ಮಂಗಳವಾರ, ಮಾರ್ಚ್ 15, 2022

ದೇವರಪೂಜೆ ಮತ್ತು ನನ್ನ ಕಸದಡಬ್ಬ



ಪ್ರತಿದಿನ ಬೆಳಗ್ಗೆ ಸ್ನಾನಮಾಡಿದ ನಂತರ ದೇವರ ಮುಂದೆ ದೀಪಹಚ್ಚಿ, ನಮ್ಮ ಆವರಣದಲ್ಲಿ

ಬೆಳೆದ ಹೂವೋ, ತುಳಸಿಯೋ ಬಿಡಿಸಿ ತಂದು ದೇವರ ಮುಂದಿಟ್ಟು, ಎರಡು ಸ್ತೋತ್ರಹೇಳಿ

ಅಡ್ಡ ಬೀಳುವುದು ಅನೇಕ ದಶಕ ಗಳಿಂದ ಬಂದ ಅಭ್ಯಾಸ. ಈ ಅಭ್ಯಾಸ ಯಾವಾಗ

ಸುರುವಾಯಿತೋ ನೆನಪಿಲ್ಲ. ಬಹಳ ಸಣ್ಣ ವಯಸ್ಸಿನಲ್ಲೇ ನಮ್ಮಮ್ಮ ಅಭ್ಯಾಸ ಮಾಡಿಸಿರಬೇಕು.

ಇವನ್ನೆಲ್ಲಾ ಮತ್ಯಾರುತಾನೆ ಹೇಳಿ ಮಾಡಿಸುತ್ತಾರೆ ? ಈಗ ಅಮ್ಮ ಇಲ್ಲ. ಆದರೆ ಅಭ್ಯಾಸ ಉಳಿದಿದೆ. 


ವಾರಕ್ಕೊಮ್ಮೆಯೋ ಎರಡುಬಾರಿಯೋ ಇದು ಕೊಂಚ ವಿಸ್ತಾರಗೊಂಡು ‘ಪೂಜೆ’

ಎನಿಸಿಕೊಳ್ಳುವುದುಂಟು. “ಕಂಚು ಹಿತ್ತಾಳೆಯ ಪ್ರತಿಮೆಯನೆರಹಿ, ಮಿಂಚಲೆನುತೆ ಬಲು

ಜ್ಯೋತಿಗಳನೆ ಹಚ್ಚಿ” ಮಾಡುವ ಘನಪೂಜೆಯೇನಲ್ಲ. ಸರಳವಾದ ಪೂಜೆಯೇ. ಆದರೂ ಅದು

ಸುಮಾರು ಅರ್ಧ- ಮುಕ್ಕಾಲು ಘಂಟೆಯ ಕಾರ್ಯಕ್ರಮವಾಗುತ್ತದೆ. ಪೂಜೆಯೆಂದು

ಹೆಸರಿಟ್ಟಮೇಲೆ ಅದರಲ್ಲಿ ಅಭಿಷೇಕ, ಅರ್ಚನೆ, ನೈವೇದ್ಯ ಮುಂತಾದುವು ಸೇರಿಕೊಳ್ಳುತ್ತವೆ.

ಮತ್ತು, ಇವೆಲ್ಲವೂ ಸರಾಗವಾಗಿ ನೆರವೇರಬೇಕಾದರೆ ಅದಕ್ಕೆ ಬೇಕಾದ ಪರಿಕರ, ಪದಾರ್ಥಗಳನ್ನು

ಪೂಜೆ ಪ್ರಾರಂಭಿಸುವ ಮೊದಲು ಹೊಂದಿಸಿ ಇಟ್ಟುಕೊಳ್ಳಬೇಕಾಗುತ್ತದೆ. 


ಬಹುಮಟ್ಟಿಗೆ ಪೂಜೆಯ ಕ್ರಮ ಹಾಗೂ ಅದಕ್ಕೆ ಬೇಕಾದ ತಯಾರಿ ಅಭ್ಯಾಸವಾಗಿದೆಯಾದರೂ

ಒಮ್ಮೊಮ್ಮೆ ಏನನ್ನಾದರೂ ಮರೆಯುವುದು, ಅಥವಾ ಕ್ರಮದಲ್ಲಿ ತಪ್ಪಾಗುವುದು ಉಂಟು.

ಅದನ್ನು ನಿವಾರಿಸಿಕೊಳ್ಳಲೆಂದು ನಾನು ಸಂಕ್ಷಿಪ್ತವಾಗಿ ಪೂಜೆಯಕ್ರಮ ಹಾಗೂ ಅದಕ್ಕೆ

ಬೇಕಾದ ಪದಾರ್ಥ ಪರಿಕರಗಳನ್ನು ಒಂದು ಪಟ್ಟಿಯಂತೆ ಬರೆದು ಪೂಜೆಗೆ ಕೂಡುವ ಜಾಗದಲ್ಲಿ

ಗೋಡೆಗೆ ನೇತುಹಾಕಿದ್ದೇನೆ.  ನಾನು ಸಾಮಾನ್ಯವಾಗಿ ಮರೆಯುತ್ತಿದ್ದ ಮೂರು ವಿಷಯಗಳನ್ನು

ಪಟ್ಟಿಯ ತಲೆಭಾಗದಲ್ಲಿ, ಕೆಂಪುಶಾಯಿಯಲ್ಲಿ ಬರೆದಿದ್ದೇನೆ. “ಮಂಗಳಾರತಿಗೆ - ನೆನಸಿದ ಬತ್ತಿ,

ತೀರ್ಥಕ್ಕೆ - ಕೇಸರಿ, ಕರ್ಪೂರ, ಮತ್ತು ನೈವೇದ್ಯಕ್ಕೆ ಪದಾರ್ಥ”. ಇದರಲ್ಲಿ ವಿಶೇಷ ಏನೂ ಇಲ್ಲ.

ಅವಶ್ಯಕವಾಗಿ ಬೇಕಾದ ವಿಷಯಗಳನ್ನು ಮರೆಯಬಾರದೆಂದು ಅನೇಕರು ಈ ರೀತಿ ಪಟ್ಟಿಗಳನ್ನು

ಬರೆದು ಇಟ್ಟಿರುತ್ತಾರೆ. ಇದು ನನ್ನ ಪೂಜೆಯ ಪಟ್ಟಿಯ ಕಥೆ. ಇನ್ನು ಕಸದ ಡಬ್ಬಕ್ಕೆ ಬರೋಣ.

ನನಗೆ ಬುದ್ಧಿ ತಿಳಿದ ಕಾಲದಿಂದ, ನಾವಿದ್ದ ಮನೆಯ ಸಮೀಪ ಮುನಿಸಿಪಾಲಿಟಿಯ ಕಸದ

ತೊಟ್ಟಿಯಿದ್ದ ನೆನಪಿದೆ. ದಿನವೆಲ್ಲಾ ಕೂಡಿಸಿಟ್ಟ ತಾಜ್ಯಪದಾರ್ಥಗಳನ್ನು ಮರುದಿನ ಮುಂಜಾನೆ

ಸಮೀಪದ ಕಸದ ತೊಟ್ಟಿಗೆ ಸುರಿದು ಬರುತ್ತಿದ್ದೆವು. ಎರಡುದಿನಕ್ಕೊಮ್ಮೆ ಮುನಿಸಿಪಾಲಿಟಿ ಲಾರಿ

ಬಂದು ತೊಟ್ಟಿಯನ್ನು ಖಾಲಿಮಾಡಿ ಕಸವನ್ನು ಕೊಂಡೊಯ್ಯುತ್ತಿತ್ತು. ಒಮ್ಮೊಮ್ಮೆ ಅನೇಕ 

ದಿನಗಳಾದರೂ ಲಾರಿ ಬರುತ್ತಿದ್ದಿಲ್ಲ. ತೊಟ್ಟಿ ತುಂಬಿಕೊಂಡು ಕಸ ಹೊರಸುರಿದು ರಸ್ತೆಯಮೇಲೆ

ಹರಡಿರುತ್ತಿತ್ತು. ನಂತರ ಯಾವಾಗಲೋ ಲಾರಿಬಂದು ಸುತ್ತ ಬಿದ್ದಿದ್ದ ಕಸ, ತೊಟ್ಟಿಯೊಳಗಣ

ಕಸ ಎಲ್ಲವನ್ನೂ ಹೊತ್ತೊಯ್ಯುತ್ತಿತ್ತು. 


ನನ್ನ ಜೀವನದ ಅರ್ಧ ಶತಮಾನ ಹೀಗೆ ಕಳೆದಿದ್ದಾಗ, ನಮ್ಮ ಪ್ರಧಾನ ಮಂತ್ರಿಗಳು ದೇಶವನ್ನು

ಸ್ವಚ್ಛಗೊಳಿಸುವ ಘೋಷಣೆ ಮಾಡಿದರು. ಸುರಿದು ಬಿದ್ದಿರುತ್ತಿದ್ದ ಕಸದಕಡೆ ಜನರ ಗಮನ ಹರಿದು,

ಬದಲಾವಣೆಗಳಾಗಿ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ಮನೆ ಬಾಗಿಲಿನಿಂದ ಕೊಂಡೊಯ್ಯುವ

ವ್ಯವಸ್ಥೆ ಶುರುವಾಯಿತು. ಪ್ರಧಾನ ಮಂತ್ರಿಗಳೇನೋ ಪಾಪ ಜನರಿಗೂ ದೇಶ ಸ್ವಚ್ಛವಾಗಿರುವುದು

ಇಷ್ಟವಾದೀತೇನೋ ಎಂದುಕೊಂಡು ದೇಶವನ್ನು ಶುಚಿಗೊಳಿಸುವ ಘೋಷಣೆ ಮಾಡಿಬಿಟ್ಟರು. ಆದರೆ

ಬಹುತೇಕ ಜನರಿಗೆ ಸುತ್ತಲೂ ಕಸ ಕೊಳಚೆ ಹರಡಿಕೊಂಡಿರುವುದೇ ಮುದವೆನಿಸುತ್ತದೇನೋ!

ಅವರು ಕಸದ ಜವಾಬ್ದಾರಿಯನ್ನು ಪ್ರಧಾನಿಗಳಿಗೆ ಬಿಟ್ಟು ತಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ

ತಮ್ಮ ಪಾಡಿಗೆ ಸುತ್ತ ಮುತ್ತ ಕಸ ಚೆಲ್ಲಾಡಿಕೊಂಡು ಸಂತೋಷವಾಗಿದ್ದಾರೆ ! 


ಅದೇನೇ ಇರಲಿ. ನನ್ನ ಕಸದ ಡಬ್ಬಕ್ಕೆ ಬರುತ್ತೇನೆ. ಸಾಮಾನ್ಯವಾಗಿ ನಾನು ಪೂಜೆ ಮುಗಿಸಿದ ಕೊಂಚ

ಹೊತ್ತಿನಮೇಲೆ ನಮ್ಮ ಮನೆಗಳಿಂದ ತಾಜ್ಯವಸ್ತುಗಳನ್ನು ಕೊಂಡೊಯ್ಯುವ ಮುನಿಸಿಪಾಲಿಟಿಯ ಆಳು

ಮನೆಯಮುಂದೆ ಬಂದು ಸೀಟಿ ಊದುತ್ತಿದ್ದ. ನಾವು ಎರಡುಮೂರುದಿನದಿಂದ  ಕೂಡಿಟ್ಟಿರುತ್ತಿದ್ದ

ತಾಜ್ಯಪದಾರ್ಥಗಳ ಡಬ್ಬಗಳನ್ನು  ಆ ಹೊತ್ತಿಗೆ ಮನೆಯ ಮುಂದೆ ಇಟ್ಟಿರಬೇಕಾದದ್ದು ನಮ್ಮ ಜವಾಬ್ದಾರಿ.

ಅವನು ಬರುವ ಹೊತ್ತಿಗೆ ಡಬ್ಬ ಇಲ್ಲದಿದ್ದರೆ ಅವನು ಮುಂದೆ ಹೊರಟುಬಿಡುತ್ತಿದ್ದ. ಕಸತುಂಬಿದ ಡಬ್ಬ

ಹಾಗೆಯೇ ಉಳಿಯುತ್ತಿತ್ತು. ಆದ್ದರಿಂದ ನನಗೆ ಪೂಜೆಮುಗಿಸಿದ ತಕ್ಷಣದ ಕೆಲಸವೆಂದರೆ ಕಸದ ಡಬ್ಬಗಳನ್ನು

ಹೊರಗಿಡುವುದು. ಈ ಎರಡೂ ಕೆಲಸಗಳನ್ನು ನಾನು ಸಾಂಗವಾಗಿ ಮಾಡುತ್ತಾ ಬಂದಿದ್ದೆ. 


ಮುನಿಸಿಪಾಲಿಟಿ ವ್ಯವಸ್ಥೆ ಬದಲಾಯಿತೋ, ಕಸ ಒಯ್ಯುವ ಮನುಷ್ಯನ ವೇಳೆ ಹೆಚ್ಚುಕಮ್ಮಿಯಾಯಿತೋ

ತಿಳಿಯದು. ಕಸ ಒಯ್ಯುವ ಸಮಯ ಬದಲಾಯಿತು. ಒಂದುಬಾರಿ ನನ್ನ ಮಂಗಳಾರತಿಯ ಸಮಯದಲ್ಲಿ

ಹೊರಗಿನಿಂದ ಕಸದವನ ಸೀಟಿ ಕೇಳಿಸಿತು. ‘ರಿಫ್ಲೆಕ್ಸ್ ಆಕ್ಷನ್’ ಎನ್ನುತ್ತಾರಲ್ಲ, ಆ ರೀತಿ, ತಕ್ಷಣ

ಮಂಗಳಾರತಿಯ ತಟ್ಟೆಯನ್ನು ನೆಲಕ್ಕೆ ಕುಕ್ಕಿ ಕಸದಡಬ್ಬ ಹೊರಗಿಡಲು ಓಡಿದ್ದೆ ! ದೇವರು ಎಲ್ಲ ತಿಳಿದವನೂ,

ದಯಾಮಯನೂ ಆದ್ದರಿಂದ ಬಹುಶಃ ಅವನು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನಿಂದಾದ 

ಅಪಚಾರವನ್ನು ಕ್ಷಮಿಸಿರಬಹುದು ! ಆದರೆ ಆ ರೀತಿಯ ಅಪಚಾರವಾಗುವುದು ನನ್ನ ಮನಸ್ಸಿಗೆ

ಹಿಡಿಸಲಿಲ್ಲವಾದ್ದರಿಂದ  ಪೂಜೆ ಮಾಡುವ ದಿನಗಳಲ್ಲಿ, ಪೂಜೆಗೆಂದು ಕೂಡುವ  ಮುಂಚೆಯೇ ಕಸದ ಡಬ್ಬಗಳನ್ನು

ಹೊರಗಿಡುವ ಅಭ್ಯಾಸ ಮಾಡಿಕೊಂಡೆ. 


ಆದರೂ ಒಂದೊಂದು ದಿನ ಆ ಕೆಲಸ ಮರೆತು ಹೋಗಿ ಪೂಜೆಯ ಮಧ್ಯದಲ್ಲಿ ಕಸದವನ ಸೀಟಿ ಕೇಳುತ್ತಿತ್ತು.

ಪೂಜೆ ಬಿಟ್ಟು ಏಳುವುದೋ ಅಥವಾ ಮತ್ತೆರಡುದಿನ ಕಸವನ್ನು ಮನೆಯಲ್ಲಿ ಉಳಿಸಿಕೊಳ್ಳುವುದೋ

ಎಂಬ ದ್ವಂದ್ವ ಉಂಟಾಗುತ್ತಿತ್ತು. ಒಮ್ಮೆ, ಈ ದ್ವಂದ್ವದ ಕಿತ್ತಾಟದಲ್ಲಿ ಕಸದ ಡಬ್ಬವೇ ಗೆದ್ದು, ಪೂಜೆಬಿಟ್ಟು

ಡಬ್ಬ ಹಿಡಿದು ಹೊರಗೋಡಿದರೂ, ಅದು ತಡವಾಗಿ, ಕಸದವನು ಮುಂದೆ ಹೊರಟು ಹೋಗಿದ್ದ. ನನ್ನ ಪರಿಸ್ಥಿತಿ

ಇದೂ  ಕೆಟ್ಟಿತು, ಅದೂ ಕೆಟ್ಟಿತು ಎಂಬಂತಾಗಿತ್ತು. ಕೆಲವು ಬಾರಿ ಈ ರೀತಿ ತೊಂದರೆ ಆದಮೇಲೆ ಅದನ್ನು

ತಪ್ಪಿಸುವ ಉಪಾಯ ಹೊಳೆಯಿತು. ನನ್ನ ಪೂಜಾಕ್ರಮದ ಪಟ್ಟಿಯ ತಲೆಭಾಗದಲ್ಲಿ, ಮಂಗಳಾರತಿ, ತೀರ್ಥ,

ನೈವೇದ್ಯದ  ಜತೆಗೆ ಕೆಂಪುಶಾಯಿಯಲ್ಲಿ “ಕಸದ ಡಬ್ಬ” ಎಂದು ಬರೆದಿಟ್ಟೆ. ಕಸದ ಡಬ್ಬದ ತೊಂದರೆ

ನಿವಾರಣೆಯಾಗಿ ಪೂಜೆ ಸರಾಗವಾಯಿತು.  


ಮೊನ್ನೆ ಅದೇಕೋ ನನ್ನ ಪತ್ನಿಯ ಗಮನ ನನ್ನ ಪೂಜಾ ಕ್ರಮದ ಪಟ್ಟಿಯೆಡೆಗೆ ಹೋಯಿತು. ಬಹುಶಃ ನನ್ನ

ಪಟ್ಟಿಯ ಜತೆಯಲ್ಲಿ ಗೋಡೆಯ ಮೇಲೆ ನೇತಾಡುತ್ತಿದ್ದ ಪಂಚಾಂಗವನ್ನು ತೆಗೆದುಕೊಳ್ಳಲು ಹೋಗಿರಬೇಕು.

“ಏನ್ರೀ ಇದು ? ನಿಮ್ಮ ಪೂಜೆಯ ಪಟ್ಟಿಯಲ್ಲಿ ಕಸದ ಡಬ್ಬ ಏಕೆ ಬಂತು?” ಎಂಬ ಪ್ರಶ್ನೆಗೆ ಉತ್ತರವಾಗಿ

ಮೇಲೆ ಬರೆದಿರುವುದನ್ನು ವಿವರಿಸಿದೆ. “ಅದೇನು ವಿಚಿತ್ರದ ಮನುಷ್ಯರೋ! ಎಲ್ಲದರಲ್ಲೂ ನಿಮ್ಮದೇ

ಒಂದು ಎಡವಟ್ಟು ರೀತಿ. ನೋಡಿದವರು ಯಾರಾದರೂ ಏನು ತಿಳಿದಾರು? ಹಾಗೇಕೆ ಬರೆದಿದ್ದೀರಿ

ಎಂಬುದನ್ನೂ  ಬರೆದಿಡಿ. ಇಲ್ಲದಿದ್ದರೆ  ನಿಮ್ಮ ಮುಂದಿನ ಪೀಳಿಗೆಗೆ, ನಿಮ್ಮ ಕಸಾದ ಡಬ್ಬ, ಯಜ್ಞಕ್ಕೆ ಕಟ್ಟುವ

ಕರಿಯ ಬೆಕ್ಕಾದೀತು” ಎಂಬ ಟೀಕೆ ಬಂದಿತು.


ಯಾರೋ ಯಜ್ಞಮಾಡುವವರು ಯಜ್ಞಕ್ಕೆ ಮುಂಚೆ ಕಂಬಕ್ಕೆ ಕಟ್ಟುತ್ತಿದ್ದ ಬೆಕ್ಕಿನ ಕಥೆ ಗೊತ್ತಲ್ಲವೇ? ನಿತ್ಯ

ಯಜ್ಞಕಾರ್ಯ ಮಾಡುತ್ತಿದ್ದ ಗುರು ಒಬ್ಬನ ಬಳಿ ಒಂದು ಕರಿಯ ಬೆಕ್ಕಿತ್ತಂತೆ. ಅದೇಕೋ ಅದರ ಮೇಲೆ

ಅವನಿಗೆ ಅತಿ ಪ್ರೀತಿ. ಅವನು ಯಜ್ಞಮಾಡುವಾಗ ಕೂಡ ಅದು ಅವನ ಸುತ್ತಮುತ್ತ ಸುಳಿದಾಡಿಕೊಂಡಿದ್ದು,

ಯಾವುದೋ ಕ್ಷಣದಲ್ಲಿ ಮೈಮೇಲೆ ಏರುವುದು, ಪದಾರ್ಥಗಳನ್ನು ಬೀಳಿಸಿವುದು ಮುಂತಾಗಿ ತಂಟೆ

ಮಾಡುತ್ತಿತ್ತಂತೆ. ಅವನಿಗೆ ಅದನ್ನು ದಂಡಿಸಿ ಬುದ್ಧಿಕಲಿಸುವ ಮನಸ್ಸಿರಲಿಲ್ಲ. ಆದ್ದರಿಂದ ತಾನು ಯಜ್ಞಕ್ಕೆ

ತೊಡಗುವ ಮುನ್ನ ಅದನ್ನು  ಬದಿಯಲ್ಲಿ ಒಂದು ಕಂಬಕ್ಕೆ ಕಟ್ಟಿಹಾಕಬೇಕೆಂದು ಶಿಷ್ಯರಿಗೆ ಸೂಚಿಸಿದ್ದನಂತೆ.

ಹಾಗಾಗಿ ಬೆಕ್ಕನ್ನು ಕಂಬಕ್ಕೆ ಕಟ್ಟುವುದು ಯಜ್ಞಕ್ಕೆ ಸಂಭಂದಪಟ್ಟ ಒಂದು ಕಾರ್ಯವಾಗಿ ಹೋಯಿತು.

ಅವನ ಕಾಲದ ನಂತರ ಬಂದ ಶಿಷ್ಯರಿಗೆ ಕಾರ್ಯದ ಹಿಂದಿನ ಉದ್ದೇಶ್ಯ ತಿಳಿದಿರಲಿಲ್ಲ. ಹಾಗಾಗಿ ಮುಂದಿನ

ಪೀಳಿಗೆಯ ಯಾಜ್ಞಿಕರು ಬೆಕ್ಕು ಸಾಕಿಲ್ಲದಿದ್ದರೂ ಯಜ್ಞಮಾಡುವ ಮುಂಚೆ ಪ್ರಯಾಸಪಟ್ಟು ಊರೆಲ್ಲಾ ಹುಡುಕಿ

ಒಂದು ಕರಿಯ ಬೆಕ್ಕನ್ನು ತಂದು ಪಕ್ಕದಲ್ಲಿ ಕಟ್ಟಿ ಹಾಕಿಕೊಳ್ಳುತ್ತಿದ್ದರಂತೆ !  


ನನ್ನ ಮುಂದಿನ ಪೀಳಿಗೆಯವರೇನಾದರೂ ಪೂಜೆ ಮಾಡುವ ಪದ್ಧತಿ ಯನ್ನು ಉಳಿಸಿಕೊಂಡು ಬಂದರೆ,

ನನ್ನ ಪೂಜೆಯ ಪಟ್ಟಿಯನ್ನು ಅನುಸರಿಸಿದರೆ, ಪೂಜೆಗೆ ಮುಂಚೆ ಒಂದು ಕಸದಡಬ್ಬವನ್ನು ತಂದು

ಬದಿಯಲ್ಲಿ ಇರಿಸಿಕೊಳ್ಳುತ್ತಾರೇನೋ !!  




ಮಂಗಳವಾರ, ಏಪ್ರಿಲ್ 20, 2021

ಬೋರಿ ಸೇತುವೆಯ ಸನಿಹದಲ್ಲಿ ಪಕ್ಷಿ ಸಮೂಹ


 



ಪೋಂಡಾದಿಂದ ಮಡಗಾಂವ್ ಗೆ ಹೋಗುವ ಹಾದಿಯಲ್ಲಿ ಜುವಾರಿ ನದಿಯ ಸೇತುವೆಯನ್ನು ದಾಟಿದ

ಕೂಡಲೇ ಎಡಬದಿಯಲ್ಲಿ, ವಿಶಾಲವಾದ, ಹಿನ್ನೀರು ತುಂಬಿದ ಜವುಗುಪ್ರದೇಶ ಸಿಗುತ್ತದೆ. ಯಾವುದೇ

ಸಮಯದಲ್ಲಿ, ಅಲ್ಲಿ ಹಲವಾರು ನೀರಹಕ್ಕಿಗಳು ಕಾಣಬರುತ್ತವೆ. ಈಗ ಒಂದೆರಡು ತಿಂಗಳುಗಳಿಂದ

ಆ ಜಾಗದಲ್ಲಿ ವಲಸೆ ಬಂದಿರುವ  ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಕಾಣುತ್ತಿವೆ. ಆ ರಸ್ತೆಯಲ್ಲಿ

ಹೋಗಿಬರುವಾಗೆಲ್ಲ ಅದನ್ನು ನೋಡಿ ಸಂತೋಷಪಡುತ್ತಿದ್ದೆನಾದರೂ ವಿರಾಮವಾಗಿ ನಿಂತು

ಅವುಗಳನ್ನು ನೋಡುವ ವ್ಯವಧಾನವಾಗಿರಲಿಲ್ಲ. ನಿನ್ನೆಯ ದಿವಸ ಮಧ್ಯಾಹ್ನ  ಬಿಸಿಲನ್ನು ಲೆಕ್ಕಿಸದೆ,

ಆ ಹಕ್ಕಿಗಳನ್ನು ನೋಡಲೋಸುಗವೇ ಅಲ್ಲಿಗೆ ಹೋಗಿ, ಒಂದೂವರೆ ಘಂಟೆಯಕಾಲ  ಸುತ್ತಾಡಿ,

ಸಾಧ್ಯವಾದ ಚಿತ್ರಗಳನ್ನು ತೆಗೆದುಕೊಂಡು ಬಂದೆವು. 


ಹತ್ತಿರ ಹೋಗಲು ಯಾರದೋ ಖಾಸಗಿ ಜಮೀನಿನ ಮೂಲಕ ಹೋಗುವುದಕ್ಕೆ ಕೊಂಚ

ಹಿಂದೇಟಾಯಿತಾದರೂ ಅಲ್ಲೆಲ್ಲೂ ಜಾಗದ ಯಜಮಾನರು ಕಾಣಲಿಲ್ಲವಾದ್ದರಿಂದ ಅವರ

ಅಭ್ಯಂತರ ಇಲ್ಲವೆಂದು ಭಾವಿಸಿಕೊಂಡು ನುಗ್ಗಿದೆವು.   ಆಶ್ಚರ್ಯವೆಂದರೆ ಆ ಪ್ರದೇಶದ

ಮಧ್ಯಸಾಗುವ ಸುಮಾರು ಒಂದೂವರೆ ಕಿಲೋಮೀಟರಿನಷ್ಟು ಉದ್ದದ ಕಾಲುಹಾದಿಯ

ಬದಿಗಳಲ್ಲಿ ನೀರಿನ ಬಾಟಲಿಗಳಾಗಲೀ, ಬಿಸುಟಿದ್ದ ಪ್ಲಾಸ್ಟಿಕ್ ಚೀಲಗಳಾಗಲೀ, ಬಿಯರ್

ಬಾಟಲಿಗಳಾಗಲೀ ಏನೂ ಇಲ್ಲದೇ ಹಾದಿ ನಿರ್ಮಲವಾಗಿತ್ತು ! ಅದನ್ನು ಗಮನಿಸಿದ 

ನನ್ನ ತಲೆ  ತಂಪಾಗಿ, ಬಿಸಿಲಿನ ಝಳ ನನಗೆ ತಿಳಿಯಲೇ  ಇಲ್ಲ!


ಸುಮಾರು ಹತ್ತುಹದಿನೈದು ವಿವಿಧ ಪ್ರಭೇದದ ಪಕ್ಷಿಗಳು ಕಾಣಸಿಕ್ಕಿದವು.  ನೀರಕಾಗೆ, ಕೊಕ್ಕರೆ,

ಮಿಂಚುಳ್ಳಿ, ಜಾಲಗಾರ ಹಕ್ಕಿ, ಗೋವಕ್ಕಿ, ಸಿಳ್ಳೆಬಾತು, ನೀರುಗೊರವ  ಇತ್ಯಾದಿ ಇತ್ಯಾದಿ. 

ಬಹುಮಟ್ಟಿಗೆ ಆಂಗ್ಲಭಾಷೆಯಲ್ಲಿ ಅವುಗಳ ಹೆಸರುಗಳು ತಿಳಿದಿತ್ತಾದರೂ ಅವುಗಳ ಕನ್ನಡ

ನಾಮಧೇಯವನ್ನು ತಿಳಿಯುವ ಕುತೂಹಲವಾಗಿ ಗೂಗಲ್ ಗುರೂಜಿಯವರೊಡನೆ ಒಂದು

ಘಂಟೆ ಕಳೆದೆ. ಅದರ ಫಲವಾಗಿ ಬಹುಪಾಲು ಹೆಸರುಗಳು ತಿಳಿದು ಕೌತುಕವೆನಿಸಿತು ! 


ನಾವು (ನಾನು ಮತ್ತು ನನ್ನ ಪುತ್ರ ಅಕ್ಷಯ್) ತೆಗೆದ ಕೆಲವು ಚಿತ್ರಗಳು, ಕನ್ನಡ, ಇಂಗ್ಲಿಷ್

ಎರಡೂ ಹೆಸರುಗಳೊಂದಿಗೆ ಇಲ್ಲಿ ಕೆಳಗಿವೆ. 



ಹಿನ್ನೀರಿನ ಬದಿಯಲ್ಲಿರುವ ಅದೃಷ್ಟಶಾಲಿಗಳೊಬ್ಬರ ನಿವಾಸ!


Greater Egret -  ಕೊಕ್ಕರೆ

ಬಕಪಕ್ಷಿ, ಸಾಮಾನ್ಯ ಬಕ - Paddy Bird


Blackwinged Stilt -  ನೀರುಗೊರವ  

Blackheaded Ibis -  ಬಿಳಿ ಕೆಂಬರಲು,

ನಾವು ಹತ್ತಿರಹೋದದ್ದರಿಂದ ಹಾರತೊಡಗಿದ ಕೊಕ್ಕರೆ ಸಮೂಹ - Greater egrets taking flight




Marsh Sandpiper-    ಜೌಗು ಗೊರವ
Purple Heron -  ಕಬ್ಬಾರೆಹಕ್ಕಿ, ಕೆನ್ನೀಲಿ ಬಕ,
Whistling Teal -  ಸಿಳ್ಳೆಬಾತು, 

ಚಿತ್ರ ತೆಗೆಯುವ ಉತ್ಸಾಹದಲ್ಲಿ ಕಾಲುಗಳು ಕೆಸರಿನಲ್ಲಿ ಸಿಕ್ಕಿಕೊಳ್ಳುವ ಮುನ್ನ ನಾನು





ಶುಕ್ರವಾರ, ಡಿಸೆಂಬರ್ 18, 2020

ಜೀವನ ಧರ್ಮ ಯೋಗ

 


ನಾನು ಪ್ರೈಮರಿ ಎರಡನೇ ತರಗತಿಯಲ್ಲಿದ್ದಾಗ ಭಗವದ್ಗೀತೆ ಎಂಬ ಹೆಸರು ಕೇಳಿದ್ದು. ನಮ್ಮ ಶಾಲೆಯಲ್ಲಿ

ಪ್ರತಿ ಶುಕ್ರವಾರ ಕೊನೆಯ ತರಗತಿಯ ಅವಧಿಯಲ್ಲಿ ಭಗವದ್ಗೀತಾ ಪಠಣ. ಎರಡನೇ ಅಧ್ಯಾಯದ

“ಸ್ಥಿತಪ್ರಗ್ನ್ಯಸ್ಯ ಕಾ ಭಾಷಾ” ದಿಂದ ಪ್ರಾರಂಭವಾಗಿ ಕೊನೆಯವರೆಗೆ. ನಮ್ಮಿಂದ ಎಂಟಾಣೆಯೋ ಒಂದು

ರುಪಾಯಿಯೋ ತಗೆದುಕೊಂಡು ಅಂಗೈಯಲ್ಲಿ ಹಿಡಿಸುವ ಒಂದು ಕೈಹೊತ್ತಿಗೆಯನ್ನು ಎಲ್ಲರಿಗೂ ಕೊಟ್ಟಿದ್ದರು.

ನಾನು ಮೂರನೆಯ ತರಗತಿಗೆ ಬರುವಹೊತ್ತಿಗೆ ಅಷ್ಟೂ ಶ್ಲೋಕಗಳು ಬಾಯಿಪಾಠವಾಗಿದ್ದವು. ಐದನೇ

ತರಗತಿಯಲ್ಲಿದ್ದಾಗ ಅದನ್ನು ಸ್ಫರ್ಧೆಯಲ್ಲಿ ಒಪ್ಪಿಸಿ ಒಂದು ಸ್ಟೀಲಿನ ಚಮಚವನ್ನು ತೃತೀಯ ಬಹುಮಾನವಾಗಿ

ಪಡೆದಿದ್ದೆ. ಇಂದಿಗೂ ಶ್ಲೋಕಗಳು ನೆನಪಿನಲ್ಲಿವೆ. ಆ ಶ್ಲೋಕಗಳ  ಅರ್ಥ ತಿಳಿದುಕೊಳ್ಳಬೇಕೆನಿಸಿದ್ದು ಶಾಲೆಯಿಂದ

ಹೊರಬಿದ್ದ ಮೂವತ್ತು ವರುಷಗಳ ನಂತರ. ತಿಳಿದಿದೆಯೆಂದು ಈಗಲೂ ಹೇಳಲಾರೆ.  


ಭಗವದ್ಗೀತೆಯ ಕೀರ್ತಿ ಬಹು ದೊಡ್ಡದು. ‘ಯದಾ  ಯದಾ  ಹಿ ಧರ್ಮಸ್ಯ’, ‘ಕರ್ಮಣ್ಯೇವಾಧಿಕಾರಸ್ತೇ’,

‘ನಹಿ ಜ್ಞಾನೇನ ಸದೃಶಂ’ ಮುಂತಾದ ಸಾಲುಗಳು ಎಲ್ಲರ ನಾಲಗೆಯಮೇಲೂ ಸುಳಿದಾಡುತ್ತಿರುತ್ತವೆ.

ಆದರೆ ಅದನ್ನು ಪೂರ್ತಿ ಓದಿ, ಅರ್ಥಮಾಡಿಕೊಂಡು, ಅನುಸರಿಸಲು ಸಾಧ್ಯವಾಗಿರುವುದು ಎಷ್ಟುಜನರಿಗೋ

ತಿಳಿಯದು. ನಾನು ಗೀತೆಯನ್ನು ಮೊದಲಿನಿಂದ ಕೊನೆಯವರೆಗೂ ಓದಬೇಕೆಂದು ಅನೇಕಬಾರಿ ಪ್ರಾರಂಭಮಾಡಿ

ಎರಡನೇ ಅಧ್ಯಾಯಕ್ಕೆ ಕೊನೆಮಾಡಿದ್ದೆ. ಈ ಬಾರಿ ಐದನೆಯ ಅಧ್ಯಾಯವನ್ನು ತಲುಪಿದ್ದೇನೆ. ಕೃಷ್ಣಪರಮಾತ್ಮ

ಏನು ಹೇಳುತ್ತಿದ್ದಾನೆಂದು ತಿಳಿದಂತೆ ಅನಿಸುತ್ತದೆ. ಆದರೆ ಏನೂ ತಿಳಿದಿಲ್ಲವೆಂಬುದು ನಿಜ. ಆತ ಹೇಳುತ್ತಿರುವುದೂ

ಹಾಗೆಯೇ. ಇಂಗ್ಲಿಷಿನಲ್ಲಿ ‘beating around the bush’ ಎನ್ನುತ್ತಾರಲ್ಲವೇ ? ಹಾಗೆ. 


ಮೂರನೆಯ ಅಧ್ಯಾಯದಿಂದಲೂ ಅರ್ಜುನ ಕೇಳುತ್ತಲೇ ಇದ್ದಾನೆ. “ಸ್ವಾಮೀ, ಕರ್ಮಮಾರ್ಗ ಒಳ್ಳೆಯದೋ,

ಜ್ಞಾನಮಾರ್ಗವೋ? ಎರಡರಲ್ಲಿ ಒಂದನ್ನು ಖಚಿತವಾಗಿ ಹೇಳು” ಎಂದು. ಭಗವಂತ  ಅದೂ ಇದೂ ಇಪ್ಪತ್ತೆಂಟು

ಹೇಳುತ್ತಿದ್ದಾನೆಯೇ ಹೊರತು, ಖಚಿತವಾದ ಉತ್ತರ ಕೊಟ್ಟಿಲ್ಲ. ಇಂಥ ಸಮಯದಲ್ಲಿ ನಮಗೆ ಬೇಕಾಗುವುದು

ಗೀತೆಯ ಅಕ್ಷರಗಳ ಹಿಂದಿನ ಭಾವವನ್ನು ತಾವು ತಿಳಿದು, ನಮಗೆ ತಿಳಿಸಿ ಹೇಳಬಲ್ಲವರ ಸಹಾಯ. ಅವರ ಜ್ಞಾನ.

ಪರಿಣಿತಿ. ಹೀಗೆ ಹೇಳುವವರೂ, ಹೇಳಿರುವವರೂ ಅನೇಕರಿದ್ದಾರೆ. ಅವರ ನಂಬಿಕೆ, ತಿಳುವಳಿಕೆ, ವಿಚಾರಗಳಿಗೆ

ತಕ್ಕಂತೆ. ಆದರೆ ಹೇಳುವವರಲ್ಲಿ ನಮಗೆ ವಿಶ್ವಾಸ ಬೇಕಲ್ಲವೇ ? ಹಾಗೆ ನನಗೆ ವಿಶ್ವಾಸವಿರುವುದು ನಮ್ಮ ಡಿವಿಜಿ

ಯವರಲ್ಲಿ. ಆದ್ದರಿಂದಲೇ ಮತ್ತೊಮ್ಮೆ ‘ಜೀವನ ಧರ್ಮಯೋಗ’ದ ಪಠಣವೂ ನಡೆದಿದೆ.  


ಕೃಷ್ಣಪರಮಾತ್ಮನ ಮಾತುಗಳನ್ನು  ಡಿವಿಜಿಯವರು ಅರ್ಥಮಾಡಿಕೊಂಡು, ಅದರ ಬಗೆಗೆ ಚಿಂತನೆಮಾಡಿ ತಮ್ಮ

ವಿಚಾರವನ್ನು ನಮಗೆ ತಲುಪಿಸಿದ್ದಾರೆ. ಅರ್ಜುನನ ಪ್ರಶ್ನೆಗೆ ಡಿವಿಜಿಯವರ ಉತ್ತರ, “ಕರ್ಮ, ಜ್ಞಾನ ಗಳು ಎರಡು

ಬೇರೆ ಬೇರೆ ಮಾರ್ಗಗಳಲ್ಲ. ಮೊದಲಿಗೆ ಕರ್ಮ ಜ್ಞಾನಕ್ಕೆ ಸಾಧನವಾಗಿರುತ್ತದೆ. ನಂತರ ಅದು ಜ್ಞಾನದ

ಫಲಿತಾಂಶವಾಗುತ್ತದೆ.  ಎರಡರ ಗುರಿಯೂ ಒಂದೇ”. ನನಗೆ ಕೊಂಚ ಸಮಾಧಾನವಾಯಿತು. ಸರಿ, ಹಾಗಾದರೆ 

ಯಾವುದನ್ನು ನಾವು ‘ಕರ್ಮ’ ಎನ್ನಬೇಕು? ಅದು ಮುಂದಿನ ಪ್ರಶ್ನೆ ! 


“ನಮ್ಮ ಪೂರ್ವಿಕರ ದೃಷ್ಟಿಯಲ್ಲಿ ಭಗವದ್ಗೀತೆ ಮೋಕ್ಷಶಾಸ್ತ್ರ. ಅವರ ಮನಸ್ಸು ಪಾರತ್ರಿಕ ಗತಿಯನ್ನು ಹೆಚ್ಚಾಗಿ

ಚಿಂತಿಸುತ್ತಿತ್ತು. ಇಂದಿನ ನಾವು ಹೊರಬೇಕಾಗಿರುವ ಹೊರೆ ಇಹ ಜೀವನದ್ದು. ಅನ್ನವಸ್ತ್ರ ಸಂಪಾದನೆ,

ಉದ್ಯೋಗಾವಕಾಶ, ಹೇಳೋಣ ಕೇಳೋಣಗಳು, ಸಾಲಸುಲಿಗೆಗಳು, ಎಡೆಬಿಡದ ದುಡಿತ, ಬಿಡುವಿಲ್ಲದ

ಹಾರಾಟ, ಆಚಾರ ಕ್ಲೇಶ, ವಿಮತ ಘರ್ಷಣೆ, ವರ್ಣ ಸಾಂಕರ್ಯ - ಈ ಅನಂತ ಚಿಂತನೆಗಳು ನಮ್ಮ ಪಾಡು.

ಅದರ ನಡುವೆ ಮೋಕ್ಷವಿಚಾರಕ್ಕೆ ಅವಧಾನವೆಲ್ಲಿ ? ಅಂದಂದಿನ ಸಂಸಾರಭಾರ ಅಂದಂದಿಗೆ ಸಾಕಾಗಿದೆ.

ಇಂಥಾದ್ದರಲ್ಲಿ ಗೀತೆ ನಮ್ಮ ಸಹಾಯಕ್ಕೆ ಬಂದಿತೋ ? ಹಾಗಾಗುವುದಾದರೆ ಅದಕ್ಕೊಂದು ಬೆಲೆಯುಂಟು.

ನಾವು ನಿರೀಕ್ಷಿಸುವುದು ಈ ಉಪಕಾರವನ್ನು.” - ಇದು ಜೀವನ ಧರ್ಮಯೋಗದ ಶುರುವಿನಲ್ಲಿ ಡಿವಿಜಿಯವರ

ಮಾತು. 


ಅವರ ಈ ಬರಹದಲ್ಲಿ ನಮ್ಮ ಜೀವನಕ್ಕೆ ಸಹಾಯಕವಾದ, ನೆಮ್ಮದಿ ನೀಡುವಂಥ ಮಾತುಗಳನ್ನು ನಮಗೆ

ನೀಡಿದ್ದಾರೆ. ಡಿವಿಜಿಯವರು ಹೇಳುವಂತೆ ಗೀತೆ, ಅವರವರ ಯೋಗ್ಯತೆ, ಕ್ಷಮತೆ, ಅನುಭವಗಳಿಗೆ ತಕ್ಕಂತೆ

ಅವರವರಿಗೆ ಅರ್ಥವಾಗುವ ಸಂದೇಶ. ನನ್ನ ತಿಳುವಳಿಕೆಗೆ ತಕ್ಕಂತೆ ನನ್ನ ಮಾತು, ಬರಹ. ನನ್ನ ವ್ಯಾಸಂಗ

ಮುಂದುವರೆದರೆ, ಹಂಚಿಕೊಳ್ಳುವಂಥ ವಿಚಾರಗಳು ಕೈಗೆಟುಕಿದರೆ  ಮತ್ತೆ ಬರೆಯುತ್ತೇನೆ.ನಮಸ್ಕಾರ. 

ಶುಕ್ರವಾರ, ಡಿಸೆಂಬರ್ 11, 2020

‘ಬೆಳ್ಳಕ್ಕಿ’

ನಾನು ಮುಂಜಾನೆ ಸುತ್ತಾಟ ಮುಗಿಸಿ ಮನೆಯಕಡೆ ತಿರುಗುವ ಸಮಯದಲ್ಲಿ ಇವು ನನಗೆ ಎದುರಾಗುತ್ತವೆ.

ಸಾಮಾನ್ಯವಾಗಿ ‘ಬೆಳ್ಳಕ್ಕಿ’ ಎಂದು  ಕರೆಸಿಕೊಳ್ಳುವ ಒಂದು ಪಕ್ಷಿ ಸಮೂಹ. ಅದರಲ್ಲಿ ಕೆಲವು ಕೊಕ್ಕರೆಗಳೂ ಇವೆ.

ತಾವು ವಾಸಿಸುವ ಸ್ಥಾನದಿಂದ  ಅದೆಲ್ಲಿಗೋ ಹಾರುತ್ತಿರುತ್ತವೆ. ಹೊಟ್ಟೆಪಾಡೋ, ಮತ್ತೇನು ಕಾರ್ಯಗೌರವವೋ? 

ಅದನ್ನು ಮುಗಿಸಿ ಸಂಜೆ ತಮ್ಮ ಮರಕ್ಕೆ ಹಿಂತಿರುಗುತ್ತವೆ. 


ನಮ್ಮ ಮುಖ್ಯ ರಸ್ತೆಯಿಂದ ಕೊಂಚ ದೂರದಲ್ಲಿರುವ ಒಂದು ತಗ್ಗು ಪ್ರದೇಶದ ಸಣ್ಣ ಮರಗಳ ಗುಂಪು ಅವುಗಳ

ವಾಸಸ್ಥಾನ. ನಾನು ಒಮ್ಮೊಮ್ಮೆ ಸಂಜೆಯ ಸಮಯ ಸುತ್ತಾಟಕ್ಕೆ ಹೊರಟಾಗ ಅವು ಗುಂಪು ಗುಂಪಾಗಿ ಹಾರಿಬಂದು

ತಮ್ಮ ತಮ್ಮ ಸ್ಥಾನ ಸೇರುವುದನ್ನು ಕಂಡಿದ್ದೆ. ಅವು ಗುಂಪಿನಲ್ಲಿ ಬಂದು, ರೆಕ್ಕೆ ಬಡಿತ ನಿಲ್ಲಿಸಿ ಹಾಗೆಯೇ ಹಾರಿಬಂದು

ಇಳಿಯುವಾಗ ಒಂದು ವಿಮಾನ ನೆಲಕ್ಕಿಳಿಯುವಂತೆ ಕಾಣುತ್ತದೆ ! ಬಿಡುವಾಗಿ ನಿಂತು ಅದನ್ನು ನೋಡುವ

ವ್ಯವಧಾನವಾಗಿರಲಿಲ್ಲ. 


ಇಂದುಸಂಜೆ ಅವು ಬರುವ ಸಮಯಕಾದು ಅಲ್ಲಿಯೇ ನಿಂತಿದ್ದು ಪದೇ ಪದೇ ಆ ದೃಶ್ಯ ಕಂಡು ಸಂತೋಷಪಟ್ಟು


ಕೆಲವು ಚಿತ್ರಗಳನ್ನೂ ತೆಗೆದುಕೊಂಡೆ. 





ಅವುಗಳ ಕಷ್ಟ ಏನಿದೆಯೋ ಅವಕ್ಕೇ ಗೊತ್ತು. ನನಗಂತೂ ಅವುಗಳ ಜೀವನ ಸುಂದರವೆನಿಸುತ್ತದೆ !


ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ?

ಇಕ್ಕುವರಾರದನು ಕರೆದು ತಿರುಪೆಯನು?

ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು

ತಕ್ಕುದಾ ವ್ರತನಿನಗೆ - ಮಂಕುತಿಮ್ಮ


ಶ್ರೀ ಡಿ ವಿ ಜಿ ಯವರ ‘ಸ್ಮೃತಿ ಚಿತ್ರ’ - ಬೆಂಗಳೂರು ನಾಗರತ್ನಮ್ಮನವರು

ಶ್ರೀ ಡಿ ವಿ ಜಿ ಯವರ ‘ಸ್ಮೃತಿ ಚಿತ್ರ’ ಗಳನ್ನು ನಾಲ್ಕನೆಯ ಬಾರಿಯೋ ಆರನೆಯ ಬಾರಿಯೋ ಓದುತ್ತಿದ್ದೇನೆ. 

ಪಿ ಜಿ ವೋಡ್ ಹೌಸ್, ಜಿಮ್ ಕಾರ್ಬೆಟ್, ಜೇಮ್ಸ್ ಹೆರಿಯಟ್, ಗೊರೂರು, ಕಾರಂತರು, ಕೈಲಾಸಂ ಇವರ

ಕೆಲವು ಪುಸ್ತಕಗಳು ಸದಾ ನನಗೆ ‘ಬ್ಯಾಕ್ಅಪ್’ ಪುಸ್ತಕಗಳು. ಬೇರೇನೂ ಓದಲು ಸಿಗದಿದ್ದಾಗ ತೆಗೆಯುವುದಕ್ಕೆ.

ಡಿವಿಜಿಯವರ ಸ್ಮೃತಿ ಚಿತ್ರಗಳು ಈ ಪುಸ್ತಕಗಳ ಸಾಲಿನ ಮುಂಚೂಣಿಯಲ್ಲಿದೆ.


ತಮ್ಮ ನೆನಪಿನ ಆಳದಿಂದ ಡಿವಿಜಿ ಯವರು ಹೊರತೆರೆದಿರುವ ಕಾಲದ, ವ್ಯಕ್ತಿಗಳ ಚಿತ್ರಣವನ್ನು ಪದೇ ಪದೇ ಓದಿ

ಸಂತೋಷಿಸುತ್ತೇನೆ. ಆ ದಿನಗಳು, ಆ ಜನಗಳು ಹೋದವಲ್ಲಾ  ಎಂದು ವ್ಯಥೆಪಡುತ್ತೇನೆ. ಡಿವಿಜಿಯವರು

ಚಿತ್ರಿಸಿರುವ ವ್ಯಕ್ತಿಗಳೆಲ್ಲರೂ ಅವರ ದೃಷ್ಟಿಯಲ್ಲಿ ಗಣ್ಯರು, ಸಭ್ಯರು, ರಸಿಕರು, ಸರಳರು, ಪೂಜ್ಯರು, ಪ್ರಾತಃ

ಸ್ಮರಣೀಯರು. ಡಿವಿಜಿ ಯವರ ಈ ಬರಹ ಯಾವುದೇ ವ್ಯಕ್ತಿಯ ಗುಣಾವಗುಣಗಳ ವಿಶ್ಲೇಷಣೆಯಲ್ಲ. ಇದು

ಅವರೆಲ್ಲರ ಸದ್ಗುಣಗಳ ಪರಿಚಯ. ರಂಜನೀಯ ವ್ಯಕ್ತಿತ್ವದ ಅವಲೋಕನ. 


ತಾವು ಕಂಡಿದ್ದ ವ್ಯಕ್ತಿಯೊಬ್ಬರ ಬಗ್ಗೆ ಬರೆಯುವಾಗ, ತಾವು ಪರಿಗಣಿಸಿದ್ದೇನು ಎಂಬುದನ್ನು ಡಿ ವಿ ಜಿ ಯವರು

ಒಬ್ಬ ರಾಯರ ಚಿತ್ರಣದಲ್ಲಿ ಬರೆದ ಸಾಲುಗಳಲ್ಲಿ ಕಾಣಬಹುದು. ಆ ರಾಯರಲ್ಲಿ ಕೆಲವು ಅವಗುಣಗಳೂ

ಇದ್ದಿರಬಹುದೆಂದು ಸೂಚ್ಯವಾಗಿ ತಿಳಿಸಿ  “ನನ್ನ ಮನಸ್ಸಿನಲ್ಲಿ ಉಳಿದಿರುವ ಮುದ್ರಿಕೆ ಒಟ್ಟಿನ ಮೇಲೆ ಒಬ್ಬ

ರಸಿಕ ಭಕ್ತರದು. ರಾಯರ ಪುಣ್ಯಪಾಪಗಳು ಅವರಿಗೂ ಅವರು ನಂಬಿಕೊಂಡಿದ್ದ ದೈವಕ್ಕೂ ನಡುವೆ ಲೆಕ್ಕಕ್ಕೆ

ಬರತಕ್ಕವು. ಇತರಿಗಾದರೋ ಲೆಕ್ಕಕ್ಕೆ ಸಿಕ್ಕತಕ್ಕದ್ದು ರಾಯರ ಸರಳತೆ, ಅವರ ಸಂಗೀತದ ರಸಭಾವ,

ಅವರ ಔದಾರ್ಯ” ಎನ್ನುತ್ತಾರೆ ಡಿ ವಿ ಜಿ ಯವರು.  ಇಲ್ಲಿರುವ  ಪ್ರತಿಯೊಬ್ಬರೂ ಡಿವಿಜಿ ಯವರ

ಮನಮುಟ್ಟಿದವರು, ಆತ್ಮೀಯರು.


ತಾವು ದಿವಾನರು, ಅಧಿಕಾರಿಗಳು, ಪಂಡಿತರುಗಳ ಬಗೆಗೆ ಎಷ್ಟು ಅಭಿಮಾನದಿಂದ, ಗೌರವದಿಂದ

ಬರೆದಿದ್ದಾರೋ ಅಷ್ಟೇ ಭಾವನಾಪೂರ್ಣವಾಗಿ ಗಾರೆಕೆಲಸದವರು, ದೇವದಾಸಿಯರು ಮತ್ತಿತರಬಗೆಗೂ

ಡಿವಿಜಿಯವರು ಬರೆದಿದ್ದಾರೆ. ಅವರ ಚಿತ್ರಣ  ದಿವಾನ್ ಸರ್ ಎಂ ವಿ ಅವರದಾಗಲೀ ಅಥವಾ ಗಾರೆ ಕೆಲಸದ

ಶಿವಪಿಚ್ಚೈ ಮೊದಲಿಯಾರ್ ಅವರದಾಗಲೀ ಅಷ್ಟೇ  ಹೃದಯಸ್ಪರ್ಶಿ ಯಾಗಿರುತ್ತದೆ. ಈ ಬರಹಗಳಲ್ಲಿ 

ನನ್ನ ಮನತಟ್ಟಿದ ಕೆಲವು ಭಾಗಗಳ ಬಗೆಗೆ ಬರೆದಿಡುವ ಇಚ್ಛೆಯಾಯಿತು. ಪುಸ್ತಕವನ್ನು ಪೂರ್ಣವಾಗಿ

ಓದುವ ವ್ಯವಧಾನ ಅಥವಾ ಅವಕಾಶ ಇಲ್ಲದವರಿಗೆ ಈ ಮೂಲಕ ಆ ಬರಹಗಳ  ಸ್ವರೂಪ ಕೊಂಚವಾದರೂ

ತಿಳಿಯಬಹುದಲ್ಲವೇ ? ನನಗೆ ಪ್ರಿಯವಾದ, ಗತಿಸಿಹೋದ, ಆ ಕಾಲ ಮತ್ತು ಆ ರೀತಿಯ ಜನಗಳ

ಪರಿಚಯವನ್ನು  ಇತರರಿಗೂ ಮಾಡಿಸೋಣವೆಂಬ ಆಶಯ. ಹಾಗೆ ಬರೆದ ಮೊದಲ ಬರಹ ಇದು.

ಮುಂದುವರೆಸುತ್ತೇನೆಂದು ನಂಬಿದ್ದೇನೆ. 


ಬೆಂಗಳೂರು ನಾಗರತ್ನಮ್ಮನವರು ದೇವದಾಸಿಯರ ಕುಲದಲ್ಲಿ ಜನ್ಮಪಡೆದವರು. ಅವರ ಜನನವಾದದ್ದು

1878 ರಲ್ಲಿ,  ಮೈಸೂರಿನಲ್ಲಿ. ಅವರಿಗೆ ಸಂಗೀತ, ಸಂಸ್ಕೃತ ಕಾವ್ಯ, ಕನ್ನಡ ಕಾವ್ಯಗಳ ಅಭ್ಯಾಸವಾಗಿದ್ದು,

ಸಂಸ್ಕೃತ ಶ್ಲೋಕ, ಗಮಕಗಳನ್ನು ಅರ್ಥಪೂರ್ಣವಾಗಿ, ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರಂತೆ. ನಂತರ

ಸಂಗೀತ, ನೃತ್ಯಕಲೆಗಳಲ್ಲಿ ಹೆಚ್ಚಿನ ಕಲಿಕೆಗಾಗಿ ಬೆಂಗಳೂರಿಗೆ ಬಂದು, ಬೆಂಗಳೂರಿನ ಗಣ್ಯರಲ್ಲಿ ಒಬ್ಬರಾಗಿದ್ದು,

ಸಂಗೀತದಲ್ಲಿ ಬಹಳ ಹೆಸರುಮಾಡಿದರಂತೆ. ಬೆಂಗಳೂರಿನಲ್ಲಿ ಆಕೆ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾದ

ಶ್ರೀ ನರಹರಿರಾಯರ ಆಶ್ರಯದಲ್ಲಿದ್ದರೆಂದು ಡಿ ವಿ ಜಿ ಯವರು ತಿಳಿಸುತ್ತಾರೆ. ಮುಂದೆ ಅವರು ಮದರಾಸಿಗೆ

ತೆರಳಿ ಅಲ್ಲಿ ತಮ್ಮ ಸಂಗೀತದ ಸಾಮರ್ಥ್ಯದಿಂದ ಹಣ ಪ್ರಸಿದ್ಧಿಗಳೆರಡನ್ನೂ ಹೇರಳವಾಗಿ ಗಳಿಸಿ ಯಾರದೇ

ಆಶ್ರಯದ ಅವಶ್ಯಕತೆಯಿಲ್ಲದಂತೆ ಸ್ವತಂತ್ರ ಜೀವನ ನಡೆಸುವ ಸ್ಥಿತಿಗೆ ತಲುಪಿದರಂತೆ. 


ತಮ್ಮ ಮಕ್ಕಳನ್ನೂ, ಸಾಕಿದ್ದ ಮಗುವನ್ನೂ ಅಕಾಲವಾಗಿ ಕಳೆದುಕೊಂಡ ಆಕೆ ತಮ್ಮ ವೈಯುಕ್ತಿಕ ಜೀವನದಲ್ಲಿ

ನೋವು ಅನುಭವಿಸಿ ಕೊನೆಗೆ ಶ್ರೀರಾಮಪಾದಾರವಿಂದ ಸೇವೆಯಲ್ಲಿ ಶಾಂತಿಪಡೆಯುವ

ಮನಸ್ಸುಮಾಡಿದರಂತೆ. ತ್ಯಾಗರಾಜ ಸ್ವಾಮಿಯವರ ಆರಾಧಕಿಯಾದ ಆಕೆ ತಮ್ಮಲ್ಲಿದ್ದ ಸಂಪತ್ತನ್ನೆಲ್ಲಾ

ಖರ್ಚುಮಾಡಿ ತಿರುವಾಯೂರಿನಲ್ಲಿ ತ್ಯಾಗರಾಜ ಸ್ವಾಮಿಗಳ ಸಮಾಧಿಯ ಜೀರ್ಣೋದ್ಧಾರಮಾಡಿಸಿ ಅಲ್ಲಿ

ಸೀತಾರಾಮದೇವರ ದೇವಾಲಯವನ್ನು ಕಟ್ಟಿಸಿದರಂತೆ.  ಆ ಕಾರ್ಯಕ್ಕೆ ತಮ್ಮಲ್ಲಿದ್ದ ಹಣವನ್ನೆಲ್ಲಾ ವ್ಯಯಿಸಿ,

ಜತೆಗೆ ತಮ್ಮ ಮನೆ ಹಾಗೂ ಆಭರಣಗಳನ್ನು ಮಾರಿ ಹಣ ಹೊಂದಿಸಿದರೆಂದು ಡಿ ವಿ ಜಿ ಯವರು

ತಿಳಿಸುತ್ತಾರೆ. ತದನಂತರ ಅನಾರೋಗ್ಯಕ್ಕೆ ತುತ್ತಾಗಿ ಆದಾಯವಿಲ್ಲದೆ ಬಳಲುತ್ತಿದ್ದಾಗಲೂ  ಆಕೆ

ತಿರುವಾಯೂರಿನಲ್ಲಿ ತಮ್ಮ ಊರಾದ ಮೈಸೂರಿನ ಹೆಸರಿನಲ್ಲಿ ಒಂದು ಸತ್ರವನ್ನು ಕಟ್ಟಿಸುವ ಮನಸ್ಸುಮಾಡಿ

ತಮಗೆ ಪರಿಚಯವಿದ್ದ ಧನಿಕರಿಂದಲೂ ಇತರ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ಆ ಕಾರ್ಯವನ್ನು

ನಡೆಸಿದರಂತೆ. ಮದರಾಸಿನ ಸಾರ್ವಜನಿಕ ಸಂಘಟನೆಗಳಿಂದ “ತ್ಯಾಗಸೇವಾಸಕ್ತ”, “ಗಾನಕಲಾವಿಶಾರದ”,

“ವಿದ್ಯಾಸುಂದರಿ” ಮೊದಲಾದ ಬಿರುದುಗಳನ್ನು ಅವರು ಪಡೆದಿದ್ದರೆಂದು ಡಿ ವಿ ಜಿ ಯವರು ಬರೆದಿದ್ದಾರೆ.  


ನಾಗರತ್ನಮ್ಮನವರ ಏರುದಿನಗಳಲ್ಲಿ ಅನೇಕಬಾರಿ ತಾವು ಆಕೆಯ ಸಂಗೀತ ಕೇಳಲು ಅವರ ಮನೆಗೆ

ಹೋಗಿದ್ದುದಾಗಿ ತಮ್ಮ ಬರಹದಲ್ಲಿ ಡಿ ವಿ ಜಿ ಯವರು ತಿಳಿಸಿದ್ದಾರೆ. ಕೊನೆಯ ದಿನಗಳಲ್ಲಿ ಆಕೆ

ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಅವರನ್ನು ಕಾಣಲು ಹೋಗಿದ್ದ ಡಿವಿಜಿಯವರೊಡನೆ ಸಂಗೀತ

ಕಲಿಯುವಿಕೆ/ ಕಲಿಸುವಿಕೆಯ ಬಗೆಗೆ ಮಾತನಾಡುತ್ತಾ ನಾಗರತ್ನಮ್ಮನವರು  ಅಶಕ್ತರಾಗಿದ್ದರೂ

ಎದ್ದುಕುಳಿತು ರಾಗಾಲಾಪನೆಮಾಡಿ ಸಂಗೀತದ ಸೂಕ್ಷ್ಮಗಳನ್ನು ವಿವರಿಸಿದರಂತೆ. ಕೊನೆಗೆ ತಮ್ಮ ಜೀವನದ

ಬಗ್ಗೆ ಮಾತನಾಡುತ್ತಾ  “ಮೊದಲು ನಾಗರತ್ನ, ನಂತರ ಭೋಗರತ್ನ, ಈಗ ರೋಗರತ್ನ” ಎಂದು 

ನೊಂದುಕೊಂಡರಂತೆ.  


“ಇನ್ನೆರಡನ್ನು ಮರೆತುಬಿಟ್ಟಿರಿ. ಒಂದು ರಾಗರತ್ನ , ಮತ್ತೊಂದು ತ್ಯಾಗರತ್ನ. ಭೋಗ ರೋಗಗಳು ಕ್ಷಣಿಕವಾದವು.

ನಿಮ್ಮ ರಾಗ ಕೇಳಿದವರ ಮನಸ್ಸಿನಲ್ಲಿ ಪರಿಣಾಮ ಮಾಡಿ ಅವರ  ಜೀವನೋಲ್ಲಾಸದಾಲ್ಲೂ

ಜೀವನೋನ್ನತಿಯಲ್ಲೂ ಚಿರಕಾಲ ಉಳಿದಿರುತ್ತದೆ. ನಿಮ್ಮ ತ್ಯಾಗದ ಪ್ರತ್ಯಕ್ಷ ರೂಪವಾದ ತಿರುವಾಯೂರು

ಕ್ಷೇತ್ರದ ದೇವತಾ ಮಂದಿರಗಳು ಶಾಶ್ವತವಾಗಿ ನಿಂತಿರುತ್ತವೆ”  ಎಂದು ಡಿವಿಜಿಯವರು ಸೇರಿಸಿದಾಗ

ನಾಗರತ್ನಮ್ಮನವರು ಕೈಮುಗಿದು “ನಿಮ್ಮ ಈ ಮಾತನ್ನು ನೀವೇ ಇಟ್ಟುಕೊಳ್ಳಿ” ಎಂದುಬಿಟ್ಟರಂತೆ ! 


ಅದೆಂಥ ಘನವಾದ ವ್ಯಕ್ತಿತ್ವಗಳು! ಬರಹಕ್ಕೆ ವಸ್ತುವಾದವರದು, ಬರೆದವರದು !