ಶುಕ್ರವಾರ, ಏಪ್ರಿಲ್ 17, 2026

ಪಾಪೋಸು ಹೋದುವಲ್ಲಾ

ಶತಮಾನಗಳ ಹಿಂದೆ ಒಮ್ಮೆ ತಿರುಪತಿ

ಕ್ಷೇತ್ರದಲ್ಲಿ ಕಾರಣಾಂತರಗಳಿಂದ

ನಿತ್ಯಪೂಜೆಮಾಡುವವರು ಯಾರೂ ಇಲ್ಲವಾದಾಗ

ಶ್ರೀ ವ್ಯಾಸರಾಜ ಸ್ವಾಮಿಗಳು ತಿರುಪತಿಯಲ್ಲೇ

ನೆಲಸಿ ದೈನಂದಿನ ಪೂಜಾ ಕಾರ್ಯವನ್ನು

ನಡೆಸಿಕೊಂಡು ಬಂದರೆಂದು ಹೇಳುತ್ತಾರೆ.

ತಮ್ಮ ಗುರುಗಳು ಆದರದಿಂದ ಪೂಜಿಸಿದ

ದೇವನಮೇಲೆ ಪುರಂದರದಾಸರಿಗೂ ಬಹಳ

ಭಕ್ತಿಯಿದ್ದದ್ದು ಸಹಜವೇ. ಆದ್ದರಿಂದಲೇ ಅವರು

ಕೂಡ ಅನೇಕಬಾರಿ ತಿರುಪತಿ ಯಾತ್ರೆ ಮಾಡಿ

ಗಿರಿರಾಜನನ್ನು ಆರಾಧಿಸಿದ್ದರೆಂದು ಕೇಳಿದ್ದೇವೆ.

ಹಾಗೊಮ್ಮೆ ಅವರು ದೇವಸ್ಥಾನದ ಒಳಗೆ

ಹರಿಕಥೆಕೇಳಿ ಹೊರ ಬಂದಾಗ ಅವರ ಪಾದರಕ್ಷೆಗಳು

ಅವರು ಹೊರಗೆ ಇಟ್ಟಿದ್ದ  ಎಡೆಯಲ್ಲಿ

ಇರಲಿಲ್ಲವೆಂದೂ ಆ ಸಮಯದಲ್ಲಿ ಅವರು

‘ಪಾಪೋಸು ಹೋದುವಲ್ಲಾ’ ಎಂಬ ಗೀತೆಯನ್ನು

ರಚಿಸಿದರೆಂದೂ ಹೇಳುತ್ತಾರೆ. ಪಾಪೋಸು

ಎಂದರೆ ಪಾದರಕ್ಷೆ ಅಥವಾ ಚಪ್ಪಲಿ. ಅದನ್ನು

ಉದ್ದೇಶಿಸಿ ಪ್ರಾರಂಭಿಸಿದ ಗೀತೆಯನ್ನು ತಮ್ಮ

ಪದಬಳಕೆಯ ಚಮತ್ಕಾರದಿಂದ ದಾಸರು ಒಂದು

ಸುಂದರ ರಚನೆಯಾಗಿಸಿದರು. ಆ ಗೀತೆಯನ್ನು

ಮೊದಲು ಕೇಳೋಣ. ರಾಗ ಅಭೋಗಿ, ಮಿಶ್ರನಡೆ. 



‘ಪಾಪೋಸು ಹೋದುವಲ್ಲಾ, ಅಪಾರದಿನಗಳಿಂದ

ಅರ್ಜನೆಮಾಡಿದ ಪಾಪೋಸು ಹೋದುವಲ್ಲಾ’

ಎಂದು ಪ್ರಾರಂಭವಾಗುತ್ತದೆ ಗೀತೆ. ಪಾಪೋಸು

ಎಂದರೆ ಪಾದರಕ್ಷೆ ಎಂದೆ. ದೇವಸ್ಥಾನದಿಂದ

ತಾವು ಹೊರಬಂದಾಗ ತಮ್ಮ ಪಾದರಕ್ಷೆಗಳು

ಮಾಯವಾಗಿದ್ದನ್ನು ಕಂಡ ದಾಸರು ಚಪ್ಪಲಿ

ಕಳೆಯಿತೆಂದು ಪರಿತಪಿಸಲಿಲ್ಲ. ಸರ್ವಸ್ವವನ್ನೂ

ದಾನಮಾಡಿ ಹರಿದಾಸರಾದವವರಿಗೆ ಪಾದರಕ್ಷೆ

ಒಂದು ಲೆಕ್ಕವೇ ?  ಆ ಪಾಪೋಸೆಂಬ ಪದವನ್ನು

ಪಾಪ ಮತ್ತು ಓಸು ಎಂದು ವಿಭಾಗ ಮಾಡಿ

‘ಕೂಡಿಕೊಂಡಿದ್ದ ಪಾಪಗಳೆಲ್ಲಾ’ ಎನ್ನುವ ಅರ್ಥ

ತಂದು, ಪರಮಾತ್ಮನ ದಿವ್ಯಮೂರ್ತಿಯ ದರ್ಶನ

ಮತ್ತು ಹರಿಕಥಾ ಶ್ರವಣದಿಂದ, ತಮ್ಮ

ಪಾಪಗಳೆಲ್ಲಾ ಹೋದುವೆಂದು ಕುಣಿದಾಡಿದರು.

ಬಹಳ ಸರಳ ರಚನೆ. ಅದರ ಭಾವತಿಳಿಯಲು

ಸಹಾಯ ಬೇಕಿಲ್ಲ. ‘ಉರಗಾದ್ರಿಯಲಿ ಸ್ವಾಮಿ

ಪುಷ್ಕರಿಣಿ ಮೊದಲಾದ ತೀರ್ಥಗಳ ಸ್ನಾನ ಮಾಡಿ ಹರಿದಾಸರೊಡಗೂಡಿ ಗಿರಿರಾಯನ  ದರುಶನದಿ

ಮೈಮರೆತಿರಲು - ಪಾಪೋಸು ಹೋದುವಲ್ಲಾ’.

ಬಹಳ ಸುಂದರವಾದ ಸಾಲುಗಳು.  ಉರಗಾದ್ರಿ

ಎಂದರೆ ಶೇಷಾಚಲ ಅಥವಾ ತಿರುಮಲ.

ಗಿರಿರಾಯನೆಂದರೆ ವೆಂಕಟೇಶ್ವರ. 



ಅಷ್ಟೇ ಸರಳವಾದ ಎರಡನೇ ಚರಣದಲ್ಲಿ

ಬರುವ ‘ಪರಮ ಪಾಪಿಗಳ ಪಾಲಾಗಿ ಹೋದುವು’

ಎಂಬ ವಾಕ್ಯದಲ್ಲಿ ಕೊಂಚ ಹೆಚ್ಚಿನ ಅರ್ಥವಿದೆ.

‘ಪಾಪಗಳೆಲ್ಲಾ ಹೋದವು’ ಅಷ್ಟೇ ಅಲ್ಲ, ಅವು

‘ಪರಮಪಾಪಿಗಳ ಪಾಲಾಗಿ ಹೋದವು’.

‘ಪರಮಪಾಪಿಗಳ ಪಾಲಾಗಿ’ ಏಕೆ ? ಅದಕ್ಕೆ

ವಿವರಣೆ ಹೀಗಿದೆ. 

ನಮ್ಮ ಸತ್ಕರ್ಮಫಲದಲ್ಲಿ ಒಂದಿಷ್ಟು ಪಾಲು

ಆಂದರೆ ಪುಣ್ಯದ ಕೆಲವು ಪಾಲು ನಮಗಿಂತ

ಉತ್ತಮರಾದ ಎಲ್ಲಜೀವರಿಂದ ಹಿಡಿದು

ಜೀವೋತ್ತಮನಾದ ಮುಖ್ಯಪ್ರಾಣನವರೆಗೂ,

ಹಾಗೂ ದುಷ್ಕರ್ಮಗಳ ಮೂಲಕ ಗಳಿಸಿದ

ಪಾಪದ  ಪಾಲು ನಮಗಿಂತ ಕೆಳದರ್ಜೆಯ

ಜೀವರಿಂದ ಹಿಡಿದು ಮಹಾ ಅಧಮನಾದ

ಕಲಿಯ ವರೆಗೂ ಎಲ್ಲರಿಗೂ ಹಂಚಿಕೆಯಾಗುತ್ತದೆ

ಎನ್ನುತ್ತದೆ ಶಾಸ್ತ್ರ. ಇದು ಸುಲಭವಾಗಿ

ತಿಳಿಯಬೇಕಾದರೆ  - ಸರಕಾರೀ ಆಫೀಸುಗಳಲ್ಲಿ

ಕೊಟ್ಟ ಲಂಚ ಅತಿ ಕೆಳದರ್ಜೆಯ ಕಾರಕೂನನಿಂದ 

ಹಿಡಿದು ಮಂತ್ರಿಗಳವರೆಗೂ ಹಂಚಿಕೆಯಾಗುತ್ತದೆಂದು ಹೇಳುತ್ತೇವಲ್ಲವೇ, ಹಾಗೆ ಎಂದುಕೊಳ್ಳಿ.

ನಮ್ಮ ಕರ್ಮಗಳನ್ನೆಲ್ಲಾ - ಅವು

ಸತ್ಕರ್ಮಗಳಾಗಲೀ, ದುಷ್ಕರ್ಮಗಳಾಗಲೀ

- ಶ್ರೀಹರಿಗೆ ಅರ್ಪಣೆಮಾಡಿದರೆ ನಮಗೆ

ಸಂದಾಯವಾಗಬೇಕಾದ ಪುಣ್ಯದಲ್ಲಿ

ಹೆಚ್ಚಿನಭಾಗವನ್ನು ಅವನು ನಮಗೆ ನೀಡಿ

ಕೊಂಚಮಾತ್ರವನ್ನು ಉಳಿದವರಿಗೆ ಹಂಚುತ್ತಾನಂತೆ.

ಅದೇ ನಮಗೆ ಪಾಪಗಳಿಕೆಯಾಗಿದ್ದರೆ

ಹೆಚ್ಚಿನಭಾಗವನ್ನು ಇತರ ಪಾಪಿಗಳಿಗೆ ಹಂಚಿ

ಸ್ವಲ್ಪಮಾತ್ರವನ್ನು ನಮಗೆ ಉಳಿಸುತ್ತಾನಂತೆ

ಕರುಣಾಮಯನಾದ ಶ್ರೀಹರಿ. ನಮ್ಮ ಒಳಿತೇ

ಅವನ ಕರ್ಮವಲ್ಲವೇ. ಇದು ನಮ್ಮ ನಂಬಿಕೆ.

ಈಗ ನಾವು ತಿಳಿಯಬೇಕಾದದ್ದು ಇಷ್ಟೇ.

ದಾಸರು ಗಿರಿರಾಯನ  ದರ್ಶನಮಾಡಿ ತಮ್ಮ

ಕರ್ಮಗಳನ್ನೆಲ್ಲಾ ಅವನಿಗೆ ಅರ್ಪಿಸಿದರು.

ಅದರಲ್ಲಿದ್ದ ಪಾಪವನ್ನೆಲ್ಲಾ ಅವನು ಇತರ

ಪರಮ ಪಾಪಿಗಳಿಗೆ ಹಂಚಿಬಿಟ್ಟ. ಅದ್ದರಿಂದಲೇ

ದಾಸರು ತಮ್ಮ ಪಾಪಗಳೆಲ್ಲಾ ಪರಮಪಾಪಿಗಳ

ಪಾಲಾಗಿ ಹೋದವು ಎಂದು ಹಾಡಿದರು. 


ಮುಂದಿನ ಚರಣದಲ್ಲಿ ದಾಸರು ಪಾಪಗಳನ್ನು  

‘ಮಾಯಾದೇವಿ ಮೆಚ್ಚಿ ಕೊಟ್ಟದ್ದು’ ಎಂದಿದ್ದಾರೆ.

ದುಷ್ಕರ್ಮಗಳಿಂದ ಪಾಪಗಳಿಕೆ. ಸಂಸಾರಮೋಹ

ಅಥವಾ ಮಾಯೆಯ ಸೆಳೆತದಿಂದ ದುಷ್ಕರ್ಮಗಳು.

ಅದ್ದರಿಂದ ಕೊನೆಯ ಚರಣದಲ್ಲಿ ಪಾಪವನ್ನು

‘ಮಾಯಾದೇವಿ ಮೆಚ್ಚಿಕೊಟ್ಟದ್ದು’ ಎಂದರು

ದಾಸರು. ಪಾಪ ನಮ್ಮ ಆಸ್ತಿಯಾಯಿತು.

ಆಸ್ತಿಯ ಭಾಗ ಪಡೆಯುವವರು,

ದಾಯಾದಿಗಳಲ್ಲವೇ?  ಆದ್ದರಿಂದ ತಮ್ಮ

ಪಾಪವನ್ನು ಕೊಂಡೊಯ್ದ ಪರಮಪಾಪಿಗಳನ್ನು

ತಮ್ಮ ಆಸ್ತಿಯನ್ನು ನೋಡಿ ಸಹಿಸದ

ದಾಯಾದಿಗಳು ಎಂದರು ದಾಸರು. 


‘ಪುರಂದರವಿಠ್ಠಲನ ಮಾಯದಿಂದ ಮಾಯವಾದವು

ಮಾಯಾದೇವಿ ಮೆಚ್ಚಿಕೊಟ್ಟಿದ್ದ ಪಾಪೋಸುಗಳು’

ಎಂದು ದಾಸರು ತಮ್ಮ ಗೀತೆಯನ್ನು ಮುಗಿಸಿದರು.

ಇಷ್ಟನ್ನು ಹೇಳಿ, ನನ್ನ ಈ ಕರ್ಮವನ್ನು ನಾನೂ

ಇಲ್ಲಿಂದಲೇ ಗಿರಿರಾಜನಿಗರ್ಪಿಸಿ  ‘ಕೃಷ್ಣಾರ್ಪಣ’

ಎನ್ನುತ್ತೇನೆ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ