ಬುಧವಾರ, ಮಾರ್ಚ್ 18, 2026

ಕುರುಡು ನಾಯಿ ಸಂತೆಗೆ ಬಂತಂತೆ

ದಿವಂಗತ ಶ್ರೀ ಬಿ ವಿ ಕಾರಂತರ ನಾಟಕಗಳಲ್ಲಿ ಮತ್ತು 

ನವ್ಯ ಹಾಡುಗಾರರ ಆರ್ಕೆಸ್ಟ್ರಾಗಳಲ್ಲಿಸಹ  ಕೇಳಿಬರುತ್ತಿದ್ದ 

ಪುರಂದರ ದಾಸರ ಒಂದು ರಚನೆ ‘ಕುರುಡು ನಾಯಿ

ಸಂತೆಗೆ ಬಂತಂತೆ’. ಕಿವಿಗೆ ಬಿದ್ದೊಡನೆ ಕುತೂಹಲ

ಮೂಡಿಸುವಂಥ ಪದಗಳ ಜೋಡಣೆ ಪುರಂದರದಾಸರ

ರಚನೆಗಳ ವಿಶೇಷ. ದಾಸರು ಹಾಡಿಕಿಂದು ಹೋಗುತ್ತಿದ್ದರೆ

ದಾರಿಯಲ್ಲಿ ನಡೆದಾಡುತ್ತಿದ್ದವರು ಕೊಂಚ ನಿಂತು ಮುಂದೆ

ಕೇಳುವಂತಿರಬೇಕು. ಅದು ದಾಸರ ಉದ್ದೇಶ್ಯ. ಆದರೆ

ಕೇಳಿದ ಎಷ್ಟು ಕಿವಿಗಳಿಗೆ ಈ ಗೀತೆಯ ತಿರುಳು

ತಿಳಿಯಿತೋ ನಮಗೆ ತಿಳಿಯದು. 


ನಮ್ಮ ನಿಮ್ಮಂತೆ ಈ ಸಂಸಾರವೆಂಬ ಸಂತೆಗೆ ಬಂದು 

ಸಿಕ್ಕುಬಿದ್ದಿದ್ದ ಜನರೆಲ್ಲರನ್ನೂ ದಾಸರು ಕುರುಡು ನಾಯಿ

ಎಂದು ಕರೆದರು. ಬರಿಯ ನಾಯಿ ಸಾಲದೇ ? ಕುರುಡು

ನಾಯಿ ಏಕೆ ?  ಈ ಸಂಸಾರಕ್ಕೆ ಬಂದೆವು ಹೌದು.

ಬಂದುದೆಲ್ಲಿಂದ?  ನಾವು ಕಾಣಲಿಲ್ಲ, ಇಲ್ಲಿಂದ

ಹೋಗುವುದೆಲ್ಲಿಗೆ? ಅದನ್ನೂ ಕಂಡಿಲ್ಲ. ಆದ್ದರಿಂದ

ಎಲ್ಲರೂ  ಕುರುಡು ನಾಯಿಗಳೇ.  


ಹಾಗೆ ಈ ಸಂಸಾರದಲ್ಲಿ ಹುಟ್ಟಿದ್ದ  ನಾಯಿ ಬೇಕಿದ್ದರೆ

ಕಲ್ಲುಸಕ್ಕರೆ ಮೆಲ್ಲಬಹುದಿತ್ತು. ಖಂಡಸಕ್ಕರೆ ಎಂದರೆ

ಕಲ್ಲುಸಕ್ಕರೆ. ಯಾವ ಕಲ್ಲು ಸಕ್ಕರೆ ? ದಾಸರೇ ಬೇರೆಕಡೆ

ಹೇಳಿದ್ದಾರಲ್ಲ ! ‘ಎತ್ತು ಹೇರುಗಳಿಂದ ಹೊತ್ತುಮಾರುವುದಲ್ಲ,

ಕಟ್ಟಿರುವೆ ತಿಂದು ಹಾಳಾಗುವುದಲ್ಲ, ಎತ್ತಹೋದರೂ

ಬಾಡಿಗೆ ಸುಂಕವಿದಕಿಲ್ಲ’  ಎಂದು, ಆ  ವಿಠಲ 

ನಾಮವೆಂಬ ಕಲ್ಲುಸಕ್ಕರೆ.  ಅಥವಾ ಅದನ್ನು  ಸುಜ್ಞಾನ

ಎನ್ನಿ. ಅದಕ್ಕೆ ಬಾಯಿಹಾಕಬಹುದಿತ್ತು. ಆದರೆ ಈ

ನಾಯಿ ಬಾಯಿಹಾಕಿದ್ದು ಖಂಡ ಎಲುಬಿಗೆ. ಅಜ್ಞಾನ

ಅಥವಾ ಅನ್ಯಥಾಜ್ಞಾನ ಮತ್ತು ಹರಿ ವಿಸ್ಮರಣೆ

ಅಥವಾ ಸಂಸಾರಮೋಹ ಎಂಬ  ಮಾಂಸ,

ಮೂಳೆಗಳ ತುಂಡಿಗೆ. ಹೀಗೆ ಅವನನ್ನು ಕೈಬಿಟ್ಟು

ನಿನ್ನ ಸಂಸಾರ, ಹೆಂಡಿರು ಮಕ್ಕಳನ್ನೇ ನೆಚ್ಚಿದ್ದ

ನಿನ್ನನ್ನು ಯಮದೂತರು ಕೊಂಡುಹೋಗುವಾಗ

ಜತೆಗೆ ಯಾರುಬಂದರಯ್ಯಾ ಎಂದು ಕೇಳುತ್ತಾರೆ ದಾಸರು.  


(ಇಲ್ಲಿ ನನ್ನದೊಂದು ಅಡ್ಡಮಾತು. ಸಮಾಜ

ಪುರುಷ ಪ್ರಾಧಾನ್ಯವಾಗಿದ್ದ ಸಮಯದಲ್ಲಿ ರಚಿತವಾಗಿದ್ದು

ದಾಸರಪದಗಳು.  ಸ್ತ್ರೀ ಸ್ವಾತಂತ್ರ್ಯವಾದಿಗಳು ಇಲ್ಲಿ

‘ಹೆಂಡಿರು ಮಕ್ಕಳ ನೆಚ್ಚಿತ್ತಂತೆ’ ಎನ್ನುವ ಬದಲು

‘ಗಂಡನ, ಮಕ್ಕಳ ನೆಚ್ಚಿತ್ತಂತೆ’  ಎಂದು

ಬದಲಾಯಿಸಿಕೊಳ್ಳಬಹುದು - ಪ್ರಾಸಕ್ಕೂ ಬಾಧಕವಿಲ್ಲ,

ಅರ್ಥಕ್ಕೂ ಬಾಧಕವಿಲ್ಲ.) 



ಅದಿರಲಿ ಆ ಜೀವ ಮಾಡಿದ್ದೇನು ?

ವೇದವಾದಗಳನ್ನೋದಿಕೊಂಡು, ಬುದ್ಧಿಕಲಿತೆನೆಂದುಕೊಂಡು,

ಗಾದೆ ಗಳನ್ನು ಸಹ ಬರೆಯುವಂಥ ಪಾಂಡಿತ್ಯ ಪಡೆಯಿತು.

ಆದರೆ ಅನುಷ್ಠಾನದಲ್ಲಿ ಹಾದಿ ತಪ್ಪಿ, ತಪ್ಪು  ದಾರಿ ಹಿಡಿದು,

ಮುಕ್ತಿಮಾರ್ಗ ಬಿಟ್ಟು ನರಕವನ್ನು ತಲುಪಿತು. ಕ್ರಿಮಿ,

ಕೀಟ, ಪಶು, ಪ್ರಾಣಿಗಳಾಗಿ ನೂರಾರೋ ಸಾವಿರಾರೋ 

ಜನ್ಮಗಳ ನಂತರ ದೊರಕಿದ್ದ, ಸಾಧನಾ ಶರೀರವನ್ನು

ಆಧ್ಯಾತ್ಮಸಾಧನೆಯಲ್ಲಿ ತೊಡಗಿಸದೆ, ಹಿಂದುಮುಂದಿಲ್ಲದೆ

ತಿರುಗಾಡಿಸಿ ಹಾಳುಗೆಡವಿತು.


ದುಸ್ತರ ವಾದ ಮಾನವ ಜನ್ಮವೆಂಬ ಮಾಣಿಕ್ಯ

ಮಂಗನಕೈಗೆ ಸಿಕ್ಕಿದ ಮಾಣಿಕ್ಯವಾಯಿತು. ಮಂಗಕ್ಕೇನು

ಗೊತ್ತು ಮಾಣಿಕ್ಯದಬೆಲೆ ? ಕಚ್ಚಿನೋಡಿ,

ರುಚಿಯಿಲ್ಲವೆಂದು ಬಿಸಾಡಿತಲ್ಲವೇ?  ಹಾಗೆಯೇ,

ತನಗೆ ಸಿಕ್ಕಿದ್ದ ಮಾನವ ಜನ್ಮದ ಬೆಲೆತಿಳಿಯದ ಜೀವ

ಅದನ್ನು ಹಾಳುಗೆಡವಿ, ರಂಗನನ್ನು ಮರೆತು ಬಹಳ  

ಭಂಗಪಟ್ಟಿತು. ಇದು ‘ಕುರುಡುನಾಯಿ’ ಗೀತೆಯ ಸಾರ. 


ತಾವು ಹಾಡಿದ ಪದ ಜನರಿಗೆ ತಿಳಿಯಿತೋ ಇಲ್ಲವೋ

ಎಂಬ ಅನುಮಾನ ದಾಸರಿಗೂ ಬಂದಿತೆಂದು ಕಾಣುತ್ತದೆ.

ಆದ್ದರಿಂದ ಅದರ ಅರ್ಥವನ್ನು ಮನದಟ್ಟು ಮಾಡಿಸಲೆಂದೇ

ಮತ್ತೊಂದು ಕಡೆ ದಾಸರು ಸರಳವಾಗಿ

‘ಮಾನವ ಜನ್ಮ ದೊಡ್ಡದು, ಅದ ಹಾನಿಮಾಡಬೇಡಿರೋ

ಹುಚ್ಚಪ್ಪಗಳಿರಾ’ ಎಂದು ಹಾಡಿದರೆಂದು ತಿಳಿಸುತ್ತಾ ಇಂದಿನ

ನಾಲ್ಕು ವಾಕ್ಯ ಕೃಷ್ಣಾರ್ಪಣ ಎನ್ನುತ್ತೇನೆ.

ಶುಕ್ರವಾರ, ಮಾರ್ಚ್ 13, 2026

raagi tandeeraa

ದಾಸಪಂಥವನ್ನು ಸ್ವೀಕರಿಸಿ, ಗಾನ ನೃತ್ಯಗಳ ಮೂಲಕ

ಭಗವಂತನನ್ನು ಆರಾಧಿಸಿದ, ದಾಸರು ಎಂದು ಸಾಮಾನ್ಯವಾಗಿ

ನಾವು ಸಂಭೋದಿಸುವ ಮಹಾನುಭಾವರು ಅನೇಕರಿದ್ದಾರೆ.

ಬಹುತೇಕ ಎಲ್ಲರಿಗೂ ತಿಳಿದಿರುವ ಹೆಸರು ಶ್ರೀ ಪುರಂದರ ದಾಸರು. 

ದಾಸರುಗಳು ರಚಿಸಿರುವ ಭಕ್ತಿಗೀತೆಗಳನ್ನು  ನಾವು

‘ದಾಸರಪದಗಳು’ ಎಂದೆವು.  ಕೇಳಿದವರಲ್ಲಿ ಭಕ್ತಿ

ಭಾವನೆಯನ್ನು ಉದ್ದೀಪನಗೊಳಿಸುವುದು ದಾಸರಪದಗಳ

ಉದ್ದೇಶ್ಯ. ಬಹುತೇಕ ದಾಸರಪದಗಳು ಬಹಳ ಸರಳವಾಗಿದ್ದು

ಅವುಗಳಿಗೆ ಅರ್ಥವಿವರಣೆ ಬೇಕಿಲ್ಲ. ಕೆಲವು ಗೀತೆಗಳ  ಕೆಲವು

ಸಾಲುಗಳಿಗೆ ವಿವರಣೆ ಬೇಕಾಗಬಹುದು ಮತ್ತೆ ಕೆಲವು ಗೀತೆಗಳ

ತಲೆಬುಡ ತಿಳಿಯದಿರಬಹುದು. ತಿಳಿದವರು ಕೆಲವರು ಅವುಗಳಿಗೆ

ತಮಗೆ ತಿಳಿದಂತೆ ಅರ್ಥ ತಿಳಿಸಿದ್ದಾರೆ. ನಮಗೆ

ಎಟಕುವಂತಿರುವ ಕೆಲವು ದಾಸರಪದಗಳ ಗಾಯನ,

ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ

ಮಾಡುವುದು ನಮ್ಮ ಈ ಯು ಟ್ಯೂಬ್ ವಿಡಿಯೋಗಳ

ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,

ವಿವರಣೆ ರಘುನಂದನ ಎಂಬ ಹೆಸರಿನ ನನ್ನದು.

ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು

ತಿಳಿಸಿದರೆ ಹೆಚ್ಚಿನ ಸಂತೋಷ. ಇನ್ನು ಮುಂದೆ  ಈ ಸಂಚಿಕೆಯ ಗಾಯನ. 




ದಾಸರದು ಭಕ್ತಿಪಂಥ. ಇತರರಲ್ಲೂ ಭಕ್ತಿಭಾವನೆಯನ್ನು

ಜಾಗೃತಗೊಳಿಸುವುದು ಅವರು  ಆಯ್ದುಕೊಂಡ ಭಗವತ್ಸೇವೆ. 

ಆದರೆ ನೀತಿಯಿಲ್ಲದ ಭಕ್ತಿಯಿಂದೇನು ಪ್ರಯೋಜನ ? ಆದ್ದರಿಂದ

ತಾವು ರಚಿಸಿದ ಅನೇಕ ಪದಗಳಲ್ಲಿ ಅವರು ನಮಗೆ

ನೀತಿಬೋಧನೆಯನ್ನೂ ಮಾಡಿದರು. ಆ ರೀತಿಯ ಪುರಂದರದಾಸರ

ಒಂದು ಪದ ‘ರಾಗಿ ತಂದೀರಾ’. 


ಯಾರಮನೆಯಲ್ಲೋ ಒಮ್ಮೆ ದಾಸರ ಜೋಳಿಗೆಗೆ ರಾಗಿ ಬಿತ್ತು.

ರಾಗಿಯನ್ನು ಕಂಡ ದಾಸರು ಆ ಕ್ಷಣದಲ್ಲೇ ‘ರಾಗಿ’ ಪದವನ್ನುಪಯೋಗಿಸಿ

ಒಂದು ಚಮತ್ಕಾರವನ್ನೇ ರಚಿಸಿದರು. ನಾಮಪದವಾದ ರಾಗಿಯನ್ನು

ಕ್ರಿಯಾಪದವಾಗಿಸಿದರು. ಭೋಧಿಸಿದರು. 


ಬಹಳ ಸರಳವಾದ ಗೀತೆ. ಕೆಲವೇ ಕೆಲವು ಸಾಲುಗಳಿಗೆ  ವಿವರಣೆ

ಬೇಕೆನಿಸಬಹುದು. ಒಂದು, ‘ಅನ್ಯವಾರ್ತೆಯ ಬಿಟ್ಟವರಾಗಿ’ ಎನ್ನುವುದು.

ಸಾಮಾನ್ಯವಾಗಿ ನಾವು ಏನೆಲ್ಲವನ್ನು ‘ವಾರ್ತೆ’ ಎನ್ನುತ್ತೀವೋ ಅದೆಲ್ಲಾ

ದಾಸರಿಗೆ ಅನ್ಯವಾರ್ತೆ. ಬೇಡವಾದ ಸುದ್ದಿ. ಯಾವ ವಿಷಯಗಳು

ನಮ್ಮ ಆಧ್ಯಾತ್ಮ ಸಾಧನೆಗೆ ಅಡ್ಡಿ ಮಾಡಿ ಮನಸ್ಸನ್ನು ಭಗವಂತನಿಂದ

ದೂರ ಸೆಳೆಯುತ್ತವೋ ಅವೆಲ್ಲಾ ‘ಅನ್ಯ ವಾರ್ತೆ’. ಆದ್ದರಿಂದ

‘ಅನ್ಯವಾರ್ತೆಯ ಬಿಟ್ಟವರಾಗಿ’. 


ಮತ್ತೊಂದು ಸಾಲು ‘ಜಾತಿಯಲ್ಲಿ ಮಿಗಿಲಾದವರಾಗಿ’ ಎನ್ನುವುದು.

ನಾವು ಹುಟ್ಟಿನಿಂದ ಹೊತ್ತುಬಂದದ್ದೇ ನಮ್ಮ ಜಾತಿಯಲ್ಲವೇ ?

ಅದನ್ನು ಬದಲಾಯಿಸುವುದೆಂತು ? ದಾಸರು ಹೇಳುವ ಜಾತಿ

ನಾವು ಜನಗಣತಿಯಲ್ಲೋ, ಜಾತಿಗಣತಿಯಲ್ಲೋ ಬರೆಯುವ

ಜಾತಿಯಲ್ಲ. ನಮ್ಮ ತತ್ವದ  ಪ್ರಕಾರ ನಮ್ಮ ಜಾತಿಯನ್ನು

ನಿರ್ಧಾರಮಾಡುವುದು ನಮ್ಮಲ್ಲಿರುವ ಗುಣಗಳ ಪ್ರಮಾಣ.

ಸತ್ವ, ರಜಸ್ಸು ಮತ್ತು ತಮೋಗುಣಗಳು ಪ್ರತಿಯೊಬ್ಬರಲ್ಲೂ

ಇರುವಂತಹವು. ಯಾರಲ್ಲಿ ಸತ್ವಗುಣಗಳ ಪ್ರಮಾಣ ಹೆಚ್ಚೊ,

ಅವರದು ಉತ್ತಮ ಜಾತಿ. ಆದ್ದರಿಂದ ನಿಮ್ಮ ಸತ್ವಗುಣದ ಪ್ರಮಾಣ

ಹೆಚ್ಚಲಿ. ನೀವು ‘ಸಾತ್ವಿಕ ಜೀವನ ನಡೆಸಿ’ ಎನ್ನುವುದು ‘ಜಾತಿಯಲ್ಲಿ

ಮಿಗಿಲಾದವರಾಗಿ’ ಎಂಬ ಸಾಲಿನ ಅರ್ಥ. 


ಮೂರನೆಯದು ‘ಗುರುತಿಗೆ ಬಾಹೋರಂಥವರಾಗಿ,

ಕರೆಕರೆ ಸಂಸಾರ ನೀಗುವರಾಗಿ’ ಎಂಬ ಸಾಲು. ನೀತಿಮಾರ್ಗದಲ್ಲಿ

ನಡೆದರೆ ನಾವು ಗುರುತಿಸಲ್ಪಡುತ್ತೇವೆ. ಯಾರಿಂದ ? ಸಮಾಜದಿಂದ

ಅಥವಾ ಸರ್ಕಾರದಿಂದ ಅಲ್ಲ. ಭಗವಂತನಿಂದ. ಅವನ ದೃಷ್ಟಿ ನಮ್ಮ

ಮೇಲೆ ಬಿದ್ದರೆ ಅದು ಮೋಕ್ಷಕ್ಕೆ ನಾಂದಿ. ಅಂದರೆ, ಈ ‘ಕರೆ ಕರೆ

ಸಂಸಾರದಿಂದ, ಅಥವಾ ಹುಟ್ಟು ಸಾವಿನ ಬಂಧನದಿಂದ ಮುಕ್ತಿ ಅಲ್ಲವೇ ?

ಹೀಗೆ  ದಾಸರು ಹಾಡಿ, ನೀತಿ ಬೋಧನೆಮಾಡಿ ತಮ್ಮದಾರಿ ಹಿಡಿದರು.

ಅವರ  ಬೋಧನೆಯಂತೆ ನಡೆಯುವುದು, ಬಿಡುವುದು, ನಮಗೆ ಬಿಟ್ಟದ್ದು !

ಸೋಮವಾರ, ಮಾರ್ಚ್ 9, 2026

daasa sahitya siri intro talk

ಭಕ್ತಿ ಪ್ರಧಾನವಾದ ದಾಸ ಪಂಥವನ್ನು ಅನುಸರಿಸಿ ದಾಸರು

ಎಂದು ಕರೆಸಿಕೊಳ್ಳುವ ಮಹಾನುಭಾವರು ಅನೇಕರಿದ್ದಾರೆ.

ಎಲ್ಲರಿಗೂ ಬಹಳ ಪರಿಚಿತವಾದ ಪುರಂದರ ದಾಸರು,

ಕನಕದಾಸರಲ್ಲದೆ, ವಿಜಯದಾಸರು, ಜಗನ್ನಾಥದಾಸರು,

ಗೋಪಾಲದಾಸರು, ವೆಂಕಟದಾಸರು  ಮುಂತಾದ ಅನೇಕರು

ಗಾನ, ನೃತ್ಯಗಳಿಂದ ಭಗವಂತನನ್ನು ಆರಾಧಿಸಿ, ತಮ್ಮ

ರಚನೆಗಳ ಮೂಲಕ  ಭಕ್ತಿರಸವನ್ನು ಉಣಬಡಿಸಿದರು.  


ಈ ದಾಸರು ರಚಿಸಿದ ಭಕ್ತಿಗೀತೆಗಳನ್ನು  ನಾವು

‘ದಾಸರಪದಗಳು’ ಎಂದೆವು. ಬಹುತೇಕ ದಾಸರಪದಗಳು

ಬಹಳ ಸರಳವಾಗಿದ್ದು ಅವುಗಳಿಗೆ ಅರ್ಥವಿವರಣೆ ಬೇಕಿಲ್ಲ.

ಕೆಲವು ಪದಗಳ ಒಟ್ಟು ಭಾವ ತಿಳಿದರೂ ಕೆಲವು ಸಾಲುಗಳ

ಅರ್ಥ ತಿಳಿಯದಂತಾಗಬಹುದು. ಮತ್ತೆ ಕೆಲವು ರಚನೆಗಳ

ತಲೆಬುಡ ತಿಳಿಯದಿರಬಹುದು. ತಿಳಿದವರು ಕೆಲವರು

ತಮಗೆ ತಿಳಿದಂತೆ ಆ ರಚನೆಗಳಿಗೆ  ಅರ್ಥ ಬರೆದು

ಸಹಾಯಮಾಡಿದ್ದಾರೆ.  ನಮಗೆ ಎಟಕುವಂತಿರುವ ಕೆಲವು

ದಾಸರಪದಗಳ ಗಾಯನ,

ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ

ಮಾಡುವುದು ನಮ್ಮ ಈ ಯು ಟ್ಯೂಬ್ ವಿಡಿಯೋಗಳ

ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,

ವಿವರಣೆ ರಘುನಂದನ ಎಂಬ ಹೆಸರಿನ ನನ್ನದು.

ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು

ತಿಳಿಸಿದರೆ ಹೆಚ್ಚಿನ ಸಂತೋಷ.

sound tools audio joiner



ದಾಸರ ಪದಗಳು ಅಥವಾ ರಚನೆಗಳು ಐದುಸಾವಿರವೆಂದು ಕೆಲವರ ಮತ,

ಐವತ್ತುಸಾವಿರವೆಂದು ಕೆಲವರ ಎಣಿಕೆ, ಐದು ಲಕ್ಷವೆನ್ನುವರು ಮತ್ತೆ ಕೆಲವರು. ಖಚಿತವಾಗಿ

ತಿಳಿಯದು. ಪದಗಳ ಸಾಹಿತ್ಯವೂ ಹಾಗೆಯೇ. ಭಾವ ಹೆಚ್ಚುಕಡಿಮೆ ಒಂದೇ ಇದ್ದರೂ

ಪದಗಳ ಉಪಯೋಗದಲ್ಲಿ ಅಂದರೆ ಬರಹದಲ್ಲಿ ಮತ್ತು ಹಾಡುಗಾರಿಕೆಯಲ್ಲಿ ಸಹ ಅನೇಕ

ವತ್ಯಾಸಗಳು ಕಾಣಬರುತ್ತವೆ. ದಾಸರ ಕೆಲವು ಪದಗಳು ಬಹಳ ಸರಳ. ಅದಕ್ಕೆ ಯಾರೂ

ಅರ್ಥ ತಿಳಿಸಬೇಕಿಲ್ಲ. ಕೆಲವು ಪದಗಳ ತಲೆ ಬುಡ ತಿಳಿಯುವುದಿಲ್ಲ. ಅಂಥ ರಚನೆಗಳಿಗೆ

ತಿಳಿದವರು ಕೆಲವರು ನೀಡಿರುವ  ಅರ್ಥಗಳು ಕೂಡ ಅನೇಕ. ನಮಗೆ ಎಟಕುವಂತಿರುವ

ಕೆಲವು ದಾಸರಪದಗಳ ಗಾಯನ, ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ ಮಾಡುವುದು

ನಮ್ಮ ಈ ಯು ಟ್ಯೂಬ್ ವಿಡಿಯೋಗಳ ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು,

ವಿವರಣೆ ರಘುನಂದನ ಎಂಬ ಹೆಸರಿನ ನನ್ನದು. ತಾವು ಕೇಳಿದರೆ ಸಂತೋಷ, ತಮ್ಮ

ಅನಿಸಿಕೆಯನ್ನು ತಿಳಿಸಿದರೆ ಹೆಚ್ಚಿನ ಸಂತೋಷ.

ಶುಕ್ರವಾರ, ಫೆಬ್ರವರಿ 13, 2026

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ

ಶ್ರೀ ಪಿ ಕಾಳಿಂಗರಾಯರ ಭೋರ್ಗರೆಯುವ ಗಾಯನದ ಮೂಲಕ

ಎಲ್ಲರಿಗೂ ಪರಿಚಿತವಾದ ಒಂದು ಪುರಂದರದಾಸರ ರಚನೆ ಅವರ 

‘ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ’ ಗೀತೆ. ದಾಸರ

‘ಗೂಢಾರ್ಥ’ ಗೀತೆಗಳ ಸಾಲಿಗೆ ಸೇರುವ ಈ ಕೃತಿಯ ಹಿಂದಿನ

ಭಾವ ಬಹುಜನರಿಗೆ ತಿಳಿದಿರಲಾರದು. ದಾಸ ಸಾಹಿತ್ಯದ ಬಗ್ಗೆ

ಓದಿ, ಕೇಳಿ, ನಾನು ತಿಳಿದುಕೊಂಡದ್ದನ್ನು ಈಗ ತಮ್ಮ ಮುಂದಿರಿಸುತ್ತಿದ್ದೇನೆ. 


ಇಲ್ಲಿ ಮಾಡು ಏನು ಮತ್ತು ಅದರೊಳಗಿನ ಗೂಡು ಏನು ?

‘ಮಾಡು’ ಎಂದರೆ ಛಾವಣಿ. ಬಹು ಎತ್ತರದಲ್ಲಿರುವುದು.

ಸುಲಭದಲ್ಲಿ ಕೈಗೆ ಸಿಕ್ಕಲಾರದ್ದು. ಆದ್ದರಿಂದ ಬಹಳ ಎತ್ತರದಲ್ಲಿರುವ,

ಕಷ್ಟಪಡದೆ ಕೈಗೆ ಸಿಕ್ಕದ ಆಧ್ಯಾತ್ಮಿಕ ಜ್ಞಾನವನ್ನು ಅಥವಾ ನಮ್ಮ

ತತ್ವಜ್ಞಾನದ ಅರಿವನ್ನು, ದಾಸರು ‘ಮಾಡು’ ಎಂದರು. ಆ

‘ಮಾಡಿನೊಳಗಿನ ಗೂಡು’ ಪರಮಾತ್ಮನೆಂಬ ವಸ್ತು. ಮಾಡೇ

ಸಿಗಲಾರದಾಗ ಮಾಡಿನೊಳಗಿನ ಗೂಡು ಹೇಗೆ ದಕ್ಕೀತು ?

ಜ್ಞಾನವೇ ಇಲ್ಲದಾಗ ಪರಮಾತ್ಮನ ಸಾಕ್ಷಾತ್ಕಾರ ಎಲ್ಲಿಂದ

ಬಂದೀತು ? ಎಂಬುದು ಗೀತೆಯ ಮೊದಲ ಸಾಲಿನ ಅರ್ಥ. 

ಆದರೆ ಜ್ಞಾನ ಸಂಪಾದನೆ ಪ್ರಾರಂಭವಾದಾಗ, ನಮ್ಮ ಸುತ್ತಲಿನ

ಅಂಧಕಾರದ ಗೋಡೆ ಕಳಚಿಬಿದ್ದಾಗ  ‘ಅಜ್ಞಾನ ಮತ್ತು ಸಂಸಾರ ಮೋಹ’

ಎಂಬ ‘ಜೋಡು ಹೆಂಡಿರು’ ಅಂಜಿ ಓಡಿಹೋಗಿ ಜ್ಞಾನದ ಬೆಳಕು

ಕಾಣಬಹುದೆಂದು ಮೊದಲ ಚರಣದ ಭಾವ. 


ಆದರೆ ಈ ಜೀವ ಜ್ಞಾನಾರ್ಜನೆಗೆ ಪ್ರಯತ್ನಿಸಲೇ ಇಲ್ಲ.

ತಮಸ್ಸಿನ ನಿದ್ದೆಯಿಂದ ಎಚ್ಚರಗೊಳ್ಳಲೇ ಇಲ್ಲ! ಸಂಸಾರ

ಮೋಹದಲ್ಲೇ ಮುಳುಗಿ ಹುಚ್ಚಾಯಿತಲ್ಲಾ ! ಅಚ್ಚಿನೊಳಗೆ

ಮೆಚ್ಚು - ಮೆಚ್ಚಿನೊಳಗೆ ಅಚ್ಚು, ಸಂಸಾರದಲ್ಲಿ ನಾನು,

ನನ್ನೊಳಗೆ ಸಂಸಾರ, ಕಂಬಳಿಯೊಳಗಿನ ನುಸಿಯಂತೆ

ಒಂದರೊಳಗೊಂದು ಉಳಿದು ಬೆಳಕನ್ನೇ ಕಾಣದೆ ಹಾಳಾಗಿ

ಹೋಯಿತಲ್ಲಾ ಎಂಬ ವ್ಯಥೆ ಎರಡನೇ ಚರಣದ ಭಾವ. 


ಹೀಗೆ ಬದುಕುತ್ತಾ ಆದದ್ದೇನು? ವಯಸ್ಸಾಯಿತಷ್ಟೆ.

ಮುಪ್ಪುಬಂದಿತು. ಆದರೆ ಮುದಿಯಾಗುವಮುಂಚೆ

ಪಾಯಸವನುಂಡಿತೇ ಈ ಜೀವ ? ಕೃಷ್ಣನಾಮವೆಂಬ ಸಕ್ಕರೆ,

ವಿಠಲನಾಮವೆಂಬ ತುಪ್ಪವ ಬೆರಸಿದ ರಾಮನಾಮವೆಂಬ

ಪಾಯಸದ ರುಚಿ ಕಂಡಿತೇ ? ಇಲ್ಲ. ಅದೆಷ್ಟೋ ಸಾವಿರ ಕ್ರಿಮಿ

ಕೀಟ ಪಶು ಜನ್ಮಗಳ ನಂತರ ದೊರಕಿದ ಈ ಮಾನವ ಜನ್ಮದ,

‘ಸಾಧನಾ ಶರೀರ’ವೆಂಬ ತುಪ್ಪದ ಬಿಂದಿಗೆ ರಾಮನಾಮವೆಂಬ

ಪಾಯಸದಲ್ಲಿ ಬೀಳುವ ಬದಲು ಸಂಸಾರಮೋಹವೆಂಬ

ತಿಪ್ಪೆಯಲ್ಲಿ ಬಿದ್ದು ಹಾಳಾಯಿತಲ್ಲಾ ಎಂಬುದು ಮೂರನೇ ಚರಣದ ಭಾವ. 


ಕೊನೆಗೆ ಆದದ್ದೇನು ?  ‘ಯೋಗವು ಬಂತಲ್ಲಾ!’  ಯೋಗ ಶಬ್ದಕ್ಕೆ

ಇರುವ ಅನೇಕ ಅರ್ಥಗಳಲ್ಲಿ ‘ಕಾಲ’ ಎನ್ನುವುದೂ ಒಂದು.

ಕೊನೆಗಾಲ ಬಂತು, ಜೀವ, ದೇಹವನ್ನು  ಬಿಟ್ಟು ನಡೆಯಿತು !

ದೇಹ, ಜೀವ ಎರಡೂ ಒಂದಾಗಿದ್ದರೆ ಅದು ಬದುಕು. ಜೀವ

ಹೊರಬಿದ್ದಮೇಲೆ ದೇಹಕ್ಕೆ ಬದುಕೆಲ್ಲಿಂದ ? ದೇಹ ಬೇರೆ, ಜೀವ

ಬೇರೆ ಯಾಗಿ ಬದುಕು ವಿಭಾಗವಾಯಿತಲ್ಲಾ ! ಭೋಗಿಶಯನ

ಪುರಂದ ವಿಠಲನನ್ನು   ‘ಆಗ’, ಅಂದರೆ ದೇಹದಲ್ಲಿ ಜೀವವಿದ್ದಾಗ

ನೆನೆಯಲಿಲ್ಲವಲ್ಲಾ ಎಂಬ ಭಾವ ಕೊನೆಯ ಚರಣದ್ದು.

ಭೋಗವೆಂದರೆ ಸರ್ಪ. ಅದರಮೇಲೆ ಪವಡಿಸಿರುವವನು ಭೋಗಿ

ಶಯನ. ಒಟ್ಟಿನಲ್ಲಿ ಪಡೆಯಲು ದುಸ್ತರವಾದ ಮನುಶ್ಯ ಜನ್ಮ

ಸಿಕ್ಕಿರುವಾಗ ಅದನ್ನು ಸಂಸಾರದ ಜಂಜಾಟದಲ್ಲಿಯೇ ಸಿಲುಕಿಸಿ

ಹಾಳುಮಾಡದೆ ಅದನ್ನು ಮತ್ತಷ್ಟು ಮೇಲಕ್ಕೇರಿಸುವ ಚಿಂತನೆ,

ಅನುಷ್ಠಾನಗಳಲ್ಲಿ ತೊಡಗಿಸಿರಿ ಎಂಬುದು ಮಾಡು ಸಿಕ್ಕದಲ್ಲಾ

ಗೀತೆಯ ಒಟ್ಟು ಭಾವ. ಇದೇ ಭಾವವನ್ನು  ‘ನರಜನ್ಮ ಬಂದಾಗ

ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ’ ಎಂಬ ಸಂದೇಶವಾಗಿ

ಕೂಡ ದಾಸರು ತಿಳಿಸಿರುವುದೆಂದು ಹೇಳುತ್ತಾ ನನ್ನ ವಿಶ್ಲೇಷಣೆಯನ್ನು

ಕೊನೆಗೊಳಿಸುತ್ತೇನೆ, ನಮಸ್ಕಾರ.