕೊಂಡು, ಅಹಂಭಾವವನ್ನು ಕಳೆದುಕೊಂಡು,

ಎಲ್ಲವೂ ಶ್ರೀಹರಿಯ ಇಚ್ಛೆಯಂತೆ ಎಂದು ನಂಬಿಕೊಂಡು, ಪುರಂದರವಿಠ್ಠಲನನ್ನು ಕಾಣಿರೆಂದು ಹೇಳುತ್ತಾ ದಾಸರು

ಗೀತೆಯನ್ನು  ಕೊನೆಗಾಣಿಸಿದ್ದಾರೆಂದು ತಿಳಿಸಿ

‘ಕೃಷ್ಣಾರ್ಪಣ’ ಎನ್ನುತ್ತೇನೆ.


ಭಾನುವಾರ, ಮೇ 3, 2026

ತನು ನಿನ್ನದು, ಜೀವನ ನಿನ್ನದು.

ದಾಸಪಂಥವೆಂದು ಹೆಸರಾದ, ಹರಿಸೇವೆಯೇ ಜೀವನವಾದ, ಜೀವನ

ಶೈಲಿಯನ್ನು ಅನುಸರಿಸಿ ನಡೆದ ಮಹಾನುಭಾವರು ಅನೇಕರಿದ್ದಾರೆ.

ಆ ಅನೇಕರಲ್ಲಿ ಬಹುತೇಕ ಕನ್ನಡ ನಾಡಿನ ಎಲ್ಲರೂ ಕೇಳಿ ಬಲ್ಲ,

ಎರಡು ಹೆಸರುಗಳು ಶ್ರೀ ಪುರಂದರ ದಾಸರು ಮತ್ತು ಶ್ರೀ ಕನಕದಾಸರು.

ವಜ್ರಾಭರಣಗಳ ವ್ಯಾಪಾರ ತ್ಯಜಿಸಿ ದಾಸರಾದವರೊಬ್ಬರು,

ಸೇನೆಯಲ್ಲಿನ ಉತ್ತಮಸ್ಥಾನವನ್ನು  ತ್ಯಜಿಸಿ ದಾಸರಾದವರೊಬ್ಬರು.

ಇಬ್ಬರೂ ಸಮಕಾಲೀನರು, ಶ್ರೀ ವ್ಯಾಸ ತೀರ್ಥರ ಶಿಷ್ಯರು. ನಮ್ಮ

ದಾಸ ಸಾಹಿತ್ಯ ಸಿರಿಯ ಮೊದಲ ಎಂಟು  ಗೀತೆಗಳು ಶ್ರೀ ಪುರಂದರ ದಾಸರ

ರಚನೆಗಳು. ಈಗ ಮೊದಲಬಾರಿಗೆ ಶ್ರೀ ಕನಕದಾಸರ ರಚನೆಯೊಂದನ್ನು

ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ತನು ನಿನ್ನದು, ಜೀವನ ನಿನ್ನದು.  



ಕನಕದಾಸರ ಕೀರ್ತನೆಗಳಲ್ಲಿ ಬಹುಶಃ ಎಲ್ಲರೂ ಕೇಳಿರುವ ಮತ್ತು

ಅನೇಕ ಸಂಧರ್ಭಗಳಲ್ಲಿ ಉಲ್ಲೇಖಗೊಂಡಿರುವ ಗೀತೆ ತನು

ನಿನ್ನದು ಜೀವನ ನಿನ್ನದು. ಕನ್ನಡಬಲ್ಲ ಯಾರಿಗಾದರೂ ಕೇಳಿದಾಕ್ಷಣ

ಭಾವ ತಿಳಿಯುವಂಥ ಗೀತೆ. ಕನಕದಾಸರ ಬಗ್ಗೆ ಒಂದು ಕಥೆಯನ್ನು

ನಾವೆಲ್ಲಾ ಕೇಳಿದ್ದೇವೆ. ವ್ಯಾಸತೀರ್ಥರು ಒಮ್ಮೆ ತಮ್ಮ ಶಿಷ್ಯರೊಡನೆ

ಹಾಗೆಯೇ ಮಾತುಕತೆ ನಡೆಸಿದ್ದಾಗ ಚೇಷ್ಟೆಗೆಂಬಂತೆ ಅಲ್ಲಿ

ನೆರೆದಿರುವವರಲ್ಲಿ ವೈಕುಂಠಕ್ಕೆ ಹೋಗಲು ಅರ್ಹರು ಯಾರೆಂದು

ಕೇಳಿದರಂತೆ. ಆಗ ಕನಕದಾಸರು ‘ನಾನು ಹೋದರೆ ಹೋಗಬಹುದು’

ಎಂದು ಹೇಳಿದರೆನ್ನುತ್ತದೆ ಕಥೆ.  ಇಲ್ಲಿ ‘ನಾನು’ ಎಂದರೆ ಅಹಂಭಾವ.

ನಾನು ಹೋದರೆ ಎಂದರೆ, ಅಹಂಭಾವ  ನಮ್ಮನ್ನು ಬಿಟ್ಟುಹೋದರೆ

ನಾವು ಪರಮಾತ್ಮನೆಡೆಗೆ ನಡೆಯಬಹುದೆಂದು ದಾಸರಮಾತಿನ ಅರ್ಥ. 

ಆ ಭಾವನೆಗೆ ಒತ್ತಾಸೆಯಾಗುವ ಗೀತೆ ಇದು. 


ನಾನು ನೋಡಿದ್ದು, ಕೇಳಿದ್ದು, ಸವಿದದ್ದು, ಅನುಭಸಿದ್ದು - ಅದು

ಶ್ಲಾಘನೀಯವಾದದ್ದಾಗಲೀ, ಆಕ್ಷೇಪಾರ್ಹವಾದದ್ದಾಗಲಿ - ಎಲ್ಲವೂ

ನೀ ಕೊಟ್ಟ ಇಂದ್ರಿಯಗಳಮೂಲಕ. ಅವುಗಳನ್ನು ಕೊಟ್ಟವನು ನೀನು,

ಅವುಗಳಿಂದ ಕಾರ್ಯ ನಡೆಸುವವನು ನೀನು ಮತ್ತು ಅವುಗಳ

ಕಾರ್ಯದ ಫಲವನ್ನು ಅನುಭವಿಸುವವನೂ ನೀನೆ. ನನ್ನದು

ಎಂಬುದು ಏನೂ ಇಲ್ಲ - ಎನ್ನುವುದು ಈ ಗೀತೆಯ ಸಾರಾಂಶ.

ನಾನು ಎನ್ನುವುದರಿಂದ ನನ್ನದು ಅಲ್ಲವೇ ? ನನ್ನದು ಏನೂ

ಇಲ್ಲವೆನ್ನುವುದರ ಮುಂದಿನ ಹೆಜ್ಜೆ ‘ನಾನು’ ಎಂಬುದೇ ಇಲ್ಲ

ಎನ್ನುವುದು! ಇದನ್ನೇ ಅಷ್ಟಾಂಗ ಯೋಗದಲ್ಲಿ ‘ಸಮಾಧಿ’ ಎಂದರು

ಮತ್ತು ಇದನ್ನೇ ನವವಿಧ ಭಕ್ತಿಯ ಕೊನೆಯಮೆಟ್ಟಲಾಗಿ

‘ಆತ್ಮ ನಿವೇದನೆ’ ಎಂದರು. 


ಭೀಷ್ಮಾಚಾರ್ಯರು ವಿಷ್ಣುಸಹಸ್ರನಾಮದಲ್ಲಿ ಹೇಳಿದ್ದೂ ಇದೇ. ಅಲ್ಲಿ

ಅವರು ಪರಮಾತ್ಮನನ್ನು ‘ಅಕ್ಷರ’ ಎಂದು ಕರೆದಿದ್ದಾರೆ. ಅಕ್ಷ ಎಂದರೆ

ಇಂದ್ರಿಯಗಳು. ‘ರ’ ಎನ್ನುವುದು ‘ರಮಯತಿ’ ಎಂಬ ಸಂಸ್ಕೃತ

ಪದದ ಸಂಕ್ಷಿಪ್ತ ರೂಪ. ರಮಯತಿ ಎಂದರೆ ಅನುಭವಿಸುವುದು

ಅಥವಾ ಸುಖ ಪಡುವುದು ಎಂದು ಅರ್ಥ. ಎಲ್ಲ ಜೀವಿಗಳ ಎಲ್ಲ

ಇಂದ್ರಿಯಗಳಿಂದಲೂ ಅನುಭವಿಸುವವನು ಅಕ್ಷರ. ‘ಅಕ್ಷೇಷು,

ಜೀವಾತ್ಮಾನಾಮ್ ಇಂದ್ರಿಯೇಷು - ರಮತಃ - ಇತಿ ಅಕ್ಷರಂ’

ಎನ್ನುತ್ತದೆ ಛಾಂದೋಗ್ಯೋಪನಿಷತ್ತು. ಆ ನಾಮಕ್ಕೆ ಅನುಗುಣವಾಗುವಂತೆ,

ತಮ್ಮ ಈ ಗೀತೆಯ ಮೂಲಕ - ಇಂದ್ರಿಯ, ಕಾರ್ಯ,

ಅನುಭವ ಎಲ್ಲವೂ ನಿನ್ನದು ಸ್ವಾಮೀ, ನನ್ನದು ಎಂಬುದಿಲ್ಲ -

ಎಂದು ಪರಮಾತ್ಮನಲ್ಲಿ  ಕನಕದಾಸರು ನಿವೇದಿಸಿಕೊಳ್ಳುತ್ತಿದ್ದಾರೆ

ಎಂದು ತಿಳಿಸುತ್ತಾ ‘ಕೃಷ್ಣಾರ್ಪಣ’ ಎನ್ನುತ್ತೇನೆ.