ದಾಸಪಂಥವೆಂದು ಹೆಸರಾದ, ಹರಿಸೇವೆಯೇ ಜೀವನವಾದ, ಜೀವನ
ಶೈಲಿಯನ್ನು ಅನುಸರಿಸಿ ನಡೆದ ಮಹಾನುಭಾವರು ಅನೇಕರಿದ್ದಾರೆ.
ಆ ಅನೇಕರಲ್ಲಿ ಬಹುತೇಕ ಕನ್ನಡ ನಾಡಿನ ಎಲ್ಲರೂ ಕೇಳಿ ಬಲ್ಲ,
ಎರಡು ಹೆಸರುಗಳು ಶ್ರೀ ಪುರಂದರ ದಾಸರು ಮತ್ತು ಶ್ರೀ ಕನಕದಾಸರು.
ವಜ್ರಾಭರಣಗಳ ವ್ಯಾಪಾರ ತ್ಯಜಿಸಿ ದಾಸರಾದವರೊಬ್ಬರು,
ಸೇನೆಯಲ್ಲಿನ ಉತ್ತಮಸ್ಥಾನವನ್ನು ತ್ಯಜಿಸಿ ದಾಸರಾದವರೊಬ್ಬರು.
ಇಬ್ಬರೂ ಸಮಕಾಲೀನರು, ಶ್ರೀ ವ್ಯಾಸ ತೀರ್ಥರ ಶಿಷ್ಯರು. ನಮ್ಮ
ದಾಸ ಸಾಹಿತ್ಯ ಸಿರಿಯ ಮೊದಲ ಎಂಟು ಗೀತೆಗಳು ಶ್ರೀ ಪುರಂದರ ದಾಸರ
ರಚನೆಗಳು. ಈಗ ಮೊದಲಬಾರಿಗೆ ಶ್ರೀ ಕನಕದಾಸರ ರಚನೆಯೊಂದನ್ನು
ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ತನು ನಿನ್ನದು, ಜೀವನ ನಿನ್ನದು.
ಕನಕದಾಸರ ಕೀರ್ತನೆಗಳಲ್ಲಿ ಬಹುಶಃ ಎಲ್ಲರೂ ಕೇಳಿರುವ ಮತ್ತು
ಅನೇಕ ಸಂಧರ್ಭಗಳಲ್ಲಿ ಉಲ್ಲೇಖಗೊಂಡಿರುವ ಗೀತೆ ತನು
ನಿನ್ನದು ಜೀವನ ನಿನ್ನದು. ಕನ್ನಡಬಲ್ಲ ಯಾರಿಗಾದರೂ ಕೇಳಿದಾಕ್ಷಣ
ಭಾವ ತಿಳಿಯುವಂಥ ಗೀತೆ. ಕನಕದಾಸರ ಬಗ್ಗೆ ಒಂದು ಕಥೆಯನ್ನು
ನಾವೆಲ್ಲಾ ಕೇಳಿದ್ದೇವೆ. ವ್ಯಾಸತೀರ್ಥರು ಒಮ್ಮೆ ತಮ್ಮ ಶಿಷ್ಯರೊಡನೆ
ಹಾಗೆಯೇ ಮಾತುಕತೆ ನಡೆಸಿದ್ದಾಗ ಚೇಷ್ಟೆಗೆಂಬಂತೆ ಅಲ್ಲಿ
ನೆರೆದಿರುವವರಲ್ಲಿ ವೈಕುಂಠಕ್ಕೆ ಹೋಗಲು ಅರ್ಹರು ಯಾರೆಂದು
ಕೇಳಿದರಂತೆ. ಆಗ ಕನಕದಾಸರು ‘ನಾನು ಹೋದರೆ ಹೋಗಬಹುದು’
ಎಂದು ಹೇಳಿದರೆನ್ನುತ್ತದೆ ಕಥೆ. ಇಲ್ಲಿ ‘ನಾನು’ ಎಂದರೆ ಅಹಂಭಾವ.
ನಾನು ಹೋದರೆ ಎಂದರೆ, ಅಹಂಭಾವ ನಮ್ಮನ್ನು ಬಿಟ್ಟುಹೋದರೆ
ನಾವು ಪರಮಾತ್ಮನೆಡೆಗೆ ನಡೆಯಬಹುದೆಂದು ದಾಸರಮಾತಿನ ಅರ್ಥ.
ಆ ಭಾವನೆಗೆ ಒತ್ತಾಸೆಯಾಗುವ ಗೀತೆ ಇದು.
ನಾನು ನೋಡಿದ್ದು, ಕೇಳಿದ್ದು, ಸವಿದದ್ದು, ಅನುಭಸಿದ್ದು - ಅದು
ಶ್ಲಾಘನೀಯವಾದದ್ದಾಗಲೀ, ಆಕ್ಷೇಪಾರ್ಹವಾದದ್ದಾಗಲಿ - ಎಲ್ಲವೂ
ನೀ ಕೊಟ್ಟ ಇಂದ್ರಿಯಗಳಮೂಲಕ. ಅವುಗಳನ್ನು ಕೊಟ್ಟವನು ನೀನು,
ಅವುಗಳಿಂದ ಕಾರ್ಯ ನಡೆಸುವವನು ನೀನು ಮತ್ತು ಅವುಗಳ
ಕಾರ್ಯದ ಫಲವನ್ನು ಅನುಭವಿಸುವವನೂ ನೀನೆ. ನನ್ನದು
ಎಂಬುದು ಏನೂ ಇಲ್ಲ - ಎನ್ನುವುದು ಈ ಗೀತೆಯ ಸಾರಾಂಶ.
ನಾನು ಎನ್ನುವುದರಿಂದ ನನ್ನದು ಅಲ್ಲವೇ ? ನನ್ನದು ಏನೂ
ಇಲ್ಲವೆನ್ನುವುದರ ಮುಂದಿನ ಹೆಜ್ಜೆ ‘ನಾನು’ ಎಂಬುದೇ ಇಲ್ಲ
ಎನ್ನುವುದು! ಇದನ್ನೇ ಅಷ್ಟಾಂಗ ಯೋಗದಲ್ಲಿ ‘ಸಮಾಧಿ’ ಎಂದರು
ಮತ್ತು ಇದನ್ನೇ ನವವಿಧ ಭಕ್ತಿಯ ಕೊನೆಯಮೆಟ್ಟಲಾಗಿ
‘ಆತ್ಮ ನಿವೇದನೆ’ ಎಂದರು.
ಭೀಷ್ಮಾಚಾರ್ಯರು ವಿಷ್ಣುಸಹಸ್ರನಾಮದಲ್ಲಿ ಹೇಳಿದ್ದೂ ಇದೇ. ಅಲ್ಲಿ
ಅವರು ಪರಮಾತ್ಮನನ್ನು ‘ಅಕ್ಷರ’ ಎಂದು ಕರೆದಿದ್ದಾರೆ. ಅಕ್ಷ ಎಂದರೆ
ಇಂದ್ರಿಯಗಳು. ‘ರ’ ಎನ್ನುವುದು ‘ರಮಯತಿ’ ಎಂಬ ಸಂಸ್ಕೃತ
ಪದದ ಸಂಕ್ಷಿಪ್ತ ರೂಪ. ರಮಯತಿ ಎಂದರೆ ಅನುಭವಿಸುವುದು
ಅಥವಾ ಸುಖ ಪಡುವುದು ಎಂದು ಅರ್ಥ. ಎಲ್ಲ ಜೀವಿಗಳ ಎಲ್ಲ
ಇಂದ್ರಿಯಗಳಿಂದಲೂ ಅನುಭವಿಸುವವನು ಅಕ್ಷರ. ‘ಅಕ್ಷೇಷು,
ಜೀವಾತ್ಮಾನಾಮ್ ಇಂದ್ರಿಯೇಷು - ರಮತಃ - ಇತಿ ಅಕ್ಷರಂ’
ಎನ್ನುತ್ತದೆ ಛಾಂದೋಗ್ಯೋಪನಿಷತ್ತು. ಆ ನಾಮಕ್ಕೆ ಅನುಗುಣವಾಗುವಂತೆ,
ತಮ್ಮ ಈ ಗೀತೆಯ ಮೂಲಕ - ಇಂದ್ರಿಯ, ಕಾರ್ಯ,
ಅನುಭವ ಎಲ್ಲವೂ ನಿನ್ನದು ಸ್ವಾಮೀ, ನನ್ನದು ಎಂಬುದಿಲ್ಲ -
ಎಂದು ಪರಮಾತ್ಮನಲ್ಲಿ ಕನಕದಾಸರು ನಿವೇದಿಸಿಕೊಳ್ಳುತ್ತಿದ್ದಾರೆ
ಎಂದು ತಿಳಿಸುತ್ತಾ ‘ಕೃಷ್ಣಾರ್ಪಣ’ ಎನ್ನುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ