ಬುಧವಾರ, ಮಾರ್ಚ್ 18, 2026

ಕುರುಡು ನಾಯಿ ಸಂತೆಗೆ ಬಂತಂತೆ

ದಿವಂಗತ ಶ್ರೀ ಬಿ ವಿ ಕಾರಂತರ ನಾಟಕಗಳಲ್ಲಿ ಮತ್ತು 

ನವ್ಯ ಹಾಡುಗಾರರ ಆರ್ಕೆಸ್ಟ್ರಾಗಳಲ್ಲಿಸಹ  ಕೇಳಿಬರುತ್ತಿದ್ದ 

ಪುರಂದರ ದಾಸರ ಒಂದು ರಚನೆ ‘ಕುರುಡು ನಾಯಿ

ಸಂತೆಗೆ ಬಂತಂತೆ’. ಕಿವಿಗೆ ಬಿದ್ದೊಡನೆ ಕುತೂಹಲ

ಮೂಡಿಸುವಂಥ ಪದಗಳ ಜೋಡಣೆ ಪುರಂದರದಾಸರ

ರಚನೆಗಳ ವಿಶೇಷ. ದಾಸರು ಹಾಡಿಕಿಂದು ಹೋಗುತ್ತಿದ್ದರೆ

ದಾರಿಯಲ್ಲಿ ನಡೆದಾಡುತ್ತಿದ್ದವರು ಕೊಂಚ ನಿಂತು ಮುಂದೆ

ಕೇಳುವಂತಿರಬೇಕು. ಅದು ದಾಸರ ಉದ್ದೇಶ್ಯ. ಆದರೆ

ಕೇಳಿದ ಎಷ್ಟು ಕಿವಿಗಳಿಗೆ ಈ ಗೀತೆಯ ತಿರುಳು

ತಿಳಿಯಿತೋ ನಮಗೆ ತಿಳಿಯದು. 


ನಮ್ಮ ನಿಮ್ಮಂತೆ ಈ ಸಂಸಾರವೆಂಬ ಸಂತೆಗೆ ಬಂದು 

ಸಿಕ್ಕುಬಿದ್ದಿದ್ದ ಜನರೆಲ್ಲರನ್ನೂ ದಾಸರು ಕುರುಡು ನಾಯಿ

ಎಂದು ಕರೆದರು. ಬರಿಯ ನಾಯಿ ಸಾಲದೇ ? ಕುರುಡು

ನಾಯಿ ಏಕೆ ?  ಈ ಸಂಸಾರಕ್ಕೆ ಬಂದೆವು ಹೌದು.

ಬಂದುದೆಲ್ಲಿಂದ?  ನಾವು ಕಾಣಲಿಲ್ಲ, ಇಲ್ಲಿಂದ

ಹೋಗುವುದೆಲ್ಲಿಗೆ? ಅದನ್ನೂ ಕಂಡಿಲ್ಲ. ಆದ್ದರಿಂದ

ಎಲ್ಲರೂ  ಕುರುಡು ನಾಯಿಗಳೇ.  


ಹಾಗೆ ಈ ಸಂಸಾರದಲ್ಲಿ ಹುಟ್ಟಿದ್ದ  ನಾಯಿ ಬೇಕಿದ್ದರೆ

ಕಲ್ಲುಸಕ್ಕರೆ ಮೆಲ್ಲಬಹುದಿತ್ತು. ಖಂಡಸಕ್ಕರೆ ಎಂದರೆ

ಕಲ್ಲುಸಕ್ಕರೆ. ಯಾವ ಕಲ್ಲು ಸಕ್ಕರೆ ? ದಾಸರೇ ಬೇರೆಕಡೆ

ಹೇಳಿದ್ದಾರಲ್ಲ ! ‘ಎತ್ತು ಹೇರುಗಳಿಂದ ಹೊತ್ತುಮಾರುವುದಲ್ಲ,

ಕಟ್ಟಿರುವೆ ತಿಂದು ಹಾಳಾಗುವುದಲ್ಲ, ಎತ್ತಹೋದರೂ

ಬಾಡಿಗೆ ಸುಂಕವಿದಕಿಲ್ಲ’  ಎಂದು, ಆ  ವಿಠಲ 

ನಾಮವೆಂಬ ಕಲ್ಲುಸಕ್ಕರೆ.  ಅಥವಾ ಅದನ್ನು  ಸುಜ್ಞಾನ

ಎನ್ನಿ. ಅದಕ್ಕೆ ಬಾಯಿಹಾಕಬಹುದಿತ್ತು. ಆದರೆ ಈ

ನಾಯಿ ಬಾಯಿಹಾಕಿದ್ದು ಖಂಡ ಎಲುಬಿಗೆ. ಅಜ್ಞಾನ

ಅಥವಾ ಅನ್ಯಥಾಜ್ಞಾನ ಮತ್ತು ಹರಿ ವಿಸ್ಮರಣೆ

ಅಥವಾ ಸಂಸಾರಮೋಹ ಎಂಬ  ಮಾಂಸ,

ಮೂಳೆಗಳ ತುಂಡಿಗೆ. ಹೀಗೆ ಅವನನ್ನು ಕೈಬಿಟ್ಟು

ನಿನ್ನ ಸಂಸಾರ, ಹೆಂಡಿರು ಮಕ್ಕಳನ್ನೇ ನೆಚ್ಚಿದ್ದ

ನಿನ್ನನ್ನು ಯಮದೂತರು ಕೊಂಡುಹೋಗುವಾಗ

ಜತೆಗೆ ಯಾರುಬಂದರಯ್ಯಾ ಎಂದು ಕೇಳುತ್ತಾರೆ ದಾಸರು.  


(ಇಲ್ಲಿ ನನ್ನದೊಂದು ಅಡ್ಡಮಾತು. ಸಮಾಜ

ಪುರುಷ ಪ್ರಾಧಾನ್ಯವಾಗಿದ್ದ ಸಮಯದಲ್ಲಿ ರಚಿತವಾಗಿದ್ದು

ದಾಸರಪದಗಳು.  ಸ್ತ್ರೀ ಸ್ವಾತಂತ್ರ್ಯವಾದಿಗಳು ಇಲ್ಲಿ

‘ಹೆಂಡಿರು ಮಕ್ಕಳ ನೆಚ್ಚಿತ್ತಂತೆ’ ಎನ್ನುವ ಬದಲು

‘ಗಂಡನ, ಮಕ್ಕಳ ನೆಚ್ಚಿತ್ತಂತೆ’  ಎಂದು

ಬದಲಾಯಿಸಿಕೊಳ್ಳಬಹುದು - ಪ್ರಾಸಕ್ಕೂ ಬಾಧಕವಿಲ್ಲ,

ಅರ್ಥಕ್ಕೂ ಬಾಧಕವಿಲ್ಲ.) 



ಅದಿರಲಿ ಆ ಜೀವ ಮಾಡಿದ್ದೇನು ?

ವೇದವಾದಗಳನ್ನೋದಿಕೊಂಡು, ಬುದ್ಧಿಕಲಿತೆನೆಂದುಕೊಂಡು,

ಗಾದೆ ಗಳನ್ನು ಸಹ ಬರೆಯುವಂಥ ಪಾಂಡಿತ್ಯ ಪಡೆಯಿತು.

ಆದರೆ ಅನುಷ್ಠಾನದಲ್ಲಿ ಹಾದಿ ತಪ್ಪಿ, ತಪ್ಪು  ದಾರಿ ಹಿಡಿದು,

ಮುಕ್ತಿಮಾರ್ಗ ಬಿಟ್ಟು ನರಕವನ್ನು ತಲುಪಿತು. ಕ್ರಿಮಿ,

ಕೀಟ, ಪಶು, ಪ್ರಾಣಿಗಳಾಗಿ ನೂರಾರೋ ಸಾವಿರಾರೋ 

ಜನ್ಮಗಳ ನಂತರ ದೊರಕಿದ್ದ, ಸಾಧನಾ ಶರೀರವನ್ನು

ಆಧ್ಯಾತ್ಮಸಾಧನೆಯಲ್ಲಿ ತೊಡಗಿಸದೆ, ಹಿಂದುಮುಂದಿಲ್ಲದೆ

ತಿರುಗಾಡಿಸಿ ಹಾಳುಗೆಡವಿತು.


ದುಸ್ತರ ವಾದ ಮಾನವ ಜನ್ಮವೆಂಬ ಮಾಣಿಕ್ಯ

ಮಂಗನಕೈಗೆ ಸಿಕ್ಕಿದ ಮಾಣಿಕ್ಯವಾಯಿತು. ಮಂಗಕ್ಕೇನು

ಗೊತ್ತು ಮಾಣಿಕ್ಯದಬೆಲೆ ? ಕಚ್ಚಿನೋಡಿ,

ರುಚಿಯಿಲ್ಲವೆಂದು ಬಿಸಾಡಿತಲ್ಲವೇ?  ಹಾಗೆಯೇ,

ತನಗೆ ಸಿಕ್ಕಿದ್ದ ಮಾನವ ಜನ್ಮದ ಬೆಲೆತಿಳಿಯದ ಜೀವ

ಅದನ್ನು ಹಾಳುಗೆಡವಿ, ರಂಗನನ್ನು ಮರೆತು ಬಹಳ  

ಭಂಗಪಟ್ಟಿತು. ಇದು ‘ಕುರುಡುನಾಯಿ’ ಗೀತೆಯ ಸಾರ. 


ತಾವು ಹಾಡಿದ ಪದ ಜನರಿಗೆ ತಿಳಿಯಿತೋ ಇಲ್ಲವೋ

ಎಂಬ ಅನುಮಾನ ದಾಸರಿಗೂ ಬಂದಿತೆಂದು ಕಾಣುತ್ತದೆ.

ಆದ್ದರಿಂದ ಅದರ ಅರ್ಥವನ್ನು ಮನದಟ್ಟು ಮಾಡಿಸಲೆಂದೇ

ಮತ್ತೊಂದು ಕಡೆ ದಾಸರು ಸರಳವಾಗಿ

‘ಮಾನವ ಜನ್ಮ ದೊಡ್ಡದು, ಅದ ಹಾನಿಮಾಡಬೇಡಿರೋ

ಹುಚ್ಚಪ್ಪಗಳಿರಾ’ ಎಂದು ಹಾಡಿದರೆಂದು ತಿಳಿಸುತ್ತಾ ಇಂದಿನ

ನಾಲ್ಕು ವಾಕ್ಯ ಕೃಷ್ಣಾರ್ಪಣ ಎನ್ನುತ್ತೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ